ಅನಂತ ಸರೋವರದ ನಿತ್ಯ ವಸಂತ

ProfileImg
18 Jan '24
4 min read


image


ಕೇರಳದ ಕಾಸರಗೋಡು  ಕರ್ನಾಟಕ ರಾಜ್ಯದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಒಂದು ಸುಂದರ ಜಿಲ್ಲೆ. ಇಲ್ಲಿ ತುಳು ಕನ್ನಡ ಮಲಯಾಳಂ, ಕೊಂಕಣಿ ಈಗೆ ಸುಮಾರು ಏಳು ತರದ ಭಾಷೆಗಳನ್ನಾಡೋ ಜನರು ನೆಲೆಸಿರುವ ಕಾರಣ ಈ ಪ್ರದೇಶವು ಸಪ್ತ ಭಾಷಾ ಸಂಗಮ ಭೂಮಿಯೆಂದೆ ಪ್ರಖ್ಯಾತಿಯನ್ನು ಹೊಂದಿದೆ.
ಕಾಸರಗೋಡು ಜಿಲ್ಲೆಯು ಅನೇಕ ಹೆಸರುವಾಸಿ ಪ್ರವಾಸಿ ತಾಣಗಳನ್ನು ಹೊಂದಿದ್ದು ಇವುಗಳಲ್ಲಿ ಇಕ್ಕೇರಿ ನಾಯಕರ ಬೇಕಲ ಕೋಟೆ, ಮಾಯಿಪಾಡಿ ಅರಮನೆ, ಮದೂರು ಮಹಾಗಣಪತಿ ದೇವಾಲಯ, ಅನಂತಪುರ ಸರೋವರ ಕ್ಷೇತ್ರ, ಪೊಸಡಿ ಗುಂಪೆ ಬೆಟ್ಟ, ಮಾಲೀಕ್ ದಿನಾರ್ ಜುಮಾ ಮಸೀದಿ, ಶೋಕ ಮಾತ ದೇವಾಲಯ ಈಗೆ ಹತ್ತು ಹಲವು ಇತಿಹಾಸ ಪ್ರಸಿದ್ದ ತಾಣಗಳು. ಇವುಗಳ ಪೈಕಿ  ಶ್ರೀ ಅನಂತ ಪದ್ಮನಾಭ ಸ್ವಾಮಿ ಸರೋವರ ಕ್ಷೇತ್ರವು ಜಿಲ್ಲೆಯ ಒಂದು ಅತ್ಯದ್ಭುತ ಧಾರ್ಮಿಕ ಕ್ಷೇತ್ರ ಹಾಗೆಯೇ ಪ್ರಕೃತಿ ರಮಣೀಯ ಪ್ರವಾಸಿತಾಣಗಲ್ಲೊಂದು. ಶ್ರೀ ಅನಂತಪುರ  ಪದ್ಮನಾಭ  ಸ್ವಾಮಿ ಕ್ಷೇತ್ರವು  ಸರೋವರ ಮದ್ಯದಲ್ಲಿ  ಕಂಗೊಳಿಸುತ್ತಿರುವ ಪೌರಾಣಿಕ  ಹಿನ್ನಲೆಯುಳ್ಳ ಧಾರ್ಮಿಕ  ಯಾತ್ರಸ್ಥಳ. ಅತ್ಯಪೂರ್ವ ಕಡುಶರ್ಕರ ಪಾಕದಿಂದ  ರೂಪಿತವಾದ  ಅನಂತ ಪದ್ಮನಾಭ ಸ್ವಾಮಿ ದೇವರ ವಿಗ್ರಹಗಳು ಶ್ರೀ ಕ್ಷೇತ್ರದ ವಿಶೇಷತೆ ಗಳಲ್ಲೊಂದು. ಪ್ರಕೃತಿ  ರಮಣೀಯತೆಗೆ  ಇನ್ನೊಂದು ಹೆಸರೇ  ಅನಂತಪುರ. ದೇವಸ್ಥಾನದ  ಎದುರಿಗೆ  ವಿರಾಜಮಾನವಾಗಿ  ಕಂಗೊಳಿಸುವ  ದೇವರ ಗುಡ್ಡ  ಪ್ರವಾಸಿಗರನ್ನು  ಕೈಬೀಸಿ ಕರೆಯುತ್ತಿದೆ. ಗುಡ್ಡ ಹತ್ತಿದಾಗ  ದೂರದ ನದಿ, ಕಡಲತೀರ ಅಣೆಕಟ್ಟೆಗಳ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ಕಪ್ಪು ಬಂಡೆ ಕಲ್ಲಿನ ಮದ್ಯದಲ್ಲಿ ಹಸಿರು ಹುಲ್ಲುಗಾವಲು ಬೇಸಿಗೆ ಯ ಸಮಯಕ್ಕೆ ಚಿನ್ನದ ವರ್ಣಕ್ಕೆ ತಿರುಗುವ ಮುಳಿ ಹುಲ್ಲಾಗಿ ಮಾರ್ಪಡಾಗುತ್ತದೆ . ದೇವರ ಗುಡ್ಡ ಅನಂತಪುರದ ಎತ್ತರದ ಪ್ರದೇಶ ಹಾಗಾಗಿ ದೂರದ ಹಳ್ಳಿ,ಪಟ್ಟಣ, ಕಡಲತೀರ, ನದಿ, ಮಂದಿರ,ಮಸೀದಿಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಅನಂತಪುರದ ಸುತ್ತ ಮುತ್ತ ಅನೇಕ ಕನ್ನಡ, ಮಲಯಾಳಂ ಚಲನಚಿತ್ರಗಳ ಶೂಟಿಂಗ್ ಕೂಡ ನಡೆಯುತ್ತಿರುತ್ತದೆ. ಅನಂತ ಪುರ ಕ್ಷೇತ್ರ ಕೊಳದ ಮದ್ಯದಲ್ಲಿ ಅತ್ಯಂತ ಸೊಬಗಿನಿಂದ ಕಂಗೊಳಿಸುತ್ತದೆ. ಶ್ರೀ ಕ್ಷೇತ್ರದಲ್ಲಿ ಅನಂತಪದ್ಮನಾಭ ಸ್ವಾಮಿ ಗುಡಿ ಮದ್ಯದಲ್ಲಿ ಇದ್ದು ಕೆರೆಯ ಅಂಚಿನಲ್ಲಿ ದೇವರಗುಹೆ  ಜಲ ದುರ್ಗೆ ಸೇರಿದಂತೆ ಅನೇಕ ಪರಿವಾರ ದೇವರುಗಳ ಸಾನಿಧ್ಯವು ಇದೆ. ಕೊಳದಲ್ಲಿ ನಾನಾ ತರದ ದೇವರ ಮೀನುಗಲೆಂದೆ ಕರೆಯಲ್ಪಡುವ ಮತ್ಸ್ಯಸಂಕುಲದ ಹಿಂಡು ನೋಡುಗರಿಗೆ ಮುದ ನೀಡುತ್ತದೆ. ದೇವಸ್ಥಾನದ  ಪಕ್ಕದಲ್ಲಿರುವ  ದೇವರ ಗುಹೆಗೂ ತಿರುವನಂತಪುರದ ಅನಂತ ಪದ್ಮನಾಭ ಕ್ಷೇತ್ರಕ್ಕೂ ಸಂಪರ್ಕ ಇದೆ ಎನ್ನುವುದು ಪೌರಾಣಿಕ ಹಿನ್ನಲೆ ಮತ್ತು ಧಾರ್ಮಿಕ ನಂಬಿಕೆ. ಅನಂತಪುರ ಕ್ಷೇತ್ರದ ಪ್ರಸಿದ್ದಿಗೆ  ಪ್ರಮುಖವಾಗಿರುವ ಮತ್ತೊಂದು ವಿಷಯವೇ ಸರೋವರದ ಅಂಚಿನಲ್ಲಿರುವ  ಇನ್ನೊಂದು ಗುಹೆ, ಈ ಗುಹೆಯಲ್ಲಿ  ಕ್ಷೇತ್ರದ ಪವಾಡಕ್ಕೆ ಸಾಕ್ಷಿಯಾದ ಸಾಕ್ಷಾತ್ ಕ್ಷೇತ್ರಪಾಲಕನಂತೆ ಇರುವ ಬಬಿಯ ಎನ್ನುವ ದೇವರ ಮೊಸಳೆ ಕಾಣಸಿಗುತ್ತದೆ.
