ಜೀವಿಗಳ ರಾಸಾಯನಿಕ ಯುದ್ಧ

ಆತ್ಮರಕ್ಷಣೆಯ ಅನನ್ಯ ತಂತ್ರ

ProfileImg
16 Jul '24
8 min read


image

        ಆತ್ಮರಕ್ಷಣೆ ಎಂಬುದು ಎಲ್ಲ ಜೀವಿಗಳಿಗೂ ಅತ್ಯಂತ ಮುಖ್ಯವಾದ ಸಂಗತಿ. ಜೀವನ ಸಂಗ್ರಾಮದಲ್ಲಿ ಬಾಳಿಬದುಕಲು ಹೋರಾಟ ಮಾಡುತ್ತಿರುವ ಕೋಟ್ಯಾಂತರ ಜೀವಿಪ್ರಭೇದಗಳ ನಡುವೆ ಎಲ್ಲ ಜೀವಿಗಳು ಬಾಳಿಬದುಕಲು ತಮ್ಮ ಆತ್ಮರಕ್ಷಣೆಗಾಗಿ ನಿರಂತರವಾಗಿ ಒಂದಲ್ಲ ಒಂದು ರೀತಿ ಹೋರಾಡುತ್ತಿರಬೇಕಾಗುತ್ತದೆ. ಕೆಲವು ಜೀವಿಗಳು ಛದ್ಮವೇಷ ಧರಿಸಿ ತಮಗಿಂತ ಅಪಾಯಕಾರಿಯಾದ ಜೀವಿಗಳನ್ನು ಹೋಲುವುದೋ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದ ವರ್ಣವೈವಿಧ್ಯ, ಚಿತ್ತಾರಗಳನ್ನೇ ಅದ್ವತ್ತಾಗಿ ಅನುಕರಿಸುವ ಮೂಲಕ ಪರಿಸರದಲ್ಲಿ ಲೀನವಾಗುವುದೋ ಹೀಗೆ ಯಾವುದಾದರೂ ತಂತ್ರದ ಮೂಲಕ ತಮ್ಮ ರಕ್ಷಣೆ ಮಾಡಿಕೊಳ್ಳುತ್ತವೆ. ಇನ್ನೂ ಕೆಲವು ಜೀವಿಗಳು ಬೇರೆಬೇರೆ ರಾಸಾಯನಿಕ ವಸ್ತುಗಳನ್ನು ಬಳಸಿ ಶತ್ರುಗಳ ಮೇಲೆ ದಾಳಿಮಾಡುವ ಮೂಲಕ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುತ್ತವೆ. ಅಂಥ ಜೀವಿಗಳ ಸಂಖ್ಯೆ ಜಗತ್ತಿನಲ್ಲಿ ಹೇರಳವಾಗಿದೆ.

       ರಾಸಾಯನಿಕ ಅಸ್ತ್ರಗಳೆಂದಕೂಡಲೇ ಮೊದಲು ನೆನಪಾಗುವುದು ಕೀಟಗಳು. ಕೀಟಗಳು ಈ ಭೂಮಿಯ ಮೇಲೆ ಮನುಷ್ಯ, ಅಷ್ಟೇ ಏಕೆ ಬೇರಾವುದೇ ಕಶೇರುಕಗಳು ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನಿಂದಲೇ ಇವೆ. ಇಂಥ ಹೋರಾಟಗಳಲ್ಲೆಲ್ಲ ಅವು ಪಳಗಿವೆ. ಹಾಗಾಗಿ ನೋಡಲು ನಮ್ಮ ಕೈಯುಗುರಿಗಿಂತ ಕ್ಷುದ್ರವಾಗಿ ಕಂಡರೂ ಅವು ರೊಚ್ಚಿಗೆದ್ದಾಗ ನಮ್ಮನ್ನು ಪಲಾಯನ ಸೂತ್ರ ಪಠಿಸುವಂತೆ ಮಾಡುವ ತಾಕತ್ತು ಅವುಗಳಿಗಿದೆ. ಕೆಲವು ಕೀಟಗಳಂತೂ ಎಷ್ಟೊಂದು ಉಗ್ರವಾಗಿ ಕಚ್ಚುತ್ತವೆಯೆಂದರೆ ಒಮ್ಮೆ ಅವುಗಳ ಕೈಲಿ ಕಡಿಸಿಕೊಂಡಾತ ಮತ್ತೆ ತನ್ನ ಜೀವನಪರ್ಯಂತ ಆ ಕೀಟಗಳನ್ನು ಕಂಡರೆ ಮೈಲುದೂರ ಓಡಬೇಕು. 

       ಇರುವೆಗಳು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತವಾದ ಕೀಟಗಳು. ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆಯಾದರೂ ಇರುವೆಗಳಿಂದ ಕಡಿಸಿಕೊಂಡಿರದ ವ್ಯಕ್ತಿಯೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಮನೆಯ ಗೋಡೆಯ ಮೂಲೆಯಲ್ಲಿ ಓಡಾಡುತ್ತಿರುವ ಚಿಕ್ಕ ಇರುವೆಗಳಿಂದ ಹಿಡಿದು ನೋಡಲು ಭಯವಾಗುವಂಥ ದಪ್ಪದಪ್ಪ ಇರುವೆಗಳವರೆಗೆ ಅವುಗಳಲ್ಲಿ ಸುಮಾರು ಇಪ್ಪತ್ತೆರಡು ಸಾವಿರ ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಚಿಕ್ಕಚಿಕ್ಕ ಇರುವೆಗಳು ಕಡಿದಾಗ ಅಷ್ಟೇನೂ ನೋವಾಗದಿದ್ದರೂ ನೂರಾರು ಇರುವೆಗಳು ಮೈಗೆಲ್ಲ ಹತ್ತಿದಾಗ ಅದೊಂದು ಯಾತನೆಯೇ ಸರಿ. ಆದರೆ ಕೆಲವು ಮರಗಳ ಮೇಲೆ ಗೂಡುಕಟ್ಟಿಕೊಂಡಿರುವ ಕೆಂಪಿರುವೆಗಳು ನಿಜಕ್ಕೂ ಭಯಾನಕ ಇರುವೆಗಳೇ ಸರಿ. ಅವು ಕೇವಲ ಕಚ್ಚುವುದಷ್ಟೆ ಅಲ್ಲ ಕಚ್ಚಿದ ಜಾಗಕ್ಕೆ ಫಾರ್ಮಿಕ್ ಆಮ್ಲವನ್ನು ಎರಚುವುದರಿಂದ ಕಚ್ಚಿದ ಜಾಗ ತೀಕ್ಷ÷್ಣವಾಗಿ ಉರಿಯುತ್ತದೆ. ಕೆಂಜಿಗೆ, ಚುಗಳಿ ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವ ಈ ಇರುವೆಗಳು ತಾವು ವಾಸಿಸುವ ಮರಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತವೆ. ಫಾರ್ಮಿಕ್ ಆಮ್ಲದ ಕಾರಣದಿಂದಾಗಿಯೇ ಇರುವೆಗಳ ಕುಟುಂಬಕ್ಕೆ ಫಾರ್ಮಿಸಿಡೇ ಎಂಬ ಹೆಸರೇ ಇದೆ. 

