ಪೌರಾಣಿಕ ಮಹಾಕಾವ್ಯದಲ್ಲಿ ಒಲವೆಂಬ ಜೀವನಾಡಿ!

ವಾಲ್ಮೀಕಿ ರಾಮಾಯಣದ ಪಾತ್ರಗಳು..

ProfileImg
13 May '24
4 min read


image

ಪ್ರೀತಿ

ಪತಿ-ಪತ್ನಿಯ ನಡುವೆ ಮಾತ್ರ ಕಾಣಬಹುದಾದ ಭಾವನೆ ಅಲ್ಲವಿದು. “ನಮ್ಮವರು” ಎಂದೆನಿಸಿಕೊಳ್ಳುವ ಎಲ್ಲರ ನಡುವೆಯೂ ಪರಸ್ಪರವಾಗಿ ವ್ಯಕ್ತವಾಗುವ ನಿಷ್ಕಾರಣವಾದ ಒಲವದು!

ನಮ್ಮ ಪುರಾಣಗಳಲ್ಲಿ ಬರುವ ವಾಲ್ಮೀಕಿ ರಾಮಾಯಣ! ಅದೆಷ್ಟು ಪಾತ್ರಗಳು, ಅದೆಷ್ಟು ಭಾವನೆಗಳು! ಅವುಗಳಲ್ಲಿ ‘ಒಲವೇ’ ತುಸು ಹೆಚ್ಚೆನ್ನಬಹುದೇನೋ. ಅದರಲ್ಲಿಯೂ ಮುಖ್ಯವಾಗಿ, ತನ್ನವರೆಲ್ಲರ ಮೇಲೆ ರಾಮನಿಗಿದ್ದ ಪ್ರೀತಿ ಅಭೂತಪೂರ್ವವಾದುದು!

 ಹೀಗೆ ರಾಮಾಯಣದಲ್ಲಿ ಬರುವ ಕೆಲವು ಸನ್ನಿವೇಶಗಳು, ನಮಗೆಲ್ಲ ಗೊತ್ತಿರುವ ಕಥೆಗಳನ್ನೇ ಮಗದೊಮ್ಮೆ ಪ್ರೀತಿಯ ರೀತಿಯಿಂದ ಮೆಲುಕು ಹಾಕೋಣವೇ!?  

ಪತಿ~ಪತ್ನಿಯರ ಪ್ರೀತಿ:

೧. ಸೀತಾ~ರಾಮ

ಇವರಿಬ್ಬರಿರದಿರೆ ರಾಮಾಯಣವೆಲ್ಲಿ!? ಇವರಿಬ್ಬರ ನಡುವಿನ ಪ್ರೀತಿಗೆ ಎಣೆಯೆಲ್ಲಿ!?

ರಾಮನಂಥಾ ರಾಮನೇ ತನ್ನ ಏಕೈಕ ಪತ್ನಿಯನ್ನು ಕರೆತರುವ ಸಲುವಾಗಿ ಕಟ್ಟಿದ "ರಾಮಸೇತು" ಎಂಬ ಸುದೀರ್ಘ ಸೇತುವೆ, ಪತ್ನಿಗಾಗಿ ವಾನರಸೇನೆಯನ್ನು ಕಟ್ಟಿಕೊಂಡು ಯುದ್ಧ ಮಾಡಿದುದು ಪ್ರೇಮದ ಮಹಾನ್ ಸಂಕೇತವಲ್ಲದೇ ಮತ್ತೇನು...

ಪ್ರೇಮವೆಂದರೆ ಬರಿಯ ಕಾಮವಲ್ಲ, ಅದೊಂದು ನಿಷ್ಕಲ್ಮಶ ಬಂಧ, ಒಟ್ಟಿಗಿದ್ದರೂ ಇರದಿದ್ದರೂ ಎಂದೆಂದಿಗೂ ಆ ಬಂಧವು ಯಾವಾಗಲೂ ಗಟ್ಟಿಯಾಗಿರುವುದು ಎಂದು ತೋರಿಸಿಕೊಟ್ಟಿರುವುದು ರಾಮಾಯಣದ ಆದರ್ಶ ದಂಪತಿ ಸೀತಾರಾಮರ ಬದುಕು ಜನರಿಗೆ ತೋರಿದ ದಾರಿದೀಪ.

