ʼಇಂದಿನ ಕಾಲಕ್ಕೆ ಕುವೆಂಪು ಅವರ ವಿಚಾರಗಳ ಪ್ರಸ್ತುತತೆʼ

ProfileImg
07 Jan '24
4 min read


image

ʼಜಗತ್ತನ್ನು ಆಳುವುದು ವಿಚಾರಗಳೇ ಹೊರತು; ವ್ಯಕ್ತಿಗಳಲ್ಲʼ ಎಂಬ ಮಾತಿನಂತೆ ವ್ಯಕ್ತಿಗಳು ಭೌತಿಕವಾಗಿ ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಬುದ್ಧ, ಏಸು, ಪೈಗಂಬರ್‌, ಬಸವಣ್ಣ, ವಿವೇಕಾನಂದ, ಅಂಬೇಡ್ಕರ್‌ ಇಂತಹ ಹಲವಾರು ಮಹನೀಯರ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ವಿಚಾರವಂತರ ಜೊತೆ ವಿಶ್ವಮಾನವ ಸಂದೇಶ ಸಾರಿದ ಮನವತಾವಾದಿ ರಾಷ್ಟ್ರಕವಿ ಕುವೆಂಪುರವರ ವಿಚಾರಧಾರೆಗಳು ಇಂದಿಗೂ ಜನರ ಜೀವಸೆಲೆಯಾಗಿವೆ.

ಇಂದಿನ ಕಾಲದ ಸ್ಥಿತಿ:

ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರಗತಿಯಾಗುತ್ತಿದ್ದರೂ ಮೌಢ್ಯ ಅಂಧಶ್ರದ್ಧೆ ಅಳಿದಿಲ್ಲ! ಭಕ್ತಿ ಕೆಲವರಿಗೆ ಬಂಡವಾಳವಾಗಿದೆ. ಪ್ರಜೆಗಳಿಂದ ಪ್ರಭುಗಳಾದವರು ಸರ್ವಾಧಿಕಾರಿಗಳಾಗುತ್ತಿದ್ದಾರೆ. ವರ್ಗ ತರತಮ ಭಾವಗಳು ಬೆಳೆಯುತ್ತಲೇ ಇವೆ. ದೇಶದ ಸಂಪತ್ತು ಕೆಲವೇ ಶ್ರೀಮಂತರ ಪಾಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಭಾವಗಳು ಬಳಲುತ್ತಿವೆ. ಮತಮೌಢ್ಯ, ಸ್ವಾರ್ಥ, ಅಧಿಕಾರ ಲಾಲಸೆ, ವಿಚಾರ ಶೂನ್ಯತೆ ಹಲವರನ್ನು ಆಕ್ರಮಿಸಿವೆ. ಭೌತಿಕವಾಗಿ ಬೆಳೆಯುತ್ತಿದ್ದರೂ ಆತಂರಿಕವಾಗಿ ಸೊರಗುತ್ತಿದ್ದೇವೆ. ಕಲೆ, ಸಾಹಿತ್ಯ, ಸಾಂಸ್ಕೃತಿ ಹಿರಿಮೆಗರಿಮೆಗಳಿಗಿಂತ ಹಣ ಸಂಪಾದನೆ ಮುಖ್ಯವಾಗಿದೆ. ಆಧುನಿಕರೆನಿಸಿಕೊಳ್ಳುವ ಭರಾಟೆಯಲ್ಲಿ ಜೀವನ ಮೌಲ್ಯಗಳು ಪತನವಾಗುತ್ತಿವೆ ಎನ್ನುವ ಭಾವ ಬಲಿಯತೊಡಗಿದೆ…

ಪ್ರಸ್ತುತ ಅಗತ್ಯಗಳು:

