ದಂಪತಿಗಳ ಬಾಳಿಗೆ ಬೆಳಕಾದ ಆಳು..!! 

ಮನಗೆದ್ದ ಮನೆಯಾಳು..

ProfileImg
16 Jul '24
3 min read


image

     ಅಪ್ಪ, ಅಮ್ಮ. ಮಗ ಎಂಬ ಚಿಕ್ಕ ಕುಟುಂಬ.  ಮಗನಿಗೆ ಉತ್ತಮ ವಿದ್ಯೆ, ಸಂಸ್ಕಾರವನ್ನು ಕಲಿಸಿ ಬೆಳೆಸಿದ್ದರು. ಈಗ ಮಗ ಬೆಳೆದು ಬೆಂಗಳೂರಿನಲ್ಲಿ ಉತ್ತಮ ಹುದ್ದೆಯಲ್ಲಿದ್ದು,  ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದಾನೆ. ಇವರನ್ನು ನೋಡಲು ಯಾವಾಗಲೊಮ್ಮೆ ಮನೆಗೆ ಬರುತ್ತಾನೆ. 

        ಹಿಂದಿನ ಕಾಲದಲ್ಲಿ ಜೀವನೋಪಾಯಕ್ಕಾಗಿ ಹೆಚ್ಚಿನವರು ಆಶ್ರಯಿಸಿದ್ದು ಕೃಷಿ. ಎಕ್ರೆಗಟ್ಟಲೆ ದೊಡ್ಡದಾದ ಜಾಗ. ಅಡಿಕೆ ಕೃಷಿಯೇ ಪ್ರಧಾನ. ತೆಂಗು, ಕಾಳುಮೆಣಸು, ಕೊಕ್ಕೋ, ರಬ್ಬರ್, ಗೇರು... ಉಪ ಕೃಷಿ. ಹಿರಿಯರಿಂದ ಬಳುವಳಿಯಾಗಿ ಬಂದ ಆಸ್ತಿಯನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿ ಅವರಿಗಿತ್ತು. ಆದರೆ ಒಬ್ಬನಿಂದ ಅದು ಕಷ್ಟಸಾಧ್ಯವಾಗಿತ್ತು. ಇದನ್ನು ನಿಭಾಯಿಸಲು ಕೂಲಿ ಕೆಲಸದವರ ಅವಶ್ಯಕತೆ ಇತ್ತು. 

       ಮನೆಯ ಪಕ್ಕದವರೇ ಕೂಲಿ ಕೆಲಸಕ್ಕೆ ಬರುತ್ತಿದ್ದರು. ನಿತ್ಯವೂ ಕೆಲಸವಿತ್ತು. ಬೇರೆ ಹೋಗುವ ಅವಕಾಶವೇ ಇರಲಿಲ್ಲ. ಬೆಳಗ್ಗೆ ೮ ಗಂಟೆಗೆ ಬಂದರೆ ಸಂಜೆ ೬ ಗಂಟೆಯವರೆಗೂ ಕೆಲಸ. ಬೇರೆಯವರ ಮನೆಯೆಂಬ ಭಾವವಿಲ್ಲದೆ ತನ್ನ ಮನೆಯಂತೆ ಜೀವನವನ್ನು ಇಲ್ಲೇ ಕಳೆಯುತ್ತಿದ್ದರು. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಚಹಾ ಎಲ್ಲ ಇಲ್ಲಿ ಉಚಿತ. ಮನೆಯವನಿಗೂ ಕೆಲಸಗಳು ಪೂರ್ತಿ ಆದಾಗ ಮನಸಿಗೊಂದು ತೃಪ್ತಿ. ಮನೆಯವರು ಇಟ್ಟ ವಿಶ್ವಾಸವನ್ನು ಅವರು ಉಳಿಸಿಕೊಳ್ಳುತ್ತಿದ್ದರು. ಎಲ್ಲಿಯಾದರೂ ಒಂದು ದಿನ ರಜೆ ಮಾಡಿದರೆ ಸಾಕು... ಯಜಮಾನನಿಗೆ ಏನೋ ಕಳೆದುಕೊಂಡಂತೆ..!! ಈರ್ವರ ಬಂಧವೆಂದರೆ ಹಾಗೆ.. ಅಮ್ಮ ಮಗುವಿನಂತೆ ಬಿಡಲಾಗದ ನಂಟು..!! 

