ದುಂಡು ಮಲ್ಲಿಗೆಯ ಕಂಪು
ಸಂಜೆ ಟೇರೇಸ್ ಮೇಲೆ ವಾಕ್ ಮಾಡುತ್ತಿದ್ದೆ. ಆಹಾ… ಮಲ್ಲಿಗೆಯ ಘಮ ಆಹ್ಲಾದಕರವಾಗಿ ಬರುತ್ತಿತ್ತು. ದೂರದಲ್ಲಿ ಮಲ್ಲಿಗೆಯ ಮೊಗ್ಗು ಎಂದು ಕೂಗುವುದು ಕೇಳಿಸಿತು.ಮಲ್ಲಿಗೆಯ ಕಂಪು ನನ್ನನ್ನು ಆವರಿಸಿ ನನ್ನ ಮನಸ್ಸು ನೆನಪಿನಂಗಳಕ್ಕೆ ಜಾರಿತು.
ಹೂವುಗಳು ಪ್ರಕೃತಿಯ ವಿಸ್ಮಯ, ಎಲ್ಲಾ ಹೂವುಗಳು ಚೆಂದ, ಅದರಲ್ಲೂ ಮುತ್ತಂತೆ ಕಾಣುವ ಬಿಳಿಯ ದುಂಡು ಮಲ್ಲಿಗೆ, ಆಹಾ…!!!, ಆ ಹೆಸರೇ ಮನಕ್ಕೆ ಹಿತ ಕೊಡುತ್ತದೆ.
ಮಲ್ಲಿಗೆಯ ಹೂವಿನಲ್ಲಿ ಹಲವಾರು ವಿಧಗಳಿವೆ. ಆದರೆ ನನಗೆ ಪ್ರಿಯವಾದದ್ದು ಮೈಸೂರು ಮಲ್ಲಿಗೆ ಎಂದು ಕರೆಸಿಕೊಳ್ಳುವ ದುಂಡು ಮಲ್ಲಿಗೆ ಹಾಗೂ ಜಾಜಿ ಮಲ್ಲಿಗೆ, ಈ ಜಾಜಿ ಮಲ್ಲಿಗೆ ಅದರ ಘಮ ದಿಂದಲೇ ಮನಕ್ಕೆ ಹತ್ತಿರವಾಗಿದೆ. ಆದರೆ ಹೂವು ಬೇಗ ಬಾಡುವ ಕಾರಣ ನನ್ನ ಮನದಲ್ಲಿ ಜಾಜಿ ಗಿಂತ,ದುಂಡು ಮಲ್ಲಿಗೆಯೇ ಅಗ್ರ ಸ್ಥಾನ ಪಡೆದಿದೆ.
ನನಗೆ ಈ ಹೂವು ಮುಡಿಯುವುದಕ್ಕಿಂತ ಅದನ್ನು ಕಟ್ಟುವುದೆಂದರೆ ತುಂಬಾ ಇಷ್ಟ. ಆದರೆ ಗಿಡದಿಂದ ಕೀಳುವುದೆಂದರೆ ಸಂಕಟದಿಂದ ಕಣ್ಣಲ್ಲಿ ನೀರು ಬರುತ್ತಿತ್ತು.
ಬೆಂಗಳೂರಿನಲ್ಲಿ ಆ ತಾಪತ್ರಯ ಇಲ್ಲ ಕಣ್ರೀ….!, ಕಿತ್ತಿರುವ ಮೊಗ್ಗನ್ನು ಗಾಡಿಗಳಲ್ಲಿ ಇಟ್ಟುಕೊಂಡು ಮಾರುತ್ತಾ ಬರುತ್ತಾರೆ. ಹಣ ಕೊಟ್ಟು ಎಷ್ಟು ಬೇಕಿದ್ದರು ತೆಗೆದುಕೊಳ್ಳಬಹುದು.
