2014 ರ ಅಗಸ್ಟ್ 15 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟದ ಕುರಿತಾದ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು . ಕಲ್ಯಾಣ ಸ್ವಾಮಿ ವಶಪಡಿಸಿಕೊಂಡ ಬ್ರಿಟಿಷರ ಖಜಾನೆಯ ಫೋಟೋ ಕೂಡ ಪ್ರಕಟವಾಗಿತ್ತು .
ಅದನ್ನು ಓದಿದ ನನ್ನ ಅನೇಕ ಬೆಳ್ಳಾರೆ, ಸುಳ್ಯ ಸುತ್ತು ಮುತ್ತಲಿನ ಫೇಸ್ ಬುಕ್ ಗೆಳೆಯರು "ನಾನು ಬೆಳ್ಳಾರೆಯಲ್ಲಿ ಓದಿದ್ದು ,ನನಗೆ ಬಂಗಲೆ ಗುಡ್ಡೆ ಹೆಸರು ಗೊತ್ತಿತ್ತು. ಆದರೆ ಅದೊಂದು ಕೋಟೆ ಆಗಿತ್ತು. ಅದಕ್ಕೆ ಇಷ್ಟೊಂದು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವ ಇದೆ ಎಂದು ಗೊತ್ತಿರಲಿಲ್ಲ. ಕಲ್ಯಾಣ ಸ್ವಾಮಿಯ ಕಾಟುಕಾಯಿ ಬಗ್ಗೆ ನಮ್ಮ ಇತಿಹಾಸ ಪಾಠ ಪುಸ್ತಕದಲ್ಲಿ ಎರಡು ಸಾಲಿನ ವಿವರಣೆ ಇತ್ತು .ನಮಗೆ ಪಾಠ ಮಾಡಿದ ಶಿಕ್ಷಕರೂ ಅಷ್ಟನ್ನೇ ಹೇಳಿದ್ದರೆ ಹೊರತು ಅಲ್ಲಿರುವ ಬಂಗ್ಲೆ ಗುಡ್ಡೆ ಮತ್ತು ಅದರ ಮೇಲಿರುವ ಸಣ್ಣ ಕಟ್ಟಡ ಕಲ್ಯಾಣ ಸ್ವಾಮಿಯ ವಶಪಡಿಸಿಕೊಂಡದ್ದು ಎಂಬುದನ್ನು ಹೇಳಿರಲಿಲ್ಲ "ಎಂದು ಹೇಳಿದರು.
ಅವರ ಮಾತು ಕೇಳಿ ನನಗೇನೂ ಆಶ್ಚರ್ಯ ಆಗಲಿಲ್ಲ . ಇದು ಒಂದು ಉದಾಹರಣೆ ಅಷ್ಟೇ . ಹೆಚ್ಚಿನ ಶಾಲಾ ಕಾಲೇಜುಗಳ ಶಿಕ್ಷಕರಿಗೆ/ಉಪನ್ಯಾಸಕರಿಗೆ ಸ್ಥಳೀಯ ಇತಿಹಾಸದ ಬಗ್ಗೆ ಮಾಹಿತಿ ಮಾಹಿತಿ ತಿಳಿದಿಲ್ಲ .ತಿಳಿದವರಿಗೂ ವಿದ್ಯಾರ್ಥಿಗಳಿಗೆ ತಿಳಿಸಿ ಕೋಟೆ,ಕೊತ್ತಲ ಕೆರೆಗಳ ಬಳಿಗೆ ವಿದ್ಯಾರ್ಥಿಗಳನ್ನು ಕರೆದು ಕೊಂಡು ಹೋಗಿ ತೋರಿಸುವ ಬಗ್ಗೆ ಆಸಕ್ತಿ ಇಲ್ಲ .
ಯಾಕೆಂದರೆ ಸ್ಥಳೀಯ ಇತಿಹಾಸ ಪಾಠ ಪುಸ್ತಕದಲ್ಲಿ ಇರುವುದಿಲ್ಲ .”ಪಾಠ ಪುಸ್ತಕದಲ್ಲಿರುವುದನ್ನು ಮಾತ್ರ ಪಾಠ ಮಾಡಿ ಮುಗಿಸಿ ಪ್ರಶ್ನೆ ಉತ್ತರಗಳನ್ನು ನೀಡಿ ಬಾಯಿ ಪಾಠ ಮಾಡಿಸುವುದು ,ಉತ್ತಮ ಫಲಿತಾಂಶ ನೀಡುವುದು ಮಾತ್ರ ಶಿಕ್ಷಕರ ಜವಾಬ್ದಾರಿ”ಎಂಬ ಭಾವನೆ ಎಲ್ಲೆಡೆ ಇದೆ .ಪೋರ್ಷನ್ ಕವರ್ ಮಾಡುವ ಶಿಕ್ಷಕರೇ ಹೆಚ್ಚಿನವರಾಗಿದ್ದಾರೆ.
