ಅಮೇಜಾನ್ ನದಿ – ಪ್ರಕೃತಿಯ ಜೀವಧಾರೆ
ಅಮೇಜಾನ್ ನದಿ : ಈ ಹೆಸರು ಕೇಳಿದ ಕ್ಷಣದಲ್ಲೇ ಕಣ್ಣು ಮುಚ್ಚಿದರೆ ಕಂಡುಬರುವುದು ಹಚ್ಚ ಹಸಿರಿನಿಂದ ಕಂಗೊಳಿಸುವ, ಒಂದು ವಿಶಾಲವಾದ ಕಾಡು, ಅದರ ಮಧ್ಯೆ ಹರಿದುಹೋಗುತ್ತಿರುವ ವಿಶಾಲ ಜಲಪಥ. ಇದು ಕೇವಲ ಜಗತ್ತಿನ 2ನೇ ಅತಿ ಉದ್ದದ ನದಿ ಮಾತ್ರವಲ್ಲ, ಇದು ಪ್ರಕೃತಿಯ ಜೀವನಾಡಿ, ಜಗತ್ತಿನ ಹೃದಯ, ಜೀವವೈವಿಧ್ಯದ ವೈಭವವಲ್ಲದೆ, ಮಾನವ ಸಂಸ್ಕೃತಿಯ ಜಿವಂತ ಸಂಕೇತವೂ ಆಗಿದೆ.
ಮೂಲ ಮತ್ತು ಹರಿವು
ಅಮೇಜಾನ್ ನದಿಯ ಆರಂಭವು ಪೆರು ದೇಶದ ಆಂಡೀಸ್ ಪರ್ವತ ಶ್ರೇಣಿಗಳಲ್ಲಿರುವ ನೇವಾಡೋ ಮಿಸ್ಮಿ ಎಂಬ ಶಿಖರದ ಬಳಿ. ಅಲ್ಲಿಂದ ಈ ನದಿ ತನ್ನ ಪ್ರಯಾಣ ಆರಂಭಿಸಿ ಪೆರು, ಕೊಲಂಬಿಯಾ, ಬ್ರೆಜಿಲ್, ಬೊಲಿವಿಯಾ, ಈಕ್ವಡಾರ್, ವೆನೆಜುವೆಲಾ, ಗಯಾನಾ, ಸುರಿನಾಮ್ ಹಾಗೂ ಫ್ರೆಂಚ್ ಗಯಾನಾದಂತಹ ಒಟ್ಟು ಒಂಬತ್ತು ದೇಶಗಳನ್ನು ಸಂಪರ್ಕಿಸುತ್ತಾ, ಕೊನೆಗೆ ಬ್ರೆಜಿಲ್ನ ಅಟ್ಲಾಂಟಿಕ್ ಮಹಾಸಾಗರದಲ್ಲಿ ತನ್ನ ಜೀವನದ ಅಂತ್ಯವನ್ನು ತಲುಪುತ್ತದೆ. ಈ ನದಿಯ ಉದ್ದ ಸುಮಾರು 6500 ಕಿಲೋಮೀಟರ್ ಆಗಿದ್ದು, ಇದು ಜಗತ್ತಿನ ಅತ್ಯಂತ ವಿಶಾಲ ಜಲವಾಹಿನಿಯಾಗಿದೆ.
ಜಲಧಾರೆ ಮತ್ತು ಉಪನದಿಗಳ ಜಾಲವ್ಯವಸ್ಥೆ
ಅಮೇಜಾನ್ ನದಿಗೆ ಉಪನದಿಗಳಾಗಿ 1,100 ಕ್ಕಿಂತಲೂ ಹೆಚ್ಚು ನದಿಗಳಿವೆ. ಇವುಗಳಲ್ಲಿ ಪ್ರಮುಖವಾದವು ಮಾದೀರಾ, ನೆಗೆರೊ, ಪುರಸ್, ಜುರುವಾ, ಟಾಪಜೋಸ್, ಝಿಂಗು ಇತ್ಯಾದಿ. ಈ ನದಿಯು ವಿಶ್ವದ ಒಟ್ಟು ನದಿಜಲದ 20%ರಷ್ಟು ನೀರನ್ನು ಸಾಗಿಸುತ್ತಿದೆ. ಪ್ರತಿ ಸೆಕೆಂಡಿಗೆ 209,000 ಕ್ಯೂಬಿಕ್ ಮೀಟರ್ ನೀರು ಸಮುದ್ರಕ್ಕೆ ಹರಿಯುತ್ತದೆ ಎಂಬ ಅಂಶವೊಂದೇ ಈ ನದಿಯ ಶಕ್ತಿಯ ಅಗಾಧತೆಯನ್ನು ಸಾರುತ್ತದೆ.
ಅಮೇಜಾನ್ ಕಾಡು – ಜಗತ್ತಿನ ಶ್ವಾಸಕೋಶ
ಈ ನದಿಯ ತೀರದಲ್ಲಿ ಹರಡಿರುವ ಅಮೇಜಾನ್ ಕಾಡುಗಳು ಜಗತ್ತಿನ ಶ್ವಾಸಕೋಶ ಎಂಬ ಹೆಸರು ಪಡೆದುಕೊಂಡಿವೆ. ಇವು ವಿಶ್ವದ 25% ಶುದ್ಧ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಈ ಕಾಡುಗಳಲ್ಲಿ 40,000ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, 1,300ಕ್ಕೂ ಹೆಚ್ಚಿನ ಹಕ್ಕಿಗಳ ಜಾತಿಗಳು, ಸುಮಾರು 430 ಕಶೇರುಕ ಪ್ರಾಣಿಗಳು, 400ಕ್ಕೂ ಹೆಚ್ಚು ಉಭಯಚರ/ಸರ್ಪ ಪ್ರಭೇದಗಳು, ಹಾಗೂ ಲಕ್ಷಾಂತರ ಕೀಟಗಳು ವಾಸವಿದ್ದು ಅಚ್ಚರಿಪಡಬೇಕಾಗಿಲ್ಲ.
ಇಲ್ಲಿ ‘ಪಿರಾನಾ’ ಮೀನುಗಳು ತಮ್ಮ ತೀಕ್ಷ್ಣ ದಪ್ಪ ಹಲ್ಲುಗಳಿಂದ ಹೆಸರಾಗಿದ್ದರೆ, ಈ ನದಿಯಲ್ಲಿ ಇರುವ ಡಾಲ್ಫಿನ್ ಗಳಿಗೂ ವಿಶಿಷ್ಟ ಸ್ಥಾನವಿದೆ. ಈ ಡಾಲ್ಫಿನ್ ಗಳನ್ನು ಸ್ಥಳೀಯ ಜನತೆ ಪವಿತ್ರತೆ ಮತ್ತು ಅದೃಷ್ಟದ ಸಂಕೇತವೆಂದು ನಂಬುತ್ತಾರೆ. ಅಲ್ಲದೆ, ‘ಅನಾಕೋಂಡಾ’ ಎಂಬ ದೈತ್ಯ ಹಾವುಗಳು ಕೂಡ ಅಮೇಜಾನ್ ನದಿಯ ಕತೆಯ ಪಾತ್ರಗಳಾಗಿ ಪರಿಣಮಿಸಿವೆ.
