# ಬಾಳಿಗೊಂದು ಬಂಗಾರದ ಮಾತು
**********************************************
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.... ಎಂದು ದಾಸರು ಹೇಳಿದ್ದಾರೆ.
ಅದರಂತೆ ಭೂಮಿಯ ಮೇಲಿನ ಪ್ರತಿ ಜೀವಿಯ ಜೀವನ ಹೋರಾಟದ ಮೊದಲ ಆದ್ಯತೆ ಆಹಾರಕ್ಕಾಗಿ!
ಆದರೆ ಸೃಷ್ಟಿಯಲ್ಲಿ ಎಲ್ಲವೂ ಪೂರ್ವಜನ್ಮ ಪುಣ್ಯದ ಸುಕೃತದಂತೆ "ಯೋಗಿ ಪಡೆದಿದ್ದು ಯೋಗಿಗೆ; ಭೋಗಿ ಪಡೆದದ್ದು ಭೋಗಿಗೆ" ಎಂಬಂತೆ ನಿಗದಿಯಾಗಿರುತ್ತದೆ.
'ಪಾಲಿಗೆ ಬಂದದ್ದು ಪಂಚಾಮೃತ' ಎಂಬಂತೆ ಸಿಗುವುದನ್ನು ಸ್ವೀಕರಿಸಲೇಬೇಕು. ಹಾಗೆ ಸ್ವೀಕರಿಸುವಾಗ ವಿವೇಚನೆರಹಿತವಾಗಿ ಮಾಡುವ ಕೆಲವು ತಪ್ಪುಕೃತ್ಯಗಳು ಮುಂದಿನ ಜನ್ಮಕ್ಕೆ ಪಾಪದ ಹೊರೆಯಾಗಿ ಕಟ್ಟಿಟ್ಟ ಬುತ್ತಿಯಾಗುತ್ತದೆ.
ಆದರೂ ಆಹಾರ ಪದ್ಧತಿಗಳನ್ನು ನೋಡಿದರೆ ಕೆಲವು ಸಸ್ಯಹಾರಿಗಳು ಕೆಲವು ಮಾಂಸಾಹಾರಿಗಳು ಇನ್ನು ಮಾನವನ ದೃಷ್ಟಿಯಿಂದ ಮಾನವ ಮಿಶ್ರಾಹಾರಿ ಯಾವ ಸಂದರ್ಭದಲ್ಲಿ ಯಾವ ಆಹಾರವನ್ನು ಬೇಕಾದರೂ ಮಾನವ ಸೇವಿಸಬಲ್ಲ ಇತರೆ ಜೀವಿಗಳ ಬದುಕಿನ ಧ್ಯೇಯ ಒಂದೇ ಅದು ಆಹಾರ ಸೇವನೆ ಆದರೆ ಮಾನವನಿಗೆ ಆಹಾರ ಸೇವನೆಯ ಜೊತೆಗೆ ಇನ್ನಿತರ ಆಸೆಗಳು ಸಹ ಅವನ ಲೌಕಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ ಆದ್ದರಿಂದ ನಾಲಿಗೆ ರುಚಿಯಂತೆ ಅವನ ಆಹಾರ ಕ್ರಮಗಳು ಮತ್ತು ಆಹಾರ ಬಳಕೆಯ ವಿಧಾನಗಳು ಸಹ ಪ್ರತ್ಯೇಕವಾಗುತ್ತದೆ ತನಗೆ ಬೇಕಾದನ್ನು ಪಡೆಯಲು ಪ್ರಕೃತಿಯನ್ನು ದಂಡಿಸುವ ವಿಕೃತ ಬುದ್ಧಿ ಮಾನವನದು.