ಮೂಲಭೂತ ಅಗತ್ಯಗಳ ಜೊತೆ ವೈಚಾರಿಕ ಪ್ರಜ್ಞೆ ಇಂದಿನ ತುರ್ತು ಅಗತ್ಯ. ನಾವೂ ಬದುಕಿ ಮತ್ತೊಬ್ಬರನ್ನು ಬದಕಲು ಅವಕಾಶ ಮಾಡಿಕೊಡಬೇಕಿದೆ. ಮೂಢನಂಬಿಕೆಗಳನ್ನು ಬಿಟ್ಟು ಬದುಕಿನ ಬಗೆಗಿನ ನಂಬಿಕೆಯನ್ನು ಬೆಳಸಿಕೊಳ್ಳಬೇಕಿದೆ. ಸಾಮರಸ್ಯ ಭಾವ ಬೆಳೆಯಬೇಕಿದೆ. ಸರ್ವರೂ ಸುಖವಾಗಿರಬೇಕೆಂಬ ಆಶಯ ಭಾವದೊಂದಿಗೆ ವಿಶ್ವಮಾನವರಾಗಬೇಕಿದೆ. ಸತ್ಯ, ಶಾಂತಿ ,ಅಹಿಂಸೆ ನಿತ್ಯನೂತನವಾಗಬೇಕಿದೆ. ಏನಾದರಾಗು ಮೊದಲು ಮಾನವನಾಗು ಎನ್ನುವ ಕವಿವಾಣಿ ಸಕಾರಗೊಳ್ಳಬೇಕಿದೆ. ವಿದ್ಯೆ ವಿವೇಕವನ್ನು ತಂದುಕೊಡುವುದರ ಜೊತೆಗೆ ವಿನಯವಂತರನ್ನಾಗಿ ಮಾಡಬೇಕಿದೆ. ಪರಸರ ಪ್ರಜ್ಞೆ ಮೂಡಬೇಕಿದೆ. ಇಂತಹ ಪ್ರಸ್ತುತ ಅಗತ್ಯಗಳ ಅನಿವಾರ್ಯತೆ ಇದೆ.

ಕುವೆಂಪುರವರ ವಿಚಾರಗಳು:

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರಗಳು ಬದುಕಿನ ದೃಷ್ಟಿಕೋನವಾಗಬೇಕು ಈ ಮೂಲಕ ವಿಶ್ವಮಾನವರಾಗಬೇಕೆಂಬುದು ಕುವೆಂಪುರವರ ವಿಚಾರಧಾರೆಗಳಲ್ಲಿ ಪ್ರಮುಖವಾದು. ಇಲ್ಲಿ ಯಾರೂ ಮುಖ್ಯರೂ ಅಲ್ಲ; ಅಮುಖ್ಯರೂ ಅಲ್ಲ. ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ ಬೆಳೆಯುತ್ತಾ ನಾವು ಅವನನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅವನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ವೈಚಾರಿಕ ಪ್ರಗತಿ ವೈಜ್ಞಾನಿಕ ಮನೋಧರ್ಮಗಳ ಮೂಲಕ ಬಡತನವನ್ನು ಬುಡಮಟ್ಟ ಕೀಳಬೇಕು. ಮತಮೌಢ್ಯ, ವರ್ಣನೀತಿ, ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಇಂತಹ ಸಾಮಾಜಿಕ ಅನಿಷ್ಟಗಳು ತೊಲಗಬೇಕು ಎಂಬುವುದು ಅವರ ಸ್ಪಷ್ಟ ನಿಲುವು.

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ,

ಬಡತನವ ಬುಡಮಟ್ಟ ಕೀಳಬನ್ನಿ,

ಮೌಢ್ಯತೆಯ ಮಾರಿಯನು ಹೊರದೂಡಲ್ಯೆ ತನ್ನಿ,

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ,

ಓ ಬನ್ನಿ, ಸೋದರರೆ, ಬೇಗ ಬನ್ನಿ! ಎಂದು ಕರೆಕೊಡುತ್ತಾರೆ

ನನ್ನ ಗೋಪಾಲ ನಾಟಕದಲ್ಲಿ ತಾಯಿಯ ನಿರ್ಮಲ ಭಕ್ತಿಯನ್ನು ಗೌರವಿಸುತ್ತಲೇ ಆಧುನಿಕರೆನಿಸಿಕೊಂಡವರ ಡಾಂಭಿಕ ಭಕ್ತಿಯನ್ನು ದಿಕ್ಕರಿಸುತ್ತಾರೆ.

ʼಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕುʼ

ಜೀವದಾತೆಯನಿಂದು ಕೂಗಬೇಕು

ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು

ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.

