ನಾವೇಷ್ಟೇ ದೊಡ್ಡವರಾದ್ರು ಮನಸ್ಸು ಸದಾ ಬಾಲ್ಯದ ದಿನಗಳನ್ನೇ ನೆನಪು ಮಾಡಿಕೊಳ್ತಾ ಇರುತ್ತೆ. ಬಾಲ್ಯದ ಚಂದದ ದಿನಗಳಿಗೊಮ್ಮೆ ಮತ್ತೆ ಹೋಗಿ ಬರುವ ಹಾಗಿದ್ರೆ ಅದೇಷ್ಟು ಚಂದವಾಗಿರ್ತಿತ್ತು..? ಆದ್ರೆ ಸಮಯ ಮುಗಿದು ಹೋಗಿದೆ. ಆಗಾಗ್ಗೆ ನೆನಪುಗಳ ಜೋಳಿಗೆಗೆ ಕೈ ಹಾಕಿ ಸಿಹಿಯಾದ ನೆನಪುಗಳನ್ನಾ ನೆನಪಿಸಿಕೊಳ್ಳಬೇಕಷ್ಟೇ.!
ಸಾಕಷ್ಟು ದಿನಗಳ ನಂತರ ಊರಿಗೆ ಭೇಟಿ ನೀಡಿದ್ದೆ. ಮಲೆನಾಡಿನ ಸ್ವಚ್ಛಂದ ಪರಿಸರದಲ್ಲಿರೊ ನನ್ನೂರು ಸದಾ ಹಚ್ಚಹಸುರಿನಿಂದ ಕಂಗೊಳಿಸುತ್ತೆ. ಜುಳು ಜುಳು ನೀರಿನ ನಾದ, ಅಡಿಕೆಯ ತೋಟ, ಕೊಟ್ಟಿಗೆಯಲ್ಲಿ ಅಂಬಾ ಅನ್ನೋ ಕರುಗಳು, ಅಂಗಳದ ತುಂಬೆಲ್ಲಾ ಬಣ್ಣ ಬಣ್ಣದ ಹೂ ಬಿಡುವ ಗಿಡಗಳು, ಮನೆಯ ಹಿಂದಿರೊ ಗುಡ್ಡ, ಆ ಗುಡ್ಡದಲ್ಲಿ ಮುಸ್ಸಂಜೆ ಸಮಯದಲ್ಲಿ ಮೆಲ್ಲಗೆ ಮುಳುಗೊ ಕೆಂಬಣ್ಣದ ಸೂರ್ಯ, ರಾತ್ರಿ ಆಕಾಶವನ್ನು ನೋಡಿದ್ರೆ ಕಾಣಿಸೋ ಮಿನುಗುವ ನಕ್ಷತ್ರಗಳು, ಮೋಡದ ಮರೆಯಲ್ಲಿ ಅಡಗಿ ಕುಳಿತ ಚಂದ್ರ ,ಮಳೆಗಾಲದ ಸಮಯದಲ್ಲಿ ಮನೆಯ ಹಂಚಿನಿಂದ ಬೀಳೊ ಮಳೆಹನಿಗಳು , ಮಳೆಯಿಂದ ಸೃಷ್ಟಿಯಾದ ಪುಟ್ಟ ಪುಟ್ಟ ಜಲಪಾತಗಳು , ಮುಗಿಲೆತ್ತರಕ್ಕೆ ಬೆಳೆದ ಮರಗಳನ್ನು ನೋಡುವಾಗ ಮುಖದಲ್ಲಿ ಮೂಡುತ್ತಿದ್ದ ನಗು , ಅಂಗಳದ ಅಂಚಿನಲ್ಲಿ ಬೆಳೆದ ಮಲ್ಲಿಗೆಯ ಪರಿಮಳ, ಹಲಸು, ಮಾವು , ಬಾಳೆಕಾಯಿಂದ ಮಾಡಿದ ಅಡುಗೆಗಳು , ಚಳಿಗಾಲದ ಸಮಯದಲ್ಲಿ ಬರುವ ಅಡಿಕೆ ಕೊಯ್ಲು, ದೂರದಲ್ಲಿದ್ದ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಹಾದಿ, ಬಾಲ್ಯದ ಸ್ನೇಹಿತರು, ಚಳ್ಳೆಹಣ್ಣು , ಪಿಳ್ಳೆಹಣ್ಣು , ಕೌಳಿಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ತಿಂದ ನೆನಪು, ತಮ್ಮನೊಟ್ಟಿಗೆ ಆಡುತ್ತಿದ್ದ ಆಟ, ಶಾಲೆಯಲ್ಲಿ ಆಡುತ್ತಿದ್ದ ನಾಟಕ, ಆಲೆಮನೆಯಲ್ಲಿ ಕುಡಿಯುತ್ತಿದ್ದ ಕಬ್ಬಿನ ಹಾಲು, ತಿನ್ನುತ್ತಿದ್ದ ನೊರೆಬೆಲ್ಲ, ಅಮ್ಮ ಮಾಡುತ್ತಿದ್ದ ಬಗೆ ಬಗೆಯ ಅಡುಗೆಗಳು, ಮಲ್ಲಿಗೆ ಮಾಲೆಗಾಗಿ ಪರಿತಪಿಸುತ್ತಿದ್ದ ದಿನಗಳು, ತೋಟಕ್ಕೆ ಹೋದಾಗೆಲ್ಲ ಸಿಗುತ್ತಿದ್ದ ಕರವೀರದ ಹೂವು, ಮೊಗೆಕಾಯಿಂದ ಮಾಡುತ್ತಿದ್ದ ತೆಳ್ಳೇವು,ಮಾವಿನಹಣ್ಣಿನ ರಸಾಯನ, ಪುಟ್ಟ ಕರುಗಳೊಂದಿಗೆ ಕಳೆಯುತ್ತಿದ್ದ ಸಮಯ, ಕಾಗದದ ದೋಣಿ ಮಾಡಿ ನೀರಿನಲ್ಲಿ ತೇಲಿಬಿಟ್ಟ ಖುಷಿ, ಗದ್ದೆಯ ಬದುವಿನಲ್ಲಿ ಹೆಜ್ಜೆ ಹಾಕಿದ ದಿನಗಳು, ಹೀಗೆ ಅದೆಷ್ಟೋ ನೆನಪುಗಳಿವೆ. ಹೀಗೆ ಏನನ್ನೋ ಆಲೋಚನೆ ಮಾಡ್ತಾ ಕುಳಿತಿದ್ದವಳಿಗೆ ನಮ್ಮ ಮನೆಯ “ಅಟ್ಟ” ನೆನಪಾಯ್ತು. ಬೇಡದ ಇರೋ ಹಳೆ ಸಾಮಾನುಗಳನ್ನಾ ಇಡೋ ಜಾಗ ಅದು. ಅಲ್ಲಿಯೂ ಕೂಡಾ ರಾಶಿ ರಾಶಿ ನೆನಪುಗಳಿವೆ.
ಹೀಗೆ ಅಟ್ಟದಲ್ಲಿ ಓಡಾಡುತ್ತಿದ್ದವಳಿಗೆ ಕಣ್ಣಿಗೆ ಬಿದ್ದಿದ್ದು ನಾನು ಚಿಕ್ಕವಳಿರುವಾಗ ಆಡತಿದ್ದ ಗೊಂಬೆ, ಆ ಗೊಂಬೆಯ ಒಂದು ಕೈ ಮುರಿದುಹೋಗಿದೆ ,ಕಣ್ಣುಗಳೆರಡು ಕಿತ್ತುಹೊಗಿವೆ, ಅದಕ್ಕೆ ತೊಡಿಸಿದ್ದ ಬಟ್ಟೆ ಹರಿದುಹೋಗಿದೆ, ಆದ್ರೂ ಏನೂ ಆಗಿಲ್ಲವೆನೋ ಅನ್ನೋ ತರಹಾ ತಣ್ಣಗೆ ಕುಳುತುಬಿಟ್ಟಿದೆ.
ಅಲ್ಲೆ ಇದ್ದ ಒಂದಿಷ್ಟು ಚೀಲಗಳ ಮೇಲೆ ನನ್ನ ಕಣ್ಣು ಬಿತ್ತು,ಅದರಲ್ಲೆನಿದೆ ಅಂತಾ ಬಿಚ್ಚಿ ನೋಡಿದ್ರೆ ಎಲ್ಲಾ ನಾನು ಚಿಕ್ಕವಳಿದ್ದಾಗ ಆಡುತ್ತಿದ್ದ ಆಟದ ಸಾಮಾನುಗಳು . ಅದರ ಜೊತೆ ತುಂತುರು, ಚಂದಮಾಮ ಕಥೆ ಪುಸ್ತಕಗಳು!ಅದನ್ನೆಲ್ಲಾ ನೋಡುತಿದ್ದವಳಿಗೆ ಬಾಲ್ಯದ ದಿನಗಳು ಮತ್ತೊಮ್ಮೆ ತುಂಬಾ ನೆನಪಾದ್ವು.
