ಕಾಂತಾರ



image

ಕಾಂತಾರ-ಪದಗಳಿಗೆ ನಿಲುಕದ್ದು....

ಹೌದು...ಕಾಂತಾರ ಸಿನಿಮಾ ಜನಮಾನಸದಲ್ಲಿ ಒಂದು ದಂತಕತೆಯಾಗಿಯೇ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.ತುಳುನಾಡಿನಲ್ಲಿಯೇ ಹುಟ್ಟಿ ಬೆಳೆದಿರುವ ನನಗೆ ಈ ಸಿನಿಮಾ ತೀರಾ ಮನಸ್ಸಿಗೆ ಆಪ್ತವೆನಿಸಿತು.ತುಳುನಾಡಿನ ದೈವಾರಾಧನೆಗೆ..ಮುಗ್ಧ ನಂಬಿಕೆಗೆ ಅದೆಲ್ಲಿಯೂ ಸಣ್ಣ ಒಂದು ಚ್ಯುತಿಯೂ ಬರದಂತೆ ಅತ್ಯಂತ ಸೂಕ್ಷ್ಮವಾಗಿ ಕತೆ ಹೆಣೆದು ಅಭಿನಯಿಸಿದ ರಿಷಬ್ ಶೆಟ್ಟಿ ನಿಜಕ್ಕೂ ಸಿನಿರಂಗದಲ್ಲಿ ದಂತಕತೆಯಾಗಿ ನಿಲ್ಲಬಲ್ಲ ದೈತ್ಯ ಪ್ರತಿಭೆ.
ಸಿನಿಮಾದೊಳಗೆ ನಾನು ಸಂಪೂರ್ಣವಾಗಿ ಒಳಹೊಕ್ಕಾಗ ಅಲ್ಲಿ ಕಂಡಂತಹ ಒಂದಷ್ಟು ವಿಚಾರಗಳು ನನ್ನ ಭಾವನೆಗಳೊಂದಿಗೆ ಮಿಳಿತಗೊಂಡಂದಂತು ಸತ್ಯ. ಕಾಂತಾರದುದ್ದಕ್ಕೂ ನನ್ನ ಸ್ಮೃತಿ ಪಟಲದಲ್ಲಿ ನನ್ನ ಅಪ್ಪ ಪದೇ ಪದೇ ನೆನಪಾಗುತ್ತಲೇ ಹೋದರು. ನನ್ನ ನಿಡ್ಪಳ್ಳಿ ಮನೆಯೂ ಒಂದು ಕುಗ್ರಾಮದಲ್ಲಿಯೇ ತಲೆಎತ್ತಿ ನಿಂತ ಊರು. ಕಾಂತಾರದಲ್ಲಿ ಕಂಡಂತಹ ಹಳ್ಳಿಯ ಬದುಕೇ ನಮ್ಮದೂ ಕೂಡಾ.ರಾತ್ರೆಯಾದಂತೆ ಅಮ್ಮ ಚಿಮಣಿ ದೀಪದ ಎದುರು ಬೀಡಿಯ ಸೂಪು ಇಟ್ಟುಕೊಂಡು ಕೂತರೆ ಅಪ್ಪ ಹಳೆಯದೊಂದು ಮುರುಕು ಮರದ ಬೆಂಚಿನಲ್ಲಿ ಕುಳಿತು ದೈವಗಳ ಬಗೆಗೆ..ಬೋಂಟೆ(ಬೇಟೆ)ಯ ಬಗೆಗೆ ಕತೆ ಹೆಣೆಯುತಿದ್ದರು.ಅಪ್ಪ ಬೇಟೆಗೆ ಹೋಗುತ್ತಿದ್ದಾಗ ಅವರಿಗೂ ಇದೇ ಗಗ್ಗರದ ಶಬ್ಧ ಕೇಳುತ್ತಿದ್ದದ್ದು..ಹಂದಿ ಬೊಬ್ಬಿಡುತ್ತಿದದ್ದು ಅದೆಷ್ಟೋ ಬಾರಿ ಕಾಣದ ಶಬ್ದದ ಎದುರು ಹೋರಾಡಿದ್ದು..ಕಾರ್ಗತ್ತಲಲ್ಲಿ ಲೈಟು ಕೈಕೊಟ್ಟದ್ದು ದೊಂದಿ ಆರಿದ್ದು...ಹೀಗೆ ಏನೇನೋ ಕತೆಗಳನ್ನು ಹೇಳುತ್ತಾ ಹೋಗುತ್ತಿದ್ದರು.ಅದೆಲ್ಲವುಗಳಿಗೆ ನಾನು ಮುಗ್ಧವಾಗಿ ಅಂದೇ ಕಿವಿಯಾಗಿದ್ದೆ..ಮತ್ತು ನನ್ನೊಳಗೆ ಅದೆಷ್ಟೋ ಸಂದೇಹಗಳನ್ನು..ಯೋಚನೆಗಳನ್ನು ಅಂದೇ ನನ್ನ ನೆನಪಿನ ಬತ್ತಳಿಕೆಯಲ್ಲಿ ಹುದುಗಿಸಿಕೊಂಡಿದ್ದೆ.ಅಪ್ಪನ ದೈವದ ಕತೆಗಳಿಗೂ ನಮ್ಮ ಮನೆಯಲ್ಲಿದ್ದ ಕಾರ್ಗುಡಿ(ಕಾರಿರುಳ) ಕತ್ತಲೆಗೂ ಅದೇನೋ ಅವಿನಾಭಾವ ಸಂಬಂಧ ಇತ್ತು.ಸಣ್ಣ ಬೆಳಕಿನ ಆ ಚಿಮಣಿಯನ್ನು ಆರಿಸಿ ಅಮ್ಮ ಮಲಗುವ ಮುಂಚೆಯೇ ಅಪ್ಪನ ಕತೆಗಳೊಂದಿಗೆ ನಾನು ಅಮ್ಮನ ಸೆರಗೊಳಗೆ ಹುದುಗಿ ಹೋಗುತ್ತಿದೆ.ಅದಾಗಲೇ ದೈವದ ಬಗೆಗೆ ನಂಬಿಕೆಯ ಬಗೆಗೆ ನನ್ನೊಳಗೆ ಅವ್ಯಕ್ತವಾದ ಭಯ ಭಕ್ತಿ ತುಂಬಿ ಹೋಗಿತ್ತು.ಅಪ್ಪ ಗತಿಸಿಹೋದಾಗ ಕಾಡಿದ್ದು ಕನವರಿಸಿದ್ದು ಅವರ ಆಪ್ತತೆಗಿಂತಲೂ ಅವರ ಅನುಭವಗಳ ಮೂಟೆ...ಇನ್ನಿಲ್ಲವೆಂದು.ಇಂದಿಗೂ ಅಕ್ಕಂದಿರೊಂದಿಗೆ ನಾನು ಅದನ್ನು ಆಗಾಗ ನೆನಪಿಸಿಕೊಳ್ಳುವುದಿದೆ. ಮುಂದೆ ವಿದ್ಯಾಭ್ಯಾಸದ ಮಧ್ಯೆಯೂ ಈ ಸತ್ಯದ ಬಗೆಗೆ ಕುತೂಹಲಗಳು ಕಮ್ಮಿಯಾಗಿರಲಿಲ್ಲ.
 

