ಕನ್ನಡ ನುಡಿಯುವ ಕನ್ನಡ ಯಾನೆ ಪುರುಷ ಭೂತ
ತುಳು ನಾಡಿನ ಸಂಸ್ಕೃತಿ ಬಹಳ ವಿಶಿಷ್ಟವಾದುದು.ಇಲ್ಲಿ ಅನೇಕ ಮಾನವ ಮೂಲದ ವ್ಯಕ್ತಿಗಳು ದೈವತ್ವವನ್ನು ಪಡೆದು ಭೂತಗಳಾಗಿ ಆರಾಧನೆ ಪಡೆಯುತ್ತಿದ್ದಾರೆ .ಹೀಗೆಯೇ ಜೋಗಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಜೋಗಿ ಪುರುಷ /ಕನ್ನಡ ಯಾನೆ ಪುರುಷ ಭೂತ ಆಗಿ ಆರಾಧಿಸಲ್ಪಡುತ್ತಾನೆ
ಪೂಕರೆ ಕಂಬಳ ನೇಮದಲ್ಲಿ ಕೆಲವೊಂದು ಭೂತಗಳು ಪ್ರಾದೇಶಿಕವಾಗಿ ಸೇರ್ಪಡೆಯಾಗುತ್ತವೆ. ಮಂಜೇಶ್ವರ-ಆನೆಕಲ್ಲುಮಾರ್ಗದಲ್ಲಿರುವ ಕೊಡ್ಲಮೊಗರು ಗುತ್ತಿನ ಗದ್ದೆಯಲ್ಲಿ ಪಿಲಿಚಾಂಡಿ ಉರವ ಹಾಗೂ ಜೋಗಿಪುರುಷ ದೈವಗಳಿಗೆ ಆರಾಧನೆ ಇದೆ.
ಸುಳ್ಯ ಗುತ್ತಿಗಾರು ಕಂದ್ರಪ್ಪಾಡಿ ಮೊದಲಾದ ಪ್ರದೇಶಗಳಲ್ಲಿ ಕನ್ನಡಯಾನೆ ಪುರುಷಭೂತ ಬಹಳ ಪ್ರಸಿದ್ಧ ದೈವತ. ಆ ಪುರುಷ ಭೂತವೇ ಕೊಡ್ಲಮೊಗರಿನಲ್ಲಿ ಜೋಗಿ ಪುರುಷನೆಂದು ಕರೆಯಲ್ಪಟ್ಟು ಆರಾಧಿಸಲ್ಪಡುತ್ತಾನೆಯೆ? ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಸಿದ್ಧ ದೈವವಾದ ಪುರುಷ ಭೂತದ ಕುರಿತು ಕೂಡ ಸಮಗ್ರ ಅಧ್ಯಯನ ನಡೆದಿಲ್ಲ. ಸುಳ್ಯ ಕಂದ್ರಪ್ಪಾಡಿ ವಾಲ್ತಾಜೆ ಮಡಪ್ಪಾಡಿ ಗಳಲ್ಲಿ ಪುರುಷ ದೈವಕ್ಕೆ ಆರಾಧನೆ ಇದೆ .ವಾಲ್ತಾಜೆಯಲ್ಲಿ ಈ ಭೂತದ ಸ್ಥಾನ ಇದೆ. ಇಲ್ಲಿ ಈತನಿಗೆ ತುಂಬಾ ಮಹತ್ವದ ಸ್ಥಾನ ಇದೆ .ಪುರುಷ ದೈವ ಪ್ರಧಾನ ದೈವವಾಗಿದ್ದು ಅರಸು ದೈವದಂತೆ ಅಥವಾ ಪ್ರಧಾನಿಯಂತೆ ವೀರಾನಾಯಕನಂತೆ ಕಾಣಿಸಿಕೊಳ್ಳುತ್ತದೆ. ಮ್ಯಾನರ್ ಎ. ಸಂಗ್ರಹಿಸಿರುವ 1886 ಮುಡದೇರ್ ಕಾಳ ಭೈರವ ಪಾಡ್ದನದಲ್ಲಿ ನಾಲ್ಕು ಜೋಗಿಪುರುಷರ ಉಲ್ಲೇಖವಿದೆ. ಸುಳ್ಯ ಪರಿಸರದಲ್ಲಿ ಲಭ್ಯವಿರುವ ಪಾಡ್ದನದಲ್ಲಿ ಇಬ್ಬರು ಜೋಗಿಗಳೆಂದು ಹೇಳಿದೆ ಇವರನ್ನು ಜೋಗಿ ಜೋಗ್ಯಾನಂದ ಪುರುಷರೆಂದು ಪಾಡ್ದನವು ಹೇಳುತ್ತದೆ.
