ಅದೊಂದು ಪುಟ್ಟ ಹಳ್ಳಿ. ಅಲ್ಲಿ ಕಿಟ್ಟಣ್ಣನ ಅಂಗಡಿಯೇ 'ಫೇಮಸ್ಸು'.
ಆ ಊರಲ್ಲಿ ಅಬ್ದುಲ್ಲನ ಅಂಗಡಿ ಬಿಟ್ಟರೆ ಜನ ಬರುತ್ತಿದ್ದುದು ನಮ್ಮ ಕಿಟ್ಟಣ್ಣನ ಅಂಗಡಿಗೆ. ಅದು ಪ್ರಸಿದ್ಧವಾಗಲು ಕಾರಣವೂ ಉಂಟು. ಅಲ್ಲಿ ಶಾಲಾ ಮಕ್ಕಳಿಗೆ ಬೇಕಾದ ಪೆನ್ಸಿಲ್ ,ರಬ್ಬರು , ಚಾಕಲೇಟು , ಬಿಸ್ಕಿಟ್ ಅಲ್ಲದೆ ದಿನಸಿಗಳೂ ಸಿಗುತ್ತಿದ್ದವು.
ಆ ಅಂಗಡಿ ಬೆಳಿಗ್ಗೆ ಏಳು ಗಂಟೆಗೆ ತೆರೆಯುತ್ತಿತ್ತು. ಯಾಕಂತೀರಾ ಕೂಲಿ ಕೆಲಸಕ್ಕೆ ಹೋಗುವವರು ಅಲ್ಲಿಗೆ ಬರುತ್ತಿದ್ದುದು ಚಹಾಕ್ಕೆ. ಕಿಟ್ಟಣ್ಣನ ಚಹಾ ಎಂದರೆ ಎಲ್ಲರಿಗೂ ಇಷ್ಟ. ಆತ ಒಂದು ಚಿಕ್ಕ ಸ್ಟೌ ಇಟ್ಟಿದ್ದ. ಹಿಂದಿನ ದಿನದ ಹಾಲನ್ನೇ ಹಾಳಾಗದಂತೆ ಕುದಿಸಿ ಇಡುತ್ತಿದ್ದ. ಅಲ್ಯೂಮಿನಿಯಂ ಪಾಟೆಯಲ್ಲಿ ಮೇಲಿಂದ ಕೆಳಗೆ ,ಕೆಳಗಿನಿಂದ ಮೇಲೆ ಅವನು ಚಹಾವನ್ನು ಹಾಕುವುದನ್ನು ನೋಡಲೇ ಖುಶಿ. ಅಲ್ಲಿ ಒಂದು ಮುರುಕಲು ಬೆಂಚಿನಲ್ಲಿ ನಾಲ್ಕೈದು ಜನರು ಒತ್ತೊತ್ತಾಗಿ ಕುಳಿತು ಚಹಾಕ್ಕಾಗಿ ಕಾದು ಕುಳಿತಿರುತ್ತಿದ್ದರು.
ಇನ್ನು ಕಿಟ್ಟಣ್ಣನಲ್ಲಿ ಇದ್ದುದು ಗಾಜಿನ ಸಣ್ಣ ಲೋಟಗಳು.
ಆತನ ಮನೆ ಪಕ್ಕದಲ್ಲೆ ಇದ್ದುದರಿಂದ ಏಳೂವರೆಗೆಲ್ಲಾ ಚಾ ಮಾಡಿ ಮನೆಗೆ ಹೋಗುತ್ತಿದ್ದ. ಮತ್ತೆ ಬರುತ್ತಿದ್ದುದು ಎಂಟು ಗಂಟೆಗೆ.
ಎಂಟು ಗಂಟೆಗೆ ಬರುತ್ತಿದ್ದ ಕೆಂಪು ಬಸ್ಸಿನಲ್ಲಿ ವಾರ್ತಾಪತ್ರಿಕೆಗಳ ಕಟ್ಟು ಬರುತ್ತಿತ್ತು. ಅದನ್ನು ಚಂದಾದಾರರಿಗೆ ಕೊಡುವ ಕೆಲಸ ಕಷ್ಟದ್ದಲ್ಲ. ಯಾಕೆಂದರೆ ಅದನ್ನು ಕೊಡುತ್ತಿದ್ದುದು ಸಾಯಂಕಾಲ ಶಾಲಾ ಮಕ್ಕಳ ಜೊತೆಗೆ ಅವರು ಮನೆಗೆ ಹೋಗುವಾಗ.
