ಸಂಜೀವಕ ಮತ್ತು ಪಿಂಗಳಕರ ಕತೆ

ಎತ್ತು ಮತ್ತು ಸಿಂಹದ ಕತೆ

ProfileImg
16 Jan '24
5 min read


image

7. ಸಂಜೀವಕ ಮತ್ತು ಪಿಂಗಳಕರ ಕತೆ 

  “ದೇವಾ! ಪೂರ್ವಜನ್ಮದಲ್ಲಿ ನೀನು ಮಾಯಾಪುರವೆಂಬ ಪಟ್ಟಣದಲ್ಲಿ ಸಿ೦ಹವರ್ಮನೆಂಬ ಅರಸನಾಗಿದ್ದೆ. ಹಲವು ಕಾಲ ಸುಖದಿಂದ ರಾಜ್ಯಭಾರ ಮಾಡಿದ ನಿನಗೆ ಸ೦ಸಾರದಲ್ಲಿ ವಿರಕ್ತಿಯುಂಟಾಯಿತು. ಸಂಸಾರ ಸುಖಕ್ಕೆ ಬೇಸತ್ತ ನೀನು ತಪಸ್ಸನ್ನು ಸ್ವೀಕರಿಸಿ, ತಪೋವನಕ್ಕೆ ಹೊರಟು ಹೋದೆ. ತಪಸ್ಸಿನಲ್ಲಿ ನಿಂತೆಯಾದರೂ ಆಗಮ ಪದಾರ್ಥಗಳನ್ನು ತಿಳಿದುಕೊಳ್ಳದೆ, ಗುರೂಪದೇಶಗಳನ್ನು ಕೇಳದೆ ನೀನು ತಪಸ್ಸನ್ನು ಆಚರಿಸಿದೆ. ಬಳಿಕ ಪಂಚಾಂಗ ಸಾಧಕ ತಪಸ್ವಿಯೊಬ್ಬನನ್ನು ಕಂಡು ಆತನಂತೆ ತಪನ್ನಾಚರಿಸಬೇಕೆಂದು ನಿರ್ಧಾರ ಮಾಡಿದೆ.ಪಂಚಾಗ್ನಿಯಿಂದ ತಪ್ತನಾಗಿ, ಭಾವಶುದ್ಧಿ ನಾಶವಾಗಿ ಕೋಪಾಗ್ನಿ ಹೆಚ್ಚಾಗಲು ನೀನು ರೌದ್ರಧ್ಯಾನದಲ್ಲಿ ಸತ್ತು ಹೋದೆ. 

ಬಳಿಕ ಸಿಂಹನಾಗಿ ಈ ಜನ್ಮದಲ್ಲಿ ಹುಟ್ಟಿರುವೆ.

