ಸುಬ್ಬನ ಪಾತ್ರ ಮಾಡಿದಹುಡುಗಿಗೆ ದೊಡ್ಡ ಭವಿಷ್ಯವಿದೆ ಎಂದವರಾರು?

ಆತ್ಮ ಕಥೆಯ ಬಿಡಿ ಭಾಗಗಳು 5

ProfileImg
05 May '24
4 min read


image

 

ಸುಬ್ಬನ ಪಾತ್ರ ಮಾಡಿದಹುಡುಗಿಗೆ ದೊಡ್ಡ ಭವಿಷ್ಯವಿದೆ

 

 

ಚಿತ್ರ : 1997 ರಲ್ಲಿ ಹವ್ಯಕ ಮಹಾ ಸಭೆಯಲ್ಲಿ ಅದೇ ನಾಟಕವನ್ನು ಮಾಡಿದ್ದು,

 

ಸುಬ್ಬನ ಪಾತ್ರದಲ್ಲಿ ನಾನು ಮತ್ತು ಸುಬ್ಬಿಯ ಪಾತ್ರದಲ್ಲಿ ಪುಷ್ಪಕ್ಕ( ಖ್ಯಾತ ಡೆಂಟಿಸ್ಟ್ ಖಂಡಿಗೆ ಡಾ.ಕೃಷ್ಣ ಭಟ್ ಅವರ ಮಡದಿ)


ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ
ಇಂದು ಫೇಸ್ ಬುಕ್ ಮೂಲಕ ಗೆಳೆಯರಾದ ಜಯಲಕ್ಷ್ಮಿ ಅವರು ತಾವು ಸ್ವಾಮೀಜಿಯವರು ನೀಡಿದ ನಿಂಬೆಹಣ್ಣು ಮತ್ತು ಭರವಸೆಯ ನುಡಿ ನಂಬಿ ಓದಿ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ವಿಚಾರವನ್ನು ಹಂಚಿಕೊಂಡಿದ್ದರು‌.ತಕ್ಷಣವೇ ನನಗೂ ಇಂತಹ ಒಂದು ಪ್ರೇರಣೆ ಸಿಕ್ಕಿದ್ದು ನೆನಪಾಯಿತು.
ಆಗ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ ಎಂದು ನೆನಪು..
ಇಲ್ಲಿ ನಾನು ಆ ನಾಟಕವನ್ನು ಯುವಜನೋತ್ಸವದ ಸ್ಪರ್ಧೆಯಲ್ಲಿ ಮಾಡಿದೆ.ವಾಣಿ ವಿಜಯ ಪ್ರೌಢ ಶಾಲೆಯ ವಾತಾವರಣ ಮೀಯಪದವು ಶಾಲೆಗಿಂತ ತುಂಬಾ ಭಿನ್ನವಾಗಿತ್ತು.ಇಲ್ಲಿ ನಮಗೆ ಯಾವುದಕ್ಕೂ ಬೆಂಬಲ ಇರಲಿಲ್ಲ. ಬಹುಶಃ ಸರ್ಕಾರದ ಆದೇಶ ಇದ್ದ ಕಾರಣ ಯುವಜನೋತ್ಸವ ಮಾಡಿ ಒಂದಷ್ಟು ಸ್ಪರ್ಧೆಗಳನ್ನು ಕಷ್ಟದಲ್ಲಿ ನಡೆಸುತ್ತಾ ಇದ್ದರು.ಇಲ್ಲಿ ನಮಗೆ ತರಬೇತಿ ಪ್ರೋತ್ಸಾಹ ಎಂತದೂ ಇರಲಿಲ್ಲ. ಆದರೂ ನಾನು ಒಂದು ತಂಡ ಕಟ್ಟಿ ನಾಟಕದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.ಇಲ್ಲಿ ಹುಡುಗಿಯರು ವೇದಿಕೆ ಏರಲು ಹಿಂದೇಟು ಹಾಕುತ್ತಿದ್ದರು. ಅಂತೂ ಇಂತೂ ಕೆಲವರ ಮನ ಒಲಿಸಿ ನಾಟಕ ಹೇಳಿಕೊಟ್ಟು ಸಿದ್ಧ ಪಡಿಸಿದ್ದೆ.ನಮಗೆ ಅಭ್ಯಾಸ ಮಾಡಲು ಕೂಡ ಶಾಲಾ ಅವಧಿಯಲ್ಲಿ ಅವಕಾಶ ಇರಲಿಲ್ಲ. ಶಾಲೆ ಮುಗಿದ ನಂತರ ನಾವು ಬಯಲಿನಲ್ಲಿ ನಿಂತು ಅಭ್ಯಾಸ ಮಾಡಿದ್ದೆವು.ಶಾಲೆಯ ಕೊಠಡಿಯ ಒಳಗಡೆ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಜೊತೆಗೆ  ಶರವು  ಮಹಾ ಗಣಪತಿ ಹಾಡಿಗೆ ಒಂದು ಪೂಜಾ ನೃತ್ಯಕ್ಕೂ ಹೆಜ್ಜೆ ಜೋಡಿಸಿ ತಯಾರಾಗಿದ್ದೆ.