ಕಾರಣಿಕದ ಉಗ್ರ ದೈವ ಗುಳಿಗ

ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ

ProfileImg
19 May '24
4 min read


image

ಕಾಂತಾರ’ ಚಲನಚಿತ್ರದ ಕಾರಣದಿಂದ ಅನೇಕರಿಗೆ ದೈವಗಳ ಬಗ್ಗೆ ಕುತೂಹಲ ಹುಟ್ಟಿದೆ, ಗುಳಿಗ, ಪಂಜುರ್ಲಿ ದೈವಗಳ ಬಗ್ಗೆ ಮಾಹಿತಿ ಕೇಳ್ತಿದ್ದಾರೆ, ಪ್ರಸ್ತುತ ನನ್ನ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಯ ಆಯ್ದ ಭಾಗವನ್ನು ಇಲ್ಲಿ  ನೀಡಿದ್ದೇನೆ. 


ತುಳುನಾಡ ಭೂತಗಳಲ್ಲಿ ಗುಳಿಗನ ಆರಾಧನೆ ಅತ್ಯಂತ ಪ್ರಾಚೀನವಾದುದು ಎಂದು ಡಾ.ವೆಂಕಟ ರಾಜ ಪುಣಿಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ. ನೂರ ಎಂಟು ಗುಳಿಗರಿದ್ದಾರೆಂದು ನಂಬಿಕೆ ಇದ್ದು ಜಾಗ, ಸನ್ನಿವೇಶ, ಸಂದರ್ಭಗಳಿಗನುಸಾರವಾಗಿ ಗುಳಿಗ ದೈವ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ. ಅದೇ ರೀತಿ ಗುಳಿಗ ದೈವದ ಸಾನ್ನಿಧ್ಯಕ್ಕೆ ಸೇರಿದ ಅನೇಕ ವ್ಯಕ್ತಿಗಳು ಶಕ್ತಿಗಳಾಗಿ ದೈವತ್ವ ಪಡೆದು ಗುಳಿಗನ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ. ಸುಬ್ಬಿಯಮ್ಮ ಗುಳಿಗ,ಮೂಕಾಂಬಿ ಗುಳಿಗ, ಇಪ್ಪತಜ್ಜ, ಮಂತ್ರವಾದಿ ಗುಳಿಗ, ಒರಿ ಮಾಣಿ ಗುಳಿಗ ಮೊದಲಾದವರು ಇಂತಹ ಗುಳಿಗನ ಸೇರಿಗೆ ದೈವಗಳಾಗಿದ್ದಾರೆ.ನೂರ ಒಂದು ಗುಳಿಗರಿದ್ದಾರೆ ಎಂಬ ನಂಬಿಕೆ ಇದೆ. ಆದರೆ ನನಗೆ 47 ಹೆಸರುಗಳು ಸಿಕ್ಕಿವೆ ಹತ್ತೊಂಬತ್ತು ಗುಳಿಗ ದೈವಗಳ ಕಥೆ ಮಾಹಿತಿ ಸಿಕ್ಕಿದೆ. 
1ಅಂತ್ರ ಗುಳಿಗ
2 ಅಂಬರ ಮರ್ಲೆ ಗುಳಿಗ
3 ಅಕನಾಲ್ ಗುಳಿಗ
4 ಅಗ್ನಿ ಗುಳಿಗ 
5ಅಗ್ನಿ ಚಾಮುಂಡಿ ಗುಳಿಗ 
6 ಆಕಾಶ ಗುಳಿಗ
7 ಇಪ್ಪತಜ್ಜ ಮಂತ್ರವಾದಿ ಗುಳಿಗ 
8 ಒಂಟಿ ಕಣ್ಣು ಗುಳಿಗ/ ಒಕ್ಕಣ್ಣ ಗುಳಿಗ
9 ಒರಿ ಮಾಣಿ ಗುಳಿಗ
10 ಕತ್ತಲೆ ಕಾನದ ಗುಳಿಗ
11 ಕರ್ಪಾಂಡ/ ಪ ಗುಳಿಗ
12 ಕಾಳ ಭಂಡಾಸುರ ಗುಳಿಗ
13 ಕುರುವ/ ಕುರವ ಗುಳಿಗ
14 ಕೋಚು ಗುಳಿಗ
15  ಗುಳಿಗನ್ನಾಯ
16 ಚೌಂಡಿ ಗುಳಿಗ 
17 ಚೌಕಾರು ಗುಳಿಗ
18 ಚೌಕಾರ ಮಂತ್ರವಾದಿ ಗುಳಿಗ
19 ಜಾಗೆದ ಖಾವಂದ ಗುಳಿಗ
20 ಜಾಗೆದ ಗುಳಿಗ 
21 ಜೋಡು ಗುಳಿಗ
22 ತಂರ್ಜಿ ಗುತ್ತಿನ ಗುಳಿಗ 
23 ನಡಿಬೈಲು ಗುಳಿಗ 
24 ನೆತ್ತೆರ್ ಗುಳಿಗ
25 ಪಂಜುರ್ಲಿ ಗುಳಿಗ
26 ಪಾತಾಳ ಗುಳಿಗ
27  ಪೊಟ್ಟ ಗುಳಿಗ
28 ಬ/ಭಂಟ ಮಾರಣ ಗುಳಿಗ 
29  ಭಂಡಾಸುರ ಗಳಿಗ
30  ಭಂಡಾರಿ ಗುಳಿಗ
31  ಭೂಮಿ ಗುಳಿಗ
32 ಮಂತ್ರ ಗುಳಿಗ 
33  ಮಂತ್ರವಾದಿ ಗುಳಿಗ.
34 ಮುಕಾಂಬಿ ಗುಳಿಗ 
35 ಮಾರಣ ಗುಳಿಗ
36  ರಕ್ತೇಶ್ವರಿ ಗುಳಿಗ
37 ರಣ ಗುಳಿಗ
38 ರಾಜನ್ ಗುಳಿಗ
39 ರಾಹು/ ವುಗುಳಿಗ
40  ರುದ್ರಾಂಡಿ ಗುಳಿಗ
41 ರೌದ್ರ ಗುಳಿಗ
42 ಶಂಕರ ಗುಳಿಗ
43 ಶಾಂತಿ ಗುಳಿಗ 
44  ಶ್ರೀಮಂತರಾಜ ಗುಳಿಗ
45 ಸಂಕೊಲಿಗೆ ಗುಳಿಗ
46  ಸಂನ್ಯಾಸಿ ಗುಳಿಗ.
47 ಸುಬ್ಬಿಯಮ್ಮ ಗುಳಿಗ
ಮೂಲ ಗುಳಿಗ ದೈವವು ಶಿವಗಣವೆಂದು ಪರಿಗಣಿಸಲ್ಪಟ್ಟಿದೆ. ಗುಳಿಗನ ಆಯುಧ ತ್ರಿಶೂಲ ಎಂದಿದ್ದರೂ ಸೂಟೆ ಆತನ ಪ್ರಧಾನ ಆಯುಧ .ಇದರ ಆಧಾರದಲ್ಲಿ ಗುಳಿಗನೇ ಪ್ರಾಚೀನ ದೈವ ಎಂಬ ಅಭಿಪ್ರಾಯವನ್ನು ಹಿರಿಯರಾದ ವೆಂಕಟರಾಜ ಪುಣಿಂಚಿತ್ತಾಯರು ನೀಡಿದ್ದಾರೆ. 

