Do you have a passion for writing?Join Ayra as a Writertoday and start earning.

ಇರುವೆ ಬಲಶಾಲಿಯೋ ಆನೆ ಬಲಶಾಲಿಯೋ?

ಜೀವಿಗಳ ಗಾತ್ರದ ಪ್ರಾಮುಖ್ಯತೆ

ProfileImg
21 Mar '24
8 min read


image

     ನೀವು ಎಂದಾದರೂ ಇರುವೆಗಳು ಏನನ್ನಾದರೂ ಹೊತ್ತು ಸಾಗಿಸುವುದನ್ನು ನೋಡಿದ್ದೀರಾ? ಅಥವಾ ಸಗಣಿ ದುಂಬಿಗಳು ಸಗಣಿ ಉಂಡೆಗಳನ್ನು ತಮ್ಮ ಕಡ್ಡಿಯಂಥ ಕಾಲುಗಳಿಂದ ತಳ್ಳಿ ಸಾಗಿಸುವುದನ್ನು ಕಂಡಿದ್ದೀರಾ? ಕಂಡಿದ್ದರೆ ನಿಜಕ್ಕೂ ನೀವು ಆ ಕ್ಷುದ್ರಕೀಟಗಳ ಶಕ್ತಿಯನ್ನು ಕಂಡು ನಿಬ್ಬೆರಗಾಗದೆ ಇರಲಾರಿರಿ. ಏಕೆಂದರೆ ಈ ಕೀಟಗಳು ತಮಗಿಂತ ಎಷ್ಟೋ ಪಟ್ಟು ಹೆಚ್ಚಿನ ಭಾರವನ್ನು ಹೊತ್ತುಕೊಂಡೋ ಅಥವಾ ತಳ್ಳಿಕೊಂಡೋ ಸಾಗಿಸುತ್ತವೆ. ನಾವು ಮಹಾಬಲಶಾಲಿಗಳೆಂದುಕೊಂಡ ಎಷ್ಟೋ ಪ್ರಾಣಿಗಳು ವಾಸ್ತವವಾಗಿ ಈ ಕ್ಷುದ್ರಕೀಟಗಳ ಮುಂದೆ ದುರ್ಬಲವಾಗಿ ಕಾಣುತ್ತವೆ. ಹೌದು, ಏಕೆಂದರೆ ಒಂದು ಸಗಣಿ ಹುಳು, ತನ್ನ ತೂಕದ 1141 ಪಟ್ಟು ತೂಕವನ್ನು ಎಳೆಯಬಲ್ಲದು! ಒಂದು ಖಡ್ಗಮೃಗ ಜೀರುಂಡೆ ತನ್ನ ತೂಕದ 850 ಪಟ್ಟು ತೂಕವನ್ನು ಎಳೆಯಬಲ್ಲದು! ಆದರೆ ಭೂಮಿಯ ಮೇಲಿನ ಯಾವ ಆನೆಯೂ ತನ್ನ ತೂಕದ ಹಲವು ಪಟ್ಟು ತೂಕವನ್ನು ಎತ್ತಲಾರದು ಅಥವಾ ಎಳೆಯಲಾರದು. ಆರೇಳು ಟನ್‌ ತೂಗುವ ಆನೆಯೊಂದು ಹೆಚ್ಚೆಂದರೆ ತನ್ನ ತೂಕದಷ್ಟನ್ನೇ ಹೊರಬಲ್ಲದು ಅಷ್ಟೆ. ಹಾಗಾದರೆ ಆನೆಗಳ ಕಾಲಿನ ಉಗುರಿಗೂ ಸಮವಲ್ಲದ ಕೀಟಗಳಲ್ಲಿ ಇಂಥ ಅಗಾಧವಾದ ಶಕ್ತಿ ಹೇಗೆ ಬಂತು?

