ಭಾರತ !

ProfileImg
25 Jul '24
1 min read


image

 
ಬಾನಿಂದ ಧರೆಗಿಳಿದು ಬಂದರು ಶ್ರೀಶಂಕರರು
ಹೆಮ್ಮೆಯೆನಿಸುತಿದೆ ನಾವಾಗಲು ಕಿಂಕರರು
ಶ್ರೀಗುರುಗಳ ಜನುಮಸ್ಥಳ ಕೇರಳದ ಕಾಲಡಿ
ಶಿಷ್ಯರಿಗೆ ಸದಾ ತಂಪೆರೆಯುವ ಗರ್ಭಗುಡಿ 

ಅನೇಕ ಶ್ಲೋಕಕ್ಕೆ ಭಾಷ್ಯವನು ಬರೆದರು
ಜನತೆಯ ಹೃದಯದಲಿ ಬೆಳಕನು ತೆರೆದರು
ಸಾಕ್ಷಾತ್ ಶಿವನ ಅವತಾರವೆಂದು ಪ್ರತೀತಿ
ಸ್ತುತಿಸಲು ನಮ್ಮ ಬಾಳಲ್ಲೆಂದೂ ಇರದು ಭೀತಿ 

ತೆರೆದಿದೆ ಅಯೋಧ್ಯೆಯಲಿ ರಾಮಮಂದಿರ
ಹೃನ್ಮನಕೆ ತಂಪೆರೆಯಲು ಎಷ್ಟೊಂದು ಸುಂದರ
ಜನರ ಮನದಲ್ಲಿ ಭವ್ಯ ಭಾರತದ ದೂರದೃಷ್ಟಿ 
ಕನಸಿನ ರಾಮರಾಜ್ಯವು ಭಗವಂತನ ಸೃಷ್ಟಿ 

ಚಿನ್ನಕೆ ಕೋಲಾರ, ಅರಮನೆಗೆ ಮೈಸೂರು 
ಹಿರಿಯ ಬುದ್ಧಿವಂತರ, ಪಂಡಿತರ ಊರು
ನದಿ, ಜಲಪಾತಗಳು ಉಕ್ಕಿ ಹರಿಯುತಿವೆ 
ಸಂಜೆಯ ವಿಹಾರಕೆ ಕೈಬೀಸಿ ಕರೆಯುತಿವೆ 

ಬೇಲೂರಲಿ ಬೇರೂರಿದೆ ಪೌರಾಣಿಕದ ಕೆತ್ತನೆ 
ಕಲಾಗಾರನ ಕುಂಚದಲಿ ಸುಂದರದ ಕಲ್ಪನೆ
ಊಟಿಯಲಿ ಹುಲ್ಲೇ ಮಲಗಲು ಸೋಪಾನ
ಶ್ರದ್ಧೆಯಲಿ ಮಾಡಬಹುದಿಲ್ಲೇ ಪ್ರಾಣಾಪಾನ 

ಪರಿಸರದ ನಾಲ್ಕು ಸುತ್ತ ಹಚ್ಚಹಸಿರಿನ ವನ 
ಪ್ರಕೃತಿಯ ಸೊಬಗನ್ನು ಮೆಚ್ಚಿಹುದು ಮನ
ನಮ್ಮದು ತೆಂಗು-ಕಂಗುಗಳ ಹಸಿರಿನ ತೋಟ
ಭತ್ತ, ರಾಗಿ, ಗೋಧಿ ಬೆಳೆಯಲು ರಸದೂಟ 

ನೆಟ್ಟರು ತೆಂಕು, ಬಡಗುತಿಟ್ಟು ಯಕ್ಷಗಾನ ಕಲೆ    
ಪ್ರಿಯರುಳಿಸಿ ಬೆಳೆಸಲು ಕಂಡರೊಂದು ನೆಲೆ
ನಮ್ಮದು ದೇವರ, ಸಂತರ, ದಿಗ್ಗಜರ ನಾಡು 
ಜ್ಞಾನಿಗಳ, ಪುರಸ್ಕೃತರ, ವಿದ್ವಾಂಸರ ಬೀಡು 