       ಇರುವೆಗಳಲ್ಲೆಲ್ಲ ಅತ್ಯಂತ ತೀಕ್ಷ್ಣವಾದ ಕಡಿತಕ್ಕೆ ಹೆಸರುವಾಸಿಯಾದ ಇರುವೆಯೆಂದರೆ ಬುಲೆಟ್ ಆಂಟ್ ಎಂಬ ಇರುವೆ. ಇದನ್ನು ೨೪ ತಾಸಿನ ಇರುವೆ ಎಂದೂ ಕರೆಯುತ್ತಾರೆ. ಈ ಹೆಸರು ಇದಕ್ಕೆ ಬರಲು ಕಾರಣ ಇದು ಒಮ್ಮೆ ಕಡಿದರೆ ಆ ಅಗಾಧವಾದ ನೋವು ಇಪ್ಪತ್ನಾಲ್ಕು ಗಂಟೆಗಳ ಕಾಲ ಕಡಿಸಿಕೊಂಡವನನ್ನು ಕಾಡುತ್ತದೆ. ಇದರ ಕಡಿತದ ನೋವು ಕೋವಿಯಿಂದ ಹೊಡೆದ ಗುಂಡಿನ ನೋವಿನಷ್ಟೇ ತೀಕ್ಷ್ಣ ಎಂದು ಕಡಿಸಿಕೊಂಡಿರುವವರು ಅಭಿಪ್ರಾಯಪಟ್ಟಿರುವುದರಿಂದ ಇದನ್ನು ಬುಲೆಟ್ ಆಂಟ್ ಎಂದು ಕರೆಯಲಾಗಿದೆ. ಶ್ಮಿಟ್ ಸ್ಟಿಂಗ್ ಪೇನ್ ಇಂಡೆಕ್ಸ್ ಎಂಬ ಒಂದು ಮಾಪನದ ಮೂಲಕ ಯಾವುದೇ ಜೀವಿಯ ಕಡಿತದ ನೋವನ್ನು ಅಳೆಯಲಾಗುತ್ತದೆ. ಈ ಮಾಪನದಲ್ಲಿ ಬುಲೆಟ್ ಆಂಟ್‌ನ ಕಡಿತಕ್ಕೆ ೪+ ಅಂಕಗಳನ್ನು ದಯಪಾಲಿಸಲಾಗಿದೆ. ಟ್ಯಾರಂಟುಲಾ ಹಾಕ್ ವಾಸ್ಪ್ ಎಂಬ ಒಂದು ಜಾತಿಯ ಕಣಜಕ್ಕೆ ೪ ಅಂಕಗಳನ್ನು ನೀಡಲಾಗಿದ್ದು, ಬುಲೆಟ್ ಆಂಟ್ ಅದನ್ನೂ ಮೀರಿಸುತ್ತದೆ. ಹಾಗಾದರೆ ಈ ಇರುವೆಯ ಕಡಿತದಿಂದಾಗುವ ಅಗಾಧವಾದ ನೋವಿಗೆ ಕಾರಣವೇನು? ಕೇವಲ ಕಡಿತವೊಂದೇ ಇಷ್ಟೊಂದು ನೋವನ್ನುಂಟುಮಾಡುವಷ್ಟು ಉಗ್ರವೇ ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವೇ ಮತ್ತೆ ರಾಸಾಯನಿಕ ಅಸ್ತ್ರ. 

       ಪೊನೆರಾಟಾಕ್ಸಿನ್ ಎಂಬ ಒಂದು ಬಗೆಯ ವಿಷ ಈ ಇರುವೆಗಳ ಕಡಿತದಿಂದ ನಮ್ಮ ದೇಹ ಸೇರುತ್ತದೆ. ಇದೇನೂ ಆರೋಗ್ಯವಂತ ಮನುಷ್ಯನಿಗೆ ಪ್ರಾಣಾಂತಿಕವಾದ ವಿಷವಲ್ಲದಿದ್ದರೂ ವಿಪರೀತ ನೋವನ್ನುಂಟುಮಾಡುತ್ತದೆ. ಈ ವಿಷದ ಕೆಲಸ ಸೋಡಿಯಂ ಅಯಾನುಗಳ ಚಲನೆಗೆ ಧಕ್ಕೆಯುಂಟುಮಾಡಿ ನರಮಂಡಲದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದು. ಈಗ ಇದನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳುವ ವಿಚಾರವಾಗಿ ಸಂಶೋಧನೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಕೀಟಜಗತ್ತಿನಲ್ಲಿ ಮಾನವನನ್ನು ಬೆಚ್ಚಿಬೀಳಿಸುವ ವಿಷಕಾರಿಗಳಲ್ಲಿ ಬುಲೆಟ್ ಇರುವೆಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ.

