1 ಕಾಜಾರ್ ಕುಲೆ
2 ಕಾಜಿ ಮದಿಮಾಲ್ ಕುಲೆ
3 ಕುಲೆ ನಾಗ.
4 ಕುಲೆ ಬಂಟ
5 :ಕುಲೆ ಬಂಟೆತ್ತಿ
6 ಕುಲೆ ಮಾಣಿ
7 ಕುಲೆ ಮಾಣಿಗ
8 ಕೊಲೆ ಭೂತ.
9 ಜತೆ ಕುಲೆ
10 ಪಾತ್ರಿ ಕೊಲೆ
11 ಪಾದೆ ಕಲ್ಲು ಮದಿಮ್ಮಾಳ್ ಕೊಲೆ ಭೂತ
12 ಬೊಳ್ಳೆ
13 ಮದಿಮಾಲ್ ಕುಲೆ
14 ಕುರವನ ಮಾಮಿ
ತುಳುವರ ಕುಲೆ ಕನ್ನಡದ ಕೊಲೆ /ದೆವ್ವ ಅಲ್ಲ .ಆದರೆ ತುಳುವರ ಕುಲೆಯನ್ನು ಕೊಲೆ/ದೆವ್ವ ಎಂದು ಅರ್ಥೈಸಿದ್ದರಿಂದ ನಾವು ಕೂಡಾ ಚಿಕ್ಕಂದಿನಲ್ಲಿ ಕುಲೆಗೆ ತುಂಬಾ ಹೆದರುತ್ತಿದ್ದೆವು .ನಾವು ಎಲ್ಲಾದರು ಒಬ್ಬಂಟಿಯಾಗಿ ನಿರ್ಜನ ಪ್ರದೇಶದಲ್ಲಿ ಹೋದರೆ ಕುಲೆ ಕಲ್ಲು ಬಿಸಾಡುತ್ತದೆ ಎಂದು ಭಾವಿಸಿದ್ದೆವು .ಎಲ್ಲಾದರು ಹೋಗಿ ಬರುವಾಗ ಏನೋ ಸದ್ದು ಕೇಳಿ ಹೆದರಿ ಜ್ವರ ಬಂದರೆ ಅದು ಕುಲೆ ಮರಳು ಬಿಸಾಡಿದ್ದು ಎಂದು ಭಾವಿಸಿ ಹಿರಿಯರು ಓಕುಳಿ ನೀರು ಹಾಕಿ ಸ್ನಾನ ಮಾಡಿಸುತ್ತಿದ್ದರು. ಸ್ನಾನದ ನಂತರ ಹಂಡೆಯಲ್ಲಿ ಉಳಿದ ನೀರನ್ನು ಪರಿಶೀಲಿಸುವಾಗ ಅಡಿಯಲ್ಲಿ ಸ್ವಲ್ಪ ಮರಳು ಇದ್ದರೆ "ನೋಡಿ ಇದು ಕುಲೆಯದ್ದೆ ಉಪದ್ರ ಅದು ಬಿಸಾಡಿದ ಮರಳು ಇಲ್ಲಿದೆ ನೋಡಿ ಇನ್ನು ಒಬ್ಬೊಬ್ಬರು ಅಲ್ಲಿ ಇಲ್ಲಿ ಹೋಗಬೇಡಿ "ಎಂದು ನಮ್ಮನ್ನು ಹಿರಿಯರು ಗದರುತ್ತಿದ್ದರು. ನಾವು ತುಳುವರ ಕುಲೆಯನ್ನು ದೆವ್ವ ಎಂದು ತಪ್ಪಾಗಿ ಭಾವಿಸಿದ್ದೆವು.
ಆದರೆ ತುಳುವರ ಕುಲೆ ಕನ್ನಡದ ದೆವ್ವವಲ್ಲ ಅದೊಂದು ನಮ್ಮ ಹಿತವನ್ನು ಬಯಸುವ ನಮ್ಮ ಹಿರಿಯರ ಆತ್ಮ. ಗತಿಸಿದ ಆತ್ಮಗಳನ್ನು ತುಳುವಿನಲ್ಲಿ ‘ಕುಲೆ' ಎಂದು ಕರೆಯುತ್ತಾರೆ ಆದರೂ ಅದು ತೊಂದರೆ ಕೊಡುವ ದೆವ್ವವಲ್ಲ. ತುಳುವರಲ್ಲಿ ಕುಲೆ ಎನ್ನುವುದೊಂದು ವಿಶಿಷ್ಟ ಶಕ್ತಿ, ಅದು ಗತಿಸಿದ ಆತ್ಮ ಮಾತ್ರ ಅಲ್ಲ . ಅದು ತನ್ನ ಕುಟುಂಬದವರ ಹಿತವನ್ನ ಸಾಧಿಸುವ ಅಲೌಕಿಕ ಶಕ್ತಿ ಕೂಡಾ. ಕುಲೆ ಪತ್ತುನೆ (ಕುಲೆ ಹಿಡಿಯುವುದು) ಎಂದರೆ ಗತಿಸಿದ ಆತ್ಮವು ಯಾವುದಾದರೊಂದು ವ್ಯಕ್ತಿಯ ಮೈಮೇಲೆ ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ಕೂಡ ತುಳುನಾಡಿನಲ್ಲಿ ಪ್ರಚಲಿತವಿದೆ. ಕುಲೆಗಳಿಗೆ ಮದುವೆ ಮಾಡುವ ವಿಶಿಷ್ಟ ಸಂಪ್ರದಾಯ ಕೂಡ ಇಲ್ಲಿ ಪ್ರಚಲಿತವಿದೆ. ಅದೇ ರೀತಿ ತುಳು ನಾಡಿನ ಕುಲೆಗಳು ದೈವತ್ವಕ್ಕೇರಿ ‘ಕುಲೆ ಭೂತ'ವಾಗಿ ಆರಾಧಿಸಲ್ಪಡುತ್ತವೆ .
ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ. ಇಲ್ಲಿ ಆರಾಧಿಸಲ್ಪಡುವ ಭೂತಗಳು ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಶಕ್ತಿಗಳು. ತುಳುನಾಡಿನ ಆರಾಧ್ಯ ದೇವರುಗಳು ಇವರು. ತುಳುವಿನಲ್ಲಿ ಪ್ರಚಲಿತವಿರುವ ‘ಭೂತ' ಶಬ್ದಕ್ಕೆ ಕನ್ನಡದ ‘ಭೂತ' ಪದದ ಅರ್ಥವಿಲ್ಲ. ಸಂಸ್ಕೃತದ ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಪೂತೊ<ಬೂತೊ<ಭೂತೊ ಆಗಿರಬಹುದು. ಅಥವಾ ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಗತಕಾಲದಲ್ಲಿ ಬಾಳಿ ಬದುಕಿ ದೈವತ್ವಕ್ಕೇರಿದವರೇ ಆಗಿದ್ದಾರೆ. ಆದ್ದರಿಂದ ಭೂತಕಾಲದಲ್ಲಿ (ಹಿಂದೆ) ಇದ್ದವರು ಎಂಬರ್ಥದಲ್ಲಿ ‘ಭೂತ' ಪದ ಬಳಕೆಗೆ ಬಂದಿರಬಹುದು. ಏನೇ ಆದರೂ ತುಳುವಿನ ‘ಭೂತ' ಜನರಿಗೆ ಕಿರುಕುಳ ಕೊಡುವ, ಜನರನ್ನು ಹೆದರಿಸುವ ಕೆಟ್ಟ ಶಕ್ತಿಯಲ್ಲ. ಇಲ್ಲಿ ಭೂತ ಎನ್ನುವುದು ದೇವತಾವಾಚಿ ಪದವಾಗಿದೆ.ಇದೆ ರೀತಿ ಇಲ್ಲಿ ಕುಲೆ ತಮ್ಮ ಕುಟುಂಬದವರ ಹಿತ ಕಾಯುವ ಅಲೌಕಿಕ ಶಕ್ತಿ
ನಾನು ನನ್ನ ಪಿ. ಎಚ್. ಡಿ ಪದವಿಯ ಸಂಶೋಧನಾ ನಿಬಂಧ ಸಿದ್ದತೆಗಾಗಿ ಕಂಬಳ ಕೋರಿ ನೇಮವನ್ನು ರೆಕಾರ್ಡ್ ಮಾಡಲು ನಡಿಬೈಲು ಗುತ್ತಿಗೆ ಹೋಗಿದ್ದೆ. ಸಂಜೆ ಹೊತ್ತು ಪೂಕರೆ ನೆಡುವ ಸಂದರ್ಭದಲ್ಲಿ ನಾಗಬ್ರಹ್ಮ ಎರು ಬಂಟ ಭೂತಗಳ ಕೋಲ ಮುಗಿದು ರಾತ್ರಿ ಊಟದ ನಂತರ ಕಂಬಳ ಕೋರಿ ನೇಮದ ಅಂಗವಾಗಿ ಒಂಜಿ ಕುಂದು ನಲ್ಪ( ೩೯ ), ಭೂತಗಳಿಗೆ ಕೋಲ ನೀಡಿ ಆರಾಧಿಸುತ್ತಾರೆ .ಈ ಸಮೂಹ ಭೂತಾರಾಧನೆಯ ಆರಂಭದಲ್ಲಿ ಕುಲೆ ಮಾಣಿ ಎಂಬ ಭೂತಕ್ಕೆ ಆರಾಧನೆ ಇತ್ತು .ಆ ತನಕ ನನಗೆ ಕುಲೆಗೆ ಭೂತದ ರೂಪದಲ್ಲಿ ಆರಾಧನೆ ಇದ್ದುದು ತಿಳಿದಿರಲಿಲ್ಲ ಹಾಗಾಗಿ ಕುಲೆ ಮಾಣಿ ಎಂಬ ಭೂತಕ್ಕೆ ಆರಾಧನೆ ಇದ್ದ ಬಗ್ಗೆ ನನಗೆ ನಂಬಿಕೆ ಬರಲಿಲ್ಲ ಅದಕ್ಕೆ ಸರಿಯಾಗಿ ಅಲ್ಲಿ ಮನೆಯ ಯಜಮಾನರಿಗಾಗಲೀ ಭೂತ ಕಟ್ಟಿದ ಕಲಾವಿದರಿಗಾಗಲೀ ಕುಲೆ ಮಾಣಿ ಎಂಬ ಭೂತದ ಹೆಸರು ಬಿಟ್ಟರೆ ಬೇರೆ ಏನೊಂದೂ ಮಾಹಿತಿ ತಿಳಿದಿರಲಿಲ್ಲ! ಇದರಿಂದಾಗಿ ಕುಲೆ ಮಾಣಿ ಭೂತದ ಅಸ್ತಿತ್ವದ ಬಗ್ಗೆ ನನಗೆ ತುಸು ಸಂಶಯ ಉಂಟಾಗಿತ್ತು!ಆದ್ದರಿಂದ ಅಲ್ಲಿ ರೆಕಾರ್ಡ್ ಮಾಡಿ ಬಂದ ದಿವಸವೇ ಡಾ || ಚಿನ್ನಪ್ಪ ಗೌಡರ ಭೂತಾರಾದನೆ -ಒಂದು ಅಧ್ಯಯನ (ಪಿ ಎಚ್ ಡಿ ಮಹಾ ಪ್ರಬಂಧ ) ಪುಸ್ತಕವನ್ನು ತೆರೆದು ನೋಡಿದೆ .ಅವರು ನೀಡಿದ ಭೂತಗ ಪಟ್ಟಿಯಲ್ಲಿ ಕುಲೆ ಭೂತದ ಹೆಸರು ಇತ್ತು .