ಗುಳಿಗ ದೈವದ ಕುರಿತು ಪುರಾಣ ಮೂಲ ಕಥಾನಕಗಳು ಐತಿಹ್ಯಗಳು ಲಭ್ಯ ಇವೆ 

ಬಹುಶಃ ಮೂಲ ಕಥಾನಕ ಕಳೆದು ಹೋಗಿದೆ 
ಕೈಲಾಸದಲ್ಲಿ ಒಂದು ದಿನ ಪಾರ್ವತಿ ಶಿವನಿಗೆ ತಂದುಕೊಟ್ಟ ಭಸ್ಮದಲ್ಲಿ ಒಂದು ಕಲ್ಲು ಸಿಗುತ್ತದೆ. ಈಶ್ವರ ದೇವರು ಅದನ್ನು ಭೂಮಿಗೆ ಎಸೆಯುತ್ತಾನೆ. ಅದರಲ್ಲಿ ಹುಟ್ಟಿದ ಈಶ್ವರನ ಮಗನೇ ಗುಳಿಗ. ಗುಳಿಗ ಹಸಿವೆ ಆಗುತ್ತಿದೆ ಎನ್ನುವಾಗ ಈಶ್ವರ ನಾರಾಯಣ ದೇವರಲ್ಲಿ ಕಳುಹಿಸುತ್ತಾನೆ. ನಾರಾಯಣ ಭೂಮಿಯಲ್ಲಿ ನೆಲವುಲ್ಲ ಸಂಖ್ಯೆ ಎಂಬುವಳ ಹೊಟ್ಟೆಯಲ್ಲಿ ಹುಟ್ಟಿ ಬರಲು ಹೇಳುತ್ತಾನೆ. ತಾಯಿಯನ್ನು ಕೊಂದು ಹೊರಗೆ ಬರುವ ಗುಳಿಗ ಹಸಿವು ತಡೆಯದೆ ನಾರಾಯಣ ಬ್ರಹ್ಮದೇವರ ಕೆರೆಯ ನೀರನ್ನು ಬತ್ತಿಸಿ ಮೀನುಗಳನ್ನು ಕೊಲ್ಲುತ್ತಾನೆ. ಅವನಿಗೆ ಆನೆ, ಕುದುರೆಗಳನ್ನು ನೀಡಿದರೂ ಅವನ ಹಸಿವೆ ಇಂಗುವುದಿಲ್ಲ. ಅದಕ್ಕೆ ನಾರಾಯಣದೇವರು ತನ್ನ ಕಿರುಬೆರಳನ್ನು ನೀಡುತ್ತಾನೆ. 
ಆಗ ನಾರಾಯಣ ದೇವರಿಗೆ ಪ್ರಜ್ಞೆ ತಪ್ಪುತ್ತದೆ. ಕೊನೆಗೆ ತ್ರಿಮೂರ್ತಿಗಳು ಅವನನ್ನು ಭೂಮಿಗೆ ಕಳುಹಿಸುತ್ತಾರೆ. ಅಲ್ಲಿ ಏಳು ಜನ ಜಲದುರ್ಗೆಯರು ದೋಣಿಯಲ್ಲಿ ಕುಳಿತು ಸಮುದ್ರದಲ್ಲಿ ಹೋಗುತ್ತಿದ್ದರು. ಅವರು ಗುಳಿಗನಿಗೆ ಆಶ್ರಯ ಕೊಡುತ್ತಾರೆ. ಬರುವಾಗ ದಾರಿಯಲ್ಲಿ ಬಿಳಿಹಂದಿ ಹಾಗೂ ಗುಳಿಗನಿಗೆ ಯುದ್ಧವಾಗುತ್ತದೆ. ಜಲದುರ್ಗೆಯರು ಅವರನ್ನು ಸಮಾಧಾನ ಮಾಡಿ ಅಣ್ಣ ತಮ್ಮಂದಿರಂತೆ ಬಾಳಲು ಹೇಳುತ್ತಾರೆ. ಪಂಜುರ್ಲಿಯ ಕ್ಷೇತ್ರದಲ್ಲಿ ನೀನು ಕ್ಷೇತ್ರಪಾಲ ಎಂದು ಹೇಳುತ್ತಾರೆ.