ಮಾನವ ಮತ್ತು ನದಿ – ಸಹಜ ಸಂಬಂಧ
ಅಮೇಜಾನ್ ನದಿಯ ತೀರದಲ್ಲಿ ಸುಮಾರು 400ಕ್ಕೂ ಹೆಚ್ಚು ಪ್ರಾಚೀನ ಬುಡಕಟ್ಟು ಜನಾಂಗಗಳು ವಾಸಿಸುತ್ತಿದ್ದಾರೆ. ಇವರಿಗೆ ನದಿ ದೇವತೆ, ಜೀವರೇಖೆ ಮತ್ತು ಧರ್ಮದ ಪ್ರತೀಕ. ಇವರು ನದಿಯ ನೀರನ್ನು ಮಾತ್ರವಲ್ಲ, ಅದರ ಮೀನು, ಸಸ್ಯ, ಹಣ್ಣು, ಮಣ್ಣನ್ನು ಕೂಡ ಉಪಯೋಗಿಸಿ ತಮ್ಮ ದಿನಚರಿಯನ್ನು ರೂಪಿಸಿಕೊಂಡಿದ್ದಾರೆ. ಇವರ ಸಂಸ್ಕೃತಿಗಳು ಬಾಹ್ಯ ಜಗತ್ತಿನಿಂದ ವಿಭಿನ್ನವಾಗಿದ್ದು, ಬಹುಮಟ್ಟಿಗೆ ಪ್ರಕೃತಿಯೊಂದಿಗೆ ಸಮನ್ವಯದಲ್ಲಿವೆ. ಬಹುಶಃ ಇಂದಿನ ತಂತ್ರಜ್ಞಾನ ಯುಗದಿಂದ ಬಹಳ ದೂರವಿರುವ ಇವರು ನದಿಯ ಬದಲಾವಣೆಗಳನ್ನು ಅರಿತುಕೊಳ್ಳುವಲ್ಲಿ ನಿಪುಣರು.
ಇತಿಹಾಸ ಮತ್ತು ಅನ್ವೇಷಣೆ
ಇತಿಹಾಸದಲ್ಲಿ ಅಮೇಜಾನ್ ನದಿಗೆ ಮೊದಲ ಬಾರಿಗೆ ಹೊರಗಿನ ಜಗತ್ತು ಪರಿಚಯವಾದದ್ದು 1541ರಲ್ಲಿ ಸ್ಪಾನಿಷ್ ಸಾಹಸಿಕ ಫ್ರಾನ್ಸಿಸ್ಕೊ ಒರೆಲ್ಲಾ ಅವರ ಮೂಲಕ. ಅವರು ಈ ನದಿಯ ತೀರದಲ್ಲಿ ಮಹಿಳಾ ಯೋಧರ ಜೊತೆ ನಡೆದ ಹೋರಾಟವನ್ನು ನೆನಪಿಸಿಕೊಂಡು, ಹಳೆಯ ಗ್ರೀಕ್ ಕಥೆಗಳ ‘ಅಮೇಜಾನ್’ ಮಹಿಳಾ ಯೋಧರ ಹೆಸರಿನಿಂದ ಈ ನದಿಗೆ ‘ಅಮೇಜಾನ್’ ಎಂದು ನಾಮಕರಣ ಮಾಡಿದರು. ಈ ಅನ್ವೇಷಣೆ ಬಳಿಕ ಅನೇಕ ಯೂರೋಪಿಯನ್ ಅನ್ವೇಷಕರು ಈ ನದಿಗೆ ಪ್ರವೇಶಿಸಲು ಪ್ರಯತ್ನಿಸಿದರು – ಕೆಲವರು ಜಯಶಾಲಿಗಳಾದರೆ, ಹಲವರು ಇಲ್ಲಿಯ ಪ್ರಕೃತಿ ಶಕ್ತಿಯ ಮುಂದೆ ಶರಣಾದರು.