ಹೀಗೆ ದೈವದ ಬಗೆಗೆ ನನ್ನದೇ ಕಲ್ಪನೆ ಯೋಚನೆಗಳ ಮಧ್ಯೆ ಮತ್ತಷ್ಟು ಪುಷ್ಟಿ ನೀಡಿದ್ದು ನನ್ನವರಿಗೆ ದೈವವೆಂಬ ಸತ್ಯದ ಬಗೆಗೆ ಇದ್ದ ಕೌತುಕಗಳು.ದೈವಾರಾಧನೆಯ ಬಗೆಗೆ ಹರೀಶ್ ಮಂಜೊಟ್ಟಿ(ಪತಿ) ಬರೆದ ಪುಸ್ತಕ ನನಗೆ ತೀರಾ ಸಂಭ್ರಮಕೊಟ್ಟಿತ್ತು.ದೈವಗಳ ಬಗೆಗೆ ಅವರ ಆಪ್ತವಲಯದೊಂದಿಗೆ ಅವರು ನಡೆಸುತ್ತಿದ್ದ ಚರ್ಚೆಗಳು..ವಿಚಾರಗಳು ಮತ್ತೆ ಕಿವಿಗೆ ಅನುರಣಿಸುತ್ತಲೇ ಇರುತ್ತಿದ್ದವು.ಅವರ ಕರ್ತವ್ಯದ ಕಟ್ಟುಪಾಡುಗಳ ಮಧ್ಯೆ ದೈವಾರಾಧನೆಯ ಬಗೆಗೆ ಅವರಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದಿಲ್ಲ ಎನ್ನುವ ನೋವು ಅವರಿಗೂ ನನಗೂ ನಿತ್ಯದ ಸಂಕಟ.ಇನ್ನು ಇವರು ಬಾಳಿ ಬದುಕಿದ ಮನೆ ನನ್ನ ನಿಡ್ಪಳ್ಳಿ ಮನೆಯನ್ನೂ ಮೀರುವಂತದ್ದು..ಅಜ್ಜನ ಗರಡಿ (ಹೆಸರಾಂತ ನಾಟಿವೈದ್ಯ ಇಜಿಮಾನ್ ಶೀನಪ್ಪ ಗೌಡ) ಯಲ್ಲಿ ಅವರೊಂದಿಗೆ ಕಾರ್ಗತ್ತಲ‌ಕಾಡಿನಲ್ಲಿ ಬೇಟೆಗೆ ತೆರಳಿದ ಅವರ ನೆನಪುಗಳು...ಅಜ್ಜ ಹುಲಿಯೊಂದಿಗೆ ಕಾದಾಡಿದ ಕತೆಗಳು...ಅಜ್ಜ ಕಾಡಿನೊಳಗೆ ಬೇಟೆಗೆ ಹೋದಾಗ ದೈವ ಎದುರಾದುದು...ಹೀಗೆ ಮತ್ತೆ ಇದೇ ಕಾಂತಾರದಂತಹ ಕತೆಗಳನ್ನು ಕೇಳಿಕೊಂಡೆ ವೈವಾಹಿಕ ಬದುಕು ಪ್ರಾರಂಭವಾಗಿತ್ತು. ನಾನು ಕಾಲಿಟ್ಟ ಮಂಜೊಟ್ಟಿ ಮನೆಯೂ ದೈವಗಳ ಭಂಡಾರ ಇದ್ದ ಮನೆಯೇ..ದೊಡ್ಡ(ಅಜ್ಜಿ) ನಿಗೆ ದೈವಗಳ ಬಗೆಗೆ ಇದ್ದ ಭಕ್ತಿ‌ಭಯ...ಮಡಿ ಆಚರಣೆಗಳನ್ನೂ ಕೂಡಾ ನೋಡಿಕೊಂಡೆ ಬಂದವಳು..