ಕೊನೆಯ ಪುಟದ ಸಾಲು

ಕೊನೆಯ ಪುಟ

ProfileImg
16 May '24
5 min read


image

ಮೊದಲ ಪುಟಕೂ, ಕೊನೆಯ ಪುಟಕೂ, ನಡುವೆ ಎನಿತು ಅಂತರ,...  ಹಾಡು ನೆನಪಾಗುತ್ತಾ ಇದೆ. ಕೊನೆಯ ಪುಟದಲ್ಲಿರುವ ಕಥೆ, ಪುಸ್ತಕದ ಉಳಿದೆಲ್ಲಾ ಹಾಳೆಗಳ ಸಂತಸವನ್ನು ಕೊಂದು ತಿಂದು ಬಿಟ್ಟಂತೆ ಆಗಿದೆ. ನನ್ನದೀಗ ಕೊನೆ ಉಸಿರು, ಕೊನೆಯ ದಿನಗಳು. ನನ್ನದೇನು ಇಷ್ಟು ಬೇಗ ಕೊನೆಯಾಗ ಬೇಕಾಗಿದ್ದ ಜೀವನವಲ್ಲ. ನನಗಿನ್ನೂ ಮೂವತ್ತ ಐದು ವರ್ಷ. ಹತ್ತು ವರ್ಷದ ಪುಟ್ಟ ಮಗಳು. ಆದರೂ ನನ್ನ ಪಯಣ ಮುಗಿದು ಹೋಗುತ್ತಿದೆ.

ನಾನು ಸಾದಾಸೀದ ಸರಳ ಜೀವನ ನಡೆಸಿದ, ಸಾಧಾರಣ ಕುಟುಂಬದ, ನತದೃಷ್ಟ ಹೆಣ್ಣುಮಗಳು. ಆದರೂ ಆಗಾಗ ಬರುವ ಸಣ್ಣಪುಟ್ಟ ಸಂತೋಷಗಳು, ಅಮ್ಮನ ಕಾಳಜಿ ಪ್ರೀತಿಗಳು, ತಂಗಿಯ ಜೊತೆ ಕಳೆದ ಬಾಂಧವ್ಯದ ದಿನಗಳು, ಶಾಲೆಯ ಗೆಳತಿಯರೊಡನೆ ಒಂದಷ್ಟು ವರ್ಷಗಳ ಗೆಳೆತನ, ದುಡಿಮೆಯ ದಿನದಲ್ಲಿ, ಕೆಲಸಗಳಲ್ಲಿ ಜೊತೆಯಾದ ಗೆಳತಿಯರ ನಡುವಿನ ಸ್ನೇಹ, ಅದರ ಮಧ್ಯೆ ಸಂಭ್ರಮದಿಂದ ನಡೆದ ನನ್ನ ವಿವಾಹ, ನೂರಾರು ಕನಸು ಹೊತ್ತು ಪಡೆದ ಮಗಳು, ಆ ಮಗುವಿನ ಕಣ್ಣಲ್ಲಿ ನನ್ನೆಲ್ಲಾ ಬದುಕಿನ ಸಂತಸವನ್ನು ಆರಸಿದ ನನ್ನ ದಿನಗಳು ಇವೆ. ಇವೆಲ್ಲಾ ಉತ್ತಮವೇ? , ಸಾಧಾರಣವೇ? ಇಲ್ಲವೇ ದುರಂತವೇ?!ಎನ್ನುವುದನ್ನು ಹೇಳುವುದೇ ಸಾಧ್ಯವಾಗುತ್ತಿಲ್ಲ.