ವಿಜ್ಞಾನ, ಅಧ್ಯಯನ ಮತ್ತು ಸಂಶೋಧನೆ
ಅಮೇಜಾನ್ ನದಿಯ ಪರಿಸರ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ ಮತ್ತು ಮಾನವ ಶಾಸ್ತ್ರದ ಅಸಂಖ್ಯ ಕ್ಷೇತ್ರಗಳಿಗೆ ಅಧ್ಯಯನದ ಗಣನೀಯ ಕೇಂದ್ರವಾಗಿದೆ. ಇತ್ತೀಚಿನ ಉಪಗ್ರಹಚಿತ್ರಗಳು, ಡ್ರೋನ್ ತಂತ್ರಜ್ಞಾನಗಳು ನದಿಯ ಹರಿವು, ಪ್ರಭಾವ ಹಾಗೂ ಅರಣ್ಯರಚನೆಗಳ ಕುರಿತು ಹೊಸ ಮಾಹಿತಿಗಳನ್ನು ಒದಗಿಸುತ್ತಿವೆ. ಅಮೇಜಾನ್ ಕಾಡಿನಲ್ಲಿ ಪ್ರತಿ ವರ್ಷದ ಸಂಶೋಧನೆಯಲ್ಲಿ ಸಾವಿರಕ್ಕೂ ಹೆಚ್ಚು ಹೊಸ ಪ್ರಭೇದಗಳು ಪತ್ತೆಯಾಗುತ್ತಿವೆ – ಇದು ಪ್ರಕೃತಿಯ ಇನ್ನೂ ರಹಸ್ಯವಾದ ಪುಟಗಳಿರುವುದಕ್ಕೆ ಸಾಕ್ಷಿ.
ಸವಾಲುಗಳು ಮತ್ತು ಭವಿಷ್ಯ
ಇತ್ತೀಚಿನ ದಶಕಗಳಲ್ಲಿ ಅಮೇಜಾನ್ ನದಿಗೆ ಅತಿ ಹೆಚ್ಚು ಅಪಾಯವಾಗಿರುವುದು ಮಾನವನ ದಬ್ಬಾಳಿಕೆಯಿಂದ. ಅರಣ್ಯ ನಾಶ, ಅಕ್ರಮ ಗಿಡಮೂಲಿಕೆ ವ್ಯವಹಾರ, ಕಾನೂನುಬಾಹಿರ ಮೀನುಗಾರಿಕೆ, ನದಿಯ ದಡದಲ್ಲಿ ನಿರ್ಮಾಣಗಳಿಂದ ಕುಸಿತ ಮುಂತಾದವು ಪರಿಸರ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತಿವೆ. ಜಗತ್ತಿನ ಶ್ವಾಸಕೋಶವೆನಿಸಿದ ಈ ಕಾಡುಗಳನ್ನು ಕಾಪಾಡುವುದು ಇಂದಿನ ಮತ್ತು ಮುಂದಿನ ಪೀಳಿಗೆಗಳ ಜವಾಬ್ದಾರಿಯಾಗಿದೆ.
ಅಮೇಜಾನ್ ನದಿ ಎಂಬುದು ಕೇವಲ ನದಿಯಲ್ಲ. ಅದು ಜೀವಂತ ಕಥಾನಕ, ಅದು ಕಾಲಘಟ್ಟದಲ್ಲಿ ಹರಿದು ಬಂದ ನದಿಯ ಸ್ಮೃತಿ, ಅದು ನೈಸರ್ಗಿಕ ವೈಭವ ಮತ್ತು ಮಾನವ ಸಂಬಂಧಗಳ ನವೋದಯ. ನದಿಯ ಹರಿವು ನಮ್ಮ ಹೃದಯದಲ್ಲಿ ಸ್ಪಂದಿಸಬೇಕು, ನದಿಯ ತೀರದಲ್ಲಿ ಉಳಿದಿರುವ ಜೀವಗಳಿಗೆ ನಾವು ಸ್ಪಂದಿಸಬೇಕು. ಅಮೇಜಾನ್ ನದಿಯ ಶ್ರೇಷ್ಠತೆ ಅಂದರೆ ಅದು ಕೇವಲ ಹರಿಯುತ್ತಿರುವ ನೀರಲ್ಲ, ಹರಿಯುತ್ತಿರುವ ಜೀವನದಿ. ನಾವು ಪ್ರಕೃತಿಗೆ ನೀಡುವ ಗೌರವ, ನದಿಗೆ ನೀಡುವ ಪೂಜೆ, ಮತ್ತು ಭವಿಷ್ಯವನ್ನು ಉದ್ದೀಪನಗೊಳಿಸುವ ಸಂರಕ್ಷಣಾ ಬದ್ಧತೆ – ಇದು ನದಿಯ ನಿಜವಾದ ಜಯಗಾಥೆ.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 Followers
0 Following