ಜೀವಜಗತ್ತಿನ ಜೀವಂತ ಪಳೆಯುಳಿಕೆಗಳು

ಸೀಲಕಾಂತ್

ProfileImg
16 Jul '24
8 min read


image

        ೧೯೩೮ರ ಡಿಸೆಂಬರ್ ೨೩ರಂದು ದಕ್ಷಿಣ ಆಫ್ರಿಕದ ಚಾಲುಮ್ನಾ ನದಿಯ ದಂಡೆಯಲ್ಲಿ ಅಲ್ಲಿನ ಬೆಸ್ತ ಕ್ಯಾಪ್ಟನ್ ಹೆಂಡ್ರಿಕ್ ಗೂಸನ್ ಹಿಡಿದಿದ್ದ ಮೀನುಗಳನ್ನು ನೋಡಿದ ಮಾರ್ಜೊರಿ ಕರ್ಟ್ನಿ ಲ್ಯಾಟಿಮರ್ ಭೂತದರ್ಶನವಾದಂತೆ ಬೆಚ್ಚಿಬಿದ್ದರು. ಅಲ್ಲಿ ಕಂಡುಬ೦ದ ಒಂದು ಮೀನನ್ನು ನೋಡಿ ಅವರು ದಂಗುಬಡಿದಿದ್ದರು. ಏಕೆಂದರೆ ಡೈನೋಸಾರ್‌ಗಳ ಜೊತೆಗೇ ನಾಮಾವಶೇಷವಾಗಿದೆಯೆಂದು ನಂಬಲಾದ ಮೀನೊಂದು ಅಲ್ಲಿ ಸಿಕ್ಕಿತ್ತು! ರೋಡ್ಸ್ ವಿಶ್ವವಿದ್ಯಾನಿಲಯದ ಜೆ.ಎಲ್.ಬಿ. ಸ್ಮಿತ್ ಅವರು ಈ ಮೀನನ್ನು ನೋಡಿ ಅದರ ಮಹತ್ವವನ್ನು ಖಚಿತಪಡಿಸಿದರು. ಆ ಮೀನೇ ಸೀಲಕಾಂತ್. 

       ೧೯೯೮ರಲ್ಲಿ ಈ ಮೀನಿನ ಇನ್ನೊಂದು ಪ್ರಭೇದವನ್ನು ಕಂಡುಹಿಡಿಯಲಾಯಿತು. ಮಾರ್ಕ್ ವಿ ಎರ್ಡ್ಮ್ಯಾನ್ ಎಂಬಾತ ಕಂಡುಹಿಡಿದ ಇದನ್ನು ೧೯೯೯ರಲ್ಲಿ ಹೊಸ ಪ್ರಭೇದವೆಂದು ಖಚಿತಪಡಿಸಲಾಯಿತು. ವಾಸ್ತವವಾಗಿ ಎರ್ಡ್ಮ್ಯಾನ್ ಇದನ್ನು ತನ್ನ ಪತ್ನಿಯೊಂದಿಗೆ ಮಾರುಕಟ್ಟೆಯಲ್ಲಿ ೧೯೯೭ರಲ್ಲೇ ನೋಡಿದ್ದನಾದರೂ ಅದರ ಕೆಲವೊಂದು ಚಿತ್ರಗಳನ್ನು ಮಾತ್ರ ಹಿಡಿದಿದ್ದ. ಮುಂದೆ ಇದೊಂದು ಹೊಸ ಮೀನಿರಬಹುದೆಂದು ಸಂಶಯ ಉದ್ಭವಿಸಿದಾಗ ಇದರ ಬಗ್ಗೆ ಇನ್ನಷ್ಟು ವ್ಯಾಪಕವಾದ ಅಧ್ಯಯನ ನಡೆಯಿತು. ಮುಂದೆ ೧೯೯೮ರ ಜುಲೈನಲ್ಲಿ ಇನ್ನೊಬ್ಬ ಬೆಸ್ತ ಇನ್ನೊಂದು ಈ ಮೀನನ್ನು ಹಿಡಿದು ಅದನ್ನು ಎರ್ಡ್ಮ್ಯಾನ್‌ಗೆ ತಂದೊಪ್ಪಿಸಿದ. 

       ಸೀಲಕಾಂತ್ ಮೀನುಗಳು ಸೀಲಾಕಾಂತಿಫಾರ೦ಸ್ ಎಂಬ ವರ್ಗದಲ್ಲಿ ಲ್ಯಾಟಿಮೇರಿಡೇ ಎಂಬ ಕುಟುಂಬದಲ್ಲಿವೆ. ವೆಸ್ಟ್ ಇಂಡಿಯನ್ ಸೀಲಕಾಂತ್ ಮತ್ತು ಇಂಡೋನೇಷಿಯನ್ ಸೀಲಕಾಂತ್ ಎಂಬ ಎರಡು ಪ್ರಭೇದಗಳನ್ನು ಗುರುತಿಸಲಾಗಿದೆ. ಇದೆಲ್ಲ ಸರಿ, ಆದರೆ ಸಾವಿರಾರು ಮತ್ಸ್ಯಪ್ರಭೇದಗಳಲ್ಲಿ ಒಂದಾಗಬಹುದಾಗಿದ್ದ ಇದರಲ್ಲಿ ವಿಶೇಷವಾದರೂ ಏನು? ಜೀವವಿಜ್ಞಾನಿಗಳು ಏಕೆ ಇದಕ್ಕೆ ಇಷ್ಟೊಂದು ಮಹತ್ವ ಕೊಡುತ್ತಾರೆ? ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕಾದರೆ ಇದರ ದೇಹರಚನೆಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