  ದುರಂತವೆಂದರೆ ಜೀವಕ್ಕಿಂತ ಪ್ರೀತಿಸಿದ ಪತಿ, ಜೀವವನ್ನೇ ಪಣಕ್ಕಿಟ್ಟು ಹೆತ್ತ ನನ್ನ ಮಗಳು ಕೊಟ್ಟ ಖುಷಿ ಆನಂದ, ಅವಳ ಆಟಪಾಠ, ಕಾಳಜಿ ತುಂಬಿ ಪ್ರೀತಿಸುವ ನನ್ನ ತಾಯಿ, ಸಂಬಂಧಿಕರು ನನ್ನೆಲ್ಲಾ ಕಷ್ಟ ನಷ್ಟಗಳಲ್ಲಿ ಮಾನಸಿಕವಾಗಿ, ಆರ್ಥಿಕವಾಗಿ ಜೊತೆ ನಿಂತ ಬಂಧುಗಳನ್ನು ಅವಮಾನಿಸಿದಂತೆಯೂ ಅನ್ನಿಸುತ್ತದೆ. ಆದರೆ ದುರಂತವಲ್ಲ ಎಂದು ಕೂಡ ಹೇಳಲಾಗುತ್ತಿಲ್ಲ.

  ಮನಸ್ಸು ಭಾರವಾಗಿದೆ, ಈ ದೇಹ ನನ್ನ ಮಾತನ್ನು ಕೇಳುವುದನ್ನು ನಿಲ್ಲಿಸಿ ಬಿಟ್ಟಿದೆ.ಹೆಚ್ಚು ಬರೆಯಲು ತ್ರಾಣವು ನನ್ನಲ್ಲಿಲ್ಲ.ಆದರೆ  ಪ್ರಾಣ ಹೋಗುವುದರ ಒಳಗೆ ನನ್ನ ಮನಸ್ಸನ್ನು ಹೀಗಾದರೂ ಹಗುರಗೊಳಿಸಿಕೊಳ್ಳಬೇಕಿದೆ. ನಾನು ಮೊದಲೇ ಹೇಳಿದಂತೆ ಕಷ್ಟ ಸುಖ ಕಂಡ ಸಾಧಾರಣ ಬಾಲ್ಯ ನನ್ನದು.ಅಷ್ಟೇನೂ ಸುಂದರಿಯಲ್ಲದಿದ್ದರೂ ಲಕ್ಷಣದ ಮುಖಭಾವವಿರುವ, ಉದ್ದನೆ ಜಡೆಯ ಬಹಳ ಮೃದು ಸ್ವಭಾವದ ಸಾತ್ವಿಕ ಹುಡುಗಿ ನಾನಾಗಿದ್ದೆ. ಅತಿಯಾಗಿ ಎಲ್ಲರ ಜೊತೆ ಬೆರೆತು ಆಡಿ ಕುಣಿಯುವ ಹುಡುಗಿ ನಾನಾಗಿರಲಿಲ್ಲ.ಬಾಲ್ಯದಲ್ಲೇ ತಂದೆ ದೂರಾಗಿದ್ದರು. ಅಮ್ಮ ಮಾವ, ಅಜ್ಜ, ಅಜ್ಜಿ, ಅತ್ತೆ, ಚಿಕ್ಕಮ್ಮ,ಮತ್ತವರ ಮಕ್ಕಳು ನನಗೆ ಕೌಟುಂಬಿಕ ಪ್ರೀತಿಯನ್ನು ದಂಡಿಯಾಗಿಯೇ ಕೊಟ್ಟಿದ್ದರು.

