ಹಿರಿಯೋಳು ಕಿರಿದಿಮ್ಮವ್ವ ನಂತಹದೇ ಕಥೆಯನ್ನು ಹೊಂದಿರುವ ತುಳು ಪಾಡ್ದನ ಪರತಿ ಮಂಗಣೆ ಪಾಡ್ದನ.
ಪರವ ಮೈಂದನ ಹೆಂಡತಿ ಪರತಿ ಮಂಗಣೆ ಅಪ್ರತಿಮ ಸುಂದರಿ. ಒಂದು ದಿನ ಅವಳು ಹಲಸಿನ ಮರದ ಕಟ್ಟೆಯಲ್ಲಿ ಎಳೆ ಬಿಸಿಲು ಕಾಯಿಸುತ್ತಾ ಕುಳಿತಿರುತ್ತಾಳೆ.
ಅದೇ ಸಮಯದಲ್ಲಿ ಬೊಟ್ಟಿಪ್ಪಾಡಿ ಬಲ್ಲಾಳನು ಗದ್ದೆಗೆ ನೀರು ಕಟ್ಟಲು ಬರುತ್ತಾನೆ. ಅಲ್ಲಿ ಬಿಸಿಲು ಕಾಯಿಸುತ್ತಾ ಕುಳಿತಿರುವ ಅಪ್ರತಿಮ ಸುಂದರಿ ಪರತಿ ಮಂಗಣೆಯನ್ನು ನೋಡಿ, ಅವಳ ಸೌಂದರ್ಯಕ್ಕೆ ಮಾರು ಹೋಗಿ, ಮೋಹ ಪರವಶತೆಯಿಂದ ಬಲ್ಲಾಳನು ಮೂರ್ಛೆ ಹೋಗುತ್ತಾನೆ. ಮೂರ್ಛೆ ಹೋದ ಅವನ ಮೇಲೆ ಕನಿಕರಿಸಿ, ನೀರು ಚಿಮುಕಿಸಿ ಎಚ್ಚರಿಸುತ್ತಾಳೆ ಪರತಿ ಮಂಗಣೆ. ಪರತಿ ಮಂಗಣೆಯ ಮೇಲಿನ ಮೋಹದಿಂದ ಅವಳನ್ನು ರಮಿಸಲು ನಾನಾ ರೀತಿ ಪ್ರಯತ್ನಿಸುತ್ತಾನೆ.
ಎಲೆ ಅಡಿಕೆ ತಿನ್ನಲು ನೀಡುವ ಮೂಲಕ ಬಲ್ಲಾಳ ತನ್ನ ಪ್ರಣಯವನ್ನು ಸೂಚಿಸುತ್ತಾನೆ. ‘ತನ್ನ ಗಂಡ ಕೊಟ್ಟ ಎಲೆ ಅಡಿಕೆಯನ್ನು ಮಾತ್ರ ನಾನು ತಿನ್ನುತ್ತೇನೆ’ ಎಂದು ಹೇಳುವುದರ ಮೂಲಕ ‘ತಾನು ತನ್ನ ಗಂಡನಿಗಲ್ಲದೆ ಬೇರೆ ಯಾರಿಗೂ ಒಲಿಯಲಾರೆ’ ಎಂಬ ತನ್ನ ನಿರ್ಧಾರವನ್ನು ಸೂಚಿಸುತ್ತಾಳೆ ಪರತಿ.
ತನ್ನ ಪ್ರಣಯಕ್ಕೆ ಪರತಿ ಮಂಗಣೆಯ ಗಂಡ ಪರವ ಮೈಂದನೇ ಅಡ್ಡಿ, ಆತನನ್ನು ತೊಲಗಿಸಿದರೆ ತನ್ನ ದಾರಿ ಸುಲಭ’ ಎಂದು ಭಾವಿಸುವ ಬಲ್ಲಾಳ ಪರವ ಮೈಂದನನ್ನು ಕೊಲ್ಲಲು ಉಪಾಯ ಹೂಡುತ್ತಾನೆ.