       ಸೀಲಕಾಂತ್ ಮೀನುಗಳು ಆಕ್ಟಿನೋಪ್ಟೆರಿಜಿ ಎಂಬ ವಿಭಾಗದಲ್ಲಿ ವರ್ಗೀಕರಿಸಲಾದ ಮೀನುಗಳು. ಆದರೆ ಇತರೆ ಮೀನುಗಳಿಗಿಂತ ಇವು ಅನೇಕ ರೀತಿಯಲ್ಲಿ ಭಿನ್ನವಾಗಿವೆ. ಇದರ ದೇಹದ ಮೇಲ್ಭಾಗ ಮತ್ತು ಕೆಳಭಾಗ ಎರಡು ಬೇರೆಬೇರೆ ಬಾಲಗಳಿಂದ ಪ್ರತ್ಯೇಕಿಸಲ್ಪಟ್ಟಿದೆ. ಇದರ ಗಾತ್ರವೇನೂ ಸಾಧಾರಣವಲ್ಲ. ಆರು ಅಡಿಗಿಂತ ಉದ್ದಕ್ಕೆ ಬೆಳೆಯಬಲ್ಲ ಇವು ನೂರು ಕಿಲೋಗ್ರಾಂ ತನಕವೂ ತೂಗಬಲ್ಲವು. ಇಂದಿನ ಸೀಲಕಾಂತ್‌ಗಳು ಪಳೆಯುಳಿಕೆಯಲ್ಲಿ ಸಿಕ್ಕಿರುವ ಅಂದಿನ ಸೀಲಕಾಂತ್‌ಗಳಿಗಿ೦ತ ಸ್ವಲ್ಪಮಟ್ಟಿಗೆ ದೊಡ್ಡವು ಎಂದು ನಂಬಲಾಗಿದೆ. ಇವಕ್ಕೆ ಬೆನ್ನಿನ ಮೇಲೆ, ಪಕ್ಕೆಯಲ್ಲಿ ಮತ್ತು ಕಿವಿಯ ಪಕ್ಕದಲ್ಲಿ ಕೂಡ ಈಜುರೆಕ್ಕೆಗಳಿವೆ. ಅಲ್ಲದೆ ದೇಹದ ಹಿಂಭಾಗದಲ್ಲಿ ಬಾಲದ ಮೇಲೆ ಕೂಡ ಈಜುರೆಕ್ಕೆ ಇದೆ. 

       ಸೀಲಕಾಂತ್‌ಗಳ ಕಣ್ಣುಗಳು ದೊಡ್ಡವಾಗಿವೆ. ಏಕೆಂದರೆ ಅವು ನೀರಿನಾಳದಲ್ಲಿ ವಾಸಿಸುವುದರಿಂದ ಅವುಗಳಿಗೆ ಬೆಳಕಿನ ಲಭ್ಯತೆ ತುಂಬಾ ಕಡಿಮೆ. ಹಾಗಾಗಿ ಕಡಿಮೆ ಬೆಳಕಿನಲ್ಲೂ ನೋಡಲು ಸಾಧ್ಯವಾಗುವಂತೆ ದೊಡ್ಡ ಕಣ್ಣುಗಳನ್ನು ಹೊಂದಿವೆ. ಇದರ ತಲೆಬುರುಡೆಯ ಶೇಕಡಾ ೯೮.೫ರಷ್ಟು ಕೊಬ್ಬು ಇದ್ದು ಉಳಿದ ಅತ್ಯಲ್ಪ ಭಾಗವಷ್ಟೇ ಮೆದುಳಿನ ಅಂಗಾ೦ಶಗಳಿವೆ. ಹಾಗಾಗಿ ಬುದ್ಧಿವಂತಿಕೆಯಲ್ಲಿ ಈ ಮೀನು ಇತರ ಮೀನುಗಳಿಗಿಂತ ಬಹಳ ಮುಂದೇನೂ ಇಲ್ಲ. ಹಿಂದೆಯೇ ಉಳಿದಿವೆ ಎಂದರೂ ತಪ್ಪಾಗಲಾರದೇನೋ. ಇದರ ದೇಹದಲ್ಲಿ ಶ್ವಾಸಕೋಶಗಳ ಪಳೆಯುಳಿಕೆ ಇದ್ದು, ಈಗಂತೂ ಅವು ಕೆಲಸಕ್ಕೆ ಬಾರದಂತಾಗಿವೆ. ಹಾಗಾಗಿ ಒಂದಾನೊ೦ದು ಕಾಲದಲ್ಲಿ ಅವು ಗಾಳಿಯನ್ನು ಉಸಿರಾಡುತ್ತಿದ್ದವೇ ಎಂಬ ಪ್ರಶ್ನೆಯೂ ಏಳುತ್ತದೆ. ಜೊತೆಗೆ ಬೇರೆ ಮೀನುಗಳ ಗಾಳಿಚೀಲಗಳಂತೆ ಇದಕ್ಕೆ ಅದೇ ಶ್ವಾಸಕೋಶಗಳಲ್ಲಿ ಕೊಬ್ಬಿನ ಅಂಗಾ೦ಶಗಳು ತುಂಬಿದ್ದು, ತೇಲಲು ಅನುಕೂಲವಾಗುವಂತಿವೆ. ಈ ಲಕ್ಷಣಗಳೆಲ್ಲ ಇದು ಆಳದ ನೀರಿನಲ್ಲಿ ವಾಸಿಸುವ ಮೀನು ಎಂಬುದನ್ನು ಖಚಿತಪಡಿಸುತ್ತವೆ. ಜೊತೆಗೆ ಇದರ ಎರಡೂ ಮೂತ್ರಪಿಂಡಗಳು ಒಂದಾಗಿ ಬೆಸೆದುಕೊಂಡಿವೆ. 

       ಆದರೆ ಸೀಲಕಾಂತ್‌ನಲ್ಲಿ ಎಲ್ಲಕ್ಕಿಂತ ಮುಖ್ಯವಾಗಿದ್ದುದು ಅದರ ಈಜುರೆಕ್ಕೆಗಳು. ಅವುಗಳ ರಚನೆಯನ್ನು ಅಭ್ಯಾಸಮಾಡಿದ ವಿಜ್ಞಾನಿಗಳಿಗೆ ಒಂದು ಅಂಶ ಖಚಿತವಾಯಿತು. ಅದೇನೆಂದರೆ ನೀರಿನ ಆಳದಲ್ಲಿ ವಾಸಿಸುತ್ತಿದ್ದ ಈ ಮೀನು ತನ್ನ ಈಜುರೆಕ್ಕೆಗಳನ್ನು ನಡೆದಾಡಲು ಆಧಾರವಾಗಿ ಬಳಸುತ್ತಿತ್ತು ಎಂಬುದು. ಇದರಿಂದ ಮತ್ಸ್ಯಗಳ ಮೂಲಕ ಚತುಷ್ಪಾದಿಗಳ ವಿಕಾಸ ಉಂಟಾದ ಬಗೆಯನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗಬಹುದು ಎಂಬುದು ಅವರ ನಿರೀಕ್ಷೆ. ಜೀವವಿಕಾಸದಲ್ಲಿ ಸೀಲಕಾಂತ್ ಒಂದು ಪ್ರಮುಖ ಕೊಂಡಿ ಎಂಬುದು ಇದರಿಂದ ಸಾಬೀತಾಯಿತು.

