Do you have a passion for writing?Join Ayra as a Writertoday and start earning.

ಶಿಕ್ಷಣ ಲೋಕ:ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೇ?

ProfileImg
28 Apr '24
6 min read


image

ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೇ?- ಡಾ.ಲಕ್ಷ್ಮೀ ಜಿ ಪ್ರಸಾದ 


ಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ರಕ್ಷಿಸಿಕೊಳ್ಳಿ"

ಓಡಿಸಿಕೊಂಡು ಬರುವಾತ ಒಬ್ಬ, ಓಡಿ ತಪ್ಪಿಸಿಕೊಳ್ಳುವವರು ಹಲವರು. ಸಿಕ್ಕಿಹಾಕಿಕೊಳ್ಳುವಾತ ನಂತರ ಓಡಿಸಿ ಹಿಡಿಯುವಾತನಾಗುವ ಈ ಮಕ್ಕಳ ಜನಪದ ಆಟದಲ್ಲಿ ಹುಡುಗ ಹುಡುಗಿಯರ ಮಧ್ಯೆ ಭೇದವಿಲ್ಲ. ಆದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜಾಣತನವನ್ನು ಇದು ಹೇಳಿಕೊಡುತ್ತದೆ.

ಇಂದಿನ ದಿನಗಳಲ್ಲಿ ಸಾಕಷ್ಟು ಚರ್ಚಿತವಾಗುತ್ತಿರುವ ಲೈಂಗಿಕ ಶಿಕ್ಷಣ ಜನಪದರಲ್ಲಿ ಇತ್ತೇ? ಇದ್ದರೆ ಯಾವ ಮಾದರಿಯದು? ಅದನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ಅಳವಡಿಸಲು ಸಾಧ್ಯವೇ, ಅತ್ಯಾಚಾರದಂತಹ ವಿಕೃತಿಗಳಿಗೆ ಕೂಡಾ ಜನಪದ ಸಾಹಿತ್ಯದಲ್ಲಿ ಪರಿಹಾರವಿದೆಯೇ ಎಂದು ಯೋಚಿಸಿದಾಗ ಮೊದಲಿಗೆ ನೆನಪಿಗೆ ಬರುವುದು ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯಲ್ಲಿ ಪ್ರಚಲಿತವಿರುವ "ಘೋಟುಲ್‌" ಎಂಬ ಒಂದು ಅನೌಪಚಾರಿಕ ಜನಪದ ಶಿಕ್ಷಣ ವ್ಯವಸ್ಥೆ.

ಘೋಟುಲ್ ಎಂಬುದು ಬಸ್ತರ್‌ನಲ್ಲಿ ಪ್ರಚಲಿತವಿರುವ ಹಲ್ಬಿ ಭಾಷೆಯ ಪದವಾಗಿದ್ದು, ಇದರ ಶಬ್ದಶಃ ಅರ್ಥ ಎಲ್ಲೆಡೆ ಎಂದು. ಬಹುಶಃ ಎಲ್ಲೆಡೆ ಇರಲೇಬೇಕಾದ್ದು ಎಂಬರ್ಥದಲ್ಲಿ ಘೋಟುಲ್ ಶಬ್ದ ಬಳಕೆಗೆ ಬಂದಿರುವ ಸಾಧ್ಯತೆ ಇದೆ.

ಜನಪದ ಅಧ್ಯಯನ ಕ್ಷೇತ್ರದಲ್ಲಿ ಘೋಟುಲ್ ಒಂದು ವಿಶಿಷ್ಟ ಮಾದರಿ. ಇದೊಂದು ಬಸ್ತರ್ ಬುಡಕಟ್ಟು ಜನರ ಕಾಡಿನ ಯುವ ವಿಶ್ವ. ಪ್ರಸ್ತುತ ಛತ್ತೀಸ್‌ಗಢಕ್ಕೆ ಸೇರಿರುವ, ಮಧ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿನ ವಿಸ್ತಾರವಾದ ಒಂದು ಜಿಲ್ಲೆ ಬಸ್ತರ್. ಜಗದಲಪುರ ಅದರ ಆಡಳಿತ ಕೇಂದ್ರ. ಹಿಂದೆ ಇಲ್ಲಿ ಅರಸರ ಆಡಳಿತವಿತ್ತು. ಇಲ್ಲಿನ ನಾರಾಯಣಪುರ ತಹಸೀಲದಲ್ಲಿ ಹಳ್ಳಕೊಳ್ಳ, ಬೆಟ್ಟಗಳ ದುರ್ಗಮ ಪ್ರದೇಶವಾದ ಅಬುಜ್‌ಮಾಡ ಹರಡಿಕೊಂಡಿದ್ದು ಅಲ್ಲಿನ ಆದಿವಾಸಿಗಳು ಆಧುನಿಕತೆಯ ಸೋಂಕಿಗೆ ಒಳಗಾಗದೇ ತಮ್ಮ ಸಂಪ್ರದಾಯ, ಹಾಡು, ಹಸೆ, ಕಲೆ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ಶೇ.72 ಬುಡ ಕಟ್ಟು ಆದಿವಾಸಿ ಜನರು ಬದುಕುತ್ತಿದ್ದಾರೆ.

