ಎತ್ತ ಸಾಗುತ್ತಿದೆ ಜೀವನ..?!! 

ಗಗನಕ್ಕೇರಿದೆ  ದರ!!

ProfileImg
25 Jun '24
2 min read


image

ಸುಮಾರು ೨೫ ವರ್ಷಗಳ ಹಿಂದಕ್ಕೆ ಹೋಲಿಸಿದರೆ ಹೆಚ್ಚಿನ ವಸ್ತುಗಳ ದರವೂ ಇಂದು ಹತ್ತುಪಟ್ಟು ಏರಿದೆ..!! 

ಚಿನ್ನ :

       ಅಂದು ಗ್ರಾಮಿಗೆ ಕೇವಲ ₹೪೮೦ ಇತ್ತು. ಆಗ ಚಿನ್ನವನ್ನು ಖರೀದಿಸಿದವರದ್ದು ಒಂದು ಗಜಕೇಸರಿ ಯೋಗ. ಉಂಗುರ, ಮಾಲೆ, ಬೆಂಡೋಲೆಯನ್ನು ತೆಗೆದದ್ದಕ್ಕೆ ಲೆಕ್ಕವುಂಟೇ..? ಈಗ ಅದನ್ನು ಕೊಟ್ಟರೆ ಏನೂ ಸಿಗಲಾರದು. ಅಷ್ಟೇ ಗ್ರಾಮಿನ ಚಿನ್ನಕ್ಕೆ ಹತ್ತುಪಟ್ಟು ಹಣ ಸೇರಿಸಿ ಕೊಡಬೇಕಾಗುತ್ತದೆ. 

       ಯಾವಾಗ ಗ್ರಾಮಿಗೆ ₹೧೦೦೦ ದಾಟಿತ್ತೋ, ಮತ್ತೆ ಹಿಂತಿರುಗಿ ನೋಡಲಿಲ್ಲ. ಮೆಟ್ಟು ಮೆಟ್ಟಲಲ್ಲಿ ಅಂಗಡಿಗಳನ್ನು ತೆರೆದರು. ಈಗ ₹೪೮೦ಕ್ಕೆ ಒಂದು ಪುಟ್ಟ ತುಂಡು ಚಿನ್ನವೂ ಸಿಗುತ್ತಿಲ್ಲ. ಸುಮಾರು ೧೫ ಪಟ್ಟರಷ್ಟು ಏರಿದೆ.  ಜನರಿಗೆ ಅದರ ಹತ್ತಿರ ಸುಳಿಯಲಾಗದು. ಚಿನ್ನದ ಭವಿಷ್ಯವನ್ನು ಎಂಥ ಜ್ಯೋತಿಷ್ಯರಿಗೂ ಹೇಳಲಾಗದು..!! 

      ಅಂದು ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರೂ ಚಿನ್ನವನ್ನು ತೆಗೆಯುವವರೇ... ಆಗ ಅದರ ದರ ಸ್ಥಿರವಾಗಿಯೇ ಇತ್ತು.  ಅನ್ನಪ್ರಾಶನ, ಉಪನಯನ, ಮದುವೆಗಳು ಬಂದಾಗ, ಅಜ್ಜಿಮನೆಯವರು, ಮನೆಯವರು ಅಂಗಡಿಗೆ ದೌಡು. ಬೇಕಾದ ಶೈಲಿಯ ಮಾಲೆಯನ್ನು ಖರೀದಿಸುತ್ತಿದ್ದರು. ಅಷ್ಟೇ ಅಲ್ಲ, ಇದ್ದುದನ್ನು ಕೊಟ್ಟು ಹೊಸತನ್ನೂ ಪಡೆಯುತ್ತಿದ್ದರು. ಆದರೆ ಈಗ...!! ಪರಿಸ್ಥಿತಿ ಬದಲಾಗಿದೆ... 

      ಈಗ ಚಿನ್ನದ ದರ ಗ್ರಾಮಿಗೆ ₹೭೫೦೦ದತ್ತ ತಲುಪಿದೆ. ಆದರೂ ಅತ್ಯವಶ್ಯವಿರುವ ಮದುವೆಯ ಹೆಣ್ಣಿನ ಕಡೆಯವರು ಮಾಲೆ, ನೆಕ್ಲೇಸ್, ಉಂಗುರ.... ಗಂಡಿನ ಕಡೆಯವರು ಕರಿಮಣಿ... ದರವನ್ನು ಯೋಚಿಸಲು ಸಾಧ್ಯವೇ? 

ಕೂಲಿ :

     ೧೯೯೫ರಲ್ಲಿ ಹಳ್ಳಿಯಲ್ಲಿ ಸುಮಾರು ₹೬೦ ಇದ್ದ ದಿನಕೂಲಿಯ ಸಂಬಳ ಇಂದು ₹೬೦೦ ತಲುಪಿದೆ. ಅಂದರೆ ಹತ್ತುಪಟ್ಟು..!! ಇಂದು ಕೂಲಿಯವರು ಸಿಗುವುದೇ ಕಡಿಮೆ. ಅವರಿಂದ ಕೆಲಸ ಮಾಡಿಸುವುದು ಬಲುಕಷ್ಟ. ತಾವಾಗಿಯೇ ದುಡಿಯಲಾಗದು. ಪರಿಸ್ಥಿತಿ ದೇವನೇ ಬಲ್ಲ..!!