ಪೋಷಕರು~ಮಕ್ಕಳ ಪ್ರೀತಿ:

೧. ದಶರಥ ~ ರಾಮ:

ದಶರಥನಿಗೆ ರಾಮನೆಂದರೆ ಬಿಟ್ಟಿರಲಾರದಷ್ಟು ಪ್ರೇಮ! ವಿಶ್ವಾಮಿತ್ರರು ತಮ್ಮ ಕಾರ್ಯಯೋಜನೆಗಾಗಿ ರಾಮನನ್ನು ಕರೆದುಕೊಂಡು ಹೋಗಬಯಸಿದಾಗ ಮೊದಮೊದಲು ಒಪ್ಪದೇ, ಕೊನೆಗೆ ಬಹಳಷ್ಟು ವ್ಯಥೆಪಟ್ಟೇ ಕಳಿಸಿಕೊಟ್ಟನಂತೆ! ಕೈಕೇಯಿಯು ವರ ಬೇಡಿ ವನವಾಸಕ್ಕೆ ಕಳುಹಿಸುವಂತೆ ಕೇಳಿಕೊಂಡಾಗಲಂತೂ ಪ್ರಿಯಮಡದಿಯಾಗಿದ್ದ ಕೈಕೇಯಿಯನ್ನು ಪರಿಪರಿಯಾಗಿ ದೂಷಿಸಿ ಶಪಿಸಿದನಂತೆ. ಕೊನೆಗೂ ಮಹಾರಾಜ ಪುತ್ರಶೋಕದಿಂದಲೇ ಮಡಿದನಲ್ಲವೇ...

ರಾಮನಿಗೂ ತಂದೆಯೆಂದರೆ ಅಗಾಧವಾದ ಪ್ರೇಮ. ತಂದೆ ಕೈಕೇಯಿಯ ಮಾತು ಕೇಳಿ ಮನಸ್ಸಿಲ್ಲದ ಮನಸ್ಸಿನಿಂದ ತನ್ನನ್ನು ಕಾಡಿಗೆ ಕಳುಹಿಸುತ್ತಿರುವಾಗ ಕೈಕೇಯಿಯನ್ನು ಹಳಿದ ತಂದೆಯನ್ನೂ ಸಂತೈಸಿಯೇ ಖುಷಿಯಿಂದಲೇ ಕಾಡಿಗೆ ತೆರಳಿದನು.

೨. ಕೈಕೇಯಿ ~ ರಾಮ:

ಕೈಕೇಯಿಗೆ ಮಂಥರೆಯು ಬುದ್ಧಿ ಕೆಡಿಸುವವರೆಗೂ ರಾಮನ ಮೇಲಿದ್ದುದು ಬಲು ಪ್ರೀತಿಯೇ, ಭರತನಿಗಿಂತಲೂ ತುಸು ಹೆಚ್ಚೇ ಎನ್ನುವಷ್ಟು! ಆಕೆಯೇ ರಾಮನನ್ನು ಪ್ರೀತಿಯಿಂದ 'ರಾಮಚಂದ್ರ' ಎಂದು ಕರೆಯುತ್ತಿದ್ದುದು. ರಾಮನೂ ಆಕೆಯನ್ನು ತಾಯಿಯಂತೆಯೇ ಕಂಡವನು. ಆಕೆ ರಾಜ್ಯವನ್ನು ಬಿಟ್ಟು ಕಾಡಿಗೆ ಹೋಗುವಂತೆ ಹೇಳಿದಾಗಲೂ ಆಕೆಯ ಮೇಲೆ ಇನಿತೂ ಬೇಸರಿಸದೇ ಹೊರಟನು. ಲಕ್ಷ್ಮಣ, ಭರತರು ಕೈಕೇಯಿಯ ಕುರಿತು ಕೋಪಗೊಂಡಾಗ ತಮ್ಮಂದಿರ ಮೇಲೆಯೇ ಸಿಟ್ಟು ತೋರಿ ಕೈಕೇಯಿಯ ಕುರಿತು ಕೆಟ್ಟ ಮಾತನಾಡದಂತೆ ತಡೆದವನು ಪರಮಪುರುಷ ಪ್ರಭು ಶ್ರೀರಾಮ.

