'ರಾಧೆ'ಯಾಗುವುದು ಅಷ್ಟು ಸುಲಭವಲ್ಲ
ನೀವೆಂದಾದರೂ ಯಾರನ್ನಾದರೂ 'ನಾನು ನಿನ್ನನ್ನು ಪ್ರೀತಿಸುತ್ತಿರುವುದರಿಂದ ನೀನೂ ಕೂಡ ನನ್ನನ್ನು ಪ್ರೀತಿಸಬೇಕು' ಎಂಬುವ ಪ್ರಾಪಂಚಿಕ ಸ್ವಾರ್ಥವನ್ನೂ ಧಿಕ್ಕರಿಸಿ ಪ್ರೀತಿಸಿದ್ದೀರಾ?....'ನೀನು ನನ್ನ ಪ್ರೀತಿಸುತ್ತೀಯೋ ಇಲ್ಲವೋ ಅದು ನನಗೆ ಬೇಕಿಲ್ಲದ ವಿಚಾರ,ಆದರೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ' ಎಂದು ಪ್ರೀತಿಸಿದ್ದೀರಾ?....
'ಇಲ್ಲ'
ಎಂಬುದೇ ನಿಮ್ಮ ಉತ್ತರವಾಗಿದ್ದರೆ ನಿಮಗೆ 'ರಾಧೆಯ ಪ್ರೀತಿ ಯಾವತ್ತೂ,ಯಾವ ಕಾಲಕ್ಕೂ ಅರ್ಥವಾಗದು!!!
ತೀರಾ ರುಕ್ಮಿಣಿಯಾಗುವುದು ಬಲು ಸುಲಭ,ಅಂದರೆ ಆಕೆ ನೇರವಾಗಿ ವಿಚಾರ ಪ್ರಸ್ತಾಪಿಸಿ ಮದುವೆಯನ್ನೇ ಆಗಿಬಿಟ್ಟಳು.
ಸತ್ಯಭಾಮೆಯಾಗುವುದಂತೂ ಮತ್ತೂ ಸುಲಭ ಏಕೆಂದರೆ ಆಕೆ ನಿರಂತರವಾಗಿ ಅಂದರೆ ಹಿಂದಿನ ನಾಗಕನ್ಯೆಯಾಗಿದ್ದ ಕಾಲದಲ್ಲಿ ಆಕೆಯ ಹೆಸರು ಚಂದ್ರಕಾಂತೆ ಎಂದಿತ್ತು ಆಗಲೇ ವಿಷ್ಣು ಸ್ವರೂಪಿಯನ್ನು ಪ್ರೀತಿಸಿದವಳು ಆಗ ವಿಷ್ಣುವಿನದು ರಾಮನ ಅವತಾರವಿತ್ತು ಏಕಪತ್ನಿಯ ಸಂಕಲ್ಪ ಇದ್ದದ್ದರಿಂದ ಕೃಷ್ಟನ ಅವತಾರದವರೆಗೂ ಕಾಯಬೇಕಿತ್ತು,ಹೇಳಿಕೇಳಿ ಸತ್ಯಭಾಮೆಯೂ ಕೂಡ ಭೂಪುತ್ರಿ,ನಿಜಹೇಳಬೇಕೆಂದರೆ ಸೀತೆಯಂತವಳು...ಕೃಷ್ಣನಿಗಾಗಿ ಪರಿತಪಿಸಿ ಕಾದವಳು,ಹೀಗೆ ಕಾಯುವುದು ಸುಲಭ.
ಆದರೆ ರಾಧೆಯಾಗುವುದು ಅಷ್ಟು ಸಲೀಸಲ್ಲ ಅವಳಂತೆ ಪ್ರೀತಿಸುವುದಿದೆಯಲ್ಲಾ ಉಹ್ಞೂಂ ಬಲು ಗಟ್ಟಿ ಹೃದಯ ಬೇಕಾಗುತ್ತದೆ,ಪ್ರಪಂಚದ ಕಠಿಣ ಮಾತುಗಳನ್ನೆಲ್ಲಾ ಜೀರ್ಣಿಸಿಕೊಳ್ಳಬೇಕಾಗುತ್ತದೆ.
