ಸಾಲು ಸಾಲು ಸೋಲುಗಳಲ್ಲಿ ಕನ್ನಡ ಸಿನಿಮಾ ರಂಗ!

ಈ ವರ್ಷದ ಬಹುತೇಕ ಸಿನಿಮಾಗಳು ಫ್ಲಾಪ್!!

ProfileImg
14 Apr '24
5 min read


image

2024ರಲ್ಲಿ ಮಲಯಾಳಂ ಸಿನಿಮಾ ರಂಗ ಹೊರತುಪಡಿಸಿ ಬೇರೆ ಯಾವ ಸಿನಿಮಾರಂಗದಲ್ಲೂ ಹೇಳಿಕೊಳ್ಳುವಂತಹ ಸಿನಿಮಾಗಳು ಬಂದಿಲ್ಲ ಮತ್ತು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಕೂಡ ಕಂಡಿಲ್ಲ. ಆದರೂ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಒಂದಷ್ಟು ಸಿನಿಮಾಗಳು ಯಶಸ್ಸಿನ ಗಡಿಯನ್ನು ದಾಟಿ ಹಿಟ್ ಸಿನಿಮಾಗಳಾಗಿ ಹಿಟ್ ಟ್ಯಾಗ್ ಪಡೆದುಕೊಂಡಿವೆ. ಆದರೆ ದುರಾದೃಷ್ಟವಶಾತ್, ಕನ್ನಡ ಸಿನಿಮಾರಂಗದಲ್ಲಿ ಈ ವರ್ಷ ಬಿಡುಗಡೆಯಾದ ಯಾವ ಸಿನಿಮಾ ಕೂಡ ದೊಡ್ಡಮಟ್ಟದಲ್ಲಿ ಸದ್ದು ಮಾಡಿಲ್ಲ, ಹಿಟ್ ಟ್ಯಾಗಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ 'ಕಾಟೇರ' ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಹಣ ಗಳಿಗೆಯನ್ನು ಹಣ ಕಂಡಿತು. ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ವಾರಗಟ್ಟಲೆ ತುಂಬಿದ ಪ್ರದರ್ಶನವನ್ನು ದಾಖಲಿಸಿತು. ಆದರೆ ಇದರ ನಂತರ ಸಿನಿಮಾರಂಗದಲ್ಲಿ ಯಶಸ್ಸು ಮರೀಚಿಕೆಯಾಗಿದೆ. ಹೊಸಬರು, ಹಳೆಬರೆಂಬ ಭೇದವಿಲ್ಲದೆ ಬಹುತೇಕ ಎಲ್ಲರ ಸಿನಿಮಾಗಳು ಕೂಡ ಮಕಾಡೆ ಮಲಗಿವೆ. ಆದಾಗ್ಯೂ ನಿಲ್ಲದೆ ಪ್ರತಿ ವಾರ ಕನಿಷ್ಠ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೂರು ದಿನಗಳ ನಂತರ ಈ ಸಿನಿಮಾಗಳು ಮರೆಯಾಗುತ್ತಿವೆ. 

ಸ್ಟಾರ್ ಚಿತ್ರಗಳಿಗೂ ಪ್ರೇಕ್ಷಕರ ಕೊರತೆ!