ಇನ್ನೊಂದು ಪಾಡ್ದನ ಪಾಠದ ಪ್ರಕಾರ ಗುಳಿಗನ ತಂದೆ ಗಾಳಿ ದೇವರು, ತಾಯಿ ಭದ್ರ ಕಾಳಿ. ಭದ್ರ ಕಾಳಿಗೆ ನವ ಮಾಸ ತುಂಬಿದಾಗ ಹೊಟ್ಟೆಯಲ್ಲಿರುವ ಮಗು ನಾನು ಯಾವ ದಾರಿಯಲ್ಲಿ ಬರಬೇಕು ?ಎಂದು ಕೇಳುತ್ತದೆ. ಆಗ ಅವಳು ದೇವರು ಕೊಟ್ಟ ದಾರಿಯಲ್ಲಿ ಬಾ ಮಗ ಎಂದು ಹೇಳುತ್ತಾಳೆ. ಅಲ್ಲಿ ಬರುವುದಿಲ್ಲ ನಾನು ಎಂದು ಮಗ ಹೇಳುತ್ತಾನೆ. ಆಗ ತಲೆ ಒಡೆದು ಬಾ ಎಂದು ತಾಯಿ ಹೇಳುತ್ತಾಳೆ. ತಲೆ ಒಡೆದು ಬಂದರೆ ತಾಯಿಯನ್ನು ಕೊಂದ ಮಗ ಎಂದಾರು ಹಾಗಾಗಿ ಅಲ್ಲಿ ಬರಲಾರೆ ಎನ್ನುತ್ತಾನೆ. ಆಗ ಅವಳು ಬೆನ್ನಿನಲ್ಲಿ ಬಾ ಎನ್ನುತ್ತಾಳೆ ಬೆನ್ನಿನಲ್ಲಿ ಬಂದರೆ ತಮ್ಮ ಎಂದಾರು ಎನ್ನುತ್ತಾನೆ. ಕೊನೆಗೆ ತಾಯಿನ ಬಲದ ಸಿರಿ ಮೊಲೆಯ ಒಡೆದು ಹುಟ್ಟುತ್ತಾನೆ. ತಾಯಿ ಹಾಲು ಕುಡಿದು ಕೈ ತಟ್ಟಿ ನಗುತ್ತಾನೆ.
ಹುಟ್ಟಿ ಹದಿನಾರು ದಿನ ಆಗುವಾಗ ಸೂರ್ಯ ನಾರಾಯಣ ದೇವರನ್ನು ಹಣ್ಣು ಎಂದು ಭಾವಿಸಿ ತಿನ್ನಲು ಹೋಗುತ್ತಾನೆ. ಆಗ ನಾರಾಯಣ ದೇವರು ನಿನಗೆ ಬೇರೆ ಆಹಾರ ಕೊಡುತ್ತೇನೆ ಎನ್ನುತ್ತಾರೆ. ಆನೆ ಕುದುರೆ ರಕ್ತ ಸಾಲದಾದಾಗ ತನ್ನ ಕಿರಿಬೆರಳನ್ನು ನೀಡುತ್ತಾರೆ. ಆಗಲೂ ಹೊಟ್ಟೆ ತುಂಬದಾಗ ಅವನನ್ನು ಬಾಲ ಸೇತುವೆ ನೂಲು ಕೈ ಹಗ್ಗದಲ್ಲಿ ಭೂಲೋಕಕ್ಕೆ ಕಳುಹಿಸುತ್ತಾರೆ. ಭೂಲೋಕಕ್ಕೆ ಇಳಿದ ಗುಳಿಗ ಪೆರ್ಕಳ ಮೋಂಟು ಬೈದ್ಯನ ಕಳ್ಳನ್ನು ಆಹಾರವಾಗಿ ಪಡೆದು ಗೋಳಿ ಮರದಲ್ಲಿ ನೆಲೆಯಾಗುತ್ತಾನೆ. ಅಲ್ಲಿಂದ ಮರದಲ ಬತ್ತಿಗೆ ಬಂದು ಮಂಜು ಬೈದ್ಯನ ಕಳ್ಳಿನ ಮಡಕೆಯನ್ನು ಪಡೆಯುತ್ತಾನೆ . ಅಲ್ಲಿಂದ ಜಾರ ಸೀಮೆಗೆ ಬಂದು ನೆಲೆಯಾಗುತ್ತಾನೆ. ಅಲ್ಲಿನ ಬಾರಗರಿಂದ ವರ್ಷಂಪ್ರತಿ ಬಲಿ ನೇಮ ಪಡೆಯುತ್ತಾನೆ. ಅಲ್ಲಿಂದಳಿಗನ ಉಗ್ರತೆಯ ಚಿತ್ರಣ ಇದೆ. ಅವನಿಗೆ ಒಂದು ಅಲೌಕಿಕ ಹುಟ್ಟನ್ನೂ ಕಟ್ಟಿ ಕೊಟ್ಟಿದ್ದಾರೆ. ಹುಟ್ಟಿನೊಡನೆ ಉಂಟಾದ ಉಗ್ರತೆ ಮತ್ತು ಪ್ರಾಣಿ ಬಲಿಗೆ ತಣಿಯದ ಹಸಿವು, ಅದಕ್ಕಾಗಿ ನರ ಬಲಿಗಾಗಿ ಭೂಲೋಕಕ್ಕೆ ಬರುವುದು ಇವೆಲ್ಲ ಆತನ ಭಯಾನಕ ಉಗ್ರ ಸ್ವರೂಪಕ್ಕೆ ಅನುಗುಣವಾಗಿ ಮೂಡಿದ ಪರಿಕಲ್ಪನೆಗಳು ಆಗಿರಬಹುದು. ಗುಳಿಗನ ಪೆಟ್ಟಿಗೆ ಸಿಕ್ಕವರು ಸಾಯುತ್ತಾರೆ ಎಂಬ ನಂಬಿಕೆ ಇದರಿಂದಲೇ ಹುಟ್ಟಿರಬಹುದು ಎಂದು ಡಾ.ಬಿ ಎ ವಿವೇಕ ರೈಗಳು ಅಭಿಪ್ರಾಯ ಪಟ್ಟಿದ್ದಾರೆ. ಈತನನ್ನು ದೇವಿಯ ದೂತನೆಂದು ಹೇಳುತ್ತಾರೆ. ಗುಳಿಗ ಬೆಟ್ಟುಸ್ಥಾನ, ಗುಡ್ಡಕಲ್ಲು, ಹಾಕಿಸಿಕೊಂಡು ಶಿಷ್ಟರಕ್ಷಣೆ, ದುಷ್ಟಶಿಕ್ಷೆಯನ್ನು ವಿಧಿಸುವ ದೈವ ಎಂದು ಪ್ರಸಿದ್ಧವಾಗಿದೆ. ಗುಳಿಗ ಕೋಲ ಅತ್ಯಂತ ಪ್ರಾಚೀನ ಆರಾಧನೆ. ಸೂಟೆ ಈತನ ಪ್ರಧಾನ ಆಯುಧ.
ಮೂಲ ದಲ್ಲಿ   ಗುಳಿಗನ ವೇಷ ಬಹಳ ಸರಳವಾದದ್ದು.( ಈಗ ಚಿತ ರ ವಿಚಿತ್ರ ಮುಖವರ್ಣಿಕೆ ವೇಷ ಭೂಷಣಗಳನ್ನು ಹಾಕುತ್ತಾರೆ)