ಇದಲ್ಲದೇ ಹೆತ್ತತಾಯಿ ಕೌಸಲ್ಯೆ, ಲಕ್ಷ್ಮಣ~ಶತ್ರುಘ್ನರ ತಾಯಿ ಸುಮಿತ್ರೆ, ಮತ್ತಿತರ ಮಾತೆಯರೆಲ್ಲರನ್ನೂ ತನ್ನ ಸ್ವಂತ ತಾಯಿಯಂತೇ ಕಂಡು ಪ್ರೀತಿ ತೋರುತ್ತಿದ್ದವನು ರಾಮಪ್ರಭು!

೩. ಜನಕ ~ ಸೀತೆ:

ಭೂಮಿಯನ್ನುಳುತ್ತಿದ್ದಾಗ ನೇಗಿಲಿನ ತುದಿಗೆ ಸಿಕ್ಕಿ ಸೀರಜಾತೆಯೆಂಬ ಹೆಸರನ್ನು ಪಡೆದ ಮಗಳು ಸೀತೆ ತನ್ನ ಒಡಲಕುಡಿಯಲ್ಲದಿದ್ದರೂ ಜನಕ ಮಹಾರಾಜನಿಗೆ ತನ್ನ ಪುತ್ರಿ ಸೀತೆಯ ಮೇಲೆ ಅಗಾಧ ಪ್ರೇಮ. ಅದಕ್ಕೇ ಅಲ್ಲವೇ, ಅವಳು ಉತ್ತಮ ಕುಲವನ್ನು ಸೇರಬೇಕು, ಆಕೆಯ ಪತಿ ಆಕೆಯನ್ನು ತನ್ನಂತೆಯೇ ಜೋಪಾನವಾಗಿ ರಕ್ಷಿಸಲು ಸಮರ್ಥನಾಗಿರಬೇಕೆಂಬ ಉದ್ದೇಶದಿಂದ ಶಿವಧನುಸ್ಸನ್ನು ಮುರಿದವನಿಗೇ ತನ್ನ ಕುವರಿಯನ್ನು ವಿವಾಹ ಮಾಡುವ ಸ್ವಯಂವರವನ್ನು ಏರ್ಪಡಿಸಿದುದು!! ಸೀತೆಯೂ ಅಷ್ಟೇ, ಜನಕನನ್ನು ತನ್ನ ಸ್ವಂತ ತಂದೆಯಂತೆಯೇ ಕಂಡವಳು. ಜಾನಕಿಯಾಗಿಯೇ ಹೆಸರುವಾಸಿಯಾದವಳು.

ಅಣ್ಣ ತಮ್ಮಂದಿರ ಪ್ರೀತಿ:

ರಾಮ ಲಕ್ಷ್ಮಣ ಭರತ ಶತ್ರುಘ್ನರು ನಾಲ್ವರೂ ಅಣ್ಣ ತಮ್ಮಂದಿರೂ ಬಲು ಅನ್ಯೋನ್ಯವಾಗಿದ್ದವರು. ಆದರೆ ಅವರ ಮಧ್ಯೆಯೂ ಹಲವು ಸಂದರ್ಭಗಳಲ್ಲಿ ವಿಶೇಷ ಪ್ರೀತಿ ವ್ಯಕ್ತವಾಗುತ್ತದೆ..