  ಇನ್ನು ನಾನಾದರೋ, ಹಿಂದಿನ ಜನ್ಮದಲ್ಲಿ ಹಲವು ಕಾಲ ತಪೋವನದಲ್ಲಿ ತಪಸ್ಸನ್ನಾಚರಿಸಿದೆ. ಆದರೆ ನನಗೆ ಕೇವಲ ಜ್ಞಾನ ಹುಟ್ಟುವಷ್ಟೊತ್ತಿಗೆ ಜನ್ಮಾಂತರದ ದುಷ್ಕರ್ಮದ ವಾಸನೆಯುಂಟಾಗಿ ನಾನು ಗುರುಗಳ ಆಜ್ಞೆಯನ್ನು ಅವಜ್ಞೆ ಮಾಡಿದೆ. ತಾಪಸಕನೈಯನ್ನು ಕಂಡು ಸಾಪೇಕ್ಷನಾಗಿ ನೋಡಿದೆ. ಇದನ್ನು ಕಂಡ ತಪಸ್ವಿ ಮುಳಿದು ನಾನು ಪಶುವಿನ ಬಸಿರಲ್ಲಿ ಹುಟ್ಟುವಂತೆ ಶಾಪಕೊಟ್ಟ, ಈ ಶಾಪಕ್ಕಂಜಿದ ನಾನು ತಪಸ್ವಿಯ ಪಾದಗಳಿಗೆರಗಿ ದಯೇ ತೋರಿಸಬೇಕೆಂದು ಬೇಡಿಕೊಂಡೆ. ಶ್ರವಣರ ಮನೆಯಲ್ಲಿ ಹುಟ್ಟುವಂತೆ, ಜಾತಿಸ್ಮರನಾಗುವಂತೆ ವರವನ್ನು ದಯಪಾಲಿಸಬೇಕೆಂದು ಕೇಳಿಕೊಂಡೆ. ತಪಸ್ವಿ ಕಾರುಣ್ಯದಿಂದ 'ತಥಾಸ್ತು' ಎಂದ. ಆದ್ದರಿಂದ ನಾನು ನಿರ್ಮಲ ಧರ್ಮಮಾರ್ಗನಾದ ವರ್ಧಮಾನನ ಮನೆಯಲ್ಲಿ ಪಶುವಾಗಿ ಹುಟ್ಟಿ ಧರ್ಮಾಧರ್ಮಗಳನ್ನರಿತೆ. ಆದ್ದರಿಂದ ಈಗ ನಾನು ನಿನಗೆ ಧರ್ಮೋಪದೇಶ ಮಾಡಬೇಕಾಯಿತು.

  ನೀನು ಈ ಕ್ರೂರ ಕರ್ಮವನ್ನು ಬೆನ್ನು ಬಿಡದೆ ಆಚರಿಸಿ ನರಕಲೋಕದಲ್ಲಿ ನರಕಜೀವಿಗಳು ಮಾಡುವ ಪಾಪಕ್ಕೆ ಪಕ್ಕಾಗಿ ನಿಷ್ಕಾರಣ ಕೆಡುವುದು ಸರಿಯಲ್ಲ. ಆದ್ದರಿಂದ ನನ್ನ

ಮಾತನ್ನು ಕೇಳು. ವ್ಯರ್ಥವಾದ ಈ ಪ್ರಾಣಿವಧೆಯನ್ನು ಬಿಟ್ಟು ಪರಲೋಕ ಸುಖವನ್ನು ಪಡೆದುಕೊಳ್ಳುವುದೇ ಬುದ್ದಿ !”

  ಹೀಗೆ, ಪಿಂಗಳಕನಿಗೆ ಧರ್ಮೋಪದೇಶದ ಮೂಲಕವಾಗಿ ತಮ್ಮ ಪೂರ್ವಜನ್ಮಾಂತರದ ವೃತ್ತಾಂತವನ್ನು ಸಂಜೀವಕ ತಿಳಿಸಿ ಹೇಳಿದ.

 ಇದಕ್ಕೆ ಪಿಂಗಳಕ ಪ್ರತಿಯಾಗಿ, " ಸಂಜೀವಕ! ಸಮಸ್ತ ಪ್ರಾಣಿಗಳು ತಮ್ಮ ತಮ್ಮ ಜಾತಿಗೆ ತಕ್ಕಂತೆ ಜೀವನೋಪಾಯವನ್ನು ಚಿಂತಿಸುತ್ತ ಬಾಳುವುದೇ ಧರ್ಮ. ಆದ್ದರಿಂದ ನನಗೆ ಕೊಲ್ಲುವುದಾಗಲಿ ತಿನ್ನುವುದಾಗಲಿ ಧರ್ಮವಲ್ಲದೆ ಬೇರಾವ ಧರ್ಮವಿಲ್ಲ" ಎಂದು ಹೇಳಿದ.