ಹಬ್ಬಗಳ ಸಮಯದಲ್ಲಿ ಈ ತರಹ ಮೊಗ್ಗು ಬಂದರೆ ನಾನಂತೂ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಎಪ್ರಿಲ್ , ಮೇ ತಿಂಗಳಲ್ಲಿ ಮಾತ್ರ ಮೊಗ್ಗು ತೆಗೆದುಕೊಂಡು ಮಾಲೆ ಕಟ್ಟುತ್ತಿದ್ದೆ.
ಚೈತ್ರ ಮಾಸದಲ್ಲಿ, ವಸಂತ ಋತುವಿನಲ್ಲಿ ಅರಳುವ ದುಂಡು ಮಲ್ಲಿಗೆಗೆ ಘಮ ಜಾಸ್ತಿ ಅನಿಸುತ್ತದೆ. ಈ ಸಮಯದಲ್ಲಿ ಬೇವು, ಮಾವು ಹೊಂಗೆ ಮುಂತಾದ ಮರಗಳಲ್ಲಿ ಹೊಸ ಚಿರುಗು ಬಂದಿರುವುದಕ್ಕೋ ಅಥವಾ
ಪ್ರಕೃತಿ ಉಲ್ಲಾಸವಾಗಿ ಇರುವುದಕ್ಕೋ… ಗೊತ್ತಿಲ್ಲ ಕಣ್ರೀ….ಈ ಸಮಯದಲ್ಲಿ ಮಲ್ಲಿಗೆಯ ಕಂಪು ಮನದಲ್ಲಿ ನವಿರಾದ ಭಾವವನ್ನು ಮೂಡಿಸುತ್ತದೆ. ಮಲ್ಲಿಗೆಯ ಘಮ ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
ಬೆಂಗಳೂರಿನಲ್ಲಿ ಎಲ್ಲಾ ಸಮಯದಲ್ಲೂ ಮಲ್ಲಿಗೆ ಹೂವು ಸಿಗುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮ ಊರಿನಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಾತ್ರ ದುಂಡು ಮಲ್ಲಿಗೆ ಬಿಡುತ್ತಿತ್ತು. ಆ ಸಮಯದಲ್ಲಿ ಶಾಲೆಗೆ ರಜೆ ಇದ್ದು ನಾವುಗಳು ಬಿಡುವಾಗಿ ಪ್ರಕೃತಿಯ ಜೊತೆ ಸಮಯ ಕಳೆಯುತ್ತಿದ್ದೆವು. ದಿನವೂ ಸಂಜೆ ಹೊತ್ತು ಮೊಗ್ಗು ಅರಳುವ ಸಮಯದಲ್ಲಿ ಹೂವನ್ನು ಕಿತ್ತು ಮಾಲೆ ಕಟ್ಟುವುದು ನಮಗೆ ತುಂಬಾ ಖುಷಿಯಾಗಿತ್ತು. ಸ್ವಲ್ಪ ದೊಡ್ಡವಳಾದ ಮೇಲೆ ಹೂವನ್ನು ಗಿಡದಿಂದ ಕೀಳುವುದೆಂದರೆ ತುಂಬಾ ಬೇಸರ ಸಂಕಟ ಆಗುತ್ತಿತ್ತು.
ಬೆಂಗಳೂರಿಗೆ ಬಂದ ಮೇಲೆ ಹೂವು ಕೀಳುವುದನ್ನು ಕಣ್ಣಿಂದ ನೋಡಿ ಸಂಕಟ ಅನುಭವಿಸುವ ಕಷ್ಟವಿರಲಿಲ್ಲ.
ಮೊಗ್ಗು ಮಾರುವವರ ಬಳಿ ಕೊಂಡರಾಯಿತು.
ಗಾಡಿಗಳಲ್ಲಿ ಮಲ್ಲಿಗೆಯ ಮೊಗ್ಗು ಮಾರಲು ತಂದವ ಮಲ್ಲಿಗೆ ಮೊಗ್ಗು ಎಂದು ಕೂಗುವ ಶಬ್ಧ ಕಿವಿಗೆ ಬೀಳುವ ಮೊದಲೇ ಮಲ್ಲಿಗೆಯ ಘಮ ದೂರದಿಂದಲೇ ಪರಿಸರವನ್ನು ಆಕ್ರಮಿಸುತ್ತಿತ್ತು.