ನಾನು ಮೀಯಪದವು ಶಾಲೆಯಲ್ಲಿ ಇದ್ದಾಗ ಬೇರೆ ಮಕ್ಕಳಿಗೆ ಅಲ್ಲಿನ ಶಿಕ್ಷಕರು ಕಲಿಸಿದ್ದ ಒಂದು ಜಿಪ್ಸಿಗಳೆ ನಿಮ್ಮ ನಾವು ಮೊದಲು ಕಂಡಾಗ ಎಂಬ ಹಾಡಿನ ನೃತ್ಯವನ್ನು ಅಲ್ಲಿಯೇ ಐದು ಆರನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಹುಡುಗಿಯರಿಗೆ ಹೇಳಿ ಕೊಟ್ಟು ಸ್ಪರ್ಧೆಗೆ ತಯಾರು ಮಾಡಿದ್ದೆ. ಈ ಹುಡುಗಿಯರ ಹೆಸರು ಮರೆತು ಹೋಗಿದೆ ಒಬ್ಬಳು ನಮ್ಮ ಮನೆ ಪಕ್ಕದ ನಳಿನಿ ಇರಬೇಕು ಜೊತೆಗೆ ರಾಜೇಶ್ವರಿ ಎಂಬ ಇನ್ನೊಂದು ಹುಡುಗಿಗೆ ಒಂದು ಪೂಜಾ ನೃತ್ಯ ಹೇಳಿ ಕೊಟ್ಟಿದ್ದೆ.
ಯುವಜನೋತ್ಸವದ ಮೊದಲ ಹಂತ ಶಾಲೆಯ ಒಳಗೆ ಸ್ಪರ್ಧೆ. ಇಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನ ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಕರೆದು ಕೊಂಡು ಹೋಗಬೇಕಿತ್ತ ಎಂದು ನೆನಪು. ವಾಣಿ ವಿಜಯ ಹೈಸ್ಕೂಲ್ ನಲ್ಲಿ ಶಾಲೆಯ ಒಳಗೆ ಯುವಜನೋತ್ಸವ‌ ಮಾಡಿ ಸ್ಪರ್ಧೆ ನಡೆಸಿ ಬಹುಮಾನ ಕೊಡುತ್ತಾ ಇದ್ದದ್ದೇ ಕಷ್ಟದಲ್ಲಿ. ಇನ್ನು ನಮಗೆ ತರಬೇತಿಯನ್ನು ನೀಡಿ ಅಂತರ್ಶಾಲಾ ಸ್ಪರ್ಧೆಗೆ ಕರೆದೊಯ್ಯುವ ಮಾತೆಲ್ಲಿ ?
ಇರಲಿ ನನಗಾಗ ಇದನ್ನೆಲ್ಲ ಅರ್ಥಮಾಡಿಕೊಳ್ಳುವ ವಯಸ್ಸಲ್ಲ.ಮೀಯಪದವು ಶಾಲೆಯ ಹಾಗೇ ಇಲ್ಲೂ ಎಂದು ಭಾವಿಸಿದ್ದೆ‌.ಮೊದಲಿನಿಂದಲೂ ನಾನು ಒಂಚೂರು ಅತ್ಯುತ್ಸಾಹದ ಹುಡುಗಿ ಆಗಿದ್ದೆ ಕಾಣಬೇಕು.
ಯುವಜನೋತ್ಸವಕ್ಕೆ ಎರಡು ದಿನ ಇರುವಾಗ ಸುಬ್ಬಿ ಪಾತ್ರ ಮಾಡಿದ ಹುಡುಗಿ ಶೋಭಾ ನಾನು ನಾಟಕದಲ್ಲಿ ಮಾಡುವುದಿಲ್ಲ ಎಂದು ನಿರಾಕರಿಸಿದಳು.ಆಗ ಸುಬ್ಬನ ಸ್ನೇಹಿತನ ಪಾತ್ರವನ್ನು ಅಭ್ಯಾಸ ಮಾಡಿದ್ದ ಹೇಮಾಳಿಗೆ ಸುಬ್ಬಿ ಪಾತ್ರದ ಎಲ್ಲ ಸಂಭಾಷಣೆ ಬಾಯಿಗೆ ಬರುತ್ತಾ ಇತ್ತು‌‌.ಅವಳು ಸುಬ್ಬಿ ಪಾತ್ರ ಮಾಡಲು ಒಪ್ಪಿದಳು. ನನ್ನದ ಸುಬ್ಬ ಪಾತ್ರ .ಸ್ನೇಹಿತರ ಜಾಗಕ್ಕೆ ಇಬ್ಬರನ್ನು ಹೇಗೋ ಹುಡುಕಾಡಿ ಹೊಂದಾಣಿಕೆ ಮಾಡಿದೆವು.