ಸಾವು ದುಃಖವೋ? ಇಲ್ಲ ಸಂಭ್ರಮವೋ?

ಸಾವುಗಳ ಸುತ್ತಮುತ್ತ ಬದುಕುಗಳು...

ProfileImg
07 Apr '24
9 min read


image

'ಲೈಫ್ ಈಸ್ ಬ್ಯೂಟಿಫುಲ್' ಹೀಗಂತ ತುಂಬಾ ಜನ ಹೇಳುತ್ತಾರೆ. ಹಾಗಂತ ನಿಜಕ್ಕೂ ಜೀವನ ಅಷ್ಟು ಸುಂದರವಾಗಿದೆಯೇ? ವಾಸ್ತವಕ್ಕೆ ಜೀವನವೆಂದರೆ; ಸುಂದರವಲ್ಲ ಹಾಗಂತ ಅದು ದುಃಖಮಯವೂ ಅಲ್ಲ.

ಜೀವನವೆಂದರೆ ಒಂದು ನಿತ್ಯ ಪಯಣ. ದುಃಖವನ್ನು ಒಡಿನಲ್ಲಿನಲ್ಲಿಟ್ಟುಕೊಂಡು ಸುಖಕ್ಕಾಗಿ ಹಂಬಲಿಸುತ್ತ ಓಡುತ್ತಲೇ ಇರುವ ಒಂದು ಪಯಣ. ವಾಸ್ತವಕ್ಕೆ ಜೀವನವೆಂದರೆ ಎಲ್ಲಿಯೂ ನಿಲ್ಲದ ಒಂದು ಪಯಣ. ಅಲ್ಲಿ ಎಲ್ಲವೂ ಇದ್ದು ಇಲ್ಲದಂತಹ ಒಂದು ಮಾಯೆ.

ಬೇರೆ ಇತರ ಎಲ್ಲ ಪಯಣಗಳಿಗೂ ಒಂದು ಆರಂಭ ಮತ್ತು ಅಂತ್ಯಗಳೆರಡನ್ನು ನೀವುಗಳೇ ನಿರ್ಧರಿಸಿಕೊಂಡು ಮುನ್ನಡೆಯುತ್ತೀರಿ. ಬೆಳಗೆದ್ದು ಆಫೀಸ್ಗೆ ಹೋಗುತ್ತೀರಿ ಸಂಜೆ ಮನೆಗೆ ಬರುತ್ತಿರಿ ಇಲ್ಲಿಗೊಂದು ಪಯಣ ಮುಗಿತು. ರಾತ್ರಿ ಮಲಗುತ್ತೀರಿ ಬೆಳಗ್ಗೆ ಎದ್ದೇಳುತ್ತೀರಿ ಇಲ್ಲಿಗೊಂದು ಕೆಲಸವಾಯಿತು. ಹೀಗೆ ಪ್ರತಿಯೊಂದು ಕೆಲಸಕ್ಕೂ ಅಥವಾ ಪಯಣಕ್ಕೂ ಒಂದು ಆದಿ, ಅಂತ್ಯಗಳೆರಡು ನೀವು ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಅದು ನಿರ್ಣಯವಾಗುತ್ತದೆ. ರಾತ್ರಿ ಹತ್ತಕ್ಕೆ ಮಲಗಬಹುದು, ಮಧ್ಯರಾತ್ರಿ 12 ಬೇಕಾದರೂ ಮಲಗಬಹುದು. ಬೆಳಗ್ಗೆ ಆರಕ್ಕೆ ಎದ್ದೇಳಬಹುದು ಎಂಟಕ್ಕೂ ಸಹ ಎದ್ದೇಳಬಹುದು, ಅದು ನೀವು ತೆಗೆದುಕೊಳ್ಳುವ ನಿರ್ಣಯ. ಆದರೆ ನಿಮ್ಮ ಬದುಕಿನ ಪಯಣದಲ್ಲಿ ಮಾತ್ರ ಅದು ಸಾಧ್ಯವಿಲ್ಲ. ನಿಮ್ಮ ಬದುಕಿನ ಆರಂಭದ ಪಯಣದಲ್ಲಿ (ಹುಟ್ಟಿನಲ್ಲಿ) ನಿಮ್ಮ ಪಾತ್ರವಿಲ್ಲ. ನಾಳೆ ನಿಮ್ಮ ಜೀವನದಲ್ಲಿ ಎದುರಾಗಬಹುದಾದ ನಿಮ್ಮ ಸಾವಿನಲ್ಲೂ  ನಿಮ್ಮ ಪಾತ್ರವೇನು ಇರುವುದಿಲ್ಲ! 

ಹೌದು, ಕೆಲವೊಮ್ಮೆ ಸಾವುಗಳಲ್ಲಿ ವ್ಯಕ್ತಿಯ ಪಾತ್ರವೂ ಸಹ ಇರುತ್ತದೆ. ಯಾವಾಗ ನೀವು ಆತ್ಮಹತ್ಯೆಗೆ ಆಲೋಚಿಸುತ್ತೀರಿ ನಿಶ್ಚಯವಾಗಿ ಆ ಸಾವಿನಲ್ಲಿ ನಿಮ್ಮ ಪಾತ್ರವಿರುತ್ತದೆ. ಆದಾಗ್ಯೂ, 'ಆ ಸಾವಿನಲ್ಲೂ ನಿಮ್ಮ ಪಾತ್ರವಿಲ್ಲ' ಅಂತಲೇ ನಾನು ಹೇಳುತ್ತೇನೆ. ಆತ್ಮಹತ್ಯೆ ಎಂಬುವುದು ನೀವು ಸ್ವಯಂ ತೆಗೆದುಕೊಳ್ಳುವಂತಹ ಒಂದು ನಿರ್ಣಯವಾದರೂ, ಆದರೆ ಆ ನಿರ್ಣಯದ ಹಿಂದೆ ಒಂದು ಒತ್ತಡ, ದುಃಖ, ನೋವು,  ಹತಾಶೆ ಯಾವುದೋ ಒಂದು ಮನೆ ಮಾಡಿರುತ್ತದೆ. ಯಾವುದೋ ಒಂದು ಹತಾಶೆಯ ಕ್ಷಣ ನೀವು ಜೀವದ ಉಸಿರನ್ನು ತ್ಯಜಿಸುವ ನಿರ್ಣಯಕ್ಕೆ ಬಂದುಬಿಡುತ್ತೀರಿ. ಅಂದರೆ ಆತ್ಮಹತ್ಯೆಯ ಹಿಂದಿರುವ ಕಾರಣ ಮಾತ್ರ ಎದುರಿಗೆ ಎದುರಾಗುತ್ತಿರುವ ಸಮಾಜವನ್ನು ಎದುರಿಸಲಾಗದ ಅಸಹಾಯಕತೆ, ಪ್ರಯತ್ನದಲ್ಲಿನ ಸೋಲು, ಹಣಕಾಸಿನ ಸಮಸ್ಯೆ, ಪ್ರೀತಿಯ ವೈಫಲ್ಯ ಹೀಗೆ ಕಾರಣ ಏನೋ ಒಂದು ಇದ್ದೇ ಇರುತ್ತೆ!

