ಅಮ್ಮ ಎನ್ನುವ ಎರಡು ಅಕ್ಷರದ ಮಹಿಮೆಯನ್ನು ಕೊಂಡಾಡಲು ಪದಗಳು ಸಾಲದು..
ತಾಯಿಯಾದವಳ ಸ್ವಭಾವ ಪ್ರೇಮ. ನಿಷ್ಕಾರಣ ಪ್ರೇಮ. ಕರುಣೆ, ವಾತ್ಸಲ್ಯದ ಮೂರ್ತರೂಪವೇ ಅವಳಲ್ಲವೇ!?
"ಜನನಿ ತಾನೇ ಮೊದಲ ಗುರು!"
ತಾಯಿ ಗರ್ಭಾವಸ್ಥೆಯಲ್ಲಿದ್ದಾಗಲೇ ಹುಟ್ಟಿಕೊಳ್ಳುವ ವಿಶೇಷ ಸಂಬಂಧ ತಾಯಿ ಮಗುವಿನದ್ದು. ಆ ಕ್ಷಣದಿಂದಲೇ ಮಗುವಿಗೆ ಒಳಿತನ್ನೇ ತಿಳಿಸಿಕೊಟ್ಟು ರಾಷ್ಟ್ರಪ್ರೇಮ, ಧರ್ಮಪ್ರೇಮದ ಬೀಜವನ್ನು ಬಿತ್ತಿ, ಆ ಮಗುವಿಗೆ ನಿರಂತರ ಬೆನ್ನೆಲುಬಾಗಿ ನಿಂತು, ಕಷ್ಟ ಕಾಲದಲ್ಲಿಯೂ ದಿಟ್ಟಳಾಗಿ ಮಗುವಿಗೂ ಸ್ಥೈರ್ಯ ತುಂಬಿ, ತನ್ನ ಕುಡಿಯನ್ನು ಸಮಾಜಕ್ಕೆ ಅರ್ಪಿಸಿದ ಮಹಾಮಾತೆ, ಧೀರವನಿತೆ ತಾಯಿ. ಒಳಿತನ್ನು ಕಲಿಯುಸುವವಳಾಕೆ, ಕ್ಷಣಕ್ಷಣಕ್ಕೂ ತಪ್ಪುಗಳನ್ನು ತಿದ್ದಿ ಮುನ್ನಡೆಸುವವಳಾಕೆ.
ಕೇಳಿದ್ದೆಲ್ಲವ ಕೊಡುವಳು. ಮಕ್ಕಳ ಹಠವ ತಣಿಸುವಳು. ನಮ್ಮ ವಸ್ತು ಎಲ್ಲಿಯೇ ಇದ್ದರೂ ತಾನಾಗಿಯೇ ಹುಡುಕಿ ಕೊಡುವಳು. ನಮಗಾಗಿ ನಮ್ಮ ಇಷ್ಟದ ತಿನಿಸನ್ನು ರುಚಿರುಚಿಯಾಗಿ ಮಾಡಿ ಬಡಿಸುವಳು..
ತನ್ನ ಕುಡಿಗೆ ಒಳ್ಳೆಯದನ್ನೇ ಬಯಸುವ ಆಕೆ ತನ್ನ ಕುಡಿಯನ್ನು ಸರಿದಾರಿಗೆ ತರಲು ಬಯಸಿದಾಗ ಅಷ್ಟೇ ಕಠೋರಳೂ ಆಗಬಲ್ಲಳು!
ಅಮ್ಮನಿಲ್ಲದೆ ಈ ಜೀವವಿಲ್ಲ. ಬೇಸರವಾದಾಗ, ಖುಷಿಯಾದಾಗ, ಕಷ್ಟ ಬಂದಾಗ, ಸುಖವಿದ್ದಾಗ, ಮದುವೆಯಾದ ಬಳಿಕ, ಘಳಿಗೆ ಘಳಿಗೆಗೂ ಅಮ್ಮ ಬೇಕು, ಅಮ್ಮನ ಸಹಾಯ ಬೇಕು, ಅಮ್ಮನ ಪ್ರೀತಿ ಬೇಕು. ಅಮ್ಮಾ ಎಂದರೆ ಏನು ಹರುಷವೋ..…
ನನ್ನ ಅಮ್ಮನಿಗಾಗಿ ಕೆಲವು ಸಮಯದ ಹಿಂದೆ ಬರೆದಿದ್ದೆ:
"ಕರುಳ ಬಳ್ಳಿಯ ಸಂಬಂಧ..