ಸರೋವರ ಕ್ಷೇತ್ರ ಹಾಗೂ ಅನಂತ ಪದ್ಮನಾಭ ದೇವರಷ್ಟೇ  ಪ್ರಸಿದ್ಧ ಹಾಗೂ ಕಾರ್ಣಿಕ ಉಳ್ಳವನು  ಈ ಬಬಿಯ ಎನ್ನುವ ದೇವರ ಮೊಸಳೆ. ಅಕ್ಕಪಕ್ಕದ  ಎಲ್ಲಾ ಗ್ರಾಮಗಳಿಗೂ ಬಬಿಯನೆಂದರೆ ಅಪಾರ ಭಕ್ತಿ,ಶ್ರದ್ದೆ. ಗ್ರಾಮದ ಜನರು  ತಮ್ಮ ಮನೆಯಲ್ಲಿ ಮೇಯಲು ಬಿಟ್ಟ ಜಾನುವಾರುಗಳು ಕಳವಾದಾಗ  ಈ ಬಬಿಯನಿಗೆ  ಹರಕೆ  ಹೇಳುವುದು ವಾಡಿಕೆ, ಹರಕೆ ಏನೆಂದರೆ, ನಮ್ಮ ಜಾನುವಾರುಗಳು  ಮನೆಗೆ ಕ್ಷೇಮವಾಗಿ  ತಲುಪಿದ್ದಲ್ಲಿ ಅನಂತಪುರದ  ಮೊಸಳೆಗೆ  ಕೋಳಿ ಕೊಡುತ್ತೇವೆ ಎಂದು .  ದೇವಸ್ಥಾನದ ಪಕ್ಕದ ಊರಲ್ಲೇ ನೆಲೆಸಿರುವ ನಮಗೆ ಚಿಕ್ಕವರಿರುವಾಗ  ಅನಂತಪುರ  ದೇವಸ್ಥಾನಕ್ಕೆ ಹೋಗುವುದೆಂದರೆ  ಹೇಳಲಾರದ  ಖುಷಿ ಯಾಕೆಂದರೆ  ಅಲ್ಲಿ ಬಬಿಯನ  ದರ್ಶನವಾಗಬಹುದೇ ಎಂಬ ಕೂತೂಹಲ ನಮ್ಮದು. ದೇವಸ್ಥಾನದಲ್ಲಿ ಮಹಾಪೂಜೆಗೆ ಬಹಳಷ್ಟು ಆಸ್ತಿಕ ಬಾಂದವರು ಸೇರುವುದು ವಾಡಿಕೆ .ಮದ್ಯಾಹ್ನದ ಮಹಾಪೂಜೆಯ  ನಂತರ, ಅರ್ಚಕರು  ಒಂದು ಕೈಯ್ಯಲ್ಲಿ ದೇವರ ನೈವೇದ್ಯ ಹಿಡಿದು ಬಬಿಯಾನ  ಗುಹೆಯ ಮುಂದೆ ಬಂದು ಬಬಿಯ  ಬಬಿಯ ಬಬಿಯ ಎಂದು ಮೂರು ಬಾರಿ ಹೆಸರಿಡಿದು ಕರೆಯುತ್ತಾರೆ, ಏನಾಶ್ಚರ್ಯ  ಸಾಕ್ಷಾತ್ ಬಬಿಯ  ಪ್ರತ್ಯಕ್ಷ. ಅರ್ಚಕರು ನೈವೇದ್ಯದ  ಅನ್ನವನ್ನು ಮೇಲಿಂದ  ಬಬಿಯನ ಬಾಯಿಗೆ ಎಸೆದಾಗ  ಬಬಿಯನ ಉದ್ದನೆ ಬಾಯಿಯನ್ನು ಕಂಡ ಭಕ್ತ ಜನರು ಅವನಿಗೆ  ಕೈ ಮುಗಿದು  ಧನ್ಯರಾಗುತಿದ್ದರು ... ಆ ಬಳಿಕ ಹರಕೆ  ಹೊತ್ತು ತಂದಿದ್ದ ಕೋಳಿಯನ್ನು  ಬಬಿಯ ನ ಗುಹೆಯ ಮೆಲ್ಬಾಗದಲ್ಲಿ  ಒಂದು ಮರದ  ಗೂಟಕೆ ಕಟ್ಟಿ ಬಬಿಯನನ್ನ  ಕರೆದಾಗ  ಎಲ್ಲರೂ ನೋಡುತಿದ್ದಂತೆ ಬಬಿಯ ಸರ್ರ್ ನೆ ಬಂದು  ಕೋಳಿಯನ್ನು ಕೊಸರಾಡಲು ಬಿಡದೆ  ನಿದಾನವಾಗಿ ತನ್ನ ಗುಹೆಯೊಳಗೆ  ಸಾಗುತಿದ್ದ. ಪೂಜಾ ಕೈಂಕರ್ಯಗಳು ಮುಗಿದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯು ನಡೆಯುತ್ತಿತ್ತು.  