       ಇದಕ್ಕೆ ಉತ್ತರ ನಮ್ಮ ವಿಶ್ವದ ರಚನೆಯಲ್ಲೇ ಇದೆ. ನಮ್ಮದು ಮೂರು ಆಯಾಮಗಳ ವಿಶ್ವ. ಇಲ್ಲಿ ಯಾವುದೇ ವಸ್ತುವಿಗಾದರೂ ಉದ್ದ, ಅಗಲ ಮತ್ತು ಎತ್ತರ ಎಂಬ ಮೂರು ಆಯಾಮಗಳಿವೆ. ಇದು ಜೀವಿಗಳಿಗೂ ಅನ್ವಯಿಸುತ್ತದೆ. ಒಂದು ಅಡಿ ಉದ್ದದ ಒಂದು ಜೀವಿ, ಒಂದು ಕೆಜಿ ತೂಗುತ್ತದೆ ಎಂದು ಭಾವಿಸಿ. ಆ ಜೀವಿಯ ಕಾಲುಗಳು ಒಂದು ಇಂಚು ದಪ್ಪ ಹಾಗೂ ಅಗಲ ಇದೆಯೆಂದು ಭಾವಿಸಿಕೊಳ್ಳಿ. ಅಂದರೆ ಅದರ ಕಾಲಿನ ಮೂಳೆಗಳ ಕ್ಷೇತ್ರಫಲ ಒಂದು ಚದರ ಇಂಚು ಆಗುತ್ತದೆ. ಅಂಥ ನಾಲ್ಕು ಕಾಲುಗಳಿರುವ ಪ್ರಾಣಿಯೊಂದರ ಪ್ರತಿ ಕಾಲಿನ ಮೇಲೂ ತಲಾ 250 ಗ್ರಾಂ ಭಾರ ಬೀಳುತ್ತದೆ, ಅಂದರೆ ಅದರ ಕಾಲಿನ ಪ್ರತಿ ಚದರ ಇಂಚಿನ ಮೇಲೆ 250 ಗ್ರಾಂ ಭಾರ ಬೀಳುತ್ತದೆ. ಇದೇ ಜೀವಿ ಹತ್ತಡಿ ಉದ್ದವಿದೆಯೆಂದು ಭಾವಿಸಿ. ಅದರ ಉದ್ದ ಮಾತ್ರ ಹೆಚ್ಚುವುದಿಲ್ಲ, ಅದರ ಜೊತೆಗೇ ಅಗಲ ಮತ್ತು ಎತ್ತರಗಳೂ ಹೆಚ್ಚುತ್ತವೆ ಎಂಬುದನ್ನು ಮರೆಯಬಾರದು. ಅಂದರೆ ಆ ಜೀವಿಯ ಗಾತ್ರ ಹಾಗೂ ತೂಕ, ಒಂದಡಿಯ ಜೀವಿಯ ಸಾವಿರಪಟ್ಟು ಇರುತ್ತದೆ, ಅಂದರೆ ಸಾವಿರ ಕೆಜಿ ತೂಕ. ಈಗ ಇದರ ಪ್ರತಿ ಕಾಲಿನ ಮೇಲೆ 250 ಕೆಜಿ ಭಾರ ಬೀಳುತ್ತದೆ. ಆದರೆ ಕಾಲಿನ ಮೂಳೆಗಳ ಕ್ಷೇತ್ರಫಲ ಸಾವಿರಪಟ್ಟು ಹೆಚ್ಚಿರುವುದಿಲ್ಲ, ಕೇವಲ ನೂರು ಪಟ್ಟು ಮಾತ್ರ ಹೆಚ್ಚಿರುತ್ತದೆ. ಅಂದರೆ ಒಂದಡಿಯ ಜೀವಿಯ ಕಾಲಿನ ಮೂಳಗೆಳ ಕ್ಷೇತ್ರಫಲ ಒಂದು ಚದರ ಇಂಚಾದರೆ ಹತ್ತಡಿಯ ಜೀವಿಯಲ್ಲಿ ಅದು ನೂರು ಚದರ ಇಂಚುಗಳಾಗುತ್ತವೆ. ಅಂದರೆ ಪ್ರತಿ ಚದರ ಇಂಚಿನ ಮೇಲೆ ಎರಡೂವರೆ ಕೆಜಿ ಭಾರ ಬೀಳುತ್ತದೆ. ಇದೊಂದು ಸಣ್ಣ ಉದಾಹರಣೆಯಷ್ಟೇ. ಪ್ರಾಣಿಯ ದೇಹದ ತೂಕ ಅದರ ಅಳತೆಗಳ ಘನದಂತೆ (ಅಂದರೆ ಮೂರರ ಘಾತದಂತೆ) ಹೆಚ್ಚುತ್ತ ಹೋಗುತ್ತದೆ, ಆದರೆ ಅದರ ಕಾಲಿನ ಮೂಳೆಗಳ ವಿಸ್ತೀರ್ಣ ಕೇವಲ ಅದರ ವರ್ಗದಂತೆ (ಅಂದರೆ ಘಾತ ಎರಡರಂತೆ) ಮಾತ್ರ ಹೆಚ್ಚುತ್ತದೆ. ಹಾಗಾಗಿ ಹೆಚ್ಚು ತೂಕದ ಜೀವಿಗಳು ತಮ್ಮ ತೂಕವನ್ನು ಹೊರಲು ಹೆಚ್ಚು ಕಷ್ಟಪಡಬೇಕಾಗುತ್ತದೆ. ಏಕೆಂದರೆ ಅದರ ದೇಹದ ಅಳತೆ ಎರಡುಪಟ್ಟು ಹೆಚ್ಚಿದರೆ ಅದರ ಮೂಳೆಗಳ ಪ್ರತಿ ಚದರ ಸೆಂಟಿಮೀಟರ್‌ ವಿಸ್ತೀರ್ಣವೂ ಎರಡುಪಟ್ಟು ಹೆಚ್ಚು ತೂಕವನ್ನು ಹೊರಬೇಕಾಗುತ್ತದೆ. ಭಾರೀ ತೂಕದ ಪ್ರಾಣಿಗಳಾದ ಆನೆ, ಘೇಂಡಾಮೃಗ ಹಾಗೂ ನೀರಾನೆಗಳು ಅಗಲವಾದ ಕಂಬದಂಥ ಕಾಲುಗಳನ್ನು ಏಕೆ ಹೊಂದಿವೆ ಎಂಬುದು ಈಗ ಸ್ಪಷ್ಟವಾಯಿತಲ್ಲವೇ?

       ನೆಲವಾಸಿ ಪ್ರಾಣಿಗಳ ತೂಕಕ್ಕೊಂದು ಅಂತಿಮ ಮಿತಿ ಇದೆ ಎಂಬುದೂ ಇದರಿಂದಲೇ ಸ್ಪಷ್ಟವಾಗುತ್ತದೆ. ಯಾವುದೇ ಪ್ರಾಣಿಯ ಉದ್ದಗಲಗಳು ಎಷ್ಟು ಪಟ್ಟು ಹೆಚ್ಚುತ್ತದೆಯೋ ಅದರ ಕಾಲಿನ ಮೂಳೆಗಳ ಪ್ರತಿ ಚದರ ಸೆಂಟಿಮೀಟರ್‌ ವಿಸ್ತೀರ್ಣವೂ ಅಷ್ಟು ಪಟ್ಟು ಹೆಚ್ಚಿನ ಭಾರವನ್ನು ಹೊರಬೇಕಾಗುತ್ತದೆ. ಇದನ್ನು ಸರಿದೂಗಿಸಲು ಪ್ರಾಣಿಯ ಕಾಲುಗಳು ಹೆಚ್ಚು ದಪ್ಪವಾಗಿರಬೇಕಾಗುತ್ತದೆ. ಆದರೆ ಈ ದಪ್ಪವು ಪ್ರಾಣಿಯ ದೇಹದ ಗಾತ್ರ ಯಾವ ಅನುಪಾತದಲ್ಲಿ ಹೆಚ್ಚುತ್ತದೆಯೋ ಅದಕ್ಕಿಂತ ವೇಗವಾಗಿ ಹೆಚ್ಚಬೇಕಾಗುತ್ತದೆ. ಉದಾಹರಣೆಗೆ ಸಾಮಾನ್ಯ ಆನೆಯೊಂದು ಹನ್ನೆರಡು ಅಡಿ ಎತ್ತರವಿದೆಯೆಂದು ಭಾವಿಸಿಕೊಳ್ಳಿ. ಅದರ ದೇಹತೂಕ ಆರು ಟನ್‌ ಎಂದುಕೊಳ್ಳಿ. ಅದರ ಎತ್ತರ ಎರಡುಪಟ್ಟು ಹೆಚ್ಚಿದರೆ, ಅಂದರೆ ಇಪ್ಪತ್ನಾಲ್ಕು ಅಡಿ ಆದರೆ, ಅದಕ್ಕೆ ತಕ್ಕಂತೆ ಅದರ ಉದ್ದಗಲಗಳೂ ಹೆಚ್ಚುವುದರಿಂದ ಅದರ ತೂಕ ಎಂಟು ಪಟ್ಟು ಹೆಚ್ಚುತ್ತದೆ, ಅಂದರೆ ನಲವತ್ತೆಂಟು ಟನ್‌ ಆಗುತ್ತದೆ. ಆಗ ಅದರ ಕಾಲುಗಳು ಸಣ್ಣ ಆನೆಯ ಕಾಲುಗಳ ಎರಡುಪಟ್ಟು ಅಲ್ಲ, ಆದರೆ ನಾಲ್ಕುಪಟ್ಟು ವ್ಯಾಸ ಹೊಂದಿರಬೇಕಾಗುತ್ತದೆ. ಹೀಗಾಗಿ ಒಂದು ಹಂತದ ನಂತರ ಕಾಲುಗಳು ಎಷ್ಟು ಉದ್ದವಿದೆಯೋ ಅಷ್ಟೇ ದಪ್ಪ ಅಥವಾ ಅದಕ್ಕಿಂತ ದಪ್ಪವಾಗಿರಬೇಕಾದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದಲೇ ನೆಲವಾಸಿ ಪ್ರಾಣಿಗಳ ದೇಹಗಾತ್ರಕ್ಕೆ ಒಂದು ಮಿತಿಯಿದೆ. 

