ಇದು ದಿನನಿತ್ಯ ಚತುಷ್ಪಥ ದಾಟಿ ಹೋಗುವವರ ಕಣ್ಣಿಗೆ ಬೀಳುವ ದೃಶ್ಯ..ಹೆಚ್ಚಾಗಿ ನಾನು ಹಾಗೂ ನಮ್ಮವರು ಮಂಗಳೂರಿನ ಕಡೆಗೋ ಅಥವಾ ಉಪ್ಪಿನಂಗಡಿ ಕಡೆಗೋ ಕಾರಲ್ಲಿ ತೆರಳುವಾಗ ಪ್ರತಿ ಬಾರಿಯೂ ಭಾರಿ ಗಂಭೀರವಾಗಿ ಚರ್ಚೆಗೆ ಒಳಗಾಗುವ ಒಂದು ಕರಾಳ ವಿಚಾರ..ಇವರೋ ಸದಾ ಚತುಷ್ಪಥದ ಬಗೆಗೆ ಮಾತು.ರೋಡು ನೇರವಾದರೆ ಎಷ್ಟು ಚೆನ್ನಾಗಿ ಕಾರಲ್ಲಿ ಬೈಕಲ್ಲಿ ಝೂಂ...ಎಂದು ಹೋಗಬಹುದು..ಬಸ್ಸಲ್ಲಿ ಇಲ್ಲಿ ಕಣ್ಣು ಮುಚ್ಚಿ ಕುಳಿತರೆ ಮಂಗಳೂರು ತಲುಪುವುದೇ ತಿಳಿಯದು ಎಂದೆಲ್ಲ ಅಭಿವೃದ್ದಿಯ ನಂತರದ ರೋಡುಗಳ ಬಗೆಗೆ ಉದ್ದುದ್ದ ಗುಣಗಾನ..ಆದರೆ ನನ್ನ ಮನಸ್ಸೋ...ಎಂದಿನಂತೆ ಹೆಂಗರುಳು..ರೋಡಿಗೆ ಬಲಿಯಾಗಿ ಬಿದ್ದ ಮರದ ಅವಶೇಷಗಳು.. ಪ್ರತಿದಿನಾ ಸ್ವಲ್ಪ ಸ್ವಲ್ಪವೇ ಒಣಗಿ ಕೃಷವಾಗಿ ಸಾಯುತ್ತಿರುವ ತಬ್ಬಲಿ ತೆಂಗಿನ ಮರಗಳು..ಇನ್ನಷ್ಟೇ ಹೂ ಬಿಟ್ಟು ಅಡಿಕೆ ನೀಡಬೇಕಾದ ಅಡಿಕೆ ಸಸಿಗಳು ಎತ್ತರೆತ್ತರಕ್ಕೆ ಬೆಳೆದು ಆಕಾಶ ದಿಟ್ಟಿಸಿ ದೇವರಲ್ಲಿ ನೀರು ಬೇಕೆಂದು ಗೋಗರೆಯುವಂತೆ ಕಾಣುತ್ತವೆ..ಅದುವರೆಗೆ ಈ ಮರಗಳ ಲಾಭವನ್ನು ನಿರೀಕ್ಷಿಸಿ ಮಗುವಿನಂತೆ ಪೋಷಿಸಿದ ಮನೆಯವರು ಕೈಗೆ ಕಂತೆ ದುಡ್ಡುಗಳು ಸಿಕ್ಕಾಗ ಈ ಜೀವಗಳನ್ನು ಮರೆತು ಹೋದರು.ಎಲ್ಲೋ ಒಂದು ಕಡೆಯಲ್ಲಿ ಬೀದಿಗೆ ಬಿಟ್ಟ ನಾಯಿ ಮರಿಗಳು ತನ್ನ ಅಮ್ಮನ ಬರುವಿಕೆಗಾಗಿ ಬಟ್ಟಲು ಕಂಗಳಿನಿಂದ ದಾರಿಯನ್ನೇ ಕಾಯುವಂತೆ ಈ ಮರಗಳು ತನ್ನ ಮನೆಯವರಿಗಾಗಿ ಕಾಯುವಂತೆಎನಗೆ ತೋರುತ್ತದೆ..