ನಮ್ಮ ಸಂಪ್ರದಾಯದಲ್ಲಿ ಬಂದಿರುವಂತೆ 'ಅನ್ನಂ ಪರಬ್ರಹ್ಮ ಸ್ವರೂಪಂ'. ಅಂತಹ ಅನ್ನ ಆಹಾರಗಳನ್ನು ನಾವು ಎಂದಿಗೂ ವ್ಯರ್ಥ ಮಾಡಬಾರದು ಎಂಬುದು ಸಾರ್ವಜನಿಕರಲ್ಲಿ ನನ್ನ ವಿನಂತಿ. ಏಕೆಂದರೆ ಆಹಾರ ಪೋಲಾಗುತ್ತಿರುವುದು ಇಂದು ಇಡೀ ಜಗತ್ತನ್ನೇ ಕಾಡುತ್ತಿರುವ ಒಂದು ಪ್ರಮುಖ ಸಮಸ್ಯೆ.
ಆಫ್ರಿಕಾ ಖಂಡದ ರೈತರು ಒಂದಿಡೀ ವರ್ಷ ಬೆಳೆಯುವಷ್ಟು ಆಹಾರವನ್ನು ಅಂದರೆ 23 ಕೋಟಿ ಟನ್ ವಿಶ್ವದ ಶ್ರೀಮಂತ ರಾಷ್ಟ್ರಗಳು ಪ್ರತಿ ವರ್ಷ ತಿಪ್ಪೆಗೆ ಎಸೆಯುತ್ತವೆ. ಒಂದು ಅಂಕಿ-ಅಂಶದ ಪ್ರಕಾರ, ಬೆಂಗಳೂರಿನ ಮದುವೆ ಮಂಟಪಗಳಲ್ಲಿ ಪ್ರತಿ ವರ್ಷ 335 ಕೋಟಿ ರೂಪಾಯಿ ಮೌಲ್ಯದ 943 ಟನ್ ಆಹಾರ ವ್ಯರ್ಥವಾಗುತ್ತಿದೆ..!
ಶ್ರೀಮಂತ ದೇಶಗಳಲ್ಲಿ ಆಹಾರ ಪದಾರ್ಥಗಳು ಊಟದ ತಟ್ಟೆಗೆ ಬಂದು ನಂತರ ತಿಪ್ಪೆಗೆ ಹೋಗುತ್ತವೆ. ಹಿಂದುಳಿದ ಹಾಗೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಊಟದ ತಟ್ಟೆಗೆ ಬರುವ ಮೊದಲೇ ಸಾಗಣೆ ಮತ್ತು ಗೋದಾಮುಗಳಲ್ಲಿ ಆಹಾರ ಪದಾರ್ಥಗಳು ಹಾಳಾಗುತ್ತವೆ.
ಪ್ರತಿ ವರ್ಷದ ಆಹಾರ ಉತ್ಪಾದನೆಯ ಮೂರನೆ ಒಂದು ಭಾಗ ಅಂದರೆ 130 ಕೋಟಿ ಟನ್ ಅಹಾರ ನಷ್ಟವಾಗುತ್ತದೆ. ಇನ್ನೊಂದೆಡೆ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಎಳೆ ಮಕ್ಕಳು ಹಸಿವಿನಿಂದ ಸಾಯುತ್ತಿವೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಆಹಾರ ರಕ್ಷಣೆ ಮೂಲಕ ಪರಿಸರ ಸಂರಕ್ಷಣೆ ಉದ್ದೇಶದಿಂದ ಯೋಚಿಸಿ- ಸೇವಿಸಿ-ಉಳಿಸಿ ಘೋಷವಾಕ್ಯದ ಮೂಲಕ ಜಾಗೃತಿ ಮೂಡಿಸುತ್ತಿದೆ.
ನಾವು ಸಭೆ-ಸಮಾರಂಭಗಳಿಗೆ ಹೋದಾಗ ರುಚಿಗೆ ಮನಸೋತು ಆಹಾರವನ್ನು ಹಲವು ಬಾರಿ ಪೂರ್ತಿಯಾಗಿ ತಿನ್ನಲಾಗದೆ ತಟ್ಟೆಯಲ್ಲೇ ಬಿಡುತ್ತೇವೆ. ಅವೆಲ್ಲವೂ ತ್ಯಾಜ್ಯವಾಗಿ ಕಸದ ಗುಂಡಿಗೆ ಸೇರುತ್ತವೆ. ಇದರ ಪರಿಣಾಮವಾಗಿ ತ್ಯಾಜ್ಯದ ಹೆಚ್ಚಳ, ಮರುಬಳಕೆ ಸಂಪನ್ಮೂಲಗಳ ಕೊರತೆ, ಮಾಲಿನ್ಯ, ಜೀವಸಂಕುಲದ ವಿನಾಶ, ಸಮುದ್ರ ಮಟ್ಟ ಹೆಚ್ಚಳ.