       ಆದರೆ ನೀರಿನಲ್ಲಿ ವಾಸಿಸುವ ಪ್ರಾಣಿಗಳಿಗೆ ಈ ಸಮಸ್ಯೆ ಇಲ್ಲ. ಏಕೆಂದರೆ ನೀರಿಗೆ ಒಂದು ವಿಶಿಷ್ಟ ಸಾಮರ್ಥ್ಯ ಇದೆ. ನೀರು ಹೇಗೆ ಕೆಳಕ್ಕೆ ಒತ್ತಡ ಹಾಕುತ್ತದೋ ಅದೇ ರೀತಿ ಮೇಲಕ್ಕೆ ಕೂಡ ಒತ್ತುತ್ತದೆ. ನೀವು ಎಂದಾದರೂ ಬಾವಿಯಿಂದ ನೀರು ಸೇದಿದ್ದರೆ ಇಂಥ ಅನುಭವ ಆಗಿರುತ್ತದೆ. ಎಲ್ಲಿಯವರೆಗೆ ಕೊಡ ನೀರಿನಲ್ಲಿ ಮುಳುಗಿರುತ್ತದೋ ಅಲ್ಲಿಯವರೆಗೆ ಸುಲಭವಾಗಿ ಮೇಲಕ್ಕೆಳೆಯಬಹುದು. ಆದರೆ ಕೊಡ ಒಮ್ಮೆ ನೀರಿನ ಮಟ್ಟವನ್ನು ದಾಟಿ ಮೇಲಕ್ಕೆ ಬಂದೊಡನೆಯೇ ನಿಮಗೆ ಹಠಾತ್ತಾಗಿ ಅದರ ತೂಕ ಹೆಚ್ಚಿದಂತೆ ಭಾಸವಾಗುತ್ತದೆ. ನೀರಿನೊಳಗೆ ಇರುವವರೆಗೂ ಕೊಡವನ್ನು ಮೇಲಕ್ಕೆತ್ತುತ್ತಿದ್ದ ಬಲ ಇಲ್ಲವಾಗುವುದೇ ಇದಕ್ಕೆ ಕಾರಣ. ಇದೇ ಬಲದ ಕಾರಣ ನೀರಿನಲ್ಲಿ ವಾಸಿಸುವ ಜೀವಿಗಳಿಗೂ ಅವುಗಳ ತೂಕವನ್ನು ಹೊರುವುದು ಸುಲಭ. ನೆಲವಾಸಿಗಳಂತೆ ತಮ್ಮ ಇಡೀ ದೇಹದ ತೂಕವನ್ನು ಕಾಲುಗಳ ಮೇಲೆ ಹೊತ್ತು ತಿರುಗುವ ಅಗತ್ಯ ಅವಕ್ಕೆ ಇಲ್ಲ. ಆದ್ದರಿಂದಲೇ ನೂರಾರು ಟನ್‌ ತೂಗುವ ಮಹಾಕಾಯದ ತಿಮಿಂಗಿಲಗಳು ಸಾಗರಗಳಲ್ಲಿ ಬದುಕಬಲ್ಲವು. ಭೂಮಿಯ ಗುರುತ್ವ ದೊಡ್ಡ ಜೀವಿಗಳಿಗೆ ಸಮಸ್ಯೆಯಾದಂತೆ ಸಣ್ಣ ಜೀವಿಗಳಿಗೆ ಸಮಸ್ಯೆಯಾಗಲಾರದು. ಇಪ್ಪತ್ತು-ಮೂವತ್ತು ಅಡಿ ಎತ್ತರದಿಂದ ನೆಲಕ್ಕೆ ಬೀಳುವ ಒಂದು ಕೀಟಕ್ಕೆ (ಅದು ಹಾರಲಾರದ ಕೀಟವಾದರೂ ಸರಿ) ಏನೂ ಆಗುವುದಿಲ್ಲ. ನೆಲ ಸಾಕಷ್ಟು ಮೃದುವಾಗಿದ್ದರೆ ಒಂದು ಇಲಿ ಕೂಡ ಅಷ್ಟು ಎತ್ತರದಿಂದ ಬಿದ್ದರೂ ಏನೂ ಆಗದೆ ನಡೆದುಹೋಗಬಲ್ಲದು. ಆದರೆ ಮನುಷ್ಯನೊಬ್ಬ ಅಷ್ಟು ಎತ್ತರದಿಂದ ಬಿದ್ದರೆ ಬದುಕುವುದೇ ಕಷ್ಟ. ಅವನ ತೂಕವೇ ಅವನಿಗಿಲ್ಲಿ ಶತ್ರುವಾಗುತ್ತದೆ. 