ಎಂಬುದು ಕುವೆಂಪುರವರ ಅಭಿಮತ. ಅರಸುತನ ರಾಜಕಾರಣ ಪ್ರಜಾ ಸೇವೆಗೇ ಹೊರತು; ಪ್ರಜಾ ಪೀಡನೆಗಲ್ಲ. ನಮ್ಮ ಭಾಷೆಯ ಬಗೆಗೆ ಅಭಿಮಾನವಿರಬೇಕು: ದುರಭಿಮಾನವಲ್ಲ. ಬಂಗಾರಕ್ಕಿಂತ ಬಂಗಾರದಂತ ಬಾಳ್ವೆ ಮುಖ್ಯ. ಪ್ರಕೃತಿ ಬಗೆಗೆ ಸಹಜ ಕುತೂಹಲ ಒಳಿಸಿಕೊಳ್ಳಬೇಕು. ಸತ್‌ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರೊಂದಿಗೆ ಯೋಗ್ಯವಲ್ಲದ್ದನ್ನು ದಿಕ್ಕರಿಸಬೇಕು. ಸಂಪ್ರದಾಯದ ಹೆಸರಲ್ಲಿ ನಡೆಯುವ ದಬ್ಬಾಳಿಕೆಯನ್ನು ದಿಕ್ಕರಿಸುತ್ತಾರೆ. ʼನೂರು ದೇವರುಗಳ ನೂಕಾಚೆ ದೂರʼ ಎಂಬ ಕುವೆಂಪುರವರ ಸಾಲುಗಳು ಧ್ವನಿಸುವುದು ಈ ವಿಚಾರಗಳನ್ನೆ.

ಕುವೆಂಪು ಆಡಂಬರದ ಮದುವೆಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ ತಮ್ಮದೇ ಕಲ್ಪನೆಯ ʼಮಂತ್ರ ಮಾಂಗಲ್ಯʼದ ರೀತಿ ಮದುವೆಗಳಿಗೆ ಮುಂದಾಗುತ್ತಾರೆ. ಇಂದಿಗೂ ಈ ರೀತಿಯ ಮದುವೆಗಳ ಪ್ರಸ್ತುತತೆ ಹೆಚ್ಚಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ವಿಚಾರಗಳಂತೆ ಬದುಕಿದರು ರಸಋಷಿ ಕುವೆಂಪು. ಇಂತಹ ಹಲವಾರು ಜನಪರವಾದ ಜೀವಪರವಾದ ಸರ್ವ ಕಾಲಕ್ಕೂ ಬೇಕಾದ ಹಲವಾರು ವಿಚಾರಧಾರೆಗಳನ್ನು ಕುವೆಂಪು ತಮ್ಮ ಸಾಹಿತ್ಯ ಕೃತಿಗಳ ಮೂಲಕ , ತಮ್ಮ ಭಾಷಣಗಳ ಮೂಲಕ , ತಮ್ಮ ಬದುಕಿನ ಮೂಲಕ ನಮಗೆ ಕಟ್ಟಿಕೊಟ್ಟ ಅಪರೂಪದ ದಾರ್ಶನಿಕ ಕವಿ ಕುವೆಂಪು ನಮ್ಮ ಹೆಮ್ಮೆ.

ಕುವೆಂಪು ವಿಚಾರಗಳ ಪ್ರಸ್ತುತತೆ:

ಉತ್ತಮ ವಿಚಾರಗಳು ಕಾಲ ದೇಶಗಳನ್ನು ಮೀರಿರುತ್ತವೆ. ಉತ್ತಮ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸಿ ಅಳವಡಿಸಿಕೊಳ್ಳುವುದರಿಂದ ನಮ್ಮ ಬದುಕಿನಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಅಳವಡಿಸಿಕೊಳ್ಳದಿದ್ದರೆ ವಿಚಾರಗಳನ್ನು ವ್ಯಕ್ತಪಡಿಸಿದ ವ್ಯಕ್ತಿಗೇನು ನಷ್ಟವಿಲ್ಲ. ಟೀಕೆಗಳು ಸಾಯಬಹುದೇ ಹೊರತು ವಿಚಾರಗಳಲ್ಲ. ಸತ್ಯ ನಿತ್ಯ ನಿರಂತರ. ಸತ್ಯವೆಂಬುದು ಸರ್ವಕಾಲಿಕ ಮೌಲ್ಯ. ಇಂತಹ ಜೀವನ ಮೌಲ್ಯಗಳನ್ನು ಬಿತ್ತಿ ಬೆಳೆದವರು ಕನ್ನಡದ ಹೆಮ್ಮೆಯ ಜ್ಞಾನಚಿಂತಾಮಣಿ ಕುವೆಂಪು.