ಮಲ್ಲಿಗೆ ಘಮ, ಆ ಸುವಾಸನೆ ಆಹಾ…!!!,ಮನವನ್ನು ಉಲ್ಲಸಿತಗೊಳಿಸಿ ನಮ್ಮನ್ನು ಗೇಟಿನ ಬಳಿ ಮಾರುವವನಿಗಾಗಿ ಕಾಯುತ್ತಾ ನಿಲ್ಲುವಂತೆ ಮಾಡುತ್ತಿತ್ತು.
ಇಲ್ಲಿ ಎಷ್ಟು ಬೇಕಿದ್ದರು ಮೊಗ್ಗು ತೆಗೆದುಕೊಂಡು ಕಟ್ಟಬಹುದು, ಆದರೆ ಆಸೆಯಿಂದ ಮುಡಿಯುವವರು ಇಲ್ಲಾ. ಬಾಲ್ಯದಲ್ಲಿ ನಮ್ಮ ಗಿಡದಲ್ಲಿ ಬಿಟ್ಟಷ್ಟೇ ಹೂವು ಅದನ್ನೇ ಮುಡಿಯಲು ನನಗೆ ನನಗೆ ಅಂತ ಕಿತ್ತಾಡುತ್ತಿದ್ದೆವು. ಅಕ್ಕ ಪಕ್ಕದ ಮನೆಯಲ್ಲಿ ಬಿಟ್ಟ ಹೂವುಗಳನ್ನು ಕೇಳಿ ಕಿತ್ತು ಕೊಂಡು ಬರುತ್ತಿದ್ದೇವು.
ಯಾರು ಜಾಸ್ತಿ ಹೂವು ಕಿತ್ತಿದ್ದು,...ಯಾರು ಬೇಗ ಬೇಗ ಉದ್ದದ ಮಾಲೆ ಕಟ್ಟಿದ್ದು…ನೋಡುವುದೇ ಸಂಭ್ರಮ.
ಅಕ್ಕ ತಂಗಿಯರ ಆ ಒಡನಾಟ ಮಲ್ಲಿಗೆಯ ನೆನಪನ್ನು ಇನ್ನಷ್ಟು ಮಧುರವಾಗಿಸುತ್ತದೆ.
ಈಗ ಮಕ್ಕಳು ಹೂವು ಮುಡಿಯುವುದು ಕಡಿಮೆ, ನನಗಂತೂ ಈಗ ಅರ್ಧ ಗಂಟೆ ಹೂವು ತಲೆಯಲ್ಲಿ ಇದ್ದರೆ ತಲೆನೋವು ಬರುತ್ತದೆ. ಆದರೂ ಮೊಗ್ಗು ಕೊಂಡು ಮಾಲೆ ಕಟ್ಟಿ ದೇವರ ಫೋಟೋಗಳಿಗೆ ಹಾಕಿ ಮನೆಯೆಲ್ಲಾ ಘಮಘಮ ಎನಿಸಿ ಖುಷಿ ಪಡುತ್ತೇನೆ.
ನನ್ನ ಮಗಳು, ಸೊಸೆ ,ಅವರ ಗೆಳತಿಯರು ಯಾರು ಅಷ್ಟಾಗಿ ಹೂವು ಮುಡಿಯುವುದು ಇಷ್ಟ ಪಡುವುದಿಲ್ಲ.
ಈಗ ನನ್ನ ಮೊಮ್ಮಗಳಿಗೆ ಹೂವು ತುಬಾ ಇಷ್ಟ, ಅವಳು ಅವರ ಅಜ್ಜಿಯಂತೆ ಹೂವು ಪ್ರಿಯೆ. ಅವರ ಅಜ್ಜಿಗೆ ದಿನವೂ ಮಲ್ಲಿಗೆ ಹೂವು ತಲೆಯಲ್ಲಿ ಇರಬೇಕು. ಇವಳಿಗೂ ಹಾಗೆ ಮಲ್ಲಿಗೆ ಹೂವು ಎಂದರೆ ತುಂಬಾ ಇಷ್ಟ.