       ಹಾಗಿದ್ದರೆ ದೊಡ್ಡದಾಗಿರುವುದಕ್ಕಿಂತ ಚಿಕ್ಕದಾಗಿರುವುದು ಹೆಚ್ಚು ಅನುಕೂಲಕರವಲ್ಲವೇ? ಹಾಗೆಂದು ನಿರ್ವಿವಾದವಾಗಿ ಹೇಳಲಾಗುವುದಿಲ್ಲ. ಏಕೆಂದರೆ ಮೇಲ್ಕಂಡ ನಿದರ್ಶನಗಳಲ್ಲಿ ದೊಡ್ಡ ಜೀವಿಗಳಿಗಿಂತ ಚಿಕ್ಕ ಜೀವಿಗಳೇ ಅದೃಷ್ಟಶಾಲಿಗಳೆನಿಸಿದರೂ ಇನ್ನೂ ಕೆಲವು ವಿಷಯಗಳಲ್ಲಿ ದೊಡ್ಡ ಜೀವಿಗಳೇ ಹೆಚ್ಚು ಭಾಗ್ಯಶಾಲಿಗಳು. ನೀರಿನ ವಿಷಯಕ್ಕೆ ಬಂದರೆ ದೊಡ್ಡ ಜೀವಿಗಳಿಗೆ ಹೆಚ್ಚು ಭಯವಿಲ್ಲ. ಈಗಷ್ಟೇ ಸ್ನಾನ ಮಾಡಿ ಬಂದ ವ್ಯಕ್ತಿಯೊಬ್ಬನ ದೇಹದ ಮೇಲೆ ತೆಳ್ಳನೆಯ ನೀರಿನ ಪದರವೊಂದು ಇರುತ್ತದೆ. ಆದರೆ ವ್ಯಕ್ತಿಯ ದೇಹದ ತೂಕ್ಕೆ ಹೋಲಿಸಿದರೆ ಆ ಪದರ ಏನೇನೂ ಅಲ್ಲ. ಹಾಗಾಗಿ ಅದು ಇದೆ ಎಂಬುದೇ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಒದ್ದೆಯಾದ ಒಂದು ಇಲಿ ಹೆಚ್ಚುಕಡಿಮೆ ತನ್ನ ತೂಕದಷ್ಟೇ ನೀರನ್ನು ತನ್ನ ಮೈಮೇಲೆ ಹೊಂದಿರುತ್ತದೆ ಹಾಗೂ ಒದ್ದೆಯಾದ ಒಂದು ನೊಣ ತನ್ನ ತೂಕದ ಹಲವುಪಟ್ಟು ನೀರನ್ನು ಹೊರಬೇಕಾಗುತ್ತದೆ. ಹಾಗಾಗಿ ನೀರು ಕುಡಿಯುವಾಗ ನೊಣ ಅಥವಾ ಯಾವುದೇ ಕೀಟವಾದರೂ ಸಾಕಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಒಮ್ಮೆ ಒದ್ದೆಯಾದ ನೊಣ ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರುವುದು ಬಹಳ ಕಷ್ಟ. ಆದ್ದರಿಂದಲೇ ಹೆಚ್ಚಿನ ಕೀಟಗಳು ಉದ್ದನೆಯ ಮೂತಿಯ ಮೂಲಕ ನೀರಿನಿಂದ ಸಾಕಷ್ಟು ದೂರದಲ್ಲೇ ನಿಂತು ನೀರು ಕುಡಿಯುತ್ತವೆ. 

       ನಮ್ಮ ದೇಹವು ಉಷ್ಣತೆಯನ್ನು ಕಳೆದುಕೊಳ್ಳುವುದು ಚರ್ಮದ ಮೂಲಕ. ದೇಹದ ಹೊರಮೈ ವಿಸ್ತೀರ್ಣ ದೇಹದ ಉದ್ದಳತೆಗಳ ವರ್ಗದಂತೆ (ಅಂದರೆ ಎರಡರ ಘಾತದಂತೆ) ಹೆಚ್ಚುತ್ತದೆ, ಆದರೆ ತೂಕ ಅದರ ಘನದಂತೆ (ಮೂರರ ಘಾತದಂತೆ) ಹೆಚ್ಚುತ್ತದೆ. ಅಂದರೆ ದೇಹದ ತೂಕ ಹೆಚ್ಚಿದಷ್ಟು ವೇಗವಾಗಿ ಮೇಲ್ಮೈ ವಿಸ್ತೀರ್ಣ ಹೆಚ್ಚುವುದಿಲ್ಲ ಎಂಬುದು ಇದರಿಂದ ಸ್ಪಷ್ಟ. ಆದ್ದರಿಂದ ನಮಗೆ ತಿಳಿಯುವುದೇನೆಂದರೆ ಶಾಖವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ದೊಡ್ಡ ಪ್ರಾಣಿಗಳ ದೇಹವೇ ಸಣ್ಣಪ್ರಾಣಿಗಳ ದೇಹಕ್ಕಿಂತ ಹೆಚ್ಚು ಸಮರ್ಥವಾಗಿರುತ್ತವೆ. ಆದ್ದರಿಂದ ಶೀತಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು ಉಷ್ಣಪ್ರದೇಶದ ತಮ್ಮ ಸಂಬಂಧಿಗಳಿಗಿಂತ ದೊಡ್ಡದಾಗಿರುತ್ತವೆ. ಸೈಬೀರಿಯನ್‌ ಹುಲಿಗಳು ಭಾರತ, ಚೀನಾ ಅಥವಾ ಮಲೇಷ್ಯಾದ ಹುಲಿಗಳಿಗಿಂತ ದೊಡ್ಡದಾಗಿರುವುದಕ್ಕೆ ಇದೇ ಕಾರಣ. ಅಲ್ಲದೆ ಹಿಮಯುಗದಲ್ಲಿ ವಾಸಿಸುತ್ತಿದ್ದ ಜೂಲಾನೆಗಳು (ವೂಲೀ ಮ್ಯಮಾತ್‌ಗಳು) ಇಂದಿನ ಆನೆಗಳಿಗಿಂತಲೂ ದೊಡ್ಡದಾಗಿದ್ದುದಕ್ಕೂ, ಹಿಮಕರಡಿಗಳು ಬೇರೆ ಪ್ರದೇಶದ ಕರಡಿಗಳಿಗಿಂತ ದೊಡ್ಡದಾಗಿರುವುದಕ್ಕೂ ಇದೇ ಕಾರಣ. ಧೃವಪ್ರದೇಶಗಳಲ್ಲಿ ವಾಸಿಸುವ ಸೀಲ್‌, ಸಮುದ್ರಸಿಂಹ (ಸೀ ಲಯನ್)‌ ಹಾಗೂ ವಾಲ್ರಸ್‌ಗಳು ಸಹ ಮಹಾಕಾಯದ ಜೀವಿಗಳೇ ಎಂಬುದನ್ನು ಗಮನಿಸಿ.