ಹಾಗಾಗಿ ಕುಲೆಮಾಣಿ ಎಂಬ ಭೂತಕ್ಕೆ ಆರಾಧನೆ ಇರುವುದು ಸತ್ಯ ಎಂದು ನನಗೆ ಮನವರಿಕೆಯಾಯಿತು. ಆದರೆ ಕುಲೆ ಭೂತದ ಬಗ್ಗೆ ಆ ಕೃತಿಯಲ್ಲಿ ಮಾಹಿತಿ ಇರಲಿಲ್ಲ .ಹಾಗಾಗಿ ನಾನೇ ಕುಲೆ ಭೂತದ ಬಗ್ಗೆ ಕ್ಷೇತ್ರ ಕಾರ್ಯ ಮಾಡಿ ಮಾಹಿತಿ ಸಂಗ್ರಹಿಸಿದೆ .ಕುಲೆ ಮಾಣಿ, ಕುಲೆ ಮಾಣಿಗ, ಜತೆಕುಲೆ, ಗುರುಕಾರ್ನೂರು,ಕಚ್ಚೆ ಭಟ್ಟ ಮೊದಲಾದ ಕೆಲವು ಕುಲೆ ಭೂತಗಳಿಗೆ ಆರಾಧನೆ ಇರುವುದನ್ನು ಪತ್ತೆ ಹಚ್ಚಿ ರೆಕಾರ್ಡ್ ಮಾಡಿದ್ದೇನೆ
ತುಳುವಿನ ‘ಕುಲೆ'ಗೆ ಸಂವಾದಿಯಾಗಿ ಕನ್ನಡದ ‘ಕೊಲೆ' ಶಬ್ದವನ್ನು ಬಳಸುತ್ತಾರೆ. ಆದರೆ ಕನ್ನಡದ ಕೊಲೆ ಶಬ್ದಕ್ಕೆ ಪ್ರೇತಾತ್ಮ, ಅತೃಪ್ತ ಆತ್ಮ ಎನ್ನುವ ಅರ್ಥವಿದೆ. ಆದರೆ ತುಳುವಿನ ‘ಕುಲೆ' ಗೆ ಗತಿಸಿದ ಆತ್ಮ ಎಂದು ಹೇಳುವುದಾದರೂ ಇಲ್ಲಿ ‘ಕುಲೆ' ಪವಿತ್ರವಾದದ್ದು. . "ವೈದಿಕೇತರ ತುಳುವರ ಪರಿಕಲ್ಪನೆಯಲ್ಲಿ ಸತ್ತ ತರುವಾಯದ ಜಗತ್ತಿನಲ್ಲಿ ಕುಲೆ ಮತ್ತು ಪ್ರೇತಾತ್ಮರು ಒಂದೆ ಅಲ್ಲ. ಅವರ ಪ್ರಕಾರ ಸತ್ತವರು ಸಂಸಾರ ಕರ್ಮಗಳಿಂದ ಸಂಸ್ಕರಿಸಲ್ಪಡದಿದ್ದರೆ ಅವರು ಪ್ರೇತಾತ್ಮರು. ಸಂಸ್ಕರಿಸಲ್ಪಟ್ಟು ಸದ್ಗತಿ ಹೊಂದಿದರೂ ಕೂಡಾ ಅವರು ನಮ್ಮೊಂದಿಗಿದ್ದು ನಮ್ಮ ಸಕಲಕ್ಕೂ ಕಾರಣಕರ್ತರಾಗಿರುವ ಆ ಹಿರಿಯರು ಗುರುಕಾರ್ಣೂರರು ಅಥವಾ ಕುಲೆಗಳಾಗಿರುತ್ತಾರೆ. ಇವರಿಗೆ ವಾರ್ಷಿಕಾವರ್ತನದಲ್ಲಿ ಅಗೆಲು ಕೊಟ್ಟು ಆರಾಧಿಸುವ ಕ್ರಮ, ದೈವಾರಾಧನೆಯ ಉಪಾಂಗವಾಗಿ ಪ್ರತ್ಯೇಕವಿದೆ." ಎಂದು ಡಾ| ಪೂವಪ್ಪ ಕಣಿಯೂರು ಹೇಳಿದ್ದಾರೆ. (ಮೌಖಿಕ ಸಂಕಥನ ೨೦೦೯, ತರಂಗಿಣಿ ಪ್ರಕಾಶನ ಸುಳ್ಯ, ಪುಟ ೫೮, ಡಾ| ಪೂವಪ್ಪ ಕಣಿಯೂರು).
ತುಂಡು ಭೂತಗಳ ಕುರಿತು ಚರ್ಚಿಸುತ್ತಾ "ಉಡುಗೆ ತೊಡುಗೆ ಕ್ರಿಯೆ ಇತ್ಯಾದಿಗಳನು ಲಕ್ಷಿಸಿದರೆ ತುಂಡು ಭೂತಗಳಲ್ಲಿ ಕೆಲವು ಭೂತಗಳೆಂಬ ಸ್ಥಾನಮಾನಕ್ಕೆ ಏರದೆ ಇನ್ನೂ ‘ಕುಲೆ'ಯ ಸ್ಥಿತಿಯಲ್ಲಿ ಇರುವಂತೆ ತೋರುತ್ತದೆ. ಪ್ರೇತಾರಾಧನೆಗೂ ಭೂತಾರಾಧನೆಗೂ ಸಂಬಂಧವಿದ್ದು ಅನೇಕ ಭೂತಗಳು ‘ಕುಲೆ'ಯ ಸ್ಥಿತಿಯನ್ನು ದಾಟಿದ ಬಳಿಕವೇ ಭೂತತ್ವವನ್ನು ಹೊಂದಿರುವುದಾಗಿದೆ. ಇಂದು ಭೂತಗಳ ವಿಕಾಸಪಥದ ಒಂದು ಅವಸ್ಥೆಯೂ ಅಹುದು. ಕೆಲವು ಕುಲೆಗಳು ಭೂತಸ್ಥಿತಿಗೆ ದಾಟದೆ ಇನ್ನೂ ಕುಲೆಯ ರೂಪದಲ್ಲೆ ಕಾಣಿಸಿಕೊಳ್ಳುತ್ತದೆ. ಕುಲೆಮಾಣಿಗ, ಕುಲೆ ಬಂಟೆತ್ತಿ, ಜತೆಕುಲೆ, ಬ್ರಾಣ ಕುಲೆ, ಗುರು ಕಾರ್ನೂರು ಮೊದಲಾದ ಕುಲೆಗಳು ಪರಿಷ್ಕೃತ ಪ್ರೇತಗಳೇ ಆಗಿವೆ' ಎಂದು ಡಾ|| ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.ಕೆಲೆವಡೆ ಪ್ರೇತ ಕೋಲ ಎಂಬ ಆರಾಧನ ಪದ್ಧತಿ ಪ್ರಚಲಿತವಿದೆ .