ಜನ್ಮದಾತೆಯ ಜೊತೆಗಿನ ಅನುಬಂಧ..
ಈ ಭಾವ-ಬಂಧವು ಅಕ್ಷರಗಳಿಗೆ ನಿಲುಕದ್ದು..
'ಅಮ್ಮ' ಎಂಬೆರಡಕ್ಷರಕೆ ಸಾಲುಗಳೇ ಸೋಲುವವು..
ನವಮಾಸ ಗರ್ಭದಿ ರಕ್ಷಿಸಿ ಎನಗೆ ಜನ್ಮವ ನೀಡ್ದೆ..
ನಿನ್ನ ರೂಪವನೇ ಎನಗೂ ಇತ್ತೆ..
ತ್ಯಾಗಮಯಿ ತಾಯಿ ನೀನಾದೆ..
ಏನಾದರೇನು, ಪ್ರತಿ ಬಾರಿ ನೀ ಎನ್ನೊಡನಿದ್ದೆ..
ಮೊದಲ ಗುರುವಾಗಿ ನಿನ್ನ ಸಂಸ್ಕಾರ-ನಿಷ್ಠೆಗಳ ಹಸ್ತಾಂತರಿಸಿದೆ..
ನೀನೇ ಎನ್ನ ಪ್ರೀತಿಯ ಪುಟ್ಟು ಪ್ರಪಂಚವಮ್ಮಾ..
ಅರೆಕ್ಷಣ ಜಗಳಾಡಿದರೂ ಮುನಿಸು ತೋರದೆ ಕ್ಷಮಿಸುವಾಕೆ..
ತಿಳಿಯದೆ ಮಾಡ್ವ ತಪ್ಪನ್ನೆಲ್ಲ ತಿದ್ದುವಾಕೆ..
ಸುಖ-ದುಃಖಗಳಲ್ಲಿ ನಿರತ ನನ್ನೊಡನಿರುವಾಕೆ..
ತಾನ್ಪಟ್ಟ ಕಷ್ಟಗಳ ತನ್ನ ಮಗುವು ಕಾಣಬಾರದೆಂದು ಬಯಸುವಾಕೆ..
ನೀನಿರದೆ ನಾನೆಲ್ಲಿ!?
ಅಮ್ಮಾ.....
ಎನಗೆ,
ನೀ ಹಾಡುವ ಮಧುರ ಪದ್ಯಗಳ ಕೇಳುವಾಸೆ..
ಈ ದಿನದ ಆಗು-ಹೋಗುಗಳ ಕುರಿತು ನಿನಗ್ಹೇಳುವಾಸೆ..
ನಮ್ಮಿಬ್ಬರದೇ ಪ್ರಪಂಚದ ಕುರಿತು ಕ್ಷಣಕಾಲ ಚರ್ಚಿಸುವಾಸೆ..
ನಿನ್ನ ಮಮತೆಯ ಮಡಿಲಲ್ಲಿ ಪುಟ್ಟ ಕಂದನಾಗಿ ಮಲಗುವಾಸೆ...
ನಿನ್ನ ಒಡಲದು ಭಾವದ ಕಡಲಮ್ಮಾ.."
ಅಮ್ಮನ ಕುರಿತು ಬರೆಯುವುದಾದರೆ ಎಷ್ಟು ಬರೆದರೂ ಕಡಿಮೆ… ಪ್ರತಿಯೊಬ್ಬರಿಗೂ ತಾಯಿ ಬೇಕು, ತಾಯಿಯ ಪ್ರೀತಿ ಬೇಕು! ಅಲ್ಲವೇ!?
ಎಲ್ಲವೂ ಸರಿಯಾಗಿದ್ದಿದ್ದರೆ ನಾನೂ ಇಂದು ಎರಡು ತಿಂಗಳ ಪುಟ್ಟ ಹಸುಗೂಸಿನ ತಾಯಿಯೆಂದು ಹೇಳಿಕೊಳ್ಳುತ್ತ ಮಾತೃತ್ವದ ಹೊಸ ಹುರುಪಿನಲ್ಲಿರುತ್ತಿದ್ದೆ....
ಆದರೆ ವಿಧಿಯಾಟದ ಮುಂದೆ ನಮ್ಮದೇನುಂಟು!!