ಸಾಯಂಕಾಲ ಪಟ್ಟಾಂಗ ಹೊಡೆಯಲು ಮುದುಕರು ಬರುತ್ತಿದ್ದುದು ಕಿಟ್ಟಣ್ಣನ ಅಂಗಡಿಗೆ. ಕಿಟ್ಟಣ್ಣನೂ ಅಷ್ಟೇ. ಜನರ ಸುಖ ದು:ಖಗಳಿಗೆ ಕಿವಿಯಾಗುತ್ತಿದ್ದನು.
ಕಿಟ್ಟಣ್ಣನ ಅಂಗಡಿ ಸುರುವಾಗಿ ದಶಕಗಳೇ ಕಳೆದಿದ್ದರೂ ಆತ ಎಲ್ಲಿಂದ ಬಂದವನು ಅಂತ ಯಾರಿಗೂ ತಿಳಿಯದು. ಊರಲ್ಲಿ ಅವನಿಗೆ ನೆಂಟರೂ ಇರಲಿಲ್ಲ. ಆದರೆ ಕಿಟ್ಟಣ್ಣನೆಂದರೆ ಎಲ್ಲರಿಗೂ ಪ್ರೀತಿ.
" ಇವತ್ತು ಹಣ ತಂದಿಲ್ಲಣ್ಣ, ನಾಳೆ ಕೊಡುತ್ತೇನೆ " ಎಂದರೂ ಆತ ಉದಾರವಾಗಿ ದಿನಸಿ ಕೊಡುತ್ತಿದ್ದ.
ಸಾಯಂಕಾಲ ಎಂದರೆ ಕಿಟ್ಟಣ್ಣ ತುಂಬಾ "ಬಿಜಿ". ಕಾರಣ ಶಾಲಾ ಮಕ್ಕಳು ಅವನ ಅಂಗಡಿಯನ್ನು ಮುತ್ತುತ್ತಿದ್ದರು,". ಅಂಕಲ್ ಚಾಕಲೇಟ್, ಅಂಕಲ್. ಪೆನ್ಸಿಲ್" ಅಂತ ಒಬ್ಬೊಬ್ಬರು ಒಂದೊಂದು ಕೇಳುವಾಗ ಅವರಿಗೆಲ್ಲಾ ನಗುಮುಖದಿಂದಲೇ ಕೇಳಿದ್ದನ್ನು ಕೊಡುತ್ತಿದ್ದ ಕಿಟ್ಟಣ್ಣ.
ಕಿಟ್ಟಣ್ಣ ನಿಗೆ ಒಬ್ಬ ಮಗ. ಓದುತ್ತಿದ್ದ. ಇಂಜಿನಿಯರಿಂಗ್ ಮಾಡುತ್ತಾನೆಂದು ಅವನಿಗೂ ಖುಶಿ.
ಒಂದು ದಿನ. ಕಿಟ್ಟಣ್ಣ ನಿಗೊಂದು ನೋಟೀಸು ಬಂತು. ಅದೇನೆಂದರೆ ರಸ್ತೆ ಅಗಲ ಮಾಡುವ ಸಲುವಾಗಿ" ನಿಮ್ಮ ಅಂಗಡಿಯನ್ನು ತೆರವುಗೊಳಿಸಿ. ಒಂದು ತಿಂಗಳಿನ ಗಡುವು ನೀಡಲಾಗುವುದು"
ಇದನ್ನು ನೋಡಿ ಕಿಟ್ಟಣ್ಢನ ಜಂಘಾಬಲವೇ ಉಡುಗಿತು.
ಆ ದಿನ ಅವನ ಮ್ಲಾನ ಮುಖ ನೋಡಿ ಗಿರಾಕಿಗಳಿಗೆಲ್ಲಾ ಆಶ್ಚರ್ಯ. ಏನಾಯ್ತು ಅಂತ ಗೊತ್ತಾದಾಗ ಕೆಲವರು " ಛೇ , ಅನ್ಯಾಯ ಅಂತ ಹೇಳಿದರು . ಇನ್ನು ಕೆಲವರು ಏನು ಮಾಡೋಣ ಅಂತ ಚರ್ಚಿಸಿದರು. ಸಮಸ್ಯೆ ಪರಿಹಾರ ಆಗಲಿಲ್ಲ. ಮಗ ಇಂಜಿನಿಯರಿಂಗ್ ಕೊನೇ ವರ್ಷದಲ್ಲಿದ್ದ. ನಾನು ಎಲ್ಲಿ ಹೋಗಲಿ ಅಂತ ದುಃಖ ತೋಡಿಕೊಂಡ.