ಸಾಧಾರಣವಾಗಿ ಒಂದು ನಂಬಿಕೆ, ಸ್ಟಾರ್ಗಳ ಸಿನಿಮಾಗಳಾದರೆ ಕನಿಷ್ಠ ಮಟ್ಟಕ್ಕೆ ಚಿತ್ರಮಂದಿರಗಳ ಕಡೆಗೆ ಪ್ರೇಕ್ಷಕರು ಬರಬಹುದು ಎಂಬುದು. ಆದರೆ ಈ ವರ್ಷ ಬಿಡುಗಡೆಯಾಗಿರುವ ಬಹುತೇಕ ಸ್ಟಾರ್ ಗಳ ಕೂಡ  ಕನ್ನಡ ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ತರಲು ವಿಫಲವಾಗುತ್ತಿವೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ -ಪ್ರಭುದೇವ ಕಾಂಬಿನೇಷನ್ ನಲ್ಲಿ ತಯಾರಾದ .'ಕರಟಕ ದಮನಕ’ ಬಗ್ಗೆ ಸಿನಿಮಾ ವಲಯದಲ್ಲಿ ಹಾಗೂ ಪ್ರೇಕ್ಷಕರಲ್ಲಿ ವಿಪರೀತವಾದ ನಿರೀಕ್ಷೆಗಳಿತ್ತು ಆದರೆ ಚಿತ್ರ ನಿರೀಕ್ಷಿತ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಚಿತ್ರದ ಬಗ್ಗೆ ವಿಮರ್ಶಕರಿಂದ ಕೂಡ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿಲ್ಲ.

ಇನ್ನು ಮತ್ತೊಂದು ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಚಿತ್ರ ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ಅಭಿನಯದ 'ರಂಗ ನಾಯಕ'. 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳ ನಂತರ ಗುರುಪ್ರಸಾದ್- ಜಗ್ಗೇಶ್ ಕಾಂಬಿನೇಷನಲ್ಲಿ ಬರುತ್ತಿದ್ದ ಚಿತ್ರ, ಹೀಗಾಗಿ ಪ್ರೇಕ್ಷಕ ವಲಯದಲ್ಲಿ  'ರಂಗ ನಾಯಕ' ಸಿನಿಮಾ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಕುತೂಹಲವಿತ್ತು. ತೀರಾ ಸಿನಿಮಾ ಬಿಡುಗಡೆಯಾದಾಗ ನಿರೀಕ್ಷೆಗಳೆಲ್ಲಾ ಖುಷಿಯಾಯಿತು. ಸಿನಿಮಾ ಬಗ್ಗೆ ಕೆಟ್ಟ ವಿಮರ್ಶೆ ಒಂದು ಕಡೆಯಾದರೆ, ಅನೇಕ ಚಿತ್ರಮಂದಿರಗಳಿಗೆ ಮೊದಲ ದಿನ ಮೊದಲ ಶೋಗೆ ಪ್ರೇಕ್ಷಕನ ಕೊರತೆ ಎದುರಾಯಿತು. ತಡಬುಡವಿಲ್ಲದೆ ಸಾಗುವ ಕಥೆ, ಅದೇ ಹಳಿಸಿದ ಡಬಲ್ ಮೀನಿಂಗ್ ಡೈಲಾಗ್ ಗಳು, ಯಾವುದೋ ಹೊಸಬರು ಮಾಡುವ ಶಾರ್ಟ್ ಫಿಲಂ ಗಳ ತರದ ಮೇಕಿಂಗ್ ಒಟ್ಟಾರೆ 'ರಂಗ ನಾಯಕ' ರಂಗ ಮಂಚದಿಂದ (ಚಿತ್ರಮಂದಿರಗಳಿಂದ) ಮೊದಲ ದಿನವೇ ಮರೆಯಾಗಿ ಹೋದ. ಜಗ್ಗೇಶ್ ಕೆರಿಯರ್ ನಲ್ಲಿ ಅತಿ ದೊಡ್ಡ ಡಿಸಾಸ್ಟರ್ ಚಿತ್ರಗಳಲ್ಲಿ ‘ರಂಗನಾಯಕ’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ

