ಕೆರೆಗೆ ಹಾರದ ಭಾಗೀರಥಿ ಮತ್ತು ತುಳು ಪಾಡ್ದನದ ಕೋಟೆದ ಬಬ್ಬು

ಕನ್ನಡ ತುಳು ಜನಪದ ಕಥೆಗಳು -3

ProfileImg
17 May '24
3 min read


image

ಸಮಾನ ಆಶಯವಿರುವ ಕನ್ನಡ ಖಂಡ ಕಾವ್ಯ ಕೆರೆಗೆ ಹಾರ ಮತ್ತು ಕೋಟೆದ ಬಬ್ಬು  ತುಳು ಪಾಡ್ದನ


ಕೆರೆಗೆ ಹಾರ ಹೆಣ್ಣು ಮಗಳೊಬ್ಬಳು ಕೆರೆ ಬಲಿಯಾದ ದುರಂತ ಕಥೆಯಾದರೆ ಕೋಟೆದ ಬಬ್ಬು ಪಾಡ್ದನವು ಕೆಳವರ್ಗದ ಅನಾಥ ಬಾಲಕನೊಬ್ಬನನ್ನು ನೀರ ದಂಡು ಬಿಡಿಸಲೆಂದು ಬಾವಿಗಿಳಿಸುವ  ದುರಂತ ಕತೆಯನ್ನೊಳಗೊಂಡಿದೆ.


ಕಲ್ಲನಕೇರಿ ಮಲ್ಲನಗೌಡ ಊರ ಹಿತಕ್ಕಾಗಿ ಕಟ್ಟಿಸಿದ ಕೆರೆಯಲ್ಲಿ ಬೊಗಸೆಯಷ್ಟು ನೀರಿರುವುದಿಲ್ಲ. ಆಗ ಜ್ಯೋತಿಷಿಗಳನ್ನು ಕರೆಸಿ ಕೇಳಲು ಕೆರೆ ಹಿರಿಸೊಸೆಯ ಬಲಿ ಕೇಳುತ್ತದೆ ಎನ್ನುತ್ತಾರೆ. ಜ್ಯೋತಿಷಿಗಳು ಹೇಳುವುದು ಹಿರಿಸೊಸೆಯನ್ನು ಕೆರೆಗೆ ಬಲಿ ಕೊಡಬೇಕು ಎಂದು. ಆದರೆ ಕಿರಿಸೊಸೆ ಭಾಗೀರಥಿಯನ್ನು ಕೆರೆಗೆ ಬಲಿ ಕೊಡುವುದೆಂದು ನಿರ್ಧಾರವಾಗುತ್ತದೆ. ಭಾಗೀರಥಿಯ ಗಂಡ ಮಾಲಿಂಗ ದಂಡಿನಲ್ಲಿರುತ್ತಾನೆ. ಆದ್ದರಿಂದ ಭಾಗೀರಥಿಯನ್ನು ಬಲಿ ಕೊಡುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ.
ಭಾಗೀರಥಿ ತಾಯಿ ಮನೆಗೆ ಬರುತ್ತಾಳೆ. ಅಲ್ಲಿ ಅವಳು ನಿರೀಕ್ಷಿಸಿದ ಪ್ರೀತಿ ಅಕ್ಕರೆಗಳು ಸಿಗುವುದಿಲ್ಲ. ಎಂದಿಲ್ಲದ ಭಾಗೀರಥಿ ಇಂದ್ಯಾಕೆ ಬಂದೆಯವ್ವ ಎಂದು ಕೇಳುವಲ್ಲಿ ಮದುವೆ ಮಾಡಿಕೊಟ್ಟ ಮಗಳು ತವರಿಗೆ ಬಂದದ್ದು ಯಾರಿಗೂ ಇಷ್ಟವಾಗಲಿಲ್ಲ ಎಂಬ ಸೂಚನೆ ಸಿಗುತ್ತದೆ. ತನ್ನ ಅತ್ತೆ ಮಾವ ಬೇರೆ ಇಡುತಾರಂತೆ ಎಂದು ಹೇಳಿದಾಗ ಕೂಡ ಯಾಕೆ ಏನು ಎಂದು ವಿಚಾರಿಸುವ ಗೊಡವೆಗೆ ತಂದೆ, ತಾಯಿ ಅಕ್ಕ, ಅಣ್ಣ ಹೋಗುವುದಿಲ್ಲ. ಬದಲಿಗೆ ಹೊಲ ಮನೆ ಇತ್ಯಾದಿ ಕೊಡುತ್ತೇವೆ ಎನ್ನುತ್ತಾರೆ. ಕೊನೆಗೆ ಭಾಗೀರಥಿ ಗೆಳತಿಯಲ್ಲಿ ಸತ್ಯ ಹೇಳುತ್ತಾಳಾದರೂ ಪುರುಷಪ್ರಧಾನ ಸಮಾಜದಲ್ಲಿ ಆ ಗೆಳತಿ ಏನು ಸಹಾಯ ಮಾಡಲು ತಾನೇ ಸಾಧ್ಯ? 
ತವರಿಗೆ ಬಂದರೆ ಗೌರವವಿಲ್ಲ. ಬಲಿ ಹೋಗುವುದನ್ನು ತಡೆಯಲು ಗಂಡ ದಂಡಿನಲ್ಲಿದ್ದಾನೆ. ಆದ್ದರಿಂದ ಭಾಗೀರಥಿ ಕೆರೆ ಆಹಾರವಾಗಲು ಸಿದ್ಧವಾಗುತ್ತಾಳೆ. ಗಂಗಮ್ಮನ ಪೂಜೆಯ ನಂತರ ಎಲ್ಲರೂ ಮೇಲೆ ಬರುತ್ತಾರೆ. ಬೇಕೆಂದೇ ಬಿಟ್ಟು ಬಂದ ಬಂಗಾರದ ಬಟ್ಟಲನ್ನು ತರಲು ಭಾಗೀರಥಿಯನ್ನು ಕಳುಹಿಸುತ್ತಾರೆ. ಅವಳು ನೀರಿಲ್ಲದ ಕೆರೆಗೆ ಇಳಿದು ಬಟ್ಟಲನ್ನು ತೆಗೆದುಕೊಂಡು ಒಂದು ಮೆಟ್ಟಲು ಹತ್ತಿದಾಗ ಅವಳ ಪಾದ ಮುಳುಗುವಷ್ಟು ನೀರು ಬರುತ್ತದೆ. ಎರಡನೇ ಮೆಟ್ಟಿಲು ಹತ್ತಿದಾಗ ಮೊಣಕಾಲು ಮುಳುಗುವಷ್ಟು ನೀರು ಬರುತ್ತದೆ. ಮೂರು ಮೆಟ್ಟಿಲು ಹತ್ತಿದಾಗ ಎದೆ ಮುಳುಗುವಷ್ಟು ನೀರು ತುಂಬುತ್ತದೆ. ನಾಲ್ಕನೆ ಮೆಟ್ಟಿಲು ಹತ್ತುವಾಗ ಪೂರ್ತಿ ಮುಳುಗುವಷ್ಟು ನೀರು ತುಂಬಿ, ಅವಳು ಕೆರೆಗೆ ಆಹಾರವಾಗುತ್ತಾಳೆ.


