ಹಾಯ್ ಎಲ್ಲ ಮುದ್ದು ಮುಗ್ಧ ಮನಸುಗಳಿಗೆ.
ಆಟದಲ್ಲಿ ಒಮ್ಮೆ ಸೋತರೆ ಮತ್ತೆ ಆಡುವುದೇ ಇಲ್ಲ ಎಂದು ತೀರ್ಮಾನ ತೆಗೆದುಕೊಳ್ಳುವುದು ಮೂರ್ಖತನವೇ ಆದೀತು. ಜೀವನವು ಕೂಡ ಒಂದು ಆಟವಿದ್ದಂತೆ .ಯಾವುದೋ ಒಂದು ಪಂದ್ಯದಲ್ಲಿ ಸೋತರೆ ಜೀವನವನ್ನೇ ಕೊನೆಗಾಣಿಸಿಕೊಳ್ಳುವುದು ಅತ್ಯಂತ ಹೀನವಾದ ಕೆಲಸ .ಒಮ್ಮೆ ಸೋತರೇನಂತೆ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು ನಿಲ್ಲಬೇಕು .ಇದಕ್ಕೆ ಬೇಕಾಗಿರುವುದು ಮನೋಸ್ಥೈರ್ಯ, ದೃಢ ನಿರ್ಧಾರ ಮತ್ತು ಆತ್ಮ ವಿಶ್ವಾಸ .
ಜನ್ಮ ಕೊಟ್ಟ ತಂದೆ ತಾಯಿಗಳೆ ಶಿಕ್ಷಿಸುವಂತಿಲ್ಲವೆಂದ ಮೇಲೆ ನಮಗೆ ನಾವೇ ಶಿಕ್ಷಿಸಿಕೊಂಡರೆ ಅಪರಾಧವಲ್ಲವೇ? ಕಷ್ಟಪಟ್ಟು ಕೆಲಸ ಮಾಡಿ, ಸಾಲ ಮಾಡಿ ನಮ್ಮನ್ನು ಬೆಳೆಸಿ ಶಿಕ್ಷಣ ಕೊಡಿಸುವವರಿಗೆ ಸೋತು ಕೈಚೆಲ್ಲಿ ಕೂತಾರೆ ಅದು ಕೃತಜ್ಞತೆ ಅಥವಾ ಧನ್ಯವಾದ ಆಗುತ್ತದೆಯೇ.
ಈ ಜಗತ್ತಿನಲ್ಲಿ ಗೆಲ್ಲುವವರು ಬಹಳ ಮಂದಿ ಇರಬಹುದು ,ಸೋತವರು ಇರುವುದರಿಂದಲೇ ತಾನೇ ಗೆದ್ದವರಿಗೆ ಬೆಲೆ. ಗೆದ್ದವರ ಸಹವಾಸದಲ್ಲಿ ಐಡಿಯಾಗಳು ಸಿಗುತ್ತವೆ ಆದರೆ ಸೋತವರಲ್ಲಿ ಅಮೂಲ್ಯ ಅನುಭವಗಳ ಭಂಡಾರವೇ ದೊರೆಯುತ್ತದೆ.ಆದ್ದರಿಂದ ಸೋತ ಅನುಭವಿಗಳನ್ನು ಮಾತಾಡಿಸಿ ನೋಡಿ. ಸೋಲು ಗೆಲುವಿನ ಮೆಟ್ಟಿಲು,ಸೋತು ಗೆಲ್ಲಬೇಕು-- ಇಂತಹ ನಾಣ್ಣುಡಿಗಳು ಹಲವಾರಿವೆ.
ಬದುಕಿನಲ್ಲಿ ಕೆಲವು ವಿಷಯಗಳಲ್ಲಿ ಸೋತರೇನಂತೆ ಮತ್ತೆ ಗೆಲ್ಲುವೆಡೆಗೆ ಹೆಜ್ಜೆ ಹಾಕಬಹುದು. ಆದರೆ ಸೋತೆವೆಂದು ಸತ್ತರೆ ಶಾಶ್ವತ ಸೋಲು ಅದಲ್ಲವೇ . ಜೇಡ ಬಲೆಯನ್ನು ಕಟ್ಟುವಾಗ ಅದೆಷ್ಟು ಬಾರಿ ಬಿದ್ದರೂ ಪುನಃ ತನ್ನದೇ ಅಂಟಿನಿಂದ ಬಲೆ ಹೆಣೆಯುವ ಕೆಲಸದಲ್ಲಿ ನಿರತವಾಗಿ ಎಷ್ಟು ಸುಂದರವಾದ ಬಲೆಯನ್ನು ನಿರ್ಮಿಸುತ್ತದೆ ಅಲ್ಲವೇ? ಜೇನುಹುಳು ಅದೆಷ್ಟು ಹನಿ ಮಕರಂದವನ್ನು ತಂದು ತಂದು ಗೂಡು ಕಟ್ಟಿದರೂ ಸಾಯುವುದು ಖಚಿತ. ಹಾಗೆಂದು ಗೂಡು ಕಟ್ಟದೇ ಇರುವುದೇ ?
ನಾವು ತಿಂದ ಆಹಾರ ಮಲದ ರೂಪದಲ್ಲಿ ಹೊರಹೋಗುವುದೆಂಬ ಕನಿಷ್ಠ ಪ್ರಜ್ಞೆ ಇದ್ದರೂ , ಊಟ ತಿಂಡಿ ಮಾಡುವುದನ್ನು ನಾವ್ಯಾರೂ ನಿಲ್ಲಿಸುವುದಿಲ್ಲ ಅಲ್ಲವೇ? ಹಾಗಿದ್ದಾಗ ಸೋತೆವೆಂದು ನಮಗೆ ನಾವೇ ನಿರ್ಧರಿಸಿಕೊಂಡು ನಿರಾಶರಾದರೆ ಹೇಗೆ? ಸ್ವಲ್ಪ ದೂರ ಕಚ್ಚಾ ರಸ್ತೆ ಇದ್ದರೂ ನಂತರ ಮುಖ್ಯರಸ್ತೆ, ಚಂದದ ನುಣುಪಾದ ರಸ್ತೆ ಸಿಗಬಹುದಲ್ಲವೇ, ಅದೇ ರೀತಿಯಲ್ಲಿ.
ಲೇಖಕಿ, ಗೃಹಿಣಿ ಹವ್ಯಾಸ : ಕಥೆ, ಕವನ ಓದುವುದು