ಅನ್ಯಾಯ

ProfileImg
07 Feb '24
4 min read


image

" ಅನ್ಯಾಯ"  

   " ಮಮ್ಮೀ... ಅಣ್ಣನಿಗೆ ರೊಟ್ಟಿ ಮೇಲೆ ಬೆಣ್ಣೆ ಹಾಕಿದ್ದಿಯಲ್ಲ ..ಹಂಗೇ ನನಗೂ ಹಾಕು" ಎಂದು ಎಂಟು ವರ್ಷದ ಗೀತಾ ಪಕ್ಕದಲ್ಲಿ ಕುಳಿತಿದ್ದ ತನ್ನ ಅಣ್ಣ ಗೋಪಿಯ ತಟ್ಟಿಯನ್ನು ಆಸೆ ಗಣ್ಣಿನಿಂದ ನೋಡುತ್ತ ಅಮ್ಮನಿಗೆ ಕೇಳುತ್ತಾಳೆ. ಅಷ್ಟಕ್ಕೇ ಆ ಮಹಾತಾಯಿ " ಏಯ್... ಅದು ನನ್ನ ಇಷ್ಟಾ ಕಣೇ.. ಬೇಕಿದ್ರೆ ತಿನ್ನು ಇಲ್ಲಾಂದ್ರೆ ಎದ್ದು ಹೋಗ್ತಾ ಇರು.. ಅವನು ತಿನ್ನೋ ತಟ್ಟೆ ಮೇಲೆ ಕಣ್ಣು ಹಾಕಬೇಡಾ, ತಿಳೀತಾ?"ಎಂದು ಸಿಡುಕುತ್ತಲೇ ಆಕೆಯ ತಾಯಿ ಮಾಧವಿ  ಹೇಳಿದಾಗ, ಗೀತಾ ತನ್ನ ತಟ್ಟಿ ಯೊಂದಿಗೆ ಸ್ವಲ್ಪ ದೂರ  ಹೋಗಿ ಕುಳಿತವಳು ಬೆಣ್ಣೆ ಇಲ್ಲದ ರೊಟ್ಟಿ ಯನ್ನು ಕಣ್ಣೀರು ಸುರಿಸುತ್ತಲೇ ತಿನ್ನ ತೊಡಗುತ್ತಾಳೆ. ಆಗ ಅಲ್ಲಿಯೇ ಕುಳಿತಿದ್ದ ಮಾಧವಿ ಯ ಪತಿ ಶ್ರೀರಾಮ ತನ್ನ ಪತ್ನಿ ಯತ್ತ ತಿರುಗಿ" ಇದ್ಯಾಕೆ.. ಮಾಧವಿ, ಮಗು ಬೆಣ್ಣೆ ಕೇಳ್ತಿದೆ ಕೊಡಬಾರ್ದಾ... ನಾನು ಸಾಮಾನು ತಂದು ಹಾಕೋದ್ರಲ್ಲಿ ಕಡಿಮೆ.... ಏನು ಮಾಡಲ್ಲವಲ್ಲ.. ಮತ್ಯಾಕೆ?"ಎಂದು ಕೇಳಿದಾಗ ಮಾಧವಿ"ಅವಳು ಕಣ್ಣೀರು ಹಾಕಿದ್ಲು ಅಂತ ಕರಗಿ ಹೋಗಬೇಡಿ.. ಅವಳು ಹೆಣ್ಣು ಹುಡುಗಿ.. ಸ್ವಲ್ಪ ಕಷ್ಟಾ ಸುಖಾ ಏನೂಂತ ಗೊತ್ತಾಗ್ಲಿ.. ಮುಂದೆ ಮದುವೆ ಮಾಡ್ಕೊಂಡು ಅತ್ತೆ ಮನೆಗೆ ಹೋಗೋಳು.. ನಮ್ಮ ವೃದ್ಧಾಪ್ಯ ಕಾಲಕ್ಕೆ ಆಸರೆ ಆಗಿ ನಿಲ್ಲೋನೇ ನಮ್ಮ ಮಗ ಗೋಪಿ ವಿನಃ ನಿಮ್ಮ ಮಗಳಲ್ಲ.. ತಿಳ್ಕೊಳ್ಳಿ " ಎನ್ನುತ್ತಾಳೆ. ಅದಕ್ಕೆ ಪ್ರತಿಯಾಗಿ  ಆಕೆಯ ಪತಿ ಶ್ರೀ ರಾಮ" ನೀನು ಈ ರೀತಿ ಮಕ್ಕಳಿಗೆ ಬೇಧಭಾವ ಮಾಡ್ಕೊಂಡು
