Do you have a passion for writing?Join Ayra as a Writertoday and start earning.

ಕಾಂತಾರ ಪಂಜುರ್ಲಿ ದೈವದ ಕಥೆ ಭಾಗ 2

ಕಾಂತಾರ ಪಂಜುರ್ಲಿ

ProfileImg
06 May '24
2 min read


image

 

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಕಾಂತಾರೇಶ್ವರ ದೇವಾಲಯ ಇದೆ ಇಲ್ಲಿ ದೇವರ ಬಲ ಭಾಗದಲ್ಲಿ ನೆಲೆಯಾಗಿರುವ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಇದೆ ಹಾಗಾಗಿ ಎರಡು ಮೊಗಗಳು ಇವೆ 

ಕಾಂತಾರ ಪಂಜುರ್ಲಿ ಕುರಿತು ವಿಶಿಷ್ಟ ಕಥಾನಕ ಇದೆ.

ಕಾಂತಾರೊಡು ಕಾಂತಾವರ ದೇವೆರೆ

ಬಲಭಾಗೊಡು ಕಲ್ಲ ಪಂಜಿಯಾದ್ ಉದ್ಯಬೆಂದೆ
ದೇವೆರೆಗ್ ರಥ ಇಜ್ಜಿಂದ್ ತೆರಿದು
ಪುತ್ತಿಗೆ ಸೋಮನಾಥೇಶ್ವರ ದೇವೆರೆನಾಡೆ ಪೋದೆ
ಸೋಮನಾಥೇಶ್ವರ ದೇವೆರೆ ರಥನು ಕೊಣತ್ತೆ
ಕಾಂತಾವರೊಡು ಕಾಂತೇಶ್ವರ ದೇವೆರೆನ
ರಥೋತ್ಸವದ ಪೊರ್ಲುನು ತೂವೊಂಡೆ


ಕನ್ನಡ ಅನುವಾದ 
ಕಾಂತಾರದಲ್ಲಿ ಕಾಂತಾವರ ದೇವರ
ಬಲ ಭಾಗದಲ್ಲಿ ಕಲ್ಲ ಹಂದಿಯಾಗಿ ಉದಿಸಿದೆ
ದೇವರಿಗೆ ರಥ ಇಲ್ಲವೆಂದು ತಿಳಿದು
ಪುತ್ತಿಗೆ ಸೋಮನಾಥ ದೇವರಲ್ಲಿಗೆ ಹೋದೆ
ಸೋಮನಾಥ ದೇವರ ರಥವನ್ನು ತಂದು
ಕಾಂತಾವರದಲ್ಲಿ ಕಾಂತೇಶ್ವರ ದೇವರ
ರಥೋತ್ಸವದ ಚೆಲುವನ್ನು ನೋಡಿಕೊಂಡೆ ..