ಇಲ್ಲಿ ನನ್ನಂತೆ ಉತ್ಸಾಹದ ಹುಡುಗಿ ( ಈಗ ತಕ್ಷಣಕ್ಕೆ ಹೆಸರು ಬಾಯಿಗೆ ಬರುತ್ತಾ ಇಲ್ಲ) ಈಗ ಸುಂಕದ ಕಟ್ಟೆಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ.ನಾನು ಕೇರಳ ತುಳು ಅಕಾಡೆಮಿಯ ಕಾರ್ಯಕ್ರಮ ದಲ್ಲಿ ಇತ್ತೀಚೆಗೆ ಭೇಟಿ ಮಾಡಿ ಮಾತಾಡಿರುವೆ‌
 ಹೇಮಾಳಿಗೆ ಒಂದು ಕೊರವಂಜಿ ನೃತ್ಯ ಕೂಡ ಹೇಳಿ ಕೊಟ್ಟಿದ್ದೆ.ಅಂತೂ ಇಂತೂ ಯುವಜನೋತ್ಸವದ ಸ್ಪರ್ಧೆಯಲ್ಲಿ ನಮ್ಮ ನಾಟಕ ಪ್ರಥಮ ಬಹುಮಾನ ಪಡೆಯಿತು. ಸ್ಪರ್ಧಿಸಿದ್ದು ನಮ್ಮದು ಸೇರಿ ಮೂರು ತಂಡ ಅಷ್ಟೇ ,ಹುಡುಗಿಯರ ತಂಡ ನಮ್ಮದು ಮಾತ್ರ .ಜೊತೆಗೆ ನನ್ನ ಪೂಜಾ ನೃತ್ಯ ಮತ್ತು ಹೇಮಾಳ ಕೊರವಂಜಿ ನೃತ್ಯಕ್ಕೆ ಬೇರೆ ಸ್ಪರ್ಧಿಗಳು ಇರಲಿಲ್ಲ, ನಮಗೆ ಫಸ್ಟ್ ಸೆಕೆಂಡ್ ಬಹುಮಾನ ಕೊಟ್ಟರು.ಜಿಪ್ಪಿಗಳೆ ನಾವು ನಿಮ್ಮ ಮೊದಲು ಕಂಡಾಗ ಹಾಡಿಗೆ ನಾನು ಹೇಳಿ ಕೊಟ್ಟ ನೃತ್ಯವನ್ನು ಆ ಇಬ್ಬರು ಸಣ್ಣ ಹುಡುಗಿಯರು ಮಾಡಿದರು.ಅವರಿಗೂ ಬೇರೆ ಸ್ಪರ್ಧಿಗಳೇ ಇರಲಿಲ್ಲ, ಬಹುಶಃ ಅವರಿಗೆ ವಿಶೇಷ ಬಹುಮಾನ ಕೊಟ್ಟಿಬಹುದು.ಅಥವಾ ಮೊದಲ ಬಹುಮಾನ ಎಂದೇ ಕೊಟ್ಟಿದ್ದರೋ ಏನೋ ಗೊತ್ತಿಲ್ಲ.
ಇದು ಬಿಟ್ಟರೆ ಕಂಠ ಪಾಠ ಸ್ಪರ್ದೆ ಇತ್ತು‌.ಇದಕ್ಕೆ ಹತ್ತು ಹನ್ನೆರಡು ಜನ ಸ್ಪರ್ಧಿಗಳು ಇರುತ್ತಿದ್ದರು. ನಾನು ಈ ವಿಭಾಗದಲ್ಲೂ ಬಹುಮಾನ ಪಡೆದಿದ್ದೆ‌
ಅಂದಿನ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಬಂದಿದ್ದ ಅಲ್ಲಿನ ನಿವೃತ್ತ ಹಿಂದಿ ಶಿಕ್ಷಕರೂ ಸಾಹಿತಿಗಳೂ ಆಗಿದ್ದ ವಿಶ್ವೇಶ್ವರ ಭಟ್ ನಮ್ಮ ನಾಟಕವನ್ನು ನೋಡಿದ್ದು ಸಮಾರೋಪ ಭಾಷಣದಲ್ಲಿ ಇಂದು ಸುಬ್ಬನ ಪಾತ್ರ ವಹಿಸಿದ ಹುಡುಗಿಗೆ ದೊಡ್ಡ ಭವಿಷ್ಯ ಇದೆ   ಎಂದು ನನ್ನ ಕುರಿತು ಮೆಚ್ಚುಗೆಯ ಮಾತನ್ನು ಹೇಳಿದರು.

