ಕಿರಿಯೋಳು ಹಿರಿದಿಮ್ಮವ್ವ
ನಮ್ಮ ಸಮಾಜದಲ್ಲಿ ಹೆಣ್ಣಿನ ಶೀಲ, ಪಾತಿವ್ರತ್ಯ ಸಹಗಮನಗಳಿಗೆ ಹೆಚ್ಚು ಮಹತ್ವವಿದೆ. ಆದ್ದರಿಂದಲೇ ಹೆಚ್ಚಿನ ಜನಪದ ಗೀತೆಗಳು ಹೆಣ್ಣಿನ ಈ ಮೇಲಿನ ಗುಣಗಳಿಗೆ ಒತ್ತು ಕೊಟ್ಟು ರಚಿಸಲ್ಪಟ್ಟಿವೆ.
ಜೀಶಂಪ ಸಂಗ್ರಹದ ಜನಪದ ಖ ಂಡಕಾವ್ಯ ದ ನಾಯ ಕಿ ಕಿರಿಯೋಳು ಹಿರಿದಿಮ್ಮವ್ವ ಅಪಾಯ ದ ಸಮಯದಲ್ಲಿ ಸಮಯ ಪ್ರಜ್ಞೆ ತೋರಿ , ಗಂಡನ ಸಾವಿಗೆ ಕಾರಣರಾದ ಧೂರ್ತ ನ ನಾಶ ಮಾಡುವ ಜಾಣತನ ತೋರುತ್ತಾಳೆ.
ಏಳು ಜನ ಅಣ್ಣಂದಿರ ಮುದ್ದಿನ ತಂಗಿ ಹಿರಿದಿಮ್ಮವ್ವ. ಅವಳಿಗೆ ಮದುವೆಯಾಗಿದ್ದರೂ ಇನ್ನೂ ಮೈ ನೆರೆಯದಿದ್ದ ಕಾರಣ ತವರಿನಲ್ಲಿ ಇರುತ್ತಾಳೆ. ಒಂದು ದಿನ ಅವಳು ದನ ಬಿಟ್ಟುಕೊಂಡು ಹೋಗಿ ಮೇಯಿಸುತ್ತ ಆಲದ ಮರದಡಿಯಲ್ಲಿ ಮಲಗಿದ್ದಾಗ, ಮರದ ಮೇಲೊಬ್ಬ ಅನಾಥ ಹುಡುಗ ಇರುವುದನ್ನು ನೋಡುತ್ತಾಳೆ. ನೀನು ಯಾರೆಂದು ಕೇಳಲು ಆತ “ತನಗೆ ತಂದೆ ತಾಯಿ ಇಲ್ಲವೆಂದೂ, ಉಣ್ಣಲು ಹಿಟ್ಟಿಲ್ಲ, ಹೊದೆಯಲು ಬಟ್ಟೆ ಇಲ್ಲ” ಎಂದು ಹೇಳುತ್ತಾನೆ.
ಅವನ ಸ್ಥಿತಿಗೆ ಮರುಗಿ ಅವನನ್ನು ಮನೆಗೆ ಕರೆತಂದು ಹಿಟ್ಟು ಬಟ್ಟೆ ಕೊಟ್ಟು ದನ ಕಾಯುವ ಕೆಲಸ ಕೊಡುತ್ತಾಳೆ ಹಿರಿದಿಮ್ಮವ್ವ. ಆಗ ಅಣ್ಣಂದಿರು
“ಬೆಲ್ಲದಂತೆ ಇದ್ದಾರು ಬೇಡರ ಸಂಗ ಬ್ಯಾಡ
ತುಪ್ಪದಂಗೆ ಇದ್ದಾರು ತುರುಕರ ಸಂಗ ಬ್ಯಾಡ
ಹಾಲಿನಂತೆ ಇದ್ದಾರು ಹಾರುವರ ಸಂಗ ಬ್ಯಾಡ”
ಎಂದು ಬುದ್ಧಿ ಹೇಳುತ್ತಾರೆ.
