ಬದುಕು ಬರೀ ಮೂರಕ್ಷರದ ಒಂದು ಪದ ಅಷ್ಟೇ ಅನ್ಸಿದ್ರೂ ಪ್ರತಿ ಹೆಜ್ಜೆಗೂ ಅದು ಕಲಿಸೋ ಪಾಠ ಮಾತ್ರ ಅಗಣಿತ. ಗರ್ಭದಲ್ಲಿ ಇರುವಾಗ್ಲೇ ಕಲಿಯೋಕೆ ಶುರು ಮಾಡ್ತೀವಿ ತದನಂತರ ಈ ಜಗತ್ತಿಗೆ ಕಾಲಿಟ್ಟ ಮೇಲೆ ಕೆಲವು ವಿಷಯಗಳನ್ನ ನಾವೇ ಕಲಿತರೆ ಇನ್ನೂ ಕೆಲವು ಸಂಗತಿಗಳನ್ನ ನಮ್ಮ ಸುತ್ತ ಮುತ್ತಲಿನ ಜನರೇ ಕಲಿಸ್ತಾರೆ. ನನ್ನ ಮಟ್ಟಿಗೆ ಬದುಕು ಅಂದ್ರೆ ಅದೊಂದು ರೀತಿಯ ಭಾವನೆ, ಆದ್ರೆ ಅದ್ಯಾಕೋ ಈ ಮನುಷ್ಯನ ಮನಸ್ಥಿತಿಗಳು ಮತ್ತು ಅವನ ಕಟ್ಟುಪಾಡುಗಳು ಈ ಬದುಕನ್ನ ವೇದನೆಯನ್ನಾಗಿ ಮಾರ್ಪಾಡು ಮಾಡೋ ಕೆಲ್ಸನಾ ಗುತ್ತಿಗೆ ಆಧಾರದ ಮೇಲೆ ಕೈಗೆತ್ತಿಕೊಂಡಿದ್ದಾನೆ ಅನ್ಸತ್ತೆ.
ಈ ಬದುಕಲ್ಲಿ ನಮ್ಮಿಂದ ನಾವೇ ಕಲಿಯೋದಕ್ಕೂ ವಿಷಯ ಇದೆ , ಬೇರೆಯವರಿಂದ ಕಲಿಯೋದು ಕೂಡ ಸಾಕಷ್ಟಿದೆ ಹಾಗಾಗಿ ನಿರಂತರವಾಗಿ ಕಲಿಯುತ್ತಲೇ ಸಾಗ್ತಾ ಇರ್ಬೇಕು. ಬದುಕನ್ನ ಸಾಗಿಸಬೇಕು ಅನ್ನೋ ಜಂಜಾಟ, ಪರಿಹಾರ ಸಿಗ್ದೇ ಇರೋ ಕೆಲವು ನೋವುಗಳ ತೊಳಲಾಟ, ಕಷ್ಟ ಸಂಕಷ್ಟ ಅನ್ನೋ ಪರದಾಟ, ಅಸೂಯೆ, ದ್ವೇಷ, ಮತ್ಸರ ಅನ್ನೋ ಹೊಡೆದಾಟ ಹೀಗೆ ಬದುಕಿನ ಆಟದಲ್ಲಿ ಕೆಲವು ಆಟಗಳು ವಿಲೀನ ಆಗ್ಬಿಟ್ಟಿವೆ. ಬದುಕು ಬಂದಂತೆ ಬದುಕ್ಬೇಕು, ಕಲಿತಿದ್ದನ್ನು ಕಲಿಯೋ ತಾಳ್ಮೆ ವಹಿಸಬೇಕು, ಅದು ಕೊಟ್ಟಿದ್ದನ್ನು ಸ್ವೀಕರಿಸ್ಬೇಕು, ನಡೆಸಿದಂತೆ ಸಾಗಬೇಕು ಯಾಕಂದ್ರೆ ಬದುಕು ಇರೋದು ಬದುಕೋಕೆ ಉಳಿದಂತೆ ಎಲ್ಲವೂ ಕಾಲ ನಿಯಮವಷ್ಟೇ!, ಬದುಕಲ್ಲಿ ಯಾವುದು ಶಾಶ್ವತ ಅಲ್ಲ, ಈ ಬದುಕು ಕೂಡ. ನಿನ್ನೆ ಇವತ್ತು , ನಾಳೆ ಅನ್ನೋ ಮೂರು ದಿನದ ಸಂತೆ, ಇದರಲ್ಲಿ ಇಲ್ಲಸಲ್ಲದ ಚಿಂತೆ, ಕೊನೆವರೆಗೂ ಬರೀ ಅಂತೆ ಕಂತೆ, ಕೊನೆಗೊಂದಿನ ಚಿತೆ. ಬದುಕು ಎಷ್ಟೊಂದು ವಿಸ್ಮಯ ಅಂದ್ರೆ ನಾವು ಹುಟ್ಟಿದ ದಿನ ನಮಗೆ ಗೊತ್ತಿರತ್ತೆ ಆದ್ರೆ ಸಾವಿನ ದಿನ ಯಾರು ಬಲ್ಲರು!? ಅಲ್ಲವೇ. ಬದುಕಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಕೂಡ ಆಯ್ಕೆಗಳಷ್ಟೇ ಆದ್ರೆ ಯಾವ್ದು ಬೇಕು ಅನ್ನೋದು ನಮ್ಮ ಆಲೋಚನೆಗೆ ಬಿಟ್ಟ ವಿಷಯ.
ಬದುಕನ್ನ ಆಳವಾಗಿ ಯೋಚಿಸಬೇಕು ಅಂತ ಅದ್ಯಾಕೋ ಮನಸ್ಸಿಗೆ ಅನಿಸ್ತು, ಯೋಚಿಸಿದ್ಮೇಲೆ ಗೊತ್ತಾಗಿದ್ದು ಇಷ್ಟೇ “ಈ ಬದುಕಲ್ಲಿ ಏನಿದೆ ಮಣ್ಣು ನಮ್ದು ಒಂದು ಚಿಕ್ಕ ಪಾತ್ರ ಅಷ್ಟೇ” ಅನ್ಸಿದಾಗ ನೆನಪಾಗಿದ್ದು ಈ ಅದ್ಭುತ ಸಾಲುಗಳು
"ಮೂಖನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು,
ಕಾಕ ಬುದ್ಧಿ ಕಡೆ ಘಾಯಿಸಲಾರದೆ ಲೋಕದ ಗೊಡವಿ ನಿನಗ್ಯಾಕ ಬೇಕು".
Writer, Poet
0 Followers
0 Following