ಪುರುಶರೆನಕುಲೆ ಅಪ್ಪೆ ಪಣ್ಣಾಗ ಉಲ್ಲಾಳು
ದೇವು ದೆಸಿಂಗ ಪುರುಷೆದಿ ಅಂದಾಂಡ
ಪುರುಶರೆನಕುಲೆ ಅಮ್ಮೆ ಪನ್ನಾಗ ಉಳ್ಳೆ
ದೇ ಸಿಂಗೇ ಪುರುಷೆ ಉಳ್ಳೆ
ಅಕುಲೆಗ್ ಪುಟ್ಟಿ ಬಾಲೆಲು ಪನ್ನಾಗ
ಜೋಗಿ ಜೋಗ್ಯನಂದ ಪುರುಶರೆನಕುಲಯೇ
ಹಿರಿ ಹಿರಿಯಾಕುಲೇ ಗ್ರಂಥಾನೆ ದೆತ್ತುದು ತೂನಾಗಾ
ಆಜಿಲ್ಲು ನಟ್ಯಾರ ಒರ್ಮ್ಬಿಲ್ಲು ಬೇಡ್ಯರ ವೋ
ಕನ್ನಡ ಅನುವಾದ :
ಪುರುಷರ ತಾಯಿ ಎಂದು ಹೇಳುವಾಗ ಇದ್ದಾಳೆ
ದೇವು ದೆಸಿಂಗ ಪುರುಷೆದಿ
ಪುರುಷರ ತಂದೆ ಎಂದು ಹೇಳುವಾಗ ಇದ್ದಾನೆ
ದೆಸಿಂಗ ಪುರುಷ
ಅವರಿಗೆ ಹುಟ್ಟಿದ ಮಕ್ಕಳು ಎನ್ನುವಾಗ
ಜೋಗಿ ಜೋಗ್ಯನಂದ ಪುರುಷರು
ಹಿರ ಹ್ರಿರಿಯರ ಗ್ರಂಥ ತೆಗೆದು ನೋಡುವಾಗ
ಆರು ಮನೆ ಬೇಡಲು ಒಂಬತ್ತು ಮನೆ ಬೇಡಲು ಓ ..
ಇವರ ತಂದೆ ದೇಸಂಗ ಪುರುಷ. ತಾಯಿ ದೇವು ಪುರುಷೆದಿ. ಮೂಲತಃ ನಾಥ ಸಂಪ್ರದಾಯದ ಜೋಗಿಗಳು ಇವರು. ಈ ಪುರುಷರಿಬ್ಬರು ಹುಟ್ಟುವಾಗಲೇ ಅವರ ಜಾತಕದಲ್ಲಿ ಆರು ಮನೆ, ಮೂರುಮನೆ ಬೇಡುವ ಪುರುಷರಾಗುತ್ತಾರೆ ಎಂದು ಕಂಡುಬರುತ್ತದೆ. ಅಂತೆಯೇ ಅವರು ಮನೆ ಮನೆಗೆ ಹೋಗಿ ಬೇಡುತ್ತಾ ಅಲ್ಲಲ್ಲಿ ಬಿಡಾರ ಹೂಡುತ್ತಾ ದೇಶ ಸುತ್ತುತ್ತಾರೆ. ಈ ಕಾರಣಿಕದ ಇಬ್ಬರು ಜೋಗಿ ಪುರುಷರನ್ನು ಜನರು ಗೌರವದಿಂದ ಕಂಡು ಅವರಿಗೆ ಬೇಕಾದುದನ್ನು ಅವರಿಗೆ ನೀಡುತ್ತಿದ್ದರು. ಹೀಗಿರುವಾಗ ಒಂದು ದಿನ ಈ ಜೋಗಿ ಪುರುಷರು ಕಲ್ಲೆಂಬಿ ಪೆರ್ಗಡೆಯ ಬೀಡಿಗೆ ಬರುತ್ತಾರೆ. ಕಲ್ಲೆಂಬಿ ಪೆರ್ಗಡೆ ಬೀಡಿನಲ್ಲಿ ಇರುವುದಿಲ್ಲ ಅವರ ಮಗಳು ಇರುತ್ತಾಳೆ. ಕಲ್ಲೆಂಬಿ ಪೆರ್ಗಡೆ ಮನೆಗೆ ಬಂದ ಪುರುಷರೀರ್ವರು ಕಲ್ಲೆಂಬಿ ಪೆರ್ಗಡೆಯ ಮನೆಯಲ್ಲಿ ಭಿಕ್ಷೆ ಹಾಗೂ ಉಳಕೊಳ್ಳಲು ಜಾಗ ಕೇಳುತ್ತಾರೆ. ಈ ಜೋಗಿಗಳ ಮಹಿಮೆಯನ್ನು ತಿಳಿಯದ ಕಲ್ಲೆಂಬಿ ಪೆರ್ಗಡೆಯ ಮಗಳು ಮನೆಯಲ್ಲಿ ಗಂಡಸರೂ ಯಾರು ಇಲ್ಲ ಆದ್ದರಿಂದ ಅಂಗಳದ ಕೊಟ್ಯದಲ್ಲಿ ಊಟಮಾಡಿ, ಬಿಸಿನೀರು