  ಪಿಂಗಳಕನ ಈ ಮಾತಿಗೆ ಸಂಜೀವಕ, ''ದೇವಾ, ಈ ಲೋಕದಲ್ಲಿ ತತ್ವನಿಶ್ಚಯಕ್ಕಾಗಿಕ್ಕಾಗಿಯೇ ಸಮಯ ಸಿದ್ಧಾಂತಗಳು ಹಲವಾರು ಹುಟ್ಟಿಕೊಂಡಿವೆ.ಅಲ್ಲಿ ಧರ್ಮಾಧರ್ಮವೆಂದು ಬೇಧಗಳುಂಟು. ಅವು ಇಂತಿವೆ : ಸರ್ವಪ್ರಾಣಿಗಳಲ್ಲಿ ದಯೆ ತೋರಬೇಕು; ಯಾವ ಪ್ರಾಣಿಯನ್ನು ಹಿಂಸಿಸಬಾರದು. ಇದು ಆಕಳಂಕ ತಕ್ಕ ಪ್ರತಿಷ್ಠಾ ನಿಶ್ಚಯ ಜೈನ ಸಿದ್ಧಾಂತವಾದಿಗಳ ವಿಚಾರ. ಇದು ಮೊದಲನೆಯ ಭೇದ. ಇನ್ನು ಎರಡನೇಯದು, ಆಹಿಂಸೆಯೇ ಧರ್ಮದ ಪ್ರಮುಖ ಲಕ್ಷಣ. ಇದು ವೈಶೇಷಿಕ ನೈಯಾಯಿಕ ಸಾಂಖ್ಯ ಮಿಮಾಂಸ ಷಟ್ತರ್ಕ ಸಿದ್ಧಾಂತವಾದಿಗಳ ವಿಚಾರ. ಆದ್ದರಿಂದ, ಈ ಎರಡು ಸಿದ್ಧಾಂತಗಳ ಪ್ರಕಾರ "ಪ್ರಾಣಿ ರಕ್ಷಣೆಯೇ ಪರಮ ಧರ್ಮ, ಪ್ರಾಣಿವಧೆಯ ಪರಮ ಪಾಪ" ಎಂದು ಒಪ್ಪಿ ಆಚರಿಸಬೇಕು. ಆದ್ದರಿಂದ ಪ್ರಾಣಿವಧೆಯನ್ನು ಮಾಡಬಾರದು.ಯಾವನು 

ಪ್ರಾಣಿವಧೆಯನ್ನು ಮಾಡುತ್ತಾನೋ, ಅವನು ಪಶುಗಳ ಮೈಯಲ್ಲಿ ಎಷ್ಟು ರೋಮಗಳಿರುತ್ತವೆಯೋ, ಅಷ್ಟುಬಾರಿ ಕೊಲ್ಲಿಸಿಕೊಳ್ಳುತ್ತಾನೆ. ಅಂಥವನು ನರಕವನ್ನು ಹೊಂದುತ್ತಾನೆ, 

ಪಶುತ್ವವನ್ನು ಪಡೆಯುತ್ತಾನೆ ಎಂದು ಮಹಾಮುನಿಗಳು ಹೇಳುತ್ತಾರೆ, ಆದ್ದರಿಂದ ಯಾವನು ಪ್ರಾಣಿವಧೆಯನ್ನು ಮಾಡುತ್ತಾನೆಯೋ, ಆತನು ನರಕದಲ್ಲಿ ಜನಿಸಿ ನರಕಯಾತನೆಯನ್ನು ಹೊಂದುತ್ತಾನಲ್ಲದೆ, ಅನೇಕ ತಿರ್ಯಕ್ ಯೋನಿಗಳಲ್ಲಿ - ಪಾಣಿಗಳ ಹೊಟ್ಟೆಯಲ್ಲಿ - ಅನೇಕ ಸಲ ಹುಟ್ಟುತ್ತಾನೆ.; ಅನೇಕ ಸಲ ಕೊಲ್ಲಿಸಿಕೊಳ್ಳುತ್ತಾನೆ" ಎಂದು ಹೇಳಿದ. 