ಶಿಕ್ಷಕರ ಕುರಿತಾದ ಅನೇಕ ಹಾಸ್ಯಗಳು ಪ್ರಚಲಿತವಿವೆ .“ಈಗಿನ ಶಿಕ್ಷರಿಗೆ ಎರಡೇ ಎರಡು ಬುಕ್ ಗಳ ಪರಿಚಯ ಇರೋದು .ಒಂದು ಚೆಕ್ ಬುಕ್ ಇನ್ನೊಂದು ಪಾಸ್ ಬುಕ್” ಎನ್ನುವುದು ಕೂಡ ಇದರಲ್ಲಿ ಒಂದು . ಇದನ್ನು ಫೇಸ್ ಬುಕ್ ನಲ್ಲಿ ಯಾರೋ ಹಾಕಿದ್ದು ಇತ್ತೀಚೆಗೆ ಅದನ್ನು ಓದಿದ ನೆನಪಿದೆ .ಮೇಲ್ನೋಟಕ್ಕೆ ಇದು ಉತ್ಪ್ರೇಕ್ಷೆ ಎಂದೆನಿಸಿದರೂ ಇದರಲ್ಲಿ ತುಸು ವಾಸ್ತವವೂ ಅಡಗಿದೆ ಎನ್ನುವುದು ಒಪ್ಪತಕ್ಕ ವಿಚಾರವೇ ಆಗಿದೆ .
ದೂರದ ಹಂಪಿ .ಬಾದಾಮಿ ,ಪಟ್ಟದ ಕಲ್ಲುಗಳ ಪುಸ್ತಕದಲ್ಲಿನ ಇತಿಹಾಸವನ್ನು ಓದಿ ವಿವರಿಸುವವರು ಹತ್ತಿರದ ವಿಚಾರಗಳನ್ನು ಹೇಳುವುದಿಲ್ಲ ಯಾಕೆಂದರೆ ಹೇಳಬೇಕಿದ್ದರೆ ಅಧ್ಯಯನ ಮಾಡಬೇಕಾಗುತ್ತೆ !ಈ ರೀತಿ ಯಾರೂ ಅಧ್ಯಯನ ಮಾಡದಿರುವ ಕಾರಣ ಅಲ್ಲೊಬ್ಬರು ಇಲ್ಲೊಬ್ಬರು ಇಂತಹ ವಿಚಾರಗಳನ್ನು ಹೇಳಿದರೆ ಅದು ಇತರರಿಗೆ ಒಂದು ತಮಾಷೆಯ, ಆಡಿಕೊಳ್ಳುವ ವಿಷಯ ಆಗಿರುತ್ತದೆ !!
ಎರಡು ವರ್ಷದ ಹಿಂದೆ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಪೆರುವಾಜೆಯಲ್ಲಿ ಸುಮಾರು 1400 ವರ್ಷಕ್ಕಿಂತ ಪ್ರಾಚೀನ ಬುದ್ಧನ ವಿಗ್ರಹ ಮತ್ತು ಇತರ ಕೆಲವು ವಿಗ್ರಹಗಳು ಪತ್ತೆಯಾಗಿದ್ದವು .ಅದು ಈಗ ಉಪ್ಪಿನಂಗಡಿ ಹೊಳೆಯಲ್ಲಿ ಜಲ ಸಮಾಧಿ ಆಗಿದೆ .ಎಲ್ಲಾ ಕಡೆ ಇಂಥ ಅಪರೂಪದ ವಿಗ್ರಹಗಳು, ಪ್ರಾಚೀನ ಪಳೆಯುಳಿಕೆಗಳು ಕಳೆದು ಹೋಗುತ್ತಿವೆ . ಇದಕ್ಕೆ ಶಿಕ್ಷದಲ್ಲಿನ ಆನ್ವಯಿಕತೆಯ ಕೊರತೆಯೇ ಮುಖ್ಯ ಕಾರಣವಾಗಿದೆ . ಇಂತಹ ಪ್ರಾಚೀನ ವಿಗ್ರಹಗಳ ಪ್ರಾಮುಖ್ಯತೆಯೇ ಯಾರಿಗೂ ತಿಳಿದಿಲ್ಲ .ತಿಳಿದವರಿಗೂ ಇದರ ಸಂರಕ್ಷಣೆಯ ಉಸಾಬರಿ ಬೇಕಾಗೂ ಇಲ್ಲ ಎನ್ನುವುದು ಶೋಚನೀಯ ವಿಚಾರ !
ಅಜಂತಾ ಎಲ್ಲೋರಾ, ಹರಪ್ಪ ಮೊಹೆಂಜೆದಾರೋ ಬಗ್ಗೆ ಪಾಠ ಮಾಡುವವರು ಸ್ಥಳೀಯ ಪ್ರಾಚ್ಯಾವಶೇಷಗಳ ಸಂರಕ್ಷಣೆ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರೆ, ಇದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರೆ ,ತಾವೂ ಈ ಕಾರ್ಯಕ್ಕೆ ಕೈ ಜೋಡಿಸಿದರೆ ,ಸ್ಥಳೀಯ ವಿದ್ಯಾರ್ಥಿಗಳು ಇವನ್ನು ನೀರು ಪಾಲು ಮಾಡಲು ಬಿಡಲಾರರು ಅಲ್ಲವೇ ?
