ಮೇ ತಿಂಗಳು ಬಂದರೆ ನೆನಪಾಗುವುದು ಕಾರ್ಮಿಕರ ದಿನಾಚರಣೆ.ಒಂದನೆ ತಾರೀಕಿನಂದು ಕಾರ್ಮಿಕರಿಗೆ ರಜೆ.ಈಗ ನಾನು ಬರೆಯ ಹೊರಟಿದ್ದು ಒಬ್ಬ ಕಾರ್ಮಿಕಳ ಬಗ್ಗೆ.
2019 ರಲ್ಲಿ ನಾನು ನನ್ನೂರಿಗೆ ಬಹಳ ಸಲ ಹೋಗಿದ್ದೇನೆ ,_ಬೆಂಗಳೂರಿನಿಂದ ಪುತ್ತೂರಿಗೆ.
ಆನಂತರ 2020 ಫೆಬ್ರವರಿಯಲ್ಲಿ ಹೋದದ್ದು.ಊರಿಗೆ ಹೋಗಿ ಒಂದು ವರ್ಷವೇ ಆಗಿತ್ತು. ಕೋವಿಡ್ ನಿಂದಾಗಿ ಪ್ರಯಾಣಗಳೇ ರದ್ದಾದುವು.2019ರಲ್ಲಿ ಪ್ರತೀ ತಿಂಗಳೆಂಬಂತೆ ಊರಿಗೆ ಪಯಣವಿರುತ್ತಿತ್ತು .ಹಾಗೆ 2020ರ ಜನವರಿಯಲ್ಲೂ ಹೋಗಿದ್ದೆ.335 km ದೂರದ ಊರಿಗೆ ಕಾರಿನಲ್ಲಿ ಹೋಗುವಾಗ ಪ್ರಯಾಣದ ಮಧ್ಯೆ ವಿರಾಮ ತೆಗೆದುಕೊಳ್ಳುವುದು ಅನಿವಾರ್ಯ. ಹಾಗೆ ಸಾಮಾನ್ಯವಾಗಿ ಕಾಫಿಗೋ ,ಊಟಕ್ಕೋ ನಾವು ಹೋಗುವುದು ಹೋಟೆಲ್ ಮಯೂರಕ್ಕೆ ಎಡೆಯೂರಲ್ಲಿ. ಹಾಗೆ ಹೋದಾಗ ಮೊದಲು ಹೋಗುವುದೇ ವಾಷ್ರೂಮಿಗೆ. ಹಾಗೆ ಒಮ್ಮೆ ಹೋದಾಗ ಒಳಗಿಂದ ಹಾಡು ಕೇಳಿಬಂತು. ಯಾರಪ್ಪ ಇದು ಅಂತ ನೋಡಿದ್ರೆ ಕ್ಲೀನರ್.. ನಗುನಗುತ್ತಾ ಬನ್ನಿ ಮೇಡಂ ಇಲ್ಲಿ ಹೋಗಿ ತುಂಬ ಕ್ಲೀನ್ ಇದೆ ಅಂತ ನಗುನಗುತ್ತಾ ಹೇಳಿದಳು. ಅಷ್ಟೇ ಅಲ್ಲ ತುಂಬಾ ಪರಿಚಿತರಂತೆ ಮಾತಾಡಲು ಸುರು ಮಾಡಿದಳು
"ನಮಗೆ ಕೊಟ್ಟ ಕೆಲಸವನ್ನು ವಂಚನೆ ಇಲ್ಲದೆ ಮಾಡಬೇಕು. ಹಿಂದೆ ಕೆಲಸಕ್ಕೆ ಇದ್ದ ಹೋಟೆಲ್ನಲ್ಲಿ ನನ್ನ ಮೇಲೆ ಹೊಟ್ಟೆ ಕಿಚ್ಚು ಪಟ್ಟು ಮೇನೇಜರಿಗೆ ಮೇಲೆ ದೂರು ಕೊಡುತ್ತಿದ್ದರು' ಎಂದಳು.ಮತ್ತೆ ಕೆಲಸ ಮಾಡುವವರು ಮತ್ತು ಕೆಲಸ ಮಾಡದ ಸೊಂಭೇರಿಗಳನ್ನು ಒಂದೇ ತರ ನೋಡುತ್ತಿದ್ದ ಮಾಲೀಕರಿಂದ ಬೇಸತ್ತು ಮೊದಲಿನ ಕೆಲಸ ಬಿಟ್ಟು ಬಂದುದಾಗಿ ಒಂದೇ ಉಸಿರಿನಲ್ಲಿ ಹೇಳಿದಳು. ಆಕೆ ತನ್ನ ಕೆಲಸವನ್ನು ಯಾವುದೇ ಬೇಸರ ಪಡದೆ ಮಾಡುತ್ತಿದ್ದಳು. ಆಕೆಗೆ ಟಿಪ್ಸ್ ಕೊಡೋಣ ಅಂತ ಅನಿಸಿತಾದರೂ ಪರ್ಸ್ ಕಾರಲ್ಲಿ ಇತ್ತು. ಮತ್ತೆ ಒಂದು ತಿಂಗಳು ಕಳೆದು ಅದೇ ದಾರಿಯಲ್ಲಿ ಹೋಗಬೇಕಾಯಿತು.