ಒಂದೊಂದೇ ಮೆಟ್ಟಲು ಹತ್ತಿ ಬರುತ್ತಿದ್ದಂತೆ ನೀರು ಮೇಲೆ ಮೇಲೆ ಬಂದು ಅವಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬಲ್ಲಿ ಅವಳು ಕೆರೆಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನವನ್ನು ನಾವು ಗುರುತಿಸಬಹುದು. ಅವಳು ಸ್ವತಃ ತ್ಯಾಗದಿಂದ ಬಲಿಯಾಗಿಲ್ಲ ಎಂಬುದೂ ಇಲ್ಲಿ ಸ್ಪಷ್ಟವಾಗುತ್ತದೆ. ಅಲ್ಲದೆ ಹಿರಿಸೊಸೆಯ ಬಲಿ ಕೇಳಿದ ಕೆರೆ ಕಿರಿಸೊಸೆಯ ಬಲಿಯನ್ನು ಹೇಗೆ ಒಪ್ಪಿಕೊಳ್ಳುತ್ತದೆ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಮುಂದೆ ಕೆಟ್ಟ ಕನಸನ್ನು ಕಂಡ ಭಾಗೀರಥೀಯ ಗಂಡ ಕೂಡ ಕೆರೆಗೆ ಹಾರಿ ಸಾಯುತ್ತಾನೆ.
ಕೋಟೆದ ಬಬ್ಬು ಕಚ್ಚೂರ ಮಾಲ್ದಿ ಎಂಬ ಅನಾಥ ಹೆಣ್ಣಿಗೆ ಸತ್ಯದಲ್ಲಿ ಹುಟ್ಟಿದ ಮಗ. ಅನಾಥ ಮಗು ಕಚ್ಚೂರ ಮಾಲ್ದಿಯನ್ನು ಸಾಕಿದ ಕೊಡಂಗೆ ಬನ್ನಾರ ಹಾಗೂ ಸಿರಿಕೊಂಡೆ ಒಡತಿಯೇ ಈ ಅನಾಥ ಮಗು ಕೋಟೆದ ಬಬ್ಬುವನ್ನು ಪ್ರೀತಿಯಿಂದ ಸಾಕಿರುತ್ತಾರೆ. ಈ ಬಗ್ಗೆ ಪಾಡ್ದನಗಳಲ್ಲಿ ಪಾಠಾಂತರಗಳಿವೆ