ಕೊಟ್ಟಿಗೆಯಲ್ಲಿ ಬಿಡಾರಹೂಡಿ ಉಳಿದುಕೊಳ್ಳಿ ಎಂದು ಹೇಳುತ್ತಾಳೆ. ಅಂತೆಯೇ ಪುರುಷರು ಬಚ್ಚಲು ಕೊಟ್ಟಿಗೆಯಲ್ಲಿ ಬಿಡಾರ ಹೂಡಿ ಮಲಗಿ ಮರುದಿನ ಬೆಳಿಗ್ಗೆ ಎದ್ದು ಹೋಗುತ್ತಾರೆ. ಹೋಗುವ ಮುಂಚೆ ಒಂದು ತಮ್ಮ ಮಹಿಮೆಯಿಂದ ಒಂದು ಸರ್ಪವನ್ನು ಸೃಷ್ಟಿಸಿ ಹೋಗುತ್ತಾರೆ. ಜೋಗಿ ಪುರುಷರನ್ನು ಮನೆಯೊಳಗೆ ಸೇರಿಸದೆ ಉಪೇಕ್ಷಿಸಿದ ಕಲ್ಲೆಂಬಿ ಪೆರ್ಗಡೆಯ ಮಗಳಿಗೆ ಬುದ್ಧಿ ಕಲಿಸುವ ಸಲುವಾಗಿ ಆ ಸರ್ಪವನ್ನು ಸೃಷ್ಟಿಸುತ್ತಾರೆ. ಕಲ್ಲೆಂಬಿ ಪೆರ್ಗಡೆಯ ಮಗಳು ಸೌದೆ ತೆಗೆಯಲೆಂದು ಬಿಸಿ ನೀರ ಕೊಟ್ಟಿಗೆಗೆ ಬಂದು ಸೌದೆಯ ಅಟ್ಟಿಗೆ ಕೈ ಹಾಕಿದಾಗ ಆ ಸರ್ಪ ಅವಳನ್ನು ಕಚ್ಚುತ್ತದೆ.
ಓ ಅವು ಒಂಜಿ ಉಚ್ಚುವೆ ಉದಯ ಬೆನ್ತಿ
ನಸ್ಯಾನೆ ಆಳೆಗೆ ಬೆನ್ತುಂಡು
ಕನ್ನಡ ಅನುವಾದ :
ಓ ಅದು ಒಂದು ಸರ್ಪವೇ
ಅವಳಿಗೆ ಕಚ್ಚುತ್ತದೆ
ಅವಳು ವಿಷವೇರಿ ಒದ್ದಾಡುತ್ತಿರುವಾಗ ಹೊರ ಹೋಗಿದ್ದ ಕಲ್ಲೆಂಬಿ ಪೆರ್ಗಡೆ ಓಡೋಡಿ ಬಂದು ಏನಾಯಿತು? ಹಾವು ಎಲ್ಲಿಂದ ಬಂತು ? ನಿನ್ನೆಯ ದಿನ ಯಾರಾದರೂ ಬಂದಿದ್ದರೆ ? ಎಂದು ಮಗಳಲ್ಲಿ ಕೇಳುತ್ತಾರೆ.
ನಮ್ಮೊಂಜಿ ಇಲ್ಲಾಡೆ ಏರು ಬತ್ತೆರು ಮಗಾ
ಕೆನ್ವೇರು ನಾನಾ ಓ ಮಗಲ್ ಡ
ಪುರುಶರೆನಕುಳು ಬತ್ತೆರಪ್ಪಾ ಕೇಂಡಾರ
ಜಾಲ್ಯೋಟ್ಟುಡು ರದ್ದು ಉಣಿಯರೇ ಪಂಡೆ
ಕಣಕ್ಕೊಟ್ಯಾಡು ತಡೆವು ಬಿಡಾರ ಮನ್ಪ್ಯರ ಪಂಡೆ
ಕನ್ನಡ ಅನುವಾದ :
ನಮ್ಮೊಂದು ಮನೆಗೆ ಯಾರು ಬಂದಿದ್ದರು ಮಗಳೇ
ಕೇಳುವರು ಮತ್ತೆ ಓ ಮಗಳಲ್ಲಿ
ಪುರುಷರು ಬಂದಿದ್ದರಪ್ಪಾ ಕೇಳಿದಿರಾ
ಅಂಗಳದಲ್ಲಿ ಊಟ ಮಾಡಿದರು
ಸೌದೆ ಕೊಟ್ಟಿಗೆ ಯಲ್ಲಿ ತಡೆ ಬಿಡಾರಕ್ಕೆ ಹೇಳಿದೆ