ತುಳುವರು ಗತಿಸಿದ ತಮ್ಮ ಕುಟುಂಬದ ಹಿರಿಯರ ಆತ್ಮಗಳಿಗೆ ಅಗೆಲು ನೀಡಿ ಅರಾಧಿಸುವುದನ್ನೇ ‘ಕುಲೆಕ್ಕು ಬಳಸುನೆ' ಎನ್ನುತ್ತಾರೆ. ಇಲ್ಲಿ ಆರಾಧಿಸಲ್ಪಡುವ ಹಿರಿಯರ ಆತ್ಮಗಳನ್ನು ‘ಕುಲೆ' ಎಂದು ಕರೆಯಲಾಗಿದೆ.
ಆದರೆ ಎಲ್ಲ ಕುಲೆಗಳು (ಗತಿಸಿದ ಆತ್ಮಗಳು) ದೈವತ್ವಕ್ಕೇರಿ ‘ಭೂತ'ದ ನೆಲೆಯಲ್ಲಿ ಆರಾಧಿಸಲ್ಪಡುವುದಿಲ್ಲ. ಆದರೂ ಕುಲೆಗಳು ದೈವತ್ವಕ್ಕೇರುವ ಪ್ರಕ್ರಿಯೆ ತುಳುನಾಡಿನಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಕುಲೆಗಳ ಆರಾಧನೆ ಭೂತಾರಾಧನೆಯ ರೀತಿಯಲ್ಲಿ ಆರಂಭವಾಗಿದೆ. ಕುಲೆ ಭೂತೊ, ಕುಲೆ ಮಾಣಿಗ, ಕಚ್ಚೆ ಭಟ್ಟ, ಬ್ರಾಣ ಕುಲೆ, ಗುರು ಕಾರ್ನೂರು, ಜತೆ ಕುಲೆಗಳು ದೈವತ್ವಕ್ಕೇರಿ ಭೂತದ ನೆಲೆಯಲ್ಲಿ ಆರಾಧನೆಯನ್ನು ಹೊಂದುವ ಕುಲೆ ಭೂತಗಳಾಗಿವೆ. ಕುಲೆ ಭೂತಗಳ ಆರಾಧನೆಯಲ್ಲಿ ಪಿತೃ ಆರಾಧನೆ ಹಾಗೂ ಭೂತಾರಾಧನೆ ಎರಡೂ ಸಮನ್ವಯಗೊಂಡಿದೆ.
೧. ಕುಲೆ ಭೂತೊ :
ಪುತ್ತೂರು ಪರಿಸರದಲ್ಲಿ ಕುಲೆ ಭೂತಕ್ಕೆ ಬಿಳಿ ಬಟ್ಟೆಯ ಅಲಂಕಾರವಿರುತ್ತದೆ. ಆದ್ದರಿಂದ ಇಲ್ಲಿ ಕುಲೆಭೂತವನ್ನು ‘ಬೊಲ್ಲೆ' ಎಂದು ಕರೆಯುತ್ತಾರೆ. ಕಾಸರಗೋಡಿನ ಮೀಯಪದವು, ಮದಂಗಲ್ಲು, ನಡಿಬೈಲು ಮೊದಲಾದೆಡೆಗಳಲ್ಲಿ ‘ಕುಲೆ ಪೆರ್ಗಡೆ' ಎಂಬ ಭೂತವನ್ನು ಆರಾಧಿಸುತ್ತಾರೆ. ಕಂಬಳ ಕೋರಿಯಂದು ಒಂಜಿ ಕುಂದ ನಲ್ಪ ಭೂತೊಳೆ ನೇಮ (ಒಂದು ಕಡಿಮೆ ನಲ್ವತ್ತು ಭೂತಗಳ ನೇಮ) ಎಂಬ ಹೆಸರಿನಲ್ಲಿ ಮೂವತ್ತೊಂಭತ್ತು ಭೂತಗಳಿಗೆ ಸಮೂಹದಲ್ಲಿ ಆರಾಧನೆ ಸಲ್ಲಿಸುತ್ತಾರೆ. ಕಂಬಳ ಕೋರಿ ನೇಮದ ಆರಂಭದಲ್ಲಿಯೇ ‘ಕುಲೆ ಪೆರ್ಗಡೆ' ಭೂತಕ್ಕೆ ಆರಾಧನೆ ಇರುತ್ತದೆ. ‘ಕುಲೆ ಪೆರ್ಗಡೆ' ಎಂದು ಹೇಳಿದ್ದರೂ ಕೂಡ ಈ ಭೂತ ಸ್ತ್ರೀ ದೈವವೆಂದು ಪರಿಗಣಿಸಲ್ಪಟ್ಟಿದೆ.
‘ಕುಲೆ ಪೆರ್ಗಡೆ'ಯ ಪಾಡ್ದನವಾಗಲೀ ಹಿನ್ನೆಲೆಯಾಗಲೀ, ಐತಿಹ್ಯವಾಗಲೀ ಲಭ್ಯವಾಗಿಲ್ಲ. ಕುಲೆಭೂತದ ಕೈಗೊಂದು ಕೋಲನ್ನು, ಚಾಮರವನ್ನೂ ನೀಡುತ್ತಾರೆ. ಕಪ್ಪು ಬಣ್ಣದಲ್ಲಿ ಬಿಳಿ ಚುಕ್ಕಿಗಳ ಮುಖವರ್ಣಿಕೆ ಇರುತ್ತದೆ. ತೆಂಗಿನ ತಿರಿಯ ಸರಳ ಅಲಂಕಾರ ಇರುತ್ತದೆ.
೨. ಕುಲೆ ಮಾಣಿಗ :
ಕುಲೆ ಮಾಣಿಗ ಭೂತವನ್ನು ‘ಕುಲೆ ಬಂಟೆತ್ತಿ' ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಂಟೆತ್ತಿ ಎಂಬುದು ಸೇವಕಿ ಎಂಬರ್ಥದಲ್ಲಿ ಬಳಕೆಯಾಗಿದೆ. ಪ್ರಚಲಿತ ಐತಿಹ್ಯವೊಂದರ ಪ್ರಕಾರ ತುಳುವ ಸಮಾಜದಲ್ಲಿ ಪ್ರಚಲಿತವಿದ್ದ ಕಟ್ಟುಕಟ್ಟಳೆಗೆ ಬಲಿಯಾಗಿ ದುರಂತವನ್ನಪ್ಪಿದ ಹೆಣ್ಣು ಮಗಳೊಬ್ಬಳು ದೈವತ್ವಕ್ಕೇರಿ ‘ಕುಲೆ ಮಾಣಿಗ' ದೈವವಾಗಿ ಆರಾಧನೆ ಪಡೆಯುತ್ತಾಳೆ. ತುಳುನಾಡಿನಲ್ಲಿ ಮದುವೆಗೆ ಮೊದಲು ಮೈನೆರೆದ ಹೆಣ್ಣು ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲು ಕಟ್ಟಿ ಬೆತ್ತಲಾಗಿಸಿ ಕಾಡಿನಲ್ಲಿ ಬಿಟ್ಟು ಬರುವ ಪದ್ಧತಿ ಪ್ರಚಲಿತವಿತ್ತು. ಈ ಬಗ್ಗೆ ದೇಯಿ ಬೈದ್ಯೆತಿ, ಮಧುರಗೆ ಮದಿಮ್ಮಾಳು ಪಾಡ್ದನಗಳಲ್ಲಿ ಆಧಾರ ಸಿಗುತ್ತದೆ. ಅಂತೆಯೇ ಮದುವೆಗೆ ಮೊದಲು ಮೈ ನೆರೆದ ಬ್ರಾಹ್ಮಣ ಹುಡುಗಿಯೊಬ್ಬಳನ್ನು ಬೆತ್ತಲಾಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ. ಮೂರ್ತೆಗೆಂದು ಬಂದ ಬಿಲ್ಲವನೋರ್ವ ಕಾಡಿನಲ್ಲಿ ಬೆತ್ತಲೆಯಾಗಿದ್ದ ಅವಳನ್ನು ಕಂಡು ಅತ್ಯಾಚಾರವೆಸಗುತ್ತಾನೆ. ಆಗ ಆ ಹೆಣ್ಣು ಮಗಳು ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅನಂತರ ಅವಳ ಆತ್ಮ ಆ ಬಿಲ್ಲವನ ಮನೆ ಮಂದಿಗೆ ತೊಂದರೆ ಕೊಡಲಾರಂಭಿಸುತ್ತದೆ. ಆಗ ಅವಳನ್ನು ‘ಕುಲೆ ಮಾಣಿಗ' ಎಂಬ ಹೆಸರಿನಲ್ಲಿ ನೇಮ ನೀಡಿ ಆರಾಧಿಸಿ ಶಾಂತಗೊಳಿಸಲಾಯಿತು ಎಂಬ ಐತಿಹ್ಯ ಕೆಯ್ಯೂರು - ಮಾಡಾವು ಪರಿಸರದಲ್ಲಿ ಪ್ರಚಲಿತವಿದೆ. ಕುಲೆ ಬಂಟೆತ್ತಿ / ಕುಲೆ ಮಾಣಿಗ ದೈವವು ಸೀರೆ ಉಟ್ಟು ಮಾನವ ಸಹಜ ವೇಷಭೂಷಣದಲ್ಲಿ ಇರುತ್ತದೆ. ಕೈಯಲ್ಲಿ ಒಂದು ತಟ್ಟೆಯಲ್ಲಿ ಅಥವಾ ಬಾಳೆ ಎಲೆಯಲ್ಲಿ ಅಕ್ಕಿ ಹಾಕಿ ದೀಪ ಹಿಡಿದಿರುತ್ತದೆ. ಕೈಯಲ್ಲಿ ದೀಪ ಹಿಡಿದಿರುವುದರಿಂದ ಈ ಭೂತವನ್ನು ‘ದೀಪದ ಮಾಣಿ' ಎಂದು ಕೂಡ ಕರೆಯುತ್ತಾರೆ. ದುರಂತವನ್ನಪ್ಪಿದವರು ದೈವತ್ವಕ್ಕೇರಿ ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವೇ ಆಗಿದೆ. ಅಂತೆಯೇ ದುರಂತವನ್ನಪ್ಪಿದ ಹೆಣ್ಣು ಮಗಳು ‘ಕುಲೆ ಮಾಣಿಗ' ಎಂಬ ಹೆಸರಿನಿಂದ ದೈವತ್ವಕ್ಕೇರಿ ಆರಾಧಿಸಲ್ಪಡುವುದು ಇಲ್ಲಿ ಕಂಡು ಬರುತ್ತದೆ.