  ಅದಕ್ಕೆ ಪ್ರತಿಯಾಗಿ ಪಿಂಗಳಕ, “ಜೀವಿ ಎಲ್ಲಿಯತನಕ ಜೀವಿಸುವನೋ, ಅಲ್ಲಿಯತನಕ ಸುಖ ಪಡಬೇಕು. 

ಮೃತ್ಯುವಿಗೆ ಒಳಗಾಗದ ಪ್ರಾಣಿಯೇ ಇಲ್ಲ ; ಬೂದಿಯಾದ ದೇಹ ಮರಳಿ ಹುಟ್ಟುವುದಿಲ್ಲ. ಇದು ಬೃಹಸ್ಪತಿಯ ಮತ. ಇದು ಪ್ರತ್ಯಕ್ಷಾನುಭವ ಸಿದ್ಧಾಂತವಾದದ್ದರಿಂದ ಇದೇ ಪ್ರಮಾಣ.

ಪರಲೋಕವನ್ನು ಯಾರೂ ಕಂಡವರಿಲ್ಲ. ಆದಕಾರಣ, ಯಾವ ಪ್ರಾಣಿಯಾದರೂ ತನ್ನ ಜೀವವಿರುವತನಕ ತನಗೆ ಬೇಕಾದಂತೆ ಸುಖಪಡಬಹುದು. ಇದರಲ್ಲಿ ತಪ್ಪೇನಿದೆ ?" ಎಂಡು ಹೇಳಿದ. 

ಪಿಂಗಳಕನ ಈ ಮಾತಿಗೆ ಸಂಜೀವಕ, “ದೇವಾ! ನೀನು ಇಂಥ ಸಿದ್ಧಾಂತವನ್ನು ಹಿಡಿದು ಕೆಡಬೇಡ. ಏಕೆಂದರೆ ಪರಲೋಕ 

ಇದೆಯೋ ಇಲ್ಲವೋ, ಅದು ಸಿಕ್ಕುತ್ತದೆಯೋ ಸಿಕ್ಕುವುದಿಲ್ಲವೋ ಎಂಬ ಸಂದೇಹವಿದ್ದರೂ ಬುದ್ಧಿವಂತರಾದವರು ಮಾತ್ರ ಪಾಪವನ್ನು ಮಾಡುವುದಿಲ್ಲ : ಮಾಡಬಾರದು. ಅಧರ್ಮವನ್ನು

ನಿನಗೆ ಯಾವ ಹಾನಿಯಿದೆ?. ನೀನು ಏನೇ ಹೇಳು. ಆದರೆ ಪರಲೋಕವಿಲ್ಲವೆನ್ನುವ ನಾಸ್ತಿಕನು ಮಾತ್ರ ಕೆಡುತ್ತಾನೆ. ಹೀಗೆಂದು ತತ್ವವಾಕ್ಯಗಳುಂಟು. ಆದ್ದರಿಂದ ಪರಲೋಕವಿಲ್ಲವೆನ್ನುವವನು ಆ ಅಪಸಿದ್ಧಾಂಶವನ್ನು ಪ್ರಮಾಣ ಮಾಡಿಕೊಂಡು ಪಾಪಪರನಾಗುತ್ತಾನೆ. ಒಂದು ವೇಳೆ ಪರಲೋಕವಿದ್ದರೂ ನಿಷ್ಪಲನಾಗಿ ಕೆಡುತ್ತಾನೆ. ಆದರೆ ಧರ್ಮಪರನು ಪರಲೋಕ 

ಇರಲಿ, ಇಲ್ಲದಿರಲಿ ಆತ ಎಂದೆಂದಿಗೂ ಕೆಡಲಾರ" ಎಂದು ಹೇಳಿದ.