ಹೋದ ಪುಟ್ಟ-ಬಂದ ಪುಟ್ಟ…

ಇದು ದೊಡ್ಡ ಸಿನಿಮಾಗಳ ಕಥೆಯಾದರೆ, ಇನ್ನು ಹೊಸಬರ ಚಿತ್ರಗಳಂತೂ ಹೋದ ಪುಟ್ಟ-ಬಂದ ಪುಟ್ಟ ಎಂಬಂತಾಗಿದೆ. ಅದೆಷ್ಟೋ ಸಿನಿಮಾಗಳು ಯಾವಾಗ ಬಿಡುಗಡೆ ಆಯಿತು ಅನ್ನೋದು ಕೂಡ ಬಹುತೇಕ ಪ್ರೇಕ್ಷಕರಿಗೆ ಇಂದಿಗೂ ಗೊತ್ತಿಲ್ಲ.'ಆದರ್ಶ ರೈತ', 'ಒಂಟಿ ಬಂಟಿ ಲವ್ ಸ್ಟೋರಿ','ಬಾರ್ಬರಿಕಾ', ಜೊತೆಯಾಗಿರು', 'ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನಾ','ಬ್ರಹ್ಮಚಾರಿಗಳ ಔತಣ ಕೂಟ', 'ನಗುವಿನ ಹೂಗಳ ಮೇಲೆ', 'ಅಲೆಮಾರಿಯ ಈ ಬದುಕು', 'ಮಂಡ್ಯ ಹೈದ','ಒಂದು ಪಿಚಾಚಿಯ ಕಥೆ','ಕೊಲೆಯಾದವನೇ ಕೊಲೆಗಾರ', ರಾಕ್ಷಸ ತಂತ್ರ', 'ತೂತ್ ಕಾಸು' ಹೀಗೆ ಹೇಳುತ್ತಾ ಹೋದರೆ ಇನ್ನೊಂದಷ್ಟು ಸಿನಿಮಾಗಳು ನಿಮ್ಮ ಕಣ್ಣು ಮುಂದೆ ಇಡಬಹುದು. ಇದರಲ್ಲಿ ಒಂದೇ ಒಂದು ಚಿತ್ರ ಕೂಡ ಬಹುತೇಕ ಪ್ರೇಕ್ಷಕರಿಗೆ ಯಾವಾಗ ಬಿಡುಗಡೆಯಾಯಿತು, ಎಲ್ಲಿ ಬಿಡುಗಡೆ ಆಯಿತು ಎಂಬ ಕನಿಷ್ಠ ಮಟ್ಟದ ಮಾಹಿತಿ ಕೂಡ ಇರಲಿಕ್ಕಿಲ್ಲ.

ಬಹುತೇಕ ಹೊಸಬರ ಸಿನಿಮಾಗಳು ಪೂರ್ವ ಸಿದ್ಧತೆ ಇಲ್ಲದೆ, ಸರಿಯಾದ ಮಾರ್ಕೆಟಿಂಗ್ ಮಾಡದೆ, ಕನಿಷ್ಠ ಕನ್ನಡದ ಪ್ರೇಕ್ಷಕನಿಗೆ ತನ್ನ ಸಿನಿಮಾ ಒಂದು ಇರುವ ಬಗ್ಗೆ ಕೂಡ ಮಾಹಿತಿ ನೀಡದೆ ಹಾಗೆ ಬಂದು ಹೀಗೆ ಹೊರಟು ಹೋಗುತ್ತಿವೆ. ಪ್ರೇಕ್ಷಕರನ್ನು ರಂಜಿಸುವ ಅಂಶಗಳು ಬಹುತೇಕ ಈಗ ಬರುತ್ತಿರುವ ಹೊಸಬರ ಚಿತ್ರಗಳಲ್ಲಿ ಕಾಣಸಿಗುತ್ತಿಲ್ಲ. ವಾಟ್ಸಪ್ ಗಳಲ್ಲಿ ಬರುವ ಜೋಕ್ ಗಳು, ರೀಲ್ಸ್ ಕಾಮಿಡಿ, ಒಂದಷ್ಟು ಪಂಚಿಂಗ್ ಡೈಲಾಗ್ ಗಳು ಇಷ್ಟೇ ಸಿನಿಮಾ ಆಗಿಹೋಗಿದೆ.ಕಥೆಗೂ, ಪಾತ್ರಗಳಿಗೂ ಸಂಬಂಧವೇ ಇರುವುದಿಲ್ಲ. ಹಾಡಿಗೂ, ಭಾವಕ್ಕೂ ಹೊಂದಾಣಿಕೆ ಆಗಲ್ಲ. ನಾವು ಒಂದು ಸಿನಿಮಾ ಮಾಡಿದ್ದೇವೆ ಅನ್ನುವುದು ಅಷ್ಟೇ ಅವರ ಹೆಗ್ಗಳಿಕೆ.