ನನ್ನ ಮೊಮ್ಮಗಳು ಎರಡು ಕಡೆ ಜುಟ್ಟಿಗೆ ಕೂದಲಿಗಿಂತ ಉದ್ದದ ಹೂವು ಮುಡಿದು ಮುಂದುಗಡೆ ಬಿಟ್ಟು ಕೊಂಡು ಓಡಾಡುತ್ತಾಳೆ. ಈ ಸಂಭ್ರಮ ಎಷ್ಟು ದಿನದ್ದೊ ಗೊತ್ತಿಲ್ಲ…
ಈ ವರ್ಷ ಹೂವು ಕಟ್ಟಿ ಮೊಮ್ಮಗಳಿಗೆ ಮುಡಿಸಿ ಖುಷಿ ಪಡಬಹುದು.
ಏನೇ ಹೇಳಿ ಕಿತ್ತು ತಂದ ಮೊಗ್ಗಿಗಿಂತ, ಮಲ್ಲಿಗೆಯ ಪೊದೆಯಂತಹ ಗಿಡ, ಬಳ್ಳಿಯಲ್ಲಿ ಮೊಗ್ಗುಗಳನ್ನು ನೋಡುವುದೇ ಚೆಂದ. ಹುಣ್ಣಿಮೆಯ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ತುಸುವೇ ಅರಳಿದ ಮೊಗ್ಗು, ಆ ಸುವಾಸನೆ, ತಂಪಾದ ಮಂದಾನಿಲ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತದೆ. ಎಪ್ರಿಲ್, ಮೇ ತಿಂಗಳು ಬಂದಾಗ ನನ್ನ ಮನಸ್ಸು ಮಲೆನಾಡಿಗೆ, ನನ್ನ ತವರಿಗೆ ಓಡುತ್ತದೆ.ತವರಿನ ಮಲ್ಲಿಗೆ ಕನಸಿನಲ್ಲೂ ತನ್ನ ಜಾಗವನ್ನು ಆಕ್ರಮಿಸುತ್ತದೆ.
ಹುಣ್ಣಿಮೆಯ ರಾತ್ರಿಯಲಿ ಚಂದಿರನ ನೋಡುತ್ತಾ ಮಲ್ಲಿಗೆಯ ಕಂಪು, ತಂಪಾದ ಮಂದಾನಿಲ ಹೀರುವುದು ಸುಂದರ ಅನುಭವ ಮರೆಯಲಾರದ ಅನುಭವ.
ಮಲ್ಲಿಗೆಯ ಬಗ್ಗೆ ಇನ್ನೊಂದು ನ್ಯಾನೋ ಕಥೆ ಹಾಗೂ ಕವನ
ನ್ಯಾನೋ ಕಥೆ
ಶೀರ್ಷಿಕೆ —ಮಲ್ಲಿಗೆ ಮಾಲೆ
ರಸ್ತೆಯಲ್ಲಿ ಮಲ್ಲಿಗೆ ಮೊಗ್ಗು ಅಂತ ಕೂಗುವುದು ಕೇಳಿದ ಸುನೀತಾ ನೆನಪಿನಂಗಳಕ್ಕೆ ಜಾರಿದಳು. ಹಳ್ಳಿಯಲ್ಲಿ ದೊಡ್ಡ ಹಿತ್ತಲು ತುಂಬಾ ಮಲ್ಲಿಗೆಯ ಹಿಂಡು. ಮುಸ್ಸಂಜೆ ತುಸು ಬಿರಿದ ಮೊಗ್ಗುಗಳ ಕಿತ್ತು ತಂದು ಕಟ್ಟಿ ಮುಡಿಯುವುದು ಎಷ್ಟು ಸೊಗಸು, ಪ್ರತಿಯೊಂದು ಗಿಡದ ಬಳಿ ಮಾತನಾಡುತ್ತಾ ಹಿತವಾದ ತಂಗಾಳಿಯಲ್ಲಿ ಮಲ್ಲಿಗೆಯ ಪರಿಮಳ ಆಸ್ವಾದಿಸುತ್ತಾ ಮೊಗ್ಗು ಕೀಳುವ ಸುಖ ಇಲ್ಲೆಲ್ಲಿ ಸಿಗುವುದು. ಆಹಾ!! ಆ ಹಳ್ಳಿಯ ಬದುಕು ಎಷ್ಟು ಸುಂದರ ಅಂತ.
