ಮಕ್ಕಳ ವಿದ್ಯಾಭ್ಯಾಸದ ಖರ್ಚು ಬದುಕಿಗೆ ಹೊರೆಯಾಗದಿರಲಿ !

ಪ್ರಾಥಮಿಕ ಹಂತದಲ್ಲೇ ಲಕ್ಷ ಲಕ್ಷ ಖರ್ಚು ಮಾಡಿ ಕಂಗಾಲಾಗುವ ಪೋಷಕರಿಗೆ ಕಿವಿಮಾತುimage

ನಾವಂತೂ ಓದಲಿಲ್ಲ, ನಮ್ಮ ಮಕ್ಕಳಾದರೂ ಓದಲಿ ಎಂದು ಭಾವಿಸಿ ಪೋಷಕರು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಕಾನ್ವೆಂಟ್‌‌ಗಳಿಗೆ, ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇವತ್ತಿನ ದಿನಮಾನಗಳಲ್ಲಿ ದೊಡ್ಡ ಸಂಸ್ಥೆಗಳು ನಡೆಸುವ ಶಾಲೆಗಳ ಪ್ರವೇಶ ಶುಲ್ಕಗಳನ್ನು ಕೇಳಿದರೆ ತಲೆ‌ ತಿರುಗುವಂತಿರುತ್ತವೆ. ಅದು ಅವರವರ ಸಂಸ್ಥೆಗಳ ಶ್ರೇಯೋಭಿವೃದ್ಧಿಗಾಗಿ ಅವರು ಶ್ರಮಿಸುತ್ತಾರೆ ಅನ್ನಬಹುದು. ಹಾಗಂತ ಸಣ್ಣ ಪುಟ್ಟ ಕೂಲಿ‌ ನಾಲಿ‌ ಮಾಡಿ ಬದುಕುವ ಮಂದಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂತಹ ದೈತ್ಯ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ನರಳುವುದು ಎಷ್ಟು ಸರಿ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.
 

ಆರ್ಥಿಕ‌ ಸ್ಥಿತಿಗೆ ತಕ್ಕ‌ ಶಾಲೆ ಆಯ್ಕೆ

ಪೋಷಕರು ತಮ್ಮ ಮಕ್ಕಳನ್ನು ಓದಿಸಲು ತಮ್ಮ‌ ಆರ್ಥಿಕ ಸ್ಥಿತಿ ಹೇಗಿದೆ ಎಂಬುದರ ಮೇಲೆ ಶಾಲೆ‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಕನಿಷ್ಠ ಹಿರಿಯ ಪ್ರಾಥಮಿಕ ಹಂತದಲ್ಲಿ ತಮ್ಮ‌ ಆರ್ಥಿಕ‌ ಶಕ್ತಿಯ ಅನುಸಾರ ಸೂಕ್ತ ಶಾಲೆಯನ್ನು ಆಯ್ಕೆ ಮಾಡಿಕೊಂಡರೆ ಶಾಲಾ ಮಂಡಳಿಯವರಿಗೂ ಒಳ್ಳೆಯದು, ಪೋಷಕರಿಗೂ ಒತ್ತಡವಿಲ್ಲ, ಓದುವ ಮಕ್ಕಳಿಗೂ ಯಾವುದೇ ತೊಡಕುಂಟಾಗುವುದಿಲ್ಲ. ಆನಂತರದ ವಿದ್ಯಾಭ್ಯಾಸಕ್ಕೆ ಪ್ರತಿಷ್ಠಿತ ಶಾಲಾ ಕಾಲೇಜುಗಳಿಗೆ ಸೇರಿಸಿದರೆ ಒಳಿತು.

ಆರ್ಥಿಕ‌ ಶಕ್ತಿಗೆ ಮೀರಿದ ಶಾಲೆ ಆಯ್ಕೆಯ ದುಷ್ಪರಿಣಾಮ

ಕೆಲ ಪೋಷಕರು ಯಾವುದೋ ಪ್ರತಿಷ್ಠೆಗೆ ಬಿದ್ದು ಅಥವಾ ಇನ್ಯಾವುದೋ ಒತ್ತಡದ ಕಾರಣಕ್ಕೆ‌ ತಮ್ಮ ಮಕ್ಕಳನ್ನು ಸಾಲ ಸೋಲ ಮಾಡಿ ಸಾವಿರಾರು ಹಣ ವ್ಯಯಿಸಿ ದೊಡ್ಡ‌ ಶಾಲೆಗೆ ಸೇರಿಸುತ್ತಾರೆ. ಸೇರಿಸುವುದು ತಪ್ಪೇನಿಲ್ಲ. ತಮ್ಮ‌ ಮಗು ದೊಡ್ಡ ಶಾಲೆಯಲ್ಲಿ ಓದಲಿ ಅಂದುಕೊಳ್ಳುವುದರಲ್ಲೂ ತಪ್ಪಿಲ್ಲ. ಆದರೆ ಆನಂತರ ಅದಕ್ಕೆ ತಗಲುವ ಹಣ ಮತ್ತು ಸಂಪನ್ಮೂಲ‌ ಒದಗಿಸದೆ ನರಳುವುದು ಬೇಡ ಎನ್ನುವುದಷ್ಟೇ ಕಾಳಜಿ. ಇದರಿಂದ ಸಂಸ್ಥೆಗೂ ಸಮಸ್ಯೆ, ಪೋಷಕರಿಗೂ ಸಮಸ್ಯೆ.‌ ಸೂಕ್ತ ಸಮಯಕ್ಕೆ ಫೀಜ್ ಕಟ್ಟದಿದ್ದಾಗ ಮಕ್ಕಳ ಮನಸ್ಸಿನ‌ ಮೇಲೂ‌ ಕೆಟ್ಟ ಪರಿಣಾಮ‌ ಬೀರುವ ಸಾಧ್ಯತೆಗಳಿರುತ್ತವೆ.

