ಕಡ್ಲೆ ಬೆಶಿ ಅಪ್ಪಗ ಎಳ್ಳು ಕರೆಂಚಿತ್ತು
( ಕಡಲೆ ಬಿಸಿಯಾಗುವಷ್ಟರಲ್ಲಿ ಎಳ್ಳು ಕರಟಿತು)
ಇದೊಂದು ಹವ್ಯಕ ಕನ್ನಡ ಭಾಷೆಯಲ್ಲಿ ಪ್ರಚಲಿತವಿರುವ ಗಾದೆ
ಕೆಲವು ದೊಡ್ಡ ದೊಡ್ಡ ಯೋಜನೆಗಳು ಜಾರಿಯಾಗುವಾಗ ಅನೇಕರಿಗೆ ಅನನುಕೂಲವೂ ಆಗುತ್ತದೆ.ಅಮ್ಮನ ಹತ್ರ ಮಾತನಾಡುವಾಗ ಈ ಗಾದೆ ಮಾತನ್ನು ಅಮ್ಮ ಮಾತಿನ ನಡುವೆ ಹೇಳಿದರು
ನಮ್ಮ ಸ್ನೇಹಿತರೊಬ್ಬರ ಕಾರಿಗೆ ಸ್ಕೂಟರ್ ಒಂದು ರಾಂಗ್ ಸೈಡಿನಲ್ಲಿ ಬಂದು ಗುದ್ದಿದೆ
ಅದರೂ ಜನರೆಲ್ಲ ಕಾರಿನ ಒಡೆಯರಾದ ನಮ್ಮ ಸ್ನೆಹಿತರಿಗೆ ಬೈದರಂತೆ.ನಂತರ ಇವರೇ ಸ್ವಲ್ಪ ದುಡ್ಡು ಕೊಟ್ಟು ಅಲ್ಲಿಗೆ ಪ್ರಕರಣಕ್ಕೆ ಮುಕ್ತಾಯ ಹಾಕಿದರಂತೆ
ಸಾಮಾನ್ಯವಾಗಿ ಅಪಘಾತ ನಡೆದಾಗ ದೊಡ್ಡ ಗಾಡಿಯವರನ್ನೇ ತಪ್ಪಿತಸ್ಥರನ್ನಾಗಿ ಕಾಣ್ತಾರೆ.ದೊಡ್ಡ ಗಾಡಿಗಳ ಮೇಲೆ ಒತ್ತಡ ಇಲ್ಲದೇ ಇದ್ದರೆ ನಿರ್ಲಕ್ಷ್ಯದಿಂದ ಸಣ್ಣ ಗಾಡಿಗಳ ಮೇಲೆ ಪಾದಾಚಾರಿಗಳ ಮೇಲೆ ಹರಿಸಿಯಾರು ಎಂಬ ಕಾರಣ ಇರಬಹುದು
ಆದರೆ ಇದರಿಂದಾಗಿ ಕೆಲವೊಮ್ಮೆ ತಪ್ಪೇ ಇಲ್ಲದೇ ಇದ್ದಾಗಲೂ ದೊಡ್ಡ ಗಾಡಿ ಹೊಂದಿದವರು ತೊಂದರೆಗೊಳಗಾಗುತ್ತಾರೆ
ಈ ಬಗ್ಗೆ ಮಾತಾಡುವಾಗ ಅಮ್ಮ ಕಡ್ಲೆ ಬಿಸಿಯಾಗುವಷ್ಟರಲ್ಲಿ ಎಳ್ಳು ಕರಚಿ ಹೋಗುತ್ತದೆ ಎಂಬ ಗಾದೆಯನ್ನು ಹೇಳಿದರು
ಕಡ್ಲೆ ಬೇಳೆಯ ಗಾತ್ರ ಎಳ್ಳಿಗಿಂತ ನೂರು ಪಾಲು ದೊಡ್ಡದು.ಅಲ್ಲದೆ ಸ್ವಾಭಾವಿಕವಾಗಿ ಎಳ್ಳಿಗೆ ಬೇಗನೆ ಬಿಸಿ ತಾಗುತ್ತದೆ. ಬಿಸಿ ತಾಗಿದ ಕೂಡಲೇ ಎಳ್ಳು ಚಟಪಟ ಹುರಿಯುತ್ತದೆ.
ಕಡ್ಲೆ ಬೇಳೆಗೆ ನಿದಾನವಾಗಿ ಬಿಸಿ ತಾಗುತ್ತದೆ.ಅದು ನಿದಾನವಾಗಿ ಹುರಿಯುತ್ತದೆ.ಹಾಗಾಗಿ ಕಡ್ಲೆ ಬೇಳೆ ಜೊತೆಗೆ ಎಳ್ಳನ್ನು ಹುರಿಯಬಾರದು.ಜೊತೆಗೆ ಹುರಿದರೆ ಕಡ್ಲೆ ಬೇಳೆಗೆ ಬಿಸಿ ತಾಗುವಷ್ಟರಲ್ಲಿ ಎಳ್ಳು ಕರಟಿ ಹೋಗಿರುತ್ತದೆ
ಕಾನೂನು ಎಲ್ಲರಿಗೂ ಒಂದೇ..ಆದರೆ ಬಡವರ ಮೇಲೆ ತಕ್ಷಣವೇ ಕಾನೂನು ಕ್ರಮ ಆಗುತ್ತದೆ.ಸಿರಿವಂತರ ಮೇಲೆ ಬಹಳ ತಡವಾಗಿ ಆಗುತ್ತದೆ.ಅಷ್ಟರಲ್ಲಿ ಇವರಿಂದ ಅನ್ಯಾಯಕ್ಕೊಳಗಾದವರು ಬಿಡ ಬಳಲಿ ಬೆಂಡಾಗಿರುತ್ತಾರೆ
ದೊಡ್ಡವರಿಗೆ ಕಾನೂನಿನ ಬಿಸಿ ತಾಗುವಷ್ಟರಲ್ಲಿ ಸಾಮಾನ್ಯ ಜನರು ಎಳ್ಳಿನಂತೆ ಹುರಿದು ಕರಚಿ ಹೋಗಿರುತ್ತಾರೆ ಎಂಬುದು ಈ ಗಾದೆಯ ತಾತ್ಪರ್ಯ
ಇಂದಿನ ಇಂಗ್ಲಿಷ್ ಮಿಶ್ರಿತ ಮಾತಿನಲ್ಲಿ ನಾವು ಇಂತಹ ಅಪರೂಪದ ಗಾದೆಗಳ ಬಳಕೆಯನ್ನೇ ಮರೆಯುತ್ತಿದ್ದೇವೆ.ಇಂತಹ ಗಾದೆಗಳನ್ನು ಸಂಗ್ರಹಿಸಿಮುಂದಿನ ಜನಾಂಗಕ್ಕಾಗಿ ಕಾಪಿಡುವ ಅಗತ್ಯವಿದೆ
0 Followers
0 Following