ಇತರ ಭಾಷೆಗಳಿಗಿಂತ ಹೆಚ್ಚು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತವೆ ಎಂಬುದಷ್ಟೇ ನಮ್ಮ ಸಿನಿಮಾರಂಗಕ್ಕೆ ಇರುವ ಹೆಗ್ಗಳಿಕೆ. ಇದ ಹೊರತು ಕನ್ನಡ ಸಿನಿಮಾ ರಂಗಕ್ಕಾಗುತ್ತಿರುವ ಲಾಭ ಏನೂ ಇಲ್ಲ. ಈಗಂತೂ ಬಹುತೇಕ OTT ಗಳು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುವುದೇ ನಿಲ್ಲಿಸಿ ಬಿಟ್ಟಿವೆ. Disney+Hot Star ತೆಲುಗಿನಲ್ಲಿ ವೆಬ್ ಸೀರೀಸ್ ಗಳ ನಿರ್ಮಾಣ ಕೂಡ ಮಾಡುತ್ತಿದೆ. ಹೊಸಬರಿಗೆ OTT ಪ್ಲಾಟ್ ಫಾರ್ಮ್ ಗಳು ಒಳ್ಳೆ ವೇದಿಕೆ ಮತ್ತು ಅವಕಾಶಗಳನ್ನು ಅಲ್ಲಿ ಕಲ್ಪಿಸಿ ಕೊಡುತ್ತಿವೆ. ದುರಂತಕ್ಕೆ ಇದೇ ಪೂರ್ತಿ  OTT ಪ್ಲಾಟ್ ಫಾರ್ಮ್ ಗಳು ಕನ್ನಡದ ಸ್ಟಾರ್ ಸಿನಿಮಾಗಳನ್ನು ಕೂಡ ಖರೀದಿಸಲು ಮುಂದೆ ಬರುತ್ತಿಲ್ಲ. ಇನ್ನು ಹೊಸಬರ ಮಾತು ಹೇಳಬೇಕೆ? ಕನ್ನಡ ಸಿನಿಮಾಗಳಗೆ ಹೆಚ್ಚಿನ ಅವಕಾಶ ಸಿಗುತ್ತಿರುವುದು ಕೇವಲ amazon ಪ್ರೈಮ್‌ನಲ್ಲಿ ಮಾತ್ರ. ಉಳಿದೆಲ್ಲ OTT ಪ್ಲಾಟ್ ಫಾರ್ಮ್ ಗಳು ಕನ್ನಡ ಸಿನಿಮಾಗಳಿಗೆ ಬಾಗಿಲನ್ನು ತೆರೆಯುತ್ತಿಲ್ಲ

ಭರವಸೆ ಮೂಡಿಸಿದ ಹೊಸ ಸಿನಿಮಾಗಳು!

ಈ ವರ್ಷ ಬಿಡುಗಡೆಯಾದ ಬಹುತೇಕ ಹೊಸಬರ ಸಿನಿಮಾಗಳು ಇನ್ನಿಲ್ಲದಂತೆ ನೆಲ ಕಚ್ಚಿವೆ. ಆದಾಗ್ಯೂ ಈ ವರ್ಷ ಬಿಡುಗಡೆಯಾಗಿರುವ ಹೊಸ ಪ್ರಯತ್ನಗಳು ಮತ್ತು ಹೊಸಬರ ಸಿನಿಮಾಗಳು ಒಂದಷ್ಟು ಭರವಸೆಯನ್ನು ಕೂಡ ಮೂಡಿಸುವೆ. ಬಾಕ್ಸ್ ಫೀಸಿನಲ್ಲಿ ಅವು ಹೆಚ್ಚಿನ ಹಣ ಗಳಿಕೆ ಮಾಡದೆ ಹೋದರು ಕೂಡ ಪ್ರೇಕ್ಷಕರ ಗಮನ ಸೆಳೆಯುವುದರಲ್ಲಿ ಯಶಸ್ಸನ್ನು ಕಂಡಿವೆ.