ಘೋಟುಲ್ ಆದಿ ಮಾನವನ ಕಾಲದಿಂದಲೂ ಬೆಳೆದು ಬಂದ ಜೀವನ ಶಿಕ್ಷಣ ಸಂಸ್ಥೆ ಎಂದು ಮಾನವ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಸ್ತರಿಗೆ ಅಧ್ಯಯನ ಪ್ರವಾಸ ಮಾಡಿರುವ ಡಾ. ಕೃಷ್ಣಾನಂದ ಕಾಮತ್ ಅವರು "ಇದೊಂದು ಜೀವಂತ ವಿದ್ಯಾಲಯ, ಇಲ್ಲಿ ಪುಸ್ತಕದ ಪಾಂಡಿತ್ಯ, ಔಪಚಾರಿಕ ಶಿಕ್ಷಣಕ್ಕೆ ಬೆಲೆ ಇಲ್ಲ. ದಿನವೂ ಬಾಳಿ ಬದುಕುವ ವಿದ್ಯೆ ಹೇಳಿ ಕೊಡಲಾಗುತ್ತದೆ. ಈ ಸಂಸ್ಥೆ ನಾಗರಿಕ ಪ್ರಪಂಚಕ್ಕೊಂದು ವಿಸ್ಮಯವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುರಿಯಾ ಆದಿ ವಾಸಿಗಳು ಪ್ರತಿ ಹಳ್ಳಿಗೆ ಒಂದರಂತೆ ಒಂದು ಘೋಟುಲ್ ಸಿದ್ಧ ಪಡಿಸಿಕೊಂಡಿರುತ್ತಾರೆ. ಹಳ್ಳಿ ದೊಡ್ಡದಿದ್ದರೆ ಎರಡು ಮೂರು ಘೋಟುಲ್‌ಗಳೂ ಇರುತ್ತವೆ. ಇದು ಅವರ ಕಿರಿಯ ವಿಶ್ವ. ಹಳ್ಳಿಯ ಹೊರಭಾಗದಲ್ಲಿರುವ ಘೋಟುಲ್ ಒಂದು ಗುಡಿಸಲಿನಂತೆ ಅಥವಾ ದೊಡ್ಡ ಬೈಠಕ್ ಖಾನೆಯಂತೆ ಇರುತ್ತದೆ."ಚಳಿಗಾಲಕ್ಕಾಗಿ ಬೆಳಕು ಗಾಳಿಯಾಡದ ಒಂದು ಕಟ್ಟಡ ಹಾಗೂ ಬೇಸಿಗೆಗಾಗಿ ಕೇವಲ ಒಂದು ಮಾಡು ಇರುವ ಪಡಸಾಲೆಯೊಂದಿರುತ್ತದೆ" ಎಂದು ಡಾ.ಕೃಷ್ಣಾನಂದ ಕಾಮತರು ಹೇಳಿದ್ದಾರೆ.

ಗೋಡೆಗಳ ಮೇಲೆ ಆನೆ ನವಿಲು ಮೊದಲಾದ ಉಬ್ಬು ಚಿತ್ರಗಳು, ಜೊತೆಗೆ ಸುಗ್ಗಿ ಸಮಯದಲ್ಲಿ ಅಕ್ಕಿ ಹಿಟ್ಟಿನಿಂದ ರಚಿಸಿದ ರಂಗೋಲಿ ಮಾದರಿಯ ಚಿತ್ರಗಳು (ಧಪ್ಪಾ ) ಇರುತ್ತವೆ. ಇದ್ದಿಲಿನಿಂದ ರಚಿಸಿದ ಹೆಣ್ಣಿನ ಹಲವು ಬಗೆ ಚಿತ್ರಗಳು ಇರುತ್ತವೆ. ಸ್ತನ, ಜನನೇಂದ್ರಿಯಗಳ ಚಿತ್ರಗಳನ್ನು ಬೃಹದಾಕಾರದಲ್ಲಿ ಬಿಡಿಸಿರುತ್ತಾರೆ.