  ಒಂದು ದಿನ ವರರುಚಿ ಭಟ್ಟನೆಂಬ ಬ್ರಾಹ್ಮಣ ಪುಣ್ಯಫಲಾರ್ಥವಾಗಿ ತೀರ್ಥಯಾತ್ರೆ ಮಾಡುತ್ತ ದಂಡಕಾರಣ್ಯದಲ್ಲಿ ಬರುತ್ತಿದ್ದ. ಬ್ರಹ್ಮರಾಕ್ಷಸನೊಬ್ಬ ಆತನನ್ನು ಕಂಡು ತಿನ್ನಲೆಂದು ವಿಚಾರಿಸಿ ವರರುಚಿ ಭಟ್ಟನನ್ನು ಕುರಿತು, "ಯಾವುದು ಪಂಥ ?ಯಾವುದು ಸಂತೋಷದಾಯಕ ? ಯಾವುದು ಸೇವೆಗೆ ಯೋಗ್ಯವಾದುದು ?"ಎಂದು ಮುಂತಾಗಿ ಕೇಳಿದ. ವರರುಚಿ ಭಟ್ಟ ಬ್ರಹ್ಮರಾಕ್ಷಸನ ಈ ಚೇಷ್ಟಾಭಿಪ್ರಾಯವನ್ನರಿತು,"ಪ್ರಾಣಿಗಳನ್ನು ಕೊಲ್ಲಬಾರದು, ಪರರ ವಸ್ತುಗಳನ್ನು ಕೊಳ್ಳಬಾರದು; ಸತ್ಯವನ್ನೇ ನುಡಿಯಬೇಕು. ಪರಸ್ತ್ರೀಯರು ಮಾತನಾಡುವಲ್ಲಿ ಮೂಕನಾಗಿರಬೇಕು; ಆಸೆಯೆಂಬ ತ್ವರೆಯನ್ನು ಕಟ್ಟಬೇಕು; ಗುರುಗಳಲ್ಲಿ ವಿನಯವನ್ನು ತೋರಬೇಕು; ಸರ್ವ ಪ್ರಾಣಿಗಳಲ್ಲೂ ದಯೆಯನ್ನು ತೋರಬೇಕು-ಇವೆಲ್ಲವುಗಳು ಶಾಸ್ತ್ರಗಳಲ್ಲಿ ಸಾಧಾರಣ. ಇವು ಕೆಡದ ವಿಧಾನಗಳು. ಲೇಸುಗಳಿಗೆ ಇವೇ ದಾರಿ.

ಇನ್ನು, ಮನೆಯಲ್ಲಿದ್ದುದನ್ನೇ ಮಧುರವೆಂದು ಭಾವಿಸಿ, ಸಾಲವಿಲ್ಲದೆ, ಪರರ ಆಳಾಗದೆ, ಉಂಡು ಜೀವಿಸುವುದೇ ಯೋಗ್ಯವಾದುದು ! ಒಬ್ಬಳೇ ಹೆಂಡತಿ, ಮೂವರು ಮಕ್ಕಳು ಹನ್ನೆರಡು ವ್ಯವಸಾಯ, ಹತ್ತು ಹಾಲು ಕರೆವ ಹಸುಗಳಿಂದ ಕೂಡಿ ಸಮೃದ್ಧವಾದ ಸುಕ್ಷೇತ್ರದಲ್ಲಿರುವುದೇ ಯೋಗ್ಯ ; ಇದೇ ಸಂತೋಷದಾಯಕವಾದುದು!. ಪ್ರಾಣಿರಕ್ಷಣೆಯೇ ಮುಖ್ಯ ಧರ್ಮ"ಎಂದು ಹೇಳಿದ.