ಹೊಸಬರ ಪ್ರಯತ್ನ ಅಂದಾಗ ಸಹಜವಾಗಿ ಅಲ್ಲೊಂದು ನಿರೀಕ್ಷೆ ಸಹಜವಾಗಿಯೇ ಮನೆಮಾಡುತ್ತದೆ. ಇತರ ಸಿನಿಮಾರಂಗದಲ್ಲಿ ಹೊಸಬರ ಚಿತ್ರಗಳು  ಇಂಡಿಯಾ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಕೂಡ ಸದ್ದು ಮಾಡಿವೆ. ಆದರೆ ಕನ್ನಡದ ಸಿನಿಮಾಗಳು ಕನಿಷ್ಠ ಬೆಂಗಳೂರಿನ ಮಟ್ಟಿಗಾದರೂ ಸುದ್ದಿ ಮಾಡದೆ ಹೋಗುತ್ತಿವೆ. ಈಗಂತೂ ಹೊಸಬರ ಸಿನಿಮಾ ಮಾಡಲು ನಿರ್ಮಾಪಕರು ಹಿಂದೇಟು ಹಾಕುವ ಕಾಲ, ಅಚ್ಚರಿ ಎಂದರೆ ಲೋ ಬಜೆಟ್ಟಿನ ಸಿನಿಮಾಗಳು ಈಗಲೂ ವಾರಕ್ಕೆ ನಾಲ್ಕರಿಂದ ಐದು ಬಿಡುಗಡೆಯಾಗುತ್ತಿವೆ. ಇಂತಹ ಸಿನಿಮಾಗಳಿಂದ ಸಿನಿಮಾ ರಂಗಕ್ಕೆ ಆಗುತ್ತಿರುವ ಪ್ರಯೋಜನವೇನು ಇಲ್ಲ. ಕನ್ನಡ ಸಿನಿಮಾರಂಗಕ್ಕೆ ಪ್ರಯೋಗಗಳು ಬೇಕಿದೆ. ಹೊಸಬರು ಹೊಸ ಭರವಸೆಯನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಈ ವರ್ಷ ಒಂದಷ್ಟು ಸಿನಿಮಾಗಳು ಗಮನ ಸೆಳೆಯುವುದರಲ್ಲಿ ಯಶಸ್ಸನ್ನು ಕಂಡಿವೆ.

ರಂಗಾಯಣ ರಘು, ರಾಘವೇಂದ್ರ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ರಾಜಕುಮಾರ್ ಅಸ್ಕಿ ನಿರ್ದೇಶನದ 'ರಂಗಸಮುದ್ರ', ರಂಗಾಯಣ ರಘು ಅಭಿನಯದ, ಸಂದೀಪ್ ಸುಂಕದ ನಿರ್ದೇಶನದಲ್ಲಿ ತೆರೆಕಂಡ ‘ಶಾಖಾಹಾರಿ’, ಗೌರಿಶಂಕರ್- ಬಿಂದು ಶಿವರಾಂ ಮುಖ್ಯಭೂಮಿಕೆಯಲ್ಲಿ ರಾಜಗುರು ಭೀಮಪ್ಪ ನಿರ್ದೇಶನದ 'ಕೆರೆ ಬೇಟೆ', ಅಭಿ ಬಸವರಾಜ್ ನಿರ್ದೇಶನದ 'ಸೋಮು ಸೌಂಡ್ ಇಂಜಿನಿಯರ್', ದೀಕ್ಷಿತ್ ಶೆಟ್ಟಿ ಅಭಿನಯದ 'KTM' ಜೊತೆಗೆ ಅತಿ ಹೆಚ್ಚು ಪ್ರೇಕ್ಷಕರನ್ನು ತಲುಪುವುದರಲ್ಲಿ ಯಶಸ್ವಿಯಾದ ಶ್ರೀನಿಧಿ ಬೆಂಗಳೂರು ನಿರ್ದೇಶನದ 'ಬ್ಲಿಂಕ್' ಚಿತ್ರಗಳು ಒಂದಷ್ಟು ಭರವಸೆಯನ್ನು ಮೂಡಿಸಿವೆ. ಇವುಗಳನ್ನು ಹೊರತುಪಡಿಸಿ ಬಹುತೇಕ ಹೊಸಬರ ಪ್ರಯತ್ನಗಳು ನಿರಾಶಾದಾಯಕವಾಗಿದೆ.

