" ನಮ್ಮ ನಾಡಿನ ಆಸ್ತಿಯಾದ..ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ "
ಒಂದಾನೊಂದು ಊರಿನಲ್ಲಿ ಕಿರಣ್ ಎಂಬ ಯುವಕನಿದ್ದ, ಅವನಿಗೆ ಪ್ರಾಣಿ ಪಕ್ಷಿಗಳೆಂದರೆ ಅತಿಯಾದ ಪ್ರೀತಿ ಮತ್ತು ಅವುಗಳೆಡೆಗೆ ಕಾಳಜಿ ಜಾಸ್ತಿ. ಏಕೆಂದರೆ, ಚಿಕ್ಕಂದಿನಿಂದಲೂ ಅವನ ಅವನು ಅಜ್ಜನ ಜೊತೆಯಲ್ಲಿ ದಟ್ಟವಾದ ಕಾಡಿನೊಳಕ್ಕೆ ಹಲವು ಜಾತಿಯ ಔಷಧಿ ಸಸ್ಯಗಳನ್ನು ಕಿತ್ತು ತರಲು ಹೋಗುತ್ತಿದ್ದ. ಅವನ ತಾತನು ಒಬ್ಬ ಆಯುರ್ವೇದ ಪಂಡಿತನಾಗಿದ್ದನು. ಹೀಗಾಗಿ ಅವನು ಮತ್ತು ಅವನ ಅಜ್ಜನು ಕಾಡಿಗೆ ಹೋದಾಗ ಅಲ್ಲಲ್ಲಿ ಅಡ್ಡಾಡುತ್ತಿರುವ ಪ್ರಾಣಿಪಕ್ಷಿಗಳನ್ನು ನೋಡುತ್ತಿದ್ದ. ಆದರೆ ಆ ಕ್ರೂರಪ್ರಾಣಿಗಳು ಇವರನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದವು. ಆಗ ಮಂಜು ತಾತ ಇದೇಕೆ ಕಾಡುಪ್ರಾಣಿಗಳು ನಮಗೇನೂ ತೊಂದರೆ ಮಾಡದೇ ಅವುಗಳ ಪಾಡಿಗೆ ಅವು ಹೋಗುತ್ತಿವೆಯಲ್ಲ ಎಂದು ಕೇಳಿದ. ಆಗ ಅಜ್ಜ ನೋಡು ಮೊಮ್ಮಗನೆ ಅವು ಕ್ರೂರಪ್ರಾಣಿಗಳಿರಬಹುದು, ಆದರೆ, ಅವುಗಳು ನಮ್ಮ ಸುತ್ತಮುತ್ತ ಬದುಕುತ್ತಿರುವ ಮನುಷ್ಯರಷ್ಟು ಕ್ರೂರಿಗಳಲ್ಲ. ಮತ್ತು ಕೆಟ್ಟವೂ ಅಲ್ಲ. ಹೇಳಬೇಕೆಂದರೆ ಪ್ರಾಣಿಗಳಿಗಿರುವ ನಿಸ್ವಾರ್ಥ ಮನೋಭಾವ ಕಿಂಚಿತ್ತು ಮನುಷ್ಯನಿಗಿರುವುದಿಲ್ಲ. ಅವುಗಳಿಗೆ ನಾವು ತೊಂದರೆ ಕೊಟ್ಟರೆ ಮಾತ್ರ ಅವುಗಳು ನಮ್ಮ ಮೇಲೆ ದಾಳಿಯಿಸುಗುತ್ತವೆ ಎಂದು ಮೊಮ್ಮಗನಿಗೆ ಹೇಳಿದ. ಅಂದಿನಿಂದ ಕಿರಣ್ ಗೆ ಪ್ರಾಣಿಗಳೆಂದರೆ ತುಂಬಾ ಇಷ್ಟವಾಗುತ್ತಿದ್ದವು.