ಪ್ರತಿ ವರ್ಷವೂ 130 ಕೋಟಿ ಟನ್ ಆಹಾರವು ಹೀಗೆ ಬಳಸಲಾಗದೆ ವ್ಯರ್ಥವಾಗುತ್ತಿದೆ. ಇದು ಆಫ್ರಿಕಾ ಪ್ರದೇಶದ ಸಹರಾದಲ್ಲಿನ ಆಹಾರ ಉತ್ಪಾದನೆಗೆ ಸಮ. ಇಂಥ ಭಾರೀ ಪ್ರಮಾಣದ ಪೋಲು ಪರಿಸರ ನಾಶದ ಹೆಜ್ಜೆಯಲ್ಲದೆ ಮತ್ತೇನು..? ಈ ನಿಟ್ಟಿನಲ್ಲಿ ನಾವೆಲ್ಲ ಸುಸ್ಥಿರ ಜೀವನ ಶೈಲಿಯನ್ನು ರೂಢಿಸಿ ಕೊಳ್ಳಬೇಕಿದೆ.
ಜೊತೆಗೆ ಆಹಾರದ ತ್ಯಾಜ್ಯವನ್ನು ಕಡಿಮೆ ಮಾಡಲು, ಹಣ ಉಳಿಸಲು, ಆಹಾರ ಉತ್ಪಾದನೆಯ ನಷ್ಟ ಕುಗ್ಗಿಸಲು ಮತ್ತು ಆಹಾರ ಉತ್ಪಾದನೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ನಾವೆಲ್ಲ ಹೋರಾಡುವ ಅಗತ್ಯ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ಆದ್ದರಿಂದ ಪರಿಮಿತ ಸಂಪನ್ಮೂಲವಾದ ಈ ಆಹಾರವನ್ನು ಹಾಳುಗೆಡಿಸಿ ಪೋಲು ಮಾಡುವ ಮೊದಲು ನಾವು ಈ ಅಂಶಗಳನ್ನು ಗಮನಿಸಬೇಕು......
* ಆಹಾರ ರಕ್ಷಣೆಯ ಮೂಲಕ ಪರಿಸರ ರಕ್ಷಣೆಯ ಕೆಲಸವನ್ನು ಮನೆಯಿಂದಲೇ ಆರಂಭಿಸೋಣ.
* ಆಹಾರ ಸೇವಿಸುವುದಕ್ಕೂ ಮುನ್ನ ಒಂದು ಕ್ಷಣ ಯೋಚಿಸಬೇಕು.... ನಮಗೆಷ್ಟು ಬೇಕು ಎನ್ನುವುದು; ಮತ್ತು ಅಷ್ಟನ್ನು ಮಾತ್ರ ಬಡಿಸಿಕೊಳ್ಳಬೇಕು.
* ತಯಾರಿಸಿಟ್ಟ ಆಹಾರವೆಲ್ಲವನ್ನು ತಿಂದು ತ್ಯಾಜ್ಯ ಕಡಿಮೆ ಮಾಡುವುದು ಎಂದರೆ ಅತಿಯಾಗಿ ತಿನ್ನುವುದು ಎಂದರ್ಥವಲ್ಲ; ಅತಿ ಭಕ್ಷಣೆಯೂ ಅಪಾಯ. ಊಟದಲ್ಲಿ ಮತ್ತು ಜೀವನದಲ್ಲಿ ಸಮತೋಲನ ಇರಬೇಕಾಗುತ್ತದೆ. ಆದ್ದರಿಂದಲೇ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಯಾರಿಸಬೇಕು.
* ವ್ಯರ್ಥವಾಗಿ ಆಹಾರವನ್ನು ಎಸೆಯುವುದಿಲ್ಲ ಎಂದು ಇಂದೇ ನಿರ್ಧರಿಸೋಣ.