ವ್ಯಕ್ತಿಗಳ ಮತ್ತು ಸಮಾಜಗಳ ನಡುವೆ ಏಳುತ್ತಿರುವ ಗೋಡೆಗಳನ್ನು ಕೆಡವಿ ಸೇತುವೆಗಳನ್ನು ನಿರ್ಮಿಸಲು ಕುವೆಂಪುರವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮನುಜಮತ, ವಿಶ್ವಪಥ, ಸವ್ರೋದಯ , ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರಗಳು ಇಂದು ಮುಂದು ನಮ್ಮ ದೃಷ್ಟಿಗೆ ದಾರಿದೀಪವಾಗಿವೆ. ಆ ಮತ ಈ ಮತ ಆ ಪಥ ಈ ಪಥದ ಬದಲು ಮನುಜಮತ ವಿಶ್ವಪಥವಾಗಬೇಕಿದೆ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತ ಮತದ ಅಂಶಿಕ ದೃಷ್ಟಿಯಲ್ಲ; ಎಲ್ಲವನ್ನೂ ಭಗವಾನ್‌ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ. ಇಂತಹ ವಿಚಾರಗಳು ಅತ್ಯಂತ ಪ್ರಸ್ತುತವಾಗಿವೆ.

ವಿಶ್ವಮಾನವರಾಗಲು ಸಪ್ತ ಸೂತ್ರಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಮನುಷ್ಯಜಾತಿ ಒಂದೇ, ವರ್ಣಾಶ್ರಮವನ್ನು ತೊಲಗಿಸುವುದು, ಜಾತಿಯತೆಯ ವಿನಾಶ, ವೈಜ್ಞಾನಿಕ ತತ್ವಗಳಿಗೆ ಮಾನ್ಯತೆ, ಮನುಜಮತ ವಿಶ್ವಪಥವಾಗುವುದು, ತನ್ನದೇ ಮತದ ಸ್ವಾತಂತ್ರ ಮತ್ತು ಯಾವ ಒಂದು ಗ್ರಂಥವೂ ಏಕೈಕ ಪರಮ ಪೂಜ್ಯ ಧರ್ಮ ಗ್ರಂಥಬಾರದು ಸಾಧ್ಯವಾದುವುಗಳನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು. ಈ ವಿಚಾರಗಳನ್ನು ಇಂದಿನ ಸಮಾಜ ಓದಿ ಅರ್ಥಮಾಡಿಕೊಂಡು ಅನುಸರಿಸಿ ವಿಶ್ವಮಾನವ ವಿಶಾಲ ದೃಷ್ಟಿಕೋನ ಹೊಂದಲು ಕುವೆಂಪುರವರ ವಿಚಾರಗಳು ಅಗತ್ಯವಾಗಿವೆ.

ಯಾರೂ ಅರಿಯದ ನೇಗಿಲಯೋಗಿಯೆ

ಲೋಕಕೆ ಅನ್ನವನೀಯುವನು…

ಹೆಸರನು ಬಯಸದೆ ಅತಿ ಸುಖಕೆಳಸದೆ

ದುಡಿವನು ಗೌರವಕಾಶಿಸದೆ

ನೇಗಿಲ ಕೂಳದೊಳಗಡಗಿದೆ ಕರ್ಮ

ನೇಗಿಲ ಮೇಲೆ ನಿಂತಿದೆ ಧರ್ಮ

ನೇಗಿಲ ಯೋಗಿ ಈ ಪದ್ಯದ ಸಾಲುಗಳು ಸಾರುವ ವಿಚಾರಗಳು ಕೃಷಿಕ ಮತ್ತು ಕೃಷಿಯ ಮೇಲ್ಮೆ ಇಂದಿನ ಸಮಾಜ ಅದರಲ್ಲೂ ಯುವ ಜನತೆಗೆ ಹೂಸ ದೃಷ್ಟಿಕೊನವನ್ನು ನೀಡಬಲ್ಲವು.