       ಆದರೆ ಚಿಕ್ಕ ಜೀವಿಗಳ ದೇಹವು ಬಹಳ ಸರಳವಾಗಿರುತ್ತದೆ. ಒಂದು ಸೆಂಟಿಮೀಟರ್‌ಗಿಂತ ಚಿಕ್ಕಗಾತ್ರದ ಕೀಟಗಳ ದೇಹಕ್ಕೆ ಅಗತ್ಯವಾದ ಆಮ್ಲಜನಕ ಪ್ರತಿಯೊಂದು ಜೀವಕೋಶಕ್ಕೂ ಪೂರೈಕೆಯಾಗಲು ಯಾವುದೇ ವಿಶೇಷ ವ್ಯವಸ್ಥೆಯ ಅಗತ್ಯವಿಲ್ಲ. ಆಮ್ಲಜನಕದ ಅಣುಗಳ ಮಾಮೂಲಿ ಓಡಾಟವೇ (ಇದನ್ನು ವಿಸರಣ ಎನ್ನುತ್ತಾರೆ) ಇದಕ್ಕೆ ಸಾಕಾಗುತ್ತದೆ. ಅಂದರೆ ಈ ಪ್ರಕ್ರಿಯೆಯಲ್ಲಿ ಅಣುಗಳು ಒಂದಕ್ಕೊಂದು ಘರ್ಷಿಸಿ, ಅದರ ಮೂಲಕ ಚಲಿಸುವ ಪ್ರಕ್ರಿಯೆಯೇ ಇಡೀ ದೇಹಕ್ಕೆ ಚೈತನ್ಯವನ್ನು ಒದಗಿಸಲು ಸಾಕಾಗುತ್ತದೆ. ಜೊತೆಗೆ ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳೂ ಹೀಗೇ ನೇರವಾಗಿ ದೇಹದಿಂದಲೇ ಗಾಳಿಗೆ ವಿಸರ್ಜನೆಯಾಗುತ್ತವೆ. ಅದಕ್ಕಾಗಿ ವಿಶೇಷ ಅಂಗಾಂಗಗಳ ಅಗತ್ಯವಿಲ್ಲ. ಹಾಗಾಗಿ ಕೀಟಗಳೆಲ್ಲ ಸಾಮಾನ್ಯವಾಗಿ ಅರ್ಧ ಇಂಚು ಅಥವಾ ಅದಕ್ಕಿಂತ ಚಿಕ್ಕದಾಗಿರುತ್ತವೆ. ಆದರೆ ದೊಡ್ಡಗಾತ್ರದ ಸಸ್ತನಿ, ಸರೀಸೃಪ, ಹಕ್ಕಿಗಳು ಇತ್ಯಾದಿಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅವುಗಳ ದೇಹದ ಗಾತ್ರ ಹೆಚ್ಚಿರುವುದರಿಂದ ದೇಹದೆಲ್ಲೆಡೆಗೂ ಆಮ್ಲಜನಕದ ಪೂರೈಕೆ ಕೇವಲ ವಿಸರಣದಿಂದ ಸಾಧ್ಯವಿಲ್ಲ. ಆದ್ದರಿಂದ ಅದಕ್ಕೊಂದು ದ್ರವಮಾಧ್ಯಮ ಬೇಕೇಬೇಕು. ಹಾಗಾಗಿ ಅವು ರಕ್ತವನ್ನು ಹೊಂದಿವೆ. ರಕ್ತ ಇದ್ದಮೇಲೆ ಅದನ್ನು ಎಲ್ಲೆಡೆಗೆ ಪೂರೈಸಲು ರಕ್ತನಾಳಗಳ ವ್ಯವಸ್ಥೆ ಬೇಕು. ಆ ರಕ್ತವನ್ನು ಪಂಪ್‌ ಮಾಡಲು ಒಂದು ಹೃದಯ ಬೇಕು ಮತ್ತು ಅದಕ್ಕೆ ಆಮ್ಲಜನಕವನ್ನು ಸೇರಿಸಲು, ಉಸಿರಾಡಿದ ಬಳಿಕ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡನ್ನು ಆ ರಕ್ತದಿಂದ ತೆಗೆದುಹಾಕಲು ಒಂದು ವ್ಯವಸ್ಥೆ ಬೇಕು. ಹಾಗಾಗಿಯೇ ಈ ಜೀವಿಗಳಲ್ಲಿ ಶ್ವಾಸಕೋಶಗಳನ್ನೊಳಗೊಂಡ ಸಂಕೀರ್ಣ ಉಸಿರಾಟ ವ್ಯವಸ್ಥೆ ಇದೆ. ಈ ರಕ್ತದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸಂಸ್ಕರಿಸಿ ವಿಸರ್ಜಿಸಲು ಮೂತ್ರಪಿಂಡಗಳ ವ್ಯವಸ್ಥೆ ಇದೆ. 