ಬಾಲ್ಯದಲ್ಲಿ ಹಣಕಾಸಿಗೆ ಒಂದಷ್ಟು ತೊಂದರೆ ಉಂಟಾದರೂ, ಪ್ರೀತಿಗೆ ತೊಂದರೆ ಇರಲಿಲ್ಲ.ತಂದೆ ಇಲ್ಲದ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುವುದು ತಾಯಿಗೆ ಕಷ್ಟವಾದರೂ, ಭಾರವೆಂದು ಅನಿಸಲಿಲ್ಲ. ನನಗೆ ಹೆಚ್ಚಾಗಿ ಓದಲು, ವಿದ್ಯೆ ಅಷ್ಟಾಗಿ ತಲೆಗೂ ಹತ್ತಲಿಲ್ಲ. ಹಾಗಾಗಿ ಓದನ್ನು ಹತ್ತನೇ ತರಗತಿಗೆ ಕೊನೆಗೊಳಿಸಿ, ಮನೆಯ ಹತ್ತಿರ ಒಂದು ಸಣ್ಣ ಝರಾಕ್ಸ್ ಅಂಗಡಿಗೆ ಹೋಗುತ್ತಿದ್ದೆ. ಅಮ್ಮನಿಗೂ ಒಂದಷ್ಟು ಸಹಾಯವಾಗಿತ್ತು, ಜೊತೆಗೆ ತಂಗಿಯನ್ನು ಓದಿಸುವ ಭಾರ ಅಮ್ಮನ ಮೇಲಿದ್ದರಿಂದ, ನನ್ನನ್ನು ಆದಷ್ಟು ಬೇಗ ಯಾರಾದರೂ ಒಳ್ಳೆ ಹುಡುಗನಿಗೆ ಕೊಟ್ಟು ಮದುವೆ ಮಾಡಿಸುವ ಇಚ್ಛೆಯಷ್ಟೇ ಅವರದಾಗಿತ್ತು.

 ನಮ್ಮ ದೂರದ ಸಂಬಂಧಿ, ನಗರದ ದೊಡ್ಡ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಹುಡುಗ. ಅವರ ತಾಯಿ ಯಾವುದೋ ಸಮಾರಂಭದಲ್ಲಿ ನನ್ನನ್ನು ನೋಡಿ ಇಷ್ಟಪಟ್ಟು ಅವರ ಮಗನಿಗೆ ತಂದು ಕೊಳ್ಳಲು ಇಚ್ಚಿಸಿದರು. ಮನೆಯಲ್ಲಿ ಖುಷಿ. ಹುಡುಗ ತುಂಬಾ ಒಳ್ಳೆಯವನು, ಮದುವೆ ಮಾಡುವುದು ಎಂದೇ ತೀರ್ಮಾನವಾಗಿ, ಎರಡು ಮೂರು ತಿಂಗಳಲ್ಲಿ ಎಲ್ಲಾ ಶಾಸ್ತ್ರ ಮುಗಿದು ಮದುವೆ ಆಗಿಬಿಟ್ಟಿತು.

 ಅವರು ನನ್ನನ್ನು ಹೂವಿನಂತೆ ನೋಡಿಕೊಂಡರು. ನನ್ನೆಲ್ಲಾ ಇಷ್ಟಗಳನ್ನು ಇಷ್ಟಪಟ್ಟು ನೆರವೇರಿಸುತ್ತಿದ್ದರು. ಎಲ್ಲವೂ ಸುಖವಾಗಿ ನಡೆತ್ತಿರುವಾಗ ಮುದ್ದಾದ ಮಗು ನನ್ನ ಮಡಿಲು ತುಂಬಿತು. ನಮ್ಮನ್ನು ಹಿಡಿಯುವವರೇ ಇಲ್ಲ. ಎಲ್ಲರ ದೃಷ್ಟಿ ನಮ್ಮ ಸಂಸಾರದ ಮೇಲೆ. ಏನೂ ಇಲ್ಲದ ಅಂತಹ ಮನೆಯ ಹುಡುಗಿಯ ಬಾಳು ಎಷ್ಟು ಸುಖಕರವಾಗಿ ಬದಲಾಗಿದೆ ಎಂದು ನೋಡುವಂತೆ ಇತ್ತು.