ಇನ್ನು ಅನೇಕರು ಅನಾರೋಗ್ಯದ ಕಾರಣದಿಂದಾಗಿ  ಸಾವಿಗೀಡಾಗುತ್ತಾರೆ. ಸಣ್ಣ ವಯಸ್ಸಿನಲ್ಲೇ ಹೃದಯಘಾತ, ಕ್ಯಾನ್ಸರ್ ನ ಮಾರಣಾಂತಿಕ ಸಮಸ್ಯೆಗೂ ಬಲಿಯಾಗುತ್ತಾರೆ. ಕೆಲವರು ಆಕ್ಸಿಡೆಂಟ್ ಇಂದ ಸಾಯುತ್ತಾರೆ. ಮತ್ತೆ ಕೆಲವರು ದ್ವೇಷಕ್ಕೆ ಬಲಿಯಾಗುತ್ತಾರೆ ಕೊಲೆಗಳಾಗಿ ಹೋಗುತ್ತಾರೆ. ಹೀಗೆ  ಬಾಳಿ ಬದುಕಬೇಕಾದ ಅನೇಕರು ಸಣ್ಣ ವಯಸ್ಸಿಗೆ ಇಹಲೋಕದ ವ್ಯಾಪಾರವನ್ನು ಮುಗಿಸುತ್ತಾರೆ. ಇಂತಹ ಸಾವು ಆ ಕುಟುಂಬಕ್ಕೆ ಕೊಡುವ ದುಃಖವಿದೆಯಲ್ಲ ಅದು ಸಹಿಸಿಕೊಳ್ಳಲಾಗದೆ ಅವರು ಬದುಕಿರುವಷ್ಟು ಕಾಲವು ಬದುಕಿ ಸಾಯುತ್ತಿರುತ್ತಾರೆ.

ಆದರೆ ಇದಕ್ಕೆ ತದ್ವಿರುದ್ಧವಾಗಿ, ಇನ್ನು ಕೆಲವರು ಬಹುಕಾಲ ಬದುಕುತ್ತಾರೆ. ಆದರೆ ಬದುಕಿದಷ್ಟು ಕಾಲ ಅವರು ಬೆಡ್ ರಿಟರ್ನ್ ಆಗಿ ಅನಾರೋಗ್ಯದಿಂದ ಬಳಲುತ್ತಾ 'ಅಪ್ಪ ದೇವರೇ ನನ್ನನ್ನ ಬೇಗ ಕರೆಸಿಕೊಂಡು ಬಿಡು...' ಅಂತ ನಿತ್ಯ ಕಣ್ಣೀರು ಹಾಕುತ್ತಾ ಕಾಲಕ್ಕಾಗಿ ಎದುರು ನೋಡುತ್ತಿದ್ದರೆ, ಅವರನ್ನು ನೋಡಿಕೊಳ್ಳುವ ಮಕ್ಕಳು, ಇತರರು ಕೂಡ 'ಯಾವಾಗ್ ಸಾಯ್ತಾರೋ ಇವರು' ಅನ್ನುವ ಭಾವನೆಯಲ್ಲಿಯೇ ಅವರೊಂದಿಗೆ ವ್ಯವಹರಿಸುತ್ತಿರುತ್ತಾರೆ. ಇಂತಹ ಸಾವಿನಲ್ಲಿ ಎರಡು ತರದ ಸಂತೋಷಗಳಿರುತ್ತವೆ. 

ಮೊದಲನೇ ಸಂತೋಷ ದೀರ್ಘಕಾಲದಿಂದ ಎದುರು ನೋಡುತ್ತಿದ್ದ ಸಾವು ಆ ಆ ಹಿರಿಯ ಜೀವಕ್ಕೆ ಜೀವನ್ಮುಕ್ತಿ ಕರುಣಿಸುತ್ತದೆ. ಆ  ಹಿರಿಯರನ್ನು ಪೋಷಣೆ ಮಾಡುವುದು ಒತ್ತಡವೆಂದು ಭಾವಿಸುವ ಮತ್ತು ಆ ವ್ಯಕ್ತಿ ಎಂದು ಸಾಯುತ್ತಾನೆ ಅಂತ ನೋಡುತ್ತಿರುವ ಕುಟುಂಬಕ್ಕೂ ಆ ಸಾವು ಒಂದು ರೀತಿಯ ಸಂಭ್ರಮವನ್ನೇ ತಂದುಕೊಡುತ್ತದೆ.ಯೋಚಿಸಿ ನೋಡಿ ಇಂತಹದು ಸಾವಿನ ಸಂತೋಷವನ್ನು ಸಂಭ್ರಮಿಸುವವರು ಅನೇಕರು ನಮ್ಮ ಸುತ್ತಲೂ ಇದ್ದಾರೆ.

ಸಾವು ನಿಜಕ್ಕೂ ದುಃಖವೋ? ಇಲ್ಲ ಸಂಭ್ರಮವೋ?

ಮೇಲಿನ ಯಾವ ಸಾವುಗಳಲ್ಲಿ ಕೂಡ ಒಂದು ಸಂಭ್ರಮದ ಭಾವ ಇರಲಾರದು. ಏಕೆಂದರೆ ಕೆಲವು ಸಾವುಗಳು ಆಕಸ್ಮಿಕ ಮತ್ತೆ ಕೆಲವು ಸಾವುಗಳು ಸುಧೀರ್ಘಕಾಲದ ನಿರೀಕ್ಷೆಯ ಫಲವಾಗಿದೆ. ಸಾವುಗಳು ಕುಟುಂಬದ ಸಂತೋಷವನ್ನು ಶಾಶ್ವತವಾಗಿ ಕಿತ್ತುಕೊಂಡರೆ ಮತ್ತೆ ಕೆಲವು ಸಾವುಗಳು (ಹಿರಿಯರದು/ಬಹುಕಾಲ ಅನಾರೋಗ್ಯದಿಂದ ಬಳಲುತ್ತಿರುವುದು) ‘ಅಬ್ಬಾ! ಪೀಡೆ ತೊಲಗಿತು’ ಅನ್ನುವ ಭಾವನೆಯನ್ನಷ್ಟೇ ಆ ಕುಟುಂಬಕ್ಕೆ, ಅಂತದೊಂದು ಸಾವಿಗಾಗಿ ಎದುರು ನೋಡುವವರಿಗೆ ಕೊಡುತ್ತದೆ ಹೊರತು ಅದು ಯಾವುದೇ ಒಂದು ರೀತಿಯ ಸಮಾಧಾನವನ್ನು ನೀಡಲಾರದು.