ಸಾದಿಕುಕ್ಕು ಎನ್ನುವ ಕಾರಣಿಕ ಜಾಗದಲ್ಲಿ ತಾಯಿ ಚಾಮುಂಡಿಯ ಕಣ್ಣೆದುರೇ ಮತ್ತೆ ಬದುಕು ಕಟ್ಟಿಕೊಂಡವಳಲ್ಲಿ ನಾನು ಒಬ್ನಳು. ಹಾಗಾಗಿ ನಾನು ಬೆಳೆದ ವಾತಾವರಣದಲ್ಲಿ ದೈವಗಳ ಬಗೆಗೆ ಒಂದು ವಿಶಿಷ್ಠವಾದ ಕಲ್ಪನೆ..ಯೋಚನೆ...ಸಂಶೋಧನೆ ಎಲ್ಲವೂ ನನ್ನೊಂದಿಗೆ ಮಿಳಿತಗೊಂಡಿದೆ.
ಇದೇ ಹೊತ್ತಿಗೆ ನನ್ನ ಅಂತರ್ಯದಲ್ಲಿ ಇದ್ದ ಯೋಚನೆಗಳಿಗೆ ಪೂರಕವಾಗಿ ದೊರೆತದ್ದು ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ..ಚಿತ್ರದುದ್ದಕ್ಕೂ ನನ್ನನ್ನು ಸೇರಿದಂತೆ ಎಲ್ಲಾ ವೀಕ್ಷಕರು ಮಂತ್ರಮುಗ್ಧರಾಗಿ ನೋಡಿದ್ದಂತು ಸೋಜಿಗವೇ ಸರಿ.ಅದೆಷ್ಟು ಸಿನಿಮಾ ಕಾಡಿ ಬಿಟ್ಟಿತು ಎಂದರೆ ಭಕ್ತಿಯ ಪರಮಾವಧಿಯೋ ಅಥವಾ ಚಿತ್ರದ ಯಶಸ್ವಿಯೋ ಏನೋ ಪಾತ್ರಧಾರಿಗೆ ದೈವದ ಆವಾಹನೆಯಾದಾಗ ನಾನು ನನಗರಿವಿಲ್ಲದೇ ಎರಡೂ ಕೈ ಜೋಡಿಸಿ ಸ್ತಬ್ಧಳಾಗಿದ್ದೆ...ಅತ್ಯಂತ ಹೆಮ್ಮೆ ಎನಿಸಿದ್ದು ಚಿತ್ರದುದ್ದಕ್ಕೂ ನನ್ನ ತುಳುನಾಡಿನ ಜನತೆಯ ಮುಗ್ಧ ನಂಬಿಕೆಗೆ ಎಲ್ಲಿಯೂ ಘಾಸಿಯಾಗದಂತೆ ನೋಡಿಕೊಂಡ ಅತ್ಯಂತ ಸೂಕ್ಷ್ಮ ವಿಚಾರಗಳು.ಯಾಕೆಂದರೆ ಯಾವುದೇ ಒಬ್ಬ ವ್ಯಕ್ತಿಯ ಅಂತರಾತ್ಮದ ಭಕ್ತಿಗೆ...ನಂಬಿಕೆಗೆ..ಆಚರಣೆಗೆ ಪೆಟ್ಟು ಬಿದ್ದರೆ ಅದರಿಂದ ಮೇಲೆಳುವುದು ಅಷ್ಟು ಸುಲಭದ ಮಾತಲ್ಲ.. ಬಹುಷ ಇದೇ ಕಾರಣಕ್ಕೇ ಇರಬಹುದು ಶೆಟ್ಟಿ ಸರ್ ಈ ಸೂಕ್ಷ್ಮ ವಾದ ಕಥನಕ್ಕೆ ದೀರ್ಘಕಾಲದ ಸಂಶೋಧನೆಯನ್ನು ನಡೆಸಿರುವುದು..ಎಂದೆನಿಸುತ್ತದೆ.