ಯಾರೋ ಒಬ್ಬರು ಹತ್ತಿರದಲ್ಲಿದ್ದ ತಮ್ಮ ಜಾಗದಲ್ಲಿ ತತ್ಕಾಲಕ್ಕೆ ಗುಡಿಸಲಿನಲ್ಲಿ ಚಾದ ಅಂಗಡಿ ಇಡಬಹುದು ಅಂದರು.
ಕಿಟ್ಟಣ್ಣನ ಮುಖದಲ್ಲಿ ಈಗ ನಗುವೇ ಇಲ್ಲ. ಅಂಗಡಿಯ ಸಾಮಾನುಗಳು ಖಾಲಿಯಾದರೂ ಮತ್ತೆ ತರಿಸಲಿಲ್ಲ. ಒಂದು ದಿನ ಕಿಟ್ಟಣ್ಣನ ಅಂಗಡಿ ತೆರೆಯಲಿಲ್ಲ. ಎರಡು ದಿನದಲ್ಲಿ ವಾಪಾಸು ಬಂದ ಕಿಟ್ಟಣ್ಣ. ಹೇಳಿದ ನಾನು ಈ ಊರು ಬಿಟ್ಟು ಹೋಗುತ್ತೇನೆ.ನನ್ನ ಹುಟ್ಟೂರಲ್ಲಿ ಸ್ವಲ್ಪ ಜಾಗವಿದೆ. ಅಲ್ಲಿ ಅಣ್ಣ ಇದ್ದಾನೆ. ಅಲ್ಲಿಗೆ ಹೋಗುವೆ. ಮುಂದೆ ಮಗನಿಗೆ ಕೆಲಸ ಸಿಕ್ಕಿದಾಗ ಅವನೊಂದಿಗೆ ಹೋಗುವೆ."
ಎಲ್ಲರಿಗೂ ಬೇಸರವಾಯಿತು. ಬೇಡ ಕಿಟ್ಟಣ್ಣ ಇಲ್ಲೇ ನಿಮಗೆ ಜಾಗ ಮಾಡಿ ಕೊಡುವ.
‘ನೀವಿಲ್ಲದ ಊರು ಕಳಾಹೀನ ವಾಗುತ್ತದೆ. ದಯವಿಟ್ಟು ಹೋಗಬೇಡಿ’ ಅಂತ ಜನರು ಕೇಳಿಕೊಂಡರೂ ಆತ ಹೋಗಲು ನಿರ್ಧರಿಸಿಯಾಗಿತ್ತು.. ಮತ್ತೊಂದು ದಿನ ಭಾರವಾದ ಮನಸಿನಿಂದ ಆತ ಹೆಂಡತಿಯೊಡನೆ ಹೊರಟು ನಿಂತ .ಎಲ್ಲರ ಕಣ್ಣುಗಳು ಹನಿಗೂಡಿದವು. ಊರವರು ಪ್ರೀತಿಯಿಂದ ಅವನಿಗೆ ಹಾರ ಹಾಕಿ ಸನ್ಮಾನಿಸಿದರು.
ಕಿಟ್ಟಣ್ಣ ಮುಂದಿನ ವಾರ ನೆಲಸಮವಾಗಲಿರುವ ತನ್ನ ಅಂಗಡಿಯತ್ತ ನೋಡಿ ಕಣ್ತುಂಬಿ ಹೊರಟು ಹೋದ.
ಈಗ ಅಲ್ಲಿ ಅಂಗಡಿ ಇಲ್ಲ. ಆದರೆ ಜನರು ದಾರಿ ಹೇಳುವಾಗ ಕಿಟ್ಟಣ್ಣನ ಅಂಗಡಿಯ ಹತ್ತಿರ ಅಂತಲೋ ಕಿಟ್ಟಣ್ಣ ನ ಅಂಗಡಿಯಿಂದ ಮುಂದೆ ಅಂತಲೋ ಹೇಳುವುದುಂಟು. ಹೊಸಬರು ಎಲ್ಲಿ ಕಿಟ್ಟಣ್ಣ ನ ಅಂಗಡಿ ಅಂತ ಹುಡುಕಿದರೂ ಹಳಬರಿಗೆ ಮಾತ್ರ ಅದು ಎಲ್ಲಿ ಅಂತ ಗೊತ್ತು.
✍️ಪರಮೇಶ್ವರಿ ಭಟ್
0 Followers
0 Following