ಸುಖ ದುಃಖ ಗಳೆರಡೂ ಜೀವನದ ಅವಿಭಾಜ್ಯ ಅಂಗಗಳು. ಹೌದು, ಎಲ್ಲರ ಮನೆಯ ದೋಸೆಯೂ ತೂತು ಎನ್ನುವಂತೆ ಎಲ್ಲರಿಗೂ ಅವರದೇ ಆದ ಕಷ್ಟಗಳು ಇರುತ್ತವೆ. ಆದರೆ ಕೆಲವರ ಜೀವನದಲ್ಲಿ ನಡೆಯುವ ಕೆಲವು ಕಹಿ ಘಟನೆಗಳು, ಕೊನೆಯ ತನಕವೂ ನೋವಾಗಿ, ಕಹಿ ನೆನಪಾಗಿ ಕಾಡುತ್ತವೆ.
ಈ ಕಷ್ಟದ ದಿನಗಳು ಹಸಿಯಾಗಿರುವಾಗಲಂತೂ ಮನಸ್ಸಿನ ಮೇಲೆ ಆಗುವ ಪರಿಣಾಮವನ್ನು ಸಹಿಸಲು ದೇವರು-ಗುರುಗಳ ಬಲುದೊಡ್ಡ ಕಾರುಣ್ಯವೇ ಬೇಕು. ಜೊತೆಗೆ ಮನೆಯವರು, ನಮ್ಮವರು. ಕಷ್ಟ ಕಾಲದಲ್ಲಿ ನಮಗೆ ಆಗಿ ಬರುವವರು ನಮ್ಮವರೇ ಅಲ್ಲವೇ!? ಅಲ್ಲ, ಅವರೇ ನಮ್ಮವರು.
ಕಷ್ಟ ಕಾಲದಲ್ಲಿ ನಮ್ಮ ಮನಸ್ಸು ಮತ್ತು ಸುತ್ತುಮುತ್ತಲಿನವರ ಮಾತು~ಕತೆ:
ಮನಸ್ಸಂತೂ ಮರ್ಕಟದಂತೆ.. ಆಲೋಚನೆಗಳ ಓಟಕ್ಕೆ ಸುಸ್ತೇ ಇಲ್ಲ. ಕಾಡುವ ಸಾವಿರ ಸಾವಿರ ಪ್ರಶ್ನೆಗಳು. ಎಲ್ಲೋ ಒಂದು ಕಡೆ ಹೊಳೆಯುವ ಉತ್ತರಗಳೂ ಕೂಡ! ಆದರೆ ಸಮಾಧಾನ ಮಾತ್ರ ಇಲ್ಲ. ಮತ್ತದೇ ಪ್ರಶ್ನೆಗಳು, ಮತ್ತದೇ ಉತ್ತರಗಳು, ಆದರೂ ಆದರೂ.... ಹೀಗೇಕೆ ಆಗಬೇಕಿತ್ತು!? ಕನಸು ಮನಸ್ಸಿನಲ್ಲೂ ಹೀಗೊಂದು ಕಷ್ಟ ಬರಬಹುದೆಂಬ ಕಲ್ಪನೆಯೂ ಇರಲಿಲ್ಲ. ಇದೊಂದು ಕೆಟ್ಟ ಕನಸಾಗಿ ಬಿಟ್ಟಿದ್ದರೆ... ಎಂದು… ಯಾವತ್ತೂ ಒಂದೇ ರೀತಿ ಇರದ ಮನಸ್ಸಿನ ಯೋಚನೆಯ ದಿಕ್ಕನ್ನು ಬದಲಾಯಿಸಲು ಮೊಬೈಲು, ಪುಸ್ತಕಗಳೇ ಒಡನಾಡಿ.
ದುಃಖವಾದಾಗ ಸಹಜವಾಗಿ ಅಳು ಬರುವುದು. ನಮ್ಮ ಹತ್ತಿರದವರು, ಎಲ್ಲಿ ನಾವು ಈ ನೋವಿನಿಂದ ಖಿನ್ನತೆಗೆ ಜಾರಿಬಿಡುತ್ತೇವೆ ಎಂದು ತಲೆಬಿಸಿ ಮಾಡಿಕೊಳ್ಳುವರೋ ಎಂಬ ಆಲೋಚನೆಯೊಂದಿಗೆ ಅಳುವೂ ಸ್ಥಿಮಿತಕ್ಕೆ ಬರುವುದುಂಟು... ಹತ್ತಿರದ ಬಾಂಧವರಿಂದ ಸಿಕ್ಕ ಸಾಂತ್ವನ, ಸ್ಫೂರ್ತಿ-ಪ್ರೇರಣಾದಾಯಕ ಮಾತುಗಳು ಮನಸ್ಸಿಗೆ ಸ್ವಲ್ಪ ನೆಮ್ಮದಿ ನೀಡುವುದು.
ಇನ್ನು ಸಮಾಜ.
ಹಲವರು ನೋವಿಗೆ ಸಾಂತ್ವನ ಹೇಳ ಬಯಸುವವರು, ಧೈರ್ಯ ತುಂಬುವರಾದರೆ ಕೆಲವರು ಈ ಸಮಯದಲ್ಲೂ ಕಾದು ಚುಚ್ಚು ಮಾತುಗಳನ್ನಾಡುವುದೂ ಉಂಟು.