. ಈತ ಅಸಾಮಾನ್ಯ ಸಾಹಸಿ, ಪರಾಕ್ರಮಿ ಈತನನ್ನು ಹೀಗೆ ಬಿಟ್ಟರೆ ಸಂತಾನವಿಲ್ಲದ ದಂಪತಿಗಳಾದ ಸಿರಿಕೊಂಡೆ ಉಳ್ಳಾಲ್ತಿ ಹಾಗೂ ಕೊಡಂಗ ಬನ್ನಾರರ ಬೀಡು ಈತನ ಪಾಲಾಗುತ್ತದೆ. 

ಮುಂದೊಂದು ದಿನ ತಮಗೆ ಸಂಚಕಾರ ಬಂದೀತೆಂದು ವಿಟ್ಲದ ಅರಸು ಮತ್ತು ಮಂಗಳೂರು ಬುದ್ಧಿವಂತ ಈತನನ್ನು ನೀರದಂಡು ಬಿಡಿಸಿಕೊಡಲು ಕಳುಹಿಸಬೇಕೆಂದು ಕೊಡಂಗೆ ಬನ್ನಾರರಿಗೆ ಹೇಳಿ ಕಳುಹಿಸುತ್ತಾರೆ. ಇಲ್ಲಿ ಬಬ್ಬುವನ್ನು ಬಲಿ ಕೊಡುವ ಅಥವಾ ಕೊಲ್ಲುವ ಸೂಚನೆ ದೊರೆಯುತ್ತದೆ.
    ಈಯಾಂಡ್ ಪೋಪಾನೆ ಬಬ್ಬುವೊ ನಿನನ್ ಕಿಚ್ಚಿ ಮಚ್ಚಿರೊಡು
    ದಾನೆ ಮಲ್ಪುವೆರಾಂದ್ ಪೋಡಿಗೆ ಆವೊಂದುಂಡೆಂದೆರ್
    (ನೀನೇನೊ ಹೋಗುತ್ತೀಯಾ ಬಬ್ಬು ನಿನ್ನನು ಹೊಟ್ಟೆಕಿಚ್ಚಿನಿಂದ
    ಏನು ಮಾಡುತ್ತಾರೋ ಎಂದು ಹೆದರಿಗೆ ಆಗುತ್ತದೆ ಎನ್ನುತ್ತಾರೆ)
ಕೊಡಂಗೆ ಬನ್ನಾರರ ಈ ಮಾತಿನಲ್ಲಿ ಬಬ್ಬುವನ್ನು ಬಲಿ ಕೊಡಬಹುದು ಎಂಬ ಸೂಚನೆ ಇದೆ. ನೀರಿಲ್ಲದ ಬಾವಿಗೆ ಬಬ್ಬುವನ್ನು ಇಳಿಸುತ್ತಾರೆ. ಇಲ್ಲಿ ಬಬ್ಬು ನೀರದಂಡನ್ನು ಬಿಡಿಸುತ್ತಾನೆ. ಬಾವಿಯಲ್ಲಿ ನೀರು ತುಂಬುತ್ತದೆ. ಅಷ್ಟರಲ್ಲಿ ಮೇಲಿನಿಂದ ಬಂಡೆಗಲ್ಲು ಹಾಸಿ ರಣಗೋಳಿ ನೆಡುತ್ತಾರೆ ಮೇಲಿನಿಂದ.
    ಅಪಗಾನೆ ನೀರ ಕೊಳಗಾದ್ ದಿಂಜಿಂಡ್
    (ಆಗ ನೀರು ಬಾವಿಯಲ್ಲಿ ತುಂಬಿತು)
    ಗುವೆಲ್‍ದ ಬಾಯಿಗ್ ಆನೆ ಒಯಿಪಾಲ ಹಾಸಿಗಲ್ಲೆ ಹಾಸ ಬುಡ್ಯೆರ್
    ರಣಗೋಳಿ ನೆಡ್ಯೆರ್ ಅಕುಲು ಅಗತ್ತೆರ್