ಜುಮಾದಿ ಕೋಲವನ್ನು ಕಟ್ಟಲು ಪರವ ಮೈಂದನಿಗೆ ಹೇಳಿ ಕಳುಹಿಸುತ್ತಾನೆ. ಪರತಿ ಮಂಗಣೆಗೆ ಬಲ್ಲಾಳ ತನ್ನಗಂಡನನ್ನು ಕೊಲ್ಲಲು ತಂತ್ರ ಹೂಡಿದ್ದಾನೆ ಎಂದು ತಿಳಿದು ದುಃಖವಾಗುತ್ತದೆ.
ಮುಂದೆ ತಂದೆ-ತಾಯಿಯರನ್ನು ಕಂಡು ಅವರಿಗೆ ನಮಸ್ಕರಿಸಿ ಬಲ್ಲಾಳನಲ್ಲಿಗೆ ಭೂತ ಕಟ್ಟಲು ಹೋಗುತ್ತಾರೆ ಪರವ ಮೈಂದ ಮತ್ತು ಪರತಿ ಮಂಗಣೆ.
ಎಣ್ಣೆ ಬೂಳ್ಯ ತೆಗೆದುಕೊಂಡು ಸ್ನಾನ ಮಾಡಿ, ಮುಖಕ್ಕೆ ಅರದಳ, ಕಾಲಿಗೆ ಗಗ್ಗರ, ಮೈಗೆ ಅಣಿ ಕಟ್ಟಿಕೊಳ್ಳುತ್ತಾನೆ ಪರವ ಮೈಂದ. ಪರತಿ ಮಂಗಣೆ ತೆಂಬರೆ ಬಾರಿಸುತ್ತಾಳೆ.
ಭೂತ ವೇಷ ಹಾಕಿದ ಪರವ ಮೈಂದನು ಕುಣಿಯುತ್ತಾ, ಕುಣಿಯುತ್ತಾ ಬರುವಾಗ ಬಲ್ಲಾಳನು ಗಿಳಿಬಾಗಿಲಿನಲ್ಲಿ ಜೋಡುನಳಿಗೆಯ ಕೋವಿ ಇಟ್ಟು ಗುಂಡು ಹೊಡೆದು ಅವನನ್ನು ಕೊಲ್ಲುತ್ತಾನೆ.
ಆರಂಭದಲ್ಲಿ “ಅಯ್ಯೊಯ್ಯೋ ಬಲ್ಲಾಳರೆ, ನನ್ನ ಗಂಡನನ್ನು ಕೊಂದಿರಾ?” ಎಂದು ಬೊಬ್ಬೆ ಹಾಕುತ್ತಾಳೆ. ಆಗ ಬಲ್ಲಾಳನು “ಪರತಿ ಮಂಗಣೆ, ನಿನ್ನ ಗಂಡನು ಸತ್ತರೂ ನನಗೆ ಇರುವ ಸಾವಿರ ಮುಡಿಯ ಅಕ್ಕಿಯ ಆಸ್ತಿ ನಿನಗೆ ಕೊಡುತ್ತೇನೆ, ಹೆದರಬೇಡ’ ಎನ್ನುತ್ತಾನೆ.
ಆಗ ಎಚ್ಚೆತ್ತುಕೊಳ್ಳುವ ಪರತಿ ತನ್ನ ಶೀಲ ಅಪಾಯದಲ್ಲಿರುವುದನ್ನು ಕಂಡುಕೊಳ್ಳುತ್ತಾಳೆ. ತನ್ನ ಶೀಲರಕ್ಷಣೆಯ ಜೊತೆಗೆ ತನ್ನ ಗಂಡನನ್ನು ಕೊಂದ ಬೊಟ್ಟಿಪ್ಪಾಡಿ ಬಲ್ಲಾಳನ ಮೇಲೆ ಪ್ರತೀಕಾರ ಮಾಡುವುದಕ್ಕಾಗಿ ಸಮಯ ಸ್ಫೂರ್ತಿಯಿಂದ ಬಲ್ಲಾಳನಿಗೆ ಒಲಿದಂತೆ ನಟಿಸುತ್ತಾಳೆ.
ಬಲ್ಲಾಳನಿಗೆ ಒಲಿದಂತೆ ನಟಿಸುವ ಪರತಿ ಮಂಗಣೆ ಗಂಡನ ಶವಸಂಸ್ಕಾರಕ್ಕೆ ಸಿದ್ಧ ಮಾಡುವಂತೆ ಬಲ್ಲಾಳನಿಗೆ ಹೇಳುತ್ತಾಳೆ. ಪರತಿ ಮಂಗಣೆಯ ಮೇಲಿನ ಮೋಹದಿಂದ ಬುದ್ಧಿಶೂನ್ಯನಾದ ಬಲ್ಲಾಳ ಅವಳು ಹೇಳಿದಂತೆ ಕೇಳುತ್ತಾನೆ.
ಬಿಸಿನೀರು ಕಾಯಿಸಿ ಪರವ ಮೈಂದನ ಶವಕ್ಕೆ ಸ್ನಾನ ಮಾಡಿಸುತ್ತಾನೆ. ತಾನು ಉಡುವ ಪಟ್ಟೆವಸ್ತ್ರ, ರುಮಾಲು, ಬೆಳ್ಳಿಕಟ್ಟಿನ ಚೂರಿ, ಬೆಳ್ಳಿಕಟ್ಟಿನ ಬೆತ್ತಗಳನ್ನು ಪರವನ ಕೈಗೆ ಇರಿಸುತ್ತಾನೆ. ಪರತಿ ಮಂಗಣೆಯ ದುಃಖದ ಆಯ್ತಕ್ಕಾಗಿ, ಅವಳು ಹೇಳಿದಂತೆ ಒಳಹೋಗಿ ಬಲ್ಲಾಳ ತನ್ನ ಹೆಂಡತಿಯ ಪಟ್ಟೆಸೀರೆ, ರವಿಕೆ, ಕರಿಮಣಿ, ಮೂಗುತಿ ಸೇರಿದಂತೆ ಎಲ್ಲ ಮೌಲ್ಯಯುತ ವಸ್ತುಗಳನ್ನು ಮಂಗಣೆಗೆ ತಂದುಕೊಡುತ್ತಾನೆ.
ನಂತರ, ‘ಕಾಲಿನಲ್ಲಿ ನೀವು ಹಿಡಿಯಿರಿ ತಲೆಯಲ್ಲಿ ನಾನು ಹಿಡಿಯುತ್ತೇನೆ’ ಎಂದು ಹೇಳುತ್ತಾಳೆ. ಪರವನ ಶವದ ತಲೆಭಾಗವನ್ನು ಪರತಿ ಮಂಗಣೆಯೂ, ಕಾಲಿನ ಭಾಗವನ್ನು ಬಲ್ಲಾಳನು ಹಿಡಿದುಕೊಂಡು ಚಿತೆಗೆ ಮೂರು ಸುತ್ತುಬಂದು ಚಿತೆಯಲ್ಲಿ ಇಡುತ್ತಾರೆ. ಇಲ್ಲಿ ಬಲ್ಲಾಳನಲ್ಲಿ ಗಂಡನ ಶವದ ಕಾಲಿನ ಭಾಗವನ್ನು ಹಿಡಿದುಕೊಳ್ಳಲು ಹೇಳುವುದರ ಮೂಲಕ ಪರತಿ ಮಂಗಣೆ ಅವನ ಸ್ಥಾನಮಾನವನ್ನು ಸೂಚಿಸುತ್ತಾಳೆ.