       ಸೀಲಕಾಂತ್‌ಗಳ ಇನ್ನಷ್ಟು ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ಬಳಿಕ ತಿಳಿದುಬಂದ ವಿಷಯವೆಂದರೆ ೩೯ ಕೋಟಿ ವರ್ಷಗಳ ಹಿಂದೆಯೇ ಸೀಲಕಾಂತ್, ಚತುಷ್ಪಾದಿಗಳು ಹಾಗೂ ಶ್ವಾಸಕೋಶವುಳ್ಳ ಮೀನುಗಳು (ಲಂಗ್‌ಫಿಷ್) ವಿಕಾಸದಲ್ಲಿ ಬೇರೆ ಹಾದಿ ಹಿಡಿದಿವೆ ಎಂಬುದು. ನಮಗೆ ದೊರೆತ ಮೊಟ್ಟಮೊದಲ ಸಿಲಕಾಂತ್ ಪಳೆಯುಳಿಕೆ ೩೬ ಕೋಟಿ ವರ್ಷಗಳಷ್ಟು ಹಳೆಯ ಒಂದು ದವಡೆಯ ಮೂಳೆ. ೧೯೩೮ರಲ್ಲಿ ಮೊದಲಬಾರಿಗೆ ಜೀವಂತ ಸೀಲಕಾಂತ್ ಪತ್ತೆಯಾಗುವವರೆಗೂ ವಿಜ್ಞಾನಿಗಳು ಇವು ೬.೬ ಕೋಟಿ ವರ್ಷಗಳ ಹಿಂದೆಯೇ ನಾಮಾವಶೇಷವಾಗಿವೆ ಎಂದು ನಂಬಿದ್ದರು.

       ಇದೆಲ್ಲ ಸರಿ, ಸಾಮಾನ್ಯವಾಗಿ ಯಾವುದೇ ಜೀವಿಯಾದರೂ ವಿಕಾಸಪಥದಲ್ಲಿ ವೇಗವಾಗಿ ಬದಲಾವಣೆಗಳನ್ನು ಹೊಂದುತ್ತಿರುತ್ತವೆ ಅಥವಾ ಒಂದು ಕಾಲಾವಧಿಯ ನಂತರ ಅವುಗಳ ಸಂತತಿಯೇ ನಾಶವಾಗುತ್ತದೆ. ಆದರೆ ಸೀಲಕಾಂತ್‌ಗಳ ವಿಷಯದಲ್ಲಿ ಎರಡೂ ಆಗಿಲ್ಲ. ಅಂದಿನ ಸೀಲಕಾಂತ್‌ಗಳಿಗೂ ಇಂದಿನ ಸೀಲಕಾಂತ್‌ಗಳಿಗೂ ಅಂಥ ಮಹತ್ವದ ವ್ಯತ್ಯಾಸಗಳನ್ನೇನೂ ಕಾಣಲಾಗಿಲ್ಲ. ಇದಕ್ಕೆ ಕಾರಣ ಏನೆಂದು ಹುಡುಕುತ್ತ ಹೊರಟರೆ ವಿಕಾಸವಾದದ ಪಿತಾಮಹ ಚಾರ್ಲ್ಸ್ ಡಾರ್ವಿನ್‌ನ ಬುಡಕ್ಕೆ ಹೋಗಬೇಕಾಗುತ್ತದೆ. ಡಾರ್ವಿನ್ ಮೊದಲಬಾರಿಗೆ ಜೀವಂತ ಪಳೆಯುಳಿಕೆ ಎಂಬ ಪದವನ್ನು ಬಳಸಿದ. ಜೊತೆಗೆ ಜೀವಿಗಳು ಏಕೆ ವಿಕಾಸ ಹೊಂದುತ್ತವೆ ಹಾಗೂ ಬದಲಾವಣೆ ಹೊಂದುತ್ತವೆ ಎಂಬುದನ್ನೂ ಅವನು ವಿವರಿಸಿದ. ಪರಿಸರದ ಬದಲಾವಣೆಗಳಿಗೆ ಹೊಂದಿಕೊಳ್ಳುವುದೇ ಯಾವುದೇ ಜೀವಿಯ ವಿಕಾಸದ ಬಹುಮುಖ್ಯ ಉದ್ದೇಶ. ಆ ಬದಲಾವಣೆಗಳು ಆಹಾರದ ಲಭ್ಯತೆ, ಶತ್ರುಗಳ ಅಸ್ತಿತ್ವ, ವಾತಾವರಣದ ಬದಲಾವಣೆ ಇತ್ಯಾದಿಗಳನ್ನು ಒಳಗೊಂಡಿರಬಹುದು. ಆದರೆ ಸೀಲಕಾಂತ್‌ಗಳು ವಾಸಿಸುವ ಪರಿಸರದಲ್ಲಿ ಅಂಥ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲದ್ದರಿಂದ ಅವು ಕೋಟಿ ಕೋಟಿ ವರ್ಷಗಳಿಂದ ಹೆಚ್ಚಿನ ಬದಲಾವಣೆಗಳಿಲ್ಲದೆ ಉಳಿದಿವೆ ಎಂಬುದು ಅಧ್ಯಯನದ ಸಾರಾಂಶ.

       ಹಲ್ಲಿಯಲ್ಲ ಇದು ಪ್ರಾಚೀನ ಸರೀಸೃಪ ಟುವಟಾರ

       ಜೀವಂತ ಪಳೆಯುಳಿಕೆಗಳ ವಿಷಯ ಬಂದಾಗೆಲ್ಲ ತಪ್ಪದೇ ನೆನಪಾಗುವ ಇನ್ನೊಂದು ಜೀವಿಯೆಂದರೆ ನ್ಯೂಜಿಲೆಂಡಿನ ಸರೀಸೃಪ ಟುವಟಾರ. ನೋಡಲು ಹಲ್ಲಿಯಂತೆ ಕಾಣುವ ಟುವಟಾರ ವಾಸ್ತವವಾಗಿ ಒಂದು ಹಲ್ಲಿಯಲ್ಲ. ಇದು ಉರಗಗಳ ತರಗತಿಯಲ್ಲಿ ರಿಂಕೋಸಿಫಾಲಿಯಾ ಎಂಬ ವರ್ಗಕ್ಕೆ ಸೇರಿದ ಏಕಮಾತ್ರ ಪ್ರಭೇದ. (ಮೊದಲು ಇದರಲ್ಲಿ ಎರಡು ಪ್ರಭೇದಗಳನ್ನು ವಿಂಗಡಿಸಲಾಗಿದ್ದರೂ ಇಂದು ಈ ಎರಡು ಪ್ರಭೇದಗಳು ಒಂದೇ ಪ್ರಭೇದದ ಉಪಪ್ರಭೇದಗಳೇ ಹೊರತು ಬೇರೆಬೇರೆ ಪ್ರಭೇದಗಳಲ್ಲ ಎಂದು ನಿರ್ಧರಿಸಲಾಗಿದೆ). 

ಎರಡೂವರೆ ಅಡಿ ಉದ್ದ ಬೆಳೆಯುವ, ಒಂದರಿ೦ದ ಒಂದೂವರೆ ಕಿಲೋಗ್ರಾಂ ತೂಗುವ ಇವುಗಳನ್ನು ನೋಡಿದರೆ ನಮ್ಮ ಉಡಗಳನ್ನು ನೋಡಿದಂತೆ ಭಾಸವಾಗುತ್ತದೆ. 