ಪೆಟ್ರೋಲ್/ಡೀಸೆಲ್ :

      ೧೯೯೮ರಲ್ಲಿ ಲೀಟರಿಗೆ ಸುಮಾರು ₹೪೨ ಇತ್ತು. ಇಂದು ಪೆಟ್ರೋಲ್ ದರ ₹೮೫  ಮತ್ತು ಡೀಸೆಲ್ ದರ ₹೧೦೦ ದಾಟಿದೆ. ಹಾಗೆಂದು ವಾಹನ ಬಿಟ್ಟು ನಡೆದುಕೊಂಡು ಹೋಗಲು ಸಾಧ್ಯವೇ..? ಸ್ವಂತ ವಾಹನದಲ್ಲಿ ಸಂಚರಿಸುವವರೇ ಜಾಸ್ತಿ. ಇದರ ಬಗ್ಗೆ ಲೆಕ್ಕಾಚಾರ ಹಾಕಿ ಜೀವನ ಮಾಡುವವರು ಕಡಿಮೆ. 

ಅಡಿಗೆ ಅನಿಲ :

      ೧೪.೮ ತೂಕದ ಅನಿಲಕ್ಕೆ ಕೇವಲ ₹೩೫೦ ಇತ್ತು. ಈಗ ₹೧೦೦೦ ದಾಟಿದೆ. ಹೋಲಿಸಿದರೆ ಬಾಕಿರುವುದಕ್ಕಿಂತ ಸ್ವಲ್ಪ ಕಡಿಮೆ ಇದೆ. 

      ಈ ರೀತಿಯ ಹಣದುಬ್ಬರವು ಮಧ್ಯಮ ವರ್ಗದವರ ಕಿಸೆಗೆ ಕತ್ತರಿ ಹಾಕಿದೆ. ಬದುಕು ನಡೆಸುವುದು ಕಷ್ಟವಾಗಿದೆ. ನಿತ್ಯ ಬಳಸುವ ಅಡಿಗೆಯ ಸಾಮಾನುಗಳ ದರವೂ ಏರಿದೆ. ಕೆ.ಜಿ.ಗೆ ₹೧೨ ಇದ್ದ ಕುಚ್ಚಿಲು ಈಗ ₹65 ತಲುಪಿದೆ. ಕೆ.ಜಿ.ಗೆ  ₹೨೨ ಇದ್ದ ಬೆಳ್ತಿಗೆ ಅಕ್ಕಿ ₹೪೮ ತಲುಪಿದೆ. ಇದೇ ರೀತಿಯಲ್ಲಿ ₹೧೫-೨೦ ಇದ್ದ ಸಕ್ಕರೆ, ಬೆಲ್ಲ ಈಗ ₹೫೦ - ೫೫ ತಲುಪಿದೆ. 

ಹಾಲು :

      ಇದೀಗ ಮತ್ತೆ ನಿತ್ಯ ಬಳಕೆಯ ಹಾಲಿನ ದರ ಲೀಟರಿಗೆ ₹೨ ಏರಿದ್ದು ನಮಗೆ ಬರೆ ಎಳೆದಿದೆ. ಇಪ್ಪತ್ತೆದು ವರ್ಷ ಹಿಂದೆ ಲೀಟರಿಗೆ ಕೇವಲ ₹೧೩ ಇತ್ತು. ಈಗ ₹೫೫ ತಲುಪಿದೆ. ಸಾಮಾನ್ಯ ವ್ಯಕ್ತಿಯ ಬದುಕು ಶೋಚನೀಯ ಪರಿಸ್ಥಿತಿಯನ್ನು ತಲುಪಿದೆ. ಹೀಗೆ ಒಂದೆರಡಲ್ಲ, ಪ್ರತಿಯೊಂದು ವಸ್ತುವಿನ ದರವೂ ಯಾರೂ ನಿರೀಕ್ಷಿಸಲಾಗದ ಪರಿಸ್ಥಿತಿ ತಲುಪಿದೆ. 

ಜಾಗ :

     ಅಂದು ಸೆಂಟ್ಸಿಗೆ ₹೧೦,೦೦೦ ಇದ್ದ ಜಾಗದ ದರ ಈಗ ₹೧ ಲಕ್ಷ ತಲಪಿದೆ. ಆಗ ಕೊಂಡವರು ಚಿಕ್ಕದಾಗಿ ಮನೆ ಕಟ್ಟಿ ಚೊಕ್ಕವಾದ ಜೀವನ ನಡೆಸುತ್ತಿದ್ದಾರೆ. ಇದು ವರ್ಷ ಹೋದಂತೆ ಏರುವುದಲ್ಲದೆ ಇಳಿತ ಕಾಣಲಾರದು. 

ವಿದ್ಯಾಭ್ಯಾಸ :

ಕಲಿಯಲು ಡಾಕ್ಟರ್ ಸೀಟಿಗೆ ಕೇಳಿದರೆ ನಿಮಗೆ  ಆಶ್ಚರ್ಯವಾಗಬಹುದು. ಬೆಚ್ಚಿ ಬೀಳಬಹುದು.   ಎರಡೋ, ಮೂರೋ ಲಕ್ಷ ಇದ್ದುದು ಈಗ ₹೧೦ಲಕ್ಷ...!!  ಬಡವನಿಗೆ ಬದುಕಲು ಸಾಧ್ಯವೇ..?  ಈಗ ಸೌಕರ್ಯಗಳು ಬೇಕಾದಷ್ಟಿವೆ. ಇದನ್ನೇ ಕಲಿಯಬೇಕೆಂದಿಲ್ಲ. ಎಲ್ಲದಕ್ಕೂ ಅದರದ್ದೇ ಆದ ಸ್ಕೋಪುಗಳಿವೆ. ಏನೆನ್ನುವಿರಿ...? 

✍ ಮುರಳಿಕೃಷ್ಣ ಕಜೆಹಿತ್ತಿಲು

 

Category:WorldProfileImg

Written by Murali Krishna

DTP Worker, Vittal, Mangalore