ಅಪ್ಪಾ ಅಂದ್ರೆ ಆಕಾಶ

ಸಂಬಂಧ

ProfileImg
23 Apr '24
2 min read


image

ಪ್ರೀತಿಯ ಅಪ್ಪಾ.....

  ಯಾಕೋ ನಿನ್ನ ತೀರ್ಥರೂಪ ಹೇಳಿದ್ರೆ ಅತಿ ಉತ್ತಮ ಸ್ಥಾನ ಕೊಟ್ಟು ಗೌರವ ನೀಡಿ ಮನದ ಪದಗಳು ಹೇಳಲು ನನಗೆ ಸಾಧ್ಯವಾಗದೇ ಇರಬಹುದು... ಅದಕ್ಕಾಗಿ ಪ್ರೀತಿಯ ಪದವೇ....ಸರಿ...ಏನಂತೀ ?

   ಖಾಲಿತನದ ಜೀವನದಲ್ಲಿ ಯಾರನ್ನು ನಂಬದೇ ನನ್ನಷ್ಟಕ್ಕೆ ನಾನು ಹೊರಟರೇ ಅಡ್ಡ ಹಾಕಿ ಮಾತನಾಡಿಸಿ "ನೀನು ಸರಿಯಿಲ್ಲ"ಎಂಬ ಲೇಬಲ್ ಹಾಕಿ ಹೋದಾಗ.....ನೀ ಇರಬೇಕಿತ್ತು ಅಪ್ಪ....ಇಲ್ಲ ನನ್ನ ಮಗಳು ಹಾಗಿಲ್ಲ ಹೇಳಬೇಕಿತ್ತು.

    ಬದುಕಿಗೆ ಏನೋ ಮಾಡಿಟ್ಟುಕೊಂಡು ಸಮಾಜದ ಒಳಗೆ ಏನೋ ಒಳ್ಳೆಯದು ಮಾಡುವಾಗ "ನೈತಿಕತೆಯ ಆಚೆ ಹೋಗಿ ನಾಚಿಕೆಗೆಟ್ಟ ಬದುಕು ನಡೆಸುತ್ತಿದ್ದಾಳೆ" ಎಂದಾಗ ನೀ ಇರಬೇಕಿತ್ತು ಅಪ್ಪ.... ಯಾರದೇ ಬೆಂಬಲವಿಲ್ಲದೆ ಅವಳ ಕಣ್ಣೀರನ್ನು ಆಚೆಗೆ ಹೊರಗಿಟ್ಟು ಬೇರೆಯವರ ಕಣ್ಣೀರಿಗೆ ಆಸರೆಯಾಗಿದ್ದಾಳೆ ಹೇಳಬೇಕಿತ್ತು.....

     ಸಾಗರದಂತಹ ರಸ್ತೆಯುದ್ದಕ್ಕೂ ಒಬ್ಬಳೆ ಹೋರಾಡುತ್ತಿದ್ದಾಗ "ನಾನಿದ್ದೇನೆ ಎಂದು ಬಂದವರು ಅನೈತಿಕತೆಯ ಪಟ್ಟ ಕಟ್ಟಿ ಪೀಠ ಸ್ಥಾನದಲ್ಲಿ ಕುಳ್ಳಿರಿಸಿ ಬಲಿ ಕೊಡಲು ಹೊರಟಾಗ ನನ್ನ ರಕ್ಷಣೆಗೆ ನಾನು ತೆಗೆದುಕೊಂಡಂತಹ ನಿಲುವುಗಳಿಗೆ ಗೌರವ ಕೊಡುವ ಬದಲು ಅವಮಾನ ಮಾಡಿದಾಗ ನೀ ಇರಬೇಕಿತ್ತು ಅಪ್ಪ...."ಇಲ್ಲ ನನ್ನ ಮಗಳು ಅಂತವಳಲ್ಲ, ಅವಳಿಗೂ ಒಂದು ಜೀವ ಇದೆ, ಮಾರುವ ವಸ್ತುವಲ್ಲವೆಂದು ಹೇಳಬೇಕಾಗಿತ್ತು"

