ಸೀತಾಳೆ ದಂಡೆಯೂ ...ಮನದ ಆಷಾಡವೂ…
ಮಲೆನಾಡಿಗರಿಗೆ ಸೀತಾಳಿದಂಡೆ ಹೊಸತೇನಲ್ಲ...ಮಳೆಗಾಲದ ಸಮಯದಲ್ಲಿ ಮರದ ಮೇಲೆ ಅಲ್ಲಲ್ಲಿ ಹೂವಿನ ಚಿಕ್ಕ ಚಿಕ್ಕ ಹಾರದಂತೆ ಕಂಡುಬರುತ್ತದೆ.ಮಲೆನಾಡಿನಲ್ಲಿ ದಂಡೆ ಎಂದರೆ ಹಾರ(ತುರುಬಿಗೆ ಮುಡಿಯುವಷ್ಟು)
ಕೆಲವರು ಈ ಹೂವನ್ನು ಆಸೆಯಿಂದ ಮುಡಿಯುವುದುಂಟು.ದೇವರಿಗೆ ಬಳಸುವುದಿಲ್ಲ.ಈ ಹೂವು ಸಾಮಾನ್ಯವಾಗಿ ತಿಳಿ ಗುಲಾಬಿ ಅಥವಾ ಗಾಢ ಗುಲಾಬಿ ಬಣ್ಣದಲ್ಲಿರುತ್ತದೆ..ಮಳೆಗಾಲದ ದಿನಗಳಲ್ಲಿ ಕಂಡುಬರುವ ಈ ಹೂವು ಮೊದಲು ಹೆಂಗಳೆಯರ ಮುಡಿಯಲ್ಲಿ ರಾರಾಜಿಸುತಿತ್ತು. ಆಧುನಿಕ ಯುಗ ಕಾಲಿಟ್ಟಿದ್ದೇ ನೋಡಿ ಮೇಲಿರುವ ಸೀತಾಳೆದಂಡೆ ಕೆಳಗಿಳಿಯಲೇ ಇಲ್ಲ..
- ನಾನಾಗ ಚಿಕ್ಕವಳು..ಮೂವತ್ತು ಜನರ ತುಂಬು ಕುಟುಂಬ.ಮೊದಲ ಮೊಮ್ಮಗು ನಾನು.ಆಡಲಿಕ್ಕೆ ಬೇರೆ ಮಕ್ಕಳಿರಲಿಲ್ಲ..ಅಪ್ಪ ಮನೆಯ ಹಿತ್ತಲಿನ ಮಾವಿನಮರಕ್ಕೆ ಜೋಕಾಲಿ ಕಟ್ಟಿಕೊಟ್ಟಿದ್ದರು.ಆ ಜೋಕಾಲಿ ಈಗಿನ ಪ್ಲಾಸ್ಟಿಕ್ ಜೋಕಾಲಿಯಂತೆ ಬಣ್ಣ ಬಣ್ಣದ್ದಲ್ಲ.ಹಾಳಾದ ಬಾವಿಯ ಹಗ್ಗಕ್ಕೆ ಗೋಣೀಚೀಲ ಹಾಕಿ ಮರಕ್ಕೆ ನೇತುಬಿಟ್ಟರೇ ಅದೇ ಜೋಕಾಲಿ. ಸಗಣಿ ಹಾಕಿ ಸಾರಿಸಿದ ಅಂಗಳ, ಸುತ್ತ ಹೂವಿನ ಗಿಡಗಳು, ಮದ್ಯೆ ಮಾವಿನಮರ,ಅದರಲ್ಲಿ ನನ್ನ ಜೋಕಾಲಿ.ಮಾವಿನ ಮರಕ್ಕೊಂದು ಕಟ್ಟೆ.ಅದೂ ಕೂಡಾ ಸಗಣಿಯಿಂದ ಸಾರಿಸಲ್ಪಡುತಿತ್ತು.ಸಮಯ ಬಂದಾಗ ಆ ಕಟ್ಟೆಯ ಮೇಲೇ ಓದು-ಬರಹ ಮುಗಿದುಬಿಡುತಿತ್ತು..ದಿನದ ಅರ‍್ದ ಭಾಗ ನಾನು ಅಲ್ಲೇ ಕಳೆಯುತ್ತಿದ್ದೆ.ಮನೆಯ ಒಬ್ಬ ಮಂದಿ ಒಂದು ಸಲ ತೂಗಿದರೂ ದಿನಕ್ಕೆ ೩೦ ಸಲ..ನನ್ನ ಜೋಕಾಲಿಯ ಎದುರಿಗೆ ಆಕಾಶದ ವಿಮಾನವೂ ಸಮ ತೂಕದ್ದಲ್ಲ..ಪಕ್ಕದಲ್ಲೇ ರಸ್ತೆ.ಒಂದೋ ಎರಡೋ ಎತ್ತಿನ ಗಾಡಿಗಳು ಸಾಗುತ್ತಿದ್ದವೇ ಹೊರತೂ ಈಗಿನಂತೆ ವಾಹನಗಳ ಕರ‍್ಕಶ ಶಬ್ಧವಿರಲಿಲ್ಲ. ಹಕ್ಕಿಪಕ್ಷಿಗಳ ಕೂಗು ಬಿಟ್ಟರೆ ನಿಶ್ಯಬ್ಧ ಮಲೆನಾಡ ಪರಿಸರ.