ಇದರ ನಡುವೆ ಗಂಡ ನನಗಾಗಿ ದೊಡ್ಡ ಚಿನ್ನದ ನೆಕ್ಲೆಸ್ ಅನ್ನು, ಬಳೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅದೆಲ್ಲಾ ನೋಡಿ ನನ್ನ ಸಂಬಂಧಿಕರು, ಸ್ನೇಹಿತರು ತುಂಬಾ ಸಂತಸಪಟ್ಟಿದ್ದರು. ಯಾರ ದೃಷ್ಟಿ ತಾಗಿತೊ ಏನೋ?!ಚಂದದ ಸಂಸಾರಕ್ಕೆ ಹುಳಿ ಹಿಂಡಿ ಬಿಟ್ಟಂತೆ, ನನ್ನ ಜೀವನವೆಂಬ ಹಾಲು, ಕಹಿ ಮೊಸರಿನಂತೆ ನಾಲ್ಕೇ ದಿನದಲ್ಲಿ ಬದಲಾಗಿ ಬಿಟ್ಟಿತು. ನನ್ನ ಪತಿಗೆ ಇದ್ದಕ್ಕಿದ್ದಂತೆ ಅನಾರೋಗ್ಯವಾದಾಗ, ಆಸ್ಪತ್ರೆಯ ಎಲ್ಲಾ ವರದಿಗಳು ಅವರಿಗೆ ವಾಸಿಯಾಗದಂತ ಅಂಟು ಕಾಯಿಲೆಯಿಂದ ಬಳಲುತ್ತಿರುವ ಮಾಹಿತಿ ಸಿಕ್ಕಿತು. ಆದರೆ ನನ್ನ ಗಂಡ ನನಗೆ ತಿಳಿದಂತೆ ಉತ್ತಮ ನಡತೆಯ ವ್ಯಕ್ತಿ. ಅವರಿಗೆ ಎಲ್ಲಿಂದ ಯಾವ ರೀತಿ ಈ ಕಾಯಿಲೆ ಬಂದಿತ್ತೋ ನಮಗೆ ಯಾರಿಗೂ ತಿಳಿಯಲಿಲ್ಲ. ಅವರ ಕಾಯಿಲೆ ಕೊನೆ ಹಂತದವರೆಗೂ ತಲುಪಿತ್ತು. ಪುಟ್ಟ ಮಗು, ನನ್ನ ಪರಿಸ್ಥಿತಿ ಎಲ್ಲಾ ಅರಿತು ನನ್ನ ಪತಿ ದಿನೇ ದಿನೇ ಸೊರಗಿ ಹೋಗುತ್ತಲೇ ಬಂದರು. ಅವರಲ್ಲಿ ಅತೀವ ಪಾಪಪ್ರಜ್ಞೆ ಕಾಡುತ್ತಾ ದಿನ ಕಳೆದಂತೆ ಸೊರಗಿ ಹೋಗುತ್ತಾ ಬಂದರು.  ನನ್ನಿಂದ ನಿನ್ನ ಬದುಕು ಹಾಳಾಯಿತು ಎನ್ನುತ್ತಾ, ಕಣ್ಣೀರು ಹಾಕುವ ಅವರನ್ನು ನೋಡಿ ನನ್ನ ಜಂಘಾಬಲವೇ ಉಡುಗಿ ಹೋಯಿತು. ಆಟವಾಡುವ ಪುಟ್ಟ ಮಗಳನ್ನು ನೋಡುವಾಗಲೂ ನನಗೆ ಬದುಕುವ ಆಸೆಯು ಉಳಿಯಲಿಲ್ಲ.