೩. ಜತೆ ಕುಲೆ :
ಎರಡು ದೈವಗಳನ್ನು ಒಟ್ಟಿಗೆ ಜತೆ ಕುಲೆ ಎಂದು ಕರೆದು ಕೋಲ ನೀಡಿ, ತಂಬಿಲ ನೀಡಿ ಆರಾಧಿಸುವ ಪದ್ಧತಿ ಗುತ್ತಿಗಾರಿನ ಮೊಗ್ರಾಲ್ ಹಾಗೂ ಮಡಪ್ಪಾಡಿಗಳಲ್ಲಿ ಪ್ರಚಲಿತವಿದೆ. ಜತೆ ಕುಲೆಗಳಿಗೆ ವಿಶೇಷವಾದ ವೇಷಭೂಷಣ ಏನೂ ಇರುವುದಿಲ್ಲ. ಇಬ್ಬರು ವ್ಯಕ್ತಿಗಳು ತಲೆಗೆ ಅಂಗವಸ್ತ್ರವನ್ನು ಹೊದೆದುಕೊಂಡು ಕುಲೆಗಳಾಗಿ ಅಭಿನಯಿಸುತ್ತಾರೆ. ಕರಿಯಣ್ಣ ನಾಯಕ ಅಥವಾ ಬಚ್ಚನಾಯಕರೊಂದಿಗೆ ಜತೆಕುಲೆಗಳಿಗೆ ಇಲ್ಲಿ ಆರಾಧನೆ ಸಲ್ಲಿಸುತ್ತಾರೆ. ಕುಲೆಗಳಿಗೆ ತಂಬಿಲವನ್ನು ಕುಚ್ಚಿಲಕ್ಕಿಯ ಸಪ್ಪೆ ಕಡುಬನ್ನು ನೀಡಿ ಸಲ್ಲಿಸುತ್ತಾರೆ
ಆರಾಧನೆಯ ಸಂದರ್ಭದಲ್ಲಿ ಕುಲೆಗಳನ್ನು ಉಳ್ಳಾಕುಲುಗಳ ಜೊತೆ ಸೇರಿಕೊಳ್ಳಿ ಎನ್ನುತ್ತಾರೆ.
"ಬಾರೆಲೆ ಕುಲೆಕುಲೆ ಬಾರೆಲೆ ಕುಲೆಕುಲೆ
ಪದ್ರಾಡೊಕ್ಕೆಲು ಸ್ಥಾನೊಗು ಬಾರೆಲೆ
ಕೂಡೊನುಲೆ ಕುಲೆಕುಲೆ
ಉಳ್ಳಾಕುಲೆ ಬಲತ್ತೊಟ್ಟುಗು ಕೂಡೊನುಲೆ
ಬಾರೆಲೆ ಕುಲೆಕುಲೆ ಉಳ್ಳಾಕುಲೆ ಸ್ಥಾನೊಗು ಬಾರೆಲೆ
ಬಾರೆಲೆ ಕುಲೆಕುಲೆ ಉಳ್ಳಾಕುಲು ಸ್ಥಾನೊಡು ಬಾರೊನುಲೆ"
"ಬಾಳಿರಿ ಕುಲೆಗಳೆ ಬಾಳಿರಿ ಕುಲೆಗಳೆ
ಹನ್ನೆರಡೊಕ್ಕೆಲು ಸ್ಥಾನಕ್ಕೆ ಬನ್ನಿರಿಸೇರಿಕೊಳ್ಳಿರಿ ಕುಲೆಗಳೆ
ಉಳ್ಳಾಕುಲುಗಳ ಬಲದೆಡೆಯಲ್ಲಿ ಸೇರಿಕೊಳ್ಳಿರಿ
ಬಾಳಿರಿ ಕುಲೆಗಳೆ ಉಳ್ಳಾಕುಲು ಸ್ಥಾನಕ್ಕೆ ಬನ್ನಿರಿ:
ಆ ನಂತರ ಬಂದ ಕುಲೆಗಳು ಪೂಜಾರಿಯಲ್ಲಿ ಆಹಾರ ಕೇಳುತ್ತವೆ.
"ಸ್ಥಾನತ ಪೂಜಾರಿಯೇ
ಪೂಜಾರಿ ಬಂಜಿ ಗುಡುಗುಡು ಪಣ್ಪುಂಡು"
"ಸ್ಥಾನದ ಪೂಜಾರಿಯೇ
ಪೂಜಾರಿ ಹೊಟ್ಟೆ ಹಸಿವಿನಿಂದ ಗುಡುಗುಡು ಎನ್ನುತ್ತಿದೆ"
ಎಂದು ಕುಲೆಗಳು ಕೇಳಿದಾಗ
"ಚಪ್ಪೆ ಅರಿತ ಪುಂಡಿ ಪರ್ಪುದ ಪರಂದ್
ತಿನ್ನೊಂದು ಪೋಲೆ
ಕಂಡದ ಗಡಿ ಕಡಪ್ಪುನಗ
copy rights reserved at author Dr laxmi g prasad
ಡುರ್ರೊಂದು ಪೋವಡು ಕುಲೆಕುಲೆ"
"ಸಪ್ಪೆ ಅಕ್ಕಿಯ ಕಡುಬು ಪರ್ಪು (?) ಹಣ್ಣು
ತಿಂದುಕೊಂಡು ಹೋಗಿರಿ
ಗದ್ದೆಯ ಗಡಿ ದಾಟುವಾಗ
ಡುರ್ರೆಂದು ಹೋಗಿ ಕುಲೆಗಳೆ"
ಹೊಟ್ಟೆ ತುಂಬ ತಿಂದುಕೊಂಡು ತೃಪ್ತಿಯಿಂದ ಡುರ್ರೆಂದು ತೇಗಿಕೊಂಡು ಹೋಗಬೇಕೆಂದು ಕುಲೆಗಳಲ್ಲಿ ವಿನಂತಿ ಮಾಡುತ್ತಾರೆ. ಉಳ್ಳಾಕುಲುಗಳ ಇಬ್ಬರು ಭಕ್ತರು ಆರಾಧನೆಯ ಸಂದರ್ಭದಲ್ಲಿ ಮರಣವನ್ನುಪ್ಪುತ್ತಾರೆ. copy rights reserved at author Dr laxmi g prasadಅವರೇ ಕುಲೆಗಳು. ಅವರು ಮುಂದೆ ಉಳ್ಳಾಕುಲುಗಳ ಸೇರಿಗೆಯಲ್ಲಿ ಸಂದು ಹೋಗಿ ಜತೆಕುಲೆಗಳೆಂಬ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ ಎಂದು ಐತಿಹ್ಯ ಮಡಪ್ಪಾಡಿ ಪರಿಸರದಲ್ಲಿ ಪ್ರಚಲಿತವಿದೆ.