ಅಗ ಮಗಳು “ಹಿಂದಿನ ದಿವಸ ಇಬ್ಬರು ಜೋಗಿಗಳೂ ಬಂದು ತಡೆ ಬಿಡಾರ ಕೇಳಿರುವುದು, ಅವರಿಗೆ ಬಿಸಿನೀರು ಕೊಟ್ಟಿಗೆಯನ್ನು ತಡೆ ಬಿಡಾರ ಮಾಡಲು ತಾನು ಹೇಳಿರುವ ವಿಚಾರವನ್ನು” ತಂದೆಯಲ್ಲಿ ಹೇಳುತ್ತಾಳೆ. ಇದು” ಆ ಮಹಿಮಾನ್ವಿತ ಜೋಗಿ ಪುರುಷ ಕೆಲಸ” ಎಂದರಿತ ಕಲ್ಲೆಂಬಿ ಪೆರ್ಗಡೆ ಆ ಇಬ್ಬರು ಜೋಗಿಗಳನ್ನು ಹುಡುಕಿ ಅವರಲ್ಲಿ ಕ್ಷಮೆ ಕೇಳಿ ಮನೆಗೆ ಕರೆತರುತ್ತಾನೆ.ನಿಮ್ಮ ಮಗಳನ್ನು ಬದುಕಿಸಿ ಕೊಟ್ಟರೆ ಅವಳನ್ನು ನಮಗೆ ಮಾಡುವೆ ಮಾಡಿ ಕೊಡ ಬೇಕೆಂದು ಹೇಳುತ್ತಾರೆ ಅದಕ್ಕೆ ಕಲ್ಲೆಂಬಿ ಪೆರ್ಗಡೆ ಒಪ್ಪುತ್ತಾರೆ ಮನೆಗೆ ಬಂದ ಜೋಗಿಗಳು ಮಂತ್ರಿಸಿದ ನೀರನ್ನು ಕಲ್ಲೆಂಬಿ ಪೆರ್ಗಡೆಯ ಮಗಳ ತಲೆಗೆ ಹಾಕಿ ಅವಳನ್ನು ಬದುಕಿಸುತ್ತಾರೆ.”ಮುಂದೆ ಜೋಗಿ ಪುರುಷರಲ್ಲಿ ಚಿಕ್ಕವನಿಗೆ ಅವಳನ್ನು ಮಾಡುವೆ ಮಾಡಿ ಕೊಡುತ್ತಾರೆ” ಎಂದು ಒಂದು ಕಡೆ ಹೇಳಿದರೆ ಇನ್ನೊಂದು ಪಾದ್ದನದಲ್ಲಿ " ಮಗಳು ಬದುಕಿದ ಸಂತಸದಲ್ಲಿ ಜೋಗಿಗಳ ವಿಚಾರವನ್ನು ಕಲ್ಲೆಂಬಿ ಪೆರ್ಗಡೆ ಮರೆಯುತ್ತಾನೆ. ತುಸುಹೊತ್ತು ಕಳೆದು ನೋಡುವಾಗ ಜೋಗಿಗಳು ಇರುವುದಿಲ್ಲ. ಕೊನೆಗೆ ಬಲಿಮೆ ಇಟ್ಟು ನೋಡುವಾಗ ಅವರು ಮಾಯಾ ಸ್ವರೂಪ ಹೊಂದಿ ಉಳ್ಳಾಕುಲುಗಳ ಪ್ರಧಾನಿಗಳಾಗಿ ದೈವತ್ವಕ್ಕೇರಿದ್ದಾರೆ ಎಂದು ತಿಳಿದು ಬರುತ್ತದೆ. ಅನಂತರ ಕಲ್ಲೆಂಬಿ ಪೆರ್ಗಡೆ ಜೋಗಿ ಪುರುಷ ಭೂತಗಳಿಗೆ ನೇಮ ಕೊಟ್ಟು ಆರಾಧಿಸುತ್ತಾರೆ "ಎಂದು ಹೇಳಿದೆ .ಈಗ ಪುರುಷ ಭೂತ ಎಂದು ಪ್ರಸಿದ್ಧಿ ಪಡೆದಾತ ಕೂಡ ಚಿಕ್ಕವನು.ಪುರುಷ ಭೂತದ ನುಡಿಕಟ್ಟಿನಲ್ಲಿ ಕಾಶಿಮಠೊ, ಕದ್ರಿಮಠೊ, ಕಲ್ಯಾಣಿಪುರಮಠ, ಇಟ್ಟೆಲಾ ಮಠೊ, ನಾಲ್ಕು ಮಠೊ ಮೂರು ಸೀಮೆಯೊಳಗೆ ತಿರುಗುವ ಬಡಜೋಗಿ ನಾನಲ್ವ ಬುದ್ಧಿವಂತ್ರೆ ಕಾಶಿಯಲ್ಲಿ ಕಾಳ ಭೈರವ, ತಿರುಪತಿಯಲ್ಲಿ ತಿಮ್ಮಪೊಡೆಯ ಹುಚ್ಚು ಕೆಂಚಿರಾಯ ಮರುಳು ಜೋಗಿಯೆಂದು ಹೆಸರು ಪಡೆದ ಮಾಯಕದ ಜೋಗಿ ಹೌದೋ ....” ಎಂಬ ಮಾತುಗಳಿದ್ದು ಇವರು ಮೂಲತಃ ಭಿಕ್ಷೆ ಬೇಡುತ್ತಾ ಬಂದ ಜೋಗಿಗಳೆಂದು ತಿಳಿದು ಬರುತ್ತದೆ. ಇಲ್ಲಿ ಈ ಭೂತವನ್ನು ಕನ್ನಡ ಯಾನೆ ಪುರುಷ ಭೂತ ಎಂದೇ ಕರೆಯುತ್ತಾರೆ .ಈ ದೈವ ಕನ್ನಡದಲ್ಲಿ ನುಡಿ ಕೊಡುತ್ತದೆ .