       ನಮ್ಮ ಪಂಚೇಂದ್ರಿಯಗಳಲ್ಲಿ ಪ್ರಧಾನವಾದ ಅಂಗವೆಂದರೆ ಕಣ್ಣು. ಹೊರಜಗತ್ತಿನ ಬಗ್ಗೆ ನಾವು ತಿಳಿದುಕೊಳ್ಳುವ ಮಾಹಿತಿಗಳಲ್ಲಿ ಕಣ್ಣಿನ ಮೂಲಕ ಪಡೆದುಕೊಳ್ಳುವುದೇ ಸಿಂಹಪಾಲು ಎಂದರೆ ತಪ್ಪಾಗಲಾರದು. ಮನುಷ್ಯನ ಕಣ್ಣುಗಳು ಜೀವಲೋಕದಲ್ಲಿ ಸಾಕಷ್ಟು ದಕ್ಷತೆಯಿಂದ ರಚಿಸಲ್ಪಟ್ಟ ದ್ಯುತಿ ಉಪಕರಣಗಳಾಗಿವೆ. ಕಣ್ಣಿನಲ್ಲಿ ದಂಡಕೋಶಗಳು ಹಾಗೂ ಶಂಕುಕೋಶಗಳೆಂಬ ಎರಡು ಬಗೆಯ ಕೋಶಗಳಿರುತ್ತವೆ. ದಂಡಕೋಶಗಳು ಬೆಳಕನ್ನು ಸೆರೆಹಿಡಿದರೆ ಶಂಕುಕೋಶಗಳು ಬಣ್ಣಗಳನ್ನು ಗುರುತಿಸಲು ನೆರವಾಗುತ್ತವೆ. ಕಣ್ಣಿರುವ ಎಲ್ಲ ಪ್ರಾಣಿಗಳೂ ಜಗತ್ತನ್ನು ನಾವು ನೋಡುವಂತೆಯೇ ನೋಡಬಲ್ಲವು ಎಂದು ನಾವಂದುಕೊಂಡಿದ್ದರೆ ಅದು ತಪ್ಪು. ಏಕೆಂದರೆ ಕಣ್ಣುಗಳ ಗಾತ್ರ ಒಂದು ನಿರ್ದಿಷ್ಟ ಅಳತೆಗಿಂತ ಕಡಿಮೆಯಾಗಿದ್ದರೆ ನಾವು ನೋಡುವ ದೃಶ್ಯಗಳಲ್ಲಿ ಸ್ಪಷ್ಟತೆ ಇರುವುದಿಲ್ಲ. ಕಣ್ಣುಗಳಲ್ಲಿರುವ ಕೋಶಗಳ ಗಾತ್ರ ಕಡಿಮೆಯಿದ್ದು, ಅವುಗಳ ಸಂಖ್ಯೆ ಹೆಚ್ಚಿದ್ದಾಗ ಅಲ್ಲಿ ಮೂಡುವ ಬಿಂಬಗಳ ಗಾತ್ರವೂ ಚಿಕ್ಕದಾಗಿದ್ದು, ನಾವು ಸ್ಪಷ್ಟವಾಗಿ ನೋಡಲಾಗುವುದಿಲ್ಲ. ಹಾಗಾದರೆ ಕೋಶಗಳ ಗಾತ್ರವನ್ನು ಹೆಚ್ಚಿಸಿ, ಕಡಿಮೆ ಸಂಖ್ಯೆಯಲ್ಲಿ ಅವು ಇರುವಂತೆ ಮಾಡುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಏಕೆಂದರೆ ಕೋಶಗಳ ಗಾತ್ರ ದೊಡ್ಡದಾದರೆ ಎರಡು ಬೇರೆಬೇರೆ ವಸ್ತುಗಳ ಬಿಂಬಗಳು ಒಂದೇ ಕೋಶದ ಮೇಲೆ ಬೀಳುತ್ತದೆ. ಹಾಗಾದಾಗ ನಾವು ಆ ಎರಡು ವಸ್ತುಗಳನ್ನು ಪ್ರತ್ಯೇಕಿಸಿ ತಿಳಿಯಲಾರೆವು. ಅವೆರಡೂ ಒಂದೇ ಎಂಬ ಭ್ರಮೆ ನಮ್ಮಲ್ಲಿ ಮೂಡುತ್ತದೆ. ವಿಪರೀತ ದೂರದಲ್ಲಿರುವ ಎರಡು ವಸ್ತುಗಳನ್ನು ಕಂಡಾಗ ಅವು ಒಂದರಿಂದ ಇನ್ನೊಂದು ಸಾಕಷ್ಟು ದೂರದಲ್ಲಿದ್ದರೂ ಎರಡೂ ಒಂದೇ ಎಂಬಂತೆ ನಮಗೆ ಕಾಣುತ್ತದೆ ಅಲ್ಲವೇ? ಹಾಗಾಗಿ ಕೋಶಗಳ ಗಾತ್ರವೂ ಒಂದು ನಿರ್ದಿಷ್ಟ ಅಳತೆಗಿಂತ ಹೆಚ್ಚೂ ಆಗಬಾರದು ಅಥವಾ ಕಡಿಮೆಯೂ ಆಗಬಾರದು. ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಕೋಶಗಳು ಇರಬೇಕು. ಹಾಗಾಗಬೇಕಾದರೆ ಕಣ್ಣು ಸಾಕಷ್ಟು ದೊಡ್ಡದಾಗಿರಬೇಕಾದುದು ಅವಶ್ಯಕ. ಒಂದು ಇಲಿಯ ಕಣ್ಣು ಒಬ್ಬ ಮನುಷ್ಯನ ಕಣ್ಣಿನ ತದ್ವತ್ತಾದ ಮಿನಿ ರೂಪ ಅಲ್ಲ. ಆರಡಿಗಿಂತ ಹೆಚ್ಚು ದೂರದಲ್ಲಿರುವ ವ್ಯಕ್ತಿಗಳ ಮನುಷ್ಯರ ಮುಖವನ್ನು ಸ್ಪಷ್ಟವಾಗಿ ಗುರುತಿಸುವ ಸಾಮರ್ಥ್ಯ ಇಲಿಯ ಕಣ್ಣಿಗೆ ಇಲ್ಲ. 

       ಇಲಿಗಿಂತಲೂ ಚಿಕ್ಕದಾದ ಕೀಟಗಳ ವಿಷಯಕ್ಕೆ ಬಂದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಕೀಟಗಳ ಇಡೀ ದೇಹವೇ ಕೆಲವು ಮಿಲಿಮೀಟರುಗಳಷ್ಟೇ ಇರುವುದರಿಂದ ಅವುಗಳ ಕಣ್ಣುಗಳೂ ಸಹ ಇನ್ನಷ್ಟು ಚಿಕ್ಕದಾಗಿರುತ್ತವೆ. ಹಾಗಾಗಿ ಕೀಟವೊಂದು ಜಗತ್ತನ್ನು ನಾವು ನೋಡಿದಂತೆ ಸ್ಪಷ್ಟವಾಗಿ ನೋಡಲು ಸಾಧ್ಯವೇ ಇಲ್ಲ. ಅದರ ಕಣ್ಣುಗಳು ಸಾವಿರಾರು ಚಿಕ್ಕಚಿಕ್ಕ ಮಸೂರಗಳಿಂದಾದ ಸಂಕೀರ್ಣ ಕಣ್ಣುಗಳಾಗಿವೆ. ಅದರಿಂದ ಅವಕ್ಕೆ ವಸ್ತುಗಳನ್ನು ಗುರುತಿಸುವುದಕ್ಕಿಂತ ಚಲನೆಯನ್ನು ಗುರುತಿಸುವುದು ಸುಲಭವಾಗುತ್ತದೆ. ಹಾಗಾಗಿ ಅವಕ್ಕೆ ಏನೋ ಒಂದು ತಮ್ಮ ಬಳಿ ಬಂದಿದೆ ಎನ್ನುವುದಕ್ಕಿಂತ ಏನೋ ಚಲನೆ ಕಾಣಿಸಿದೆ ಎಂಬುದು ತಿಳಿಯುತ್ತದೆ. ಅಪಾಯವನ್ನು ಗುರುತಿಸಿ ಪಾರಾಗಲು ಇದು ಸಹಕಾರಿ. ಆದರೆ ಎದುರಿಗೆ ಬಂದಿರುವುದು ಮನುಷ್ಯನೋ ಅಥವಾ ಬೇರೆ ಪ್ರಾಣಿಯೋ ಎಂಬುದನ್ನು ಗುರುತಿಸುವ ಶಕ್ತಿ ಈ ಕಣ್ಣುಗಳಿಗೆ ಇಲ್ಲ. 