ತೆಂಗಿನಗರಿ ಹಾಗು ಅಡಿಕೆ ಹಾಳೆಯಿಂದ ಮಾಡಿದ ಮುಖವಾಡ ಗುಳಿಗನ ವಿಶೇಷತೆ. ಪೊಟ್ಟ ಗುಳಿಗ, ರಾವು ಗುಳಿಗ, ಮಂತ್ರಗುಳಿಗ, ನೆತ್ತರ್ ಗುಳಿಗ, ಚೌಕಾರು ಗುಳಿಗ, ಸಂಚಾರಿ ಗುಳಿಗ, ಉಮ್ಮಟ್ಟಿ ಗುಳಿಗ, ಮಂತ್ರವಾದಿ ಗುಳಿಗ, ರಕ್ತೇಶ್ವರಿ ಗುಳಿಗ, ಸುಬ್ಬಿಯಮ್ಮ ಗುಳಿಗ, ಸನ್ಯಾಸಿ ಗುಳಿಗ, ಕಳಾಳ್ತ ಗುಳಿಗ, ಒರಿ ಮಾಣಿ ಗುಳಿಗ ಮೂಕಾಂಬಿ ಗುಳಿಗ, ಮಾರಣ ಗುಳಿಗ, ಉನ್ನಟ್ಟಿ ಗುಳಿಗ, ಅಗ್ನ ಗುಳಿಗ, ಭಂಡಾರಿ ಗುಳಿಗ, ಇತ್ಯಾದಿ 108 ಗುಳಿಗ ಇದ್ದಾರೆಂದು ಜನಪದರು ಹೇಳುತ್ತಾರೆ. ಇವರಲ್ಲಿ ಮೂಕಾಂಬಿ ಗುಳಿಗ, ಸುಬ್ಬಿಯಮ್ಮ ಗುಳಿಗ, ಸನ್ಯಾಸಿ ಗುಳಿಗ, ಒರಿ ಮಾಣಿ ಗುಳಿಗರು ಗುಳಿಗನ ಸೇರಿಗೆ ಸಂದಿರುವ ಮಾನವ ಮೂಲದ ದೈವಗಳಾಗಿವೆ. ಉಳಿದ ಪ್ರಬೇಧಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಲ್ಲಿ ವಿವೇಚಿಸಿದಾಗ ಸಹಜ ಪ್ರಸವವಾಗದೆ ಆಗಿನ ಕಾಲಕ್ಕೆ ತಾಯಿಯ ಹೊಟ್ಟೆಯನ್ನು ಕೊಯ್ದು ಪ್ರಸವ ಮಾಡಿಸಿದಾಗ ಹುಟ್ಟಿದ ಅಪರೂಪದ ಮಗು ಗುಳಿಗನಿರಬಹುದು. ಭಾರತದಲ್ಲಿ ಬಹು ಹಿಂದಿನ ಕಾಲದಲ್ಲಿಯೇ ಶುಶ್ರುತನಿಂದ ಆರಂಭವಾದ ಶಸ್ತ್ರ ಚಿಕಿತ್ಸಾ ಪದ್ಧತಿ ಬಳಕೆಯಲ್ಲಿತ್ತು ,ಆದರೂ ಹೊಟ್ಟೆಯನ್ನು ಕೊಯ್ದಾಗ ತಾಯಿ ಬದುಕಿರುವ ಸಾಧ್ಯತೆ ಕಡಿಮೆಯೇ ಇದೆ. ಹೀಗೆ ವಿಶೇಷವಾಗಿ ಹುಟ್ಟಿದ ಮಗು ಹದಿನಾರು ದಿನಗಳಲ್ಲಿಯೇ ನಾರಾಯಣ ದೇವರನ್ನು ತಿನ್ನಲು ಹೊರಟಂತ ಸಾಹಸವನ್ನು ಮಾಡುತ್ತದೆ. ಹಾಗಾಗಿಯೇ ಈತ ಮುಂದೆ ದೈವತ್ವ ಪಡೆದು ಉಗ್ರ ದೈವವಾಗಿ  ಜನ ಮಾನಸದಿಂದ ಆರಾಧನೆ ಹೊಂದಿರುವ ಸಾಧ್ಯತೆ ಇದೆ.
(ಇನ್ನೂ ಇದೆ)
©-ಡಾ.ಲಕ್ಷ್ಮೀ ಜಿ ಪ್ರಸಾದ

 

Category:Stories



ProfileImg

Written by Dr Lakshmi G Prasad

Verified