ಮುಂದೆ ಪರತಿ ಮಂಗಣೆ ‘ಗಂಡನೇ ಇಲ್ಲದ ಮೇಲೆ ತಾನೇಕೆ ಬದುಕಿರಬೇಕು’ ಎಂದು ಚಿತೆಗೆ ಹಾರಿ ಸಾಯುತ್ತಾಳೆ. ಪರತಿ ಮಂಗಣೆಯ ಮೇಲಿನ ಮೋಹದಿಂದ ಎಲ್ಲವನ್ನು ಕಳೆದುಕೊಂಡ ಬಲ್ಲಾಳ, ಕೊನೆಯಲ್ಲಿ ಅವಳೂ ಸಿಕ್ಕದಾದಾಗ ಮತಿಭ್ರಮಣೆಗೊಳ್ಳುತ್ತಾನೆ.
ಚಿತೆಯ ಬೆಂಕಿಯಲ್ಲಿ ಪರತಿ ಮಂಗಣೆಯ ಸೌಂದರ್ಯ ಕಾಣಿಸಿದಂತಾಗಿ ಚಿತೆಗೆ ಹಾರಿ ಬಲ್ಲಾಳ ದುರಂತ ಸಾವನ್ನು ಪಡೆಯುತ್ತಾನೆ.
ಮಾನ ಕಾಪಾಡಿಕೊಳ್ಳುವುದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅನೇಕ ಸ್ತ್ರೀಯರ ಕಥೆಗಳು ಪ್ರಚಲಿತವಿದೆ. ಗಂಡ ಸತ್ತಾಗ ಅವನ ಅಗಲಿಕೆಯನ್ನು ಸಹಿಸಲಾಗದೆ ಸಹಗಮನ ಮಾಡುವ ಸ್ತ್ರೀಯರ ಕುರಿತು ಅನೇಕ ಜನಪದ ಕಾವ್ಯಗಳು ರಚಿಸಲ್ಪಟ್ಟಿವೆ. ಆದರೆ ತಂತ್ರದ ದೃಷ್ಟಿಯಿಂದ ಕಿರಿಯೋಳು ಹಿರಿದಿಮ್ಮವ್ವ ಮತ್ತು ಪರತಿ ಮಂಗಣೆ ಪಾಡ್ದನಗಳು ವಿಶಿಷ್ಟವಾಗಿದೆ. ಹಿರಿದಿಮ್ಮವ್ವ ಹಾಗೂ ಪರತಿ ಮಂಗಣೆ ಇಬ್ಬರೂ ವಿವಾಹಿತರು. ಇಬ್ಬರೂ ಉದಾರಿಗಳು. ಆದ್ದರಿಂದಲೇ ಹಿರಿದಿಮ್ಮವ್ವ ಬೊಮ್ಮೆಲಿಂಗನನ್ನು ಮನೆಗೆ ಕರೆತಂದು, ಅವನು ಉದ್ಧಟತನ ತೋರಿದಾಗಲೂ ಕ್ಷಮಿಸುತ್ತಾಳೆ. ಪರತಿ ಮಂಗಣೆ ಮೂರ್ಛೆ ಹೋದ ಬಲ್ಲಾಳನಿಗೆ ನೀರು ಹಾಕಿ ಎಚ್ಚರಿಸುತ್ತಾಳೆ. ಅಕ್ರಮ ಪ್ರಣಯ ಯಾಚನೆಯನ್ನು ಇಬ್ಬರೂ ತಿರಸ್ಕರಿಸುತ್ತಾರೆ. ಬೊಮ್ಮೆಲಿಂಗ ತನ್ನ ಪ್ರಣಯ ಯಾಚನೆಯ ಸೂಚಕವಾಗಿ ಕೊಬ್ಬರಿ ಬೆಲ್ಲದ ತುಂಡುಗಳನ್ನು ಎಸೆದಾಗ ಅದನ್ನೆತ್ತಿ ಹೊರಗಡೆ ಎಸೆಯುವ ಮೂಲಕ ಅವನ ಪ್ರಣಯವನ್ನು ತಿರಸ್ಕರಿಸುತ್ತಾಳೆ ಹಿರಿದಿಮ್ಮವ್ವ. ಅಂತೆಯೇ ಬಲ್ಲಾಳ ಎಲೆ ಅಡಿಕೆಯನ್ನು ನೀಡುವ ಮೂಲಕ ಪ್ರಣಯವನ್ನು ಸೂಚಿಸುತ್ತಾನೆ. ಆಗ “ತನ್ನ ಗಂಡ ತಂದ ಎಲೆ ಅಡಿಕೆ ಮಾತ್ರ ತಿನ್ನುತ್ತೇನೆ” ಎನ್ನುವ ಮೂಲಕ ಬಲ್ಲಾಳನ ಕೋರಿಕೆಯನ್ನು ನಿರ್ಧಾರಾತ್ಮಕವಾಗಿ ತಿರಸ್ಕರಿಸುತ್ತಾಳೆ ಪರತಿ ಮಂಗಣೆ.