  ಇದೆಲ್ಲಾ  ನಡೆದ ಕೆಲವೇ ತಿಂಗಳಲ್ಲಿ ನನ್ನ ಪತಿ ನಾನು ಯಾವ ತಪ್ಪು ಮಾಡಲಿಲ್ಲ ಆದರೂ  ನನಗೇಕೆ ಖಾಯಿಲೆ ಬಂತೋ ಎಂದು ಪರಿತಪಿಸುತ್ತಾ ದಿನೇ ದಿನೇ ಮೌನವಾಗಿ ಒಂದು ದಿನ ಇಹಲೋಕವನ್ನು ತ್ಯಜಿಸಿಬಿಟ್ಟರು. ನನಗಂತೂ ದಿಕ್ಕೆ ತೋಚದಂತೆ ಆಯಿತು. ಇರಲು ಸ್ವಂತ ಸೂರಿಲ್ಲ. ಅಮ್ಮನ ಮನೆ ಗಟ್ಟಿ ಇಲ್ಲ. ಹೆಚ್ಚಿನ ವಿದ್ಯಾಭ್ಯಾಸ ನನಗೆ ಸಿಗಲಿಲ್ಲ. ಇದೆಲ್ಲದಕ್ಕಿಂತ ದೊಡ್ಡ ನೋವು ಗಂಡನಿಂದ ನನಗೆ ಬಳುವಳಿಯಾಗಿ ಕಾಯಿಲೆಯೂ ಬಂದುಬಿಟ್ಟಿತ್ತು. ಇದನ್ನು ಹೇಗೆ ನಿಭಾಯಿಸಬೇಕೆಂದು ನನಗೆ ಅರಿವಾಗದೆ ನಾನು ಯಕಶ್ಚಿತ್ ಜೀವಂತ ಶವದಂತೆ ಆಗಿ ಹೋಗಿದ್ದೆ.

ಆದರೆ ನನ್ನಮ್ಮ ನನ್ನ ಪ್ರೀತಿಯ ಅತ್ತೆ ನನ್ನನ್ನು ಬಿಟ್ಟು ಕೊಡಲಿಲ್ಲ. ಹೇಗೋ ಹೇಗೋ ಮಾಡಿ ಕಷ್ಟಪಟ್ಟು ಹಲವಾರು ಆಸ್ಪತ್ರೆಗಳ ತಿರುಗಾಟ, ಮಾನಸಿಕ ಆಪ್ತ ಸಮಾಲೋಚನೆ ಕೊಡಿಸುವುದರ ಮೂಲಕ, ಅಂತೂ ನಾನು ಒಂದಷ್ಟು ತಿಂಗಳ ಬಳಿಕ ನನ್ನ ಹಿಂದಿನ ಸ್ಥಿತಿಗೆ ಬಂದೆ. ಸಂಪೂರ್ಣವಾಗಿ ಹಿಂದಿನಂತೆ ಲವಲವಿಕೆ ಬರದಿದ್ದರೂ, ಕಣ್ಮುಂದೆ ಆಡುವ ಪುಟ್ಟ ಮಗಳು ಬದುಕುವ ಆಸೆಯನ್ನು ಹೆಚ್ಚಿಸಿದಳು.ಹಾಗೊಹೀಗೂ ನನಗೆ ಒಂದು ಸಣ್ಣ ಅರೆ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗ ದೊರಕಿತ್ತು. ಆಸರೆಯಾಗಿ ಅಮ್ಮ ಜೊತೆಗಿದ್ದರು. ಪುಟ್ಟ ಮನೆಯಲ್ಲಿ ಮಗಳನ್ನು ಸಾಕುತ್ತಾ, ಆರೋಗ್ಯವನ್ನು ಜೋಪಾನ ಮಾಡಿಕೊಳ್ಳುತ್ತಾ, ಎಲ್ಲರೆದುರು ನಗುವಿನ ಮುಖವಾಡವನ್ನು ಹಾಕಿಕೊಂಡು ನೋವೇ ಇಲ್ಲದಂತೆ ಹತ್ತು ವರ್ಷ ಬದುಕಿಬಿಟ್ಟೆ.