ಚಿಕ್ಕವಳಾಗಿರುವಾಗ ಅದ್ಯಾಕೋ ಗೊತ್ತಿಲ್ಲ ಅಡುಗೆ ಆಟ ಆಡೋದು ನಂಗೆ ತುಂಬಾ ಇಷ್ಟವಾಗಿತ್ತು. ಶಿರಸಿಯ ಜಾತ್ರೆಯಲ್ಲಿ ಬರೊ ಅಡುಗೆ ಸೆಟ್ಟನ್ನಾ ತಂದುಕೊಡು ಅಂತಾ ತುಂಬಾ ಹಠ ಮಾಡಿದ್ದೆ ಅಪ್ಪನ ಹತ್ತಿರಾ,ಅಂತೂ ಒಂದಿಷ್ಟು ಅಂಗಡಿಯನ್ನಾ ಸುತ್ತಿ ಅಪ್ಪಾ ಅಡುಗೆ ಸೆಟ್ಟನ್ನಾ ಹುಡುಕಿ ತಂದುಕೊಟ್ಟಿದ್ರು,ಆ ಸೆಟ್ಟಿನಲ್ಲಿ ಅಡಿಗೆ ಮಾಡೋ ಪಾತ್ರೆಗಳು, ಮಿಕ್ಸರ್ , ಪುಟ್ಟ ಪುಟ್ಟ ಲೋಟಗಳು,ಪ್ಲೇಟ್ಗಳಿದ್ವು ಅದನ್ನೆಲ್ಲಾ ಮನೆ ಅಂಗಳದಲ್ಲಿ ಹರಡಿಕೊಂಡು ಆಡುತಿದ್ದೆ, ಅಲ್ಲೆ ಗಿಡದಲ್ಲಿರೋ ಸೊಪ್ಪುಗಳನ್ನಾ ಕತ್ತರಿಸಿ ಪಲ್ಯ ಅಂತಿದ್ದೆ, ಮಣ್ಣನ್ನಾ ಕಲಸಿ ಅದನ್ನಾ ನೆಲದ ಮೇಲೆ ತಟ್ಟಿ ಅದಕ್ಕೊಂದಿಷ್ಟು ಹೂವಿನ ಅಲಂಕಾರ ಮಾಡಿ ಕೇಕ್ ಅಂತಾ ಕತ್ತರಿಸ್ತಿದ್ದೆ ತುಂಬಾ ಚೆನ್ನಾಗಿತ್ತು ಆ ಆಟ.
ಅಮ್ಮಾ ಸೀರೆ ಉಟ್ಟಿಕೊಂಡು ಅಡಿಗೆ ಮಾಡ್ತಾಳೆ ನಾನು ಹಾಗೆ ಮಾಡಬೇಕು ಅಂತಾ ಅಮ್ಮನ ಹತ್ತಿರಾ ನಂಗೂ ಸೀರೆ ಉಡಸಿಕೊಡು ಅಂತಾ ಗೊಗರಿತಿದ್ದೆ ,ನನ್ನ ರಗಳೆ ತಾಳೊಕಾಗದೆ ಅಮ್ಮಾ ಸೀರೆಅಂಗಿಯನ್ನಾ ಹೊಲಿಸಿಕೊಟ್ಟಿದ್ಲು, ಅದನ್ನಾ ಹಾಕಿಕೊಂಡು ಅಡುಗೆ ಆಟ ಆಡುವಾಗೆಲ್ಲಾ ನಾನು ಅರಮನೆಲ್ಲಿರೊ ರಾಜಕುಮಾರಿ ,ತುಂಬಾ ಚೆನ್ನಾಗಿ ಅಡುಗೆ ಮಾಡ್ತಿನಿ ಅಂತೆಲ್ಲಾ ಭಾವಿಸ್ತಿದ್ದೆ.