೪. ಗುರು ಕಾರ್ನೂರು :
ಗತಿಸಿದ ಹಿರಿಯ ಆತ್ಮಗಳನ್ನು ಕಾರ್ಣವೆರ್, ಕಾರ್ನವೆರ್, ಕಾರ್ನೂರು ಎಂದು ಕರೆಯುತ್ತಾರೆ. ವರ್ಷಕ್ಕೊಮ್ಮೆ ಈ ಹಿರಿಯ ಆತ್ಮಗಳಿಗೆ ಎಡೆ ಹಾಕಿ ಬಡಿಸುವ ಮೂಲಕ ಆರಾಧಿಸುವ ಪದ್ಧತಿ ತುಳುನಾಡಿನಲ್ಲಿದೆ.
ಗೌಡ ಜನಾಂಗದವರು ಆರಾಧಿಸಲ್ಪಡುವ ಹಿರಿಯರ ಆತ್ಮವನ್ನು ‘ಗುರು ಕಾರ್ನೂರು' ಎಂದು ಕರೆಯುತ್ತಾರೆ. ಗುರು ಕಾರ್ನೂರರಿಗೆ ಅಗೆಲು ಬಡಿಸುವುದು ಮಾತ್ರವಲ್ಲದೆ ನೇಮ ನೀಡಿ ಆರಾಧಿಸುವ ಪದ್ಧತಿ ಕೂಡ ಪ್ರಚಲಿತವಿದೆ. ಗುರುಕಾರ್ನೂರು ಭೂತದ ವೇಷಭೂಷಣ ಮಾನವ ಸಹಜ ಅಲಂಕಾರವನ್ನು ಹೋಲುತ್ತದೆ. ಮುಖಕ್ಕೆ ಬಿಳಿ ಬಣ್ಣ, ಹಣೆಗೊಂದು ಕುಂಕುಮದ ಬೊಟ್ಟು, ಮೈಗೆ ಕೆಂಪು ಪಟ್ಟೆಯ ಉತ್ತರೀಯ ಹಾಗೂ ಬಿಳಿ ಬಟ್ಟೆಯ ಕಚ್ಚೆ ಇರುತ್ತದೆ. ಕಾಲಿಗೆ ಗಗ್ಗರ ಕಟ್ಟುತ್ತಾರೆ.
copy rights reserved at author Dr laxmi g prasad ೫. ಕಚ್ಚೆ ಭಟ್ಟ :
ಕಚ್ಚೆ ಭಟ್ಟ ಭೂತವನ್ನು ಬ್ರಾಣ ಕುಲೆ ಎಂದು ಹೇಳುತ್ತಾರೆ. ಕಚ್ಚೆ ಭಟ್ಟ ದೈವಕ್ಕೆ ಕೋಟೆ ಮುಂಡುಗಾರು ದೇವಾಲಯದಲ್ಲಿ ನಡೆಯುವ ವಾರ್ಷಿಕ ನಡಾವಳಿಯಲ್ಲಿ ನೇಮ ನೀಡಿ ಆರಾಧಿಸುತ್ತಾರೆ. ರಕ್ತೇಶ್ವರಿ ದೈವದ ಸೇರಿಗೆ ದೈವವಾಗಿ ಈತನನ್ನು ಪರಿಗಣಿಸಿದ್ದಾರೆ. ಈ ದೈವದ ಕುರಿತು ಪಾಡ್ದನವಾಗಲೀ, ಐತಿಹ್ಯವಾಗಲೀ ಲಭ್ಯವಿಲ್ಲ. ಈತನ ಹೆಸರೇ ಸೂಚಿಸುವಂತೆ ಬ್ರಾಹ್ಮಣೋಚಿತವಾದ ಮುಂಡಾಸು, ಬಿಳಿ ಬಟ್ಟೆಯ ಕಚ್ಚೆ ಹಾಗೂ ಜನಿವಾರದ ಅಲಂಕಾರವಿರುತ್ತದೆ. ಈ ಭೂತ ಕನ್ನಡ ಭಾಷೆಯಲ್ಲಿ ನುಡಿ ಕೊಡುತ್ತದೆ
.೬ .ಕಾಜಿ ಮದಿಮ್ಮಾಲ್ ಕುಲೆ :
ಕುಂಬಳೆ ,ಬದಿಯಡ್ಕ,ಕಾಸರಗೋಡು ಮೊದಲಾದೆಡೆ ಕಂಬಳ ಕೋರಿ ಯಂದು ರಾತ್ರಿ ಒಂಜಿ ಕುಂದ ನಾಪದು ಭೂತೊಳ ಕೋಲ ಎಂಬ ಸಮೂಹ ಭೂತಾರಾಧನೆಯಲ್ಲಿ ಕಾಜಿ ಮದಿಮ್ಮಾಲ್ ಕುಲೆಗೆ ಆರಾಧನೆ ಇದೆ .ಕೆಲವೆಡೆ ಉಲ್ಲಾಕುಳು ನೇಮದೊಂದಿಗೂ ಈ ಭೂತಕ್ಕೆ ಕೋಲ ಇದೆ . ಇದೊಂದು ಕುಲೆ ಭೂತ
.ಕಾಜಿ ಮದಿಮ್ಮಾಲ್ ಈರ್ವೆರ್ ಉಲ್ಲಾಕುಳುಗಳ ಮುದ್ದಿನ ತಂಗಿ .ಮೂವರು ಕಾಡಿನಲ್ಲ್ಲಿ ಬರುವಾಗ ಕಾಜಿ ಮದಿಮ್ಮಾಲ್ ತಪ್ಪಿ ಹೋಗುತ್ತಾಳೆ .ನಂತರ ಅವಳು ಮರಣವನ್ನಪ್ಪಿ ಕುಲೆಭೂತವಾಗಿ ಕಾಜಿ ಮದಿಮ್ಮಾಲ್ ಕುಲೆ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ .ಕಾಜಿ ಮದಿಮಾಲ್ ಅನ್ನು ಹುಡುಕುವ ಕರೆಯುವ ಅಭಿನಯವನ್ನು ಉಲ್ಲಾಕುಳು ಭೂತ ಮಾಡುತ್ತದೆ ಕಾಜೋ..ಕಾಜೋ..ಕಾಜೋ ಎಂದು ಮೂರೂ ಬಾರಿ ಕರೆದು ಸಿಗದೆ ಇದ್ದಾಗ ದುಃಖಿಸುವ ಅಭಿನಯವನ್ನು ಉಲ್ಲಾಕುಳು ಭೂತ ಮಾಡುತ್ತದೆ .