ದೇವಾಲಯಗಳೇ ಧ್ಯಾನಕೆ ತಂಪಿನ ಸಾಗರ
ಜ್ಞಾನದ ನಿಧಿಗೆ ಶಾಲೆ,ವಿದ್ಯಾಲಯಗಳ ಆಗರ
ಕೈಗೊಂಬರು ಬಾಹುಬಲಿಗೆ ಮಸ್ತಕಾಭಿಷೇಕ
ಶಿರಬಾಗಿ ಶರಣಾಗಲಿರದು ಬಾಳಲಿ ಶೋಕ 

ಅಂದು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಯಾನ 
ಅದೆಷ್ಟೋ ನೇತಾರರ ಜೀವಗಳ ಬಲಿದಾನ 
ಮಹಾತ್ಮಾ ಗಾಂಧಿ ಸ್ವಾತಂತ್ರ್ಯದ ಪಿತಾಮಹ
ಸ್ವಾತಂತ್ರ್ಯ ದೊರೆಯಲು ತಣಿಯಿತು ದಾಹ 

ಅಹಿಂಸೆಯೇ ಪರಮಧರ್ಮವೆಂಬ ಮಹಾತ್ಮ
ಗೋರಕ್ಷಣೆಗೆ ಮಂಗಲ್ಪಾಂಡೆಯೇ ಪರಮಾತ್ಮ
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕೆಂದ ತಿಲಕರು
ಅನೇಕ ಹಿರಿಯ ಚೇತನರವರ ಹಿಂಬಾಲಕರು 

ಕೇಸರಿ ಬಿಳಿ ಹಸಿರಲ್ಲಿ ಧ್ವಜವು ಹಾರುತಿದೆ  
ಮಧ್ಯೆ ಅಶೋಕಚಕ್ರದಲಿ ಎತ್ತರಕೆ ಏರುತಿದೆ 
ಈ ದಿನ ತಲೆಯೆತ್ತಿ ಶಿಸ್ತಿನಲಿ ಸಲ್ಲಿಸಲು ನಮನ
ಒಕ್ಕೊರಲ ದನಿಯಲಿ ರಾಷ್ಟ್ರಗೀತೆ ಜನಗಣಮನ 

ಈಗ ತುಂಬಿದೆ ಸ್ವಾತಂತ್ರ್ಯಕೆ ಎಪ್ಪತ್ತೇಳು ವರುಷ
ದೇಶದ ಅಭಿಮಾನಿ ಎನಲು ಮನದಲಿ ಹರುಷ
ಭಾರವನಿಳಿಸುತ ಹೊಸ ದ್ವಾರವ ತೆರೆಯಲು
ರಥವನೇರಬೇಕಿದೆ ಸಂತಸದಿ ಮೆರೆಯಲು 

ತಮಸ್ಸನ್ನು ಅಳಿಸಿ ಜ್ಯೋತಿಯ ಬೆಳಗಲು
ಸತ್ಯ, ಧರ್ಮದ ಪಥದಲಿ ಮೊಳಗಲು
ಆಚರಿಸೋಣ ಸ್ವಾತಂತ್ರ್ಯದ ದಿನವನು
ಹೋರಾಟಗಾರರತ್ತ ಹರಿಸೋಣ ಮನವನು 

ಗಡಿಯಲಿ ದೇಶವ ಕಾಯುವ ಯೋಧರು
ದೇಶ(ಹ)ವ ರಕ್ಷಿಸಲಿಂದು ಸ್ಮರಿಸಲು ಬಾಧ್ಯರು
ಉಗ್ರರು ನುಸುಳದಂತೆ ಕಷ್ಟಗಳ ಶಮನ
ಶಿಸ್ತಿನ ಸಿಪಾಯಿಗಳಿಗೊಂದು ನಮನ 

#INDIAN_INDEPENDANCE _DAY_2024
#AYRA_WRITING_CONTEST_2024 

✍ ಮುರಳಿಕೃಷ್ಣ ಕಜೆಹಿತ್ತಿಲು

Category:India



ProfileImg

Written by Murali Krishna

DTP Worker, Vittal, Mangalore

0 Followers

0 Following