ಆದರೆ ನಿಜಕ್ಕೂ ಕೂಡ ಒಂದು ಸಂಭ್ರಮದ ಸಾವು ಯಾವುದು? ವ್ಯಕ್ತಿ ಅದು ಹೆಣ್ಣು ಅಥವಾ ಗಂಡು ಯಾರೇ ಆಗಬಹುದು. ಒಂದು ಸುದೀರ್ಘ ದಾಂಪತ್ಯವನ್ನು ಕಂಡು, ಅದರೊಳಗೆ ಅನೇಕ ತರದ ಕಷ್ಟಗಳನ್ನು ಸಹಿಸಿಕೊಂಡು ಬದುಕನ್ನು ಹಿಗ್ಗಿಸಿಕೊಂಡು, ಮಕ್ಕಳನ್ನು ಬೆಳೆಸಿಕೊಂಡು ಅವರಿಗೊಂದು ಬದುಕನ್ನು ಕಟ್ಟಿ,ಮಕ್ಕಳಿಗೂ ಕೂಡ ಮದುವೆ ಸಂಸಾರವನ್ನು ರೂಪಿಸಿ, ಮರದಂತೆ ಬೆಳೆದು ನಿಂತ ಮೊಮ್ಮಕ್ಕಳನ್ನು ನೋಡಿ, ಸಹಸ್ರ ದರ್ಶನ ಮಾಡಿ ಹೋಗುವ ಜೀವಗಳದು ತಂದು ಸಂತೃಪ್ತವಾದ ಸಾವು. ಇನ್ನು ಮತ್ತಷ್ಟು ಜೀವಗಳು ಮೊಮ್ಮಕ್ಕಳ ಮದುವೆಯನ್ನು ಕೂಡ ಕಂಡು, ಮರಿ ಮೊಮ್ಮಗನನ್ನು ಕಂಡು ಕಕನಕಾಭಿಷೇಕವನ್ನು ಮಾಡಿಸಿಕೊಳ್ಳುವ ಜೀವ ಅದೆಷ್ಟು ಆನಂದ ಮತ್ತು ಸಂಭ್ರಮದ ಜೀವವಾಗುತ್ತದೆ ಆ ಕ್ಷಣಕ್ಕೆ!

ಸಹಸ್ರ ದರ್ಶನ ಮಾಡಿದ ಜೀವವಾಗಬಹುದು ಕನಕಾಭಿಷೇಕ ಮಾಡಿಸಿಕೊಂಡರೆ ಜೀವವಾಗಬಹುದು, ಅಂತಹ ಒಂದು ಸಂತೋಷದ ಕ್ಷಣದಲ್ಲಿ ಆ ಜೀವ ಮತ್ತೆ ತಲೆಯೆತ್ತಿ ಭಗವಂತನ ಕಡೆಗೆ ನೋಡುತ್ತಾ ಹೇಳೋದು ಒಂದೇ ಮಾತು 'ಅಪ್ಪ ಈ ಸಂತೋಷ... ಈ ಸಂಭ್ರಮದ ಕ್ಷಣ ಮುಗಿಯೋದಕ್ಕೆ ಮೊದಲೇ ನನ್ನನ್ನ ಕರೆಸಿಕೊಂಡು ಬಿಡು'. ಹಾಗೆ ಹೇಳೋದಕ್ಕೆ ಒಂದು ಕಾರಣವೂ ಇದೆ. 

ಜೀವನದಲ್ಲಿ ಸಂತೋಷದ ಸಂಭ್ರಮ ಕ್ಷಣಿಕ ಮಾತ್ರ ಅದು ಬಹಳ ಬೇಗ ಹೊರಟು ಹೋಗುತ್ತದೆ. ಪ್ರತಿಯೊಂದು ಜೀವಿಗೂ ಒಂದು ಸಾವಿನ ದಿನಾಂಕವಿರುತ್ತದೆ.  ಆ ವಯಸ್ಸಿನಲ್ಲಿ ಸಂತೋಷದ ಹಿಂದೆ ಯಾವುದಾದರೂ ಒಂದು ದುಃಖದ ಹೊಡೆತ ಮನಸ್ಸಿಗೆ ಬಿದ್ದರೆ ಅಲ್ಲಿವರೆಗೂ ಜೀವನದಲ್ಲಿ ಕಂಡಿದ್ದ ಆ ಎಲ್ಲ ಸಂತೋಷ ಕಳೆದು ಹೋಗುತ್ತದೆ. ಆ ಕ್ಷಣದ ದುಃಖ ಇಡೀ ಬದುಕಿನ ಅಲ್ಲಿವರೆಗಿನ ಎಲ್ಲಾ ಭಾವನೆಗಳ ಸಂತೋಷಗಳನ್ನು ನಾಶಗೊಳಿಸಿ ಯಮ ಯಾತನೆಗೆ ಗುರಿಪಡಿಸಿಬಿಡುತ್ತದೆ. ಆ ವಯಸ್ಸಿನಲ್ಲಿ ಆ ಜೀವಕ್ಕೆ ಅದನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. ಹೀಗಾಗಿ ಸಂತೋಷವಿದ್ದಾಗಲೇ ಹೊರಟುಬಿಡಬೇಕೆಂಬ ಹಂಬಲ ಮತ್ತು ಬದುಕಿನ ಆಸೆ ಕೂಡ ಆಗಿ ಹೋಗುತ್ತದೆ. 