       ಜೇನು ಪ್ರಕೃತಿಯಲ್ಲಿ ದೊರೆಯುವ ಒಂದು ಪರಿಶುದ್ಧ ಆಹಾರ ಎಂಬುದನ್ನು ಎಲ್ಲರೂ ಬಲ್ಲರು. ಅದೊಂದು ಅತ್ಯುತ್ತಮ ಔಷಧೀಯ ಗುಣವುಳ್ಳ ಆಹಾರವೂ ಹೌದು. ಅಂಥ ಸ್ವಾದಿಷ್ಟವಾದ ಜೇನನ್ನು ತಯಾರಿಸುವ ಕೀಟಗಳು ಸಹ ಕೆರಳಿದರೆ ಎಷ್ಟು ಅಪಾಯಕಾರಿಗಳಾಗಬಲ್ಲವು ಎಂಬುದನ್ನು ಎಲ್ಲರೂ ಬಲ್ಲರು. ಹೆಜ್ಜೇನು ಕಡಿಸಿಕೊಂಡವರು ಅದರ ಅನುಭವವನ್ನು ಕೇಳಿದರೆ ಕಣ್ಣಿಗೆ ಕಟ್ಟುವಂತೆ ವಿವರಿಸಿಯಾರು. ಅಲ್ಲೊಂದು ಇಲ್ಲೊಂದು ಜೇನು ಕಚ್ಚಿದರೆ ಅಂಥ ಅಪಾಯವೇನೂ ಆಗಲಾರದಾದರೂ ಹಿಂಡುಹಿ೦ಡು ಜೇನ್ನೊಣಗಳು ದಾಳಿಮಾಡಿದರೆ ಮನುಷ್ಯನ ಸಾವು ಖಚಿತ. ಹೆಜ್ಜೇನುಗಳು ಮನುಷ್ಯರ ಮೇಲೆ, ಅಥವಾ ಯಾವುದೇ ಜೀವಿಯ ಮೇಲಾದರೂ ದಾಳಿ ಮಾಡಿದರೆ ಅದು ಅವುಗಳ ಪಾಲಿಗೆ ಅತ್ಯುತ್ಕೃಷ್ಟವಾದ ತ್ಯಾಗವೇ ಸರಿ. ಏಕೆಂದರೆ ಒಮ್ಮೆ ತನ್ನ ವೈರಿಯ ದೇಹಕ್ಕೆ ತನ್ನ ವಿಷದ ಕೊಂಡಿಯನ್ನು ಚುಚ್ಚಿದಮೇಲೆ ಅದನ್ನು ಹೊರಗೆಳೆದುಕೊಳ್ಳಲು ಅವುಗಳಿಗೆ ಆಗುವುದಿಲ್ಲ. ಹೊರಗೆಳೆದುಕೊಳ್ಳುವ ಪ್ರಯತ್ನದಲ್ಲಿ ಅವುಗಳ ಜೀರ್ಣಾಂಗವ್ಯೂಹ, ಹೃದಯ ಎಲ್ಲವೂ ಕಿತ್ತುಬರುತ್ತವೆ. ಅಲ್ಲಿಗೆ ಅದರ ಜೀವನ ಸಮಾಪ್ತಿಯಾದಂತೆ. ಹೀಗೆ ತನ್ನವರ ರಕ್ಷಣೆಗಾಗಿ ಜೇನ್ನೊಣಗಳು ಮಾಡುವ ತ್ಯಾಗ ಅದು.      

       ಕಣಜಗಳು ಸಹ ಜೇನ್ನೊಣಳಷ್ಟೇ ಉಗ್ರವಾಗಿ ಕುಟುಕಬಲ್ಲವು. ಆದರೆ ಅವುಗಳಿಗೂ ಜೇನುಗಳಿಗೂ ಇರುವ ವ್ಯತ್ಯಾಸವೆಂದರೆ ಜೇನುಗಳು ಒಮ್ಮೆ ಕುಟುಕಿದಮೇಲೆ ತಮ್ಮ ಕೊಂಡಿಯನ್ನು ಹೊರಕ್ಕೆಳೆದುಕೊಳ್ಳಲಾಗದೆ ವೀರಮರಣ ಅಪ್ಪುತ್ತವೆ. ಆದರೆ ಕಣಜಗಳಿಗೆ ಆ ಭಯ ಇಲ್ಲ. ಅವು ಜೇನುಗಳಂಥ ಕೊಂಡಿಗಳನ್ನು ಹೊಂದಿಲ್ಲ. ಅವು ಒಮ್ಮೆ ಕಡಿದಮೇಲೂ ಪದೇಪದೇ ಶತ್ರುಗಳನ್ನು ಕಡಿಯಬಲ್ಲವು. ಕೆಲವು ಜಾತಿಯ ಕಣಜಗಳು ಒಬ್ಬಂಟಿಯಾಗಿ ವಾಸಿಸಿದರೆ ಇನ್ನು ಕೆಲವು ಜಾತಿಯವು ಜೇನುಗಳಂತೆ ಸಮೂಹದಲ್ಲಿ ವಾಸಿಸುತ್ತವೆ. ಇವು ಸಹ ಅಪಾಯಕಾರಿಯಾದ ವಿಷವನ್ನು ತಮ್ಮ ಕಡಿತದೊಂದಿಗೆ ದೇಹದೊಳಕ್ಕೆ ಸೇರಿಸುತ್ತವೆ. ಒಂದೆರಡು ಕಣಜಗಳು ಕಚ್ಚಿದರೆ ಕಚ್ಚಿದ ಜಾಗದಲ್ಲಿ ಉರಿ, ಬಾವು ಕಂಡುಬ೦ದು ತಲೆಸುತ್ತು, ವಾಂತಿಯ೦ಥ ಲಕ್ಷಣಗಳು ಕಂಡುಬರಬಹುದೇ ವಿನಃ ಸಾವು ಸಂಭವಿಸಲಾರದು. ಆದರೆ ಜೇನುಗಳಂತೆ ಗುಂಪಾಗಿ ವಾಸಿಸುವ ಕಣಜಗಳು ಕಡಿದರಂತೂ ಸಾವು ಕಟ್ಟಿಟ್ಟ ಬುತ್ತಿ. 

