ಕೊಳ್ಳೇಗಾಲದಲ್ಲೂ ನಿಂಬೆಹಣ್ಣಿಂದ ಶರಬತ್ತೇ ಮಾಡೋದು ವಿನಃ ಬೇರೇನಲ್ಲ !

ಕೊಳ್ಳೇಗಾಲ ಎಂದರೆ ಬೆಂಗ್ಳೂರ್, ಮೈಸೂರಲ್ಲೂ ಹೆದರುತ್ತಾರೆ ಎಂಬ ಮಾತು ಶೋಭೆ ತರುವಂಥದ್ದಲ್ಲ



image

ಕೊಳ್ಳೇಗಾಲ ಅಂದಾಕ್ಷಣ ಹೆಚ್ಚಿನವರು ಮಾಟಮಂತ್ರದ ಜಾಗ ಎಂದು ಭಾವಿಸುತ್ತಾರೆ. ಹಿಂದಿನ ಕತೆ ನಮಗೆ ಗೊತ್ತಿಲ್ಲ, ಅದು ಈಗ ಬೇಡ. ಈಗಿನ ಕೊಳ್ಳೇಗಾಲ ಏನೆಂದು ತಿಳಿಸುವುದು ಇಲ್ಲಿನ ನಿವಾಸಿಯಾದ ನನ್ನ ಮೇಲೆ ಜವಾಬ್ದಾರಿಯೂ ಇದೆ, ಕರ್ತವ್ಯ ಕೂಡ ಹೌದು.

ಕೊಳ್ಳೇಗಾಲವನ್ನು ಇಡೀ ರಾಜ್ಯ ಅಷ್ಟೇ ಅಲ್ಲದೇ ಗಡಿ ಹಂಚಿಕೊಂಡಿರುವ ಹೊರ ರಾಜ್ಯಗಳಲ್ಲೂ ಮಾಟಮಂತ್ರದ ಕಾರಣಕ್ಕೆ ಜ್ಞಾಪಿಸಿಕೊಳ್ಳಲಾಗುತ್ತದೆ. ಇದು ಇಲ್ಲಿನ ಜನರಿಗೆ ಎಸಗುವ ಅಪಮಾನವಲ್ಲದೇ ಬೇರೆನಲ್ಲ. ಕೊಳ್ಳೇಗಾಲವನ್ನೂ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಮಾಟಮಂತ್ರ ನಡೆಯುವ ಊರು ಎಂಬಂತೆ ಹಲವಾರು ಮಂದಿ ಬಿಂಬಿಸುತ್ತಿರುವುದುಂಟು.‌ ಇದು ನೂರು ಪ್ರತಿಶತ ನಿಜವಲ್ಲ.

ಕೊಳ್ಳೇಗಾಲವು ಸರ್ವಜನಾಂಗಗಳ ಭಾವೈಕ್ಯತಾ ನಗರಿ, ಕೊಳ್ಳೇಗಾಲ ರೇಷ್ಮೆಯ ತವರು, ವಾಣಿಜ್ಯೋದ್ಯಮಕ್ಕೆ ಪ್ರಸಿದ್ಧ, ಕೊಳ್ಳೇಗಾಲ ಜವಳಿಗೆ ಕಳೆ, ನದಿವನಗಳ ಸೆಲೆ, ಸಿದ್ಧ ಪುರುಷರ ನೆಲೆ, ಜನಪದ ನಾಡು, ಕಲೆಗಳ ಸಂಕೇತ, ನಾಡಿಗೆ ರಾಜಕುಮಾರರ ಕೊಟ್ಟೂರು ಹೇಳಲು ಇನ್ನೂ ಸಾಕಷ್ಟಿದೆ. ಇಷ್ಟೆಲ್ಲಾ ಇದ್ದು ಈಗಲೂ ಕೇವಲ ಮಾಟಮಂತ್ರಕ್ಕೆ ಕೊಳ್ಳೇಗಾಲವನ್ನು ಗುರುತಿಸುವುದು ನಿಜಕ್ಕೂ ಇಲ್ಲಿನ ದುರ್ಗತಿಗೆ ಹಿಡಿದ ಕನ್ನಡಿಯಂತೆ.