        ಜಿಂದಗಿ ಬಡೀ ಹೀ ನಹಿಂ, ಟೂಟ್ ಗಯಾ ಹೈ ಸಾಹೇಬ್ ಕ್ಯಾ ಕರೂಂ ಜೀನಾ ಹೀ ಹೈ....ಯಾವ ಲೆಕ್ಕದಲ್ಲಿಯೂ ಯಾರ ಮನೆಗೂ ತೊಂದರೆಯಾಗದಂತೆ ಮನಸಿನ ಮಾತುಗಳನ್ನು ಪೆಟ್ಟಿಗೆಯೊಳಗಿಟ್ಟು ಕೀಲಿ ಹಾಕಿದ ಸಂದರ್ಭದಲ್ಲಿ "ಮನೆ ಬಿಡಿಸುವ ಮನ ಕೆಡಿಸುವವಳು" ಆರೋಪ ಕೇಳಿ ಬಂದಾಗ ನೀ ಇರಬೇಕಿತ್ತು ಅಪ್ಪ, ನಿಮ್ಮ ನಿಮ್ಮ ಕೆಲಸ ಮುಗಿಸಿ ಎದ್ದು ಹೋಗುವಾಗ, ಉಪಕಾರ ಸ್ಮರಣೆ ಬೇಡ ಕನಿಷ್ಠ ಸುಮ್ಮನೆ ಹೋಗಬಹುದಲ್ಲವೇ ಎಂದು ಕೇಳಬೇಕಿತ್ತು"

       ಸಾವು ಎಂಬುದು ಅಂಗೈಯಲ್ಲಿ ಹಿಡಿದು ತಿರುಗುವ ನನಗೆ ಪ್ರತಿ ಕ್ಷಣವೂ ಅಮೂಲ್ಯ, ಅಂತಹುದರಲ್ಲಿ ಏನೋ ಒಳ್ಳೆಯದು ಮಾಡಬೇಕೆಂದು ಹೋಗುವ ಹಪಾಹಪಿಯಲ್ಲಿ ಹೇಳಿದ ಒಂದೆರಡು ಮಾತುಗಳಿಗೆ "ಸೂಳೆಯಂತಹ ಬಾಳಿಗೆ ಪತಿವ್ರತೆಯ ಮುಖವಾಡ" ಎಂದಾಗ ನೀ ಇರಬೇಕು ಅಪ್ಪ..."ಹೋಗೋಲೋ ನನ್ನ ಮಗಳ ಬಗ್ಗೆ ನನಗೆ ಗೊತ್ತು ನೀನು ಯಾವ ತಿರಬೋಕಿ, ಶೋಕಿ ಮಾಡಿಕೊಂಡು ಇನ್ನೊಬ್ಬರ ಮನೆಯ ಹೆಣ್ಣುಮಕ್ಕಳ ಮಾತು ಕೇಳಿಕೊಂಡು ನನ್ನ ಮಗಳಿಗೆ ಏನಾದರೂ ಹೇಳಿದರೇ ನಿನ್ನ ನಾಲಿಗೆಗೆ ಬರೆ ಹಾಕುತ್ತೇನೆ" ಹೆದರಿಸಬೇಕಾಗಿತ್ತು"

ಆದರೇನು ಮಾಡಲಿ..........
ಮನೆಯವರು ಕಡಗಣನೆಗೆ....ನೀನಿಲ್ಲ...

ಕೊಂಕು ನುಡಿಗಳ ನೋವಿಗೆ..ನೀನಿಲ್ಲ...

ಮೂರೆಳೆಯ ಸಂಸಾರದ ರಗಳೆಗೆ...ನೀನಿಲ್ಲ....

ರೋಗವಲ್ಲದ ರೋಗಕ್ಕೆ ಸಮಾಧಾನ ಹೇಳಲು....ನೀನಿಲ್ಲ...


ನೀ ಇರದ ಈ ಪ್ರಪಂಚ......ನನಗೆ ಅವತ್ತು ಬೇಡವಾಗಿತ್ತು.....ಇವತ್ತು ಬೇಡ...ನಾಳೆಗೂ ಬೇಡ..


                    ನಿನ್ನ ನತದೃಷ್ಟ ಮಗಳು 
                      ಶಾರದ ಭಟ್
 

Category:Relationships



ProfileImg

Written by SHARADA BHATT