ಒಂದು ಜೀವ ಪರಿಪೂರ್ಣವಾಗಿ ಸಹಸ್ರ ಚಂದ್ರ ದರ್ಶನ ಅಂದರೆ 80 ವರ್ಷ, ಇಲ್ಲ ಮರಿ ಮೊಮ್ಮಗನನ್ನು ಕಂಡು ಕನಕಾಭಿಷೇಕ ಮಾಡಿಸಿಕೊಂಡ ಜೀವವೊಂದು ಜೀವ ಬಿಟ್ಟ ದಿನ, ಅವರ ಸಾವಿನ ಬಗ್ಗೆ ಮಾತಾಡೋದಕ್ಕಿಂತ ಆ ಜೀವ ಬದುಕಿದ ರೀತಿಯ  ಬಗ್ಗೆನೇ.ಅಲ್ಲಿ ನೆರೆದವರು ಹೆಚ್ಚಿಗೆ ಮಾತನಾಡುತ್ತಾರೆ. 'ಇಷ್ಟು ಕಾಲ ಬದುಕಿದ್ದ ಅವರು ಹೇಗೆಲ್ಲಾ ಜೀವನವನ್ನು ಮಾಡಿದರು, ಕುಟುಂಬವನ್ನು ಹೇಗೆ ಮುನ್ನಡೆಸಿದರು, ಅವರ ಗುಣ ಸ್ವಭಾವ ಆದರ್ಶಗಳ ಬಗ್ಗೆನೇ' ಕೆಲವರು ಮಾತನಾಡುತ್ತಿರುತ್ತಾರೆ ಉಳಿದವರು ಆಸಕ್ತಿಯಿಂದ ಅದನ್ನು ಕೇಳಿ ಆಲಿಸುತ್ತಿರುತ್ತಾರೆ. ಅಂತಹವರ ಬಗ್ಗೆಹೇಳುತ್ತಿದ್ದರೆ, ಕೇಳುವವರೆಗೂ ಕೂಡ ಅದೊಂದು ರೀತಿಯಲ್ಲಿ ಮುದ ಕೊಡುತ್ತದೆ. ಆ ಸಾವಿಗೂ ಒಂದು ಸಂಭ್ರಮ,  ಇಂತಹವರ ಸಾವಿನ ಬಗ್ಗೆ ಹೇಳುವಾಗ ಕೇಳುವವರಿಗೂ, ಹೇಳುವವರೆಗೂ ಇಬ್ಬರಿಗೂ ಒಂದು ದಿವ್ಯಾನುಭೂತಿಯ ಭಾವ. 

ಒಮ್ಮೆ ಅವಲೋಕಿಸಿ ನೋಡಿ ಸಹಸ್ರ ದರ್ಶನ ಸೇರಿದಂತೆ ಇತರ ಯಾವುದೇ ಒಂದು ಹಿರಿಯರಿಗೆ ಶುಭಪ್ರದವಾದ ಕಾರ್ಯವನ್ನು ಹಮ್ಮಿಕೊಂಡ ಕೆಲವೇ ದಿನಕ್ಕೆ ಅವರು ಪರಮಪದಿಸುತ್ತಾರೆ. ಏಕೆಂದರೆ ಅದು ಅವರ ಕೊನೆಯ ಇಚ್ಛೆಯಾಗಿರುತ್ತದೆ, ಮತ್ತದನ್ನೇ ಅವರು ಆ ಸಂದರ್ಭದಲ್ಲಿ ಭಗವಂತನಲ್ಲಿ ಹರಕೆ ಮಾಡಿಕೊಂಡಿರುತ್ತಾರೆ. ಹಾಗಂತ ಎಲ್ಲರಿಗೂ ಇಂತಹದೊಂದು ಅದೃಷ್ಟ ಜೀವನದಲ್ಲಿ ಇರಲಾರದು. ಹಾಗೆ ನೋಡುವುದಾದರೆ ಜೀವನಕ್ಕೂ ಮತ್ತು ಅದೃಷ್ಟಕ್ಕೂ ಆಗಿ ಬರುವುದಿಲ್ಲ. ಅದೃಷ್ಟ ಅನ್ನುವುದು ಒಂದು ಪಾಸಿಂಗ್ ಕ್ಲೌಡ್ ಇದ್ದಂಗೆ. ಅದರಿಂದ ಹೇಗೆ ನೀವು ಮಳೆಯನ್ನು ನಿರೀಕ್ಷಿಸಲಾಗದೋ ಹಾಗೆಯೇ ಅದೃಷ್ಟದಿಂದ ಬದುಕಿನಿಗೊಂದು ಬದಲಾವಣೆ ಬದ್ಧತೆ ಮತ್ತು ಗುರಿಯನ್ನು ಕಟ್ಟಿಕೊಳ್ಳಲಾಗದು. 

ಅದೃಷ್ಟ ಅನ್ನೋದು ಒಂದು ಶಾರ್ಟ್ ಕಟ್ ಅಲ್ಲಿ ಸಂತೋಷಕ್ಕೊಂದು ದಾರಿ ಹುಡುಕುವ ಪ್ರಯತ್ನ. ಅಥವಾ ಆಕಸ್ಮಿಕವಾಗಿ ಎದುರಾಗಿಡುವ ಆನಂದದ ಅತಿಥಿ. ಅವನೆಂದು ಇಲ್ಲಿ ಶಾಶ್ವತವಾಗಿ ಇರಲಾರ. ಅದೃಷ್ಟ ಅನ್ನೋದು ಮನೆಯಲ್ಲಿರುವ ಹಣವಿದ್ದಂತೆ.ಅದನ್ನು ಹೊರಗೆ ತೆಗೆದರೆ ಖರ್ಚಾಗುತ್ತೆ, ಒಳಗೆ ಇಟ್ಟು ಅದನ್ನ ಪೋಷಿಸಿದರೆ ಬ್ಲಾಕ್ ಮನಿ ಆಗುತ್ತೆ. 

ಸಾವಂತೂ ಪ್ರತಿಯೊಬ್ಬರಿಗೂ ಖಾತ್ರಿ ಇದೆ. ಸಾವಿನಲ್ಲಿ ನಮ್ಮ ಪಾತ್ರ ಇದ್ದು ಇರದಂತೆ, ಕಂಡು ಕಾಣದಂತೆ ತೇಲಿ ಹೋಗುತ್ತದೆ. ಯಾರು ಬೇಕಂತಲೇ ಆಕ್ಸಿಡೆಂಟ್ ಮಾಡಿಕೊಂಡು ಸಾಯಲು ಇಚ್ಚಿಸುವುದಿಲ್ಲ.  ಕ್ಷಣ ಮೈಮರೆತರೆ ಜವರಾಯ ಎದುರಾಗುತ್ತಾನೆ. ಯಾರೂ ಕೂಡ ಕರಿದ ತಿಂಡಿಗಳನ್ನು ತಿಂದು ತಿಂದು ಬೊಜ್ಜು ಬೆಳೆಸಿಕೊಳ್ಳಬೇಕೆಂದು ಬಯಸಲ್ಲ. ನಾಲಿಗೆಗೊಂದು ಚಪಲತೆ ಇದೆ, ಅದಕ್ಕೆ ತಿನ್ನಲೇಬೇಕೆಂಬ ಹಠ ಇದೆ. ಅದನ್ನು ಹೆಚ್ಚು ನಿಯಂತ್ರಿಸಲು ಹೋದರೆ ಮನಸಿಂದ ಹೊರ ಬರುವ ಮಾತು 'ಸತ್ರೆ ಸಾಯ್ತಿನಿ ಹೋಗಯ್ಯ ಎಷ್ಟು ದಿನ ಅಂತ ಬದುಕ್ತೀವಿ...'ಅಂದರೆ ಮನುಷ್ಯ ಸಾಯುವ ಹಂತಕ್ಕೆ ಯೋಚಿಸಿಯಾದರು ತಿನ್ನೋದಕ್ಕೆ ಸಿದ್ಧನಿರುತ್ತಾನೆ.