ಕಾಲಕಳೆದಂತೆ ಕೆಲವೊಂದು ಆಚರಣೆಗಳು ಕ್ರಮೇಣ ಬದಲಾಗುತ್ತಾ ಹೋಯಿತು. ಮುಖ್ಯವಾಗಿ  ಬಬಿಯನಿಗೆ ನೀಡುತಿದ್ದ ಕೋಳಿ ಹರಕೆ ನಿಂತೇ ಹೋಯಿತು. ಇದಕ್ಕೆ ಕಾರಣವೂ ಹಲವಾರು  ಸರೋವರ ಕ್ಷೇತ್ರದ ಅಂಚಲ್ಲೇ  ಗುಹೆ ಇರುವುದರಿಂದ ಬಬಿಯ ನೀಡುತಿದ್ದ ಕೋಳಿ ದೇವಸ್ಥಾನದ  ಕೊಳದ  ನೈರ್ಮಲ್ಯತೆಗೆ ತೊಂದರೆ ಉಂಟು ಮಾಡುತಿತ್ತು ಬಬಿಯ ತಿಂದುಬಿಟ್ಟ  ಅವಶೇಷಗಳು  ಇತರ  ಜಲಚರಗಳಿಗೂ  ಕಂಠಕವಾಯಿತು. ನಂತರದ  ದಿನಗಳಲ್ಲಿ  ಕೋಳಿಹರಕೆ  ಸಂಪೂರ್ಣ  ನಿಷೇದವಾಗಿ ಹೋಯ್ತು.ಬಬಿಯನಿಗೆ  ದೇವರ  ನೈವೇದ್ಯ  ಮತ್ತು ಇತರ ಜಲಚರಗಳೆ  ಆಹಾರವಾಹಿತು. ಅನಂತಪುರ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರ ಪ್ರಮುಖ ಆಕರ್ಷಣೆ ಹಾಗೂ ನಂಬಿಕೆಯ ಪ್ರತೀಕವೇ  ಈ ದೇವರ ಮೊಸಳೆ ಬಬಿಯ. ದೇಶದಾದ್ಯಂತ  ಹಲವಾರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯೋ ಈ ಸುಂದರ  ಪ್ರದೇಶದ  ಹಿನ್ನಲೆ, ದೇವರ ಮೊಸಳೆ ಬಬಿಯನ ಕಾರ್ಯವೈಖರಿಗಳ ಬಗ್ಗೆ ದೃಶ್ಯಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ  ಮಾಹಿತಿ ಅನೇಕ ಬಾರಿ ಪ್ರಸಾರವಾಗಿತ್ತು. ಶ್ರೀ ಅನಂತ ಪದ್ಮನಾಭ ಸ್ವಾಮಿಯ ಕ್ಷೇತ್ರ ಪಾಲಕನಾಗಿದ್ದ ಈ ದೇವದೂತ ಬಬಿಯ ಮೊಸಳೆಯು ಕಳೆದೆರಡು ವರ್ಷಗಳ ಹಿಂದೆ ಮರಣಹೊಂದಿ ಹರಿ ಪಾದವನ್ನು ಸೇರಿತ್ತು. ಅನಂತಪುರ ಕ್ಷೇತ್ರದ ದೈವಿ ಸ್ವರೂಪಿ ಬಬಿಯನ ಅಗಲಿಕೆಯನ್ನು ಕೇಳಿ ಆಸ್ತಿಕಬಾಂದವರೆಲ್ಲರೂ ದುಃಖತಪ್ತರಾಗಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಬಬಿಯನ ಅಂತ್ಯ ಸಂಸ್ಕಾರವನ್ನು ವೈದಿಕ ವಿದಿ ವಿಧಾನಗಳೊಂದಿಗೆ ನೆರವೇರಿಸಿ  ಶ್ರದ್ದಾಂಜಲಿ ಸಲ್ಲಿಸಿ ಸ್ಮರಿಸಿತ್ತು . ಬಬಿಯ ಹರಿಪಾದ ಸೇರಿ ಸುಮಾರು ಒಂದುವರೆ ವರ್ಷಗಳ ಬಳಿಕ ಅನಂತಪುರ ಕ್ಷೇತ್ರ ಸಂದರ್ಶನಕ್ಕೆ ಬಂದಿದ್ದ ಕುಟುಂಬವೊಂದಕ್ಕೆ ಅದೇ ಕೊಳದಲ್ಲಿ ಒಂದು ಮರಿ ಮೊಸಳೆ ಇರುವುದು ಗಮನಕ್ಕೆ ಬಂದ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ  ಹಬ್ಬಿ ಕೊನೆಗೆ ದೇವಸ್ಥಾನ ಮಂಡಳಿ ಮರಿ ಮೊಸಳೆಯ ಇರುವಿಕೆಯನ್ನು ದೃಡೀಕರಿಸಿತ್ತು.  ಪವಾಡದ ರೀತಿಯಲ್ಲಿ ನಡೆದ ಈ ಘಟನೆಯ ಬಳಿಕ ಅನಂತಪುರ ಅನಂತಪದ್ಮನಾಭ ನ ಮಹಿಮೆಯನ್ನು ಎಲ್ಲರೂ ಶ್ರದ್ದಾ ಭಕ್ತಿಯಿಂದ ಕೊಂಡಾಡಿದರು. ಅದೇ ಮರಿ ಮೊಸಳೆಗೆ ಬಬಿಯ ಎಂದೇ ನಾಮಕರಣಮಾಡಿ ಪೂಜಿಸಲಾಯಿತು.  ಅನಂತಪುರ ಕ್ಷೇತ್ರದ ದೇವರ ಮೊಸಳೆ ಬಬಿಯ ದೈವದೀನನಾದ ಕೆಲವೇ ವರ್ಷದಲ್ಲಿ ಮತ್ತೊಂದು ಮೊಸಳೆ. ಕೊಳದಲ್ಲಿ ಪ್ರತ್ಯಕ್ಷಗೊಂಡಿರುವುದು ಕ್ಷೇತ್ರದ  ಮಹಿಮೇಯೇ ಸರಿ.ಭಕ್ತರ ನಂಬಿಕೆ ಶ್ರದ್ದಾ ಕೇಂದ್ರವಾದ ಸರೋವರ ಕ್ಷೇತ್ರದಲ್ಲಿ  ಮತ್ತೆ ಅವತರಿಸಿದ ಮರಿ ಬಬಿಯ ಕ್ಷೇತ್ರಪಾಲಕನಾಗಿ ಸರೋವರ ಕ್ಷೇತ್ರದಲ್ಲಿ ಮೆರೆದು  ಅನಂತ ಪದ್ಮನಾಭ ಸ್ವಾಮಿಯ ಧೂತನಾಗಿ ಭಕ್ತರನ್ನು ಪೊರೆದು ಸಲಹಲಿ ಎಂಬುದೇ ಭಕ್ತ ಮಹಾಶಯರ ಪ್ರಾರ್ಥನೆ.
 

Category:Spirituality



ProfileImg

Written by Sowmyalatha

0 Followers

0 Following