ಪ್ರತಿ ಬಾರಿ ಮಂಗಳೂರಿನ ಕಡೆಗೆ ಹೋದಾಗಲೆಲ್ಲ ಈ ತೆಂಗಿನ ಮರಗಳ ಆಯಸ್ಸು ಕಮ್ಮಿ ಆಗುತ್ತಿರುವುದು ಕಾಣಿಸುತ್ತದೆ..ಒಮ್ಮೆ ನೋಡಿದಾಗ ಬಾಡಿದಂತೆ..ಮಗದೊಮ್ಮೆ ನೋಡಿದಾಗ ಮಡಲುಗಳು ಬಾಗಿದಂತೆ..ಮುಂದೊಮ್ಮೆ ಇಣುಕಿದಾಗ ಭುಜಗಳನ್ನೇ ಕಡಿದಂತೆ ತೋರಿ ಕೊನೆಗೆ ಧರಾಶಾಯಿಯಾಗಿ ಉರುಳಿ ಬಿದ್ದ ಅವಶೇಷಗಳನ್ನು ಕಂಡಾಗ ಮನುಕುಲಕ್ಕೆ ಕಟ್ಟಿಟ್ಟ ಪಾಪವೇ ತಲೆ ಎತ್ತಿ ನೋಡುತ್ತಿರುವಂತೆ ಭಯವಾಗಿ ಕಣ್ಣು ಮುಚ್ಚಿಕೊಳ್ಳುತ್ತೇನೆ...ನಿಜ ಅಭಿವೃದ್ಧಿ ಯ ವಿರೋಧಿ ನಾನಲ್ಲ...ಆದರೆ ನಮ್ಮಮೂಲವನ್ನೇ ಅಳಿಸಿ ಭವಿಷ್ಯವನ್ನು ಉಳಿಸುವ ನಮ್ಮ ಮೂರ್ಖತನದ ಪ್ರಯತ್ನಕ್ಕೆ ಏನನ್ನಬೇಕು ತಿಳಿಯುವುದಿಲ್ಲ...ನೋಡ ನೋಡುತ್ತಿದ್ದಂತಯೇ ಬೆಟ್ಟಗಳು ಕರಗುತ್ತಿವೆ..ಗುಡ್ಡಗಳು ಕಣ್ಮರೆಯಾಗುತಿವೆ..ಇದನ್ನೆಲ್ಲ ಕಂಡಾಗ ಭವಿತವ್ಯದ ಭಯ ಕಾಡುತ್ತದೆ.
