ಉಪಾಹಾರ ಹಾಗೂ ದಿನನಿತ್ಯದ ಸೇವನೆಗೆ ಸಿರಿಧಾನ್ಯದ ಪದಾರ್ಥಗಳು

ProfileImg
04 Jul '24
2 min read


image

 

ಸಿರಿಧಾನ್ಯಗಳು ಕಡಿಮೆ ಖರ್ಚಿನಲ್ಲಿ ದೇಹದ ಕಾರ್ಯಗಳಿಗೆ ಶಕ್ತಿಯನ್ನು ಸುಗಮವಾಗಿ ಬಳಸಲು ಅವಶ್ಯಕವಾಗಿರುವ ಜೀವಸತ್ವಗಳನ್ನು ಮತ್ತು ಖನಿಜಾಂಶಗಳನ್ನು ಹೊಂದಿರುವುದರಿಂದ ಎಲ್ಲ ವರ್ಗದವರು ದಿನನಿತ್ಯದ ಆಹಾರದಲ್ಲಿ (ರೊಟ್ಟಿ, ಅನ್ನ, ಮುದ್ದೆ) ಬಳಸಿದರೆ ದೇಹದ ಸಧೃಡತೆಯನ್ನು ಕಾಪಾಡಿಕೊಳ್ಳಬಹುದು. ಶಕ್ತಿಯನ್ನು ಧಾರಾಳವಾಗಿ ಪೂರೈಸುವ ಧಾನ್ಯಗಳಾಗಿರುವುದರಿಂದ ಹೆಚ್ಚು ಶ್ರಮಜೀವಿಗಳಾದ ರೈತರು, ಕಾರ್ಮಿಕರು ಮತ್ತು ಕ್ರೀಡಾಪಟುಗಳಿಗೆ ನಿಧಾನವಾಗಿ ಅರಗುವ ಮತ್ತು ದೀರ್ಘಕಾಲ ಶಕ್ತಿಯನ್ನು ಒದಗಿಸುವ ಸೂಕ್ತ ಆಹಾರಗಳಾಗಿವೆ. ಸಿರಿಧಾನ್ಯಗಳಲ್ಲಿ ಲವಣಗಳು ಹೇರಳವಾಗಿರುವುದರಿಂದ ಇವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಬಲು ರುಚಿ. ಆದ ಕಾರಣ ಅಡುಗೆಯಲ್ಲಿ ರುಚಿ ಹೆಚ್ಚಿಸುವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಮತ್ತು ಇವುಗಳಿಂದ ಅಡುಗೆ ತಯಾರಿಸುವುದು ತೀರಾ ಸರಳ.

ಬೆಳಗಿನ ಉಪಾಹಾರದಲ್ಲಿ ಸತ್ವಭರಿತ ಸಿರಿಧಾನ್ಯಗಳು

ದಿನಂಪ್ರತಿ ಸೇವಿಸುವ ಆಹಾರವನ್ನು ವೇಳೆಗನುಸಾರವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಾಯಂಕಾಲದ ತಿಂಡಿ ಹಾಗೂ ರಾತ್ರಿಯ ಊಟ ಎಂದು 4 ವೇಳೆಗಳಲ್ಲಿ ಸೇವಿಸುವುದು ಹೆಚ್ಚು ರೂಢಿಯಲ್ಲಿದೆ. ರಾತ್ರಿಯ ಊಟದ ನಂತರ ಸುಮಾರು 8 ರಿಂದ 12 ಗಂಟೆಗಳ ಅವಧಿಯ ನಂತರ ತೆಗೆದುಕೊಳ್ಳುವ ಊಟಕ್ಕೆ ಬೆಳಗಿನ ಉಪಾಹಾರ ಎನ್ನುವೆವು. ಬೆಳಿಗ್ಗೆ ಎದ್ದ ತಕ್ಷಣ ದಿನದ ಕಾರ್ಯಗಳನ್ನು ಪ್ರಾರಂಭಿಸಲು ಬೇಕಾಗುವಷ್ಟು ಶಕ್ತಿ ನಮ್ಮ ದೇಹದಲ್ಲಿ ಶೇಖರಣೆಯಾಗಿರುವುದಿಲ್ಲವಾದ್ದರಿಂದ ಬೆಳಗಿನ ಉಪಾಹಾರಕ್ಕೆ ಪ್ರಾಮುಖ್ಯತೆ ಕೊಡಬೇಕು. ಒಂದೊಂದು ಪ್ರದೇಶದಲ್ಲಿ ಒಂದೊಂದು ತರಹದ ಉಪಾಹಾರಗಳ ಪಟ್ಟಿ ರೂಢಿಯಲ್ಲಿರುವುದು. ಉದಾ : ಇಡ್ಲಿ, ದೋಸೆ, ಉಪ್ಪಿಟ್ಟು, ಅವಲಕ್ಕಿ, ಚುರುಮರಿ, ಚಪಾತಿ ಇತ್ಯಾದಿಗಳು. ಬಹಳ ಜನ ಅವಸರದಲ್ಲಿ ವೇಳೆಯ ಅಭಾವದಿಂದ ಸರಿಯಾದ ಯೋಜನೆ ಮಾಡದೇ ಇದ್ದಾಗ ಬೆಳಗಿನ ಉಪಾಹಾರನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಬಿಟ್ಟು ಬಿಡುವರು. ಆದರೆ ಹೀಗೆ ಮಾಡಿದಾಗ.

  • ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಕಡಿಮೆಯಾಗಿ ನಿರಾಸಕ್ತಿ ಹೆಚ್ಚುವುದು.
  • ಚಿಕ್ಕಮಕ್ಕಳು ಅನಾಸಕ್ತರಾಗಿ ಚುರುಕಿಲ್ಲದೆ ಒಂದು ತರಹದ ಮಂದಮತಿಗಳಾಗುವರು. ಹಾಗಾಗಿ ಬೆಳಗಿನ ಉಪಾಹಾರ ದಿನದ ಊಟಗಳಲ್ಲಿ ಅತಿ ಮುಖ್ಯವಾದುದು. ಅದು ಪೌಷ್ಟಿಕ ಆಹಾರಗಳನ್ನೊಳಗೊಂಡ ಸಮತೋಲನ ಆಹಾರವಾಗಿರಬೇಕು.
  • ದಿನದ ಬೇಡಿಕೆಯ 1/3 ಭಾಗದಷ್ಟು ಪೋಷಕಾಂಶಗಳು ನಮಗೆ ಉಪಾಹಾರದಿಂದ ದೊರೆಯಲೇಬೇಕು.
  • ಉಪಾಹಾರದ ಪ್ರಮಾಣ ಹಾಗೂ ಗುಣಮಟ್ಟವು ಅವರವರ ಚಟುವಟಿಕೆಗನುಸಾರವಾಗಿರಬೇಕು.
  • ಹೊಲದಲ್ಲಿ ದುಡಿಯುವ ರೈತರು, ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರು ಹೆಚ್ಚು ಸತ್ವಭರಿತ ಗಟ್ಟಿಯಾದ ಆಹಾರ ಸೇವಿಸಬೇಕು.
  • ಸಮತೋಲನ ಆಹಾರವನ್ನು ಸೇವಿಸುವುದರಿಂದ ದಿನದ ಎಲ್ಲ ಚಟುವಟಿಕೆಗಳನ್ನು ಚುರುಕಾಗಿ ಮಾಡಬಹುದು.
  • ಕೆಲಸದ ಸಾಮರ್ಥ್ಯ ಹೆಚ್ಚುವುದು ಮತ್ತು ಮೆದುಳು ಹೆಚ್ಚು ಚುರುಕಾಗಿ ಕಾರ್ಯ ನಿರ್ವಹಿಸುವುದು.
  •  ಮಕ್ಕಳು ಎಲ್ಲ ಚಟುವಟಿಕೆಗಳಲ್ಲಿ ಹೆಚ್ಚು ಚುರುಕಾಗಿರುವರು.

ಬೆಳಗಿನ ಉಪಾಹಾರದಲ್ಲಿ ಸಿರಿಧಾನ್ಯಗಳ ಉಪಯೋಗ

ನಾವು ಉಪಾಹಾರದಲ್ಲಿ ತೆಗೆದುಕೊಂಡಂತಹ ಪೋಷಕಾಂಶಗಳು ಮತ್ತು ಶಕ್ತಿಯು ದಿನವಿಡಿ ಕೈಕೊಳ್ಳುವ ಕೆಲಸಗಳಿಗೆ ಚಾಲನೆಯನ್ನು ಕೊಡುತ್ತವೆ. ಬೇಡಿಕೆಯ 1/3 ಕ್ಕಿಂತ ಕಡಿಮೆ ಆಹಾರವನ್ನು ತೆಗೆದುಕೊಂಡರೆ ದೇಹದ ಸಾಮರ್ಥ್ಯ ಕುಂದುವುದು. ದೇಹಕ್ಕೆ ದಿನವಿಡೀ ಬೇಕಾದ ಶಕ್ತಿಯನ್ನು ಸಿರಿಧಾನ್ಯಗಳು ಕೊಡುತ್ತವೆ. ಅಂದರೆ ಇವು ಸಂಯುಕ್ತ ರೂಪದಲ್ಲಿರುವ ಶರ್ಕರಪಿಷ್ಟವನ್ನು ಒಳಗೊಂಡಿ ರುವುದಲ್ಲದೇ ದೇಹದ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಲು ಬೇಕಾದಂತಹ ಲಘು ಪೋಷಕಾಂಶಗಳನ್ನು ದೊರಕಿಸುವವು. ಇವುಗಳಲ್ಲಿ ನಾರಿನಾಂಶ ಹೆಚ್ಚು ಇರುವುದರಿಂದ ಆಹಾರವು ನಿಧಾನವಾಗಿ ಜೀರ್ಣವಾಗುವುದರಿಂದ, ದೇಹಕ್ಕೆ ಬಹಳ ಸಮಯದವರೆಗೆ ಶಕ್ತಿಯನ್ನು ಪೂರೈಕೆ ಮಾಡುತ್ತಿರುತ್ತವೆ.

ಇಂತಹ ಸಿರಿಧಾನ್ಯಗಳಿಂದ ತಯಾರಿಸಿದ ಉಪಾಹಾರಗಳು ಶ್ರಮಜೀವಿಗಳಿಗೆ ಸೂಕ್ತವಾಗಿರುವವು. ಅಂದರೆ ರೈತರಿಗೆ, ಕೃಷಿ ಕೂಲಿಕಾರರಿಗೆ, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ, ಮನೆ ಕಟ್ಟುವ ಕೂಲಿಗಾರರಿಗೆ.

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by MALLAPPA PATTANASHETTI

ಮನದ ಮಾತು