೧. ರಾಮ ~ ಲಕ್ಷ್ಮಣ:

ರಾಮನಿದ್ದಲ್ಲಿ ಲಕ್ಷ್ಮಣನಿರಲೇ ಬೇಕು. ಶತ್ರುಘ್ನನ ಅವಳಿ ಸಹೋದರನಾದರೂ ಲಕ್ಷ್ಮಣನು ಇರುತ್ತಿದ್ದುದು ಅಣ್ಣ ಶ್ರೀರಾಮನ ಜೊತೆಗೇ. ಲಕ್ಷ್ಮಣನು ಎಂದಿಗೂ ರಾಮನನ್ನು ಬಿಟ್ಟುಕೊಡಲಿಲ್ಲ, ದಾಸನಂತೆ ರಾಮನ ಕಾವಲಾದನು. ರಾಮನಿಗೂ ಅಷ್ಟೇ ಸೀತೆ~ಲಕ್ಷ್ಮಣರು ಎರಡು ಕಣ್ಣುಗಳಿದ್ದಂತೆ. ತಮ್ಮ ಲಕ್ಷ್ಮಣನೆಂದರೆ ಜೀವಕ್ಕಿಂತಲೂ ಮಿಗಿಲು!

೨. ಭರತ ~ ಶತ್ರುಘ್ನ:

ರಾಮ ಲಕ್ಷ್ಮಣರು ಹೇಗೋ, ಇಲ್ಲಿ ಭರತ ಶತ್ರುಘ್ನರೂ ಹಾಗೇ, ಹೆಚ್ಚಾಗಿ ಒಟ್ಟಿಗೇ ಇರುತ್ತಿದ್ದವರು! ರಾಮನು ವನವಾಸಕ್ಕೆ ತೆರಳುವ ಸಂದರ್ಭ ಭರತನ ಅಜ್ಜನಮನೆಗೆ ಶತ್ರುಘ್ನನೂ ತನ್ನ ಅಜ್ಜನಮನೆಯೆಂದೇ ತಿಳಿದು ಆತನ ಜೊತೆಗೇ ಪಯಣ ಬೆಳೆಸಿದ್ದನು!

೩. ರಾಮ ~ ಭರತ:

ಅಣ್ಣನಿಗಾಗಿ ಹೆತ್ತ ಅಮ್ಮನನ್ನೇ ದೂರ ಮಾಡಿದ ಸಹೋದರ ಭರತ! ತಾಯಿಯು ತನ್ನ ಸಲುವಾದ ಲಾಲಸೆಯಿಂದಲೇ ಅಣ್ಣನಿಗೆ ಮಾಡಿದ ದ್ರೋಹವನ್ನು ಕ್ಷಮಿಸಲಾರದೆ ತನ್ನಣ್ಣನ ಪಾದುಕೆಗಳಲ್ಲಿ ತಲೆಯಲ್ಲಿ ಹೊತ್ತು ತಂದು ರಾಜ್ಯಾಡಳಿತ ನೋಡಿಕೊಂಡು ಭ್ರಾತೃವಾತ್ಸಲ್ಯದ ಅಪ್ರತಿಮ ಬಾಂಧವ್ಯ ಈಗಿನ ಕಾಲದಲ್ಲಿ ಕಲಹಕ್ಕೆ ಬೀಳುವ ಸಹೋದರರಿಗೆ ಪಾಠವಲ್ಲವೇ!?

ರಾಮನಿಗೆ ಭರತನ ಮೇಲೆ ಇದ್ದುದೂ ಅದೇ ಪ್ರೀತಿ, ನಂಬಿಕೆ. ಆತನನ್ನು ದೂರದಿಂದಲೇ ಕಂಡು ದೂಷಿಸಿದ ಲಕ್ಷ್ಮಣನನ್ನು ನಿಂದಿಸಿ ಭರತನ ಪರವಾದ ಮಾತುಗಳನ್ನಾಡಿ ಭರತನನ್ನು ಪ್ರೀತಿಯಿಂದ ನಡೆಸಿಕೊಂಡ. ಕೊನೆಗೆ ಲಂಕೆಯಿಂದ ಹಿಂದಿರುಗುವಾಗಲೂ ಭರತನಿಗೆ ರಾಜ್ಯದ ಮೇಲೆ ಆಸೆಯುಂಟಾಗಿದ್ದರೆ ತಮ್ಮನಿಗಾಗಿ ರಾಜ್ಯವನ್ನೇ ಬಿಟ್ಟುಕೊಡಲು ಸಿದ್ಧವಾಗಿದ್ದನು ಪ್ರಭು ರಾಮ.