       ಕೀಟಸಾಮ್ರಾಜ್ಯದಲ್ಲಿ ಕೆಲವು ಕೀಟಗಳು ತಮ್ಮ ರಕ್ಷಣೆಗಾಗಿ ಕಡಿಯುವ ಸಾಮರ್ಥ್ಯ ಬೆಳೆಸಿಕೊಂಡಿದ್ದರೆ ಇನ್ನು ಕೆಲವು ಅಂಥ ಸಾಮರ್ಥ್ಯವಿಲ್ಲದ ಕೀಟಗಳು ತಮ್ಮ ದೇಹದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಹಿಡಿದಿಟ್ಟುಕೊಂಡು ಅವುಗಳನ್ನು ಶತ್ರುಗಳ ಮೇಲೆ ಎರಚುವ ಮೂಲಕ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿವೆ. ನಮ್ಮ ಕಾಲಕೆಳಗೆ ಹೊಸಕಿಹಾಕಬಹುದಾದಂಥ ಯಃಕಶ್ಚಿತ್ ಜೀವಿಗಳಂತೆ ಕಾಣುವ ಕೀಟಗಳು ಅಷ್ಟೊಂದು ಅಪಾಯಕಾರಿಯಾಗಿ ಪರಿಣಮಿಸುವುದು ಅವುಗಳ ರಾಸಾಯನಿಕ ಸಮರ ಕಲೆಯಿಂದಾಗಿಯೇ. ಈ ಬಗೆಯ ಕೀಟಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ ಕೀಟವೆಂದರೆ ಬಂಬಾರ್ಡಿಯರ್ ಬೀಟಲ್ ಎಂದೇ ಹೆಸರಾಗಿರುವ ಫಿರಂಗಿ ಓಡುಹುಳ. ನಮ್ಮ ತೆಂಗಿನಮರ ಕೊರೆಯುವ ದುಂಬಿ, ಖಡ್ಗಮೃಗ ಜೀರುಂಡೆ ಮುಂತಾದ ಚಿಪ್ಪಿನ ಕೀಟಗಳ ವರ್ಗಕ್ಕೇ ಸೇರಿದ ಫಿರಂಗಿ ಓಡುಹುಳಗಳ ವೈಶಿಷ್ಟ್ಯವೆಂದರೆ ಅವು ತಮ್ಮ ದೇಹದಲ್ಲೇ ರಾಸಾಯನಿಕ ಕ್ರಿಯೆಯ ಮೂಲಕ ಹೈಡ್ರೋಕ್ವಿನೋನ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ದ್ರಾವಣಗಳನ್ನು ಎರಡು ಬೇರೆಬೇರೆ ಕೊಠಡಿಗಳಲ್ಲಿ ಸಂಗ್ರಹಿಸಿಟ್ಟುಕೊ೦ಡಿರುತ್ತವೆ. ಯಾವಾಗ ಶತ್ರುವೊಂದು ಬಂದು ಅವುಗಳ ಮೇಲೆ ದಾಳಿ ನಡೆಸುತ್ತದೋ ಆಗ ಈ ಎರಡೂ ದ್ರಾವಣಗಳನ್ನು ಮಿಶ್ರಮಾಡಿ ಅವುಗಳ ನಡುವೆ ರಾಸಾಯನಿಕ ಕ್ರಿಯೆಗಳನ್ನು ಹುಟ್ಟುಹಾಕುತ್ತದೆ. ಇದರ ಪರಿಣಾಮವಾಗಿ ಈ ರಾಸಾಯನಿಕಗಳು ನೀರಿನ ಕುದಿಯುವ ಬಿಂದುವಿನ ಸನಿಹಕ್ಕೆ ಕುದಿದು ವಿಷಕಾರಿ ಅನಿಲಗಳು ಕೀಟದ ದೇಹದ ಹಿಂಭಾಗದಿ೦ದ ಫಿರಂಗಿಯಿ೦ದ ಸಿಡಿದ ಗುಂಡಿನ೦ತೆ ಶತ್ರುಗಳ ಮೇಲೆ ಎರಗುತ್ತದೆ. ಚಿಕ್ಕಪುಟ್ಟ ಕ್ರಿಮಿಕೀಟಗಳು ಈ ಹೊಡೆತಕ್ಕೆ ತತ್ತರಿಸಿ ಸತ್ತೇಹೋಗುತ್ತವೆ. ಸ್ವಲ್ಪ ದೊಡ್ಡ ಶತ್ರುಗಳೂ ಸಹ ಇದಕ್ಕೆ ಬೆಚ್ಚಿಬಿದ್ದು ಪಲಾಯನ ಸೂತ್ರ ಪಠಿಸುತ್ತವೆ. ಆದರೆ ಈ ರಾಸಾಯನಿಕಗಳನ್ನು ತನ್ನ ದೇಹದಲ್ಲೇ ಇಟ್ಟುಕೊಂಡಿದ್ದರೂ ಈ ಕೀಟಗಳಿಗೆ ಇದರಿಂದ ಯಾವ ಭಯವೂ ಇಲ್ಲ. ಏಕೆಂದರೆ ಇವನ್ನು ಸಂಗ್ರಹಿಸುವ ಕೊಠಡಿಗಳು ಎಷ್ಟೊಂದು ಬಲಿಷ್ಠವಾಗಿವೆಯೆಂದರೆ ಒಳಗಿನ ರಾಸಾಯನಿಕಗಳು ಕೀಟದ ಇತರ ಅಂಗಾ೦ಗಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕೀಟದ ದೇಹದಲ್ಲಿ ಚಿಕ್ಕಚಿಕ್ಕ ಸ್ಫೋಟಗಳೇ ಸಂಭವಿಸಿದರೂ ಕೀಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. 

 

       ದೇಹದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಿ ಶತ್ರುಗಳನ್ನು ಬೆದರಿಸುವ ಕಲೆಯನ್ನು ಕೆಲವು ಸಸ್ತನಿಗಳೂ ಸಹ ಕಲಿತಿವೆ. ಸ್ಕಂಕ್ ಎಂಬ ಒಂದು ಜಾತಿಯ ಪ್ರಾಣಿಗಳು ತಮ್ಮನ್ನು ಹಿಡಿಯಲು ಬಂದ ಶತ್ರುಗಳನ್ನು ಬೆದರಿಸುವುದು ದುರ್ವಾಸನೆ ಬೀರುವ ರಾಸಾಯನಿಕದ ಮೂಲಕ. ಇದರ ಪೃಷ್ಟಭಾಗದಲ್ಲಿ ಇರುವ ಎರಡು ಗ್ರಂಥಿಗಳಿ೦ದ ಅಪಾಯಕಾರಿಯಾದ ದ್ರವ್ಯ ಬಿಡುಗಡೆಯಾಗುತ್ತದೆ. ಇದು ಮೂಗುಮುಚ್ಚಿಕೊಳ್ಳುವಷ್ಟು ತೀಕ್ಷ್ಣವಾದ ದುರ್ವಾಸನೆ ಹೊಂದಿದ್ದು, ಮನುಷ್ಯರಿಗಂತೂ ತಲೆತಿರುಗಿ ಮೂರ್ಛೆಹೋಗುವಷ್ಟು ಅಪಾಯಕಾರಿಯಾಗಿರುತ್ತದೆ. ಕರಡಿಯಂಥ ದೊಡ್ಡ ಶತ್ರುಗಳೂ ಇದರ ವಾಸನೆಗೆ ಬೆದರಿ ಕಾಲಿಗೆ ಬುದ್ಧಿ ಹೇಳುತ್ತವೆ. ಮನುಷ್ಯರ ಮೂಗಿಗಂತೂ ಸುಮಾರು ಐದೂವರೆ ಕಿಲೋಮೀಟರ್ ದೂರದಿಂದಲೇ ಗಮನಕ್ಕೆ ಬರುವಷ್ಟು ತೀಕ್ಷ್ಣವಾಗಿರುತ್ತದೆ. ಈ ಗ್ರಂಥಿಗಳ ಸುತ್ತ ಇರುವ ಸ್ನಾಯುಗಳು ಈ ದ್ರವ್ಯವನ್ನು ಸುಮಾರು ಹತ್ತು ಅಡಿ ದೂರಕ್ಕೆ ಎರಚಲು ಸ್ಕಂಕ್‌ಗಳಿಗೆ ನೆರವಾಗುತ್ತವೆ. ಜೊತೆಗೆ ಅದು ಈ ದ್ರವ್ಯವನ್ನು ಬೇಕಾದ ದಿಕ್ಕಿಗೆ ಎರಚಲೂ ಕೂಡ ಇದು ಸಹಾಯಮಾಡುತ್ತದೆ.