  ಹೀಗೆ,ಸಂಜೀವಕ ದೃಷ್ಟಾಂತಗಳ ಮೂಲಕ ಪಿಂಗಳಕನಿಗೆ ಧರ್ಮೋಪದೇಶ ಮಾಡಿ, ಬಳಿಕ ಮತ್ತೆ, "ದೇವಾ! ತನಗೆಂದೂ ಕೇಡನ್ನು ಬಯಸದ ಮನುಷ್ಯನು ಇನ್ನುಳಿದ ಜೀವಕ್ಕೂ ಕೇಡನ್ನು ಬಯಸಬಾರದು. ಸಕಲ ಜೀವಿಗಳನ್ನು ತನ್ನಂತೆ ಬಗೆಯುವುದೇ ನಿಜವಾದ ಧರ್ಮ. ಇದು ಮುನಿವೇದವ್ಯಾಸರ ಮತ. ಆದ್ದರಿಂದ ಪ್ರಾಣಿವಧೆ ಮಾಡಬಾರದು. ಸಕಲ ಪ್ರಾಣಿ ಹಿತವೇ ಧರ್ಮ.”ಎಂದು ಹೇಳಿದ. 

  ಸಂಜೀವಕನ ಈ ಧರ್ಮೋಪದೇಶವನ್ನು ಕೇಳಿ ಪಿಂಗಳಕ ಮೃದು ಹೃದಯನಾದ. ಆತನ ಅಂತಃಕರಣ ಕರಗಿ ನೀರಾಯಿತು. ತಾನು ಮಾಡುತ್ತಿರುವುದು ಅಧರ್ಮ ಕಾರ್ಯವೆಂಬುದು ಪಿಂಗಳಕನಿಗೆ ಮನವರಿಕೆಯಾಯಿತು.ಆಗವನು ಸಂಜೀವಕನಿಗೆ, “ಎಲೆ ಪರಮಮಿತ್ರನೇ! ನೀನು ಹೇಳಿದ ಧರ್ಮ ಹಲವು ತೆರನಾಗಿ ನನ್ನ ಮನದಲ್ಲಿ ನೆಲೆಸಿತು. ಆದರೆ ನನ್ನ ಮನದಲ್ಲಿ ಇನ್ನೊಂದು ಚಿಂತೆ ಕಾಡುತ್ತಿದೆ.ಅದೆಂದರೆ, ನನಗೆ ಪಶುವೇ ಯೋಗ್ಯ ಆಹಾರವಲ್ಲವೇ? ನೀನು ಹೇಳಿದಂತೆ ಹುಲ್ಲನ್ನು ಮೇಯಲರಿಯೆನು, ನನಗೆ ಮಾ ಆಹಾರವಿಲ್ಲದೆ ಶರೀರ ಪೋಷಣೆಯಾಗದು" ಎಂದು ಹೇಳಿತು.

  ಅದಕ್ಕೆ ಸಂಜೀವಕ, “ದೇವಾ! ಸರಿ. ಹಾಗಾದರೆ, ನಿನಗೆ ಹರ್ಷವಾದಾಗ ಅನೇಕ ಮೃಗಗಳನ್ನು ಕೊಲ್ಲದೆ ಹಸಿವನ್ನು ತೀರಿಸಿಕೊಳ್ಳಲು ನಿನಗೆ ಅದೆಷ್ಟು ಬೇಕೋ ಅಷ್ಟನ್ನೇ ಮಾತ್ರ ಕೊಂದು ತಿಂದು ನಿಶ್ಚಿಂತನಾಗಿರುವುದು ಒಳ್ಳೆಯದು "ಎಂದು ಹೇಳಿತು.

  ಸಂಜೀವಕನ ಈ ಮಾತಿಗೆ ಪಿಂಗಳಕ ಒಪ್ಪಿಕೊಂಡು ತನ್ನ ಮೊದಲಿನ ಕ್ರೂರಕರ್ಮವನ್ನು ತ್ಯಜಿಸಿ ಶುದ್ಧಚಿತ್ತನಾದ. ತನ್ನ ಹೊಟ್ಟೆಯ ಹಸಿವನ್ನು ತುಂಬಿಸಿಕೊಳ್ಳುವಷ್ಟು ಮಾಂಸವನ್ನು ಮಾತ್ರ ಸ್ವೀಕರಿಸುತ್ತ ನಿಶ್ಚಿಂತನಾಗಿರತೊಡಗಿದ.ತನ್ನ ಹಸಿವೆಯ ತೃಪ್ತಿಗೆ ಎಷ್ಟು ಬೇಕೋ ಅಷ್ಟೇ ಪ್ರಾಣಿಗಳನ್ನು ಕೊಲ್ಲತೊಡಗಿದ ಪಿಂಗಳಕ.