ಆದರೆ ಹಿರಿದಿಮ್ಮವ್ವ “ಪರದೇಶಿ ಕಂದಯ್ಯ ನಮ್ಮನೇನು ಮಾಡುತ್ತಾನೆ?” ಎಂದು ಹೇಳಿದಾಗ ಅಣ್ಣಂದಿರು ಸುಮ್ಮನಾಗುತ್ತಾರೆ. ಹೀಗೆ ಬೇಡರ ಬೊಮ್ಮೆಲಿಂಗ ಹಿರಿದಿಮ್ಮವ್ವಳ ತವರಿನಲ್ಲಿ ಆಶ್ರಯ ಪಡೆಯುತ್ತಾನೆ. ಮುಂದೆ ಬೇಡರ ಬೊಮ್ಮೆಲಿಂಗ ತಾಯಿಯಂತೆ ಸಲಹಿದ ಹಿರಿದಿಮ್ಮವ್ವಳನ್ನೇ ಮೋಹಿಸುತ್ತಾನೆ.
ತನ್ನ ಕೈವಶ ಮಾಡಿಕೊಳ್ಳಲು ನಾನಾ ಯತ್ನಗಳನ್ನು ಮಾಡುತ್ತಾನೆ. ಆದರೆ ಹಿರಿದಿಮ್ಮವ್ವ ಅವನಿಗೆ ಮರುಳಾಗದೆ ದೃಢಚಿತ್ತದಲ್ಲಿ ಇರುತ್ತಾಳೆ.
ಮುಂದೆ ಹಿರಿದಿಮ್ಮವ್ವ ಮೈ ನೆರೆಯುತ್ತಾಳೆ. ಅಣ್ಣಂದಿರು, ಅತ್ತಿಗೆಯರು ಸಂಭ್ರಮದ ಶಾಸ್ತ್ರ ಮಾಡುತ್ತಾರೆ. ಆಗ ಬೇಡರ ಬೊಮ್ಮೆಲಿಂಗ ಕೊಬ್ಬರಿಯ ತುಂಡನ್ನು ಹಿರಿದಿಮ್ಮವ್ವಳ ಬಳಿಗೆ ಎಸೆಯುವುದರ ಮೂಲಕ ಪ್ರಣಯ ಯಾಚನೆ ಮಾಡುತ್ತಾನೆ. ಆಗ ಆ ಕೊಬ್ಬರಿ ತುಂಡನ್ನು ಹೊರಗೆಸೆಯುವುದರ ಮೂಲಕ ಅದನ್ನು ನಿರಾಕರಿಸುತ್ತಾಳೆ ಹಿರಿದಿಮ್ಮವ್ವ.
ಹಿರಿದಿಮ್ಮವ್ವ ಗಂಡನ ಮನೆಯವರಿಗೆ ಹಿರಿದಿಮ್ಮವ್ವ ದೊಡ್ಡವಳಾಗಿರುವ ವಿಚಾರ ತಿಳಿಸಿ, ಶೋಭನದ ಶಾಸ್ತ್ರ ಮಾಡಿ ಅವಳನ್ನು ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ ಅಣ್ಣಂದಿರು.
ಗಂಡನ ಮನೆಗೆ ಹೋಗುವಾಗ ಹಿರಿದಿಮ್ಮವ್ವ ಹಾಗೂ ಅವಳ ಗಂಡ ಬೇಡವೆಂದರೂ ಹಠ ಮಾಡಿ ಹಿಂಬಾಲಿಸುತ್ತಾನೆ ಬೇಡರ ಬೊಮ್ಮೆಲಿಂಗ.
ಒಂದು ಕಲ್ಲು ಬಾವಿಯ ಹತ್ತಿರ ಬುತ್ತಿ ಉಣ್ಣುವುದಕ್ಕೆಂದು ಮೂವರು ಕುಳಿತುಕೊಳ್ಳುತ್ತಾರೆ. ಹಿರಿದಿಮ್ಮವ್ವ ಪತಿಗೂ, ಬೊಮ್ಮೆಲಿಂಗನಿಗೂ ಬುತ್ತಿಯನ್ನು ಬಿಚ್ಚಿ ಊಟ ಬಡಿಸುತ್ತಾಳೆ.