ಇದು ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿರುತ್ತದೆ. ಘೋಟುಲ್‌ಗಳಿಗಾಗಿ ಹೊಲದಲ್ಲಿ ಬತ್ತ  ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಜವಾಬ್ದಾರಿ ಘೋಟುಲ್ ಸದಸ್ಯರದ್ದು. ಇಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಸದಸ್ಯರು. ವಿವಾಹಿತ ಪ್ರೌಢ ಗೃಹಸ್ಥರಿಗೆ ಇಲ್ಲಿ ಪ್ರವೇಶವಿಲ್ಲ!

ಮುರಿಯಾ ಬುಡಕಟ್ಟಿನ ಮಕ್ಕಳು, ಯುವಕ (ಚಿಲಕ್ ), ಯುವತಿ (ಮೋತಿಯಾರಿ )ಯರು ಘೋಟುಲ್ ಅನ್ನು ತುಂಬಾ ಇಷ್ಟಪಡುತ್ತಾರೆ. ವಾರಕ್ಕೊಮ್ಮೆ ಎರಡು ಬಾರಿ ಹದಿಹರೆಯದ ಕಿಶೋರ- ಕಿಶೋರಿಯರು, ಅವಿವಾಹಿತ ಯುವಕ-ಯುವತಿಯರು ಹಿರಿಯರ ಅನುಮತಿ ಪಡೆದು ಘೋಟುಲ್‌ನಲ್ಲಿ ಒಟ್ಟು ಸೇರುತ್ತಾರೆ.

ಕೃಷಿ, ಬೇಟೆ, ಮೃದಂಗ, ಕೊಳಲು, ಸಾಂಪ್ರದಾಯಿಕ ಹಾಡು, ಕಥೆ ಮೊದಲಾದವುಗಳೊಂದಿಗೆ ಇವರಿಗೆ ಇಲ್ಲಿ ಲೈಂಗಿಕ ಶಿಕ್ಷಣವೂ ದೊರೆಯುತ್ತದೆ.

"ಸರಳತೆ, ಸಮಾನತೆ ಹಾಗೂ ಸ್ವಾತಂತ್ರ್ಯ" ಘೋಟುಲ್ ಜೀವನದ ಜೀವಾಳ. ಇಲ್ಲಿ ಗಂಡು ಹೆಣ್ಣು ಸಮಾನರು. ಇಂದಿನ ಆಧುನಿಕ ಶಿಕ್ಷಣದ ನಡುವೆಯೂ ಪರಿಹರಿಸಲಾಗದ ಯುವ ಜನರ ಸಮಸ್ಯೆಗಳನ್ನು ಬಸ್ತರ್‌ನ ಬುಡಕಟ್ಟು ಜನರಾದ ಮುರಿಯಾಗಳು ಶತಕಗಳ ಹಿಂದೆಯೇ ಸಹಜವಾಗಿಯೇ ಪರಿಹರಿಸಿಕೊಂಡಿದ್ದಾರೆ.

ಘೋಟುಲ್‌ನಲ್ಲಿ ಇವರೆಲ್ಲ ಗಂಡು ಹೆಣ್ಣು ಎಂಬ ಅಂತರವಿಲ್ಲದೆ ಉಂಡು ತಿಂದು ಮಲಗುತ್ತಾರೆ. ಯುವಕ ಯುವತಿಯರು ಜೊತೆಯಲ್ಲಿಯೇ ನದಿಯಲ್ಲಿ ನಗ್ನರಾಗಿ ಈಜಾಡುವಷ್ಟು ಸಮಾನತೆ, ಸಹಜತೆ ಅವರಲ್ಲಿದೆ.

ಘೋಟುಲ್‌ಗಳಲ್ಲಿ  ಹಿರಿಯ ಯುವತಿಯರು (ಮೋತಿಯಾರಿ) ಕಿರಿಯರಿಗೆ (ಚಿಲಕ್) ಲೈಂಗಿಕ ತಿಳಿವಳಿಕೆ ನೀಡುತ್ತಾರೆ. ಶರೀರವನ್ನು ನಿಸರ್ಗಕ್ಕೆ ಹೋಲಿಸಿ ಅಲ್ಲಿಯ ಎತ್ತರ ತಗ್ಗು, ಬೆಟ್ಟ ಕಣಿವೆಗಳಂತೆಯೇ ಶರೀರ. ಮಳೆ, ಗಾಳಿ, ಸಮುದ್ರದಲ್ಲಿ ಏರಿಳಿತ ಇರುವಂತೆಯೇ ಉತ್ತೇಜನ ಉಂಟಾದಾಗ ಮನುಷ್ಯನ ದೇಹ ಸ್ವಭಾವಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಸಂತ ಋತುವಿನಲ್ಲಿ ಪ್ರಕೃತಿಯಲ್ಲಿ ಹೂ ಹಣ್ಣು ಬೆಳೆಯುವಂತೆ ಪ್ರತಿ ಹುಡುಗ ಹುಡುಗಿಯರಲ್ಲೂ ವಸಂತ ಕಾಲ ಇರುತ್ತದೆ. ಇತ್ಯಾದಿಯಾಗಿ ದೇಹದ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಸ್ವಚ್ಛತೆಯ ಬಗ್ಗೆಯೂ ಪಾಠ ನಡೆಯುತ್ತದೆ.

ಘೋಟುಲ್‌ನಲ್ಲಿ ಪ್ರೇಮ ಕಾಮಗಳು ಹಸಿವೆ ನಿದ್ರೆಯಂತೆಯೇ ಸಹಜವಾದುದು! ಆದ್ದರಿಂದ ಅಲ್ಲಿ ಯಾವುದೇ ವಿಕೃತಿಗೆ ಎಡೆಯೇ ಇಲ್ಲ..

ಈ ಬಗ್ಗೆ ಡಾ.ಕೃಷ್ಣಾನಂದ ಕಾಮತರು "ಘೋಟುಲ್‌ನಲ್ಲಿ ರಾತ್ರಿ ಹೊತ್ತು ಹಿರಿಯ ಮೋತಿಯಾರಿ ಚಾಪೆಯ ಜೋಡಿಗಳನ್ನು ತಿಳಿಸುತ್ತಾಳೆ. ಪ್ರತಿ ದಿನ ಜತೆಗಾರರು ಬದಲಾಗುತ್ತಾರೆ. ಪ್ರತಿ ದಿನದ ಚಾಪೆ ಜೋಡಿಗಳನ್ನು  ಹೆಸರಿಸಿದ ನಂತರ ಸದಸ್ಯರೆಲ್ಲರೂ ಸ್ವತಂತ್ರರು. ಚಿಕ್ಕ ಮಕ್ಕಳ ವಿಷಯದಲ್ಲಿ ಇವರು ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ತಮಗೆ ಸರಿ ಕಂಡವರೊಡನೆ ಮಲಗುತ್ತಾರೆ. ಬಾಲ್ಯದಲ್ಲಿ ಅಣ್ಣ ತಂಗಿಯರಂತೆ ಒಟ್ಟಿಗೆ ಮುದುಡಿಕೊಂಡು ಮಲಗಿದರೆ ಸ್ವಲ್ಪ ಸಮಯದ ನಂತರ ಒಬ್ಬರ ಕಾವಿಗೆ ಇನ್ನೊಬ್ಬರು, ಒಬ್ಬರ ಹೃದಯ ಮಿಡಿತ ಕೇಳಿಸುವಂತೆ ಮಲಗುತ್ತಾರೆ. ಒಂದೇ ಕೋಣೆಯಲ್ಲಿ ಸಹೋದರ ಸಹೋದರಿಯರು ತಮ್ಮ ತಮ್ಮ ಪ್ರಿಯೆ ಪ್ರಿಯತಮರೊಡನೆ ವಿರಮಿಸುವ ಅವಕಾಶ ನೀಡುವ ಸಮಾಜ ವಿಶ್ವದಲ್ಲಿ ಇನ್ನೊಂದು ಇದೆಯೋ ಇಲ್ಲವೋ?" ಎನ್ನುತ್ತಾರೆ.