ಆದರೆ ನನ್ನೊಳಗೊಳಗೆ ಬಂದಳಿಕೆಯಂತೆ ಆವರಿಸಿದ್ದ ಕಾಯಿಲೆ ನನ್ನ ದೇಹವೆಲ್ಲಾ ವ್ಯಾಪಿಸಿ, ನನ್ನನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡಿತು. ಯಾವ ಆಸ್ಪತ್ರೆಯೂ ನನ್ನ ಖಾಯಿಲೆಯನ್ನು ವಾಸಿಮಾಡಲು ಸಾಧ್ಯವಿಲ್ಲದಂತೆ ಆಯಿತು. ಔಷಧಗಳು  ನನ್ನ ಮೇಲೆ ಪರಿಣಾಮ ಬಿರುವುದನ್ನು ನಿಲ್ಲಿಸಲಾರಂಭಿಸಿದವು. ನನ್ನ ಮಗಳು ನನ್ನಮ್ಮನನ್ನು ಹಚ್ಚಿಕೊಂಡಿದ್ದಳು. ಅಜ್ಜಿಯನ್ನು ಅಮ್ಮ ಎಂದೇ ಕರೆಯಲು ಅಭ್ಯಾಸ ಮಾಡಿಸಿದ್ದೆ.ಮಗಳಿಗೆ ಅಮ್ಮ ಇಲ್ಲ ಎನ್ನುವ ಭಾವ ಮುಂದೆ ಕಾಣಬಾರದೆಂದು ನಾನು ಒಂದಷ್ಟು ಅಂತರವನ್ನು ಕಾಪಾಡಿಕೊಂಡೇ ಬಂದೆ. ನನ್ನ ಮುದ್ದು ಮಗಳನ್ನು ನಾನು ಅತಿಯಾಗಿ ಹಚ್ಚಿಕೊಳ್ಳಲು ಸಾಧ್ಯವಾಗಲಿಲ್ಲ, ಏಕೆಂದರೆ ಇದು ಯಾವಾಗ ಬೇಕಾದರೂ ಬಿದ್ದು ಹೋಗುವ ಜೀವ.ಮಗಳು ಬಾಳಿ ಬೆಳಗಬೇಕಾದ ಹಣತೆ. ದೇವರ ದಯೆಯಿಂದ ಮಗಳು ಆರೋಗ್ಯವಂತೆಯಾಗಿ ಬೆಳೆಯುತ್ತಿದ್ದಳು.ನಮ್ಮ ಯಾವ ತೊಂದರೆಯೂ ಅವಳಿಗೆ ತಾಕದೆ ರಾಜಕುಮಾರಿಯಂತೆ ಬೆಳೆಯುತ್ತಿದ್ದಳು. ಅದೇ ಒಂದು ಸಮಾಧಾನ ಮುಂದೆ ಅವಳ ಬದುಕು ಹಸನಾದರೆ ನನ್ನ ಈ ಸಣ್ಣ ಬದುಕು ಸಾರ್ಥಕ ಅನ್ನಿಸುತ್ತಿದೆ.

ಆಸ್ಪತ್ರೆಯಲ್ಲಿ ಕ್ಷಣ, ದಿನಗಳನ್ನು ಎಣಿಸುತ್ತಾ ಮಲಗಿದ್ದೇನೆ. ಈಗ ನಾನು ಸ್ವತಹ ಊಟ ಮಾಡಲಾರೆ, ನಡೆದಾಡಲಾರೆ ಎಲ್ಲವನ್ನು ಅಮ್ಮ ಜೊತೆಗಿದ್ದು ನೋಡಿಕೊಳ್ಳುತ್ತಿದ್ದಾರೆ. ಅವರೊಬ್ಬರಿಗೆ ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ಆಸ್ಪತ್ರೆಯ ದಾದಿಯರ ಸಹಾಯವನ್ನು ಪಡೆದು, ನನ್ನನ್ನು ಎತ್ತಿ ಮಲಗಿಸಬೇಕು, ಸ್ನಾನ ಮಾಡಿಸಬೇಕು.ಇಂತಹ ಪರಿಸ್ಥಿತಿ ಯಾವ ತಾಯಿಗೂ ಬಾರದಿರಲಿ. ಅಮ್ಮನ ದುಃಖವನ್ನು ನೋಡಲಾಗುತ್ತಿಲ್ಲ.ಮಗಳ ಕಳವಳವನ್ನು ಹೇಳಲಾಗುತ್ತಿಲ್ಲ. ಯಾರನ್ನೂ ಸಮಾಧಾನ ಮಾಡಲು ಸಾಧ್ಯವಾಗುತ್ತಿಲ್ಲ.ಎಲ್ಲರ ನೋಟವು "ಹೀಗಾಯಿತಲ್ಲಾ! ನನ್ನ ಬದುಕು" ಎನ್ನುವ ಭಾವವನ್ನೇ ತೋರಿಸುತ್ತಿತ್ತು.