       ಹಾರಾಟದ ವಿಷಯಕ್ಕೆ ಬಂದರೆ ತೂಕ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಜೀವಿಯ ತೂಕ ಹೆಚ್ಚಿದಷ್ಟೂ ಹಾರಾಟಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಹಾರುವ ಜೀವಿಗಳ ತೂಕಕ್ಕೆ ಇರುವ ಮಿತಿ ನೆಲದ ಮೇಲೆ ಓಡಾಡುವ ಜೀವಿಗಳ ತೂಕಕ್ಕೆ ಹೋಲಿಸಿದರೆ ಬಹಳ ಕಡಿಮೆ. ಭೂಮಿಯ ಮೇಲೆ ಓಡಾಡುವ ಅತಿ ಭಾರವಾದ ಜೀವಿಯಾದ ಆನೆ ಏಳೆಂಟು ಟನ್‌ ತೂಗಿದರೆ ಗಾಳಿಯಲ್ಲಿ ಹಾರುವ ಅತಿ ಭಾರವಾದ ಪಕ್ಷಿಯಾದ ಬಸ್ಟರ್ಡ್‌ನ ತೂಕ ಇಪ್ಪತ್ತು ಕೆಜಿಗಿಂತ ಹೆಚ್ಚಿಲ್ಲ. ಏಕೆಂದರೆ ಗಾಳಿಯು ನೆಲಕ್ಕಿಂತ ಎಷ್ಟೋ ಸಾವಿರಪಟ್ಟು ಹಗುರವಾಗಿದ್ದು, ಜೀವಿಯೊಂದಕ್ಕೆ ನೆಲವು ನೀಡುವಂಥ ಬೆಂಬಲವನ್ನು ಗಾಳಿಯು ನೀಡಲಾರದು. ಗಾಳಿಯಲ್ಲಿದ್ದಷ್ಟು ಹೊತ್ತೂ ಗುರುತ್ವಕ್ಕೆ ವಿರುದ್ಧವಾಗಿ ಕೆಲಸಮಾಡಬೇಕಾಗಿರುವುದರಿಂದ ಜೀವಿಗಳು ಹಾರಾಡಲು ಹೆಚ್ಚಿನ ಶಕ್ತಿಯನ್ನು ವ್ಯಯಮಾಡಬೇಕಾಗುತ್ತದೆ. ಹಾಗಾಗಿಯೇ ಹಕ್ಕಿಗಳು ಅನೇಕ ದೈಹಿಕ ಮಾರ್ಪಾಡುಗಳ ಮೂಲಕ ತಮ್ಮ ದೇಹತೂಕವನ್ನು ಆದಷ್ಟು ಕಡಿಮೆಮಾಡಿಕೊಳ್ಳಲು ಬಯಸುತ್ತವೆ. ಟೊಳ್ಳಾದ ಎಲುಬುಗಳನ್ನು ಹೊಂದಿರುವುದು, ದೇಹದಲ್ಲಿ ಗಾಳಿಚೀಲಗಳನ್ನು ಹೊಂದಿರುವುದು, ಹಲ್ಲು ಮತ್ತು ರೆಕ್ಕೆಯಲ್ಲಿನ ಉಗುರುಗಳನ್ನು ತ್ಯಜಿಸಿರುವುದು, ಬಾಲದಲ್ಲಿರುವ ಮೂಳೆಗಳನ್ನು ತ್ಯಜಿಸಿರುವುದು, ಸ್ತನಿಗಳಂತೆ ಮರಿಗಳು ಸಂಪೂರ್ಣವಾಗಿ ಬೆಳೆಯುವವರೆಗೂ ಹೊಟ್ಟೆಯಲ್ಲಿಟ್ಟುಕೊಳ್ಳದೆ ಮೊಟ್ಟೆಯನ್ನೇ ಹೆರುವುದು ಇವೇ ಮುಂತಾದ ಕ್ರಮಗಳಿಂದ ತಮ್ಮ ತೂಕವನ್ನು ಆದಷ್ಟು ಕಡಿಮೆಯಾಗಿಟ್ಟುಕೊಂಡು ಅವು ಹಾರಾಟಕ್ಕೆ ಅನುಕೂಲಗಳನ್ನು ಮಾಡಿಕೊಂಡಿವೆ. ಹಾಗಿದ್ದೂ ಒಂದು ಗುಬ್ಬಚ್ಚಿ ಹಾರಿದಷ್ಟು ಸುಲಭವಾಗಿ ಪಾರಿವಾಳವೊಂದು ಹಾರಲಾರದು. ಆಲ್ಬಟ್ರಾಸ್‌, ಗ್ಯಾನೆಟ್‌, ಪೆಲಿಕನ್‌ ಮುಂತಾದ ಬೃಹದ್ಗಾತ್ರದ ಪಕ್ಷಿಗಳಿಗಂತೂ ಗುಬ್ಬಚ್ಚಿ, ಪಾರಿವಾಳಗಳಂತೆ ಹಾರಲು ಸಾಧ್ಯವೇ ಇಲ್ಲ. ಆದರೂ ಈ ಹಕ್ಕಿಗಳು ಅನೇಕ ಲಕ್ಷಾಂತರ ವರ್ಷಗಳಿಂದ ಅತ್ಯಂತ ಯಶಸ್ವಿ ಜೀವಿಗಳಾಗಿ ಭೂಮಿಯ ಮೇಲೆ ಬಾಳ್ವೆ ನಡೆಸಿವೆ. ಇದು ಹೇಗೆ ಸಾಧ್ಯ?

       ಇದಕ್ಕೆ ಉತ್ತರ ಪ್ರಕೃತಿಯಲ್ಲೇ ಇದೆ. ಗುಬ್ಬಚ್ಚಿ ಅಥವಾ ಪಾರಿವಾಳಗಳು ತಮ್ಮ ರೆಕ್ಕೆಗಳನ್ನು ವೇಗವಾಗಿ ಬಡಿಯುವ ಮೂಲಕ ಹಾರುತ್ತವೆ. ಝೇಂಕಾರದ ಹಕ್ಕಿಗಳಂತೂ ತಮ್ಮ ರೆಕ್ಕೆಗಳನ್ನು ಸೆಕೆಂಡಿಗೆ ಅಲವು ನೂರು ಸಾರಿ ಬಡಿಯಬಲ್ಲವು. ಆದರೆ ಹದ್ದೊಂದು ಇಷ್ಟು ವೇಗದಲ್ಲಿ ರೆಕ್ಕೆಗಳನ್ನು ಬಡಿಯಲು ಸಾಧ್ಯವೇ ಇಲ್ಲ. ಆದರೆ ಅವು ಹಾರಾಡಲು ಇನ್ನಷ್ಟು ದಕ್ಷವಾದ ವಿಧಾನವನ್ನು ಕಂಡುಕೊಂಡಿವೆ. ಅತ್ಯಂತ ಎತ್ತರದದಲ್ಲಿ ತಮ್ಮ ಅಗಲವಾದ ರೆಕ್ಕೆಗಳನ್ನು ಬಿಡಿಸಿ ಹಿಡಿದುಕೊಂಡು ಗಾಳಿಯ ಅಲೆಗಳ ಮೇಲೆ ತೇಲುತ್ತ ಗಂಟೆಗಟ್ಟಲೆ ಕಳೆಯಬಲ್ಲವು. ಅವುಗಳ ದೃಷ್ಟಿಶಕ್ತಿ ತುಂಬಾ ತೀಕ್ಷ್ಣವಾಗಿರುವುದರಿಂದ ಅಷ್ಟು ಎತ್ತರದಲ್ಲಿ ತೇಲುತ್ತಲೇ ನೆಲದ ಮೇಲೆ ಓಡಾಡುತ್ತಿರುವ ಸಣ್ಣ ಇಲಿಯನ್ನೂ ಗುರುತಿಸಿ ಎರಗಬಲ್ಲವು. 