ಇಲ್ಲಿ ಲೈಂಗಿಕ ಕ್ರಿಯೆ ಗೌಪ್ಯ ಎಂದಾಗಲೀ, ಅಪರಾಧ ಎಂಬ ಭಾವಾಗಲೀ ಇಲ್ಲವೇ ಇಲ್ಲ. ಊಟ ತಿಂಡಿ ನಿದ್ರೆಯಂತೆಯೇ ಸಹಜವಾದುದು. ಇದರಿಂದಾಗಿ ಲೈಂಗಿಕ ತಿಳಿವಳಿಕೆ ಇಲ್ಲದೇ ಇರುವವರಿಗೆ, ಚಿಕ್ಕವರಿಗೆ ಲೈಂಗಿಕ ಶಿಕ್ಷಣ ಸಹಜವಾಗಿಯೇ ದೊರೆಯುತ್ತದೆ.

ಅಕ್ಕ ಪಕ್ಕದಲ್ಲಿ ಪ್ರೇಮ ಕಲಹ, ಪ್ರಣಯ ಕ್ರೀಡೆಗಳಲ್ಲಿ ನಿರತರಾಗಿರುವ ಹಿರಿಯ ಜೋಡಿಗಳನ್ನು ನೋಡಿ ಕಿರಿಯರು ಅದನ್ನು ಅನುಸರಿಸುತ್ತಾರೆ. ಇವರ ಪ್ರಣಯಾವಸ್ಥೆ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಮೋತಿಯಾರಿ (ಮುರಿಯಾ ಕನ್ಯೆ ) ಎಷ್ಟೇ ಚಿಕ್ಕವಳಿದ್ದರೂ ಈ ವಿಷಯದಲ್ಲಿ ಪ್ರಬುದ್ಧಳು. ಚಿಲಕರು ಹಾಗೂ ಮೋತಿಯಾರಿಗಳು ತಮಗೆ ಬಂದ ಅಡಚಣೆ, ಅಡ್ಡಿ ಆತಂಕ ಸಂಶಯಗಳನ್ನುತಮಗಿಂತ ಹಿರಿಯರಿಗೆ ಕೇಳಿ ಪರಿಹಾರ ಪಡೆಯುತ್ತಾರೆ. ಈ ಬಗ್ಗೆ ಯಾವುದೇ ಅಳುಕು ನಾಚಿಕೆ ಇರುವುದಿಲ್ಲ.

ಘೋಟುಲ್‌ನಲ್ಲಿ ಪ್ರೇಮ, ಪ್ರಣಯ ಯುವತಿಯ ಹಕ್ಕು, ಯುವಕನ ಕರ್ತವ್ಯ. ಅಂತೆಯೇ ಪ್ರಚೋದನೆಯಲ್ಲಿ ಆಕೆಯೇ ಮುಂದಾಗುತ್ತಾಳೆ. ರಾತ್ರಿಯ ಚಾಪೆಯ ಜೋಡಿಗಳಲ್ಲಿ ಪರಸ್ಪರ ಸಹಮತ, ಒಪ್ಪಿಗೆ ಇದ್ದರೆ ಮಾತ್ರ ಪ್ರಣಯ. ಬಲಾತ್ಕಾರದ ಪ್ರಶ್ನೆಯೇ ಇರುವುದಿಲ್ಲ. ಹಾಗೆಂದು ಯಾರೂ ಪಕ್ಷಪಾತ ಮಾಡುವಂತಿಲ್ಲ. ಹಾಗೆ ಮಾಡಿದರೆ ಅವರಿಗೆ ಶಿಕ್ಷೆ ಕೂಡ ಇರುತ್ತದೆ.

"ಚಿಲಕ ಮೋತಿಯಾರಿಗಳು ಪ್ರೇಮ ಬಂಧದಲ್ಲಿ ಸಿಲುಕದಂತೆ ಕಟ್ಟು ಪಾಡು ಇದ್ದರೂ ಆಗೊಮ್ಮೆ ಈಗೊಮ್ಮೆ ಇಂಥ ಪ್ರೇಮಿಗಳ ಉದಾಹರಣೆ ಸಿಗುತ್ತವೆ" ಎಂದು ಕೃಷ್ಣಾನಂದ ಕಾಮತರು ಹೇಳುತ್ತಾರೆ. ಈ ಬಗ್ಗೆ ಒಂದು ಹಾಡು ಹಾಗೂ ಕಥೆ ಅಲ್ಲಿ ಜನಪ್ರಿಯವಾಗಿದೆ:

"ಒಬ್ಬ ಬಡ ಚಿಲಕ (ಮುರಿಯಾ ಯುವಕ ) ಊರ ಕೊತ್ವಾಲನ ಮಗಳನ್ನು ಪ್ರೀತಿಸುತ್ತಾನೆ. ಆದರೆ ಕೊತ್ವಾಲ ಕೇಳಿದಷ್ಟು ವಧು ದಕ್ಷಿಣೆ ಕೊಡಲು ಸಾಧ್ಯವಾಗುವುದಿಲ್ಲ(ಮುರಿಯಾಗಳಲ್ಲಿ ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿದೆ ). ಅವರು ಊರು ಬಿಟ್ಟು ಓಡಿ ಹೋಗಿ ಕಾಡು ಮೇಡು ಅಲೆಯುತ್ತಾರೆ. ಕೊನೆಗೆ ಮೋತಿಯಾರಿ ಹುಲಿ ಬಾಯಿಗೆ ಸಿಕ್ಕು ಸಾಯುತ್ತಾಳೆ. ವಿರಹ ತಾಳಲಾಗದೆ ಚಿಲಕನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ."

ಈ ಆದರ್ಶ ಪ್ರೇಮಿಗಳ ಕಥೆ ಘೋಟುಲ್‌ನಲ್ಲಿ ಎಲ್ಲರಿಗೂ ಬಹಳ ಪ್ರಿಯವಾದುದಾಗಿದೆ. ಮೂಲತಃ ಈ ಹಾಡು ಹಲ್ಬಿ ಭಾಷೆಯಲ್ಲಿದ್ದು ಅದರ ಕನ್ನಡ ಅನುವಾದವನ್ನು ಕೃಷ್ಣಾನಂದ ಕಾಮತರು ಹೀಗೆ ಮಾಡಿದ್ದಾರೆ:

ದಿನವೆಲ್ಲ ಮೈಮುರಿದು ದುಡಿದಿಹೆನು ಪ್ರಿಯೇ, ಬಳಲಿ ಬೆಂಡಾಗಿ ಮರಳಿ ಬಂದಿಹೆನು/ ಮಿಂದುಂಡು ಒರಗಿರಲು ನಿನ್ನ ನೆನಪಾಗಿಹುದು, ಊರವರ ಕಣ್ಣು ತಪ್ಪಿಸಿ ಕಾಡ ಹಾದಿಯ ತುಳಿದು/ ಕೆರೆಯ ದಂಡೆಯಿಂದ ಪೊದೆಯ ಸಂಧಿಯಿಂದ, ಕತ್ತಲಲ್ಲಿ ಜಾರುತ್ತ ನುಸುಳುತ್ತ ನಿನಗಾಗಿ ಅಲೆದೆ/ ಕುಣಿಯಲಂಗಣವಿಲ್ಲ, ಕೊಳಲು-ಡೋಲುಗಳಿಲ್ಲ/  ಜೊತೆಯ ಹಾಡಿಲ್ಲ, ನೆರೆಕರೆಯವರು ಮಲಗಿಹರು/ ಒಟ್ಟಿಗೆ ಒರಗಿ ರಾತ್ರಿಯಾದರೂ ಕಳೆಯೋಣ/ ಮಂದ ಮಾರುತ, ಹೂಗಳರಳಿಹವು, ಭೂಮಾತೆಯಿಹಳು, ನೀಲ ಗಗನದಡಿ ಮೈ ಮರೆಯೋಣ ಬಾ."

ಇದೇ ರೀತಿ ತನ್ನ ಇನಿಯಳನ್ನು ನೋಡಲು ದುರ್ಗಮವಾದ ಕಾಡಿನಲ್ಲಿ ಬೆಟ್ಟ ಹತ್ತಿ ಇಳಿದು ಬರುವ ಪ್ರಿಯಕರನ ಕುರಿತಾಗಿ "ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೇಡು ಈ ಎಂಚ ಜತ್ತೇಯ ಜತ್ತೆ ಲಿಂಗ" (ಸಣ್ಣದಲ್ಲದ ಕಾಡಿನಲ್ಲಿ ಕಡಿದಾದ ಬೆಟ್ಟದಲ್ಲಿ ನೀನು ಹೇಗೆ ಇಳಿದು ಬಂದೆ ಜತ್ತೆ ಲಿಂಗ ) ಎಂಬ ಒಂದು ತುಳು ಜಾನಪದ ಹಾಡು  ಪ್ರಚಲಿತವಿದೆ.