ತುಳು ನಾಡಿನಲ್ಲಿ ಸ್ತ್ರೀಯರಿಗೆ ಕೊಡಿಯೆಲೆ ಕಾಣಿಕೆ ಪ್ರಸಾದ ಸ್ವೀಕರಿಸುವ ಹಕ್ಕು ಇಲ್ಲ . ಕುಂಬಳಚ್ಚೇರಿಯಲ್ಲಿ ನಡೆದ ನೂರೊಂದು ಮಲೆ ದೈವಗಳ ಕೋಲಕ್ಕೆ ನನ್ನ ಮಗ ಅರವಿಂದನನ್ನು ಕರೆದು ಕೊಂಡು ಹೋಗಿದ್ದೆ .ಪರ ಊರಿನಿಂದ ಬಂದ ಬ್ರಾಹ್ಮಣರಿಗೆ ಮೊದಲು ಪ್ರಸಾದ ಕೊಡುವ ಪದ್ಧತಿ ಇಲ್ಲಿದೆ .ನನ್ನ ಮಗ ಕೊಡಿಯೆಲೆ ಹಿಡಿದು ಪುರುಷ ಭೂತದ ಕೈಯಿಂದ ಬೂಲ್ಯ(ಅರಶಿನ ಪ್ರಸಾದ ) ಸ್ವೀಕರಿಸುವಾಗ ದೈವ ಕನ್ನಡದಲ್ಲಿ ನೀಡಿದ ನುಡಿ ಹೀಗಿದೆ “ಕಾಶಿ ಮಠ ಕದ್ರಿ ಮಠ ಇಟ್ಟಳ (ವಿಟ್ಟಲ ) ಮಠ ಸುತ್ತಿಕೊಂಡು ಮೂರೂ ಲೋಕ ನೋಡಿಕೊಂಡು ಇಳಿದು ಕೊಂಡು ಬಂದ ಮಾಯಗಾರ ನಾನಾಗಿರುವಾಗ, ಹಿರಿಯರ ಆಶೀರ್ವಾದದ ಮೇರೆಗೆ ದೈವದ ಮುಂದೆ ಬಂದು ನಿಂತಿದ್ದೀರಿ .ಒಂದು ಬೊಟ್ಟು ಮಂಜಲ ಪುಡಿ (ಅರಶಿನ ಹುಡಿ ) ಜೋಡು ಕಾಣಿಕೆಯನ್ನು( ಎರಡು ತೆಂಗಿನ ಕಾಯಿ –ಎಳನೀರು ) ಹಿಡಿದಿದ್ದೀರಿ .ಈಗ ನೀವು ಏನೂ ತಿಳಿಯದ ಚಿಕ್ಕ ಮಗುವಾದರೂ ಮುಂದೆ ಗೋಳಿ (ಆಲದ )ಮರದಂತೆ ಬೆಳೆಸಿ ಕೊಟ್ಟು ನೀರು ಹೆಚ್ಚಿಸಿದಂತೆ ಹೆಚ್ಚಿಸಿಕೊಟ್ಟು ,ಹಾಲು ಉಕ್ಕಿಸಿಸಿದಂತೆ ಉಕ್ಕಿಸಿಕೊಟ್ಟು ಬ್ರಹ್ಮ ಕುಲವನ್ನು (ಬ್ರಾಹ್ಮಣರನ್ನು )ಉದ್ಧರಿಸಿ ಕೊಟ್ಟವನಂತೆ,<ಕೊಡ್ತಾನಂತೆ >(ಉದ್ಧರಿಸಿ ಕೊಡುತ್ತೇನೆ )” ಈತನನ್ನು ಉಲ್ಲಾಕುಳುಗಳ ಪ್ರಧಾನಿ ಎಂದು ಭಾವಿಸಿ ಆರಾಧಿಸುತ್ತಾರೆ ಈ ಭೂತಕ್ಕೆ ದೊಡ್ಡ ಮೀಸೆ ಇರುತ್ತದೆ ರಾಜೋಚಿತವಾದ ಅಲಂಕಾರ ಇರುತ್ತದೆ. ಈತನ ಆಯುಧ ತ್ರಿಶೂಲ .ಈ ದೈವ ಕನ್ನಡದಲ್ಲಿಯೇ ನುಡಿ ಕೊಡುತ್ತದೆ. ಆದ್ದರಿಂದಲೇ ಈ ಭೂತ ವನ್ನು ಕನ್ನಡ ಯಾನೆ ಪುರುಷ ಭೂತ ಎಂದು ಕರೆಯುತ್ತಾರೆ ಇಂದಿಲ್ಲಿ ನನಗೆ ತಿಳಿದು ಬಂತು .ಪುರುಷ ಭೂತ /ಜೋಗಿಪುರುಷ ಭೂತ ಮೂಲ ತುಳುನಾಡು ಅಲ್ಲವೆಂಬುದನ್ನು ಇದು ಸ್ಪಷ್ಟ ಪಡಿಸುತ್ತದೆ ಇವರು ಮೂಲತಃ ಕನ್ನಡ ಭಾಷಿಗಳಾದ ಜೋಗಿಗಳೇ ಆಗಿದ್ದಿರಬೇಕು .