       ದುಂಬಿಗಳಲ್ಲೇ ಇನ್ನೊಂದು ಪ್ರಭೇದವಾದ ಊಗ್‌ಪಿಸ್ಟರ್ ಬೀಟಲ್ ಎಂಬ ದುಂಬಿ ಇದೆ. ಇದು ಇರುವೆಗಳನ್ನು ತಿನ್ನುವ ದುಂಬಿ. ತಿಂದ ನಂತರ ಈ ಇರುವೆಗಳ ದೇಹದಲ್ಲಿರುವ ಫಾರ್ಮಿಕ್ ಆಮ್ಲವನ್ನು ತನ್ನ ದೇಹದಲ್ಲಿ ಶೇಖರಿಸಿಟ್ಟುಕೊಳ್ಳುವ ಈ ದುಂಬಿ ತನ್ನ ಮೇಲೆ ದಾಳಿ ಮಾಡುವ ಜೀವಿಗಳಿಗೆ ಈ ಆಮ್ಲವನ್ನು ಅವುಗಳ ಮುಖಕ್ಕೇ ಎರಚುವ ಮೂಲಕ ಅವುಗಳನ್ನು ಬೆದರಿಸುತ್ತವೆ. 

       ಕಪ್ಪೆಗಳೆಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಮಳೆಗಾಲದಲ್ಲಿ ಅಲ್ಲಿ ಇಲ್ಲಿ ನೆಗೆದಾಡುತ್ತ ಹುಳುಹುಪ್ಪಟೆಗಳನ್ನು ತಿಂದು ಬದುಕುವ ನಿರುಪದ್ರವಿ ಜೀವಿಗಳು. ಆದರೆ ಈ ಕಪ್ಪೆಗಳಲ್ಲೇ ಅಪಾಯಕಾರಿಯಾದ ವಿಷವನ್ನು ಹೊಂದಿದ ಪ್ರಭೇದಗಳಿವೆ ಎಂದರೆ ನಂಬುತ್ತೀರಾ? ಅಮೆಜಾನಿನನ ಮಳೆಕಾಡುಗಳಲ್ಲಿ ವಿಷಬಾಣದ ಕಪ್ಪೆಗಳು (ಪಾಯ್ಸನ್ ಡಾರ್ಟ್ ಫ್ರಾಗ್) ಎಂದೇ ಹೆಸರಾಗಿರುವ ಕಪ್ಪೆಗಳಿವೆ. ಇವುಗಳಲ್ಲೇ ಸುಮಾರು ನೂರಾಎಪ್ಪತ್ತು ಪ್ರಭೇದಗಳನ್ನು ಗುರುತಿಸಲಾಗಿದ್ದು ಇವುಗಳ ವಿಷದ ತೀವ್ರತೆ ಪ್ರಭೇದದಿಂದ ಪ್ರಭೇದಕ್ಕೆ ಬದಲಾಗುತ್ತ ಹೋಗುತ್ತದೆ. ಈ ವಿಷವನ್ನು ಇವು ಹೇಗೆ ಸಂಗ್ರಹಿಸುತ್ತವೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದ ವಿಜ್ಞಾನಿಗಳಿಗೆ ಅನೇಕ ವಿಸ್ಮಯಕರ ಅಂಶಗಳು ಪತ್ತೆಯಾದವು. ಮೊದಲನೆಯದಾಗಿ ಅದು ನಾಗರಹಾವು ಅಥವಾ ಇನ್ಯಾವುದೇ ಹಾವುಗಳ ವಿಷದಂತೆ ಕಪ್ಪೆಗಳ ದೇಹದಲ್ಲೇ ಉತ್ಪತ್ತಿಯಾದ ವಿಷವಲ್ಲ. ಈ ಕಪ್ಪೆಗಳ ಪ್ರಮುಖ ಆಹಾರವಾದ ಒಂದು ಜಾತಿಯ ಇರುವೆಗಳ ದೇಹದಿಂದ ಸಂಗ್ರಹಿಸಿದ ವಿಷವಿದು. ಇದು ಎಷ್ಟೊಂದು ಅಪಾಯಕಾರಿಯಾದ ವಿಷವೆಂದರೆ ಒಂದೇ ಒಂದು ಮಿಲಿಗ್ರಾಂ ವಿಷ ಸಾವಿರಾರು ಜನರ ಪ್ರಾಣ ತೆಗೆಯಬಲ್ಲದು. ಇವುಗಳಲ್ಲೆಲ್ಲ ಘನಘೋರ ವಿಷದ ಪ್ರಭೇದವೆಂದರೆ ಗೋಲ್ಡನ್ ಆರೋ ಪಾಯ್ಸನ್ ಫ್ರಾಗ್ ಎಂಬ ಕಪ್ಪೆ. 