ಪಾಠ ಮಾಡಿದ್ದನ್ನು ಶಿಕ್ಷಕರು ಅನುಸರಿಸಿದರೆ ಮಾತ್ರ ಇದು ಸಾಧ್ಯ .
ಈಗ ಶಿಕ್ಷಣ ಎಂದರೆ ಪಾಠ ಪುಸ್ತಕದಲ್ಲಿರುವುದನ್ನು ಇದ್ದ ಹಾಗೆಯೇ ಹೇಳುವುದು ಪರೀಕ್ಷೆಗೆ ಏನು ಪ್ರಶ್ನೆ ಬರುತ್ತೆ ?ಅಂತ ಅದನ್ನೇ ಬಾಯಿ ಪಾಠ ಮಾಡಿಸುವುದು ,ಒಳ್ಳೆಯ ಫಲಿತಾಂಶ ತರುವುದು ಅಷ್ಟೇ .ಇದನ್ನೂ ಸರಿಯಾಗಿ ಮಾಡದ ಅನೇಕ ಶಿಕ್ಷಕರು ಕೂಡ ಇದ್ದಾರೆ ಎನ್ನುವುದು ಕೂಡ ಚಿಂತನೀಯ ವಿಚಾರ !
ಶಿಕ್ಷಕರು ಪರಿಸರ ಮಾಲಿನ್ಯದ ಬಗ್ಗೆ ಗಂಟೆ ಗಟ್ಟಲೆ ಕೊರೆದು ಪಾಠ ಮಾಡುತ್ತಾರೆ .ಪರಿಸರ ಮಾಲಿನ್ಯದ ಕುರಿತು ಜಾಥಾ ,ಮೆರವಣಿಗೆ ,ಭಾಷಣ ,ವಿವಿಧ ಸ್ಪರ್ಧೆಗಳನ್ನು ಮಾಡುತ್ತಾರೆ ಆದರೆ ಶಾಲಾ ,ಕಾಲೇಜ್ ಆವರಣದಲ್ಲೇ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ಬಳಸಿ ಬಿಸಾಡುತ್ತಾರೆ ! ಮತ್ತೆ ಬಳಸಬಹುದಾದ ಸ್ಟೀಲ್ ಪರಿಕರಗಳನ್ನೇಕೆ ಉಪಯೋಗಿಸಬಾರದು ?ಮಣ್ಣಿನಲ್ಲಿ ಸೇರುವ, ಪರಿಸರಕ್ಕೆ ಹಾನಿಕರವಲ್ಲದ ಅಡಿಕೆಯ ಹಾಳೆಯಿಂದ ತಯಾರಿಸಿದ ತಟ್ಟೆಗಳನ್ನೇಕೆ ಬಳಸ ಬಾರದು ಎಲ್ಲೆಡೆ? ಶಾಲಾ ಕಾಲೇಜ್ ಆವರಣಕ್ಕೆ ಹೊಂದಿಕೊಂಡಿರುವ ಮರಗಿಡಗಳನ್ನು ವಿನಾ ಕಾರಣ ಕಡಿಯುವಾಗಲೂ ಸುಮ್ಮನಿರುತ್ತಾರೆ !ಇನ್ನು ಮರ ಗಿಡ ಬೆಳೆಸುವ ಬಗ್ಗೆ ಪಾಠ ಮಾಡುವುದರಿಂದ ಏನು ಪ್ರಯೋಜನವಾದೀತು ?!
ಈಗಂತೂ ಪಾಠ ಪುಸ್ತಕದಲ್ಲಿ ದಲ್ಲಿ ಎಲ್ಲೆಡೆ ಭ್ರಷ್ಟಾಚಾರದ ಕುರಿತು ,ಗ್ರಾಹಕ ಹಕ್ಕುಗಳ ಕುರಿತು ಮಾಹಿತಿ ವಿಸ್ತೃತವಾಗಿ ಇರುತ್ತದೆ .ಪಕ್ಕದ ನೆಮ್ಮದಿ ಕೇಂದ್ರದವರು ಆದಾಯ ಪ್ರಮಾಣ ಪತ್ರ ಕೊಡಬೇಕಾದರೆ 100 ರೂ ವಸೂಲಿ ಮಾಡುವುದು ಗೊತ್ತಿದ್ದರೂ ಎಲ್ಲರೂ ಜಾಣ ಮೌನ ವಹಿಸುತ್ತಾರೆ .”ಲಂಚ ಕೊಡ ಬಾರದು ಮತ್ತು ತೆಗೆದು ಕೊಳ್ಳ ಬಾರದು” ಎಂದು ಪಾಠ ಮಾಡುವ ಶಿಕ್ಷಕರು ಕಾರ್ಯ ರೂಪಕ್ಕೆ ಯಾವುದನ್ನೂ ತರುವುದಿಲ್ಲ !ತರಲು ಸಹಾಯ ಮಾಡುವುದೂ ಇಲ್ಲ .ಪಕ್ಕದಲ್ಲಿರುವ ನಂದಿನಿ ಬೂತಿನಲ್ಲಿ ಹಾಲಿಗೆ ನಮೂದಿಸಿದ ಬೆಲೆಗಿಂತ ಎರಡು ರೂ ಹೆಚ್ಚು ತೆಗೆದು ಕೊಂಡರೂ ಮಾತನಾಡದೆ ಕೊಡುವ ಶಿಕ್ಷಕರು ಗ್ರಾಹಕ ಹಕ್ಕುಗಳ ಬಗ್ಗೆ ಏನು ಪಾಠ ಹೇಳಿದರೂ ಅದು ಕಾರ್ಯ ರೂಪಕ್ಕೆ ಬರಲು ಸಾಧ್ಯವೇ ?