ಊಟ ಮಾಡುತ್ತಿರುವಾಗ ಹಿರಿದಿಮ್ಮವ್ವಳ ಗಂಡನನ್ನು ಬೊಮ್ಮೆಲಿಂಗ ಚಂದ್ರಾಯುಧದಿಂದ ಒಂದೇ ಏಟಿಗೆ ಕಡಿದು ಹಾಕಿ ಬಿಡುತ್ತಾನೆ.
‘ಒಂದೇ ಏಟಿಗೆ ಕಡಿದ ಒಂದು ತುತ್ತು ಬಾಯಾಗ
ಒಂದು ತುತ್ತು ಕೈಯಾಗೆ ಎರಡೇಯ ತುತ್ತಿಗೆ
ಕಡೆದೇಯ ಬುಟ್ಟನಲ್ಲೊ”
ಹಿರಿದಿಮ್ಮವ್ವಳ ಗಂಡನನ್ನು ಕೊಂದರೆ ಅವಳು ತನ್ನವಳಾಗುತ್ತಾಳೆ ಎಂದು ಬೊಮ್ಮೆಲಿಂಗ ಭಾವಿಸಿ, ಅವಳ ಗಂಡನನ್ನು ಕೊಲ್ಲುತ್ತಾನೆ.
ಈ ಸಂದರ್ಭದಲ್ಲಿ ಹಿರಿಮ್ಮವ್ವ ಸಮಯಪ್ರಜ್ಞೆಯನ್ನು ತೋರುತ್ತಾಳೆ. ಆ ನಿರ್ಜನ ಪ್ರದೇಶದಲ್ಲಿ ಬೊಮ್ಮೆಲಿಂಗನನ್ನ ಎದುರಿಸಿ, ಶೀಲವನ್ನು ಉಳಿಸಿಕೊಳ್ಳುವುದು ಅಸಾಧ್ಯದ ಮಾತು. ಆದ್ದರಿಂದ ಕೂಡಲೇ ಒಂದು ಉಪಾಯ ಮಾಡುತ್ತಾಳೆ. ಅವಳು ಬೊಮ್ಮೆಲಿಂಗನಿಗೆ ಒಲಿದಂತೆ ನಟಿಸುತ್ತಾಳೆ.
“ನೀನೇಯೆ ಗಂಡ ಕಾಣೊ
ನಾನೇಯೆ ಹೆಂಡ್ತಿ ಕಾಣೋ”
ಎಂದು ನುಡಿದು, ಬೊಮ್ಮಲಿಂಗನನ್ನು ನಂಬಿಸಿ ಊಟಕ್ಕೆ ಕೂರಿಸುತ್ತಾಳೆ. ಊಟ ಮಾಡುವಾಗ ಚಂದ್ರಾಯುಧದಿಂದ ಅವನನ್ನು ಕಡಿದು ಹಾಕುತ್ತಾಳೆ.
ನಂತರ ಗಂಡನ ತಲೆಯನ್ನು ಮಡಿಲಲ್ಲಿ ಕಟ್ಟಿಕೊಂಡು ಬೊಮ್ಮೆಲಿಂಗನ ತಲೆಯನ್ನು ಕಾಲಿನಲ್ಲಿ ಒದ್ದುಕೊಂಡು ತವರಿಗೆ ಬರುತ್ತಾಳೆ.