       ಇವುಗಳ ಕಿವಿಗಳು ಬೇರೆ ಸರೀಸೃಪಗಳಿಗೆ ಹೋಲಿಸಿದರೆ ಅತ್ಯಂತ ಪ್ರಾಚೀನವಾದವು ಎಂಬುದು ಸ್ಪಷ್ಟವಾಗುತ್ತದೆ. ಇವಕ್ಕೆ ಕಿವಿಯ ರಂಧ್ರವಾಗಲೀ ತಮಟೆಯಾಗಲೀ ಇಲ್ಲ. ಕಿವಿಯ ನಡುವಿನ ಭಾಗ ಅಡಿಪೋಸ್ ಅಂಗಾ೦ಶಗಳಿ೦ದ ಕೂಡಿದೆ. ಅವು ಬಹಳ ಕಡಿಮೆ ಆವರ್ತನಾಂಕದ (ಫ್ರೀಕ್ವೆನ್ಸಿ) ಶಬ್ದಗಳನ್ನು ಮಾತ್ರ ಗ್ರಹಿಸಬಲ್ಲವು. ಸಾಮಾನ್ಯವಾಗಿ ಅವುಗಳ ಶಬ್ದಗ್ರಹಣ ಸಾಮರ್ಥ್ಯ ೧೦೦ರಿಂದ ೮೦೦ ಹರ್ಟ್ಸ್ ಆಗಿದೆ. ೪೦ರಿಂದ ೨೦೦ ಹರ್ಟ್ಸ್ ಮಧ್ಯೆ ಅವುಗಳ ಗ್ರಹಣ ಸಾಮರ್ಥ್ಯ ಗರಿಷ್ಠವಾಗಿದೆ. ಆದರೆ ಹಲ್ಲಿಗಳಿಗೆ ಕಿವಿ ಇದೆ. ಜೊತೆಗೆ ಟುವಟಾರಗಳ ಮೇಳ್ದವಡೆಯಲ್ಲಿ ಎರಡು ಸಾಲು ಹಲ್ಲುಗಳಿದ್ದರೆ ಹಲ್ಲಿಗಳ ಮೇಲ್ದವಡೆಯಲ್ಲಿ ಒಂದೇ ಸಾಲು ಇದೆ. ಜೊತೆಗೆ ಟುವಟಾರಗಳ ಹಣೆಯ ಮೇಲೆ ಮೂರನೇ ಕಣ್ಣೊಂದು ಇದೆ! ಆದರೆ ಈ ಕಣ್ಣು ನೋಡಲು ನೆರವಾಗುವುದಿಲ್ಲ. ಚರ್ಮದಿಂದ ಮುಚ್ಚಿಹೋಗಿದೆ. ಆದರೆ ಇದಕ್ಕೆ ರೆಟಿನಾ ಮತ್ತು ಮಸೂರವಿದ್ದು, ಈ ರಚನೆ ಹಲ್ಲಿಗಳಲ್ಲಿಲ್ಲ. ಇವೆಲ್ಲ ಲಕ್ಷಣಗಳ ನೆರವಿನಿಂದ ಇವನ್ನು ಹಲ್ಲಿಗಳಿಂದ ಬೇರ್ಪಡಿಸಬಹುದು. 

       ಟುವಟಾರಗಳು ಇಪ್ಪತ್ತೆರಡು ಕೋಟಿ ವರ್ಷಗಳ ಹಿಂದೆಯೇ ಹಲ್ಲಿ ಮತ್ತು ಹಾವುಗಳನ್ನೊಳಗೊಂಡ ಸ್ಕಾ÷್ವಮೇಟಾ ವರ್ಗದಿಂದ ಬೇರೆಯಾಗಿವೆ. ಆದರೆ ಹಾವು ಮತ್ತು ಹಲ್ಲಿಗಳಿಗೆ ಹೋಲಿಸಿದರೆ ಟುವಟಾರಗಳಲ್ಲಿ ಅಂಥ ಮಹತ್ವದ ಬದಲಾವಣೆಗಳನ್ನೇನೂ ವಿಜ್ಞಾನಿಗಳು ಕಂಡಿಲ್ಲ. ಇದಕ್ಕೆ ಮತ್ತದೇ ಕಾರಣ, ಅವು ನ್ಯೂಜಿಲೆಂಡಿನ ದ್ವೀಪಗಳಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿ ಅವಕ್ಕೆ ಅಂಥ ಶತ್ರುಗಳು ಯಾವುವೂ ಇರಲಿಲ್ಲ. ಜೊತೆಗೆ ಹವಾಮಾನದಲ್ಲೂ ಗಮನಾರ್ಹ ಬದಲಾವಣೆಗಳೇನೂ ಕಂಡುಬರದ ಕಾರಣ ಅವು ನೆಮ್ಮದಿಯಾಗಿ ಬದುಕಿದ್ದವು. ಆದರೆ ಈಗ ಮಾನವರ ಆಗಮನದ ಬಳಿಕ ಅಲ್ಲಿ ಇಲಿ, ಹಂದಿ ಇತ್ಯಾದಿ ಉಪದ್ರವಕಾರಿಗಳು ಬಂದು ಸೇರಿಕೊಂಡಿದ್ದು ಇದರಿಂದಾಗಿ ಟುವಟಾರಗಳ ಸ್ಥಿತಿ ಗಂಭೀರವಾಗಿದೆ. ಆದರೆ ಇವುಗಳನ್ನು ರಕ್ಷಿಸಲು ನ್ಯೂಜಿಲೆಂಡ್ ಸರ್ಕಾರ ೧೮೯೫ರಷ್ಟು ಹಿಂದೆಯೇ ಕ್ರಮ ಕೈಗೊಂಡಿದ್ದರಿ೦ದ ಇವು ಸದ್ಯಕ್ಕೆ ಸ್ವಲ್ಪವಾದರೂ ನಿರಾಳವಾಗಿರುವುದು ಸಾಧ್ಯವಾಗಿದೆ. 

