ಭಾರತ

ನನ್ನ ಹೆಮ್ಮೆ ನನ್ನ ದೇಶ

ProfileImg
22 Jul '24
1 min read


image

ವಜ್ರ ಲೇಪಿತವೆಂಬಂತೆ ಹಿಮರಾಶಿಯ ಮುಕುಟವ ಧರಿಸಿಹಳು ನನ್ನೀ ಮಾತೆ ವನಸಿರಿಯ ಹಸಿರ ಸೀರೆಯನುಟ್ಟು ಕಂಗೊಳಿಸುತಿಹಳು ನನ್ನೀ ಜನ್ಮಧಾತೆ 

ಭೋರ್ಗರೆವ ಕಡಲಂತೆ ತುಂಬಿ ತುಳುಕುವುದು ಪ್ರೀತಿ ವಾತ್ಸಲ್ಯ ಮಮತೆಯಾ ಒಡಲು ವೈವಿಧ್ಯತೆಯ ನಡುವೆಯು ಏಕತೆಯ ಪ್ರೀತಿಯನಿತ್ತು ಸಲಹು ತಿಹಳು ನನ್ನೀ ದೇವತೆ 

ಭರತ ಮಾತೆಯ ಮಣ್ಣ ಕಣ ಕಣದ ಸುವಾಸನೆಯು ತುಂಬುವುದೆಲ್ಲರಲೂ ನವ ಚೈತನ್ಯ ಈಕೆಯ ಸೌಂದರ್ಯವಂತೂ ಸೆಳೆಯುವುದೆಲ್ಲರ ಕಣ್ಮನವ ಮೂಡಣದ ಅರುಣ ನನ್ನ ತಾಯ ಕೆನ್ನೆಗೆ ಅರಿಶಿಣವ ಹಚ್ಚಿದರೆ ಪಡುವಣದಿ ಸೂರ್ಯ ಹಣೆಯ ಸಿಂಧೂರವಾಗಿಹನು ಗಿರಿ ವನಗಳೆಲ್ಲಾ ಕೈ ಬಳೆಗಳಾಗಿ ಆ ಬಳೆಗಳ ಸಪ್ಪಳ ಹಕ್ಕಿಗಳ ಇನಿ ಧನಿಯಾಗಿ ಹೊರ ಹೊಮ್ಮುತ್ತಿದೆ 

ಶತ ಶತಮಾನಗಳಿಂದ ತ್ಯಾಗ ಬಲಿದಾನದಂತಹ ಕಠೋರ ಕ್ಷಣಗಳ ಕೂಪದಲಿ ನೊಂದು ಬೆಂದಿಹ ನನ್ನೀ ಮಾತೆ ಇಂದು ಮರು ಜನ್ಮವೆತ್ತಿ ನಗುತ ಸಲಹುತಿಹಳು ಎಲ್ಲರನು ಹರುಷದಲಿ ಈಕೆಯ ಈ ಸಂತಸ ಚಿರಕಾಲ ಉಳಿಯಲೆಂದು ನಾವೆಲ್ಲಾ ಪಣತೊಟ್ಟು ಕೈ ಜೋಡಿಸೋಣ 

ಭರತ ಮಾತೆಯ ಹರುಷದ ಈ ಜ್ಯೋತಿ ಭಾರತಿಯರೆಲ್ಲರ ಮನೆ ಮನಗಳಲ್ಲಿ ದಿವ್ಯ ಜ್ಯೋತಿಯಾಗಿ ಕಂಗೊಳಿಸಲು ನಾವೆಲ್ಲಾ ಆ ಜ್ಯೋತಿಗೆ ಏಕತೆಯ ಎಣ್ಣೆಯಾಗಿ ಒಗ್ಗಟ್ಟಿನ ಬತ್ತಿಯಾಗಿ ಸಂತಸದಿ ಕೂಡಿ ಬಾಳೋಣ 

ನಮ್ಮೀ ಭರತ ಮಾತೆಯ ಹರುಷದಿ ಕೂಡಿದ ಸಂತಸದ ನಗೆ ಬೀರುವ ಈ ಸ್ವಾತಂತ್ರ್ಯದ ರಥ ಸಾಗಲಿ ಹೀಗೆ ನಿತ್ಯವು ಭರತ ಮಾತೆಯ ಹೆಮ್ಮೆಯ ತ್ರಿವರ್ಣಧ್ವಜ ನಿತ್ಯವೂ ಹಾರಲಿ ಬಾನೆತ್ತರ ಭರವಸೆಯ ಬೆಳಕಿನಡೆ ನುಗ್ಗಿ ಹಾರಲಿ ನಮ್ಮೀ ತ್ರಿವರ್ಣಧ್ವಜ ಭರತ ಮಾತೆಯ ಕರುಳ ಕುಡಿಗಳ ಹರುಷದ ಕಲರವ ಝೇಂಕರಿಸಲಿ ಉದಯ ರವಿಯ ಕೊನೆಯಲಿ ,,.

 

                            ಅರ್ವಿಕಾ ಜಿ( ಕವನ ಜಿ)

 

Category:India



ProfileImg

Written by Kavana G