ಅದೃಷ್ಟದಿಂದ ಹಾರ್ಟ್ ಅಟ್ಯಾಕ್ ತಪ್ಪಿಸಿಕೊಂಡ ವ್ಯಕ್ತಿಯೊಬ್ಬನಿಗೆ  ಉಪ್ಪು, ಖಾರವಿಲ್ಲದ ಅಡುಗೆಯನ್ನು ನೀಡಿ ಅಂತ ಅಂತ ವೈದ್ಯರು ಹೇಳಿದರು.ಅವನಿಗೆ ಉಪ್ಪು ಖಾರವಿಲ್ಲದ ಊಟ ರುಚಿಸಲಿಲ್ಲ, ಅದರ ಒತ್ತಡ ಅವನಲ್ಲಿ ಹೊರಹಮ್ಮಿಸಿದ ಮಾತು 'ಈ ಉಪ್ಪು, ಖಾರವಿಲ್ಲದ ಅಡುಗೆ ತಿಂದು ಬದುಕೋದಕ್ಕಿಂತ ಒಂದೇ ಸಲ ಸತ್ತೋಗಿದ್ರೆ ಚೆನ್ನಾಗಿರೋದು' ಅಂತ. ಕುಡುಕನ ಯಾತನೆ ಕೂಡ ಇದಕ್ಕಿಂತ ಭಿನ್ನವಾಗಿರಲ್ಲ. ಕುಡಿತವನ್ನು ಬಿಡಲಾಗದೆ ಅನೇಕರು ಕುಡಿದು, ಕುಡಿದು ಸಾಯುತ್ತಾರೆ.

ಕಿಡ್ನಿ ಫೈಲ್ ಆಗಿ ಡಯಾಲಿಸಿಸ್ ಗೆ ಒಳಗಾಗುವವರು ದಿನಕ್ಕೆ ಒಂದು ಲೀಟರ್ ನೀರು ಕುಡಿಬೇಕು, ಆದಷ್ಟು ಉಪ್ಪು ಖಾರವಿಲ್ಲದ  ಇಲ್ಲದ ಊಟ ಮಾಡಬೇಕು. 'ಅವರಿಗೆ ಉಪ್ಪು ಹಾಕಬೇಡಿ, ನೀರು ಕುಡಿಬೇಡಿ' ಅಂತ ಬೇರೆಯವರು ಹೇಳುವುದು ಸುಲಭ, ಆದರೆ ಇವುಗಳನ್ನು ತಿನ್ನಲಾರದೆ ಕುಡಿಯಲಾರದೆ ಸಮಸ್ಯೆಯಿಂದ ಬಳಲುತ್ತಿರುವರ  ಭಾದೆ, ದುಃಖ ಮತ್ತು ನೋವು ಅವರಿಗೆ ಮಾತ್ರ ಗೊತ್ತಾಗುತ್ತದೆ. ಒಂದಷ್ಟು ಕಾಲವಷ್ಟೇ ಯಾವುದನ್ನಾದರೂ ಕೂಡ ನೀವು ಸಹಿಸಿಕೊಳ್ಳಲು ಸಾಧ್ಯ. ಅದರಲ್ಲೂ ಸಣ್ಣ ವಯಸ್ಸಿನಿಂದಲೇ ಎಲ್ಲವನ್ನು ತಿಂದು ಸ್ವಾದಿಸಿ ಅನುಭವಿಸಿದ ಮನಸ್ಸಿಗೆ, ದೇಹಕ್ಕೆ ಅವುಗಳನ್ನು ತೊರೆಯುವುದು ಅಷ್ಟು ಸುಲಭವಲ್ಲ. ಅವುಗಳನ್ನು ತೊರೆಯುವುದಕ್ಕಿಂತ ಜೀವ ತೊರೆಯುವುದೇ ಉತ್ತಮ ಅಂತ ಮನಸ್ಸಿಗೆ ಅನಿಸುತ್ತೆ. ಹಾಗಂತ ನಿಜಕ್ಕೂ ಯಾರು ಸಾವನ್ನು ಬಯಸುವುದಿಲ್ಲ. ಆದರೆ ಇಂತಹ ಒತ್ತಡದ ಬದುಕುಗಿಂತ ಸಾವೇ ಉತ್ತಮ ಅಂತ ಅನೇಕರು ಬದುಕು ಅಥವಾ ಸಾವು ಎರಡರಲ್ಲಿ ಯಾವುದು ಅಂದರೆ ಅವರುಗಳು ಸಾವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಹುಟ್ಟಿದ ಪ್ರತಿ ವ್ಯಕ್ತಿಯು ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾವಿನ ಆಚೆಗೆ ಅಥವಾ ಈಚೆಗೆ ನಿಂತಿರುತ್ತಾನೆ. ಅಂದರೆ ಒಂದು ವ್ಯಕ್ತಿ ಸಾವಿನ  ಅಂಚಿನಲ್ಲಿದ್ದರೆ, ಆ ಸಾವನ್ನು ಕಣ್ಣಿನಂಚಿನಲ್ಲಿ ನೋಡಿ ದುಃಖಿಸುವ ಸ್ಥಿತಿಯಲ್ಲಿ ಮತ್ತೊಬ್ಬನಿರುತ್ತಾನೆ. ಸಾವು ಒಂದೇ ಆದರೆ ಅದು ಹುಟ್ಟಿ ಹಾಕುವ ಪ್ರಶ್ನೆಗಳು ಮತ್ತು ದುಃಖ ಅನೇಕವು.  ಈಗ ವ್ಯಕ್ತಿಯೊಬ್ಬನಿಗೆ ಇದು ನಿನ್ನ ಕೊನೆಯ ದಿನ ಅಂದಾಗ, ಅವನ ಕಣ್ಣಿನಲ್ಲಿ ಸಾವಿನ ಭಯಕ್ಕಿಂತ 'ನನ್ನ ನಂತರ ನನ್ನ ಕುಟುಂಬಕ್ಕೆ ದಿಕ್ಯಾರು?' ಎಂಬ ಪ್ರಶ್ನೆ ಏಳುತ್ತದೆ. ಅದೇ ತರದಲ್ಲಿ ಕುಟುಂಬಕ್ಕೂ ಕೂಡ ಅವರ ನಂತರ 'ನಮ್ಮ ಕುಟುಂಬಕ್ಕೆ ದಿಕ್ಯಾರು?' ಎಂಬ ಆತಂಕ ಮನೆ ಮಾಡಿರುತ್ತದೆ. ಇಬ್ಬರಲ್ಲೂ ಅಗಲಿಕೆಯ ದುಃಖವಿದ್ದರೂ ಒಬ್ಬರು ಕಣ್ಣು ಮುಚ್ಚಿ ಸಾವನ್ನು ಸ್ವೀಕರಿಸಿದರೆ ಉಳಿದವರು ಸತ್ತವನ ಹೆಸರಿನಲ್ಲಿ ಕಣ್ಣೀರಿಡುತ್ತಾ ಕಾಲದೂಡುತ್ತಾರೆ.