  ಆದರೆ, ಇದರಿಂದ ಪಿಂಗಳಕನನ್ನು ಆಶ್ರಯಿಸಿದ್ದ ಉಳಿದ ಪ್ರಾಣಿಗಳಿಗೆ ತೊಂದರೆಯುಂಟಾಯಿತು. ಕರಟಕ, ದವನಕ ಮೊದಲಾದ ಪ್ರಾಣಿಗಳೆಲ್ಲವೂ ಹಲವು ದಿನ ಆಹಾರವಿಲ್ಲದೆ ಮರಮರನೆ ಮರುಗುವಂತಾಯಿತು. ಸಾವಿನ ಆವಸ್ಥೆ ಹುಟ್ಟಿ ಸಹಿಸಿಕೊಳ್ಳಲಾಗದೆ ಪಿಂಗಳಕನಲ್ಲಿಗೆ ಬಂದು ನಮಸ್ಕರಿಸಿದವು. ಆ ಪ್ರಾಣಿಗಳಲ್ಲಿ ಜಾಂಬವಂತನೆಂಬ ಮುದಿ ಜಂಬಕ ಪಿಂಗಳಕನಲ್ಲಿ ಹೀಗೆ ವಿನಂತಿಸಿಕೊಂಡ :

  “ದೇವಾ! ನಮ್ಮ ಬಿನ್ನಹವನ್ನು ಕೇಳು, ಹಲವು ಕಾಲ ನೀನು ನಮ್ಮನ್ನು ರಕ್ಷಿಸಿ, ಈಗ ಸುಮ್ಮನೆ ನಮ್ಮೆಲ್ಲರನ್ನು ಮರೆತು ಕೇವಲ ನಿನ್ನ ಒಡಲನ್ನು ಮಾತ್ರ ರಕ್ಷಿಸಿಕೊಂಡು ಬಾಳುವುದು ನಿನಗೆ ಗುಣವೇ ? ಅದೂ ಅಲ್ಲದೆ, ಎಲ್ಲಿಂದಲೋ ಬಂದ ಧೂರ್ತ ಎತ್ತಿನ ಬುದ್ಧಿಯನ್ನು ಸ್ವೀಕರಿಸಿ ಅನ್ವಯಾಗತರೂ, ಹಿತರೂ ಆದ ಪರಿವಾರಕ್ಕೆ ನೀನು ಹೀಗೆ ವಿರಕ್ತನಾಗುವುದು ನಮಗೆಷ್ಟೂ ಸರಿ ಕಾಣದು ! ನೀನು ಆ ಎತ್ತಿನ ಮಾತನ್ನು ಆಚರಿಸುತ್ತಿದ್ದುದರಿಂದ ನಿನ್ನ ಪರಿವಾರವೆಲ್ಲ ಮತ್ತೊಬ್ಬ ಒಡೆಯನನ್ನು ಹುಡುಕುತ್ತ ಹೋಗುವಂತಾಗಿದೆ. ನಿನ್ನ ಸಂಜೀವಕನ ಬುದ್ಧಿಯನ್ನೂ, ನಮ್ಮ ಬುದ್ಧಿಯನ್ನೂ ವಿಚಾರಿಸಿ ನೋಡು !''.