      ಬೆಳೆ ಬರಬೇಕಾದರೆ ಬುಡಕ್ಕೆ ಗೊಬ್ಬರ, ಸೊಪ್ಪು ಹಾಕಲೇಬೇಕು. ಹಟ್ಟಿಯ ಗೋವಿನ ಗೊಬ್ಬರ, ಗುಡ್ಡದಿಂದ ಸೊಪ್ಪು ಕಡಿದು ಬುಡಕ್ಕೆ ಹಾಕುವುದು ಎಲ್ಲವನ್ನೂ ಮಾಡುತ್ತಿದ್ದ. ಶ್ರಮಕ್ಕೆ ತಕ್ಕ ಫಲವೂ ಸಿಗುತ್ತಿತ್ತು. ಬೆಲೆ, ಬೆಳೆ ಎರಡೂ ಬಂತು.  ಒಡೆಯನ ಮುಖದಲ್ಲಿ ಮಂದಹಾಸ ಕಾಣುತ್ತಿತ್ತು. ಅದು ಹೂವಿನ ಪರಿಮಳದಂತೆ ಊರೆಲ್ಲ ಹಬ್ಬಿತು. ಸಿಕ್ಕಿದ ಲಾಭದ ಒಂದಂಶದಷ್ಟು ದಾನ ಮಾಡುವುದು ಎಂದು ನಿರ್ಧರಿಸಿ ನೆಂಟರಿಗೆ ಹೇಳಿ ಪೂಜೆ ಮಾಡಲು ಸಿದ್ಧರಾದರು. ಈ ರೀತಿಯ ಪದ್ಧತಿ ಕೆಲವು ಮನೆಗಳಲ್ಲಿ ಇದೆ. ಕೊಟ್ಟದ್ದು ತನಗೇ ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದರು.  "ಕೆರೆಯ ನೀರನು ಕೆರೆಗೆ ಚೆಲ್ಲಿ.. ವರವ ಪಡೆದವರ ಕಾಣಿರೋ.." ದೇವರು ಕೊಟ್ಟಿದ್ದನ್ನು ದೇವರಿಗೇ ಕೊಡುವುದು. ಇದು ನಮ್ಮ ಏಳಿಗೆಗೆ ಅಡಿಪಾಯ ಹಾಕಿದಂತೆ....!! 

       "ಯುದ್ಧಕ್ಕೂ ಬದ್ಧ, ಸಂಧಾನಕ್ಕೂ ಸಿದ್ಧ" ಎನ್ನುವಂತೆ ಕೇವಲ ತೋಟದ ಕೆಲಸ ಮಾತ್ರವಲ್ಲದೆ; ಎಲ್ಲಕ್ಕೂ ಸೈ ಎನ್ನುವಂತೆ ಮೇಸ್ತ್ರಿ, ಆಚಾರಿ, ಪೈಂಟರ್, ಪ್ಲಂಬರ್...ಹೀಗೆ ಎಲ್ಲವನ್ನೂ ಅರಿತಿದ್ದ. ಪುಸ್ತಕದ ಬದನೆಕಾಯಿ ಊಟಕ್ಕೆ ಬರುವುದೇ... ? ಆ ಜ್ಞಾನ ಸ್ವಲ್ಪ ಸಮಯಕ್ಕೆ ಮಾತ್ರ ಪ್ರಯೋಜನಕ್ಕೆ ಬರುತ್ತೆ. ಮಸ್ತಕಕ್ಕೆ ಕೆಲಸ ಕೊಟ್ಟರಷ್ಟೇ ಲಾಭ. ಇವನು ಶಾಲೆಗೆ ಹೋಗಿ ಕಲಿತ ವಿದ್ಯೆ ಕಡಿಮೆ. ಆದರೆ ಇವನಿಗಿದ್ದ ಹೊರಗಿನ ಜ್ಞಾನ ಮಾತ್ರ ಅಪಾರ.... !! 