ಮೊನ್ನೆ ಇತ್ತೀಚಿಗೆ ನಾನು ಒಂದು ದೃಶ್ಯ ಕಂಡಿದ್ದು ಹೀಗೆ…

ಬೆಂಗಳೂರಿನ ಒಂದು ಪ್ರತಿಷ್ಠಿತ ಆಸ್ಪತ್ರೆ. ಅಲ್ಲಿ ನಾನು ಕೂಡ ಎರಡು ದಿನ ನನ್ನ ಕುಟುಂಬದ ಸದಸ್ಯರೊಬ್ಬರ ಚಿಕಿತ್ಸೆಯ ನಿಮಿತ್ತ ಅಲ್ಲಿಯೇ ಉಳಿದುಕೊಂಡಿದ್ದೆ. ಅವತ್ತು ಸಂಜೆ ಹೊತ್ತು ಕಳೆಯಲಾಗದೆ ಕೆಳಗೆ ಬಂದೆ...ಕೆಳಗೆ ಕಾರಿಡಾರ್ ನಲ್ಲಿ ಜೋರು ಜೋರಾಗಿ ಓಡಾಟ, ಡಾಕ್ಟರ್ ಗಳು, ನರ್ಸುಗಳು ಎಲ್ಲರೂ ಕೂಡ ಎಮರ್ಜೆನ್ಸಿ ವಾರ್ಡ್ ಗೆ ಓಡುತ್ತಿದ್ದರು. ಅಲ್ಲಿ ಅಡ್ಮಿಟ್ ಆಗಿದ್ದ ವ್ಯಕ್ತಿಯೊಬ್ಬರಿಗೆ ಮ್ಯಾಸಿವ್ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಹೀಗಾಗಿ ಆ ಪ್ರಾಣವನ್ನು ಉಳಿಸಬೇಕೆಂಬ ಪ್ರಯತ್ನದಲ್ಲಿ ಬೈದ್ಯರ ತಂಡ ಎಮರ್ಜೆನ್ಸಿ ವಾರ್ಡ್ ಒಳಗೆ ಸೇರಿತು.

ನಾನು ಅಲ್ಲಿಯೇ ಅಡ್ಮಿಶನ್ ಬ್ಲಾಕ್ ಹತ್ರ ಕೂತು ಅದೆಲ್ಲವನ್ನು ಗಮನಿಸಲು ಮೊದಲು ಮಾಡಿದೆ. ಅದೊಂದು ಮಾರ್ವಾಡಿಗಳ ಕುಟುಂಬ. ಸಾಕಷ್ಟು ಸ್ಥಿತಿವಂತರು ಎಷ್ಟು ಹಣ ಬೇಕಾದರೂ ಖರ್ಚು ಮಾಡಿ ಜೀವ ಉಳಿಸಿಕೊಳ್ಳಲು ಶಕ್ತಿ ಇರುವವರು. ಆದರೆ ಅಲ್ಲಿ ಪರಿಸ್ಥಿತಿ ಮಾತ್ರ ಬಿಗಡಾಯಿಸಿತ್ತು. ಒಳಗೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವ್ಯಕ್ತಿಗೆ ಸುಮಾರು 60 ರಿಂದ 62 ಇರಬಹುದು. ಆತನ ತಾಯಿಗೆ ಸುಮಾರು 80 ವರ್ಷ, ಒಂದು 55 ವರ್ಷ ಇರಬಹುದಾದ ಹೆಂಡತಿ 30 ವರ್ಷದ ಮಗ ಇನ್ನುಳಿದ ಇತರ ಸದಸ್ಯರು ಅಲ್ಲಿ ಭಯಕ್ರಾಂತರಾಗಿ ಕೂರುವುದು, ನಂತರ ವಾರ್ಡ್ ಹತ್ರ ಹೋಗುವುದು ಹೀಗೆ ತಮ್ಮ ತಮ್ಮ ತರದಲ್ಲಿ ಆ ವಾರ್ಡಿನ ಕಡೆಗೆ ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಅವರ ಕೈ- ಕಾಲುಗಳು ನಡುಗುತ್ತಿತ್ತು. ಯಾರಿಗೆ ಯಾರು ಸಮಾಧಾನ ಮಾಡಲಾಗದೆ ಒಬ್ಬರಿಗೆ ಇನ್ನೊಬ್ಬರು ಸಮಾಧಾನ ಪಡಿಸಿಕೊಳ್ಳುತ್ತಿದ್ದರು. 

ಅಲ್ಲಿ ಒಳಗಿದ್ದದ್ದು ಒಂದು ವ್ಯಕ್ತಿಯ ಸಾವು ಮತ್ತು ಬದುಕಿನ ಹೋರಾಟ. ಆದರೆ ನಾನು ಕಂಡಿದ್ದು ಸುಮಾರು ಹತ್ತರಿಂದ ಹನ್ನೆರಡು ಮುಖಗಳಲ್ಲಿ ಅದು ಬೀರಬಹುದಾದ ಪರಿಣಾಮ. ಅದರಲ್ಲೂ ಬಹು ಮುಖ್ಯವಾಗಿ ಆತನ ತಾಯಿ,ಹೆಂಡತಿ ಮತ್ತು ಮಗ ಅವರ ಮೂವರಿಗೂ ಉಂಟಾಗಿದ್ದ ಆ ಕ್ಷಣದ ಭಯ ಮತ್ತು ದುಃಖ. ಈಗ ಆ ವ್ಯಕ್ತಿ ಮತ್ತೆ ಬದುಕಿ ಉಳಿದರೆ ಈ ಎಲ್ಲ ಮುಖಗಳಲ್ಲೂ ವಿಶೇಷವಾಗಿ ಆ ತಾಯಿ, ಹೆಂಡತಿ ಮತ್ತು ಮಗನ ಮುಖದಲ್ಲಿ ಆನಂದ, ಇಲ್ಲವಾದರೆ ಅವರ ದುಃಖ ಅರಣ್ಯರೋದನ. 