ಹೂವಿನಂತೆ ದುಂಬಿಯ ಪ್ರೀತಿಸಬೇಕಾಗುತ್ತದೆ ಹೂವಿಗೆ ದುಂಬಿ ಸ್ವಂತವಾ?ದುಂಬಿಗೆ ಹೂ ಸ್ವಂತವಾ? ಎಂದು ಯೋಚಿಸಿದಿರೋ ,ಪ್ರೀತಿ ಯಾವತ್ತೂ ತರ್ಕಕ್ಕಿಳಿಯಬಾರದು,ಮೆದುಳಿನಲ್ಲಿ ಜಾಗ ಸಂಪಾದಿಸುವ ಯಾವುದೂ ಕೂಡ ಅದು ಕೇವಲ ಜವಾಬ್ಧಾರಿಯೇ ಹೊರತು ಪ್ರೀತಿಯಾಗಲಿಕ್ಕೆ ಯಾವತ್ತೂ ಸಾಧ್ಯವಿಲ್ಲ ಹಾಗಾಗಿ ತಲೆಯೊಳಗೆ ಪ್ರಶ್ನೆ ಶುರುವಿಕ್ಕುವ ಯಾವುದನ್ನೂ ಪ್ರೀತಿ ಎನ್ನಲಾಗದು....ಹಾಗಾಗಿ ಹೂವು ದುಂಬಿಯನ್ನು ಪ್ರೀತಿಸಬೇಕಾಗುತ್ತದೆ.
ಪ್ರೀತಿಸುವುದು,ಮದುವೆಯಾಗುವುದು,ಪಾಲನೆ,ಪೋಷಣೆ,ಮಕ್ಕಳಾಗುವುದು,ಸಂಸಾರ ಸಾಕುವುದು,ಸ್ನೇಹಿತ,,ಕಾಳಜಿಮಾಡುವುದು ಇವೆಲ್ಲವೂ ಕೂಡ ಪ್ರತ್ಯೇಕ ವಿಚಾರಗಳು ಇವಕ್ಕೆಲ್ಲಾ ನೀವು 'ಗಂಡ' ಎಂಬ ಒಂದೇ ಹೆಸರಿಟ್ಟಿರೋ ಈ ಬರಹದ ಮೂಲಾಷಯ,ಮೂಲತರ್ಕವು ಮಣ್ಣು ಹಿಡಿದಂತೆಯೇ ಸರಿ.
ಪ್ರತಿಯೊಂದೂ ಕೂಡ ಬೇರೆ ಬೇರೆ ವಿಚಾರಗಳಾಗಿರುತ್ತವೆ,ನೀವು ಯಾವಳನ್ನೋ,ಯಾವನನ್ನೋ ಪ್ರೀತಿಸಿದಾಗ ಆಕೆ ನನಗೆ ದಕ್ಕದಿದ್ದರೂ ಸರಿ ಆಕೆ ಚೆಂದವಿರಬೇಕು,ಆಕೆ ನಗುವೇ ನನ್ನ ಸಂತೋಷ ಎಂಬ ಭಾವನೆ ಎಲ್ಲಿನವರೆಗೂ ನಿಮ್ಮಲ್ಲಿ ಅಡಗಿರುತ್ತದೋ ಆ ಕ್ಷಣಿಕ ಸಮಯದ್ದಷ್ಟೇ ನಿಮ್ಮದು ನೈಜ ಪ್ರೀತಿ ಎನಿಸಬಹುದಾದ ಪ್ರೀತಿ ಇದೇ 'ರಾಧೆ'ಯಾಗುವುದು!!!.