ಇದರ ಪರಿಣಾಮವೇನಾಗುತ್ತಿದೆ ಗೊತ್ತೇ ?ವಿದ್ಯಾರ್ಥಿಗಳಿಗೆ ತಾವು ಕಲಿತ ವಿಷಯಗಳ ಆನ್ವಯಿಕತೆ ಬಗ್ಗೆ ತಿಳಿದೇ ಇರುವುದಿಲ್ಲ .ಇದು ಕೇವಲ ಬಾಯಿ ಪಾಠ ಮಾಡಿ ಅಂಕಗಳಿಕೆಗೆ ನೆರವಾಗುತ್ತವೆ ಅಷ್ಟೇ !
ಇದಕ್ಕೊಂದು ಉದಾಹರಣೆ ನೆನಪಾಗುತ್ತಿದೆ.
ಇತ್ತೀಚೆಗೆ ನನಗೆ ಒಬ್ಬ ನರ್ಸ್ ಅವರ ಪರಿಚಯ ಆಯಿತು .ಅವರು ಹೇಳಿದ ಒಂದು ವಿಚಾರ ಕೇಳಿ ನನಗೆ ಆಶ್ಚರ್ಯವಾಯಿತು .
ತುಂಬಾ ಬಡ ಮನೆಯ ಹುಡುಗಿ. ಆದರೆ ಪ್ರತಿಭಾವಂತೆ . ಪಿಯುಸಿಯಲ್ಲಿ 90 % ಅಂಕಗಳನ್ನು ಗಳಿಸಿದ್ದರು .ಅನಂತರ ಬೇಗ ಉದ್ಯೋಗ ದೊರೆಯುತ್ತದೆ ಎಂಬ ಕಾರಣಕ್ಕೆ ನರ್ಸಿಂಗ್ ತರಬೇತಿ ಪಡೆದು ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು .ಅಲ್ಲಿ ಕೆಲಸಕ್ಕೆ ಸೇರುವ ಮುನ್ನ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು . ಕೆಲಸಕ್ಕೆ ಸೇರಿದ ತುಸು ಸಮಯದಲ್ಲಿಯೇ ಸಂದರ್ಶನಕ್ಕೆ ಆಹ್ವಾನ ಬಂತು .ಪೋಸ್ಟ್ ಮಾಸ್ಟರ್ ಹುದ್ದೆಯು ಪಿ.ಯು.ಸಿಯಲ್ಲಿ ಪಡೆದ ಅಂಕಗಳ ಮೇಲೆ ಸಿಗುತ್ತದೆ .ಇದಕ್ಕೆ ಬೇರೆ ಏನೂ ಅರ್ಹತೆ ಅಥವಾ ಅರ್ಹತಾ ಪರೀಕ್ಷೆ ಇರುವುದಿಲ್ಲ .ಸಂದರ್ಶನಕ್ಕೆ ಹೋಗುವಾಗ ಮೂಲ ಅಂಕ ಪಟ್ಟಿಗಳನ್ನು ಕೊಂಡೊಯ್ಯಲೇ ಬೇಕು ತಾನೇ .
ಈ ಯುವತಿ ನರ್ಸ್ ಕೆಲಸಕ್ಕೆ ಸೇರುವಾಗ ಅವರ ಮೂಲ ಪ್ರಮಾಣ ಪತ್ರಗಳನ್ನು ಆ ಆಸ್ಪತ್ರೆಯ ಯಜಮಾನರು ತೆಗೆದು ಇಟ್ಟುಕೊಂಡಿದ್ದರು .
ಇವರು “ನನಗೆ ಸಂದರ್ಶನಕ್ಕೆ ಬಂದಿದೆ .ನನಗೆ ಅಂಕ ಪಟ್ಟಿಗಳನ್ನು ಕೊಡಿ ”ಎಂದರೆ ಅವರು “ಕೆಲಸಕ್ಕೆ ಸೇರಿ ಆರು ತಿಂಗಳ ಕಾಲ ಕೆಲಸ ಬಿಡುವಂತಿಲ್ಲ.