ಮಗನಿಗೆ ಅತೀ ಮುದ್ದು ಮಾಡ್ತಿದ್ದರೆ ಮುಂದೊಂದು ದಿನ ಈ ಗೋಪಿ ದಾರಿ ತಪ್ಪ ಬಹುದು .. ಕಾಲ ಮಿಂಚಿದ ಮೇಲೆ ನೀ ಪಶ್ಚಾತಾಪ ಪಡಬೇಕಾಗುತ್ತೆ.. ಸ್ವಲ್ಪ ಯೋಚನೆ ಮಾಡು "ಎಂದು ಹೇಳಿದ್ದೇ ತಡ, ಮಾಧವಿ ಆತನ ಮೇಲೆ ಸಿಡುಕುತ್ತ
"ರ್ರೀ... ಯಾವಾಗಲೂ  ಬರೀ ಅಪಶಕುನ  ಮಾತು ಆಡ ಬೇಡಿ,... ಸದಾ ನನ್ನ ಮಗನಿಗೆ ಹ್ಯಾಗೆ ಬೈಲೀ ಅಂತ ಕಾಯ್ತಾ ಇರ್ತೀನಿ ಅಲ್ವಾ.?.. ನೋಡ್ತಾ ಇರಿ ನನ್ನ ಮಗ ಮುಂದೆ ಲಕ್ಷಕ್ಕೆ ಒಬ್ಬ ನಾಗಿ ನಮ್ಮ ವಂಶಕ್ಕೆ ಕೀರ್ತಿ  ತರುತ್ತಾನೆ "ಎಂದು ಕೂಗಾಡಿ ಆತನ ಬಾಯಿ ಮುಚ್ಚಿಸಿರುತ್ತಾಳೆ.
 ಸಮಯ ಉರುಳಿದ ನಂತರ ಗೋಪಿಯನ್ನು ಆ  ಪಟ್ಟಣದ ಪ್ರತಿಷ್ಠಿತ ಶಾಲೆ ಗೆ ದುಬಾರಿ ಫೀ ಕೊಟ್ಟು  ಸೇರಿಸುತ್ತಾಳೆ. ಆದರೆ ಮಾತ್ರ ಮಗಳು ಗೀತಾ ಳನ್ನು ಯಾವುದೋ ಸಾಧಾರಣ ಶಾಲೆ ಗೆ ಕಳುಹಿಸುತ್ತಾಳೆ.ಈ ಒಂದು ಸಮಯದಲ್ಲಿ ಪತಿ ಶ್ರೀರಾಮ" ನೀ  ಈ ರೀತಿ   ಮಕ್ಕಳಿಗೆ  ಅನ್ಯಾಯ ಮಾಡ್ತಿರೋದು ಸರಿ ಅಲ್ಲ"ಎಂದು ನಾನಾ ಬಗೆಯಲ್ಲಿ ಆಕೆಗೆ ಎಷ್ಟೇ ತಿಳಿಹೇಳಿದರೂ ಆಕೆ  ಮಾತ್ರ ಸುತಾರಾಂ  ತನ್ನ ಹಠದಿಂದ ಹಿಂದೆ ಸರಿದಿರಲಿಲ್ಲ, ಏಕೆಂದರೆ ಮನೆಯಲ್ಲಿ ಅವಳದೇ ಮಾತು ನಡೆಯುತ್ತಿತ್ತೇ ವಿನಃ ಆಕೆಯ ಪತಿಯದಲ್ಲ.ಶಾಲೆಗೆ ಸೇರಿಕೊಂಡಿದ್ದ ಗೋಪಿ , ಅಮ್ಮನನ್ನು ಕೇಳಿ ಕೇಳಿದಾಗಲೆಲ್ಲ ಯಾಕೆ, ಏನು ಅಂತ ವಿಚಾರಿಸದೇ ಹಣ ಕೊಡಲಾರಂಭಿಸುತ್ತಾಳೆ. ಆದರೆ ಮಗಳು ಗೀತಾ ಯಾವುದಾದರೂ ಸಣ್ಣ ಬೇಡಿಕೆ ಇಟ್ಟರೂ ಅದನ್ನು ನಿಧಾನವಾಗಿ ಒಲ್ಲದ ಮನಸ್ಸಿನಿಂದ ವಟಗುಡುತ್ತಲೇ ಈಡೇರಿಸುತ್ತ ಬರುತ್ತಾಳೆ.