    ಆತ್ಮೀಯರೆಲ್ಲರಿಗೂ ಕರೆ ಮಾಡಿ ಮಾತನಾಡಿ, ಕೆಲವರನ್ನು ಬರಲು ತಿಳಿಸಿ ಭೇಟಿ ಮಾಡಿದೆ. ಮುಂದೆ ಅವರನ್ನೆಲ್ಲಾ ನೋಡುವ ಅವಕಾಶ ನನಗಿಲ್ಲ, ಈ ಸತ್ಯ ಅರಿತಿದ್ದರೂ, ನಾನು ಅವರ್ಯಾರ ಮುಂದೆಯೂ ಇದನ್ನು ಹೇಳಲಿಲ್ಲ. ಅಮ್ಮನು ಕೂಡ ಇನ್ನೊಂದು ಹದಿನೈದು ದಿನ ಒಂದು ತಿಂಗಳಲ್ಲಿ ಸರಿ ಹೋಗಬಹುದು ಎಂದು ಹೇಳಿದ್ದಾರೆ ಎನ್ನುವ ಉತ್ತರ ಕೊಡುತ್ತಲೇ ಬರುತ್ತಿದ್ದಾಳೆ.  

ಆದರೆ ನನ್ನ ಕೈ ಕಾಲು ಸೋಲುತ್ತಿದೆ. ಮನಸ್ಸಿನ ಭಾವನೆಗಳನ್ನು, ನೋವುಗಳನ್ನು ಮುಚ್ಚಿಡಬೇಕೆಂದೇ ಅನ್ನಿಸುತ್ತಿದೆ. ನನ್ನ ಉಸಿರು ನಿಂತ ನಂತರ ಯಾರೂ ಕೂಡ ಇದನ್ನೆಲ್ಲಾ ಓದಿ ಅಳಬಾರದೆಂದು, ನೋವು ಪಡಬಾರದೆಂದು ನನ್ನ ಅನಿಸಿಕೆ. ಹಾಗಾಗಿ ಕೊನೆಯ ಪುಟದಲ್ಲಿ ನಿಂತು, ಬದುಕಿನ ಹಾಳೆಯನ್ನು ತಿರುಗಿಸಿ ನೋಡುತ್ತಿದ್ದಂತೆ ಬರೆದ ಅಕ್ಷರಗಳು ಮಂಜು ಮಂಜಾಗಿ ಕಾಣಿಸುತ್ತಿದೆ. ತುಸು ಬಾಯಾರಿಕೆಯಾಗಿ ನೀರು ಕುಡಿಯಬೇಕೆಂದು ಅನ್ನಿಸುತ್ತಿದೆ, ಪಾಪ ಅಮ್ಮ ಸುಸ್ತಾಗಿ ನಿದ್ದೆ ಮಾಡಿರಬಹುದು ಅವಳನ್ನು ಏಕೆ ನಾನು ಎಬ್ಬಿಸಿ ತೊಂದರೆ ಕೊಡಲಿ. ನಾನೇ ತುಸು ನೀರನ್ನು ಕುಡಿಯುತ್ತೇನೆ ಎಂದು ಪಕ್ಕದಲ್ಲಿ ಇಟ್ಟ ನೀರಿನ ಲೋಟಕ್ಕೆ ಕೈ ಹಾಕಲು ಹಂಬಲಿಸಿದೆ. ಆದರೆ ನೀರು ನನ್ನ ಕೈಗೆಟಕುವ ಬದಲು ನಾ ಬರೆದ ಹಾಳೆಯ ಮೇಲೆ ಚೆಲ್ಲಿ ನನ್ನ ಮನದ ಮಾತುಗಳೆಲ್ಲ ಅಳಿಸಿ ಹೋಗುತ್ತಿದೆ. ಒಳ್ಳೆಯದೇ ಆಯಿತು ನನ್ನ ಅಂತರಂಗದ ತುಮುಲಗಳು, ಕೊನೆಯದಾಗಿ ನಾನು ಅನುಭವಿಸಿದ ತೊಳಲಾಟಗಳು, ನನ್ನೊಂದಿಗೆ ಮುಗಿದು ಹೋಗಲಿ. ಆದರೆ ಆದರೆ ಇಷ್ಟೊತ್ತು ನಾ ಹೇಗೆ ಬರೆಯುತ್ತಿದ್ದೇನೆ ನನಗೆ ಅರಿವಾಗುತ್ತಿಲ್ಲ. ಏಕೆಂದರೆ ನನಗೆ ಕೈ ಕೂಡ ಸ್ವಾಧೀನವಿಲ್ಲ, ಹಾಗಾದರೆ ಇಷ್ಟು ಹೊತ್ತು ಕೂಡ ನಾನು ಕನಸು ಕಂಡೆನೆ?!.. ಎಂದುಕೊಳ್ಳುತ್ತಾ  ಮತ್ತೆ ಬಾಯಾರಿಕೆ ಆಗುತ್ತಿದೆ, ತುಸು ನೀರು ಕುಡಿಯಬೇಕೆನಿಸುತ್ತಿದೆ ಎಂದುಕೊಳ್ಳುವಾಗ, ಅಮ್ಮನ ಕೈ ತಲೆ ಸವರಿದಂತೆ ಭಾಸವಾಯಿತು. 
ದೇವರೇ  ನನ್ನ ಅಮ್ಮ ಹಾಗೂ ಮಗಳನ್ನು ಚೆನ್ನಾಗಿ ನೋಡಿಕೋ. ನನ್ನ ದಿನಗಳು ಮುಗಿಯಿತು ಎಂದುಕೊಳ್ಳುತ್ತಿರುವಾಗ, ತುಟಿಯ ಮೇಲೆ ಹನಿ ಹನಿ ನೀರು ಬೀಳುತ್ತಾ, ಒಂದೆರಡು ಹನಿ ಗಂಟಲಿನವರೆಗೂ ಬಂದು ತಂಪೆರೆಯಿತು. ನಂತರ ಬಾಯಿಗೆ ಹಾಕಿದ ನೀರು ಎಲ್ಲವೂ ಹಾಗೆಯೇ ಬಾಯಿಯಿಂದ ಹೊರ ಹರಿಯ ತೊಡಗಿತ್ತು, ಈ ಭೂಮಿಯ ಮೇಲಿದ್ದ ನನ್ನ ಬಂಧನವು ಕಳಚಿ ಹೋಯಿತು. ಅಮ್ಮನ ಕಂಠದಿಂದ ಹೊರಟ ಆರ್ತನಾದ ನನ್ನ ಕಿವಿಯನ್ನು ತಲುಪದಾಯಿತು.


ಧನ್ಯವಾದಗಳು 
ಮಮತಾ ಶೃಂಗೇರಿ.. 

Category:Stories



ProfileImg

Written by mamta sringeri

0 Followers

0 Following