ನೀನು ಬಾಂಡ್ ಗೆ ಸಹಿ ಮಾಡಿದ್ದಿ ,ಅಂಕ ಪಟ್ಟಿ ಕೊಡಲು ಆಗುವುದಿಲ್ಲ”ಎಂದು ಹೇಳಿ ಅಂಕ ಪಟ್ಟಿಗಳನ್ನು ಕೊಡಲು ನಿರಾಕರಿಸಿದರು.ಹಾಗಾಗಿ ಈ ಬುದ್ಧಿವಂತ ಯುವತಿಗೆ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.
ಖಂಡಿತವಾಗಿಯೂ ದೊರೆಯಬಹುದಾಗಿದ್ದ ಒಳ್ಳೆಯ ಕೆಲಸ ಕೈ ತಪ್ಪಿ ಹೋಯಿತು.
ಆಗ ನಾನು ಆ ಯುವತಿಯಲ್ಲಿ “ಸಂದರ್ಶನ ಆಗಿ ಕೆಲಸಕ್ಕೆ ಹಾಜರಾಗಲು ಆದೇಶ ಬರುವಾಗ ಆರೇಳು ತಿಂಗಳು ಕಳೆಯುತ್ತದೆ .ಅಲ್ಲದೆ ಕೆಲಸ ಬಿಡಬಾರದು ಎಂದು ಮಾತ್ರ ಬಾಂಡ್ ಇರುವುದು ತಾನೇ ?ಸಂದರ್ಶನಕ್ಕೆ ಹಾಜರಾಗಲು ಅಂಕ ಪಟ್ಟಿ ಕೊಡದಿದ್ದರೆ ಕೂಡಲೇ ಪೊಲೀಸರಿಗೆ ದೂರು ಕೊಟ್ಟು ಅಂಕ ಪಟ್ಟಿ ಪಡೆದು ಸಂದರ್ಶನಕ್ಕೆ ಹಾಜರಾಗ ಬಹುದಿತ್ತಲ್ಲ?ಒಂದು ವೇಳೆ ಆರು ತಿಂಗಳ ಒಳಗೇ ನೇಮಕಾತಿ ಆದೇಶ ಬಂದರೆ ದಂಡ ಕಟ್ಟಿ ಆ ಕೆಲಸ ಬಿಟ್ಟು ಸಿಕ್ಕ ಹೊಸ ಕೆಲಸಕ್ಕೆ ಹೋಗಬಹುದಿತ್ತು ಅಲ್ವ ?” ಎಂದು ಕೇಳಿದೆ.
“ಹೌದಾ ಮೇಡಂ, ನನಗೆ ಈ ಬಗ್ಗೆ ಗೊತ್ತಿರಲಿಲ್ಲ”ಎಂದು ಅವರು ತುಂಬಾ ಖೇದದಿಂದ ,ಕಣ್ಣಲ್ಲಿ ನೀರು ತಂದುಕೊಂಡು ತಿಳಿಸಿದರು. ಒಳ್ಳೆಯ ಕೆಲಸ ಸಿಕ್ಕುವ ಅವಕಾಶ ತಪ್ಪಿ ಹೋದ ಬಗ್ಗೆ ಅವರಿಗೆ ಅಪಾರ ನೋವಿತ್ತು .ಮಾನವ ಹಕ್ಕು ,ಗ್ರಾಹಕ ಹಕ್ಕು ,ಮಕ್ಕಳ ಹಕ್ಕು ,ಪೌರರ ಹಕ್ಕು ,ಕರ್ತವ್ಯ ಇತ್ಯಾದಿಗಳನ್ನು ಬಾಯಿ ಪಾಠ ಮಾಡಿ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಅದರ ಆನ್ವಯಿಕತೆಯ ಅರಿವಿಲ್ಲದಿರುವುದಕ್ಕೆ ಈ ವೃತ್ತಾಂತ ಸಾಕ್ಷಿಯಾಗಿದೆ.
ಇದೆಲ್ಲ ಕಲಾ ತರಗತಿಗಳಿಗೆ ಸಂಬಂಧಿಸಿದ್ದು ಎಂದಾದರೆ ವಿಜ್ಞಾನದ ಪರಿಸ್ಥಿತಿ ಏನೂ ಇದರಿಂದ ಭಿನ್ನವಾಗಿಲ್ಲ .ವಿದ್ಯುತ್ ಬಗ್ಗೆ ,ಎಲೆಕ್ಟ್ರಾನಿಕ್ಸ್ ಬಗ್ಗೆ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಫ್ಯೂಸ್ ಹೋದರೆ ಹಾಕಲು ಬರುವುದಿಲ್ಲ ,ಫ್ಯಾನ್ ನಂತಹ ಸುಲಭೋಪಯೋಗಿ ವಸ್ತುಗಳನ್ನು ಜೋಡಿಸಲು ಬರುವುದಿಲ್ಲ .ಯಾಕೆಂದರೆ ಪ್ರಾಯೋಗಿಕತೆ ಪಾಠ ದಲ್ಲಿ ಇಲ್ಲವೇ ಇಲ್ಲ . ಅನೇಕ ವಿಜ್ಞಾನದ ಶಿಕ್ಷಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ !ಮತ್ತೆ ಮಕ್ಕಳಿಗೆ ಹೇಗೆ ತಿಳಿಯುತ್ತದೆ ?