ಕೇಳಿದಾಗಲೆಲ್ಲಾ ಹಣ ಕೈಗೆ ಸೇರತೊಡಗಿದಾಗ ಗೋಪಿ ಬರಬರುತ್ತಾ ಅಡ್ಡ ದಾರಿ
ಹಿಡಿಯಲು ಶುರುಮಾಡುತ್ತಾನೆ.ತನಗೆ ಇನ್ನೂ ಹೆಚ್ಚಿನ ಹಣ ಬೇಕಿದ್ದಾಗ ಗೋಪಿ ಮೆಲ್ಲಗೆ ಅಮ್ಮನ ಪರ್ಸನಿಂದಲೇ ಹಣ ಕದಿಯಲು ಪ್ರಾರಂಭಿಸುತ್ತಾನೆ. ಆ ಹಣದಿಂದ ಶಾಲೆಯಲ್ಲಿ ನಡುವಳಿಕೆ ಸರಿ ಇಲ್ಲದವರ ಸಹವಾಸ ಬೆಳೆಸಿಕೊಂಡವ 
ಒಂದೆರಡು ಬಾರಿ ಫೇಲ್ ಆಗಿ ಅಂತೂ ಇಂತೂ ಎಸ್ ಎಸ್ ಎಲ್ ಸಿ ಪಾಸಾಗಿ
ಕಾಲೇಜು ಸೇರುತ್ತಾನೆ. ಇತ್ತ ಆತನ ತಂಗಿ ಗೀತಾ ಚೆನ್ನಾಗಿ ಓದಿ  ಎಸ್ ಎಸ್ ಎಲ್ ಸಿ ಪಾಸ್ ಮಾಡಿ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಆಕೆಯ ತಾಯಿ, ಓದು ಬಿಡಿಸಿ
ಅಪ್ಪ ಅಮ್ಮ ಇಲ್ಲದ ದೂರದ ಸಂಬಂಧಿ ಯುವಕನಿಗೆ ಕೊಟ್ಟು ಮದುವೆ ಮಾಡಿ ಕೈ ತೊಳೆದುಕೊಂಡು ಬಿಡುತ್ತಾಳೆ. ಗೀತಾ ಳ ಮದುವೆ ಆದ  ಕೈಲಾಸ್ ಗುಣದಲ್ಲಿ ಉತ್ತಮವ ನಾಗಿದ್ದು ಆತ ಸರ್ಕಾರಿ ಇಲಾಖೆಯಲ್ಲಿ  ಕೆಲಸ ಮಾಡುತ್ತಿರುತ್ತಾನೆ.
ಬರುವ ಕಡಿಮೆ ಸಂಬಳ ದಲ್ಲಿ ಪತಿ ಪತ್ನಿ ಇಬ್ಬರೂ ತುಂಬಾ ಖುಷಿ ಯಾಗಿ ಇರುತ್ತಾರೆ. ಒಂದು ದಿನ ಗೋಪಿ ಓದುತ್ತಿದ್ದ ಕಾಲೇಜು ನವರಿಂದ ಮಾಧವಿ ಗೆ
ಒಂದು ಪತ್ರ ಬಂದು ಅದರಲ್ಲಿ ಅವರು " ನಿಮ್ಮ ಮಗ  ಅದೇ ತರಗತಿಯ ವಿದ್ಯಾರ್ಥಿನಿ ಯೊಂದಿಗೆ ತೀರ ಅಸಭ್ಯವಾಗಿ ನಡೆದುಕೊಂಡಿದ್ದಾನೆ.. ಇದರಿಂದ ನಾವು ತಲೆ ತಗ್ಗಿಸಿ ಸುವಂತಾಗಿದೆ ನೀವು ಸರಿಯಾಗಿ  ಎಚ್ಚರಿಕೆ ನೀಡಿ ಇನ್ನು ಮುಂದೆ ಆ ರೀತಿ ಆಗದಂತೆ ತಿಳಿಸಿ"ಎಂದು ಬರೆದಿರುತ್ತಾರೆ. ಆ ಕಾಗದ ಓದಿದ ಮಾಧವಿ