'ಯುವ'ರಾಜನ ಆಗಮನ!

ಈ ವರ್ಷದ ವಿಶೇಷಗಳಲ್ಲಿ ರಾಜ್ ಕುಮಾರ್ ವಂಶದ ಮೂರನೇ ತಲೆಮಾರಿನ  ಭರವಸೆಯ ನಾಯಕನೆಂದೆ ಗುರುತಿಸಲಾದ ಯುವರಾಜ್ ಕುಮಾರ್ ಅಭಿನಯದ 'ಯುವ' ಸಿನಿಮಾ ಬಿಡುಗಡೆಯಾಗಿದ್ದು!ಸಂತೋಷ್ ಆನಂದ ರಾಮ್ ನಿರ್ದೇಶನದ 'ಯುವ' ಚಿತ್ರವು ಯುವಕರಿಗೆ ಬೇಕಾದ ಫುಲ್ ಮೀಲ್ಸ್ ಅನ್ನು ಉಣಬಡಿಸುವುದರಲ್ಲಿ ಯಶಸ್ಸನ್ನು ಕಂಡಿದೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ನಾಯಕ ನಟನಾಗಿ ಯುವರಾಜ್ ಕುಮಾರ್ ಗಮನ ಸೆಳೆದಿದ್ದು, ಭವಿಷ್ಯದ ನಾಯಕ ನಟನಾಗಿ ಹೊರಹೊಮ್ಮಿದ್ದಾರೆ.

ಇನ್ನು, ಸುನಿ ನಿರ್ದೇಶನದಲ್ಲಿ ವಿನಯ್ ರಾಜಕುಮಾರ್ ಅಭಿನಯದ 'ಒಂದು ಸರಳ ಪ್ರೇಮ ಕಥೆ' ಭರವಸೆಯನ್ನು ಮೂಡಿಸುವ ಚಿತ್ರಗಳ ಸಾಲಿಗೆ ಸೇರಿದ್ದರು ಬಾಕ್ಸ್ ಫೀಸ್ ನಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಸಫಲವಾಗಲಿಲ್ಲ. ಸುನಿ ನಿರ್ದೇಶನದ ಮತ್ತೊಂದು ಚಿತ್ರ ಶರಣ್ ಅಭಿನಯದ 'ಅವತಾರ್ ಪುರುಷ-2' ದಿಗಂತ್ ಅಭಿನಯದ 'ಮಾರಿಗೋಲ್ಡ್', ಸತೀಶ್ ನೀನಾಸಂ ಅಭಿನಯದ 'ಮ್ಯಾಟ್ನಿ', ನೆನಪಿರಲಿ ಪ್ರೇಮ್ ಹೆಚ್ಚು ಭರವಸೆಯನಿಟಿದ್ದ 'ಅಪ್ಪ ಐ ಲವ್ ಯು' ಚಿತ್ರಗಳು ಕೂಡ ಪ್ರೇಕ್ಷಕರನ್ನು ಥಿಯೇಟರ್ ಕಡೆಗೆ ಕರೆತರಲು ವಿಫಲವಾಗಿವೆ.

ಕನ್ನಡ ಸಿನಿಮಾಗಳಿಗೆ ಭವಿಷ್ಯವಿದೆಯೇ?