* ಆಹಾರ ತ್ಯಾಜ್ಯದ ಅಪಾಯಗಳ ಬಗ್ಗೆ ಮಾಹಿತಿ ಪಡೆಯೋಣ.
* ಹೆಚ್ಚಾಗಿ ಸ್ಥಳೀಯ ಲಭ್ಯ ಆಹಾರ ಪದಾರ್ಥಗಳನ್ನೇ ಬಳಸೋಣ.
* ನಿಸರ್ಗದತ್ತವಾಗಿ ಬೆಳೆದ ಆಹಾರವನ್ನೇ ಬಳಸಲು ಯತ್ನಿಸೋಣ.
* ಆಹಾರ ತ್ಯಾಜ್ಯದ ದುಷ್ಟರಿಣಾಮಗಳ ಬಗ್ಗೆ ನೆರೆ-ಹೊರೆಯವರಿಗೆ ತಿಳಿಸೋಣ.
* ಸಾವಯವ ಉತ್ಪನ್ನಗಳನ್ನು ಉತ್ತೇಜಿಸೋಣ. ಇದರಿಂದ ನೆಲ-ಜಲ ವಿಷ ಪೂರಿತವಾಗುವುದನ್ನು ತಗ್ಗಿಸಬಹುದು.
* ಹಲವು ದೇಶಗಳಿಂದ ಆಮದಾದ ಆಹಾರ ಪದಾರ್ಥಗಳನ್ನು ಖರೀದಿಸಿದರೆ ಸಾಗಣೆ ಮಾಲಿನ್ಯ ಹೆಚ್ಚುತ್ತದೆ ಮತ್ತು ಆಹಾರವು ಗ್ರಾಹಕನನ್ನು ತಲುಪುವ ಹೊತ್ತಿಗೇ ದಾಸ್ತಾನು ನಷ್ಟ ಮತ್ತು ಇಲಿಗಳ ಕಾಟದಿಂದ ಶೇ.30ರಷ್ಟು ಪ್ರಮಾಣ ಸೋರಿಕೆಯಾಗಿರುತ್ತದೆ. ಆದ್ದರಿಂದ ಸೋರಿಕೆಯ ಪ್ರಮಾಣ ತಪ್ಪಿಸಲು ಪ್ರಥಮ ಆದ್ಯತೆ ನೀಡಲು ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಾಗಿ ಬಳಸೋಣ.
* ನಮ್ಮ ಆಹಾರ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡೋಣ. ಇದಕ್ಕಾಗಿ ಮನೆಯಲ್ಲಿ ಚಿಕ್ಕ ಇಂಗುಗುಂಡಿ ವ್ಯವಸ್ಥೆ ರೂಪಿಸಿಕೊಳ್ಳೋಣ.( ಸ್ಥಳಾವಕಾಶದ ಲಭ್ಯತೆ ಇದ್ದಾಗ)
* ನಮ್ಮ ಮನೆಯ ಆಹಾರ ತ್ಯಾಜ್ಯದಿಂದಲೇ ಮನೆಗೆ ಬೇಕಾದ ಅಡುಗೆ ಅನಿಲ ಉತ್ಪಾದಿಸಬಹುದು. ಇದಕ್ಕೆ ತಗಲುವ ಖರ್ಚು ಕೂಡ ತುಂಬಾ ಕಡಿಮೆ. ಇಂತಹ ಪ್ರಯತ್ನಗಳಿಗೆ ಮನಸ್ಸು ಮಾಡೋಣ.
* ಅಗತ್ಯಕ್ಕಿಂತ ಹೆಚ್ಚು ಅಹಾರ ಖರೀದಿಸುವುದು ಬೇಡ ಮತ್ತು ಅದನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡುವುದು ಬೇಡ.
* ಹಿತಮಿತವಾಗಿ ಆಹಾರವನ್ನು ಸೇವಿಸೋಣ.
* ಆರೋಗ್ಯದ ಬಗ್ಗೆ ಗಮನ ಹರಿಸಲು ಮುಂದಿನ ಪೀಳಿಗೆಯಾದ ಮಕ್ಕಳಿಗೆ ನಾವು ಮಾದರಿಯಾಗಿರೋಣ.