ಕೆಲ ಪೋಷಕರಂತೂ ಸಾಲ ಮಾಡಿ ಮಕ್ಕಳನ್ನು ಎಲ್‌ಕೆಜಿ, ಯುಕೆ‌ಜಿ ತರಗತಿಗಳಿಗೆ ಸೇರಿಸಿ‌ ನಂತರ‌ ವರ್ಷವಿಡೀ ಆ ಸಾಲ ತೀರಿಸುವುದರಲ್ಲೇ ಇರುತ್ತಾರೆ. ಅಷ್ಟರಲ್ಲೇ‌ ಮುಂದಿನ ವರ್ಷ‌ ಬಂದು ಬಿಟ್ಟಿರುತ್ತದೆ.‌ ಹಳೇ ಸಾಲ ತೀರಿಸುವ ಮುನ್ನ‌ ಮತ್ತೊಂದು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರತಿ ವರ್ಷ ಇದೇ ಪುನರಾವರ್ತನೆಯಾಗಿ ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸ ಕೊಡಿಸುವಷ್ಟರಲ್ಲೇ ಸೋತು ಬಿಡುವ ನಿದರ್ಶನಗಳನ್ನು ನಾವು ಕಾಣಬಹುದು.

ಹೀಗಾಗಿ 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎನ್ನುವಂತೆ ತಮ್ಮ‌ ಆರ್ಥಿಕ‌ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದರಂತೆ ಮಕ್ಕಳ ಪ್ರಾಥಮಿಕ‌ ಹಂತದ ವಿದ್ಯಾಭ್ಯಾಸ ಮುಗಿಸುವುದು ಉತ್ತಮ ಹೆಜ್ಜೆಯಾಗಿದೆ. ಈಗಿನ‌‌ ಪ್ರತಿ ಮನೆಯ ಮಕ್ಕಳು ಸಹ ಪ್ರಾಥಮಿಕ ಹಂತದಲ್ಲಿ ಉತ್ತಮ‌ ಕಲಿಕೆ ಪ್ರದರ್ಶನ ಮಾಡುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಬಡವರೆನಿಸಿಕೊಂಡವರು ತಮ್ಮ‌ ಕೈಗೆಟಕುವ ಶುಲ್ಕ ಪಡೆಯುವ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವುದು ಎಲ್ಲ ರೀತಿಯಿಂದಲೂ ಒಳ್ಳೆಯದು ಎಂಬುದು‌ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವೂ ಹೌದು.

ದೊಡ್ಡ ಸಂಸ್ಥೆಗಳಲ್ಲಿ ಅಧಿಕ ಶುಲ್ಕ ಅನಿವಾರ್ಯ !

ಅನೇಕ ರೀತಿಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಲು ಹಾಗೂ ವಿವಿಧ ಪಠ್ಯಕ್ರಮಗಳನ್ನು ಒದಗಿಸುವ ದೃಷ್ಟಿಯಿಂದ ದೊಡ್ಡ ಸಂಸ್ಥೆಗಳು ಹೆಚ್ಚು ಶ್ರಮಿಸುತ್ತವೆ. ಇದಕ್ಕಾಗಿ ಆರ್ಥಿಕ ಹೊರೆಯು ಸಂಸ್ಥೆಗಳಿಗೆ‌ ಸವಾಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳಿಗೆ ತಕ್ಕ ಶುಲ್ಕ ಪಡೆಯುವುದು ಸಹಜವಾಗಿಯೇ ಅನಿವಾರ್ಯವಾಗುತ್ತದೆ. ಆದರೆ ಈ ಗೋಜಿನಲ್ಲಿ ಬಡ ಪೋಷಕರು ಸಿಲುಕುವುದು ಸಮಂಜಸವಲ್ಲ‌ ಎಂಬುದು ದೂರದೃಷ್ಟಿಯ ಮಾತಾಗಿದೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಬುದ್ಧಿವಂತಿಕೆಯ ಹೆಜ್ಜೆಗಳನ್ನು ಇಡುವುದರತ್ತ ಪೋಷಕರು ಯೋಚಿಸಬೇಕಿದೆ.

Category:EducationProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