ಘೋಟುಲ್‌ನಲ್ಲಿ ಮೋತಿಯಾರಿಗಳನ್ನು ಕೆರಳಿಸಲು ಚಿಲಕರು ಇಂಥ ಹಾಡುಗಳನ್ನು ರಾಗವಾಗಿ ದೈನ್ಯತೆಯಿಂದ ಹಾಡುತ್ತಾರೆ. ಪ್ರತಿಯಾಗಿ ಹುಡುಗಿಯರು ಗುದ್ದುತ್ತಾರೆ, ಚಿವುಟುತ್ತಾರೆ. ಆದರೆ ಇದಾವುದನ್ನೂ ಲೆಕ್ಕಿಸದೆ ಚಿಲಕರು ಹಾಡುತ್ತಲೇ ಇರುತ್ತಾರೆ.

ಕಿಶೋರಾವಸ್ಥೆಯನ್ನು ದಾಟಿ ಇವರು ವಿವಾಹಿತರಾಗಿ ಗೃಹಸ್ಥರಾದ ಮೇಲೆ ಅನ್ಯ ಸ್ತ್ರೀ ಪುರುಷ ಮಿಲನ, ಪ್ರೀತಿ- ಪ್ರೇಮ ನಿಷಿದ್ಧವಾಗಿದೆ. ಏಕ ಪತ್ನಿ ಪದ್ಧತಿ ಇವರಲ್ಲಿ ಜಾರಿಯಲ್ಲಿದೆ. ಈ ಬಗ್ಗೆ ಬಿಗಿಯಾದ ನೀತಿ ಸಂಹಿತೆ ಜಾರಿಯಲ್ಲಿದೆ. "ಅನ್ಯ ಸ್ತ್ರೀ ಮೇಲೆ ಕಣ್ಣು ಹಾಕಿದ ಗಂಡನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ. ಹಾಗಾಗಿ ಯಾರೂ ಪರ ಸ್ತ್ರೀಗೆ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲಿರುವುದಿಲ್ಲ" ಎಂದು ಪ್ರೊ. ಉಮಾ ರಾಮ್ ಹೇಳುತ್ತಾರೆ.

ಬಸ್ತರ್ ಜನಪದರಲ್ಲಿ ಬಿಟ್ಟರೆ ಬೇರೆಲ್ಲೂ ಇಷ್ಟು ಸಹಜವಾದ ಲೈಂಗಿಕ ಶಿಕ್ಷಣದ ಮಾದರಿ ಕಾಣುವುದಿಲ್ಲ.

ಇದು ಬಿಟ್ಟರೆ ಕನ್ನಡ ತುಳು ಜನಪದ ಸಾಹಿತ್ಯ ಸೇರಿದಂತೆ ಎಲ್ಲ ಜನ ಪದ ಸಾಹಿತ್ಯದಲ್ಲಿ, ಹೆಣ್ಣು ಗಂಡಿನ ಪ್ರೇಮ, ಗಂಡಿನ ದೌರ್ಜನ್ಯವನ್ನು ಮೆಟ್ಟಿ ನಿಂತ ಹೆಣ್ಣಿನ ಜಾಣ್ಮೆ ಕುರಿತು ಅನೇಕ ಹಾಡು ಕಥೆಗಳು ಲಭ್ಯವಿವೆ.