ಅಲ್ಲಿ ಆಸ್ಪತ್ರೆಯಲ್ಲಿ ಅನೇಕರು ತಮ್ಮ ಪಾಡಿಗೆ ತಾವು ಓಡಾಡುತ್ತಿದ್ದರು. ಕೆಲವರು ಅಡ್ಮಿಶನ್ ಆಗ್ತಿದ್ದರೂ, ಮತ್ತೆ ಕೆಲವರು ಡಿಸ್ಚಾರ್ಜ್ ಆಗ್ತಾಯಿದ್ರು, ಕೆಲವರು ಡಾಕ್ಟರ್ಗಳ  ಭೇಟಿಗೆ ಬಂದಿದ್ದರು, ಕೆಲವರು ಸಂಬಂಧಿಕರನ್ನು ನೋಡಲು ಬರುತ್ತಿದ್ದರು, ಹೋಗುತ್ತಿದ್ದರು. ಅವರವರ ಕಾಯಕ ಅವರವರದು. ಆದರೆ ಇದರ ಮಧ್ಯೆ ಇವರುಗಳನ್ನು ಒಂದೆರಡು ಕ್ಷಣ ಗಮನಿಸುವರು ಹಾಗೆ ಹೊರಟು ಹೋಗುವರು. ಏಕೆಂದರೆ ಅಲ್ಲಿನ ಆ ಸಾವು ಮತ್ತು ಬದುಕಿನ ಆ ಹೋರಾ, ಅದರ ಪರಿಣಾ ಇಲ್ಲಿ ಉಳಿದವರ ಯಾರ ಮೇಲೂ ಪರಿಣಾಮ ಅಲ್ಲಿ ಉಳಿತ ಯಾರ ಮೇಲೂ ಬೀಳುವುದಿಲ್ಲ. ಆದರೆ ಆ ವ್ಯಕ್ತಿ ಮತ್ತು ಕುಟುಂಬದ ನಡುವಿನ ಸಂಬಂಧ ಮತ್ತು ಅದರ ಮೇಲಿನ ಪರಿಣಾಮ ಅದು ಬೇರೆ ಆಗಿರುತ್ತದೆ. 

ನಾನು ಕೂಡ ಒಂದಷ್ಟು ಕಾಲ ಮೌನವಾಗಿಯೇ ಕೂತು ಎಲ್ಲವನ್ನು ಗಮನಿಸುತ್ತಿದ್ದೆ, ಪರಿಸ್ಥಿತಿ ನೋಡುತ್ತಿದ್ದರೆ ಆತ ಉಳಿಯುವ ಲಕ್ಷಣಗಳೇನು ಕಾಣುತ್ತಿರಲಿಲ್ಲ. ಇದೇ ಕಾಲಕ್ಕೆ ಸರಿಯಾಗಿ ಎದುರಿಗೆ ಕಾಣುತ್ತಿದ್ದ ಎಮರ್ಜೆನ್ಸಿ ವಾರ್ಡ್ ಗೆ ಡಾಕ್ಟರ್,  ಆ ವ್ಯಕ್ತಿಯ ಮಗನನ್ನು ಒಳಗೆ ಕರೆದು...ಅವನು ಮತ್ತ ಆತನ ಜೊತೆಗಿದ್ದ ಮೂವರು ಗಂಡಸರು ಒಳಗೆ ಹೋದರು. ಒಂದು 20-25 ಕ್ಷಣದ ನಂತರ ಆತ ಹೊರಗೆ ಬಂದ ಆತನ ಮುಖವನ್ನು ನೋಡುತ್ತಿದ್ದಂತೆ ಅವನ ತಾಯಿಯ ಕೈ-ಕಾಲು

ನಡುಗಲಾರಂಭಿಸಿತು. ಮಗ ಹೊರಗೆ ಬಂದವನೇ ಜೋರಾಗಿ ರೋಧಿಸುತ್ತಾ ಹಣೆ ಹಣೆಗೆ ಚೆಚ್ಚಿಕೊಳ್ಳುತ್ತಿದ್ದ. ಅದರಿಂದ ಆಕೆಗೂ ಕೂಡ ತನ್ನ ಗಂಡ ಇನ್ನಿಲ್ಲ ಅನ್ನುವುದು ಅರಿವಾಯಿತು. ಅಮ್ಮ- ಮಗ ಒಂದೇ ಸಮನೆ ಅಳಲು ಆರಂಭಿಸಿದಾಗ ಅಜ್ಜಿ ಕೂಡ ಬಂದು ಇವರನ್ನು ಸೇರಿಕೊಂಡಳು. ಉಳಿದವರಲ್ಲ ಸೇರಿ ಅವರನ್ನು ಸಮಾಧಾನಪಡಿಸಿದರು. ಸಾವಿನ ವಾರ್ತೆ ಕೇಳಿದ ಮರುಕ್ಷಣ ವ್ಯಕ್ತಿ ಎಷ್ಟು ತನ್ನನ್ನು ತಾನು ಕಳೆದುಕೊಳ್ಳುತ್ತಾನೆ ಎಂದರೆ, ಅದೊಂದು ದಿಕ್ಕು ತೋಚದ ದಿಗ್ಭ್ರಮೆ. ಆ ಒಂದಷ್ಟು ಕ್ಷಣ ಅದರಿಂದ ಹೊರಬರಲಾಗದು. ನನ್ನ ತಂದೆಯ ಸಾವನ್ನು ಕಣ್ಣೆದುರಿಗೆ ಕಂಡಾಗ ಅದೇ ನನ್ನ ಸ್ಥಿತಿ ಕೂಡ ಅದೇ ಆಗಿತ್ತು.

ನಾನು ಅಲ್ಲಿಂದ ಕಾರಣಾಂತರಗಳಿಂದ ಮೇಲೆ ಹೋಗಬೇಕಾಯಿತು, ಲಿಫ್ಟಲ್ಲಿ ನಿಂತ್ಕೊಂಡೆ. 'ಅಯ್ಯೋ ಆವಯ್ಯನಿಗೆ ಲಾಸ್ಟ್ ಟೈಮ್ ಹೀಗಾಗಿತ್ತು ಇದುವರೆಗೂ ಬದುಕಿದ್ದೆ ಹೆಚ್ಚು' ಅಂತ ನರ್ಸುಗಳು ಮಾತನಾಡಿಕೊಳ್ಳುತ್ತಾ ಹೊರಟರು. ಅವರಿಗೆ ಇದೊಂದು ಬದುಕಿನ ಭಾಗ ಹೀಗಾಗಿ ಅದನ್ನ ಹಾಗೆ ಸ್ವೀಕರಿಸಿ ಬಿಡುತ್ತಾರೆ. ಯಾವುದೇ ಸಂಬಂಧವಿಲ್ಲದ ನಮಗೂ ಕೂಡ ಒಂದೆರಡು ಕ್ಷಣದ ನಂತರ ಅದು ಸಹಜತೆಗೆ ಬಂದುಬಿಡುತ್ತದೆ. ಸಾವು ಅಂದಾಗ ಸಹಜವಾಗಿ ಅನೇಕರಿಗೆ ದುಃಖವನ್ನು ಕೊಡುತ್ತದೆ. ಒಂದು ಸಾವನ್ನು ಕಂಡಾಗ ಮಾನವೀಯತೆ ಇರುವ ಯಾವ ವ್ಯಕ್ತಿಯಾದರು ಕೂಡ ಸಂಬಂಧಗಳಿಗೆ ಅತೀತವಾಗಿ ಒಂದು ಕ್ಷಣಕ್ಕೆ ಮೌನವಾಗಿ ಶ್ರದ್ಧಾಂಜಲಿ ಘಟಿಸುತ್ತಾನೆ. ಆದರೆ ಕುಟುಂಬದ ದುಃಖ ಮತ್ತು ಬದುಕಿ ಉಳಿಸಿಕೊಳ್ಳಬೇಕೆಂಬ ಅವರ ಹೋರಾಟ ಅದರ ವಿಫಲತೆ ಅದರ ದುಃಖ ಅವರನ್ನು ಬದುಕಿನದ್ದಕ್ಕೂ ಕಾಡುತ್ತದೆ. ಅವನಿಗೂ (ಸಾಯುತ್ತಿರುವ ವ್ಯಕ್ತಿ) ಆದಷ್ಟು ಕಾಲ ಬದುಕಬೇಕು ಅನ್ನುವುದು ಆಸೆ ಇರುವಂತೆಯೇ ಅವರ ಕುಟುಂಬದ ಆಸೆಯೂ ಅದೇ ಆಗಿರುತ್ತದೆ. 