೪. ಜಟಾಯು ~ ಸಂಪಾತಿ:

ರಾಮಸೇವೆಯಲ್ಲಿ ಈ ಎರಡು ಅಣ್ಣ ತಮ್ಮಂದಿರ ಕೊಡುಗೆ ಮಹತ್ತರವಾದುದು. ಅವರಿಗೆ ತಮ್ಮತಮ್ಮಲ್ಲಿ ಇದ್ದ ಬಾಂಧವ್ಯವೂ ಅದೇ ತೆರನಾದುದು. ತಮ್ಮನ ರಕ್ಷಣೆಗಾಗಿ ಅಣ್ಣ ಸಂಪಾತಿಯು ತನ್ನ ರೆಕ್ಕೆಗಳನ್ನೇ ಕಳೆದುಕೊಳ್ಳಲೂ ಹಿಂಜರಿಯಲಿಲ್ಲ.

ರಾಜ-ಪ್ರಜೆಗಳ ನಡುವಿನ ಪ್ರೀತಿ:

ಯಥಾ ರಾಜ, ತಥಾ ಪ್ರಜಾ! ರಾಮನಿಗೆ ಪ್ರಜೆಗಳೆಂದರೆ ಸಹಜವಾಗಿ ಬಹಳ ಪ್ರೀತಿ. ಅವನು ತೋರುತ್ತಿದ್ದ ವಿಶ್ವಾಸ, ಆತನ ಮಂದಹಾಸ, ಪ್ರೀತಿಯ ನುಡಿಗಳು, ಪ್ರಜೆಗಳಲ್ಲಿ ಎಷ್ಟು ಪ್ರಿಯವಾಗಿದ್ದವೆಂದರೆ ಕಾಡಿಗೆ ರಾಮನು ಹೊರಟಾಗ ಆತನ ಜೊತೆಗೇ ಅರ್ಧಕ್ಕರ್ಧ ನಾಡೇ ಕಾಡಿಗೆ ಹೊರಟುಬಿಟ್ಟಿತ್ತಂತೆ.

ಸ್ವಾಮಿ~ದಾಸ ಪ್ರೀತಿ:

ಸ್ವಾಮಿಯ ಮೇಲಿನ ಅಪಾರವಾದ ನಿಷ್ಕಲ್ಮಶ ಪ್ರೀತಿಯೇ ಭಕ್ತಿ. ರಾಮನ ಮೇಲೆ ಈ ಭಾವವೇ ಇದ್ದುದು ಹನುಮಂತ ಮತ್ತು ಇತರ ವಾನರಶ್ರೇಷ್ಠರಿಗೆ! ಶಬರಿಗೆ! ಜಟಾಯುವಿಗೆ! ಅಹಲ್ಯೆಗೆ! ಜಾಂಬವಂತನಿಗೆ!

ರಾಮ - ಹನುಮ:

"ದಾಸೋಹಂ ಕೋಸಲೇಂದ್ರಸ್ಯ" ~ ಹನುಮನ ಈ ಭಾವವೊಂದೇ ಆತನನ್ನು ಚಿರಂಜೀವಿಯಾಗಿಸಿದುದು. ಏಕೆ? ರಾಮನು ಪ್ರೀತಿಯಿಂದ ಆಲಿಂಗಿಸಿದ ಈ ದೇಹ ಶಾಶ್ವತವಾಗಿರ ಉಳಿಯಬೇಕೆಂಬ ಬಯಕೆ ಅವನದಾಗಿತ್ತಂತೆ! ರಾಮನಿಗೆ ಹನುಮನೆಂದರೆ ಅಪಾರ ಪ್ರೇಮ. ಅವನಿಗೆ ರಾಮನು ಕೊಟ್ಟುಕೊಂಡಿದ್ದು ತನ್ನನ್ನೇ! ಇದಕ್ಕಿಂದ ಮಿಗಿಲಾದುದು ಸ್ವಾಮಿಭಕ್ತನಿಗೆ ಇನ್ನೇನು ಬೇಕು!?