ನೀರು ತರಲು ಹೋದಾಗ ಅಡ್ಡಗಟ್ಟಿದ ದೇರೆ ಮುಂಡೋರಿಯನ್ನು ಬಡಿದು ಓಡಿಸುವ ಬಂಗಾರಲ್ವಾಗ ಎಂಬ ಹೆಣ್ಣು ಮಗಳ ಸಾಹಸದ ಬಗ್ಗೆ ಒಂದು ತುಳು ಜನಪದ ಹಾಡು ಇದೆ. ತನ್ನನ್ನು ಕಾಮಿಸಿ ಮದುವೆಯಾಗುವಂತೆ ಕಾಡಿದ ಗಂಡನ್ನು ಉಪಾಯದಿಂದ ಕೊಲ್ಲುವ ರಂಗಮೆ, ನೇರವಾಗಿ ಕುದುರೆ ಏರಿ ಯುದ್ಧಮಾಡಿ ಕೊಲ್ಲುವ ಎಣ್ಮೂರು ಗುತ್ತಿನ ಬಾಲೆ ದೈಯಕ್ಕು, ತನ್ನನ್ನು ವಶಪಡಿಸಿಕೊಳ್ಳುವ ಸಲುವಾಗಿಯೇ ತನ್ನ ಗಂಡ ಪರವ ಮೈಂದನನ್ನು ಕೊಂದ ಅರಸು ಬೊಟ್ಟಿಪ್ಪಾಡಿ ಬಲ್ಲಾಳನಿಗೆ ಒಲಿದಂತೆ ನಟಿಸಿ ಅವನ ಸರ್ವ ಸಂಪತ್ತನ್ನೂ ಗಂಡನ ಚಿತೆಗೆ ಸುರಿವಂತೆ ಮಾಡಿ ತಾನೂ ಸತ್ತು ಪ್ರತೀಕಾರ ತೋರುವ ಪರತಿ ಮಂಗನೆ ಕುರಿತು ತುಳು ಜನಪದ ಪಾಡ್ದನಗಳು ರಚಿತವಾಗಿವೆ.

ಅಣ್ಣನೂ ಕೂಡ ತಂಗಿಯನ್ನು ಕಾಮಿಸಬಹುದು ಎಂಬ ಎಚ್ಚರಿಕೆ ನೀಡುವ ಅಣ್ಣ ತಂಗಿ ಕುಚು ಕುಚು, ಬಾಲೆ ಮೀನು ಮುಗುಡು ಮೀನು, ಹರಿವೆ ಬಸಳೆಗಳ ಕಥೆ ಕನ್ನಡ ತುಳು ಜನಪದ ಹಾಡುಗಳ ರೂಪದಲ್ಲಿ ಪ್ರಚಲಿತವಿವೆ. ಬಸ್ತರ್ ಬುಡಕಟ್ಟು ಜನಾಂಗದ ಘೋಟುಲ್ ಮಾದರಿಯ ವಿವಾಹ ಪೂರ್ವ ಮುಕ್ತ ಲೈಂಗಿಕತೆ ಪ್ರಸ್ತುತ ಭಾರತೀಯ ಶಿಷ್ಟ ಸಂಸ್ಕೃತಿಗೆ ಒಲ್ಲದ, ನಿಷಿದ್ಧವಾದ ವಿಚಾರವಾಗಿದೆ. ಆದರೆ ಇವರಲ್ಲಿನ ಲೈಂಗಿಕ ಶಿಕ್ಷಣದ  ಮಾದರಿಯನ್ನು ಸ್ವೀಕರಿಸಬಹುದಾಗಿದೆ.

ಇಂದು ಹದಿ ಹರೆಯದವರಿಗೆ ದೇಹದ ಅಂಗಗಳ ರಚನೆ, ವಯಸ್ಸಿಗನುಗುಣವಾಗಿ ಉಂಟಾಗುವ ಬದಲಾವಣೆ, ಭಾವನೆಗಳ ಏರು ಪೇರು, ಸ್ವಚ್ಛತೆಯ ಕುರಿತು ತಿಳಿವಳಿಕೆ ಮೂಡಬೇಕಿದೆ. ಲೈಂಗಿಕ ವಿಚಾರಗಳ ಕುರಿತು ತಮ್ಮ ಆಸಕ್ತಿ ಕುತೂಹಲಗಳನ್ನು ತಣಿಸುವ, ಸಂಶಯಗಳನ್ನು ಹಿರಿಯರಲ್ಲಿ ಕೇಳಿ ಪರಿಹರಿಸಿಕೊಳ್ಳುವ, ಮನವು ವಿಕೃತವಾಗದಂತೆ ತಡೆಯುವ, ಪರಿಪಕ್ವಗೊಳಿಸುವ ಮಾದರಿಯ ಸಹಜ ಶಿಕ್ಷಣದ ಅಗತ್ಯವಂತೂ ಖಂಡಿತಾ ಇದೆ.

-ಡಾ.ಲಕ್ಷ್ಮೀ ಜಿ. ಪ್ರಸಾದ, ಉಪನ್ಯಾಸಕರು

 

 

Category : Education


ProfileImg

Written by Dr Lakshmi G Prasad

Verified