ಸುಮಾರು ಒಂದು ಗಂಟೆ ಸಮಯ ಕಳೆದ ನಂತರ ಮತ್ತೆ ನಾನು ಕೆಳಗೆ ಬಂದೆ, ವ್ಯಕ್ತಿ ಸತ್ತು ಒಂದು ಗಂಟೆ ಆಗಿತ್ತು. ಹೀಗಾಗಿ ಮೊದಲ ಕ್ಷಣದ ದುಃಖದ ತೀವ್ರತೆ ಈ ಕ್ಷಣಕ್ಕೆ ಚೂರು ಕಮ್ಮಿಯಾಗಿತ್ತು. ಅವರುಇತರರಿಗೆ ಸುದ್ದಿಯನ್ನು ತಲುಪಿಸುತ್ತಾ ತಮ್ಮನ್ನು ತಾವು ಸಂತೈಸಿಕೊಳ್ಳುತ್ತಿದ್ದರು. ಇನ್ನೊಂದು ಗಂಟೆಯ ನಂತರ ಅವರ ಮನೆಗೆ ಶವವನ್ನು ತೆಗೆದುಕೊಂಡು ಹೋದರು. ನಿಜ ಆ ಸಾವಿನ ದುಃಖ ಆ ರಾತ್ರಿ ಇಡೀ ಅವರನ್ನು ನಿದ್ದೆ ಮಾಡಲು ಬಿಟ್ಟಿರುವುದಿಲ್ಲ. ಮರುದಿನ ಕೂಡ ಶವ ಸಂಸ್ಕಾರದವರಿಗೂ ಅದೇ ದುಃಖ ಹಾಗೆಯೇ ಮುಂದುವರಿಯುತ್ತದೆ. ಅದಾದ ಮೇಲೆ 10 ದಿನ 15 ದಿನ ಆ ಒಂದು ದುಃಖ ಅವರನ್ನು ಎಲ್ಲಿಯೂ ಓಡಾಡದಂತೆ ಕಟ್ಟಿ ಹಾಕುತ್ತದೆ. ನಂತರದಲ್ಲಿ ನಿಧಾನವಾಗಿ ಕಾಲದ ಜೊತೆಯಲ್ಲಿ ಅದನ್ನು ಅವರು ಸಣ್ಣಗೆ ಮರೆಯುತ್ತಾ ಹೋಗುತ್ತಾರೆ. ಎಲ್ಲರೂ ಒಂದು ದಿನ ಸಹಜತೆಗೆ ಮರಳುತ್ತಾರೆ. 

ಒಂದು ವರ್ಷ ಕಳೆದು ತಿಥಿ ಮಾಡುವ ಕಾಲಕ್ಕೆ, ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾ ಆ ಕ್ಷಣದಲ್ಲಿ ಕೂಡ ಒಂದಷ್ಟು ದುಃಖಿಸುತ್ತಾರೆ, ಆದರೂ  ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಆವತ್ತಿಗೆ ಪಡೆದುಕೊಂಡಿರುತ್ತಾರೆ. ಹೀಗೆ ಕಳೆದು ಹೋದವರ ನೆನಪುಗಳನ್ನು ಜೊತೆಯಲ್ಲೇ ಇಟ್ಟುಕೊಂಡು ಜೀವನ ಮಾತ್ರ ಮುಂದುವರಿಸುತ್ತಾರೆ.

ಕೊನೆಯದಾಗಿ ನಾವು ಜೀವನದಲ್ಲಿ ಕಳೆದುಕೊಂಡಿದ್ದೇನೆ ಅಂತ ನೋಡಿದರೆ, ನಮ್ಮವರು (ಅಪ್ಪ-ಅಮ್ಮ, ಗಂಡ ಹೆಂಡತಿ ಮಲಗ) ಅಂತ ಒಂದು ಆಪ್ತ ಜೀವದ ಜೊತೆ ನಾವು ಒಂದಷ್ಟು ಕಾಲ ಬದುಕಿದ್ವಿ, ಈಗ ಇತರ ಜೀವಗಳ ಜೊತೆಯಲ್ಲಿ ಬದುಕುತ್ತಿದ್ದೇವೆ. ನಿಜಕ್ಕೂ ನಾವು ಕಳೆದುಕೊಂಡಿರುವುದು ನಾವು ಆ ಜೀವಗಳನ್ನಲ್ಲ, ಏಕೆಂದರೆ ಅವರು ನಮ್ಮ ನೆನಪುಗಳಲ್ಲಿ ಇದ್ದೇ ಇರುತ್ತಾರೆ ಆದರೆ ನಾವು ಕಳೆದುಕೊಂಡಿರುವುದು ಆ ಬದುಕನ್ನು...ಅದಕ್ಕೆ ಈಗಲೂ ನಮಗೆ ಸಾವು ಎಂದರೆ ಭಯವೂ ಇದೆ ಜೊತೆಗೆ ನಮಗಾಗಿ, ನಮ್ಮವರಿಗಾಗಿ ಬದುಕಬೇಕೆಂಬ ಹಂಬಲವೂ ಅದರಲ್ಲಿದೆ.

Photo courtesy: Google 

Disclaimer: This post has been published by Ravindra Kotaki from Ayra and has not been created, edited or verified by Ayra
Category:Relationships



ProfileImg

Written by Ravindra Kotaki

Verified

ಲೇಖಕ/ಅಂಕಣಕಾರ