       ಅಣುಬಾಂಬ್ ದಾಳಿಗೂ ಜಗ್ಗದ ಜಟ್ಟಿ ಜಿಂಕೋ

       ಚೀನಾ ದೇಶದ ಜಿಂಕೋ ಎಂಬ ಒಂದು ಬಗೆಯ ಸಸ್ಯವೂ ಜೀವಂತ ಪಳೆಯುಳಿಕೆ ಎಂದೇ ಪ್ರಸಿದ್ಧವಾಗಿದೆ. ಈ ಸಸ್ಯವು ತನ್ನ ಸಂಬ೦ಧಿ ಸಸ್ಯಗಳಲ್ಲಿ ಇಂದು ಬದುಕಿರುವ ಏಕಮಾತ್ರ ಸಸ್ಯವಾಗಿದೆ. ಇದರ ಬೇರೆಲ್ಲ ಸಂಬ೦ಧಿಗಳು ಎಷ್ಟೋ ಕೋಟಿ ವರ್ಷಗಳ ಹಿಂದೆಯೇ ನಿರ್ವಂಶವಾಗಿವೆ. ಈ ಸಸ್ಯದ ಇಪ್ಪತ್ತೇಳು ಕೋಟಿ ವರ್ಷಗಳಷ್ಟು ಹಿಂದಿನ ಪಳೆಯುಳಿಕೆಗಳು ಲಭ್ಯವಾಗಿವೆ. ಬಹುಶಃ ಇಂದು ನಮಗೆ ತಿಳಿದಿರುವ ಸಸ್ಯಪೆಭೇದಗಳಲ್ಲೆಲ್ಲ ಅತ್ಯಂತ ಪ್ರಾಚೀನವಾದ ಪ್ರಭೇದ ಇದೇ ಆಗಿದೆ. ಮಾನವನ ನಾಗರೀಕತೆ ಆರಂಭವಾದ ಮೊದಲಿನಲ್ಲೇ ಈ ಸಸ್ಯವನ್ನು ಮನುಷ್ಯ ಬೆಳೆಯುತ್ತಿದ್ದ ಎಂಬುದಕ್ಕೆ ದಾಖಲೆಗಳಿವೆ. ಇದನ್ನು ಆಹಾರವಾಗಿ ಮತ್ತು ಔಷಧೀಯ ಉಪಯೋಗಗಳಿಗಾಗಿಯೂ ಬಳಸುತ್ತಿದ್ದರು. ಇಂದು ಇದನ್ನು ಬೇರೆ ದೇಶಗಳಲ್ಲಿ ಸಹ ಬೆಳೆಯಲಾಗುತ್ತಿದೆ.    

       ಜಿಂಕೋದ ಎಲೆಗಳು ನೋಡಲು ಬೀಸಣಿಗೆಯ ಆಕೃತಿಯನ್ನು ಹೊಂದಿವೆ. ಬೇಸಿಗೆಯಲ್ಲಿ ಅಚ್ಚಹಸಿರಾಗಿರುವ ಎಲೆಗಳು ಚಳಿಗಾಲ ಸಮೀಪಿಸುತ್ತಿದ್ದಂತೆ ಹಳದಿಗೆ ತಿರುಗುತ್ತವೆ. ಆಗ ಅವುಗಳನ್ನು ಅಲಂಕಾರಿಕ ವಸ್ತುಗಳನ್ನಾಗಿ ಸಂಗ್ರಹಿಸಲಾಗುತ್ತದೆ. 

       ಜಿಂಕೋ ಸಸ್ಯದ ಇನ್ನೊಂದು ಅಸಾಧಾರಣ ಸಾಮರ್ಥ್ಯವೆಂದರೆ ವಿಕಿರಣಗಳ ವಿರುದ್ಧ ಇವುಗಳಿಗಿರುವ ತಾಳಿಕೆ ಸಾಮರ್ಥ್ಯ. ಹಿರೋಷಿಮಾದಲ್ಲಿ ೧೯೪೫ರಲ್ಲಿ ಸಂಭವಿಸಿದ ಅಣುಬಾಂಬ್ ಸ್ಫೋಟದಿಂದ ಸುತ್ತಮುತ್ತಲಿನ ಜೀವಿಗಳೆಲ್ಲ ವಿಕಿರಣದ ದಾಳಿಗೆ ಸಿಕ್ಕು ಕ್ಷಣಾರ್ಧದಲ್ಲಿ ಸುಟ್ಟುಹೋದವು ಹಾಗೂ ಬದುಕುಳಿದ ಅನೇಕ ಜೀವಿಗಳು ವರ್ಷಗಟ್ಟಲೆ ವಿಕಿರಣದ ಪ್ರಭಾವದಿಂದ ನರಳಿದವು. ಆದರೆ ಜಿಂಕೋ ಮರಗಳು ಮಾತ್ರ ಬಾಂಬ್ ಸ್ಫೋಟವಾದಾಗ ಸುಟ್ಟು ಕರಕಲಾದರೂ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಮತ್ತೆ ನಳನಳಿಸತೊಡಗಿದವು. ಆ ಆರು ಮರಗಳು ಎಪ್ಪತ್ತು ವರ್ಷಗಳ ಬಳಿಕವೂ ಇಂದೂ ಕೂಡ ಬದುಕಿವೆ ಹಾಗೂ ಆರೋಗ್ಯವಾಗಿವೆ. ಇವುಗಳ ಈ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ.

       ಜಿಂಕೋ ಸಸ್ಯಗಳು ಅಷ್ಟೊಂದು ಪ್ರಾಚೀನಕಾಲದಿಂದಲೂ ಅತ್ಯ÷ಲ್ಪ ಬದಲಾವಣೆಗಳನ್ನು ಕಂಡಿರುವ ಸಸ್ಯವಾಗಿದೆ. ಪರ್ಮಿಯನ್ ಯುಗ, ಜುರಾಸಿಕ್ ಯುಗಗಳಲ್ಲಿ ಸಿಕ್ಕಿರುವ ಇದರ ಪಳೆಯುಳಿಕೆಗಳಿಗೂ ಇಂದಿನ ಜಿಂಕೋ ಸಸ್ಯಗಳಿಗೂ ಅಚ್ಚರಿಪಡುವಷ್ಟು ಸಾಮ್ಯತೆಗಳಿವೆ. ಇವುಗಳ ವಿಕಾಸ ಇಷ್ಟೊಂದು ನಿಧಾನವಾಗಿರುವುದಕ್ಕೆ ಕಾರಣಗಳೇನು? ಹಿರೋಷಿಮಾದ ಅಣುಬಾಂಬ್ ದಾಳಿಯನ್ನೂ ಸಮರ್ಥವಾಗಿ ಎದುರಿಸಿ ಬದುಕುಳಿದ ಅವುಗಳ ಅಸಾಧಾರಣ ಸಾಮರ್ಥ್ಯಕ್ಕೂ ಈ ಬಲು ನಿಧಾನಗತಿಯ ವಿಕಾಸಕ್ಕೂ ಸಂಬ೦ಧಗಳಿವೆಯೇ? ಕಾಲವೇ ಇದಕ್ಕೆಲ್ಲ ಉತ್ತರ ಹೇಳಬೇಕು.