ಕದ್ರಿ ವಿಟ್ಟಲಗಳಲ್ಲಿ ಜೋಗಿ ಮಟ ಇದೆ ಸುಳ್ಯದ ಸಮೀಪ ಜೋಗ್ಯಡ್ಕ ಎಂಬ ಪ್ರದೇಶ ಇದೆ ಇದು ಇಲ್ಲಿ ಮೊದಲು ಜೋಗಿಗಳು ನೆಲೆಸಿದ್ದನ್ನು ಸೂಚಿಸುತ್ತದೆ .ಈಗ ಇಲ್ಲಿ ಜೋಗಿಗಳ ಸಂಖ್ಯೆ ಬಹಳ ಕಡಿಮೆ ಇದೆ .ಮತ್ತು ತುಳುನಾಡಿನಲ್ಲಿ ನೆಲೆಸಿರುವ ಜೋಗಿ ಸಮುದಾಯದವರ ಮಾತೃ ಭಾಷೆ ತುಳು ಆಗಿದೆ . ತುಳುನಾಡಿನಲ್ಲಿ ನೆಲೆನಿಂತ ಜೋಗಿ ಸಮುದಾಯದವರು ಕಾಲಾಂತರದಲ್ಲಿ ಇಲ್ಲಿನವರೊಂದಿಗೆ ಬೆರೆತು ಇಲ್ಲಿನ ಆಡು ನುಡಿಯಾದ ತುಳುವನ್ನು ತಮ್ಮ ಮಾತೃ ಭಾಷೆಯಾಗಿ ಸ್ವೀಕರಿಸಿದ್ದಾರೆ . ಇಲ್ಲಿನ ಸಂಸ್ಕೃತಿಯನ್ನು ಸ್ವೀಕರಿಸಿದ್ದಾರೆ .ಆದರು ಇವರ ಅಂತ್ಯ ಸಂಸ್ಕಾರದ ವಿಧಿಗಳು ಮಾತ್ರ ತುಳುವರಿಗಿಂತ ಸಂಪೂರ್ಣ ಭಿನ್ನವಾಗಿದೆ ಇವರು ಮೃತ ದೇಹವನ್ನು ಉಪ್ಪಿನ ರಾಶಿಯಲ್ಲಿ ಕೂರಿಸಿದ ಸ್ಥಿತಿಯಲ್ಲಿ ಹೂಳುತ್ತಾರೆ . ತುಳುವರು ಮಣ್ಣನ್ನು ಅಗೆದು ಮೃತ ದೇಹವನ್ನು ಮಲಗಿರುವ ಭಂಗಿಯಲ್ಲಿ ಹೂಳುತ್ತಾರೆ .
ಪುರುಷ ಭೂತದ ಪಾಡ್ದನದಲ್ಲಿ ಉಲ್ಲೇಖಿಸಲ್ಪಟ್ಟ ಕಲ್ಲೆಂಬಿ ಬಲ್ಲಾಳರ ಬೀಡು ಸುಳ್ಯ ದಿಂದ ೫-೬ ಕಿ ಮೀ ದೂರದಲ್ಲಿ ಆಲೆಟ್ಟಿಯ ಸಮೀಪ ಇದೆ ಈಗ ಕೂಡ ಅಲ್ಲಿ ಕಂಬಳ ಕೋರಿ ನೇಮ ನಡೆಯುತ್ತದೆ .ಪೂಕರೆ ಕಂಬ ಹಾಕುವಾಗ ಅಲ್ಲಿ ಒಂದು ಕಲ್ಲಿನ ಮೇಲೆ ಬಲ್ಲಾಳನ ಚಿತ್ರವನ್ನು ಬರೆಯುವ ಸಂಪ್ರದಾಯವಿದೆ .ಅಲ್ಲಿ ನೆಲ್ಲುರಾಯ ಮತ್ತು ಒರು ಬಾಣಂತಿ (ಬಾಣಿಯೆತ್ತಿ?)ಎಂಬ ಎರಡು ಅಪರೂಪದ ಭೂತಗಳಿಗೆ ಆರಾಧನೆ ಇದೆ
ಬ್ರಹ್ಮ ಬೈದರ್ಕಳ ಗರೋಡಿಗಳಲ್ಲಿ ಕೆಲವೆಡೆ ಜೋಗಿ ಪುರುಷನಿಗೆ ಆರಾಧನೆ ಇದೆ. ಪ್ರಚಲಿತವಿರುವ ಐತಿಹ್ಯದ ಪ್ರಕಾರ ಪ್ರಕಾರ ಕೋಟಿ ಚೆನ್ನಯರಿಗೆ ಇಡುವ ನೈವೇದ್ಯವನ್ನು ಜೋಗಿ ಪುರುಷನೋರ್ವ ಕದ್ದು ತಿನ್ನುತ್ತಾನೆ. ಆಗ ಆಗ್ರಹಗೊಂಡ ಬೆರ್ಮೆರ್ ಹಾಗೂ ಬೈದರ್ಕಳು ಆ ಜೋಗಿ ಪುರುಷರನನ್ನು ಮಾಯಕ ಮಾಡಿ ತಮ್ಮ ಸೇರಿಗೆಗೆ ಸೇರಿಸಿಕೊಳ್ಳುತ್ತಾರೆ. ಮುಂದೆ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಆ ಜೋಗಿ ಪುರುಷನೂ ದೈವದ ರೂಪದಲ್ಲಿ ಆರಾಧನೆ ಪಡೆಯುತ್ತಾನೆ. ಈಜೊಮಂಜೊಟ್ಟಿ ಗೋಣ ಪಾಡ್ದನದಲ್ಲಿ ಇನ್ನೋರ್ವ ಜೋಗಿ ಪುರುಷನ ಉಲ್ಲೇಖವಿದೆ. ಸುಬ್ರಹ್ಮಣ್ಯ ಸಂತೆಯಲ್ಲಿ ಮಂಜನಾಳ್ವರಿಗೆ ಸೂಕ್ತವಾದ ಕೋಣಗಳು ಸಿಗುವುದಿಲ್ಲ ಆದ್ದರಿಂದ ಹಿಂತಿರುಗಲು ಸಿದ್ಧರಾಗುತ್ತಾರೆ. ಆಗ ಅಲ್ಲಿಗೆ ಬಂದ ಜೋಗಿ ಪುರುಷನೊಬ್ಬ ಎರುತ್ತ ಗಿರ್ದುಗು ಬತ್ತ್‍ನತ್ತ ಆಳ್ವೆರೆ ? ಎರುಗಿರುಡ್ದು ಪಿರಬತ್ತಾರತ್ತೆ ಬಲ್ಲಾಳರೆ ? ಕೋಣಗಳ ಖರೀದಿಗೆ ಬಂದದ್ದಲ್ಲವೆ ? ಆಳ್ವರೇ ? ಸಂತೆಯಿಂದ ಹಿಂದೆ ಬರುತ್ತಿದ್ದೀರಲ್ಲಾ ಬಲ್ಲಾಳರೆ ಎಂದು ಪ್ರಶ್ನಿಸುತ್ತಾನೆ. ಆಗ ಮಂಜನಾಳ್ವರು “ಈಲಾ ನಾಲೂ ಇಲ್ಲು ನಟ್ಟುನ ಪುರುಷ” `ನೀನಾದರೂ ನಾಲ್ಕು ಮನೆ ಬೇಡುವ ಪುರುಷ’ ಎಂದು ಹೇಳುತ್ತಾರೆ. ಆಗ ಯಾನು ನಟ್ಟುಂಡ ದಾನೆ ಬಲ್ಲಾಳರೆ? ಕುರ್ನಾಡಿದೈವೊಳೇ ನಟ್ಟುದುಂಡೇ ನಾನು ಬೇಡಿದರೆ ಏನಂತೆ ಬಲ್ಲಾಳರೆ ? ಕುರ್ನಾಡಿನ ಭೂತಗಳು ಕೂಡ ಬೇಡಿವೆಯಲ್ಲ ಎನ್ನುತ್ತಾನೆ ಜೋಗಿಪುರುಷ. ಅನಂತರ ಮಂಜನಾಳ್ವರಿಗೆ ಒಳ್ಳೆಯ ಕೋಣಗಳು ಸಿಗುವ ಜಾಗವನ್ನು ತೋರುತ್ತಾನೆ ಆ ಜೋಗಿಪುರುಷ. ಅದೇ ರೀತಿ ಜೋಗಿ ಪುರುಷನೊಬ್ಬ ಮಾಯವಾಗಿ ಜುಮಾದಿ ದೈವದ ಸೇರಿಗೆಗೆ ಸಂದುಹೋಗಿ ಮರ್ಲು ಜುಮಾದಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುವ ವಿಚಾರ ಮರ್ಲು ಜಮಾದಿ ಪಾಡ್ದನದಲ್ಲಿದೆ ಎಂದು ಭೂತ ಕಟ್ಟುವ ಕಲಾವಿದರಾದ ಜಯರಾಮ ಅವರು ತಿಳಿಸಿದ್ದಾರೆ . ಹೀಗೆ ನಾಲ್ಕು ರೀತಿಯ ಜೋಗಿ ಪುರುಷರ ಉಲ್ಲೇಖಗಳು ಪಾಡ್ದನಗಳಲ್ಲಿ ಸಿಗುತ್ತವೆ. ಕಂಬಳ ಕೋರಿಯಂದು ಉರವ, ಎರು ಬಂಟರೊಂದಿಗೆ ಆರಾಧನೆ ಪಡೆಯುವ ಜೋಗಿ ಪುರುಷ ಎಂಬ ಭೂತ ಈ ನಾಲ್ಕರಲ್ಲಿ ಒಬ್ಬನೇ ಅಥವಾ ಬೇರೆಯೇ ಎಂಬುದು ಇಲ್ಲಿ ತಿಳಿದು ಬರುವುದಿಲ್ಲ. ಇಲ್ಲಿ ಜೋಗಿ ಪುರುಷನಿಗೆ ತೆಂಗಿನ ತಿರಿಯ ಸರಳ ಅಲಂಕಾರವಿರುತ್ತದೆ. ಮುಖಕ್ಕೆ ಕಪ್ಪು ತಳಹದಿಯಲ್ಲಿ ಬಿಳಿ ಗೆರೆಗಳ ಮುಖವರ್ಣಿಕೆ ಇದೆ. ಹಣೆಯಲ್ಲಿ ಅರ್ಧಚಂದ್ರಾಕಾರಾದ ಮೂರು ನಾಮಗಳಿವೆ. ಸರಳವಾದ ವೇಷಭೂಷಣಗಳಿರುವ ಈ ದೈವದ ನೇಮಕ್ಕೆ ಕಂಬಳಕೋರಿಯ ಸಂದರ್ಭದಲ್ಲಿ ಪಾಡ್ದನ ಹೇಳುವುದಿಲ್ಲ ಆದ್ದರಿಂದ ಈ ದೈವದ ಬಗ್ಗೆ ಪೂರ್ಣ ಮಾಹಿತಿ ಸಿಕ್ಕಿಲ್ಲ.
ಆದರೆ ಪುರುಷ ಭೂತದ ಪಾಡ್ದನವನ್ನು ಗುಲಾಬಿ ಅಜಲ್ತಿ ಅವರು ನೀಡಿದ್ದು ನನ್ನ ಚಂದ ಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು ಪುಸ್ತಕದಲ್ಲಿದೆ .ಕನ್ನಡ ಯಾನೆ ಪುರುಷ ಭೂತ ಮೂಲತಃ ತುಂಡರಸ ಅಥವಾ ಅರಸನ ಸೇನಾಪತಿ /ಮಂತ್ರಿವರ್ಗದ ಪ್ರಭಾವಿ ಅಧಿಕಾರಿಯಾಗಿದ್ದಿರಬೇಕು .ಪುರುಷ ಭೂತ ದ ಅಲಂಕಾರದಲ್ಲಿ ಮಂತ್ರಿ ಯಾ ಸೇನಾಪತಿಗಳು ಧರಿಸುವ ಟೊಪ್ಪಿಗೆ ಇರುತ್ತದೆ .ಇದು ಆತನಿ ಗೆ ಚಾಮರ ಕೂಡಾ ಇದೆ ಇದು ಆತನ ಸ್ಥಾನ ಮಾನವನ್ನು ದ್ಯೋತಿಸುತ್ತದೆ .ಪುರುಷ ಭೂತವನ್ನು ಕಟ್ಟುವ ಕಲಾವಿದರು ತುಳು ಭಾಷಿಗರು .ಆದರೂ ಪುರುಷ ಭೂತ ಕತ್ತಿರುವಾಗ ಅವರು ನುಡಿಯನ್ನು ಕನ್ನಡದಲ್ಲಿ ಕೊಡುತ್ತಾರೆ ಆದರೆ ಪುರುಷ ಭೂತಕ್ಕೆ ಸಂಬಂಧಿಸಿದ ಪಾಡ್ದನ ಮಾತ್ರ ತುಳುವಿನಲ್ಲಿದೆ . ತುಳುನಾಡಿನ ಪ್ರಸಿದ್ಧ ದೈವ ಅಣ್ಣಪ್ಪ ಕೂಡ ಜೋಗಿಗಳ ಮೂಲವನ್ನು ಹೊಂದಿದೆ .ಆತ ಜೋಗಿ ಅಣ್ಣಪ್ಪ ಎಂಬ ಅಭಿಪ್ರಾಯವನ್ನು ಜೋಗಿ ಸಮುದಾಯದಲ್ಲಿ ಹುಟ್ಟಿ ಬೆಳೆದು ತಮ್ಮ ಜೋಗಿ ಸಮುದಾಯದ ಕುರಿತು ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಡಾ|| ಆನಂದಪ್ಪ ಅವರು ತಿಳಿಸಿದ್ದಾರೆ . ಆದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ.
ಡಾ.ಲಕ್ಷ್ಮೀ ಜಿ ಪ್ರಸಾದ ,
ಲೇಖಕರು:ಕರಾವಳಿಯ ಸಾವಿರದೊಂದು ದೈವಗಳು
ಮೊಬೈಲ್ 9480516684