       ಟೊಮಾಟೋ ಫ್ರಾಗ್ ಎಂಬ ಇನ್ನೊಂದು ಪ್ರಭೇದದ ಕಪ್ಪೆ ಶತ್ರುಗಳು ತನ್ನನ್ನು ಹಿಡಿದಕೂಡಲೇ ಒ೦ದು ರೀತಿಯ ಅಂಟ೦ಟಾದ ದ್ರವವನ್ನು ತನ್ನ ದೇಹದಿಂದ ಸ್ರವಿಸುತ್ತದೆ. ಅದು ಪ್ರಾಣಿಯ ಬಾಯಿಗೆ ಅಂಟಿನ೦ತೆ ಹಿಡಿದುಕೊಂಡು ಕಪ್ಪೆಯನ್ನು ಬಿಟ್ಟುಬಿಡುವಂತೆ ಪ್ರಚೋದಿಸುತ್ತದೆ. ಇದು ಪ್ರಾಣಾಂತಿಕವಾದ ವಿಷವಲ್ಲವಾದರೂ ಸಣ್ಣಮಟ್ಟಿನ ಅಲರ್ಜಿಯನ್ನುಂಟುಮಾಡಬಹುದು.

       ಹಲ್ಲಿ ಎಂದರೆ ವಿಷಪ್ರಾಣಿ ಎಂಬ ನಂಬಿಕೆಯೊ೦ದು ನಮ್ಮಲ್ಲಿ ಆಳವಾಗಿ ಬೇರೂರಿದೆ. ಹಲ್ಲಿ ಬಿದ್ದ ಊಟ ಸೇವಿಸಿ ನೂರಾರು ಜನ ಅಸ್ವಸ್ಥರಾದ ಸುದ್ದಿಗಳನ್ನು ಆಗಾಗ ಓದುತ್ತಲೇ ಇರುತ್ತೇವೆ. ಇದಕ್ಕೆ ವಾಸ್ತವವಾಗಿ ಹಲ್ಲಿ ಕಾರಣವಲ್ಲ. ನಮ್ಮ ದೇಶದಲ್ಲಂತೂ ವಿಷಕಾರಿ ಹಲ್ಲಿಗಳು ಇಲ್ಲವೇ ಇಲ್ಲ. ಈ ಜಗತ್ತಿನಲ್ಲಿ ವಿಷಕಾರಿ ಹಲ್ಲಿಗಳ ಕೇವಲ ಎರಡು ಪ್ರಭೇದಗಳು ಮಾತ್ರ ಅಸ್ತಿತ್ವದಲ್ಲಿವೆ. ಅತ್ಯಂತ ಹತ್ತಿರದ ಸಂಬ೦ಧಿಗಳಾದ ಗೀಲಾ ಮಾನ್‌ಸ್ಟರ್ ಮತ್ತು ಮೆಕ್ಸಿಕನ್ ಬೀಡೆಡ್ ಲಿಜಾರ್ಡ್ ಎಂಬ ಈ ಎರಡು ಪ್ರಭೇದದ ಹಲ್ಲಿಗಳು ಅತ್ಯಲ್ಪ ಪ್ರಮಾಣದ ವಿಷವನ್ನು ಉತ್ಪಾದಿಸುತ್ತವೆ. ಇದರ ವಿಷವು ಕೋರಾಲ್ ಸರ್ಪದ ವಿಷದಷ್ಟೇ ಘೋರವಾದ ವಿಷವಾದರೂ ಅದನ್ನು ಅತ್ಯಲ್ಪ ಪ್ರಮಾಣದಲ್ಲಷ್ಟೇ ಉತ್ಪಾದಿಸುವುದರಿಂದ ಅದರಿಂದ ಮನುಷ್ಯರಿಗೆ ಪ್ರಾಣಹಾನಿಯೇನೂ ಉಂಟಾಗುವುದಿಲ್ಲ. ಕಚ್ಚಿದ ಜಾಗದಲ್ಲಿ ಉರಿ, ನೋವು ಕಾಣಿಸಿಕೊಳ್ಳಬಹುದು. ಕೆಲವು ದಿನಗಳ ನಂತರ ನಿಧಾನವಾಗಿ ಕಡಿಮೆಯಾಗುತ್ತದೆ. 

       ಅಷ್ಟಪದಿಗಳೆಂದರೆ ಎಲ್ಲರಿಗೂ ಒಂದು ರೀತಿಯ ಭಯವಿದೆ. ಅವುಗಳನ್ನು ಭಾರೀ ರಾಕ್ಷಸರಂತೆ ಎಲ್ಲೆಡೆ ವರ್ಣಿಸಲಾಗಿದೆ. ಆದರೆ ಅವು ಅಷ್ಟೊಂದು ಭಯಜನಕ ಜೀವಿಗಳೇ ಅಲ್ಲ. ಸುಮಾರು ಮುನ್ನೂರು ಪ್ರಭೇದಗಳಿರುವ ಈ ಆಕ್ಟೋಪಸ್‌ಗಳು ಬೆನ್ನೆಲುಬೇ ಇಲ್ಲದ ಜೀವಿಗಳು. ತಮ್ಮ ಆತ್ಮರಕ್ಷಣೆಗಾಗಿ ಇವು ಕೂಡ ರಾಸಾಯನಿಕಗಳನ್ನು ಬಳಸುವ ಉಪಾಯವನ್ನು ಕಂಡುಕೊ೦ಡಿವೆ. ಇವುಗಳ ದೇಹದಲ್ಲಿ ವಿಷಕಾರಿ ರಾಸಾಯನಿಕಗಳೇನೂ ಇಲ್ಲ. ಆದರೆ ದಪ್ಪನೆಯ ಶಾಯಿಯಂಥ ದ್ರವವೊಂದು ದೇಹದಲ್ಲಿರುತ್ತದೆ. ಯಾವುದಾದರೂ ಶತ್ರು ಅವುಗಳನ್ನು ಹಿಡಿದರೆ ಆ ಶಾಯಿಯನ್ನು ನೀರಿಗೆ ಚೆಲ್ಲುತ್ತದೆ. ಆ ಶಾಯಿಯಲ್ಲಿ ಇರುವ ವರ್ಣದ್ರವ್ಯ ನಮ್ಮ ಕೂದಲಿನ ಕಪ್ಪುಬಣ್ಣಕ್ಕೆ ಕಾರಣವಾಗುವಂಥ ಮೆಲನಿನ್. ಇದು ನೀರಿಗೆ ಬಿದ್ದಕೂಡಲೇ ಎಲ್ಲೆಡೆ ಹರಡಿಕೊಂಡು ಆ ಕಪ್ಪು ಮೋಡದೊಳಗೆ ಆಕ್ಟೋಪಸ್ ಎಲ್ಲಿದೆ ಎಂದೇ ಶತ್ರುಗಳಿಗೆ ಗೊತ್ತಾಗದಂತೆ ಮಾಡುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಆಕ್ಟೋಪಸ್ ಕೂಡಲೇ ಅಲ್ಲಿಂದ ಪಲಾಯನ ಮಾಡುತ್ತದೆ. 