"ಅಯ್ಯೋ. ದೇವ್ರೇ.  ಇದೇನಿದು? ನಾನೇನೋ ತಿಳಿದಕೊಂಡಿದ್ದೆ ಆದರೆ ಇಲ್ಲಿ ಆಗ್ತರೋದೇ ಬೇರೆ... ಈ ಹಿಂದೆ ನನ್ನ ಪತಿ ಹೇಳಿದ್ದು ಸತ್ಯವಾಗ್ತಾ ಇದೆಯಾ"?
ಎಂದು ಹಳವಿಸಿಕೊಳ್ಳುತ್ತ ಮಗನಿಗೆ ಇನ್ನು ಮುಂದೆ ಹೀಗೆ ಮಾಡಬೇಡಾ ಎಂದು ತೋರಿಕೆಗೆ ಬೈದಂತೆ ಮಾಡುತ್ತಾಳೆ.ಏಕೆಂದರೆ ಇದರಲ್ಲಿ ತನ್ನದೇ ತಪ್ಪು ಇದೆ ಎಂದು ಆಕೆಗೆ ಗೊತ್ತಿರುತ್ತದೆ. ಯಾರು ಎಷ್ಟೇ ಹೇಳಿದರೂ ಗೋಪಿ ಸುಧಾರಿಸುವ ಗೋಜಿಗೆ ಹೋಗದಾದಾಗ ಕಾಲೇಜ್ ನವರು ಸಾಕಷ್ಟು ಹೇಳಿ ಒಂದು ದಿನ ಆತನನ್ನು ಡಿಬಾರ್ ಮಾಡುತ್ತಾರೆ.  ಗೋಪಿ ನಡುವಳಿಕೆಯಲ್ಲಿ ಗಡಿ ಸಾಕಷ್ಟು ದಾಟಿ ಹೋಗಿರುತ್ತಾನೆ. ನಿತ್ಯ ಸಂಜೆ  ಡ್ರಿಂಕ್ಸ್ ಮಾಡೋದು, ಊರ ಉಡಾಳರೊಂದಿಗೆ ಕಾಲ ಕಳೆಯುವುದನ್ನು ರೂಢಿಸಿಕೊಂಡಿರುತ್ತಾನೆ.  ಮನೆಯಲ್ಲಿ ನಿತ್ಯ ಜಗಳ ಕದನ ತಪ್ಪುವುದೇ ಇಲ್ಲ ವೆನ್ನುವಂತಾಗುತ್ತದೆ ಇಂತಹ ಒಂದು ದಿನ ಗೋಪಿ  ಮದಿರೆಯ ನಶೆಯಲ್ಲಿ ಇದ್ದವ ಅಪ್ಪ ಅಮ್ಮನನ್ನು ಹೆದರಿಸಿ ಅವರು ಇದ್ದ ಪುಟ್ಟ ಮನೆಯನ್ನೂ ತನ್ನ ಹೆಸರಿಗೆ  ಬರೆಸಿಕೊಳ್ಳುತ್ತಾನೆ. ಇದೂ ಸಾಲದು ಎಂಬಂತೆ ಅವರನ್ನು ಮನೆಯಿಂದ ಆಚೆ ತಳ್ಳಲು ಮುಂದಾಗುತ್ತಾನೆ. ಆಗ ಮಾಧವಿ ಕಣ್ಣೀರಿಟ್ಟಾಗ ಆಕೆಯ ಪತಿ " ನಿನ್ನ ಮಗನಿಗೆ ಅತಿಯಾಗಿ ಮುದ್ದು ಮಾಡಿ ಬೆಳೆಸುವಾಗಲೇ  ಈ ರೀತಿ ಅನ್ಯಾಯ 