‘ಹಿರಿದಿಮ್ಮವ್ವನ ಗಂಡನನ್ನು ಕೊಂದರೆ ಅವಳು ಒಲಿಯುತ್ತಾಳೆ’ ಎಂದು ಭಾವಿಸುವ ಬೊಮ್ಮೆಲಿಂಗ ಅವರನ್ನು ಹಿಂಬಾಲಿಸುತ್ತಾನೆ. ಅವನ ಮನಸ್ಸಿನ ಕ್ರೂರತನದ ಅರಿವಾಗುವುದಿಲ್ಲ ಹಿರಿದಿಮ್ಮವ್ವಳಿಗೆ. ಪರವ ಮೈಂದನನ್ನು ಕೊಂದರೆ ಪರತಿ ಮಂಗಣೆ ತನಗೆ ಒಲಿದಾಳು ಎಂದು ಭಾವಿಸುವ ಬಲ್ಲಾಳ, ಪರವನನ್ನು ಕೊಲ್ಲುವುದಕ್ಕಾಗಿ ಜುಮಾದಿ ಕೋಲವನ್ನು ಏರ್ಪಡಿಸುತ್ತಾನೆ. ಇಲ್ಲಿ ಪರತಿ ಮಂಗಣೆ ಬಲ್ಲಾಳ ಕುತ್ಸಿತನವನ್ನು ಅರ್ಥ ಮಾಡಿಕೊಳ್ಳುವ ಜಾಣೆ. ಆತ ತನ್ನ ಗಂಡನನ್ನು ಕೊಲ್ಲಲು ಉಪಾಯ ಮಾಡಿದ್ದಾನೆ ಎಂದು ಅರ್ಥ ಮಾಡಿಕೊಳ್ಳುತ್ತಾಳೆ. ಆದರೆ ಆಕೆ ಅಬಲೆ. ಶ್ರೀಮಂತ ಬಲ್ಲಾಳನ್ನು ಎದುರು ಹಾಕಿಕೊಂಡು ಬದುಕುವುದು ಅಸಾಧ್ಯ ಎಂದವಳಿಗೆ ತಿಳಿದಿದೆ. ಆದ್ದರಿಂದಲೆ, ಅವಳು ತಂದೆ-ತಾಯಿಯರನ್ನು ಕಂಡು ನಮಸ್ಕರಿಸಿ ಬರುತ್ತಾಳೆ. ಪರವ ಮೈಂದನನ್ನು ಬಲ್ಲಾಳ ಕೊಂದಾಗ, ಪರತಿ ಮಂಗಣೆ ಆರಂಭದಲ್ಲಿ ದಿಕ್ಕೆಟ್ಟು ಕಂಗಾಲಾಗಿ ಬೊಬ್ಬಿರಿದರೂ ಕೂಡ, ತನ್ನ ಶೀಲ ರಕ್ಷಣೆ ಹಾಗೂ ಗಂಡನನ್ನು ಕೊಂದ ಬಲ್ಲಾಳನಿಗೆ ಪ್ರತೀಕಾರ ಮಾಡುವುದಕ್ಕಾಗಿ ಸಮಯ ಸ್ಫೂರ್ತಿಯಿಂದ ಬಲ್ಲಾಳನಿಗೆ ಒಲಿದಂತೆ ನಟಿಸಿ, ಬಲ್ಲಾಳನ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಚಿತೆಗೆ ಹಾಕಿಸುತ್ತಾಳೆ. ಆ ಮೂಲಕ ಪ್ರತೀಕಾರವನ್ನು ಮಾಡುತ್ತಾಳೆ. ಪರವ ಮೈಂದನ ಶವದ ತಲೆಯ ಭಾಗವನ್ನು ತಾನು ಹಿಡಿದು ಕಾಲುಗಳನ್ನು ಹಿಡಿಯುವಂತೆ ಬಲ್ಲಾಳನಲ್ಲಿ ಹೇಳುವ ಮೂಲಕ ತನ್ನ ಮನಸ್ಸಿನಲ್ಲಿ ಬಲ್ಲಾಳನ ಮೇಲೆ ಇರುವ ತಿರಸ್ಕಾರವನ್ನು ಸೂಚಿಸುತ್ತಾಳೆ. ಇದೇ ರೀತಿ ಹಿರಿದಿಮ್ಮವ್ವ ಕೂಡ ಸಮಯಪ್ರಜ್ಞೆಯನ್ನು ಮೆರೆದು ತನ್ನ ಗಂಡನನ್ನು ಕೊಂದ ಬೊಮ್ಮೆಲಿಂಗನನ್ನು ಕೊಂದು ತನ್ನ ಶೀಲದ ರಕ್ಷಣೆ ಮಾಡಿಕೊಂಡಿದ್ದಲ್ಲದೆ, ಪ್ರತೀಕಾರವನ್ನು ಮಾಡುತ್ತಾಳೆ. ನಂತರ ಗಂಡನ ತಲೆಯನ್ನು ಮಡಿಲಲ್ಲಿ ಕಟ್ಟಿಕೊಂಡು ಬೊಮ್ಮೆಲಿಂಗನ ತಲೆಯನ್ನು ಕಾಲಲ್ಲಿತುಳಿಯುತ್ತಾ ಬಂದು, ಬೊಮ್ಮೆಲಿಂಗನ ಮೇಲಿರುವ ತಿರಸ್ಕಾರವನ್ನು ಸೂಚಿಸುತ್ತಾಳೆ. ನಂತರ ಗಂಡನ ತಲೆಯನ್ನು ತನ್ನ ತಲೆಯ ಭಾಗದಲ್ಲಿ ಹಾಗೂ ಬೊಮ್ಮೆಲಿಂಗನ ತಲೆಯನ್ನು ಕಾಲಿನ ಭಾಗದಲ್ಲಿಟ್ಟುಕೊಂಡು ಕೊಂಡವೇರುತ್ತಾಳೆ. ಇಲ್ಲಿ ಕೂಡ ಬೊಮ್ಮೆಲಿಂಗನ ಸ್ಥಾನ ಸೂಚಿತವಾಗುತ್ತದೆ.
ಹೀಗೆ ಹಿರಿದಿಮ್ಮವ್ವ ಹಾಗೂ ಪರತಿ ಮಂಗಣೆಯರು ಆಪತ್ತಿನ ಸಮಯದಲ್ಲಿ ಸಮಯ ಪ್ರಜ್ಞೆ ಮೆರೆದು ಜನಮಾನಸದಲ್ಲಿ ನೆಲೆನಿಂತು ಕಾವ್ಯ-ಪಾಡ್ದನಗಳ ಮೂಲಕ ಗೌರವಾದರಗಳನ್ನು ಪಡೆಯುತ್ತಾರೆ.
ಪರತಿ ಮಂಗಣೆಯ ಕಥೆ ಆಧರಿತ ಸಿನಿಮಾ ಗಂಗಾಧರ ಕಿರೋಡಿಯನ್ ಅವರ ನೇಮದ ಬೂಳ್ಯ ದ ದೃಶ್ಯ ಒಂದರ ಚಿತ್ರ ಇಲ್ಲಿದೆ
ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ಯಾಟರಾಯನಪುರ ಬೆಂಗಳೂರು
0 Followers
0 Following