       ಪತಂಗ ಮತ್ತು ಚಿಟ್ಟೆಗಳ ಮರಿಹುಳುಗಳು ಪ್ರಕೃತಿಯಲ್ಲಿ ಅತ್ಯಂತ ದುರ್ಬಲ ಜೀವಿಗಳಂತೆ ಕಾಣುತ್ತವೆ. ಮೆತ್ತನೆಯ ಮೈಯ ಈ ಜೀವಿಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ ಅವಕ್ಕೆ ಶತ್ರುಗಳು ನೂರಾರು. ಹಕ್ಕಿಗಳು, ಹಲ್ಲಿಗಳು, ಹಾವುಗಳು, ಬೇರೆಬೇರೆ ಕೀಟಗಳು ಇತ್ಯಾದಿಗಳು ಸದಾಕಾಲ ಈ ಮರಿಹುಳುಗಳನ್ನು ತಿನ್ನಲು ಹೊಂಚುಹಾಕುತ್ತಲೇ ಕುಳಿತಿರುತ್ತವೆ. ಹಾಗಾಗಿ ಅವು ತಮ್ಮನ್ನು ರಕ್ಷಿಸಿಕೊಳ್ಳಲು ದೇಹದ ಮೇಲೆ ಚುಚ್ಚುವಂಥ ಕೂದಲುಗಳ ಹೊದಿಕೆಯನ್ನು ಹೊಂದಿರುತ್ತವೆ. ಕಂಬಳಿಹುಳುಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಅಪ್ಪಿತಪ್ಪಿ ಯಾರಾದರೂ ಅವುಗಳನ್ನು ಮುಟ್ಟಿದ್ದರೆ ಅದರ ಪರಿಣಾಮವನ್ನು ಸಹ ಅನುಭವಿಸಿರುತ್ತಾರೆ. ಮೈಯೆಲ್ಲ ಉರಿ, ತುರಿಕೆ ಉಂಟುಮಾಡುವ ಇದರ ಕೂದಲುಗಳ ಹೊಡೆತವನ್ನು ಒಮ್ಮೆ ಅನುಭವಿಸಿದವನು ಮತ್ತೊಮ್ಮೆ ಅವುಗಳ ಸಮೀಪ ಸುಳಿಯುವ ಸಾಹಸ ಮಾಡಲಾರ. ಇನ್ನುಕೆಲವು ಜಾತಿಯ ಮರಿಹುಳುಗಳು ತಮ್ಮನ್ನು ಯಾವುದೋ ಕೀಟವೋ ಹಕ್ಕಿಯೋ ಹಿಡಿದಕೂಡಲೇ ದೇಹದಿಂದ ವಿಷಕಾರಿ ರಾಸಾಯನಿಕವನ್ನು ಸ್ರವಿಸಿ ಅದರ ಬಾಯಿಗೇ ಉರಿ ಹತ್ತುವಂತೆ ಮಾಡುತ್ತವೆ. ಒಮ್ಮೆ ಅಂಥ ಮರಿಹುಳುವನ್ನು ಹಿಡಿದು ಪರಿಪಾಟಲು ಪಟ್ಟ ಜೀವಿ ಮತ್ತೊಮ್ಮೆ ಅಂಥ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ. 

       ಮೊನಾರ್ಕ್ ಚಿಟ್ಟೆಗಳು ಚಿಟ್ಟೆಗಳ ಸಾಮ್ರಾಜ್ಯದಲ್ಲೇ ಅತ್ಯಂತ ಸುಪ್ರಸಿದ್ಧವಾದ ಪ್ರಭೇದ. ಇವುಗಳು ತಮ್ಮ ವಲಸೆಗಾಗಿ ಪ್ರಸಿದ್ಧವಾದ ಕೀಟಗಳು. ಪ್ರತಿವರ್ಷ ಅಮೆರಿಕಾ ಮತ್ತು ಕೆನಡಾದಿಂದ ಲಕ್ಷಾಂತರ ಮೊನಾರ್ಕ್ಗಳು ಮೆಕ್ಸಿಕೋಗೆ ವಲಸೆ ಹೋಗುತ್ತವೆ. ಸಹಸ್ರಾರು ಮೈಲು ದೂರದ ಈ ಪ್ರಯಾಣವನ್ನು ತೆಳ್ಳನೆಯ ಕಾಗದದಂಥ, ಮುಟ್ಟಿದರೆ ಮುರಿಯುವಂಥ ರೆಕ್ಕೆಗಳುಳ್ಳ ಕೀಟಗಳು ಕೈಗೊಳ್ಳುವುದೇ ಜಗತ್ತಿನ ಅದ್ಭುತಗಳಲ್ಲೊಂದು. ಇಷ್ಟು ದೂರ ಪ್ರಯಾಣ ಕೈಗೊಳ್ಳುವ ಈ ಕೀಟಗಳ ಆಯಸ್ಸು ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವ ಆಯಸ್ಸಾದ ಒಂದೆರಡು ವಾರದಿಂದ ಮೂರು-ನಾಲ್ಕು ತಿಂಗಳುಗಳಿಗೆ ಏರುತ್ತದೆ. ಆದಾಗ್ಯೂ ಅವುಗಳ ಮೂರನೆಯ ಅಥವಾ ನಾಲ್ಕನೆಯ ತಲೆಮಾರು ಮಾತ್ರ ಗುರಿಯನ್ನು ತಲುಪುತ್ತದೆ. ಆದರೆ ನಾವು ಇಲ್ಲಿ ಚರ್ಚಿಸಬೇಕಾಗಿರುವುದು ಇದರ ಬಗ್ಗೆ ಅಲ್ಲ, ಅವುಗಳ ರಾಸಾಯನಿಕ ಆತ್ಮರಕ್ಷಣೆಯ ಬಗ್ಗೆ. ಅವುಗಳ ಮರಿಹುಳುಗಳು ಮಿಲ್ಕ್ವೀಡ್ ಎಂಬ ಎಕ್ಕದ ಜಾತಿಯ ಗಿಡದ ಎಲೆಗಳನ್ನು ಸೇವಿಸುತ್ತವೆ. ಅದರಲ್ಲಿರುವ ವಿಷಕಾರಿ ಆಲ್ಕಲಾಯ್ಡ್ಗಳನ್ನು ತಮ್ಮ ದೇಹದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅವು ಚಿಟ್ಟೆಗಳಾಗಿ ಪರಿವರ್ತನೆಯಾದ ಮೇಲೂ ಈ ವಿಷಕಾರಿಗಳು ಅವುಗಳ ದೇಹದಲ್ಲಿ ಹಾಗೆಯೇ ಉಳಿದಿರುತ್ತವೆ. ಹಾಗಾಗಿ ಅವುಗಳನ್ನು ಸಾಮಾನ್ಯವಾಗಿ ಹೆಚ್ಚಿನ ಹಕ್ಕಿಗಳು ಮುಟ್ಟುವುದಿಲ್ಲ. 