    (ಬಾವಿಯ ಬಾಯಿಗೆ ಆನೆ ಎಳೆಯುವ ಹಾಸುಗಲ್ಲು ಹಾಸಿದರು
    ರಣಗೋಳಿ ನೆಟ್ಟರು ಅವರು)
ಎಂಬಲ್ಲಿ ಇದು ಸ್ಪಷ್ಟವಾಗುತ್ತದೆ.
ಈ ಕಥಾನಕವನ್ನು ಗಮನಿಸುವಾಗ ಬಾವಿಗೆ ಬಬ್ಬುವನ್ನು ಬಲಿಗೊಟ್ಟಿರಬಹುದು ಎನಿಸುತ್ತದೆ. ಇದೇ ಪಾಡ್ದನದಲ್ಲಿ ಹೇಳಿರುವಂತೆ ಹದಿನಾರು ಕಟ್ಟನೆಯಷ್ಟು ಆಳ ತೋಡಿದರು ಬಾವಿಯಲ್ಲಿ ಹುಡಿಮಣ್ಣು ಬಂದದ್ದಲ್ಲದೆ ನೀರಿನ ಒರತೆ ಕಾಣಿಸುವುದಿಲ್ಲ.
    ಪದಿನಾಜಿ ಗಟ್ಟಣೆದ ಗುವೆಲ್‍ಡ್ ಪೊಡಿಮಣ್ಣಿ ಬೈದನತ್ತಾಂದೆ
    ನೀರ ದಂಡ್ ತೆರಿದ್‍ಜಿ
    (ಹದಿನಾರು ಗಟ್ಟನೆಯ ಬಾವಿಯಲ್ಲಿ ಹುಡಿಮಣ್ಣು ಬಂದದ್ದಲ್ಲದೆ 
    ನೀರಿನ ಒರತೆ ತಿಳಿಯಲಿಲ್ಲ)
ಆಗ ತಂತ್ರ-ಮಂತ್ರದ ಬೈದ್ಯರನ್ನು ಕರೆಸುತ್ತಾರೆ. ಕೊಡಂಗೆ ಬನ್ನಾರರ ನೆಲೆಯ ಮುಂಡಾಲರ ಹುಡುಗ ನೀರ ಒರತೆ ಬಿಡಿಸುತ್ತಾನೆ ಎಂಬ ಸುದ್ದಿ ಕೇಳುತ್ತಾರೆ ಎಂದು ಪಾಡ್ದನದಲ್ಲಿ ಹೇಳಿದೆ. ಆದರೆ ಪಾಡ್ದನದಲ್ಲಿ ಈ ಮೊದಲು ನೀರದಂಡು ಬಿಡಿಸಿ ಕೊಡುವ ವಿಚಾರವನ್ನು ಎಲ್ಲೂ ಹೇಳಿಲ್ಲ. ಬಹುಶಃ ಇಲ್ಲಿ ಬಾವಿಗೆ ನರಬಲಿ ಕೊಡಬೇಕು ಎಂಬುದನ್ನು ಹೇಳಿರಬೇಕು. 

ಯಾರನ್ನು ಕೊಡುವುದು? ಎಂದು ಯೋಚಿಸುವಾಗ ಕೊಡಂಗೆ ಬನ್ನಾರರ ಬೀಡಿನಲ್ಲಿರುವ ಅನಾಥ ಹುಡುಗ ಬಬ್ಬುವನ್ನು ಬಲಿ ಕೊಡಲು ನಿರ್ಧರಿಸಿ ಬನ್ನಾರರಿಗೆ ಓಲೆ ಬರೆದು ಆತನನ್ನು ನೀರ ದಂಡು ಬಿಡಿಸಲೆಂದು ಬರಮಾಡಿಕೊಂಡು ಬಾವಿಗಿಳಿಸಿ ಬಲಿ ಕೊಟ್ಟಿರಬಹುದು. 