ಒಂದು ದಿನ ಕಿರಣ್ ಕಾಡಿನ ಹಾದಿಯಲ್ಲಿ ಹಾದು ಹೋಗುವಾಗ ಬೇಟೆಗಾರನ್ಯಾರೋ ಬಿಟ್ಟ ಬಾಣ ತಗುಲಿ ಗಾಯಗೊಂಡು ಒದ್ದಾಡುತ್ತಿದ್ದ ಜಿಂಕೆಯನ್ನು ನೋಡಿ ಮನ ನೊಂದು ಹಾಗೆಯೇ ಜಿಂಕೆಯ ಬಳಿ ಕುಳಿತು ಮೃದುವಾಗಿ ಅದರ ಮೈಸವರುತ್ತ, ತಾನು ತೊಟ್ಟಿದ್ದ ಅಂಗಿಯನ್ನು ಹರಿದು ಗಾಯವಾದ ಜಾಗಕ್ಕೆ ಕಟ್ಟಿ ತನ್ನ ಕೈಲಾದ ಮಟ್ಟಿಗೆ ಶುಶೂಷೆ ಮಾಡಿದಾಗ ಚಂಗನೇ ಎದ್ದು ನಿಂತ ಅವನನ್ನು ಕೃತಜ್ಞತೆಯಿಂದ ನೋಡಿ, ಅವನ ಮುಖವನ್ನೊಮ್ಮೆ ಮುದ್ದಿಸಿ. ಜಿಗಿಯುತ್ತಾ ಓಡುತ್ತ ಹೋಗಿ ಕಾಡಿನ ಗಿಡಮರಗಳ ನಡುವೆ ಮರೆಯಾಯಿತು. ದೇಶದ ಆಸ್ತಿಯಾದ ಪ್ರಾಣಿಪಕ್ಷಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯೆಂದು ಕಿರಣ್ ಗೆ ಅಂದು ಗೊತ್ತಾಯಿತು.
--------------------------------------------------
"ಇಲ್ಲವಾದ ಅಮ್ಮನಿಗೊಂದು ಮಮತೆಯ ಓಲೆ"
ಇಂದಿಗೆ ಸರಿಯಾಗಿ ಐದು ವರ್ಷವಾಗುತ್ತಾ ಬಂದಿದೆ. ಅಮ್ಮಾ ನೀನು ನಮ್ಮನ್ನೆಲ್ಲಾ ಬಿಟ್ಟುಹೋಗಿ..ನೀನೀಗ ಸ್ವರ್ಗದ ಶಾಶ್ವತ ನಿವಾಸಿಯಾಗಿಬಿಟ್ಟೆ..ಇಲ್ಲಿ ಸ್ಬಾರ್ಥ ತುಂಬಿದ ಭೂಮಿಯ ಮೇಲೆ.. ನಿನ್ನ ಮಕ್ಕಳು, ಸೊಸೆಗಳು, ಮೊಮ್ಮಕ್ಕಳು, ಬಂಧು-ಬಳಗದವರು ನೀನಿಲ್ಲದೇ ಅನಾಥರಂತಾಗಿದ್ದಾರೆ. ಅಮ್ಮಾ ಆ ಸತ್ಯವೂ ನಮಗೆ ಗೊತ್ತು… ಎಲ್ಲರೂ ಒಂದಲ್ಲ ಒಂದು ದಿನ ನೀನಿದ್ದಲ್ಲಿಗೆ ಬಂದು ಸ್ವರ್ಗದಲ್ಲೇ ನೆಲೆಸುವವರೇ..ಈ ಬದುಕು ಯಾರಿಗೂ ಶಾಶ್ವತವಲ್ಲ…ಉಸಿರು ಇರುವವರೆಗಷ್ಟೇ ಈ ಭೂಮಿ ಮೇಲೆ ನಮಗೊಂದು ಬೆಲೆ.. ಅದೂ ನಿಜವೂ ಹೌದು. ಏನಿವನು ವೈರಾಗ್ಯದಿಂದ ಮಾತಾಡುತ್ತಿದ್ದಾನಲ್ಲ..ಎಂದು ನಿನಗೆ ಅನ್ನಿಸಬಹುದು..ಅಮ್ಮಾ..ಈ ಬದುಕು..ಮತ್ತು ನಮ್ಮ ಸುತ್ತಮುತ್ತಲಿನ ಜನ ಈ ಜೀವನಕ್ಕಾವಷ್ಟು ಪಾಠ ಕಲಿಸಿಬಿಟ್ಟಿದ್ದಾರೆ..ನೀನಂತೂ ನಯವಿನಯಗಳನ್ನು ಹಾಗೂ ಸನ್ನಡತೆಗಳನ್ನು ಅರೆದು ಕುಡಿಸಿದ್ದೀಯಾ..