ರಾಮನಿಗೆ ಶರಣಾಗತರಾದವರಲ್ಲಿದ್ದ ಒಲವು:

ಶರಣಾಗತವತ್ಸಲ ಎಂಬ ಬಿರುದು ರಾಮನಿಗೆ ದೊರೆತಿದ್ದು ಮತ್ತೇಕೆ!?

"ತವಾಸ್ಮಿ ರಾಮ ಪ್ರಭೋ, ತ್ವಮೇವ ಶರಣಂ ಮಮ" ಎಂಬ ಒಂದೇ ಮಾತಿನಿಂದ ಶರಣಾಗತರಾದವರನ್ನು ರಾಮ ತನ್ನ ಪ್ರಾಣ ಕೊಟ್ಟಾದರೂ ರಕ್ಷಿಸಲು ತಯಾರಿಗಿದ್ದನು. ಈ ಮಾತನ್ನು ಆತನು ಹೇಳುವುದು ವಿಭೀಷಣನು ಶರಣಾಗಿ ಬಂದ ಸಂದರ್ಭದಲ್ಲಿ. ಹನುಮ, ಸುಗ್ರೀವ ಮೊದಲಾದ ನಾಯಕರಿಗೆ ಶತ್ರುಪಡೆಯಿಂದ ಬಂದ ರಾವಣನ ಸಹೋದರನೇ ಆದ ವಿಭೀಷಣನನ್ನು ತಮ್ಮೊಡನೆ ಸೇರಿಸಿಕೊಳ್ಳಲು ಸಹಜವಾದ ಅನುಮಾನ, ಹಿಂಜರಿಕೆಗಳು. ಆಗ ರಾಮ ಅವರಿಗೆ ಉತ್ತರಿಸಿ ವಿಭೀಷಣನನ್ನು ಗೌರವದಿಂದ ತನ್ನ ಪಾಳಯದೊಳಗೆ ಸೇರಿಸಿಕೊಳ್ಳುತ್ತಾನೆ.

ಗೆಳೆತನದ ಆತ್ಮೀಯತೆ:

ಪ್ರೀತಿಯ ಬಹುಮುಖ್ಯ ಅಂಗಗಳಲ್ಲೊಂದು ಸ್ನೇಹ. ರಾಮನ ಸ್ನೇಹವೆಂದರೆ ಕಲ್ಲಿಗಿಂತಲೂ ಗಟ್ಟಿ. ಸುಗ್ರೀವ, ವಿಭೀಷಣರಿಗೆ ಸ್ನೇಹದಿಂದ ಅವನು ಕೊಟ್ಟ ವಚನವನ್ನು ತನ್ನ ಕಾರ್ಯವಾಗುದಕ್ಕೆಮೊದಲೇ ಪಾಲಿಸಿದವನು. ಅವರಿಗೆ ಪ್ರೀತಿಯ ಧಾರೆಯನ್ನೇ ಎರೆದನು ರಾಮ.

ಹೀಗೆ ಇನ್ನಷ್ಟು, ಮತ್ತಷ್ಟು, ಹೇಳಿದಷ್ಟು ಕಡಿಮೆಯೆನಿಸುವಂತೆ, ವಿವಿಧ ಆಯಾಮಗಳಲ್ಲಿ ಒಲವಿನ ಪ್ರಿಯಲತೆಯು ಅಲ್ಲಲ್ಲಿ ತುಂಬಿಹೋಗಿರುವ ಅದ್ಭುತ ಮಹಾಕಾವ್ಯ ರಾಮಾಯಣ. ಇದು ನಮ್ಮ ಇತಿಹಾಸ, ಪುರಾಣ, ನಮಗೆಲ್ಲ ದಾರಿದೀಪವಾಗಿರುವ ಅನನ್ಯಗ್ರಂಥ. ಏನೆನ್ನುತ್ತೀರಿ!?

Category:Spirituality



ProfileImg

Written by Ankitha N