  ಮುದಿ ಜಾಂಬವಂತನ ಈ ಮಾತನ್ನು ಕೇಳಿ ಪಿಂಗಳಕನಿಗೆ ಏನು ಮಾಡಬೇಕೆಂದು ತೋಚಲಿಲ್ಲ. 'ಈ ಪಾಪಿಗೆ ಮರಳಿ ಉತ್ತರ ಕೊಟ್ಟೆನಾದರೆ ಈತನು ನನಗೆ ಪಾಪೋಪದೇಶವನ್ನು ಮಾಡದೆ ಬಿಡಲಾರ' ಎಂದು ಪಿಂಗಳಕ ತನ್ನ ಮನದಲ್ಲಿ ವಿಚಾರಿಸಿ 'ಮೌನಂ ಸರ್ವಾರ್ಥ ಸಾಧನಂ' ಎಂದು ಮೌನವಾಗಿಬಿಟ್ಟ, ಹೀಗಿರುವಾಗ ಪಿಂಗಳಕನನ್ನು ಕಂಡು ಆ ಮೃಗಗಳೆಲ್ಲವು ತಮ್ಮ ಇಚ್ಛೆಗೆ ಬಂದತ್ತ ಹೊರಟು ಹೋದವು.

  ಇತ್ತ ದವನಕ-ಕರಟಕರಿಬ್ಬರು ಭೇಟಿಯಾದರು. ತಮಗಾದ ಅನರ್ಥವನ್ನು ಕುರಿತು ಚರ್ಚಿಸಿದರು. ದವನಕ ಕರಟಕನ ಮೊಗವನ್ನು ನೋಡಿ,"ಕರಟಕ! ನನ್ನ ದುರಾಗ್ರಹದಿಂದ ಏನಾದರೊಂದು ಅನ್ಯಾಯವಾಗುವುದೆಂಬುದನ್ನು ಅರಿತು ನೀನು ನನ್ನನ್ನು ಈ ಹಿಂದೆ ತಡೆದೆ. ಆದರೆ ನಾನು ನಿನ್ನ ಮಾತನ್ನು ಆಗ ಲೆಕ್ಕಿಸಲಿಲ್ಲ. ಈಗ ಆ ಅನ್ಯಾಯ ಸಮೀಪಿಸುತ್ತಿದೆ. ಆದ್ದರಿಂದ ಇದಕ್ಕೆ ಏನಾದರೊಂದು ಉಪಾಯವನ್ನು ನೀನೇ ಕಂಡು ಹಿಡಿಯಬೇಕು" ಎಂದು ಹೇಳಿದ. ಅದಕ್ಕೆ ಕರಟಕ, "ದವನಕ!ಮುಂದಾಗತಕ್ಕ ಕಾರ್ಯಸಿದ್ಧಿಗೆ ಅತ್ಯುದ್ಭುತವಾದ ಬುದ್ಧಿ ಶಕ್ತಿ ನಿನಗಿರುವಂತೆ ನನಗಿಲ್ಲ. ಅದಕ್ಕೆ ಯೋಗ್ಯವಾದುದನ್ನು ನನಗಿಂತಲೂ ನೀನೇ ಚೆನ್ನಾಗಿ ಬಲ್ಲೆ” ಎಂದು ಹೇಳಿದ. ಕರಟಕ ಈ ಮಾತಿಗೆ ದವನಕ,"ಕರಟಕ! ನೀನು ಹೇಳಿದಂತೆ ಈ ಕಾರ್ಯ ನನ್ನಿಂದಲೇ ಸಾಧ್ಯವೆನ್ನುವುದಾದರೆ, ದೇವಶರ್ಮ ಹೇಳಿದ ಕಥೆಯಂತಾಗುತ್ತದೆ ಎಂದ. ಕರಟಕನು 'ಅದು ಹೇಗೆ ?' ಎಂದು ಕೇಳಿದ. ದವನಕ 'ದೇವಶರ್ಮನ ಕಥೆ'ಯನ್ನು ಹೇಳತೊಡಗಿದ.

 

 

 

Category:Stories



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.