7.ಮಾಮಿ ಕುಲೆ :
ಮಾಮಿ ಭೂತ ಎಂಬ ಪ್ರೇತ /ಕುಲೆ ಭೂತಕ್ಕೆ ತುಳುನಾಡಿನಾದ್ಯಂತ ಆರಾಧನೆ ಇದೆ .ಇಲ್ಲಿ ಮಾಮಿ (ಅತ್ತೆ ) ಗರ್ಭಿಣಿ ಯಾಗಿರುತ್ತಾಳೆ.ಅವಳಿಗೆ ಅಳಿಯ ಭೂತ ಹೊದಳು ತಿನ್ನಿಸಿ ಬಯಕೆ ನೆರವೇರಿಸುವ ಅಭಿನಯವನ್ನು ಮಾಡುತ್ತದೆ .ಈ ಅಳಿಯನನ್ನು ಕಾಸರಗೋಡು ,ಕುಂಬಳೆ ಸುತ್ತ ಮುತ್ತ ಕುರವ ಎನ್ನುತ್ತಾರೆ ,ಸುಳ್ಯ ಪುತ್ತೂರು ಸುತ್ತ ಮುತ್ತ ಅಜ್ಜ ಬಳಯ ಎಂದು ಕರೆಯುತ್ತಾರೆ .ಇಲ್ಲಿ ಕೂಡ ಕಾಡಿನ ದಾರಿಯಲ್ಲಿ ಅತ್ತೆ ಮತ್ತು ಅಳಿಯ ಬರುವಾಗ ಅತ್ತೆ ತಪ್ಪಿ ಹೋಗಿ ದುರಂತವನ್ನಪ್ಪಿ ಪ್ರೇತ ಭೂತವಾಗುತ್ತಾಳೆ,ಮಾಮಿ ಪ್ರೇತ ಎಂದೇ ಹೇಳುತ್ತಾರೆ .ಅಳಿಯ ಅಜ್ಜ ಬೊಲಯ ಮಾಮಿಯನ್ನು ಹುಡುಕುವ ಅಭಿನಯವನ್ನು ಮಾಡುತ್ತಾನೆ. ಅಜ್ಜ ಬೊಲಯನ ಮಡದಿ ಹೆಸರು ಕರಿಯತ್ತೆ ಎಂದಾಗಿದ್ದು ಅಲ್ಲಿನ ಅತ್ತೆ ಅನ್ನುವ ಪದ ತುಳುವಿನಲ್ಲಿ ಮಾಮಿ ಆಗಿದ್ದು ಅಜ್ಜ ಬೊಲಯ ತನ್ನ ಮಡದಿಯ ಬಯಕೆಯನ್ನು ಮಾಡಿದ್ದಾನೆ ಎಂಬ ಐತಿಹ್ಯ ಕೂಡ ಇದೆ .(ಅಂಗಾರ ಬಾಕುಡನ ತಾಯಿ ಹೆಸರು ಕೂಡ ಕರಿಯತ್ತೆ )ಕಾಡಿನಲ್ಲಿ ತಪ್ಪಿ ಹೋದದ್ದು ಆತನ ಮಡದಿಯೇ ಆಗಿರುವ ಸಾಧ್ಯತೆ ಹೆಚ್ಚು
8 ಕಾಲೆ ಕೋಲ
ಕೆಲವೆಡೆ ಕಾಲೆ ಕೋಲದ ಆಚರಣೆ ಇದೆ .ಸಾವಿನ ಸಂದರ್ಭದಲ್ಲಿ ಹೆಚ್ಚಾಗಿ ಇದನ್ನು ಆಚರಿಸುತ್ತಾರೆ .ಇದು ಕೂಡ ಒಂದು ಕುಲೆ ಆರಾಧನೆಯೇ ಆಗಿದೆ .
ಗತಿಸಿದ ಆತ್ಮಗಳನ್ನು ಆರಾಧಿಸುವುದು ಪಿತೃ ಆರಾಧನೆ. ಪಿತೃ ಆರಾಧನೆಯ ಮೇಲೆ ಭೂತಾರಾಧನೆ ಬೀರಿದ ಪ್ರಭಾವದಿಂದ ಕುಲೆ ಭೂತಗಳ ಆರಾಧನೆ ಆರಂಭವಾಗಿದೆ. ಕುಲೆ ಭೂತಗಳಿಗೆ ಆರಾಧನೆಯಲ್ಲಿ ವಿಶೇಷ ಅಬ್ಬರ ಕಾಣಿಸದಿದ್ದರೂ ಕೂಡ ಇವರ ಆರಾಧನೆಯನ್ನು ಆರಂಭದಲ್ಲಿಯೇ ಮಾಡುತ್ತಾರೆ. ಇದು ಕುಲೆ ಭೂತಗಳ ಮಹತ್ವವನ್ನು ಸೂಚಿಸುತ್ತದೆ.
ಡಾ.ಲಕ್ಷ್ಮೀ ಜಿ ಪ್ರಸಾದ
copy rights reserved at author Dr laxmi g prasad.
0 Followers
0 Following