ಆದರೆ..ಅಮ್ಮಾ…ಈ ಕಾಲಘಟ್ಟದಲ್ಲಿ..ಪ್ರಸ್ತುತ ನಾವುಗಳು ಬದುಕುತ್ತಿರುವ ವೇಗದ ಜಗತ್ತಿನಲ್ಲಿ..ನೀನು ಧಾರೆಯೆರೆದ ನಯವಿನಯಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿವೆ..ಈಗೇನಿದ್ದರೂ..ದೌರ್ಜನ್ಯ..ಮಾಡುತಾ ಅಕ್ರಮ ಹಾದಿಯಲ್ಲಿ ನಡೆಯುವವರಿಗೆ..ಗೌರವಾಥಿತ್ಯಗಳು ಲಭಿಸುತ್ತಿವೆ…
ಇರಲಿ ಬಿಡು..ಅಮ್ಮಾ…ನೀನಂತೂ ಅಲ್ಲಿ ನೆಮ್ಮದಿಯಾಗಿರುವೆ…ಆದರೆ ಅಮ್ಮಾ ನಿನ್ನನ್ನಂತೂ ಬಿಟ್ಟಿರಲಾಗದು ನಮ್ಮಿಂದ. ಅಮ್ಮಾ ಹೇಗೆ ಮರತೇವು.. ನಮ್ಮನ್ನೆಲ್ಲಾ ಈ ಜಗತ್ತಿಗೆ ತಂದು ಪರಿಚಯಿಸಿದ ದೇವತೆ ನೀನು. ಬದುಕಿರುವಾಗ ನಮಗಾಗಿ ಎಷ್ಟೊಂದು ಕಷ್ಟ ಪಟ್ಟೆ..ನಿನ್ನ ಯೌವ್ವನ..ನಿನ್ನ ಆಸೆಗಳು..ಎಲ್ಲವನ್ನೂ ನೀರಿನಲ್ಲಿ ಹರಿಯಬಿಟ್ಟು..ನಮಗಾಗಿ ಅದೆಷ್ಟು ದಿನ ಖಾಲಿ ಹೊಟ್ಟೆಯಲ್ಲಿ ಬರೀ ನೀರು ಕುಡಿದು ಮಲಗಿದೆ. ನಾವು ಬಲ್ಲೆವಮ್ಮಾ.. ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ ನಿದ್ರೆಗೆ ಜಾರಲೆಂದು ನೀನು ಮಲಗಿದಾಗ ನಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾ…ಕನಸು ಕಾಣುತ್ತಾ..ಕಿತ್ತು ತಿನ್ನುವ ಬಡತನವನ್ನು ನೆನೆದು.. ನಿನ್ನ ಕಣ್ಣ ಕೊನೆಯಿಂದ ಜಾರಿದ ಕಣ್ಣೀರ ಹನಿಯನ್ನು ನಮಗೆ ಕಾಣದಂತೆ ಬಚ್ಚಿಟ್ಟೆ…ಅದು ನಮಗೆ ಗೊತ್ತಿಲ್ಲವೆಂದು ಕೊಂಡೆಯಾ..ಅಮ್ಮಾ ಆ ವಿಷಯ ನಮಗೆಲ್ಲರಿಗೂ ಗೊತ್ತು. ಗೊತ್ತಿದ್ದರಿಂದಲೇ ನಾವು ದೊಡ್ಡವರಾಗಿ..ನಮ್ಮ ಬದುಕು ನಾವೇ ಕಟ್ಟಿಕೊಳ್ಳವಷ್ಟು ಆತ್ಮಸ್ಥೈರ್ಯ ಕೊಟ್ಟು..ನಾವುಗಳು ಒಂದೊಂದು ಉದ್ಯೋಗಗಳಿಗೆ ಸೇರಿ…