ಕಾರ್ಕಳ ತಾಲೂಕಿನ ಕಾಂತಾವರದ ಕಾಂತಾರೇಶ್ವರ ದೇವರ ಬಲಭಾಗದಲ್ಲಿ  ಮಾಯವಾಗಿ    ಕಲ್ಲ ಹಂದಿಯಾಗಿ ನಿಂತ  ಕಾಂತಾರ ಪಂಜುರ್ಲಿ ದೈವದ ಬಗ್ಗೆ ವಿಶಿಷ್ಟವಾದ ಐತಿಹ್ಯವಿದೆ.ಈ ಪಾಡ್ದನದ ಕಥೆಯನ್ನು ಶೇಖರ ಪರವರು ತಿಳಿಸಿದ್ದಾರೆ
ಕಾರ್ಕಳ ತಾಲೂಕಿನ ಕಾಂತಾವರವನ್ನು ಆಡುಮಾತಿನಲ್ಲಿ ಕಾಂತಾರ ಎನ್ನುತ್ತಾರೆ.ಕಾಂತಾರ ಎಂದರೆ ಕಾಡು ಎಂದರ್ಥ ಮೊದಲು ಈ ಪ್ರದೇಶ ಕಾಡು ಆಗಿತ್ತು .ಈಗಲೂ ಇದು ಹಳ್ಳಿಯಾಗಿ ಉಳಿದಿದೆ
ಇಲ್ಲಿಗೆ ಸಮೀಪದಲ್ಲಿ ಕೊಂಚಾಡಿ ಎಂಬಲ್ಲಿ ಪ್ರತಿವರ್ಷ ಪಂಜುರ್ಲಿ ದೈವದ ಕೋಲ ನಡೆಯುತ್ತದೆ .
ಒಂದು ವರ್ಷ ಕೋಲ ನೋಡಲು ಕುರಿ ಗುತ್ತಿನ ಹಿರಿಯರು ಹೋಗುತ್ತಾರೆ.ಕೋಲ ನೋಡಿ ಹಿಂತಿರುಗುವಾಗ ದೈವವು ಓರ್ವ ಬ್ರಾಹ್ಮಣ ಮಾಣಿಯ ರೂಪದಲ್ಲಿ ಹಿಂಬಾಲಿಸುತ್ತದೆ.ಮನೆ ಸಮೀಪಿಸಿದಾಗ ಕಾಣದಾಗುತ್ತದೆ.ನಂತರ ಕುರಿ ಗುತ್ತಿನ ಹಿರಿಯರ  ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಬೇಕೆಂದು ಹೇಳುತ್ತದೆ.
ಎಚ್ಚರಗೊಂಡ ನಂತರ ಅವರು ತನಗೆ ದೈವವನ್ನು ಪಾಲಿಸಲು ಸಾಧ್ಯವಿಲ್ಲ.ಹಾಗಾಗಿ ಕಾಂತಾವರ ದೇವರಲ್ಲಿ ಜಾಗ ಕೇಳು ಎಂದು ಅರಿಕೆ ಮಾಡುತ್ತಾರೆ.ದೈವವು ಕಾಂತಾವರ ದೇವರ ಬಲಿ ಹೋಗದಂತೆ ದಕ್ಷಿಣ ದಿಕ್ಕಿನಲ್ಲಿ ತಡೆಯುತ್ತದೆ

.ನಂತರ ದೇವಾಲಯದ ಒಳಬಾಗದಲ್ಲಿ ಒಂದು ಹಂದಿ ಮರಿಯಾಗಿ ಕಾಣಿಸಿಕೊಳ್ಳುತ್ತದೆ.ಈ ಹಂದಿಮರಿಯನ್ನು ಸಾಕಲು ಒಂದು ಮೊಯಿಲಿಗಳ ಕುಟುಂಬಕ್ಕೆ ನೀಡುತ್ತಾರೆ.ಅ ಹಂದಿಮರಿ ದಟ್ಟ ಪುಷ್ಟವಾಗಿ ಬೆಳೆಯುತ್ತದೆ.ಅಕ್ಕ ಪಕ್ಕದವರ ಗದ್ದೆಗೆ ಹೋಗಿ ಕದ್ದು ಬೆಳೆಯನ್ನು ತಿಂದು ಹಾಳು ಮಾಡುತ್ತದೆ.ಆಗ ಕೋಪಗೊಂಡ ಮೊಯಿಲಿಯವರ ಕುಟುಂಬದವರು ಆ ಹಂದಿಮರಿಯನ್ನು ಕೊಂದು ತಿನ್ನುತ್ತಾರೆ.ಆಗ ಕೋಪಗೊಂಡ ದೈವವು ಎಂಟು ಜನ ಮೊಯಿಲಿ ಕಟುಂಬದ ಸಹೋದರರನ್ನು ಕೊಲ್ಲುತ್ತದೆ
ನಂತರ ಊರವರೆಲ್ಲ ಸೇರಿ ಕಾಂತಾವರ ದೇವರ ಬಲಭಾಗದಲ್ಲಿ ಸ್ಥಾನ ಕಟ್ಟಿಸಿ ದೈವಕ್ಕೆ ಕೋಲ ಕೊಟ್ಟು ಆರಾಧಿಸಿ ಕೋಪವನ್ನು ತಣಿಸುತ್ತಾರೆ.
ಹಾಗೆ ಇಲ್ಲಿ ಹಂದಿಮರಿಯ ರೂಪದಲ್ಲಿ ಕಾಣಿಸಿಕೊಂಡ ದೈವ ಕಾಂತಾರ ಪಂಜುರ್ಲಿ ಎಂದು ಕರೆಸಿಕೊಳ್ಳುತ್ತದೆ.ತಾನು ಕಲ್ಲ ಪಂಜಿ/ ಹಂದಿಯಾಗಿ ಕಾಂತಾವರ ಬಲ ಭಾಗದಲ್ಲಿ ನಿಂತೆ ಎಂದು ದೈವ ನುಡಿಯುತ್ತದೆ.