ಎರಡು ವರ್ಷದ ಹಿಂದೆ ಇಡಿ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದ್ದ ಕನ್ನಡ ಸಿನಿಮಾರಂಗ ಈಗ ಪಾತಾಳಕ್ಕೆ ಕುಸಿದಿದೆ. 'ಕೆಜಿಎಫ್ ಸರಣಿ', 'ಕಾಂತಾರ' ಚಿತ್ರಗಳ ಮೂಲಕ ಕನ್ನಡ ಸಿನಿಮಾ ರಂಗ ಪ್ಯಾನ್ ಇಂಡಿಯಾ ಸಿನಿಮಾ ರಂಗವಾಯಿತು. ಬಹುತೇಕ ಎಲ್ಲಾ ನಟರು ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಯಶ್ ಅಭಿನಯದ ‘Toxic’ ಪೂರ್ಣ ಪ್ರಮಾಣದಲ್ಲಿ ಕನ್ನಡ ಸಿನಿಮಾ ಅಂತ ಹೇಳಲಾಗದು. ಅದರ ನಂತರ ಅವರು ಅಭಿನಯಿಸಲಿರುವ 'ರಾಮಾಯಣ' ನೇರವಾಗಿ ಹಿಂದಿ ಚಿತ್ರವಾಗಿರುತ್ತದೆ. ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್', ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಸರಿನಲ್ಲಿ ಹೊರ ಬರುತ್ತಿದೆ. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಚ್ಚು ನಂಬಿಕೆ ಮತ್ತು ಭರವಸೆ ಇಟ್ಟಿರುವ ಕನ್ನಡ ಚಿತ್ರ 'ಕಾಂತಾರ- 1'. ಇದನ್ನು ಹೊರತುಪಡಿಸಿ ಮತ್ತೆ ಯಾವುದೇ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ ಮತ್ತು  ನಿರೀಕ್ಷೆಗಳು ರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗುತ್ತಿಲ್ಲ. 