ಇದು ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಸುಬ್ಬನ ಪಾತ್ರವನ್ನು ಮಾತ್ರ ನೋಡಿದ್ದರು.ನನ್ನ ಹೆಸರು ಗೊತ್ತಿಲ್ಲದ ಕಾರಣ ಪಾತ್ರದ ಹೆಸರು ಹೇಳಿ ಮೆಚ್ಚುಗೆ ಮಾತು ಹೇಳಿದ್ದರು.ಎಲ್ಲಾ ಶಿಕ್ಷಕರೂ,ವಿದ್ಯಾರ್ಥಿಗಳೂ ದೊಡ್ಡದಾಗ ಕ್ಲಾಪ್ ಹಾಕಿದರು.
ಸಭೆಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು.
ಹೌದು ಅವರು ಹೇಳಿದ ಮಾತನ್ನು ಗಟ್ಟಿಯಾಗಿ ನೆಚ್ಚಿಕೊಂಡೆ.ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ.ಅಂದರೆ ನಾನು ಎಲ್ಲರಂತೆ ಸಾಮಾನ್ಯ ಳಾಗಿ ಇರುವುದಿಲ್ಲ, ನನಗೆ ದೊಡ್ಡ ಭವಿಷ್ಯ ಇದೆ ಎಂದು ನಾನು ನಂಬಿದೆ‌.
ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ
ಹುಡುಗಿ ಏನು ಓದಿದರೇನು ? ಅವಳಿಗೆ ಒಲೆ ಬೂದಿ ಗೋರುವ ಕೆಲಸ ತಪ್ಪದು ಎಂಬ ಮಾತು ನಮ್ಮಲ್ಲಿ ಪ್ರಚಲಿವಿತ್ತು.ಆದರೆ ಅಂದು ನಾನು ಕೇವಲ ಒಲೆ ಬೂದಿ ಗೋರಲು ಲಾಯಕ್ಕಾದವಳಾಗಿ ಉಳಿಯುವಿದಿಲ್ಲ..ನಾನು ಮುಂದೆ ತುಂಬಾ ಓದಬೇಕು ,ನನಗೆ ದೊಡ್ಡ ಭವಿಷ್ಯ ಸಿಗುತ್ತದೆ ಎಂದು ನಿರ್ಧರಿಸಿದೆ..
ಎಸ್ ಎಸ ಎಲ್ ಸಿಯಲ್ಲಿ ಫಸ್ಟ್ ಕ್ಲಾಸ್ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದೆ.ಮುಂದೆ ಓದಿದೆ. ಇಂದು ದೊಡ್ಡ ಭವಿಷ್ಯ ಸಿಗದೇ ಇದ್ದರೂ ಕೂಡ ನಾನು ನನ್ನತನವನ್ನು ಪಡೆಯುವಷ್ಟು ಭವಿಷ್ಯವನ್ನು ಪಡೆದೆ.
ಈ ನಾಟಕ ನಡೆಯುವಾಗ ಒಂದು ಪ್ರಮಾದ ಆಗಿ ಸಭೆಯಲ್ಲಿದ್ದವರೆಲ್ಲ ನಗಾಡಿದ್ದರು.ಸುಬ್ಬನಿಗೆ ಇಬ್ಬರು ಸ್ನೇಹಿತರಯ.ಅವರು ಬಂದಾಗ ವೆಲ್ ಕಂ್ ಮೈ ಫ್ರೆಂಡ್ಸ್,ಪ್ಲೀಸ್ ಬಿ ಸೀಟೆಡ್ ಎಂದು ಹೇಳಿದಾಗ ಅವರು ಕುಳಿತುಕೊಳ್ಳಬೇಕೆಂದು ಹೇಳಿಕೊಟ್ಟಿದ್ದೆ.ಆದರೆ ಅವರಿಗೆ ಕುಳಿತುಕೊಳ್ಳಲು ಅಲ್ಲಿ ಒಂದು ಖುರ್ಚಿ ಮಾತ್ರ ಇತ್ತು.ಇಬ್ಬರೂ ಒಂದೇ ಕುರ್ಚಿಯಲ್ಲಿ  ಕುಳಿಯರು.ಅದು ಎರಡು ಕೈ ಇರುವ ಹಳೆಯ ಮರದ ಕುರ್ಚಿ. ಮುರಿಯದ್ದು ನಮ್ಮ ಪುಣ್ಯ! ನಂತರ ಅವರು ಎದ್ದು ನಿಂತು ಮಾತನಾಡಲು ಇದೆ.ಏಳ ಹೊರಟಾಗ ಟೈಟ್ ಆಗಿ ಇಬ್ಬರಿಗೂ ಏಳಲಾಗುತ್ತಿಲ್ಲ..ಇವರ ಪರಿಸ್ಥಿತಿ ನೋಡಿ ಸಭೆಯ ಮಂದಿದ ಜೊತೆಯಲ್ಲಿ ಇವರುಗಳು ನಗುತ್ತಿದ್ದಾರೆ.ನನಗೋ ಆತಂಕ ಸಿಟ್ಟು.ಕುರ್ಚಿಯ ಹಿಂಭಾಗ ನಿಂತು ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಒಬ್ಬಳ ಬೆನ್ನಿಗೆ ಕುಟ್ಟಿದೆ.ಒಬಗಬಳು ಎದ್ದಳು.ಅಲ್ಲಿಗೆ ಸಮಸ್ಯೆ ಪರಿಹಾರ ಆಯ್ತು.ಅವರಿಬ್ಬರೂ ಏಕ ಕಾಲಕ್ಕೆ ಮೇಲೇಳಳು ಯತ್ನ ಮಾಡಿದ್ದರಿಂದ ಹೀಗಾಗಿತ್ತು.ತಪ್ಪು ನನ್ನದೇ ನಾನು ಅವರಿಗೆ ಕುಳಿಕೊಳ್ಳಲು ಎರಡು ಕುರ್ಚಿ ಇಡಬೇಕಾಗಿತ್್ತಯ.ಮೊದಲ ಬಾರಿಗೆ ವೇದಿಕೆ ಏರಿದ ಅವರಿಗೆ ಗೊಂದಲ ಆದದ್ದು ಸಹಜ..ನಕ್ಕದ್ದು ಮಾತ್ರ ಆಗ ತೀವ್ರ ಕೋಪ ಯರಿಸಿತ್ತು.ಆದರೆ ಸುಬ್ಬನಾಗಿ ವೇದಿಕೆ ಮೇಲೆ ಇದ್ದೆ ..ತೋರಿಸುವ ಹಾಗೆ ಇರಲಿಲ್ಲ.. ಈಗ ನೆನೆದರೆ ನಗು ಬರುತ್ತಿದೆ..ಅಂತೂ ಇಂತೂ ನಾಟಕ ಮಾಡಿ ಮೊದಲ ಬಹುಮಾನ ಪಡೆದು ಸ್ವರ್ಗ ಸಿಕ್ಕಂತೆ ಬೀಗಿದ್ದೆವು ನಾವು.
 

Category:Personal Experience



ProfileImg

Written by Dr Lakshmi G Prasad

Verified

0 Followers

0 Following