       ಇನ್ನೊಂದು ಸುಪ್ರಸಿದ್ಧ ಪಳೆಯುಳಿಕೆ ಎಂದರೆ ಕುದುರೆ ಲಾಳಾಕೃತಿಯ ಏಡಿ. ಹಾರ್ಸ್ಶೂ ಕ್ರಾö್ಯಬ್ ಎಂದೇ ಕರೆಯಲ್ಪಡುವ ಈ ಏಡಿಗಳ ವಿಶೇಷ ಏನೆಂದರೆ ಇವುಗಳ ಬೆನ್ನಮೇಲೆ ಗಟ್ಟಿಯಾದ ಚಿಪ್ಪು ಇದೆ. ಈ ಚಿಪ್ಪು ಏಡಿಗೆ ಯಾವುದೇ ಬಲವಾದ ಹೊಡೆತಗಳಿಂದ ರಕ್ಷಣೆ ನೀಡುತ್ತದೆ. ಸಮುದ್ರದ ಈ ಏಡಿಗಳು ಮೊಟ್ಟೆಯಿಡುವ ಸಮಯ ಬಂದಾಗ ತೀರಪ್ರದೇಶಗಳಿಗೆ ಬರುತ್ತವೆ. ಒಂದೇ ಹೆಣ್ಣನ್ನು ಕೆಲವೊಮ್ಮೆ ನಾಲ್ಕಾರು ಗಂಡುಗಳು ಕೂಡುವುದೂ ಇದೆ. ಒಂದೊ೦ದು ಹೆಣ್ಣೂ ೬೦,೦೦೦ ದಿಂದ ೧೨೦,೦೦೦ದವರೆಗಿನ ಅಗಾಧ ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಹೀಗಾಗಿ ಸಮುದ್ರದ ತೀರಪ್ರದೇಶವೆಲ್ಲ ಮೊಟ್ಟೆಗಳಿಂತ ತುಂಬಿಹೋಗುತ್ತವೆ. ಈ ಮೊಟ್ಟೆಗಳು ಮರಿಯಾಗಲು ಎರಡು ವಾರ ಬೇಕಾಗುತ್ತದೆ. ಈ ಅವಧಿಯಲ್ಲಿ ಎಷ್ಟೋ ಮೊಟ್ಟೆಗಳು ಕಡಲ ಹಕ್ಕಿಗಳಿಗೆ ಆಹಾರವಾಗುತ್ತವೆ. ಉಳಿದ ಶೇಕಡಾ ಒಂದರಷ್ಟು ಮೊಟ್ಟೆಗಳೇ ಇನ್ನೊಂದು ತಲೆಮಾರನ್ನು ಬೆಳೆಸುತ್ತವೆ ಎಂದರೆ ಅವುಗಳ ಸಂಖ್ಯೆ ಅದೆಷ್ಟು ಅಗಾಧವಾಗಿರುತ್ತದೆ ಎಂದು ಊಹಿಸಿಕೊಳ್ಳಬಹುದು. ಈ ಏಡಿಗಳಿಗೆ ಜೀವಂತ ಪಳೆಯುಳಿಕೆ ಎಂಬ ಹೆಸರು ಬರಲು ಕಾರಣ ಇವುಗಳ ಪ್ರಾಚೀನತೆ. ಇವುಗಳ ಪಳೆಯುಳಿಕೆಗಳು ನಲವತ್ತೆöÊದು ಕೋಟಿವರ್ಷಗಳಷ್ಟು ಹಿಂದಿನ ಶಿಲಾಸ್ತರಗಳಲ್ಲಿ ಪತ್ತೆಯಾಗಿವೆ. ಅಂದಿನಿ೦ದ ಇಂದಿನವರೆಗೆ ಇವುಗಳಲ್ಲಿ ಆಗಿರುವ ಬದಲಾವಣೆಗಳು ಅತ್ಯಲ್ಪ.

       ಬೆಳ್ಳಿಮೀನಲ್ಲ, ಇದು ಕಾಗದಾಹಾರಿ ಕೀಟ! 

       ನೀವು ಮನೆಯಲ್ಲಿ ಹಳೆಯ ಪುಸ್ತಕಗಳ ಸಂದಿಯಲ್ಲಿ ಓಡಾಡುತ್ತಿರುವ ಹೊಳೆಯುವ ಬೆಳ್ಳಿಯ ಬಣ್ಣದ ಚಿಕ್ಕ ಕೀಟಗಳನ್ನು ಕಂಡಿದ್ದೀರಾ? ಬಹುತೇಕ ಎಲ್ಲರೂ ನೋಡಿರಬಹುದಾದ ಈ ಕೀಟಗಳನ್ನು ಬಹಳ ಉಪದ್ರವಕಾರಿಗಳೆಂದು ಪರಿಗಣಿಸುತ್ತಾರೆ. ಏಕೆಂದರೆ ಇವು ಕಾಗದವನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ. ಕಾಗದದಲ್ಲಿರುವ ಸೆಲ್ಯುಲೋಸ್ ಇವುಗಳ ಅತ್ಯಂತ ಪ್ರಿಯವಾದ ಆಹಾರ. ಇವಕ್ಕೆ ಸಿಲ್ವರ್‌ಫಿಶ್ ಎಂದು ಹೆಸರು. ಈ ಹೆಸರು ಬರಲು ಎರಡು ಕಾರಣಗಳಿವೆ. ಒಂದು ಇವು ಬೆಳ್ಳಿಯಂತೆ ಹೊಳೆಯುವ ಮೈಬಣ್ಣ ಹೊಂದಿರುವುದು, ಇನ್ನೊಂದು ಮೀನುಗಳಂಥ ಚಲನೆ. ಈ ಚಿಕ್ಕ ಕೀಟಗಳು ಕೀಟಜಗತ್ತಿನ ಅತ್ಯಂತ ಪ್ರಾಚೀನ ಕೀಟಗಳೆಂದು ಹೆಸರಾಗಿದೆ. ಬ್ರಿಸಲ್‌ಟೈಲ್ ಎಂಬ ತಮ್ಮ ಸಮೀಪದ ಸಂಬ೦ಧಿಗಳೊ೦ದಿಗೆ ಇವು ಈ ಹೆಗ್ಗಳಿಕೆಯನ್ನು ಹಂಚಿಕೊ೦ಡಿವೆ. ಇವು ಸುಮಾರು ನಲವತ್ತು ಕೋಟಿ ವರ್ಷಗಳ ಹಿಂದೆ ಸೈಲೂರಿಯನ್ ಮತ್ತು ಡಿವೋನಿಯನ್ ಯುಗಗಳಲ್ಲಿ ಇವು ವಿಕಾಸಹೊಂದಿದವು ಎಂದು ತಿಳಿದುಬಂದಿದೆ.