ಮಾಡಿಕೊಂಡು ಬಂದರೆ ಅದರ  ಪರಿಣಾಮ ಅನುಭವಿಸ ಬೇಕಾಗುತ್ತದೆ "ಎಂದು ಹೇಳಿದ ಮಾತುಗಳು ನೆನಪಾಗತೊಡಗುತ್ತವೆ.  ಇವರನ್ನು ಮನೆಯಿಂದ ಆಚೆ ಕಳುಹಿಸಲು  ಗೋಪಿ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾನೆ ಎಂಬ ವಿಚಾರ ಪಕ್ಕದ ಮನೆಯವರಿಗೆ ತಿಳಿದಾಗ ಅವರು  ಕೂಡಲೇ ಅವರ ಮಗಳಾದ ಗೀತಾ ಳಿಗೆ ಫೋನ್ ಮಾಡಿ ತಿಳಿಸುತ್ತಾರೆ. ವಿಷಯ ತಿಳಿದಾಕ್ಷಣ ಗೀತಾ ತಡ ಮಾಡದೇ ತನ್ನ ಪತಿ ಯೊಂದಿಗೆ ಅಲ್ಲಿಗೆ ಬಂದು " ಬನ್ನೀ  ನಮ್ಮ ಮನೆಗೆ.. ನಾನು ನಿಮ್ಮನ್ನು ನೋಡಿಕೊಳ್ಳುವೆ.."ಎಂದು ಗೀತಾ ಹೇಳಿದರೆ ಆಕೆಯ ಪತಿ" ನನಗಂತೂ ಅಪ್ಪ ಅಮ್ಮ ಇಬ್ಬರೂ ಇಲ್ಲ.. ಪ್ರಾಯಶಃ ಭಗವಂತ ನಿಮ್ಮನ್ನು ಈ ರೀತಿ ನಮ್ಮ ಮನೆಗೆ ಕಳುಹಿಸಿದ್ದಾನೆ ಅನ್ಸುತ್ತೆ.. ದಯವಿಟ್ಟು ನನಗೆ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಬನ್ನಿ ಎಂದು ಕೈ ಹಿಡಿದು  ಕೇಳಿಕೊಂಡಾಗ  ಮತ್ತೆ ಮಾಧವಿ ಗೆ ತಾನು ಹಿಂದೆ 
ನಮಗೆ ವಯಸ್ಸಾದ ಮೇಲೆ ಮಗನೇ ನೋಡಿಕೊಳ್ಳೊದು... ಈ ಮಗಳಲ್ಲ " ಎನ್ನುವ ಮಾತು ನೆನಪಾಗಿ ಕಣ್ಣು ತುಂಬಿ ಬರುತ್ತಿವೆ. ಅಂತೂ ಗೀತಾ ತನ್ನ ತಂದೆ ತಾಯಿ ಯನ್ನು ಕರೆದು ಕೊಂಡು ತನ್ನ ಮನೆಗೆ ಬರುತ್ತಾಳೆ. ಆ ದಿನ ಊಟದ ತಟ್ಟೆಯಲ್ಲಿ ಗೀತಾ ರೊಟ್ಟಿ ಯ ಜೊತೆಗೆ ದಪ್ಪ ಬೆಣ್ಣೆ ಮುದ್ದೆ ಇಟ್ಟಿದ್ದು ಕಂಡ ಮಾಧವಿ ಗೆ ಛೇ.. ನಾನು ಎಂಥೆಂಥ ಅನ್ಯಾಯ ಮಗಳಿಗೆ ಬಗೆದರೂ ಆಕೆ ಏನೂ ನಡೆದಿಲ್ಲ ಎಂಬಂತೆ ತನ್ನನ್ನು ಮತ್ತು ತನ್ನ ಪತಿಯನ್ನು ಕಕ್ಕುಲಾತಿಯಿಂದ ನೋಡುತ್ತಿರುವುದನ್ನು ಕಂಡು ತಮ್ಮನ್ನು ತಾವೇ ಶಪಿಸಿಕೊಳ್ಳುತ್ತಾರೆ.
 

ಮುಕ್ತಾಯ……

ಧನ್ಯವಾದಗಳು 

Category:Relationships



ProfileImg

Written by Sahana gadagkar