ನಿನ್ನ ಕಾಡಿ ಬೇಡಿ
ನನ್ನ ಹುಟ್ಟು ಬಯಸಲಿಲ್ಲ
ಹುಟ್ಟಿಗೂ ಸಾವಿನ ಹತ್ತಿರದ ನಂಟಿತ್ತು.
ಏನೆಂದರಿಯದ ಅಂದಿಗೂ
ಎಲ್ಲವೂ ಬಲ್ಲೆನೆಂದ ಇಂದಿಗೂ
ಕಿಂಚಿತ್ತೂ ವ್ಯತ್ಯಾಸವಿಲ್ಲ..
ಅಂದರಳಿ ಕುಣಿದ ಹಸಿ ಕನಸು
ಇಂದಿಲ್ಲಿ ಬಂದುರುಳಿದೆ..
ಸೂತ್ರವದು ನಿನ್ನ ಕೈಯಲ್ಲಿದೆ
ಆಡಿಸುವವನು ನೀನೇ
ಸೋಲಿಸುವವನು ನೀನೆ..
ಇನ್ನು ನಾನೇಕೆ ಕಾಯಲಿ ಗೆಲುವನು..
ಎಂದೋ ಒಪ್ಪಿಕೊಂಡಿದ್ದೇನೆ,
ಜನ್ಮಾಂತರ ಕರ್ಮವೊಂದು
ಜೊತೆಗಿರುವುದೆಂದು.
ಸಾಗಲಿ ಬಿಡು..ಹೀಗೆಯೇ
ಬೀಜ ಬಿತ್ತಿದವನಿಗೂ ಬೇಡವಾಗಿ..
ಬೆಳೆಸುವವನಿಗೂ ಭಾರವಾಗಿ...
ಮರವೊಂದು ಒಂಟಿಯಾಗಿ
ಕೊರಡಾಗಿ ಮರುಗಿ
ಉರುಳಿ ಬಿದ್ದು ಕಸವಾಗುವಂತೆ...
ಆಸೆಗಳೆಲ್ಲವೂ ಬೂದಿಯಾದಂತೆ....
ಭವ್ಯಾ.ಪಿ.ಆರ್.ನಿಡ್ಪಳ್ಳಿ
ನಾನು ಭವ್ಯಾ.ಪಿ.ಆರ್ ನಿಡ್ಪಳ್ಳಿ.ಮೂಲತಃ ದಕ್ಷಿಣ ಕನ್ನಡ ದ ಪುತ್ತೂರಿನವಳು.ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಸಾಂಗತ್ಯ ಎನ್ನುವ ಕವನಸಂಕಲನವನ್ನು ಬಿಡುಗಡೆಗೊಳಿಸಿದ್ದೇನೆ
0 Followers
0 Following