       ಈ ಬೆಳ್ಳಿಮೀನುಗಳ ದಾಳಿಗೆ ತುತ್ತಾಗುವುದು ಕೇವಲ ಕಾಗದ ಮಾತ್ರವಲ್ಲ. ಇವುಗಳ ಆಹಾರದಲ್ಲಿ ಶರ್ಕರಪಿಷ್ಟಗಳು ಅತಿ ಮುಖ್ಯ. ಬಟ್ಟೆಗಳು, ನೆಲ ಒರೆಸುವ ಕಾರ್ಪೆಟ್‌ಗಳು, ಸಕ್ಕರೆ, ಅಂಟು, ಕಾಫಿ, ಕೂದಲು, ತಲೆಹೊಟ್ಟು, ಹತ್ತಿ, ರೇಷ್ಮೆ, ಸತ್ತ ಬೇರೆ ಕೀಟಗಳು, ಚರ್ಮದ ವಸ್ತುಗಳು ಇತ್ಯಾದಿಗಳನ್ನು ತಿನ್ನುತ್ತವೆ. ಇವು ಇಷ್ಟೊಂದು ಉಪದ್ರವಕಾರಿಗಳೆಂದು ಪರಿಗಣಿಸಲ್ಪಟ್ಟಿದ್ದರೂ ರೋಗಗಳನ್ನು ಹರಡುವುದಿಲ್ಲ ಎಂಬುದು ಸಮಾಧಾನಕರ ಸಂಗತಿ. ಶತಪದಿಗಳು, ಜೇಡಗಳು ಇತ್ಯಾದಿಗಳು ಇವುಗಳ ಶತ್ರುಗಳು. 

       ಟ್ರ್ಯಾಪ್‌ಡೋರ್‌ ಸ್ಪೈಡರ್ ಎಂದು ಕರೆಯಲ್ಪಡುವ ಒಂದು ಬಗೆಯ ಜೇಡಗಳು (ಇವು ನೆಲದಲ್ಲಿ ಕುಳಿ ತೋಡಿ ಅದರೊಳಗೆ ವಾಸಿಸುತ್ತವೆ. ಆ ಕುಳಿಗೆ ಒಂದು ಮುಚ್ಚಳ ರಚಿಸಿ ಅದರೊಳಗೆ ಕುಳಿತಿರುತ್ತವೆ. ಕುಳಿಯ ಬಳಿ ಬರುವ ಯಾವುದೇ ನತದೃಷ್ಟ ಕೀಟವನ್ನು ಹಿಡಿದು ಕಬಳಿಸುತ್ತವೆ.) ಇವುಗಳ ದೇಹದ ಮೇಲೆ ಚೇಳುಗಳನ್ನು ಹೋಲುವ ವಿಭಾಗಗಳಿವೆ. ಇದನ್ನು ನೋಡಿದರೆ ಇವು ಚೇಳುಗಳಿಗೆ ಹತ್ತಿರದ ಸಂಬ೦ಧಿಗಳಿರಬಹುದು ಎಂಬ ಸಂಶಯವೂ ವಿಜ್ಞಾನಿಗಳಲ್ಲಿ ಉಂಟಾಗುತ್ತದೆ. ಆದರೆ ಇವು ಜೇಡಗಳಲ್ಲೆಲ್ಲ ಅತ್ಯಂತ ಪ್ರಾಚೀನವಾದವು ಎಂಬುದು ಮಾತ್ರ ಸತ್ಯ. 

       ಹೀಗೆ ಜೀವಂತ ಪಳೆಯುಳಿಕೆಗಳೆಂದು ಕರೆಸಿಕೊಳ್ಳುತ್ತಿರುವ ಜೀವಿಗಳು ಭೂಮಿಯ ಮೇಲೆ ಸಾಕಷ್ಟಿವೆ. ಜೀವಂತ ಪಳೆಯುಳಿಕೆ ಎಂಬುದನ್ನು ನಾನಾ ಅರ್ಥಗಳಲ್ಲಿ ಬಳಸಲಾಗುತ್ತದೆ. ಎಷ್ಟೋ ಕೋಟಿ ವರ್ಷಗಳಿಂದ ಬದಲಾಗದೆ ಉಳಿದ ಅಥವಾ ಅತ್ಯಲ್ಪ ಬದಲಾವಣೆ ಕಂಡಿರುವ ಜೀವಿಗಳಿಗೆ ಈ ಪದವನ್ನು ಬಳಸಲಾಗುತ್ತದೆ. ಒಟ್ಟಿನಲ್ಲಿ ಜೀವಂತ ಪಳೆಯುಳಿಕೆಗಳಲ್ಲಿ ಕೆಳಕಂಡ ಲಕ್ಷಣಗಳನ್ನು ಮುಖ್ಯವಾಗಿ ಗಮನಿಸಬಹುದು. ಅವುಗಳಲ್ಲಿ ವೈವಿಧ್ಯತೆಯೂ ಕಡಿಮೆ ಇರುತ್ತದೆ ಮತ್ತು ಹೆಚ್ಚಾಗಿ ಅಂಥ ಪ್ರಭೇದಗಳು ಅಳಿಯುವ ಅಪಾಯವನ್ನು ಬಹಳವಾಗಿ ಎದುರಿಸುತ್ತಿರುತ್ತವೆ. ಆದ್ದರಿಂದ ಅವುಗಳನ್ನು ರಕ್ಷಿಸುವುದು ಬಹಳ ಮುಖ್ಯ. 