ಕೆಲವರಿಗೆ ಮುಖ ನೋಡಿ ಮಾತನಾಡಿಸಲು ಮುಜುಗರ! ಆಗ ನಮಗೂ ಏನು ಮಾಡುವುದಪ್ಪಾ ಎಂಬ ಯೋಚನೆ. ನಾವೇ ಹೋಗಿ ಮಾತನಾಡಿಸಿದಾಗಲೂ ಅವರ ಮುಖದಲ್ಲಿ ಆ ಭಾವ ಸ್ಪಷ್ಟವಾಗಿ ಎದ್ದುಕಾಣುವುದು. ಮತ್ತೆ ಕೆಲವರಿಗೆ ಮಾತಿನಲ್ಲಿ ನಮಗೆ ಅಳು ಬಂದರೆ ಹೇಗೆ ನಿಭಾಯಿಸುವುದಪ್ಪಾ ಎಂದು ನಮ್ಮನ್ನು ತಪ್ಪಿಸಿಕೊಂಡು ದೂರ ಕುಳಿತಿರುವುದೇ ಕ್ಷೇಮವೆನಿಸುವುದು! ಮತ್ತೆ ಕೆಲವರಿಗೆ ನಮ್ಮ ಕಷ್ಟ ನೋಡಿ ಅಂದೆಂದೋ ಅವರು ಪಟ್ಟ ಪಾಡು ನೆನಪಾಗುವುದು.
ಕೆಲವರು ನಮ್ಮಿಂದಲೂ ದೊಡ್ಡ ಕಷ್ಟಗಳನ್ನು ನೋಡಿದವರು, ಅನುಭವಿಸಿದವರು. ಅಂಥವರಲ್ಲಿಯೂ ಎರಡು ವಿಧ. ಕೆಲವರಿಗೆ "ಅಯ್ಯೋ ಇಷ್ಟಕ್ಕೆಲ್ಲ ಹೀಗೆ ವ್ಯಥೆಪಟ್ಟರೆ ನಾವು ಏನು ಮಾಡಬೇಕಿತ್ತು!" ಎನ್ನುವ ಪ್ರಶ್ನೆಯಾದರೆ ಇನ್ನು ಕೆಲವರು ನಮ್ಮದೇ ಸ್ಥಿತಿಯಲ್ಲಿದ್ದರೂ ಯಾರ ಬಳಿಯೂ ದುಃಖವನ್ನು ತೋಡಿಕೊಳ್ಳದೆಯೇ ತಮ್ಮಷ್ಟಕ್ಕೇ ಬಂದು ನಮ್ಮನ್ನು ಸಂತೈಸುವವರು.
ಇನ್ನು ಕೆಲವರಿಗೆ ಕುತೂಹಲ! ಅದೇನಾಯಿತು, ಹೇಗಾಯಿತು ಎಂಬ ಮಾಹಿತಿಯನ್ನು ಪೂರ್ತಿಯಾಗಿ ತಿಳಿದುಕೊಳ್ಳುವ ಬಯಕೆ, ಆಮೇಲೆ ಆ ಕುರಿತು ತಮ್ಮದೇ ಒಂದು ಗುಂಪಿನೊಡನೆ ಚರ್ಚೆ ಮಾಡಿ 'ಸುಭಗ'ರಾಗಬಹುದಲ್ಲಾ! ಇನ್ನು ಕೆಲವರಿಗೆ ವಿಷಯ ಅರೆಬರೆಯಾಗಿ ಗೊತ್ತಿರುವುದಾದರೂ, ಅದು ಹಾಗಲ್ಲ, ಹೀಗೆ ಆದ್ದಂತೆ ಎಂದು ಅಂತೆ ಕಂತೆಗಳ ಸಂತೆ ಕಟ್ಟಿ ತಮ್ಮದೂ ಒಂದಿಷ್ಟು ಯೋಚನೆಗಳನ್ನು ಜೊತೆಗೆ ಪೋಣಿಸಿ ತಮ್ಮಲ್ಲೇ ಮೊದಲು ಎಂದು ಸುದ್ದಿ ಹಬ್ಬಿಸುವ ತವಕ!
ಪ್ರಶ್ನೆಗಳು, ಬುದ್ಧಿವಾದಗಳಿಗಂತೂ ಕೊರತೆಯೇ ಇಲ್ಲ. ಅವುಗಳ ಒರತೆ ಮಾತ್ರ ಹುಚ್ಚು ಹಿಡಿಸುವಂಥದ್ದು.
ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೂ ಬೇರೆ ಸಮಯದಲ್ಲಿ ಈ ರೀತಿ ಮಾಡಿದ್ದಿರಬಹುದು.. ಇದಾವುದೂ ತಪ್ಪೆಂದು ಹೇಳುತ್ತಿಲ್ಲ.. ಮಾನವ ಸಹಜ ಗುಣಗಳು…
ಎಲ್ಲವೂ ಸಹಜ, ಅಂತೆಯೇ ನೋವೂ ಕೂಡ. ಖುಷಿಯನ್ನು ಲೆಕ್ಕಿಸಲೊಲ್ಲೆವು, ದುಃಖವಾದಾಗ ಅದಂತೂ ಸಹಿಸಲು ಬಹಳ ಕಷ್ಟವಾಗುವುದು. ಎಲ್ಲವೂ ಗೊತ್ತಿದೆ, ಆದರೂ ಇದು ಹೀಗೆಯೇ. ಹಿಂದೆಯೂ, ಇಂದೂ, ಮುಂದೆಯೂ….