ಇತ್ತೀಚೆಗೆ ಇನ್ಸ್ಪೈರ್ ಅವಾರ್ಡ್ ಗೆ ತೀರ್ಪುಗಾರರಾಗಿ ಹೋಗಿದ್ದವರೊಬ್ಬರು "ಅಲ್ಲಿ ಇದ್ದ ಹೆಚ್ಚಿನ ವಿಜ್ಞಾನ ಮಾದರಿಗಳು ಅಂಗಡಿಯಿಂದ ಖರೀದಿಸಿ ತಂದವುಗಳಾಗಿದ್ದವು ಮತ್ತು ಹೆಚ್ಚು ಕಡಿಮೆ ಎಲ್ಲರದೂ ಒಂದೇ ಮಾದರಿಯ ಉಪಕರಣಗಳು ,ಸ್ವಂತಿಕೆ ಎಂಬುದು ಕಾಣಿಸುತ್ತಲೇ ಇಲ್ಲ "ಎಂದು ಹೇಳಿದ ಬಗ್ಗೆ ಓದಿದ್ದು ನೆನಪಿಗೆ ಬರುತ್ತಿದೆ .
ಸುಮಾರು ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ನನಗೆ ರೈಲಿನಲ್ಲಿ ಡಾ .ಶಶಿಕಲಾ ಎಂಬ ನಿವೃತ್ತ ಮುಖ್ಯೋಪಾಧ್ಯಾಯಿನಿಯವರು ಮಾತಿಗೆ ಸಿಕ್ಕಿದ್ದರು .ನಮ್ಮ ಮಾತುಗಳು ಇಂದಿನ ಹಾದಿ ತಪ್ಪುತ್ತಿರುವ ಯುವ ಜನಾಂಗ, ಭ್ರಷ್ಟಾಚಾರ ,ಭಯೋತ್ಪಾದನೆ ,ನೀರಿನ ಕೊರತೆ ,ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿ ಹಂಚಿ ಹರಿದಾಡಿದವು.
ಮಾತಿನ ಕೊನೆಗೆ ಅವರು ಒಂದು ಮಾತು ಹೇಳಿದರು. "ನಮ್ಮ ದೇಶದ ಹೆಚ್ಚಿನ ಸಮಸ್ಯೆಗಳಿಗೂ ಮುಖ್ಯ ಕಾರಣ ಶಿಕ್ಷಕರು .ಇವರು ಸರಿಯಾಗಿ ಪಾಠ ಮಾಡಿ ತಾವು ಪಾಠ ಮಾಡಿದ್ದನ್ನು ತಾವೇ ಮೊದಲಿಗೆ ಅನುಸರಿಸಿ ವಿದ್ಯಾರ್ಥಿಗಳು ಅನುಸರಿಸುವ ಹಾಗೆ ಮಾಡಿದ್ದರೆ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತಿದ್ದವು "ಎಂದು .ಇದು ಸ್ವಲ್ಪ ಉತ್ಪ್ರೇಕ್ಷೆ ಎಂದೆನಿಸಿದರೂ ಅವರು ಹೇಳಿದ್ದರಲ್ಲಿ ವಾಸ್ತವತೆಯ ಕಟು ಸತ್ಯ ಅಡಗಿದೆ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ .
ಪಟ್ಟಿಮಾಡ ಹೋದರೆ ಅನೇಕ ಕುಂದು ಕೊರತೆಗಳು ಇರಬಹುದು,
ಸಂಪನ್ಮೂಲಗಳ ಕೊರತೆ ಇರಬಹುದು .ಆದರೆ ಇರುವಷ್ಟನ್ನು ಬಳಕೆ ಮಾಡಿ ಅನ್ವಯ ಮಾಡುವುದಕ್ಕೆ ಏನಡ್ಡಿ ?
ಇತ್ತೀಚಿಗೆ ಒಂದು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಹೋದೆ .ಅಲ್ಲಿ ಸಿಮೆಂಟಿನಿಂದ ರಚಿಸಿದ ಸುಸಜ್ಜಿತ ರಂಗ ವೇದಿಕೆ ಇತ್ತು .ಆದರೆ ಅದಕ್ಕೆ ಒಂದು ಅಡ್ಡಲಾಗಿ ಸೀರೆಯನ್ನು ಕಟ್ಟಿಯಾದರೂ ಒಂದು ತೆರೆ/ಪರದೆಯ ವ್ಯವಸ್ಥೆ ಮಾಡಿರಲಿಲ್ಲ .ಅಲ್ಲಿ ಮೈಕ್ ಇತ್ತು, ಆದರೆ ಅದನ್ನು ಒಂದು ಸ್ಟಾಂಡ್ ಗೆ ಕಟ್ಟಿರಲಿಲ್ಲ .ನಾಟಕ ಸ್ಪರ್ಧೆಯಲ್ಲಿ ಅಭಿನಯಿಸುವಾಗ ಮಕ್ಕಳು, ಇರುವ ಒಂದು ಮೈಕ್ ಅನ್ನು ಒಬ್ಬರಿಗೊಬ್ಬರ ಕೈಗೆ ನೀಡಿ ಅಭಿನಯಿಸಬೇಕಾಯಿತು !ಅಲ್ಲಿಗೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಒಂದಿನಿತೂ ಶಿಸ್ತು ಇರಲಿಲ್ಲ .ಅವರಿಗೆ ಅಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇರಲಿಲ್ಲ. “ವಿದ್ಯಾರ್ಥಿಗಳನ್ನು ಹತೋಟಿಗೆ ತರುವ ಯತ್ನವನ್ನೇ ಶಿಕ್ಷಕರು ಮಾಡಿರಲಿಲ್ಲ” ಅನ್ನುವುದು ಶೋಚನೀಯ ವಿಚಾರ.
ರಂಗ ಕಲೆಗಳಾದ ನಾಟಕ, ನೃತ್ಯ ,ಛದ್ಮವೇಷ ಮೊದಲಾದವುಗಳನ್ನು ತರಗತಿಯ ಒಳಗೆ ಮಾಡಿಸಿ ಬಹುಮಾನ ಕೊಟ್ಟರೆ ಏನು ಪ್ರಯೋಜನವಾದೀತು ?ಸಣ್ಣ ತರಗತಿ ಒಳಗೆ ಸ್ಪರ್ಧಿಗಳು ಮಾತ್ರ ಇದ್ದು ನಡೆಯುವ ಸ್ಪರ್ಧೆಗಳಲ್ಲಿ ,ಚಂದದ ಅಭಿನಯಕ್ಕೆ ,ಸುಂದರ ಕುಣಿತಕ್ಕೆ ಚಪ್ಪಾಳೆ ತಟ್ಟುವವರೇ ಇರುವುದಿಲ್ಲ !ವಿದ್ಯಾರ್ಥಿ -ಪ್ರೇಕ್ಷಕರು ಇಲ್ಲದೆಯೇ ನಡೆಸುವ ಶುಷ್ಕ ಸ್ಪರ್ಧೆಯಿಂದ ಪ್ರತಿಭಾ ವಿಕಸನ ಸಾಧ್ಯವೇ ?ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಯಲ್ಲಿ ಮಾತ್ರವಲ್ಲ ನೋಡುವ ವಿದ್ಯಾರ್ಥಿಯಲ್ಲಿ ಕೂಡ ಮಿಂಚಿನೋಪಾದಿಯಲ್ಲಿ ಉತ್ಸಾಹ ಸಂಚಾರವಾದರೆ ಮಾತ್ರ ಅದು ಸಾರ್ಥಕವಾಗುತ್ತದೆ .ಎಲ್ಲೆಡೆ ಪ್ರತಿಭಾ ಸಿಂಚನವಾಗುತ್ತದೆ.
ಹಾಗಂತ “ಎಲ್ಲೆಡೆ ಹೀಗೆ ಇದೆ, ಎಲ್ಲ ಶಿಕ್ಷಕರೂ ಹೀಗೆ ಇದ್ದಾರೆ” ಎಂದು ಹೇಳುವಂತಿಲ್ಲ .ಅನೇಕ ಕ್ರಿಯಾಶೀಲ ಶಿಕ್ಷಕರು ಇದ್ದಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ ಇದ್ದು ಅವರಿಗೆ ಸೂಕ್ತ ಬೆಂಬಲದ ಕೊರತೆ ಕೂಡ ಇದೆ .ಇಂಥವರ ಸಂಖ್ಯೆ ಹೆಚ್ಚಾಗಬೇಕಿದೆ ,ಅವರಿಗೆ ಸೂಕ್ತ ಬೆಂಬಲ ಕೂಡ ದೊರೆಯಬೇಕಿದೆ .
ಇಂದಿನ ಶಿಕ್ಷಣದಲ್ಲಿ ಆನ್ವಯಿಕತೆಯ ಕೊರತೆ ತುಂಬಾ ಇದೆ . ಇದನ್ನು ಹೋಗಲಾಡಿಸಬೇಕಾದ ಅಗತ್ಯ ಖಂಡಿತಾ ಇದೆ .