       ಈ ಜೀವಿಗಳನ್ನು ಸಂರಕ್ಷಿಸುವುದು ಸಂಶೋಧನಾತ್ಮಕ ದೃಷ್ಟಿಯಿಂದಲೂ ಮುಖ್ಯವಾದದ್ದು. ಏಕೆಂದರೆ ಇವು ಜೀವವಿಕಾಸದ ಅನೇಕ ಘಟ್ಟಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಕರಿಸುತ್ತವೆ. ಉದಾಹರಣೆಗೆ ಸೀಲಕಾಂತ್ ಮೀನಿನ ಈಜುರೆಕ್ಕೆಗಳ ಮಾರ್ಪಾಡನ್ನು ಗಮನಿಸಿದಾಗ ನಮಗೆ ಮೀನುಗಳಿಂದ ಚತುಷ್ಪಾದಿಗಳು ಉಗಮಿಸಿದ ಬಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಅದೇರೀತಿ ನಾವು ಉರಗಗಳಿಂದ ಹಕ್ಕಿಗಳು ವಿಕಾಸವಾಗಿವೆ ಎಂದು ತಿಳಿದಿದ್ದೇವೆ. ಅದಕ್ಕೆ ಅತ್ಯುತ್ತಮವಾದ ಆಧಾರವೆಂದರೆ ದಕ್ಷಿಣ ಅಮೆರಿಕದ ಹೋಟ್ಜಿನ್ ಎಂಬ ಹಕ್ಕಿ. ಈ ಹಕ್ಕಿಯ ಮರಿಗಳಿಗೆ ರೆಕ್ಕೆಯ ತುದಿಯಲ್ಲಿ ಉಗುರುಗಳಿರುತ್ತವೆ. ಈ ಹಕ್ಕಿಗಳು ಜವುಗುಪ್ರದೇಶಗಳಲ್ಲಿ ಬೆಳೆಯುವ ಗಿಡಮರಗಳಲ್ಲಿ  ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಅಲ್ಲಿ ಅಕಸ್ಮಾತ್ ಕಾಲುಜಾರಿ ಹಕ್ಕಿಮರಿ ಕೆಳಗೆ ಬಿದ್ದರೆ ಅದು ನೇರವಾಗಿ ನೀರಿಗೆ ಬೀಳುತ್ತದೆ. ಅಲ್ಲಿ ಕಾಯುತ್ತಿರುವ ಕೇಮ್ಯಾನ್ ಮೊಸಳೆಗಳಿಗೆ ಆಹಾರವಾಗುತ್ತವೆ. ರೆಕ್ಕೆಯ ತುದಿಯಲ್ಲಿರುವ ಉಗುರುಗಳು ಈ ಹಕ್ಕಿಗಳಿಗೆ ಕೆಳಗೆ ಬೀಳದಂತೆ ಮರದ ಕೊಂಬೆಗಳನ್ನು ಭದ್ರವಾಗಿ ಹಿಡಿದುಕೊಳ್ಳಲು ನೆರವಾಗುತ್ತದೆ. ಈ ಉಗುರುಗಳು ಉರಗಗಳಿಂದ ಪಕ್ಷಿಗಳು ವಿಕಾಸ ಹೊಂದಿದವು ಎಂಬುದಕ್ಕೆ ಸಾಕ್ಷಿಯಾಗಿವೆ.

       ಜೀವವಿಕಾಸದಲ್ಲಿ ಬೆನ್ನೆಲುಬುಳ್ಳ ಜೀವಿಗಳ ಪೈಕಿ ಮತ್ಸ್ಯಗಳು ಮೊದಲು ಉಗಮಿಸಿ ಅವುಗಳಿಂದ ಉಭಯವಾಸಿಗಳು, ನಂತರ ಉರಗಗಳು ಹಾಗೂ ಉರಗಗಳಿಂದ ಒಂದು ಕವಲು ಸಸ್ತನಿಗಳಾಗಿಯೂ ಇನ್ನೊಂದು ಕವಲು ಹಕ್ಕಿಗಳಾಗಿಯೂ ವಿಕಾಸ ಹೊಂದಿದವೆ೦ದು ವಿಜ್ಞಾನ ಹೇಳುತ್ತದೆ. ಆಸ್ಟ್ರೇಲಿಯಾದ ಪ್ರಾಚೀನ ಸಸ್ತನಿಗಳಾದ ಪ್ಲಾಟಿಪಸ್ ಮತ್ತು ಎಕಿಡ್ನಾಗಳನ್ನು ನೋಡಿದರೆ ಈ ವಾದಕ್ಕೆ ಪುಷ್ಟಿ ಸಿಗುತ್ತದೆ. ಏಕೆಂದರೆ ಇವು ಸಸ್ತನಿಗಳಾಗಿದ್ದರೂ ಇತರ ಸಸ್ತನಿಗಳಂತೆ ಮರಿಗಳನ್ನು ಹೆರದೆ ಮೊಟ್ಟೆಯಿಡುವ ಪರಿಪಾಠವನ್ನೇ ಮುಂದುವರೆಸಿಕೊ೦ಡು ಬಂದಿವೆ!

       ಜೀವಿಗಳ ಪೈಕಿ ಅತ್ಯಂತ ಪ್ರಾಚೀನವಾದ ಹ್ಯಾಗ್‌ಫಿಶ್ (ಇದರ ಹೆಸರಿನಲ್ಲಿ ಫಿಶ್ ಇದ್ದರೂ ಇದು ಮೀನಲ್ಲ, ಅದಕ್ಕಿಂತ ಪ್ರಾಚೀನವಾದ ಜೀವಸಂಕುಲ) ಮತ್ತು ಲ್ಯಾಂಪ್ರೇ ಎಂಬ ಪ್ರಭೇದಗಳಿಗೆ ದವಡೆಗಳೇ ಇಲ್ಲ! ಇವುಗಳ ಬಾಯಿ ಎಂದರೆ ದೇಹದ ಮುಂಭಾಗದಲ್ಲಿರುವ ಒಂದು ಚಿಕ್ಕ ರಂಧ್ರ ಅಷ್ಟೆ! ಅದರ ಮೂಲಕವೇ ಆಹಾರವನ್ನು ಒಳಕ್ಕೆ ಎಳೆದುಕೊಳ್ಳುತ್ತವೆ. ಆದರೆ ಈ ಜೀವಿಗಳಿಗೆ ದವಡೆಗಳಿರುವ ಜೀವಿಗಳಂತೆ ಅನೇಕ ವಿಧದ ಆಹಾರಗಳನ್ನು ಅಗಿದು ನುಂಗುವ ಸಾಮರ್ಥ್ಯ ಇಲ್ಲ. ಇವು ಕೂಡ ಜೀವವಿಕಾಸದ ಬಗ್ಗೆ ನಮಗೆ ಮಹತ್ವದ ಸುಳಿವುಗಳನ್ನು ನೀಡಬಲ್ಲ ಜೀವಿಗಳು.

       ಹೀಗೆ ಜೀವಂತ ಪಳೆಯುಳಿಕೆಗಳ ಬಗ್ಗೆ ಹೇಳುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಏಕೆಂದರೆ ಹುಡುಕುತ್ತ ಹೋದರೆ ಪ್ರತಿಯೊಂದು ಜೀವಿವರ್ಗದಲ್ಲೂ ಇಂಥ ಪುರಾತನ ಜೀವಂತ ಪ್ರತಿಮೆಗಳು ಸಿಗುತ್ತವೆ. ದೈತ್ಯೋರಗಗಳ ಅಥವಾ ಅದಕ್ಕಿಂತ ಹಿಂದಿನ ಕಾಲದ ಪ್ರತಿನಿಧಿಗಳನ್ನು ಎಲ್ಲೆಡೆ ಕಾಣಬಹುದು. ಜೀವವಿಕಾಸದಲ್ಲಿ ಮರೆತುಹೋದ ಅಥವಾ ಬಿಟ್ಟುಹೋದ ಎಷ್ಟೋ ಪ್ರಮುಖ ಕೊಂಡಿಗಳನ್ನು ಅರ್ಥಮಾಡಿಕೊಳ್ಳಲೂ ಇವು ನೆರವಾಗುತ್ತವೆ. ಹಾಗಾಗಿ ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು.




ProfileImg

Written by Srinivasa Murthy

Verified

0 Followers

0 Following