ನಂತರ 'ಆಕೆ/ಅವನು' ತೋಳತೆಕ್ಕೆಗೆ ದಕ್ಕುವಷ್ಟು ,ಹತ್ತಿರಾದನಾ ಆ ನಂತರದ್ದು ಕೇವಲ ಜವಾಭ್ದಾರಿ ಅಷ್ಟೇ,ಜವಾಭ್ದಾರಿಗಳು ಪ್ರೀತಿಯನ್ನು ಇಂಚಿಂಚಾಗಿ ಕೊಲ್ಲತೊಡಗುತ್ತವೆ,ಯಾವಾಗ ನೀವು ಪ್ರೀತಿಸಿದವಳನ್ನು ಜವಾಬ್ಧಾರಿ ಎಂದು ಪೋಷಿಸತೊಡುಗುತ್ತೀರೋ ಆ ಕ್ಷಣಕ್ಕೆ ಆಕೆ 'ರಾಧೆ' ಎಂಬ ಪಾತ್ರದಿಂದ 'ರುಕ್ಮಿಣಿ' ಎಂಬ ಪಾತ್ರಕ್ಕೆ ಪರಕಾಯ ಪ್ರವೇಶವಾಗಿಬಿಡುತ್ತಾಳೆ,ಹೂ ಬೇಡುತ್ತಾಳೆ,ನರ್ತನ ಮಾಡುತ್ತಾಳೆ ಅದನ್ನು ನೀವು ನೋಡಲೇಬೇಕೆಂದೂ ಕೂಡ ಬೇಡಿಕೆ ಇಡುತ್ತಾಳೆ ನೋಡಲಿಲ್ಲವಾ ಒಂದು ತಾತ್ವಿಕ,ನಿಷ್ಕಳಂಕ ಛೇಡನೆ,ಬೇಸರ ಅಥವಾ 'ನೀವು ಹೇಳಿದ್ದು ನಾ ಕೇಳುತ್ತೇನೆ ಆದರೆ ನಾ ಹೇಳಿದ್ದು ನೀವು ಯಾವತ್ತೂ ಕೇಳಲೇ ಇಲ್ಲ' ಎಂಬ ಆಣಿಮುತ್ತುಗಳು ಸರವಾಗಿ ಕೊರಳಿಗೆ ಏರತೊಡಗುತ್ತವೆ. ಏಕೆಂದರೆ ರಾಧೆ ಇಲ್ಲವಲ್ಲಾ ಅಲ್ಲಿ ಕೇವಲ ರುಕ್ಮಿಣಿಯಷ್ಚೇ ಇದ್ದಾಳೆ!!!!
ಎಲ್ಲಿನತನ ಈ ಕ್ಷಣ,ಈ ಪರಿಸ್ಥಿತಿ ಇರಬೇಕಾದದ್ದೇ ಹೀಗೆ,ಇಲ್ಲಿ ಸರಿ,ತಪ್ಪುಗಳ ಲೆಕ್ಕಾಚಾರವಿಲ್ಲ 'ನನ್ನತನನ್ನು ಇಷ್ಟಪಟ್ಟಿದ್ದೇನೆ ಅಷ್ಟೇ' ಇದೇ ಸಮಯದಲ್ಲಿ...
'ಆತ ಕೂಡ ನನ್ನನ್ನಿಷ್ಟಪಡುತ್ತಾನಾ ಅಥವಾ ಆತನಿಗೆ ಯಾರು ಇಷ್ಟವಿರಬಹುದು?'ಎಂಬ ಪ್ರಶ್ನೆ ಕೂಡ ನಿನ್ನ ಎದೆಯ ಮಿದುವಿನಲ್ಲಿ ಹುಟ್ಟದಷ್ಟು ಪ್ರೀತಿಸಲು ಬರುತ್ತದೆಯಾ? ಹಾಗಾದರೆ ನೀನು ರಾಧೆಯಾದೆ ಎಂದೇ ಲೆಕ್ಕ!
'ನಿಮಗೆ ಗೊತ್ತಾ ರಾಧೆಗೆ ಬೇರಾರ ಜೊತೆಗೋ ಮದುವೆಯಾಗಿತ್ತು,ನಂತರವೂ ಕೃಷ್ಣನನ್ನು ಪ್ರೀತಿಸಿದವಳು'
ಅಂದರೆ ಪ್ರಪಂಚ ಏನೆನ್ನುತ್ತದೆ ಗೊತ್ತಾ?ಮುಖ್ಯ ಪ್ರಪಂಚವನ್ನು ನೋಡುವುದು?ಪ್ರಪಂಚ ಏನೆನ್ನುತ್ತದೆ ಎಂಬುದನ್ನೂ ಕೊಡವಿ ಪ್ರೀತಿಸಬೇಕಾಗುತ್ತದೆ.
'ಮನಸ್ಸಿನ ಪ್ರೀತಿ ಸೋತ ಬೇಸರದಿಂದ ಉಪವಾಸ ಕೂತದ್ದೇ ನಿಜವಾದರೂ ಹೊಟ್ಟೆಯು ಪ್ರೀತಿಸಿದ ಅನ್ನವನ್ನು ದೂರ ಮಾಡಿದ ,ಆ ಪ್ರೇಮವನ್ನು ದೂರ ಮಾಡಿದ ನಾನು ಅದೆಷ್ಟರಮಟ್ಚಿಗೆ ಪ್ರೀತಿಸಲು ಅರ್ಹ'ಎಂದೆಲ್ಲಾ ಕೇಳಿಕೊಳ್ಳಬೇಕಾಗುತ್ತದೆ,.