ನಾಡು ನುಡಿಯ ಬಗೆಗಿನ ಹೆಮ್ಮೆ, ರಾಷ್ಟ್ರೀಯತೆಯ ಜೊತೆಗೆ ಹದವಾಗಿ ಬೆರೆತ ಪ್ರಾದೇಶಿಕತೆಯನ್ನು ನಮ್ಮ ನಾಡ ಗೀತೆಯ ʼಜಯ್‌ ಭಾರತ ಜನನಿಯ ತನುಜಾತೆ ಜಯ ಹೇ ಕರ್ಣಾಟಕ ಮಾತೆʼ ಎನ್ನು ಸಾಲುಗಳು ಸಾರಿ ಹೇಳುತ್ತವೆ. ʼಸರ್ವ ಜನಾಂಗದ ಶಾಂತಿಯ ತೋಟʼ ಎನ್ನುವಲ್ಲಿ ಕುವೆಂಪುರವರ ಒಳನೋಟ ಇಂದು ಅನುಸರಿಸುವ ಅನಿವಾರ್ಯತೆಯನ್ನು ಯಾರೂ ಅಲ್ಲಗಳಿಯಲಾರರು.

ಉದಯ ರಾಗ ಪದ್ಯದಲ್ಲಿ ಬೆಳಗಿನ ಸೂರ್ಯೋದಯವನ್ನು ವರ್ಣಿಸುತ್ತಲೇ ಕಟ್ಟಿಕೊಡುವ ಜೀವನ ಮೌಲ್ಯಗಳು ಅರ್ಥಪೂರ್ಣ.

ಏರುವನು ರವಿ ಏರುವನು

ಬಾನೊಳು ಸಣ್ಣಗೆ ತೋರುವನು

ʼಏರಿದವನು ಚಿಕ್ಕವನಿರಬೇಕಲೆʼ

ಎಂಬಾ ಮಾತನು ಸಾರುವನು.

ಬೆಂಗಳೂರು ಘಟಿಕೋತ್ಸವ ಭಾಷಣದಲ್ಲಿ “ ಘಟಿಕೋತ್ಸವದಲ್ಲಿ ಸ್ನಾತಕರು ನೀತಿ ಸೂತ್ರಗಳನ್ನು ಘೋಷಿಸಿ ಪ್ರತಿಜ್ಞೆ ಮಾಡುವುದುಂಟಷ್ಟೆ. ಅವರೇ ಮುಂದೆ ಭ್ರಷ್ಟಾಚಾರಿಗಳಾಗುತ್ತಾರೆಂದು ಗರ್ಜಿಸುತ್ತಾರೆ. “ ಸತ್ಯಂ ವದ ಧರ್ಮಂ ಚರ ಮೊದಲಾದ ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಛರಿಸಿ ಪ್ರತಿಜ್ಞೆ ಮಾಡಿದ್ದ ನಿಮ್ಮಂತಹ ಲಕ್ಷಾಂತರ ಸ್ನಾತಕರೆ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ ರಂಗದಲ್ಲಿ ಅಧಿಕಾರ ರಂಗದಲ್ಲಿ, ಶಿಕ್ಷಣ ರಂಗದಲ್ಲಿ ನಿರ್ಲಜ್ಜೆಯಿಂದ ಪಾಪಮಯ ಭ್ರಷ್ಟಾಚಾರಗಳಲ್ಲಿ ತೊಡಗಿ ದೇಶವನ್ನು ದುರ್ಗತಿಗೆಒಯ್ಯುತ್ತಿರುವುದನ್ನು ನೆನೆದರೆ ಬದುಕು ಬೆಬ್ಬಳಿಸಿ ಹದುಗುವಂತಾಗುತ್ತದೆ… “ ಎನ್ನುವ ಕುವೆಂಪುರವರ ಅಂದಿನ ಭಾಷಣದ ವಿಚಾರಗಳು ಇಂದಿಗೂ ಪ್ರಸುತವೆವಿಸದೇ ಇರಲಾರವು!