      ಇದು ಯಜಮಾನರ ಮನವ ಗೆಲ್ಲುವಂತೆ ಮಾಡಿತು. ಅವರ ಒಬ್ಬ ಬಲಗೈ ಬಂಟನಾದ. ಏನೇ ಕೆಲಸಕ್ಕೂ "ಅವನಿದ್ದಾನಲ್ಲಾ.... " ಎಂಬ ಧೈರ್ಯ ಅವರಿಗಿತ್ತು. ಯಾವುದೇ ಟೆನ್ಶನ್ ಇಲ್ಲ. ಅವನಿಗೂ ತನ್ನ ಮೇಲಿಟ್ಟ ವಿಶ್ವಾಸಕ್ಕೆ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಖುಷಿ. ಅಡಿಕೆ, ತೆಂಗಿನ ಮರವನ್ನು ಏರುವುದು, ಸುಲಿಯುವುದು, ತೋಟಕ್ಕೆ ಗೊಬ್ಬರ ಹಾಕುವುದು, ಮದ್ದು ಬಿಡುವುದು, ಗದ್ದೆ ಬೇಸಾಯ... "ಸರ್ವಂ ಏಕಮೇವ" ಎನ್ನುವಂತೆ ಎಲ್ಲ ಜ್ಞಾನವನ್ನು ಹೊಂದಿದ್ದ.  

      ಮನೆಯಲ್ಲೊಂದು ಶುಭಕಾರ್ಯ ಎದ್ದರೆ ಸಾಕು.... ಅಡಿಗೆಗೆ ಬೇಕಾದ ಹಾಲಿನಿಂದ ಹಿಡಿದು ಮನೆಯಂಗಳಕ್ಕೆ ಸೆಗಣಿಯನ್ನು ಸಾರಸಿ ಶುದ್ಧ ಮಾಡುವುದು, ತೋಟದಿಂದ ತೆಂಗಿನ ಗರಿ, ಕಂಬಗಳನ್ನು ತಂದು ಚಪ್ಪರದ ವಿಲೇವಾರಿ ಮಾಡುವುದು, ಹೋಮಕ್ಕೆ ಬೇಕಾಗುವ ಸಮಿತ್ತುಗಳ ತಯಾರಿ, ಬಿಲ್ವಪತ್ರೆ, ಸಿಂಗಾರ... ಮನೆಯಲ್ಲಿ ಒಂದು ವಾರದ ಸಂಭ್ರಮ. ಅಂದಿನ ಕಾಲದಲ್ಲಿ ಮದುವೆ, ಉಪನಯನಗಳಂಥ ಶುಭಕಾರ್ಯಗಳೆಲ್ಲ ಮನೆಯಲ್ಲೇ ನಡೆಯುತ್ತಿದ್ದವು. ಈಗ ಹಳ್ಳಿಗೂ ಶಾಮಿಯಾನ ಕಾಲಿಟ್ಟಿದೆ. ಕೆಲಸವೂ ಸುಲಭ. ಮಳೆಯ ಸಮಸ್ಯೆಯೂ ಇರದು. ರಕ್ಷಣೆಗೆ ಅದರ ಮೇಲೆ ಶೀಟ್ ಹಾಕಿದರಾಯಿತು. 

     "ಹನಿಹನಿ ಕೂಡಿ ಹಳ್ಳ" ಎನ್ನುವಂತೆ,  ನೆರೆಕರೆಯವರೂ ಬಂದು ಇವರಿಗೆ ಬೇಕಾದ ಸಹಾಯವನ್ನು ಮಾಡುತ್ತಿದ್ದರು.  ಅವರಲ್ಲಿ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಹಿಂದಿನ ರಾತ್ರಿ ತರಕಾರಿ ಹಚ್ಚುವುದು, ಊಟಕ್ಕೆ ಬಡಿಸುವುದು  ಮುಂತಾದವುಗಳಲ್ಲಿ ಕೈ ಜೋಡಿಸುತ್ತಿದ್ದರು. 