       ಇನ್ನು ಸರ್ಪಗಳ ವಿಷವೂ ಕೂಡ ಒಂದು ಬಗೆಯ ರಾಸಾಯನಿಕವೇ. ಆದರೆ ಅದರ ಉಪಯೋಗ ಸಾಮಾನ್ಯವಾಗಿ ಆತ್ಮರಕ್ಷಣೆಗಿಂತ ಹೆಚ್ಚಾಗಿ ತಮ್ಮ ಬೇಟೆಯನ್ನು ಕೊಲ್ಲುವುದಕ್ಕೇ ಬಳಕೆಯಾಗುತ್ತದೆ. ಹಾಗಾಗಿ ಅದನ್ನು ಇಲ್ಲಿ ಪ್ರಸ್ತಾಪಿಸಲಾಗಿಲ್ಲ. ಯಾವುದೇ ಸರ್ಪವಾದರೂ ಮನುಷ್ಯರನ್ನು ಅಥವಾ ಬೇರಾವುದೇ ದೊಡ್ಡ ಜೀವಿಯನ್ನು ಕಂಡರೆ ಮೊದಲು ಪಲಾಯನಮಾಡಲು ಇಷ್ಟಪಡುತ್ತದೆಯೇ ಹೊರತು ದಾಳಿಮಾಡಲು ಅಲ್ಲ. ಆದರೆ ಸರ್ಪಗಳ ಪೈಕಿ ಸ್ಪಿಟಿಂಗ್ ಕೋಬ್ರಾ ಎಂಬ ಜಾತಿಯ ಹಾವುಗಳು ಮಾತ್ರ ತಮ್ಮ ವಿಷವನ್ನು ಆತ್ಮರಕ್ಷಣೆಗಾಗಿ ಶತ್ರುವಿನ ಮೇಲೆ ಉಗಿಯುವ ಸಾಮರ್ಥ್ಯ ಪಡೆದಿವೆ. ಸುಮಾರು ಆರಡಿ ದೂರದವರೆಗೆ ತಮ್ಮ ವಿಷವನ್ನು ಗುರಿಯಿಟ್ಟು ಎಸೆಯಬಲ್ಲವು. ಈ ವಿಷ ದೇಹಕ್ಕೆ ತಾಗಿದರೆ ಅಂಥ ಅಪಾಯವೇನೂ ಇಲ್ಲ. ಆದರೆ ಕಣ್ಣಿಗೇನಾದರೂ ತಗುಲಿದರೆ ಶಾಶ್ವತ ಕುರುಡುತನ ಕಟ್ಟಿಟ್ಟ ಬುತ್ತಿ. 

       ಹೀಗೆ ಜೀವಜಂತುಗಳು ತಮ್ಮ ರಕ್ಷಣೆಗಾಗಿ ಅಳವಡಿಸಿಕೊಂಡಿರುವ ನೂರಾರು ತಂತ್ರಗಳ ಪೈಕಿ ರಾಸಾಯನಿಕ ಸಮರವೂ ಒಂದು. ನೇರವಾದ ಯದ್ಧದಲ್ಲಿ ಇರುವಂಥ ಅನಾನುಕೂಲಗಳು ಈ ಯದ್ಧದಲ್ಲಿ ಇಲ್ಲ. ತಮ್ಮ ಆಯುಧಗಳಾದ ಕೊಂಬು, ಕೈಕಾಲು ಇತ್ಯಾದಿಗಳ ನೆರವಿನಿಂದ ಶತ್ರುಗಳ ವಿರುದ್ಧ ನೇರಸಮರ ಸಾರುವುದರಲ್ಲಿ ಇರುವ ತೊಂದರೆಯೆ೦ದರೆ ಇದರಲ್ಲಿ ಯಾವಾಗಲೂ ಜಯ ಸಿಗುತ್ತದೆ ಎಂಬ ಖಾತರಿಯೇನಿಲ್ಲ. ಯುದ್ಧ ಕೈಗೊಂಡ ಎರಡೂ ಪಕ್ಷಗಳಿಗೂ ದೈಹಿಕ ಹಾನಿ ಖಂಡಿತ. ಆದರೆ ರಾಸಾಯನಿಕ ಸಮರದಿಂದ ಎರಡೂ ಪಕ್ಷದವರಿಗೆ ಹಾನಿ ಇಲ್ಲ. ಶತ್ರುವನ್ನು ಬೆದರಿಸಿಯೇ ಓಡಿಸಬಹುದು. ಒಂದೇ ಮಾತಿನಲ್ಲಿ ಹೇಳಬೇಕಾದರೆ ನೇರಸಮರವನ್ನು ಲಾಠಿಚಾರ್ಜ್ ಅಥವಾ ಗೋಲಿಬಾರ್‌ಗೆ ಹೋಲಿಸಿದರೆ ರಾಸಾಯನಿಕ ಸಮರವನ್ನು ಅಶ್ರುವಾಯು ಪ್ರಯೋಗಕ್ಕೆ ಹೋಲಿಸಬಹುದು! ಹೀಗೆ ಅತ್ಯಂತ ಸುರಕ್ಷಿತ ಹಾಗೂ ವಿನ್-ವಿನ್ ಸಿಚುವೇಷನ್ (ಇಬ್ಬರಿಗೂ ಜಯ) ಎನ್ನಬಹುದಾದಂಥ ರಾಸಾಯನಿಕ ಯುದ್ಧ ಜೀವಜಂತುಗಳ ಅತ್ಯಂತ ಸುರಕ್ಷಿತ ಹಾಗೂ ಅಚ್ಚುಮೆಚ್ಚಿನ ಸಮರಕಲೆ ಎನ್ನಿಸಿದೆ.

Category:Nature



ProfileImg

Written by Srinivasa Murthy

Verified

0 Followers

0 Following