* ತ್ಯಾಜ್ಯವನ್ನು ಕಡಿಮೆಗೊಳಿಸಲು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮುನ್ನೆಚ್ಚರಿಕೆ ಹಾಗೂ ಮಾರ್ಗದರ್ಶನಗಳನ್ನು ನೀಡೋಣ.
* ಆಹಾರವನ್ನು ಎಂದಿಗೂ ಎಸೆಯುವುದು ಬೇಡ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸೋಣ.
* ದಾಸ್ತಾನು ಕೊಠಡಿಗಳನ್ನು ಮತ್ತು ಪರಿಕರಗಳನ್ನು ಆಗಾಗ ಶುಚಿ ಪಡಿಸಿ ಮತ್ತೆ ಬಳಸೋಣ.
* ಹೋಟೆಲ್ಗಳಲ್ಲಿ ಪ್ರತಿಷ್ಠೆಗಿಂತ ಹೆಚ್ಚಾಗಿ ಅಗತ್ಯತೆಗೆ ಆದ್ಯತೆ ನೀಡೋಣ.
* ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಆಹಾರದ ವಿಷಯದಲ್ಲಿ ಆಡಂಬರಕ್ಕಿಂತ ಹೆಚ್ಚಾಗಿ ಶುಚಿ ರುಚಿ ಅವಶ್ಯಕತೆಗೆ ಗಮನ ನೀಡೋಣ.
* ಕ್ರಿಮಿಕೀಟ, ಹುಳುಹುಪ್ಪಟೆಗಳು, ಇಲಿ ಹೆಗ್ಗಣ, ಪ್ರಾಣಿ ಪಕ್ಷಿಗಳಿಂದ ಆಹಾರ ಕಲುಷಿತವಾಗುವುದನ್ನು ತಡೆಯೋಣ.
* ಶಾಲೆಗಳಲ್ಲಿ ಬಿಸಿ ಊಟ ತಿನ್ನುವಾಗ ಇಲ್ಲವೇ ಮಕ್ಕಳಿಗೆ ಊಟದ ಡಬ್ಬಿ ಕಳುಹಿಸಿಕೊಡುವಾಗ ಶಿಷ್ಟಾಚಾರದ ಬಗ್ಗೆ ಮಾರ್ಗದರ್ಶನ ನೀಡೋಣ.
ಒಟ್ಟಾರೆಯಾಗಿ ಆಹಾರವನ್ನು ಪೋಲು ಮಾಡುವ ಮೊದಲು,ವಿಶ್ವದ ಏಳು ಜನರಲ್ಲಿ ಒಬ್ಬರಿಗೆ ದಿನದಲ್ಲಿ ಒಂದು ಹೊತ್ತು ಆಹಾರ ಇಲ್ಲ ಎಂಬುದನ್ನು ಮೆರೆಯಬೇಡಿ. ಪ್ರತಿ ದಿನ ಐದು ವರ್ಷವನ್ನೂ ದಾಟದ 20,000ಕ್ಕೂ ಅಧಿಕ ಮಕ್ಕಳು ಹಸಿವಿನಿಂದ ದುರಂತ ಸಾವಿಗೀಡಾಗುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು.
ಆದ್ದರಿಂದ ನಮ್ಮ ಆಹಾರ ಪದ್ಧತಿಗಳ ಮೇಲೆ ನಾವು ಬಹಳ ಎಚ್ಚರಿಕೆ ಇಡಬೇಕು ಮತ್ತು ಶ್ರಮಕ್ಕೆ ಗೌರವ ನೀಡುವಂತೆ ಆಹಾರವನ್ನು ಪೋಲಾಗದಂತೆ ಕಾಪಾಡಬೇಕು ಇದನ್ನು ನಮ್ಮ ಮಕ್ಕಳಿಗೂ ಹೇಳಿಕೊಡಬೇಕು ಏಕೆಂದರೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅಲ್ಲವೇ?
🙏ಧನ್ಯವಾದಗಳು🙏
✍️ ಮಂಜುಳಾ ಪ್ರಸಾದ್✍️