      ರಾತ್ರಿ ಪೂಜೆಯ ಕಾರ್ಯಕ್ರಮಕ್ಕೆ ಕರೆಂಟಿನ ಸಮಸ್ಯೆಯ ಮುಂದಾಲೋಚನೆ ಅವನಲ್ಲಿತ್ತು. ಅದಕ್ಕಾಗಿ ಗ್ಯಾಸ್ ಲೈಟಿನ ಸಿದ್ಧತೆ ಮಾಡುತ್ತಿದ್ದ. ಪೇಟೆಗೆ ಹೋಗಿ ಅದನ್ನು ಮನೆಗೆ ಬರುವಾಗ ತರುತ್ತಿದ್ದ.  ಬಿಲ್ವಪತ್ರೆ, ಸಿಂಗಾರ, ಊಟಕ್ಕೆ ಬಾಳೆಲೆಯ ಸಿದ್ಧತೆ ಹೀಗೆ ಎಲ್ಲವೂ... ಮನೆಯ ಯಜಮಾನನಿಗೆ ಏನೂ ಸಮಸ್ಯೆಯಿರಲಿಲ್ಲ. ಆಗಬೇಕಾದ ಕೆಲಸವನ್ನು ಅವನಿಗೊಂದು ನೆನಪಿಸಿದರಾಯಿತು... !! 

      "ನಾನು ಯಾವುದಕ್ಕೂ ಕಮ್ಮಿಯಿಲ್ಲ" ಎನ್ನುವಂತೆ ಮನೆಯವರ ಭಾಷೆಯನ್ನೂ ಕಲಿತಿದ್ದ.  ನಾವು ಮನೆಗೆ ಬೀಗ ಹಾಕಿ ಒಂದು ವಾರ ಹೊರಗಡೆ ಪ್ರವಾಸ ಹೋಗಲೂ ಏನೂ ಚಿಂತೆಯಿರಲಿಲ್ಲ. ಅವನೊಬ್ಬ ನಂಬಿಗಸ್ಥ ವ್ಯಕ್ತಿಯಾಗಿದ್ದ.  ರಾತ್ರಿ ಮನೆಗೆ ಬಂದು ಕಾವಲು ಮಾಡುತ್ತಿದ್ದ. ಈಗ ಅಂಥ ಕೆಲಸದವರೂ ಇಲ್ಲ, ಇದ್ದರೆ ವಿಶ್ವಾಸವಿಡಲೂ ಸಾಧ್ಯವಿಲ್ಲ. 

      ಮನೆಯಾಳೇ ಯಜಮಾನನಿಗೆ ನಿತ್ಯ ಕಾರ್ಯಕ್ಕೆ ಮೂಲ ಆಧಾರ.  ಈಗ ಇವರಿಗೆ ಇಬ್ಬರಿಗೂ ವಯಸ್ಸಾಗಿದೆ. ದೇಹದ ಶಕ್ತಿ ಕುಂದಿದೆ. ಜಾಗವನ್ನು ಮಾರಿ ಪೇಟೆಗೆ ಹೋಗಿ ಕೂರಲು ಮನಸ್ಸಿಲ್ಲ. ಮಗನಲ್ಲಿಗೆ ಹೋಗಲು ಮರ್ಯಾದೆಯ ಪ್ರಶ್ನೆ...  ಕೂಲಿಯವನ ಸಹಾಯದಿಂದ ಇದ್ದ ಜಾಗವನ್ನೇ ತಕ್ಕ ಮಟ್ಟಿಗೆ ನೋಡಿಕೊಂಡು ಜೀವನ ನಡೆಸುತ್ತಿದ್ದಾರೆ. 

 

✍ ಮುರಳಿಕೃಷ್ಣ ಕಜೆಹಿತ್ತಿಲು

Category:Parenting and Family



ProfileImg

Written by Murali Krishna

DTP Worker, Vittal, Mangalore