“ಗಂಡನ ತಲೆಯಾನೆ ಮಡಿಲಾಗೆ ಕಟ್ಟಿಕೊಂಡು
ಬೊಮ್ಮೆನ ಲಿಂಗನ ತಲೆಯ ಕಾಲಾಗೆ ಒದ್ದುಕೊಂಡು
ಅತ್ತಲಿಂದ ಬರುತಾಳೆ”
ಮುಂದೆ ಕೊಂಡವೇರುವ ತನ್ನ ನಿರ್ಧಾರವನ್ನು ಅಣ್ಣಂದಿರಿಗೆ ಹೇಳುತ್ತಾಳೆ:
“ಸಿರಿಗಂಧದ ಸೌದೇಯ
ತರಸೀರೋ ಬೇಗದಿಂದ ಕೆಂಡ ಕೊಂಡ ಆಗುತೀನಿ
ಭೂಮಿ ಮ್ಯಾಲೆ ಇರೋದಿಲ್ಲ”
ಎಂಬಲ್ಲಿ ಅವಳ ಅಚಲ ನಿರ್ಧಾರ ವ್ಯಕ್ತವಾಗುತ್ತದೆ.
ಅವಳು ಕೊಂಡವೇರುವ ವಿಧಾನ ಕೂಡ ವಿಶಿಷ್ಟವಾಗಿದೆ.
“ಚಿಕ್ಕೋಳು ಹಿರಿದಿಮ್ಮವ್ವ ಕೆಂಡ ಕೊಂಡವಾಗುತಾಳೆ
ಗಂಡಾನ ತಲೆಯನ್ನು ತಲೆ ಕಡೆ ಮಡಿಕೊಂಡು
ಬೊಮ್ಮೆಲಿಂಗನ ತಲೆಯ ಅವಳು ಕಾಲ ಕಡೆ ಮಡಿಕೊಂಡು
ಚಿಕ್ಕೋಳು ಹಿರಿದಿಮ್ಮವ್ವ ಕೆಂಡ ಕೊಂಡವಾಗುತ್ತಾಳೆ”
ಗಂಡನ ತಲೆಯನ್ನು ತಲೆ ಕಡೆಗೆ ಇಟ್ಟುಕೊಂಡು ಬೊಮ್ಮೆಲಿಂಗನ ತಲೆಯನ್ನು ಕಾಲ ಕಡೆ ಇಟ್ಟುಕೊಂಡು ಅವಳು ಕೆಂಡ ಕೊಂಡವಾಗುತ್ತಾಳೆ. ಬೊಮ್ಮೆಲಿಂಗನ ತಲೆಯನ್ನು ಕಾಲಿನ ಬಳಿ ಇಟ್ಟುಕೊಳ್ಳುವುದರ ಮೂಲಕ ಹಿರಿದಿಮ್ಮವ್ವ ಅವನ ಸ್ಥಾನಮಾನವನ್ನು ಸೂಚಿಸುತ್ತಾಳೆ.
ಹಿರಿದಿಮ್ಮವ್ವಳ ಉದಾರತೆಯೇ ಅವಳಿಗೆ ಮಾರಕವಾಗುವುದಾದರೂ, ಅಪಾಯದ ಸಂದರ್ಭದಲ್ಲಿ ಅವಳು ಎಚ್ಚೆತ್ತುಕೊಂಡು ತನ್ನ ಮಾನವನ್ನು ರಕ್ಷಿಸಿಕೊಳ್ಳುವುದಲ್ಲದೆ, ಗಂಡನನ್ನು ಕೊಂದ ಬೊಮ್ಮೆಲಿಂಗನನ್ನು ಕೊಂದು ದ್ವೇಷ ತೀರಿಸಿಕೊಳ್ಳುವ ಜಾಣತನವನ್ನು ಪ್ರದರ್ಶಿಸುತ್ತಾಳೆ.
ಮುಂದೆ ಭಾರತೀಯ ನಂಬಿಕೆಯಂತೆ ಕೊಂಡವನ್ನೇರಿ ಪತಿಯೊಡನೆ ಸಹಗಮನ ಮಾಡಿ, ಸ್ವರ್ಗದಲ್ಲಿ ಪತಿಯನ್ನು ಸೇರುತ್ತಾಳೆ.
ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ಯಾಟರಾಯನಪುರ ಬೆಂಗಳೂರು
0 Followers
0 Following