ಪ್ರಯೋಜಕರಾದಾಗ ನಿನ್ನನ್ನು ಒಂಚೂರು ಕಷ್ಟಪಡಿಸದೆ ಸುಖವಾಗಿ ನೋಡಿಕೊಂಡಿದ್ದು, ಆ ಕಾರಣಕ್ಕೇ ಅಮ್ಮಾ.. ಆದರೂ, ನೀನು ಆಗಾಗ ಅಪ್ಪನ ನೆನೆದು ಕಣ್ಣೀರಾಗುತ್ತಿದ್ದೆ. ಇರಲಿ, ಅಮ್ಮ ನೀನು ನಮಗೆ ತೋರುತ್ತಿದ್ದ ಅಕ್ಕರೆ, ಮಮತೆ, ನಮ್ಮ ಮೇಲೆ ನಿನಗಿದ್ದ ಅಪಾರ ಕಾಳಜಿಯನ್ನು ಮತ್ತು ಒಟ್ಟಾಗಿ ನಿನ್ನ ಜೊತೆಗಿದ್ದ ನೆನಪುಗಳನ್ನು ಎಷ್ಟು ಬರೆದರೂ ಸಾಲದು. ಅಮ್ಮ ಅಲ್ಲಿ ಹೇಗಿರುವೆ. ಸ್ವರ್ಗದಲ್ಲಿ ನಮ್ಮ ಹಳೆಯ ಬಂಧುಗಳೆಲ್ಲಾ ಚೆನ್ನಾಗಿದ್ದಾರೆಯೇ. ನೀನು ನಿನ್ನ ಆರೋಗ್ಯದ ಕಡೆ ಗಮನ ಕೊಡು. ಇಲ್ಲಿರುವ ನಮ್ಮಗಳ ಚಿಂತೆ ಬಿಡು. ಹೇಗೂ ನಿನ್ನ ಆರ್ಶೀವಾದ ಸದಾ ಕಾಲ ನಮ್ಮೊಂದಿಗೇ ಇರುತ್ತದೆ. ಅದು ನಮಗೆ ಗೊತ್ತು. ಅಮ್ಮ ಇನ್ನು ಪತ್ರ ಬರೆಯುವುದನ್ನು ನಿಲ್ಲಿಸುತ್ತೇನೆ. ನಿನ್ನ ಅನುಮತಿ ಇದೆಯೆಂದು ಭಾವಿಸುತ್ತಾ…
ನಿನ್ನ ಮಗ…
-------------------------------------------------
" ನೆನಪುಗಳ ಮಾತು ಮಧುರ "
ಕಾಯುತ್ತಾ ಕುಳಿತಿದ್ದೆ ನಾ..ನಿನಗೆ
ಬೆಳದಿಂಗಳ ರಾತ್ರಿಯಲಿ
ಹುಣ್ಣಿಮೆಚಂದ್ರನ ನೋಡುತ್ತಾ..
ಕಾಯುತ್ತಾ ಕುಳಿತಿದ್ದೆ ನಾ.. ನಿನಗೆ
ನೀಲಾಕಾಶದಲಿ ಮಿನುಗುವ
ತಾರೆಗಳನು ಎಣಿಸುತ್ತಾ.
ಕಾಯುತ್ತಾ ಕುಳಿತಿದ್ದೆ ನಾ.. ನಿನಗೆ
ಬೆಳದಿಂಗಳ ದಾರಿಯಲಿ
ನಿನ್ನ ನೆರಳನು ಹುಡುಕುತ್ತಾ..
ಕಾಯುತ್ತಾ ಕುಳಿತಿದ್ದೆ ನಾ.. ನಿನಗೆ
ಎಲ್ಲೋ ಕಡಲ ತಡಿಯಿಂದ ಬೀಸಿ
ಬರುವ ತಣ್ಣನೆಯ ಗಾಳಿಯನು ಆಹ್ಲಾದಿಸುತ್ತಾ.
ಕಾಯುತ್ತಾ ಕುಳಿತಿದ್ದೆ ನಾ.. ನಿನಗೆ
ಏಕಾಂತದಲಿ..ನಿನ್ನ ಮಡಿಲಲ್ಲಿ ತಲೆಯಿಟ್ಟು
ನಿದ್ರಿಸಿದ.. ಹಾಗೆ ಕನಸುಕಾಣುತ್ತಾ.
ಕಾಯುತ್ತಾ ಕುಳಿತಿದ್ದೆ ನಾ.. ನಿನಗೆ
ಆ ಬೆಳದಿಂಗಳ ರಾತ್ರಿಯ ಸರಿಹೊತ್ತಿನಲಿ
ಮೋಡದ ಮರೆಗೆ ಸರಿದು ಹೋದ
ಚಂದ್ರಮನ ದಿಟ್ಟಿಸುತ್ತಾ.
ನೀ.. ಬರುವೆಯೆಂಬ
ಅಚಲ ನಂಬಿಕೆಯಲ್ಲಿತ್ತು ಈ ಪುಟ್ಟ ಹೃದಯ..
ನಂಬಿಕೆಯನು ಸುಳ್ಳಾಗಿಸಿ ಬಿಟ್ಟೆಯಲ್ಲಾ ಗೆಳತಿ.
ನೀ ಎನಗೆ ಕೊಟ್ಟ ನೋವು,
ಹೃದಯಕ್ಕೆ ಮಾಡಿದ ಗಾಯ,
ನೀ ಮಾಡಿದ ಅವಮಾನ,
ಅಪಮಾನ, ಜೀವನವಿಡೀ
ಕಾಯಿಸಿಬಿಟ್ಟೆಯಲ್ಲಾ ..ಗೆಳತಿ..