ಈ ಸಲ ದುಡ್ಡು ಇಟ್ಟುಕೊಂಡು ಹೋಗಿದ್ದೆ. ಅವಳು ಇದ್ದರೆ ಕೊಡೋಣ ಅಂತ. ಪುಣ್ಯಕ್ಕೆ ಅವಳೇ ಅದೇ ನಗು ಮುಖದಿಂದ ಸ್ವಾಗತ.ಬನ್ನಿ ಮೇಡಂ. ಮತ್ತೆ ಹಾಡಿನ ಗುನುಗುನಿಸುವಿಕೆ. ಈ ಸಲ ಏನೂ ಮಾತಾಡಲಿಲ್ಲ. ಆದರೆ ಅವಳ ಮುಖದಲ್ಲಿ ತೃಪ್ತಿ ಇತ್ತು. ಟಿಪ್ಸ್ ಕೊಟ್ಟು ಬಂದೆ.ಯಾಕೆ ಮೇಡಂ ಅಂತ ಕೇಳಿದಳು. ಇರಲಿ ,ಇಟ್ಟುಕೋ ಅಂತ ಹೇಳಿದೆ.ಅವಳ ಮಮುಖದಲ್ಲಿವಿಶೇಷ ಖುಶಿಯೇನೂ ಕಾಣಿಸಲಿಲ್ಲ.
ಮತ್ತೆ ಮುಂದಿನ ತಿಂಗಳೂ ಊರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಯಥಾಪ್ರಕಾರ ವಾಶ್ರೂಮಿನಲ್ಲಿ ಆಕೆಯೇ ಇದ್ದಳು. ತನ್ನ ಸ್ವಚ್ಛತಾ ಕಾರ್ಯವನ್ನು ಚೆನ್ನಾಗಿ ಖುಷಿಯಿಂದಲೇ ಮಾಡುತ್ತಿದ್ದಳು. ಈಕೆಯಲ್ಲಿ ಸ್ಥಿತಪ್ರಜ್ಞತೆಯನ್ನು ಕಂಡೆ. ಈ ತರ ಇರುವವರು ಈಗಿನ ಕಾಲದಲ್ಲಿ ಸಿಗುವುದು ಕಡಿಮೆ.
ನಿನ್ನ ಒಂದು ಫೋಟೋ ತೆಗೆಯಲಾ ಎಂದು ಕೇಳಿದೆ. 'ಯಾಕೆ ಮೇಡಂ 'ಎಂದು ಕೇಳಿದಳು.' ನಿನ್ನ ಬಗ್ಗೆ ಬರೆಯಕ್ಕೆ .ನೀನು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ.,'.ಎಂದೆ. ಅದಕ್ಕೇನಂತೆ ತೆಗೆಯಿರಿ...ಎಂದು ಒಪ್ಪಿಗೆ ಕೊಟ್ಟಳು. ಆದರೆ ಅವಳ ಹೆಸರನ್ನು ಕೇಳಲು ಮರೆತು ಹೋಯಿತು.ನನಗೂ ಸಮಯವಿರಲಿಲ್ಲ ಆಮೇಲೆ locked down. ಊರಿಗೆ ಹೋಗಬೇಕಾಗಿದ್ದರೂ ಹೋಗಲಾಗಲಿಲ್ಲ. ಮುಂದಿನ ಸಲ ಅವಳ ಹೆಸರನ್ನು ಕೇಳಬೇಕೆಂದುಕೊಂಡೆ. ಬಸವೇಶ್ವರರ ವಚನ ಅವಳಿಗೆ ಗೊತ್ತೋ ಇಲ್ವೋ.ಅವರ ಜೀವನ ತತ್ವ 'ಕಾಯಕವೇ ಕೈಲಾಸ' ಎಂಬುದನ್ನು ಅವಳು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾಳೆ. ಅವಳಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ.
ಆದರೆ ಈಗ ಮಯೂರದ ವಾಶ್ರೂಮ್ ಹೊಸದಾಗಿ ಆಗಿದೆ. ಮತ್ತಿನ ಸಲ ಹೋದಾಗ ಆ ಕಾಯಕ ಜೀವಿ ಕಾಣಿಸಲಿಲ್ಲ.
✍️ ಪರಮೇಶ್ವರಿ ಭಟ್