ಹಸಿವೂ ಕೂಡ ಗಮನಕ್ಕೆ ಬಾರದಂತೆ,ಹೊಟ್ಟೆಯ,ಅನ್ನದ ಪ್ರೀತಿಯನ್ನೂ ದೂರ ಮಾಡಿದೆ ಎಂಬ ಭಾವಕ್ಕೂ ಬೀಳದೆ, ನಿಮಗೇ ತಿಳಿಯದಂತೆ,ಹಸಿವೇ ಅರಿವಾಗದಂತೆ ಉಪವಾಸಕ್ಕೆ ಬಿದ್ದಿರೋ ನೀನೊಬ್ಬಳು ಅಪ್ಪಟ ರಾಧೆಯಾದಂತೆಯೇ ಲೆಕ್ಕ!
ಪ್ರೀತಿಸಿದವನು ಏನನ್ನೋ ತಂದುಹಾಕುತ್ತಾನೆ,ರಾಣಿಯಂತೆ ನೋಡಿಕೊಳ್ಳುತ್ತಾನೆ,ಪಾಲನೆ,ಪೋಷಣೆ ಮಾಡುತ್ತಾನೆ,ಗಟ್ಟಿಸಂತೆಯಲ್ಲೂ ಬೆರಳು ಹಿಡಿದಿರುತ್ತಾನೆ ಉಹ್ಞೂಂ ಇವೆಲ್ಲವೂ ನಿಮ್ಮ ಸೋಲು,ಸ್ವಂತಕ್ಕೆ ನಿಲ್ಲಲು ತಾಕತ್ತಿಲ್ಲದ್ದರಿಂದ ನೀವು ನಿಮ್ಮ ಪರಾವಲಂಬಿ ವ್ಯಕ್ತಿತ್ವಕ್ಕೆ ಪ್ರೀತಿ ಎಂಬ ತೆಳ್ಳನೆಯ ಮೇಕಪ್ ಜಮಾಯಿಸುತ್ತಿದ್ದೀರಷ್ಟೇ,ಗಮನಿಸಿ ನೋಡಿ ಬಹುತೇಕ ಹುಡುಗಿಯರು ದುಡ್ಡಿನವನನ್ನೋ,ಅವನ ಕಾರನ್ನೋ,ಬಂಗಲೆಯಲ್ಲೋ,ಅವನ ದುಂದುವೆಚ್ಚಗಳನ್ನೋ ಇತ್ಯಾದಿ..ಎಂತೆತವನ್ನೋ ಪಡೆಯುವ ಬಯಕೆಗಾಗಿಯೇ ಅವನ ಹಿಂದೆ ಬಿದ್ದಿರುವುದುಂಟು ಇದು ಪ್ರೀತಿಯೇ ಅಲ್ಲ,ಜೀವನದಲ್ಲಿ ಬದುಕಲಿಕ್ಕೆ ಬಲವಾದುದೊಂದು ಹೆಗಲ ಹುಡುಕುವ ಕೆಲಸವಷ್ಟೆ........ 'ನಾನು' ಎಂಬ ರಾಧೆಯ ಧಿಮಾಕು ಎದೆಯಲ್ಲಿ ಮೂಡದ ಹೊರತು ನಾವು ನೀವೆಲ್ಲರೂ ಪರಾವಲಂಬಿಯೇ ಹೌದು.
ಬೇಡಿದವಳಲ್ಲ ರಾಧೆ,ಏನನ್ನೋ ಬೇಡಿದ್ದರೆ ಆಕೆಯನ್ನು ರಾಧೆ ಎನ್ನಲಾಗುತ್ತಿರಲ್ಲ,ಕೃಷ್ಣನಿಂದ ಏನನ್ನೋ ಬಯಸಿದ್ದರೆ ಆಕೆ ರಾಧೆಯಾಗುತ್ತಿರಲಿಲ್ಲ....ಕನಿಷ್ಠ......'ನಾನು ನಿನಗಾಗಿ ಕಾಯುತ್ತಿದ್ದೇನೆ,ನೀನು ಬಾ ಎಂದೂ ಕೂಡ ಕನವರಿಸಿದವಳೇ ಅಲ್ಲ, ಖಾಲಿ ಪ್ರೀತಿಸುತ್ತಲೇ ಇದ್ದಳು,ಗಂಡ ಏನಂದಾನು,ಪ್ರಪಂಚ ಏನೆಂದಾತು,ಊಟ ಹೇಗೆ ಜೀವನ ಹೇಗೆ,ಮುಂದೇನಾಗುತ್ತೇನೆ ಎಂದೆಲ್ಲಾ ಯೋಚಿಸಿದ್ದರೆ ಪ್ರಪಂಚದ ಎಲ್ಲರಂತೆ ಆಕೆ ಕೂಡ ' 'ಆಗುತ್ತಿದ್ದಳೇ ಹೊರತು ತನ್ನ ಹೆಸರನ್ನೇ ಮೊದಲು ಬರೆದು ಅವನ ಹೆಸರನ್ನೇ ನಂತರ ಬರೆಯುವ 'ರಾಧಾಕೃಷ್ಣ' ಎಂದಾಗುತ್ತಿರಲಿಲ್ಲ.