ನಾಳೆಯ ದಿನ ಉಸಿರಾಡಲು ಗಾಳಿ..ತಿನ್ನಲು ಶುದ್ದವಾದ ಆಹಾರ..ನೀರು ಇದಾವುದು ಸಿಗದೇ ಹೋದರೆ ಈ ರಾಕ್ಷಸ ಮಾರ್ಗಗಳಲ್ಲೆ ನಮ್ಮ ಹೆಣ ಸಾಗುತ್ತದೆ ಅಷ್ಟೇ..ಹೊರತು ಇದಾವುದು ಅನ್ನ ನೀರು ಗಾಳಿಯನ್ನು ಕೊಡಲಾರದು..ಅಂದೊಬ್ಬರಲ್ಲಿ ಈ ಕುರಿತು ಮಾತನಾಡಿದಾಗ ಮರಗಳನ್ನು ಕಡಿದರೇನು ಇನ್ನೊಮ್ಮೆ ನೆಟ್ಟರಾಯಿತು ಎಂದು...ಆ ಮಹಾಶಯನ ಮಾತಿಗೆ ನಗು ಬಂತು..ವನಮಹೋತ್ಸವಕ್ಕೆ ಗಿಡ ನೆಟ್ಟ ಗುಂಡಿಯಲ್ಲೇ ಮುಂದಿನ ವರ್ಷವೂ ಹೋಗಿ ನೆಟ್ಟು ಫೊಟೋಗೆ ಫೋಸು ಕೊಟ್ಟು ಪೇಪರ್ ಗಳಲ್ಲಿ ಪರಿಸರ ಪ್ರೇಮಿ ಎಂದು ಗುರುತಿಸುವ ಜನಗಳು ಇನ್ನು ಬೃಹದಾಕಾರದ ಮರಗಳಾಗಲು ಗಿಡ ನೆಟ್ಟು ಬೆಳೆಸಲುಂಟೆ ಎಂದು..ನೆನಪಿರಲಿ ಸ್ನೇಹಿತರೇ..ನಾವೀಗ ಕಳೆದುಕೊಂಡ ಬೃಹದಾಕಾರದ ಮರಗಳನ್ನು ಮುಂದೆಂದೂ ಬೆಳೆಸಲು ಸಾಧ್ಯವಿಲ್ಲ ಏಕೆಂದರೆ ಮಣ್ಣು ವಿಷಮಯವಾಗಿದೆ..ಹಾಗೂ ಫಲವತ್ತತೆಯನ್ನು ಕಳೆದುಕೊಂಡಿದೆ.ಜೊತೆಗೆ ಬೇರುಗಳು ಅಷ್ಟೊಂದು ಆಳವಾಗಿ ಭೂಮಿಯಲ್ಲಿ ಬೇರೂರಲು ಸಾಧ್ಯವಿಲ್ಲ..ಹೀಗಿರುವಾಗ ಮತ್ತೆಲ್ಲಿ ಮರಗಳು ಬೆಳೆಯಲು ಸಾಧ್ಯ ಹೇಳಿ...
ಹೀಗೆ ನನ್ನ ಅಲೋಚನೆ ಈ ದಿಶೆಯಲ್ಲಿ ನಡೆದರೆ ನನ್ನವರ ಅಲೋಚನೆ ಚರ್ಚೆ, ಅಭಿವೃದ್ಧಿ ಯತ್ತ ಮುಖ ಮಾಡಿರುತ್ತದೆ...ಅಂತು ಮಂಗಳೂರು ತಲುಪುವ ವೇಳೆಗೆ ನಮ್ಮನ್ನು ನಾವು ಪುನರ್ ವಿಮರ್ಶೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಯೋಚಿಸಿರುತ್ತೇವೆ..ಕೊನೆಗೆ ನೀನು ಹೆಣ್ಣು..ಭೂಮಿಯಂತೆ ಭಾರ ಹೊತ್ತವಳು...ನಿನ್ನ ಅಲೋಚನೆಯೂ ಸರಿಯಾಗಿದೆ ಎಂದು ಕಾರನ್ನು ಎಂದಿನಂತೆ ಪಾರ್ಕ್ ಮಾಡಿ ಸುಮ್ಮನೆ ನನ್ನೊಂದಿಗೆ ಮೌನವಾಗಿ ಹೆಜ್ಜೆ ಇಡುತ್ತಾರೆ....ಆದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸುವವರಾರು ಹೇಳಿ
ಭವ್ಯಾ.ಪಿ.ಆರ್ ನಿಡ್ಪಳ್ಳಿ
ನಾನು ಭವ್ಯಾ.ಪಿ.ಆರ್ ನಿಡ್ಪಳ್ಳಿ.ಮೂಲತಃ ದಕ್ಷಿಣ ಕನ್ನಡ ದ ಪುತ್ತೂರಿನವಳು.ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಸಾಂಗತ್ಯ ಎನ್ನುವ ಕವನಸಂಕಲನವನ್ನು ಬಿಡುಗಡೆಗೊಳಿಸಿದ್ದೇನೆ
0 Followers
0 Following