ಕೆರೆಗೆ ಹಾರದ ಭಾಗೀರಥಿ ನೀರಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಂತೆ, ಇಲ್ಲೂ ಕೂಡ ಬಾವಿಯ ನೀರಿನಿಂದ ಮೇಲೆ ಬರಲು ಬಬ್ಬು ಪ್ರಯತ್ನಿಸಿರಬೇಕು. ಅವನು ಮೇಲೆ ಬಾರದಂತೆ ತಡೆಯಲು ಬಾವಿಗೆ ಅಡ್ಡಲಾಗಿ ಬಂಡೆಗಲ್ಲು ಹಾಸುತ್ತಾರೆ. 

ಅಲ್ಲಿ ಭಾಗೀರಥಿಯನ್ನು ಬಂಗಾರದ ಬಟ್ಟಲು ತರುವಂತೆ ಹೇಳಿ ಉಪಾಯವಾಗಿ ಕೆರೆಗಿಳಿಸಿ ಬಲಿಗೊಟ್ಟರೆ, ಇಲ್ಲಿ ನೀರದಂಡು ಬಿಡಿಸಲೆಂದು ಹೇಳಿ ಉಪಾಯವಾಗಿ ಬಬ್ಬುವನ್ನು ಬಾವಿಗೆ ಇಳಿಸಿ ಬಲಿ ಕೊಡುತ್ತಾರೆ.


ಬಬ್ಬು ಮೇಲೆ ಬಾರದಂತೆ ಹಾಸಿದ ಕಲ್ಲನ್ನು ಮುಂದೆ ತೆರವುಗೊಳಿಸಿದ ಬಗ್ಗೆ ಪಾಡ್ದನದ ಮುಂದಿನ ಭಾಗದಲ್ಲಿ ತಿಳಿಯುತ್ತದೆ. ತನ್ನಿಮಾಣಿಗ ತನ್ನ ಗೆಜ್ಜೆಕತ್ತಿಯಿಂದ ಬಂಡೆಯನ್ನು ಸೀಳಿ ಬಬ್ಬುವನ್ನು ಮೇಲೆತ್ತಿದಂತೆ ಪಾಡ್ದನವು ತಿಳಿಸುತ್ತದೆ. ತಮ್ಮ ಆರಾಧ್ಯ ದೈವಗಳಲ್ಲಿ ಇಂತಹ ಅತಿಮಾನುಷ ಶಕ್ತಿಗಳನ್ನು ಕಾಣುವುದು ತುಳು ಸಂಸ್ಕøತಿಯ ಒಂದು ವಿಶಿಷ್ಟತೆಯೇ ಆಗಿದೆ. ಇಂತಹ ಅತಿಮಾನುಷ  ಸಾಹಸಿಗಳು ದೈವತ್ವಕ್ಕೇರುವುದು ತುಳು ಸಂಸ್ಕøತಿಯಲ್ಲಿ ಸಾಮಾನ್ಯವಾದ ವಿಚಾರ. ಆದ್ದರಿಂದ ಬಬ್ಬು ಹಾಗೂ ತನ್ನಿಮಾಣಿಗ ಇಬ್ಬರೂ ದೈವತ್ವಕ್ಕೇರಿ ಅಣ್ಣ-ತಂಗಿಯರಂತೆ ಆರಾಧಿಸಲ್ಪಡುತ್ತಿದ್ದಾರೆ. 

 ಕೆರೆಗೆ ಹಾರದಲ್ಲಿ ಭಾಗೀರಥಿಯನ್ನು ಬಲಿಗೊಟ್ಟಂತೆ, ಬಾವಿಯಲ್ಲಿ ನೀರ ಸೆಲೆ ಕಾಣದಾದಾಗ  ಕೋಟೆ-ಕೊತ್ತಳಗಳನ್ನು ಕಟ್ಟಿಸುವಾಗ, ಕೆರೆ-ಬಾವಿಗಳನ್ನು ತೋಡುವಾಗ ನರಬಲಿ ಕೊಡುತ್ತಿದ್ದ ಬಗ್ಗೆ ತುಳುನಾಡಿನಲ್ಲಿ ಅನೇಕ ಐತಿಹ್ಯಗಳು ಪ್ರಚಲಿತವಾಗಿವೆ.

ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು  ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಂಗಳೂರು 

Category:Stories



ProfileImg

Written by Dr Lakshmi G Prasad

Verified