“ ಒಬ್ಬ ತಂತ್ರಜ್ಞ ತಪ್ಪು ಮಾಡಿದ ತಪ್ಪಿನಿಂದ ಒಂದು ಕಟ್ಟಡ ಕುಸಿದು ಬೀಳಬಹುದು.ಒಬ್ಬ ನ್ಯಾಯವಾದಿಯ ಬೇಜವಾಬ್ದಾರಿತನದಿಂದ ಒಬ್ಬ ಅಪರಾಧಿ ತಪ್ಪಿಸಿಕೊಳ್ಳಬಹುದು .ಆದರೆ ಅಧ್ಯಾಪಕರ ತಪ್ಪಿನಿಂದ ದೇಶವೇ ಕುಸಿದು ಹೋಗಬಹುದು” ಎಂಬ ಮಾತೊಂದು ಸವಕಳಿ ಎನಿಸುವಷ್ಟು ಪ್ರಯೋಗಗೊಳ್ಳುತ್ತದೆ.
ಆದರೆ ಇದನ್ನೇ ನಾವು “ಅಧ್ಯಾಪಕರ ಒಪ್ಪಿನಿಂದ ದೇಶವೇ ಎದ್ದು ನಿಲ್ಲ ಬಹುದು “ಎಂದೂ ಧನಾತ್ಮಕವಾಗಿ ಹೇಳಬಹುದು ಅಲ್ಲವೇ ?ಒಬ್ಬ ಶಿಕ್ಷಕ ತನ್ನ ಕಾಲಾವಧಿಯಲ್ಲಿ ಏನಿಲ್ಲವೆಂದರೂ ನಾಲ್ಕು ,ಐದು ಸಾವಿರ ಮಂದಿ ವಿದ್ಯಾರ್ಥಿಗಳನ್ನು ಪಡೆಯುತ್ತಾರೆ .ಹಸಿ ಮಣ್ಣಿನ ಗೋಡೆಯಂತಿರುವ ಹದಿಹರೆಯದ ಯುವ ಜನಾಂಗಕ್ಕೆ ಸೂಕ್ತ ಮಾರ್ಗ ದರ್ಶನ ನೀಡಿ ಪ್ರಜ್ಞಾವಂತರನ್ನಾಗಿ ರೂಪಿಸುವುದು ಅಸಾಧ್ಯವಾದ ಕಾರ್ಯವೇನಲ್ಲ .
ಆದರೆ ಇಂದು ಕೆಲವು ಶಿಕ್ಷಕರೇ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ,ಅಕ್ರಮಗಳಲ್ಲಿ ಭಾಗಿಯಾಗಿರುವ ಬಗ್ಗೆ ಅಲ್ಲಲ್ಲಿ ಸುದ್ದಿಗಳು ಕೇಳಿ ಬರುತ್ತಿವೆ
ಆದ್ದರಿಂದ ಶಿಕ್ಷಕರಾದವರು ನುಡಿದಂತೆ ನಡೆದು, ತಾವು ಪಾಠ ಮಾಡಿದ ನೈತಿಕ ,ವೈಜ್ಞಾನಿಕ ವಿಚಾರಗಳನ್ನು ಅನ್ವಯ ಮಾಡಿ ತೋರಿಸಿದರೆ ಮಾತ್ರ ಪ್ರಜ್ಞಾವಂತ ಯುವಜನಾಂಗವನ್ನು ರೂಪಿಸಲು ಸಾಧ್ಯವಾಗಬಹುದು. ಅತ್ಯಾಚಾರ ,ಭ್ರಷ್ಟಾಚಾರ ,ಭಯೋತ್ಪಾದನೆ,ಮೂಢನಂಬಿಕೆ .ಜಾತೀಯತೆ ಮೊದಲಾದ ಅನಿಷ್ಟಗಳನ್ನು ದೂರ ಮಾಡಲು ,ರಾಷ್ಟ್ರೀಯ ಭಾವೈಕ್ಯತೆ ,ದೇಶ ಭಕ್ತಿ,ಪರ ಧರ್ಮ ಸಹಿಷ್ಣುತೆ ,ಪರಸ್ಪರ ಗೌರವ ,ಸ್ವಯಂ ಶಿಸ್ತು ,ಭ್ರಾತೃತ್ವ ,ಸಮಾನತೆ ,ಸೃಜನ ಶೀಲತೆ ,ಸ್ವಂತಿಕೆ,ವಿಮರ್ಶೆ ,ಸಂಶೋಧನಾ ಸಾಮರ್ಥ್ಯಗಳನ್ನು ಬೆಳೆಸಲು , ಶಿಕ್ಷಣದಲ್ಲಿನ ವಿಚಾರಗಳ ಅನ್ವಯಿಕತೆ ಅತ್ಯಗತ್ಯವಾಗಿದೆ .
-ಡಾ.ಲಕ್ಷ್ಮೀ ಜಿ ಪ್ರಸಾದ
ಉಪನ್ಯಾಸಕರು
ಇ ಮೇಲ್:[email protected]