ಪ್ರಪಂಚದಲ್ಲಿ ಎಂತೆತಹಾ ಕಲಿಘಟಗಳ ಮುಂದೆ ನಿಂತು,ರಕ್ತದೊಕುಳಿಯಾಡಿ,ಸಾವಿರಾರು ಮಹಿಳೆಯರನ್ನು ಕಾಪಾಡಿ,ಸಂಧಾನಕ್ಕಿಳಿದು ಏನೆಲ್ಲಾ ಮಾಡಿದ ಕೃಷ್ಣ ಎಷ್ಟು ಖಾಲಿ 'ಪ್ರೀತಿ' ಎಂಬ ಒಂದನ್ನೇ ಸಮರಸಮಾನವಾಗಿ ಆಚರಿಸಿ ಆಕೆ ಅಷ್ಟೇ ಫೇಮಸ್ಸಾಗಿ ಕೃಷ್ಣನಿಗೆ ಸಮಾನವಾಗಿ ನಿಲ್ಲುತ್ತಾಳೆ.
ತಕ್ಕಡಿಗೆ ಹಾಕಿದ್ದೇ ಆದರೆ ಕೃಷ್ಣನ ಎಂಟೂ ಜನ ಹೆಂಡತಿಯರೂ ಒಂದು ಕಡೆ ತೂಕವಾದರೆ ಅಷ್ಟಕ್ಕೂ ಸರಿಸಮನಾಗಿ ಮತ್ತೊಂದು ಕಡೆ ರಾಧೆ ತಕ್ಕಡಿ ಹತ್ತುವುದೇ ಬೇಕಿಲ್ಲ ,ನವಿರು ಬೆರಳುಗಳಿಂದ ಕೃಷ್ಣನ ಮೇಲಿಟ್ಚಿದ್ದ ಪ್ರೀತಿಯನ್ನೇ ತಕ್ಕಡಿಗೆ ಹಾಕಿದರೂ ಸಾಕು ತಕ್ಕಡಿ ಸರಿಸಮನಾಗಿಬಿಡುತ್ತದೆ,
ಅದೇ 'ರಾಧೆ'.
ಹೆಂಡತಿಯಾಗಿಬಿಡಬಹುದು ,,ಭಗ್ನಪ್ರೇಮಿಯಾಗಿಬಿಡಬಹುದು ಆದರೆ ರಾಧೆಯಂತಾಗುವುದು ಅಷ್ಟು ಸುಲಭವಲ್ಲ,ಒಮ್ಮೆ ರಾಧೆಯಾಗಲು ಪ್ರಯತ್ನಿಸಿ ನೋಡಿ,ಇಷ್ಟಪಟ್ಟವನಿಗೆ 'ನೀನೆಂದರೆ ನನಗಿಷ್ಟ' ಎಂದೂ ಕೂಡ ಹೇಳದೆ ಪ್ರೀತಿಸಿ ನೋಡಿ ಅಂದೇ ನೀವು 'ರಾಧೆಯಾಗಿಬಿಡುತ್ತೀರಿ'.
ನಾವು ನೀವು ರಾಧೆಯಾಗುವುದು ಅಥವಾ ರಾಧೆಯಂತಾಗುವುದು ಬೇರೆ ವಿಚಾರ,ಅಸಲಿಗೆ ಪ್ರೀತಿ ಎಂದರೇನು ಎಂದು ನಮಗೆಷ್ಟು ಗೊತ್ತು ಎಂಬುದು ಮೊದಲು ಎದೆ ಮುಟ್ಟಿ ಕೇಳಿಕೊಳ್ಳಬೇಕಾದ ಪ್ರಶ್ನೆ!