       ಹಾರಾಟದಲ್ಲಿ ಅತ್ಯಂತ ಪ್ರಮುಖವಾದ ಮತ್ತು ಅತಿಹೆಚ್ಚು ಶಕ್ತಿಯನ್ನು ಬೇಡುವ ಹಂತವೆಂದರೆ ನೆಲದಿಂದ ಗಾಳಿಗೇರುವುದು. ಚಿಕ್ಕ ಪಕ್ಷಿಗಳು ಹೆಚ್ಚಿನ ಶ್ರಮವಿಲ್ಲದೆ ಜೋರಾಗಿ ರೆಕ್ಕೆ ಬಡಿಯುವ ಮೂಲಕ ನೆಲದ ಮೇಲಿಂದ ನೇರವಾಗಿ ಗಾಳಿಗೇರುತ್ತವೆ. ಆದರೆ ಆ ಭಾಗ್ಯ ಎಲ್ಲ ಪಕ್ಷಿಗಳಿಗೆ ಇಲ್ಲ. ಭಾರೀ ದೇಹವನ್ನು ಹೊಂದಿರುವ ಕಾರಣ ಆ ದೇಹಕ್ಕೆ ತಕ್ಕಂಥ ಭಾರೀ ರೆಕ್ಕೆಗಳನ್ನು ಹೊಂದಿರುವ ಹಕ್ಕಿಗಳು ಆ ಭಾರೀ ರೆಕ್ಕೆಗಳನ್ನು ಅಷ್ಟು ವೇಗವಾಗಿ ಬಡಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಡಲತೀರದಲ್ಲಿ ವಾಸಿಸುವ ಕೆಲವು ಹಕ್ಕಿಗಳು ತಾವು ವಾಸಿಸುವ ಎತ್ತರದ ದಿಬ್ಬದಿಂದ ಧುಮುಕುವ ಮೂಲಕ ಗಾಳಿಗೇರುತ್ತವೆ. ಆಲ್ಬಟ್ರಾಸ್‌ಗಳಂತೂ ವಿಮಾನಗಳಂತೆ ತಮ್ಮ ರೆಕ್ಕೆಗಳನ್ನು ಅಗಲಿಸಿ ಹಿಡಿದು ಒಂದಿಷ್ಟು ದೂರ ರನ್‌ವೇನಲ್ಲಿ ಓಡಿದಂತೆ ಓಡಿ ಗಾಳಿಗೇರುತ್ತವೆ. ಈ ಹಕ್ಕಿಗಳಿಗೆ ಗಾಳಿಗೇರುವುದು ಎಷ್ಟು ಕಷ್ಟವೋ ನೆಲಕ್ಕಿಳಿಯುವುದು ಕೂಡ ಅಷ್ಟೇ ಕಷ್ಟ. ನ್ಯೂಟನ್ನನ ನಿಯಮದ ಪ್ರಕಾರ ಚಲಿಸುತ್ತಿರುವ ವಸ್ತುವೊಂದರ ಆವೇಗ ಅದರ ತೂಕ ಮತ್ತು ವೇಗಗಳ ಗುಣಲಬ್ಧವಾಗಿರುತ್ತದೆ. ಅದನ್ನು ನಿಲ್ಲಿಸಬೇಕಾದರೆ ಅದರ ಮೇಲೆ ಪ್ರಯೋಗಿಸಬೇಕಾದ ಬಲವೂ ಈ ಆವೇಗವನ್ನು ಅವಲಂಬಿಸಿರುತ್ತದೆ. ಸಹಜವಾಗಿಯೇ ಹೆಚ್ಚು ತೂಕದ ವಸ್ತುಗಳ ಆವೇಗ ಹೆಚ್ಚಿರುವುದರಿಂದ ಅವುಗಳನ್ನು ನಿಲ್ಲಿಸಲು ಕೂಡ ಬಲಪ್ರಯೋಗಿಸಬೇಕಾಗುತ್ತದೆ. ಆಲ್ಬಟ್ರಾಸ್‌ಗಳ ವಿಷಯದಲ್ಲಿ ಹೀಗೇ ಆಗುತ್ತದೆ. ಹಾಗಾಗಿಯೇ ಅವು ನೆಲಕ್ಕಿಳಿಯುವಾಗ ಹೆಚ್ಚುಕಡಿಮೆ ಒಂದು ಚಿಕ್ಕ ಅಪಘಾತವನ್ನು ಎದುರಿಸಿದ ಅನುಭವವನ್ನೇ ಪಡೆಯುತ್ತವೆ. ಚಿಕ್ಕ ಪಕ್ಷಿಗಳಂತೆ ಸಲೀಸಾಗಿ ನೆಲಕ್ಕಿಳಿಯುವ ಅದೃಷ್ಟ ಅವಕ್ಕಿಲ್ಲ.

       ಹಾರಾಟಕ್ಕೆ ಇರುವ ಈ ಇತಿಮಿತಿಗಳೇ ಹದ್ದು, ಗಿಡುಗಗಳನ್ನು ಒಂದು ಮಿತಿಗಿಂತ ಹೆಚ್ಚು ದೊಡ್ಡದಾಗಿ ಬೆಳೆಯದಂತೆ ನಿರ್ಬಂಧಿಸಿವೆ. ಹಾಗಿಲ್ಲವಾದರೆ ಅವು ಹುಲಿಗಳಷ್ಟು ದೊಡ್ಡದಾಗಿ ಬೆಳೆದು ಮಾನವರಿಗೆ ಸಹ ದುಃಸ್ವಪ್ನವಾಗುತ್ತಿದ್ದವು!

ಗ್ರಂಥ ಋಣ: ಆನ್‌ ಬೀಯಿಂಗ್‌ ದ ರೈಟ್‌ ಸೈಜ್‌ (ಜೆ.ಬಿ.ಎಸ್.ಹಾಲ್ಡೇನ್)

Category : Nature


ProfileImg

Written by Srinivasa Murthy