ಅಲ್ಲಿ ಹಳ್ಳಿಯಲ್ಲಿ ವಾರಿಜ "ಅಯ್ಯೋ," ಈ ಗಿಡ ಗಂಟೆಗಳ ಸುತ್ತ ಓಡಾಡಿ ಮೊಗ್ಗು ಕಿತ್ತು ಮುಡಿಯುವ ಹಣೆಬರಹ ತನ್ನದು. ಅದೇ ನಗರದಲ್ಲಿ ಇದ್ದರೆ ಎಷ್ಟು ಬೇಕಿದ್ದರೂ ದುಡ್ಡು ಕೊಟ್ಟು ಮಲ್ಲಿಗೆಮಾಲೆ ತಂದು ಮುಡಿಯಬಹುದಿತ್ತು, ಯಾವ ತರಹದ ಮಲ್ಲಿಗೆ ಬೇಕೋ ಅದು ಶ್ರಮವಿಲ್ಲದೆ ಸಿಗುತ್ತಿತ್ತು ಅಂತ.ಎಲ್ಲೊ ಸಣ್ಣಗೆ ಹಾಡು ಕೇಳುತ್ತಿತ್ತು.
ಇರುವುದೆಲ್ಲವ ಬಿಟ್ಟು ಇಲ್ಲದುದೆಡೆ ತುಡಿಯುವುದೇ ಜೀವನ. ಹೌದು ನಿಜ ತ ನೇ ಮಾನವರ ಮನವೇ ಹೀಗೆ ಇಲ್ಲದ್ದನ್ನೆ ಬಯಸುವುದು.
ಹನಿಗವನ
ಶೀರ್ಷಿಕೆ. – ಮುಸ್ಸಂಜೆ
ಅಂದು ಪಡುವಣದಿ ಸಂಜೆಗೆಂಪು ಕಂಡಿತ್ತು ತಣ್ಣನೆ ಮಂದಾನಿಲ ಹಿತವಾಗಿ ಬೀಸುತ್ತಿತ್ತು ವನ ಸುಮಗಳೆಲ್ಲವು ಅರಳಿ ಕಂಪು ಚೆಲ್ಲಿತ್ತು ನಲ್ಲನ ಪಿಸು ನುಡಿಯು ಮನಕೆ ಹಿತವೆನಿಸಿತ್ತು
ಇಂದು ಬದುಕಿನಲಿ ಮುಸ್ಸಂಜೆಯು ಆಗುತ್ತಿದೆ ಅಂಗಳದಲ್ಲಿ ಮಲ್ಲಿಗೆ ಅರಳಿ ಕಂಪನ್ನು ಚೆಲ್ಲಿದೆ ಅದೇ ಆಗಸ ಅದೇ ಸಂಜೆಗೆಂಪು ಇಂದು ಇದೆ ಶರೀರ ಸೋತರೆನು ಆ ಉಲ್ಲಾಸ ಮನದಲ್ಲಿದೆ
ಜೊತೆಯಲ್ಲಿ ಬಂದು ಮಲ್ಲಿಗೆಯ ಮೊಗ್ಗು ಕಿತ್ತಿದ್ದು
ಬಳಿ ಕುಳಿತು ಬಾಳೆಯ ನಾರು ಬಿಡಿಸಿ ಕೊಟ್ಟಿದ್ದು
ಕಟ್ಟಿದ ಮೊಗ್ಗಿನ ಮಾಲೆಯನ್ನು ತಲೆಗೆ ಮುಡಿಸಿದ್ದುನಾ
ಹೇಗೆ ಮರೆಯಲಿ ಗೆಳೆಯಾ ಸುಂದರ ಕ್ಷಣವನ್ನು
ಸವಿತಾ ರಮೇಶ
0 Followers
0 Following