ಮತ್ತಷ್ಟು ಹೆಮ್ಮೆ ಪಟ್ಟಿರುವುದು ನಾನು ಚಿತ್ರದುದ್ದಕ್ಕೂ ಬಳಸಿಕೊಂಡಿರುವ ಪ್ರಾಪರ್ಟಿಗಳ ಬಗೆಗೆ...ನನ್ನ ಬಾಲ್ಯದಲ್ಲಿ ನೋಡಿದ ಎಲ್ಲಾ ಸನ್ನಿವೇಶಗಳು ಕಣ್ಣೆದುರು ಬಂದಾಂತಾಯಿತು. 
ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಕಲ್ಲುರ್ಟಿ ಅಗೇಲಿಗೆ ಅಪ್ಪ ಗಡಂಗು(ಸಾರಾಯಿ ಅಂಗಡಿ)ನಿಂದ ತರುತಿದ್ದ ತೊಟ್ಟೆ(ಸಾರಾಯಿ)ಯನ್ನು ಸಿನಿಮಾದಲ್ಲಿ ಕಂಡು ಸಣ್ಣಗೆ ನಗು ಬಂದುಹೋಯಿತು.ಅಂದೆಲ್ಲ ದೊಂದಿಯ ಮಧ್ಯೆಯೇ ನಡೆಯುತ್ತಿದ್ದ ದೈವ ಕೋಲಗಳು ಮತ್ತೆ ನೆನಪಾಯಿತು.ಅದೇ ಎದೆ ನಡುಗಿಸುವ ಗರ್ನಲ್(ಪಟಾಕಿ)..ಗದ್ದೆಯ ಮಧ್ಯೆ ಬರುತಿದ್ದ ದೈವಗಳ ಭಂಡಾರ...ಅದೇ ಬ್ಯಾರಿ ಕಾಕನ ಕೈಯಲ್ಲಿ ಗರ್ನಲ್ ನ ತೊಟ್ಟೆ...ಮೊದಲ ದಿನ ಬೋಂಟೆಗೆ(ಬೇಟೆಗೆ) ಹೋದವರ ಕತೆಗಳು..ಉಳಿದ ದಿನ ಎದೆಯುಬ್ಬಿಸಿ ನಡೆಯುವವರು ದೈವದ ಎದುರು ತಲೆತಗ್ಗಿಸಿ ನಿಲ್ಲುವ ಪರಿ...ನೇಮ‌ಇದೆ ಎಂದು ಗೊತ್ತಾದಾಗಲೆಲ್ಲ ವಾರದ ಮೊದಲೇ ತಯಾರಿ ನಡೆಸಿ ಎಲ್ಲರಿಗಿಂತ ಮುಂಚೆ ಹೋಗಿ ಸಗಣಿ ಸಾರಿದ ಅಂಗಳದಲ್ಲಿ ಅಟ್ಟೆ ಕಾಲು ಹಾಕಿ ದೈವ ನೋಡಲು ಕುಳಿತು ದೈವ ಆವಾಹನೆಯಾದಾಗ ನಿದ್ದೆಗೆ ಜಾರಿ ಮರುದಿನ ನಿರಾಸೆಯಾಗಿ ಮನೆಗೆ ಬಂದದ್ದೂ ಇದೆ..ಕೆಲವೊಮ್ಮೆ ಪರೀಕ್ಷೆಗಳು ಇದ್ದರೂ ಕೂಡಾ ಮೊದಲೇ ಓದಿ ರಾತ್ರೆ ಪೂರ ಜಾಗರಣೆ ಮಾಡಿ ಕೊನೆಗೆ  ದೈವದಲ್ಲಿಯೇ ಪರೀಕ್ಷೆ ಪಾಸು ಮಾಡು ದಮ್ಮಯ್ಯ ಎಂದು ನನ್ನೊಳಗೆ ಪ್ರಾರ್ಥಿಸಿ ಮನೆಗೆ ನಡೆದದ್ದೂ ನೆನಪಿಸಿಕೊಂಡು ನಗೆ ಬಂದುಹೋಯಿತು.