 

ಇಲ್ಲಿ ಆರಾಧಿಸಲ್ಪಡುವ ದೈವ ಅಣ್ಣಪ್ಪ ಪಂಜುರ್ಲಿ ಎಂದು ಇಲ್ಲಿನ ತಂತ್ರಿಗಳಾದ ಕೃಷ್ಣ ಮೂರ್ತಿ ಭಟ್ ತಿಳಿಸಿದ್ದಾರೆ.ಇಲ್ಲಿನ ಚಿತ್ರವನ್ನವರು ಕಳುಹಿಸಿದ್ದು ಅದರಲ್ಲಿ ಎರಡು ಹಂದಿಯ ಮೊಗಗಳಿವೆ.
ಹಾಗಾಗಿ ಇಲ್ಲಿ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಆಗುತ್ತಿದ್ದು ಕಾಲಾಂತರದಲ್ಲಿ ಒಂದರಲ್ಲಿಯೇ ಎರಡೂ ಶಕ್ತಿಗಳು ಸಮನ್ವಯಗೊಂಡಿರುವುದು ತಿಳಿದು ಬರುತ್ತದೆ 


ಒಂದು ಅಣ್ಣಪ್ಪ ದೈವವಾದರೆ  ಇನ್ನೊಂದು ಯಾವುದೆಂಬ ಸಂದೇಹ ಉಂಟಾಗುತ್ತದೆ.ಇಲ್ಲಿ ನುಡಿಗಟ್ಟಿನಲ್ಲಿ ದೈವವು ತಾನು ಕಲ್ಲ ಪಂಜಿಯಾಗಿ ನಿಂತೆ ಎಂದಿದೆ.ಆದರೆ ಇಲ್ಲಿ ಕಲ್ಲಿನ ಮೂರ್ತಿ ಇಲ್ಲ.
ಬಹುಶಃ ಅಕ್ಕ ಪಕ್ಕದ ಗದ್ದೆಗೆ ಹೊಕ್ಕು ಹಾನಿ ಮಾಡುವ ಕಳ್ಳ ಹಂದಿಯ ರೂಪದಲ್ಲಿ ಕಾಣಿಸಿಕೊಂಡ ದೈವ 

.ಕಳುವೆ ಪಂಜಿ > ಕಳ್ಳ ಪಂಜಿ ಎಂಬುದೇ ಮೂಲ ಅರ್ಥ ಕಳೆದು ಹೋದಾಗ ಆಡು ಮಾತಿನಲ್ಲಿ    ಕಲ್ಲ ಪಂಜಿ ಎಂದಾಗಿದೆ 

  ಡಾ.ಲಕ್ಷ್ಮೀ ಜಿ ಪ್ರಸಾದ್,ಲೇ : ಕರಾವಳಿಯ ಸಾವಿರದೊಂದು ದೈವಗಳು ,ಮೊಬೈಲ್ 9480516684

 

 

 

Category : Stories


ProfileImg

Written by Dr Lakshmi G Prasad

Verified