ಹೊಸಬರ ಸಿನಿಮಾಗಳು ಈಗ ಸಂಪೂರ್ಣವಾಗಿ ನೆಲಕಚ್ಚುತ್ತಿವೆ. ಹೊಸ ಪ್ರಯತ್ನಗಳು ನಡೆಯುತ್ತಿದ್ದರೂ ಆ ಪ್ರಯತ್ನಗಳಲ್ಲಿ ಗಟ್ಟಿತನವಿಲ್ಲ. ಇಂದಿನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಬಹುತೇಕ ಅಂಶಗಳು ಮಿಸ್ ಆಗಿದೆ. ಈಗಲೂ ಪ್ರತಿ ವಾರ ಐದರಿಂದ ಆರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ ಆ ಎಲ್ಲಾ ಚಿತ್ರಗಳು ಕೂಡ ಅಭಿರುಚಿಯ ಕೊರತೆಯನ್ನು ಎದುರಿಸುತ್ತಿರುತ್ತವೆ. ಮೊದಲು ಕೇವಲ ಹಿಂದಿ,ತೆಲುಗು, ತಮಿಳು ಚಿತ್ರಗಳಷ್ಟೇ ಕನ್ನಡಕ್ಕೆ ನೇರವಾಗಿ ಸವಾಲಾಗುತ್ತಿತ್ತು. ಈಗ ಹೊಸದಾಗಿ ಮಲಯಾಳಂ ಸಿನಿಮಾರಂಗ ಕೂಡ ಇದಕ್ಕೆ ಸೇರಿಕೊಂಡಿದೆ. ಹೊಸದಾಗಿ ಬಿಡುಗಡೆಯಾಗುವ ಮಲಯಾಳಂ ಸಿನಿಮಾ ನೇರವಾಗಿ ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಷಗಳಲ್ಲಿ ಕನಿಷ್ಠ ನೂರು ಶೋಗಳನ್ನಾದರೂ ಪಡೆದುಕೊಳ್ಳುತ್ತಿವೆ. ಆದರೆ, ಕನ್ನಡ ಸಿನಿಮಾ ಒಂದು ಶೋ ಪಡೆಯಕ್ಕೂ ಕೂಡ ಕಾಡಿಬೇಡಿ ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಅಂತೂ ಇಂತೂ ಹೆಣಗಾಡಿ ಒಂದು ಶೋ ಪಡೆದುಕೊಂಡರು, ಸಿನಿಮಾ ನೋಡಲು ಬರುವ ಪ್ರೇಕ್ಷಕರೆಷ್ಟು? ಯಾವುದೇ ಕನ್ನಡ ಸಿನಿಮಾವಾದರೂ ಸರಿಯೇ ಪ್ರೇಕ್ಷಕರು ಬರುವುದು ಕೇವಲ ಸಿನಿಮಾ ಚೆನ್ನಾಗಿದೆ ಅನ್ನುವ ಟಾಕ್ ಬಂದ ಮೇಲಷ್ಟೇ! ಆದರೆ ಅಲ್ಲಿವರೆಗೂ ಎಷ್ಟು ಸಿನಿಮಾಗಳು ಪರಭಾಷಿಕರ ಹಿಡಿತದಲ್ಲಿರುವ ಮಲ್ಟಿಪ್ಲೆಕ್ಸ್ ಗಳಲ್ಲಿ ಉಳಿಯುತ್ತದೆ?  ಅವು ಅಲ್ಲಿ ಉಳಿದುಕೊಳ್ಳಲು ಎಷ್ಟರಮಟ್ಟಿಗೆ ಮಲ್ಟಿಪ್ಲೆಕ್ಸ್ ಗಳು ಅವಕಾಶ ಕೊಡುತ್ತವೆ? ಇದಕ್ಕೊಂದು ತಾಜಾ ಉದಾಹರಣೆಗಳೆಂದರೆ 'ಬ್ಲಿಂಕ್' ಮತ್ತು 'ಶಾಖಾಹಾರಿ' ಚಿತ್ರಗಳು. ಸಾಕಷ್ಟು ಹೆಣಗಾಡಿ ಕೊನೆಗೂ ಕೂಡ  ಮಲ್ಟಿಪ್ಲೆಕ್ಸ್ ನಲ್ಲಿ ಇವು ಉಳಿದುಕೊಂಡವು ಮತ್ತು ತಕ್ಕಮಟ್ಟಿಗೆ ಯಶಸ್ಸನ್ನು ಸಹ ಪಡೆದುಕೊಂಡವು. ಆದರೂ ಸಹ ಮಲ್ಟಿಪ್ಲೆಕ್ಸ್ ಗಳ ಕುತಂತ್ರಕ್ಕೆ ಈ ಚಿತ್ರಗಳು ಸಹ ಬಲಿಯಾದವು.

ಒಂದು ಕಡೆ ಮಲ್ಟಿಪ್ಲೆಕ್ಸ್ ಗಳ ಅಸಹಕಾರ, ಸಿಂಗಲ್ ಥಿಯೇಟರ್ಗಳ ಬಾಡಿಗೆ ಕಟ್ಟಲಾಗದ ಸಂಕಷ್ಟ ಇದರ ಮಧ್ಯೆ ಹೊಸ ಸಿನಿಮಾಗಳ ಬಿಡುಗಡೆ. ಇಲ್ಲಿ, ಕೊನೆಯದಾಗಿ ಉಳಿದುಕೊಳ್ಳುವ ಪ್ರಶ್ನೆ  ಕನ್ನಡ ಸಿನಿಮಾರಂಗ ಕಗ್ಗತ್ತಲ ದಾರಿಯಿಂದ ಬೆಳಕಿನ ಯಶಸ್ಸಿನ ಕಡೆಗೆ ಸಾಗುವುದು ಯಾವಾಗ?

Disclaimer: This post has been published by Ravindra Kotaki from Ayra and has not been created, edited or verified by Ayra
Category:Movies and TV Shows



ProfileImg

Written by Ravindra Kotaki

Verified

ಲೇಖಕ/ಅಂಕಣಕಾರ

0 Followers

0 Following