ಕೊಳ್ಳೇಗಾಲ ಮಾಟಮಂತ್ರದ ಸ್ಥಳವಲ್ಲ, ನಿಂಬೆಹಣ್ಣನ್ನು ಇಲ್ಲೂ ಸಹ ಶರಬತ್ತು ಮಾಡಲಷ್ಟೇ ಬಳಸಲಾಗುತ್ತದೆ ಎಂಬುದನ್ನು ನಿರೂಪಿಸುವ ನಿಟ್ಟಿನಲ್ಲಿ ಇಲ್ಲಿನ ಸಾಹಿತಿಗಳು, ಹೋರಾಟಗಾರರು, ಮುಖಂಡರು, ಜನಪ್ರತಿನಿಧಿಗಳು ಮೇಲಾಗಿ ಇಲ್ಲಿನ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯು ಸಹ ಧ್ವನಿ ಎತ್ತುವುದು ಅನಿವಾರ್ಯವಾಗಿದೆ. ಈ ಸಲುವಾಗಿ ಸಂಘಟಕರಾಗದಿದ್ದರೆ ನಮ್ಮ‌ ತಾತ ಮುತ್ತಾತಂದಿರ‌ ಕಾಲದಿಂದ ಕೇಳಿಕೊಂಡು ಬಂದಿರುವ ಅದೇ ಹೆಸರು ನಮ್ಮ ಮುಂದಿನ ಪೀಳಿಗೆಗಳ ಮೇಲೂ ಅಂಟಿಕೊಂಡು ಮುಂದುವರೆಯುತ್ತದೆ.

ಕೊಳ್ಳೇಗಾಲವನ್ನು ಮಾಟದ ಊರು ಎಂದು ಇಲ್ಲಿ ಹುಟ್ಟಿ ಬೆಳದ ಒಬ್ಬೇ ಒಬ್ಬನೂ ಹೇಳುವುದಿಲ್ಲ. ಹೇಳುವವರೆಲ್ಲರೂ ಹೊರಗಿನವರು. ಇದು ಯಾವುದೋ‌ ಕಾಲದಲ್ಲಿ ಹರಡಿದ್ದ ವಿಚಾರ. ಆದರೆ ಈಗಲೂ ಪ್ರಸ್ತುತ ಎಂಬಂತೇ ಕಾಣುವುದು ಮೂರ್ಖತನ. ಈ ಸ್ಥಳ ಮಾಟಮಂತ್ರದ ಮುಷ್ಠಿಯಿಂದ ಹೊರಬಂದು ಸಾಕಷ್ಟು ಕಾಲ ಸಂದಿದೆ. ಈ ಬಗ್ಗೆ ಸ್ಥಳೀಯರಲ್ಲೇ ಯಾವ ಚರ್ಚೆಗಳೂ ಇಲ್ಲ, ಅರ್ಥೈಸಿಕೊಳ್ಳುವವರಿಗೆ ಇಷ್ಟೇ ಸಾಕು.

ಕೊಳ್ಳೇಗಾಲ ಮಾಟಮಂತ್ರದ ಊರು ಎಂದು ನಾಲಗೆ ಹೊರಳಿಸುವ ಯಾರೇ ಆಗಲಿ ಇಲ್ಲಿಗೊಮ್ಮೆ ಬಂದು ಸುತ್ತಾಡಿ, ಇಲ್ಲಿನ ಜನರ ಜತೆ ಬೆರೆಯಿರಿ, ಇಲ್ಲಿನ ವಾತಾವರಣ ಸೂಕ್ಷ್ಮವಾಗಿ ಗಮನಿಸಿ. ಎಷ್ಟು ದಿನ ಇದ್ದು ನೋಡಿದರೂ ನಿಮ್ಮ ಆಲೋಚನೆಗೆ ತಕ್ಕುದಾದ ಒಂದೇ ಒಂದು ನೈಜ ಅಥವಾ ವಾಸ್ತವ ನಿದರ್ಶನಗಳು ಇಲ್ಲಿ ನಿಮಗೆ ಸಿಗುವುದೇ ಇಲ್ಲ. ಇಲ್ಲಿಗೆ ಅಂಟಿರುವ ಮಾಟಮಂತ್ರದ ಬಗೆಗಿನ ಬಕ್ವಾಸ್‌ಗಳ ಕುರಿತು ಸಾಸಿವೆ ಕಾಳಷ್ಟು ಗೊತ್ತೇ ಇಲ್ಲದ ಸ್ಥಳೀಯರೇ ಆದ ಸಾವಿರಾರು ಜನರು ಇಲ್ಲೇ ಸಿಗುತ್ತಾರೆ. ಇಲ್ಲಿ ಮಾಟಮಂತ್ರ ಇತ್ತಾ ? ಹೌದಾ ? ಎನ್ನುವ ಹೊಸ ಪೀಳಿಗೆ ಇಲ್ಲಿ ಹುಟ್ಟಿ ಅದಾಗಲೇ ಸಾಕಷ್ಟು ಕಾಲವಾಗಿದೆ. ಅಂಥದ್ರಲ್ಲಿ ಹೊರಗಿನ ಜನರು ಈ ಯುಗದ ಒಂದು ಪವಿತ್ರ ನೆಲವನ್ನು ಈಗಲೂ ಕೆಟ್ಟ ರೀತಿಯಲ್ಲಿ ಬಿಂಬಿಸುವುದು, ಅಣಕಿಸುವುದು, ಛೇಡಿಸುವುದು ಎಷ್ಟು ಸರಿ ಎಂಬುದನ್ನು ಅವರೇ ಹೇಳಬೇಕು.