- ಏಪ್ರಿಲ್ ತಿಂಗಳಲ್ಲಂತೂ ಮಾವಿನಮರ ತೆನೆ ತುಂಬಿ ನಿಂತಿರುತಿತ್ತು..ಆ ಹೂವಿಗೆ ಮುತ್ತಲು ಜೇನುಗಳ ಸಾಲು.ಚಿಗುರು ತಿನ್ನಲು ಬರುವ ಹಕ್ಕಿಗಳು. ಇಂಪಾಗಿ ಹಾಡುವ ಕೋಗಿಲೆ..ಅಮ್ಮ ಒಣಗಿಸುತ್ತಿದ್ದ ಹಲಸಿನ ಹಪ್ಪಳ. ತಿನ್ನಲು ಮುಷ್ಟಿಯಲಿ ಚಿಪ್ಸ್.ಕೆಲಸದವರು ಕಡಿದಿಡುತ್ತಿದ್ದ ಹಲಸಿನ ಹಣ್ಣು...ಆ ದಿನಗಳ ವೈಭವ ಕೇಳಬೇಕೆ? ಎಲ್ಲದನ್ನೂ ದುಡ್ಡಿನಿಂದ ಅಳೆಯುವ ಈ ಕಾಲಕ್ಕೆ ತಲೆಯ ಮೇಲೆ ಹೊಡೆದಂತಿತ್ತು ಆ ಕಾಲ..ಜೋಕಾಲಿ ತೂಗುವ ರಭಸಕ್ಕೆ ಮಾವಿನ ಮರದಲ್ಲಿರುವ ಹಣ್ಣು ಕೆಳಗೆ ಬೀಳುತ್ತಿತ್ತು. ನಾನಾಗ ಒಬ್ಬಂಟಿಯಾಗಿರಲಿಲ್ಲ. ಸುತ್ತಲಿನ ವಾತಾವರಣವನ್ನುಇನ್ನಷ್ಟು ಸೊಗಸುಗೊಳಿಸಿದವರು ಇವರು.ಮಳೆಗಾಲದಲ್ಲಿ ಮಾತ್ರ ನನ್ನ ಜೋಕಾಲಿ ಮನೆ ಸೇರುತಿತ್ತು..
- ಇಂದಿಗೂ ಮನೆಗೆ ಹೋದಾಗ ಆ ಮರದತ್ತ ಕಣ್ಣಾಡಿಸುತ್ತೇನೆ...ಆ ಮರ ಈಗ ಅಲ್ಲಿಲ್ಲ..ಆ ಜಾಗ ಕಳೆಗಳಿಂದ ಮುಚ್ಚಿಹೋಗಿದೆ.ಅವಿಭಕ್ತ ಕುಟುಂಬ ಈಗಿಲ್ಲ..ಮನೆಯಲ್ಲಿ ಒಂದೆರಡು ಜನ..ಅತ್ತೆಯರು ಮದುವೆಯಾಗಿ ಗಂಡನ ಮನೆ ಸೇರಿದರೆ..ಅಜ್ಜಿಯರು ಮಸಣಕ್ಕೆ..ಅಂಗಳಕ್ಕೆ ಹೋಗುವ ಜನರೆ ಕಡಿಮೆಯಾದರು. ಒಂದು ಮಾತಿದೆ; ಯಾವ ವಸ್ತುವೇ ಆಗಲೀ ಜೀವಂತಿಕೆಯಿಂದಿರಬೇಕೆಂದರೆ ಅಲ್ಲಿನ ವಾತಾವರಣದ ಪಾತ್ರವೂ ಬಹುಮುಖ್ಯವಾಗಿರುತ್ತದೆ. ಮರದ ಮೇಲೆ ಬಂಜಲಿಕೆಗಳು ಬೆಳೆದು, ಮೇ ತಿಂಗಳಿನ ಹುಚ್ಚು ಗಾಳಿ-ಮಳೆಗೆ ಬುಡಸಮೇತ ಉರುಳಿ ಒಲೆಯ ಪಾಲಾಗಿತ್ತು.
- ಕೆಲವು ವಸ್ತುಗಳೇ ಹಾಗೆ..ಜೀವವಿಲ್ಲದಿದ್ದರೂ ಭಾವನೆಗಳಿಗೆ ಹತ್ತಿರವಾಗಿರುತ್ತವೆ...ಕಾಲ ಬದಲಾದರೇನಂತೆ? ಭಾವನೆಗಳು ಬದಲಾಗುವುದಿಲ್ಲ.ನೆಚ್ಚಿನ ಮಾವಿನಮರ..ಮರದ ಸೀತಾಳೀದಂಡೆ ನನ್ನ ನೆನಪಿನಂಗಳದಲ್ಲಿ ಇನ್ನೂ ಹಚ್ಚ ಹಸಿರಾಗಿವೆ..ಮನದಂಗಳದಲ್ಲಿ ನೆನಪಿನ ಜೋಕಾಲಿ ಜೀಕುತ್ತಿವೆ...ಆದರೂ ಕಣ್ಣಂಚಿನಲಿ ಸದ್ದಿಲ್ಲದೆ ಹನಿಯೊಂದು ಜಾರುತ್ತದೆ...
- ಸೌಮ್ಯ ಜಂಬೆ
- ಮೈಸೂರು.