ಹಿಂದಿನ ಕಾಲದಲ್ಲಿದ್ದ ಹಳ್ಳಿಯ ಬದುಕು..ಬವಣೆಗಳು ಕಾಂತಾರದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಸಿನಿಮಾ ಯಶಸ್ವಿಯಾಗಲು ಬೇಕಾದ ಎಲ್ಲಾ ಅಂಶಗಳನ್ನು ಒಬ್ಬ ನಿರ್ದೇಶಕನಾಗಿ..ಕಥೆಗಾರನಾಗಿ ನಟನಾಗಿ ರಿಷಬ್ ಶೆಟ್ಟಿ ನೀಡಿದ ಪರಿ ಅದ್ಭುತವೇ ಸರಿ. ಸಿನಿಮಾದ ಯಾವ ಭಾಗದಲ್ಲೂ ಬೋರ್ ಎನಿಸಲೇ ಇಲ್ಲ..ಪಾತ್ರಕ್ಕೆ ಬೇಕಾದಷ್ಟೇ ಪ್ರೀತಿ..ಹಾಡು...ರೋಮಾನ್ಸ್...ಜಗಳ...ಮಾತು ಎಲ್ಲವೂ ಅಚ್ಚುಕಟ್ಟಾಗಿ ಜೋಡಿಸಿರುವುದು ಚಿತ್ರದ ಯಶಸ್ವಿಗೆ ಇನ್ನೊಂದು ಕಾರಣ ಎನ್ನಬಹುದು. ಇತ್ತೀಚೆಗಷ್ಟೆ ಕರಾವಳಿಯ ಹೆಮ್ಮೆಯ ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಶಿವದೂತೆ ಗುಳಿಗೆ ನೋಡಿದಾಗಲೂ ಉಂಟಾದ ಮೈ ರೋಮಾಂಚನ ಕಾಂತರ ನೋಡಿದಾಗಲೂ ನನಗೆ ಅನುಭವಕ್ಕೆ ಬಂದಿತ್ತು.ಕಾಂತರ..ಹಾಗೂ ಶಿವದೂತೆ ಗುಳಿಗೆ ಖಂಡಿತವಾಗಿಯೂ ಕಲಾರಸಿಕರ ಮನದಲ್ಲಿ ಅಚ್ಚೊತ್ತುವ

Category:Stories



ProfileImg

Written by ಭವ್ಯಾ.ಪಿ.ಆರ್ ನಿಡ್ಪಳ್ಳಿ

ನಾನು ಭವ್ಯಾ.ಪಿ.ಆರ್ ನಿಡ್ಪಳ್ಳಿ.ಮೂಲತಃ ದಕ್ಷಿಣ ಕನ್ನಡ ದ ಪುತ್ತೂರಿನವಳು.ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಸಾಂಗತ್ಯ ಎನ್ನುವ ಕವನಸಂಕಲನವನ್ನು ಬಿಡುಗಡೆಗೊಳಿಸಿದ್ದೇನೆ