ಮರೆತರೂ ಮರೆಯಲಾದಿತೇ..ನಿನ್ನ..
ಆದರೂ ಮರೆತು ಬಿಟ್ಟೆನು.. ನಾನು ನಿನ್ನನ್ನು..
ಎಂದೆನ್ನ ಮನಸಿಗೆ ಅನಿಸಿದಾಗ.... ನಿಟ್ಟುಸಿರಾಗುವೆನು... ಏಕೆಂದರೆ... "ನೆನಪುಗಳ ಮಾತು ಮಧುರ"
--------------------------------------------------
" ಅರಳಿದ ಹೂವಲಿ ದುಂಬಿಯ ಝೇಂಕಾರ ಇನಿಯನ ಎದೆಯಲಿ ಪ್ರೀತಿಯ ಸಂಚಾರ "
ನೀನೆಷ್ಟು ಸೊಗಸುಗಾತಿಯೇ ನಯ ಗೆಳತಿ ನೀನಾಗಿರಬಹುದೇನೋ ಪಕೃತಿಮಾತೆಯ ಒಡತಿ ರವಿ ಕಿರಣಗಳು ನಿನ್ನದೆ ಚೆಲುವಿಗೆ ಮುತ್ತಿಕ್ಕಿ ನಿನ್ನದೆ ಸೌಂದರ್ಯಕೆ ನಸುನಕ್ಕಿದೆ ಬೆಳ್ಳಕ್ಕಿ ॥
ನೋಡಲ್ಲಿ ಗೆಳತಿ ಹೂದಳದಿ ಪರಿಮಳದ ಸಡಗರ ನಿನ್ನಂತೆ ಅರಳಿದ ಹೂವಲಿ ದುಂಬಿಯ ಝೇಂಕಾರ ನಿನ್ನಿಯನ ಎದೆಯಲಿ ಪ್ರೀತಿ ಪತಂಗದ ಸಂಚಾರ ತನುಮನದಲಿ ನಡೆದಿದೆ ರೋಮಾಂಚನ ವಿಹಾರ ||
ಸಾಯಂಕಾಲದಿ ನಿನ್ನೂರಿನ ಗಿರಿಶಿಖರದ ತಪ್ಪಲಲಿ ಪಡುವಣದಿ ದಿನಕರನು ವಿಶ್ರಮಿಸುವ ಘಳಿಗೆಯಲಿ ಹಚ್ಚನೆಯ ಹಸಿರಿನ ಹುಲ್ಲು ಹಾಸಿನ ಮೆತ್ತನೆಯಲಿ ನಿನ್ನಾಲಿಂಗನದ ಅಪ್ಪುಗೆಗೆ ಕಾಯುತ್ತಿದ್ದೆ ಕಾತುರದಲಿ |
ಸಂಜೆಯ ಸೊಬಗಿನ ಖನಿಯಂತೆ ಬರುವವಳು ನೀನು..
ನಿನ್ನಂದವ ಕಣ್ಣುಂಬಿಕೊಳ್ಳಲು ನಿರೀಕ್ಷಿಸುವವನು ನಾನು
ಕೆಂಪೇರಿದ ಕಾರ್ಮೋಡಗಳೆ ನಿನಗೆ ಶರಣೆಂದಿದ್ದವು
ರಂಗೇರಿದ ನನ್ನ ಮನದಲ್ಲಿ ಪ್ರೀತಿಯ ಅಲೆಯೆದ್ದಿದ್ದವು ।
ಜೀವಮಾನವಿಡೀ ನಿನಗಾಗಿ ಕಾಯುತ್ತಲಿರುವೆ ಬದುಕೆಲ್ಲಾ ನಿನ್ನದೇ ಸಾಂಗತ್ಯ ಬಯಸುತ್ತಲಿರುವೆ ಬಂದುಬಿಡು ಗೆಳತಿ ಈ ಸಂಜೆಯ ಸೊಬಗ ನೋಡಲು ಬಿಗಿದಪ್ಪಿಬಿಡು ಗೆಳತಿ ನನ್ನ ಹೃದಯ ಹಗುರಾಗಲು ||
ರಚನೆ :- ಜಿಂಕೆ ಮಂಜುನಾಥ್,
ಕಲ್ಲಮಂಜಲಿ
ಕೋಲಾರ ತಾಲ್ಲೂಕು