ಜನತೆಯಲ್ಲಿ ವೈಚಾರಿಕ ಜಾಗ್ರತಿಯನ್ನು ಪ್ರಚೋದಿಸದಿದ್ದರೆ, ವೈಜ್ಞಾನಿಕ ಮನೋಧರ್ಮವನ್ನು ಮೂಡಿಸದಿದ್ದರೆ ಅವರು ಎಂದಿನಂತೆ ಪ್ರಾಣಿಗಳಂತ ಬದುಕು ನಡೆಸುತ್ತಾರೆ. ಅಂಥವರಿರುವ ತನಕದೇಶಕ್ಕೆ ಸುಖವಿಲ್ಲ. ವಿಚಾರ ವೇದಿಕೆಗಳ ಮೂಲಕ ಅವರನ್ನು ವಿಚಾರ ಪಥದಲ್ಲಿ ಕೊಂಡೊಯ್ಯಬೇಕೆಂದು ವಿದ್ಯಾವಂತ ಯುವಕರನ್ನು ಕುವೆಂಪು ಒತ್ತಾಯಿಸುತ್ತಾರೆ. ಇಂತಹ ವಿಚಾರಗಳನ್ನು ಯಾವ ಕಾಲಕ್ಕೂ ಅಲ್ಲಗಳಿಯಲಾಗದು.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿವುದೇನು?

ಎಂಬ ಪ್ರಶ್ನೆಗಳನ್ನು ನಮ್ಮ ಮುಂದಿಟ್ಟು ಚಿಂತನೆಗೆ ಹಚ್ಚುತ್ತಾರೆ. “ ಎಲ್ಲ ಮತದ ಹೊಟ್ಟ ತೂರು… ಅನಿಕೇತನವಾಗು ಎಂಬ ಕರೆಕೊಡುತ್ತಾರೆ. ದೇವರು ರುಜು ಮಾಡಿದನು ಎಂಬ ಪದ್ಯದಲ್ಲಿ ಪ್ರಕೃತಿ ಬಗೆಗಿನ ಕುತೂಹಲಗಳಿಗೆ ಕಾವ್ಯದ ಮೂಲಕ ಕಲ್ಪನೆಯ ಬಣ್ಣ ತುಂಬುತ್ತಾರೆ. ಮಾನವ ಪ್ರಕೃತಿಯ ಕೂಸು ಎಂಬುದನ್ನು ತಮ್ಮ ಕಾವ್ಯಗಳಲ್ಲಿ ಮತ್ತೆ ಮತ್ತೆನೆನಪಿಸುತ್ತಾರೆ. ಸಹಜ ಸತ್ಯಗಳನ್ನು ನಮ್ಮೆದುರು ತೆರೆದು ಸತ್ಯದ ದಾರಿಗೆ ಪ್ರೇರೇಪಿಸುತ್ತಾರೆ.

ʼರಾಮಾಯಣ ದರ್ಶನಂʼ, ಮಲೆಗಳಲ್ಲಿ ಮದುಮಗಳು ಮುಂತಾದ ಕೃತಿಗಳಲ್ಲಿ ಯಾರೂ ಮುಖ್ಯರೂ ಅಲ್ಲ: ಯಾರೂ ಅಮುಖ್ಯರೂ ಎಂಬ ವಿಚಾರ ಸಮ್ಮಿಳಿತಗೊಂಡಿವೆ. ಅವರ ಬೆರಳ್‌ಗೆ ಕೊರಳ್‌ , ಶೂದ್ರತಪಸ್ವಿ, ಜಲಗಾರ ನಾಟಕಗಳಲ್ಲಿ, ಕಾದಂಬರಿಗಳಲ್ಲಿ,ಕತೆ ಕವನಗಳಲ್ಲಿ ಜೀವಪರ ಕಾಳಜಿ, ಜೀವನ ಮೌಲ್ಯಗಳು ಹಾಸುಹೊಕ್ಕಾಗಿವೆ. ಇವರ ವಿಚಾರಗಳನ್ನು ಇವು ದರ್ಶನಮಾಡಿಸುತ್ತವೆ. ಆದ್ದರಿಂದ ಕುವೆಂಪುರವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ.

ಕುವೆಂಪು ನಮ್ಮೆಲ್ಲರ ಹೆಮ್ಮೆಯ ಜಗದ ಕವಿ ಯುಗದ ಕವಿ

ರಹಿಮಾನ್ ನದಾಫ್

ವಿದ್ಯಾರ್ಥಿ ಇಲಕಲ್ 

Category:Literature



ProfileImg

Written by Rahiman Nadaf