ಇತರ ನಗರಗಳಂತೆ ಇದೂ ಸಹ ಒಂದು ಉತ್ತಮ ನಗರ. ರಾಜ್ಯದ ಯಾವುದೇ ತಾಲ್ಲೂಕು ಮಟ್ಟದ ಕೇಂದ್ರ ಪ್ರದೇಶಗಳಿಗೂ ಕಡಿಮೆ ಇಲ್ಲದಂತೆ ಕೊಳ್ಳೇಗಾಲ ಬೆಳೆದು ನಿಂತಿದೆ. ವರ್ಷದಿಂದ‌ ವರ್ಷಕ್ಕೆ ಇಲ್ಲಿನ ಸಾಕ್ಷರತೆ ಪ್ರಮಾಣ ಧನಾತ್ಮಕ ಪ್ರಗತಿ ಕಾಣುತ್ತಿದೆ. ಬೇರೆ ನಗರಗಳಂತೆ ಇಲ್ಲಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಕಷ್ಟು ಮಂದಿ ದೇಶವಿದೇಶಗಳಲ್ಲಿ, ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಇಲ್ಲಿನ ಶಾಲಾ ಕಾಲೇಜುಗಳು ಇತ್ತೀಚಿನ ವರ್ಷಗಳಲ್ಲಂತೂ ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದು ಇಲ್ಲಿನ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆಯಾಗುತ್ತಿದೆ.

ಮಾಟ ಗೀಟವೆಲ್ಲಾ ಹಳೇ ಕತೆ. ಈಗೇನಿದ್ದರೂ ಇದು ಬದುಕು ಕಟ್ಟಿಕೊಳ್ಳ ಬಯಸುವವರ ಹೆಮ್ಮೆಯ ನಗರ. ಉನ್ನತಿಗೆ ಹೆಸರು ವಾಸಿಯಾಗಬೇಕಿರುವ ಒಂದೂರನ್ನು ಮತ್ತೆ ಮತ್ತೆ ಹಿಂದಕ್ಕೆ ತಳ್ಳುವ ಮಾತುಗಳನ್ನಾಡಿ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಇದಕ್ಕೆ ನಮ್ಮ‌ ಜನರೂ ಆಸ್ಪದ ಕೊಡಬಾರದು.

ಕೊಳ್ಳೇಗಾಲದವರೆಂದರೆ ಮೈಸೂರು, ಬೆಂಗಳೂರಿನಂಥ ದೊಡ್ಡ ದೊಡ್ಡ ಊರಿನವರು ಹೆದರುತ್ತಾರೆ ಎಂಬ ಮಾತಿದೆ. ಖಂಡಿತಾ ಇದು ಕೊಳ್ಳೇಗಾಲಕ್ಕೆ ಶೋಭೆ ತರುವಂಥ ಮಾತಲ್ಲ. ಆ ರೀತಿಯ ಯಾವುದೇ ರಹಸ್ಯವಾಗಲಿ, ಯಾವುದೇ ತಂತ್ರ‌ ಮಂತ್ರಗಳು ಇಲ್ಲಿಲ್ಲ. ಒಂದು ಊರು ಎಂದರೆ ಅನ್ಯ ಊರುಗಳಲ್ಲಿ ಗೌರವ ಭಾವನೆ ಇರಬೇಕೆ ವಿನಃ ಭಯ, ದ್ವೇಷ ಅಲ್ಲ.

ಕೊಳ್ಳೇಗಾಲ ಎಂದಿಗೂ ಸರ್ವಜನರೂ ಶಾಂತಿ, ಸಹಬಾಳ್ವೆಯಿಂದ ಬದುಕುವ ಪುಣ್ಯಭೂಮಿ. ಭಕ್ತಿ ಭಾವಗಳ ಶುದ್ಧ ಭೂಮಿ. ಇದಕ್ಕೆ ಈಶ್ವರ ದೇವಸ್ಥಾನದ ಕೊಳದಲ್ಲಿ ಮಸೀದಿಯ ಬಿಂಬ ಮತ್ತು ರಂಗನಾಥನ‌ ಕೆರೆ ಏರಿ ಮೇಲೆ ಸಂತ ಫ್ರಾನ್ಸಿಸ್ ಚರ್ಚ್‌ನ ಸುಂದರ ನೋಟವೇ ಸಾಕ್ಷಿಯಾಗಲಿ.

ನಮ್ಮ ಜನರು ಊರಿನ ಗೌರವಕ್ಕೆ ಚ್ಯುತಿಯಾಗದಂತಹ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ.

Category:Education



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ

0 Followers

0 Following