ಅಡುಗೆ ಸೆಟ್ಟಿನ ಮೇಲಿದ್ದ ಕಣ್ಣು ಪುಸ್ತಕದ ರಾಶಿ ಮೇಲೆ ಹೋಯಿತು, ಶಿರಸಿಗೆ ಹೋದಾಗೆಲ್ಲಾ ತುಂತುರು ಬೇಕು ಅಂತಾ ಪುಸ್ತಕದ ಅಂಗಡಿ ಮುಂದೆ ಹೋಗಿ ನಿಂತ್ಕೊಬಿಡುತ್ತಿದ್ದೆ, ಆ ಅಂಗಡಿಯವನಿಗೆ ಇಂದಿಗೂ ನನ್ನ ನೆನಪಿದೆ, ತುಂತುರು ಜೊತೆ ನನ್ನ ಕನ್ನಡ ಶಾಲೆಯ ಪುಸ್ತಕಗಳು ,ಗ್ರೀಟಿಂಗ್ಸಗಳು ಎಲ್ಲಾ ಹಾಗೆ ಇವೆ.ಅಮ್ಮನಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿರೊದರಿಂದ ನನ್ನೆಲ್ಲಾ ಸಾಮಾನುಗಳನ್ನಾ ಹಾಗೆ ಇಟ್ಟಿದ್ದಾಳೆ ,ಇಪ್ಪತ್ತಕ್ಕು ಹೆಚ್ಚು ವರ್ಷಗಳಿಂದಾ ಅವು ಬೆಚ್ಚಗೆ ಅಟ್ಟದ ಮೇಲೆ ಜೋಪಾನವಾಗಿ ಕುಳಿತಿವೆ.
ಸ್ವಲ್ಲ ದೊಡ್ಡವಳಾಗುತಿದ್ದ ಹಾಗೆ ಅಡುಗೆ ಆಟ ಬೇಜಾರ್ ಬಂದಿತು,ಮನೆ ಅಕ್ಕಪಕ್ಕದಲ್ಲಿ ಯಾರು ಹುಡುಗಿರು ಇಲ್ಲದೆ ಇರೋ ಕಾರಣ ತಮ್ಮನ ಜೊತೆ ಕ್ರಿಕೆಟ್ ಆಡೊಕೆ ಶುರು ಮಾಡಿದೆ .ಮನೆ ಮುಂದೆ ವಿಶಾಲವಾದ ಅಂಗಳವಿದ್ದಿದ್ದರಿಂದ ಬಾಲ್ ಕಳೆದುಹೋಗುತ್ತಿರಲಿಲ್ಲಾ, ನಂಗೆ ಬ್ಯಾಟಿಂಗ್ ಮಾಡೋ ಆಸೆ ಇದ್ರು ತಮ್ಮಾ ಕೊಡುತ್ತಿರಲಿಲ್ಲಾ, ಅಂತೂ ಒಂದಿಷ್ಟು ಜಗಳ ಮಾಡಕೊಂಡ ಮೇಲೆ ಒಬ್ಬೊಬ್ಬರಿಗೆ 3 ಒವರ್ ಅಂತಾ ರೂಲ್ಸ ಮಾಡಿಕೊಂಡು ಆಟ ಆಡುತಿದ್ವಿ.
ತುಂಬಾ ಆಟಗಳನ್ನಾ ಆಡುತಿದ್ದ ಕಾರಣಕ್ಕೊ ಏನೋ ರಾತ್ರಿ ಕನಸಿನಲ್ಲಿ ಬಹುಮಾನಗಳನ್ನಾ ತೆಗೆದುಕೊಂಡಹಾಗೆ, ರಾಹುಲ್ ದ್ರಾವಿಡ್ನಾ ಭೇಟಿ ಮಾಡಿ ಮಾತಾಡಿದ ಹಾಗೆ, ಒಲಂಪಿಕ್ಸ್ ನಲ್ಲಿ ಬಂಗಾರದ ಪದಕಾ ಗೆದ್ದಿರೊ ತರಹ ಕನಸುಗಳು ಬೀಳುತಿದ್ವು! ಮಳೆ ಬರಲಿ ,ಚಳಿ ಇರಲಿ, ಸುಡೋ ಬಿಸಿಲಿದ್ರೂ ಯಾರದ್ರೂ ಆಡೋಕೆ ಬರ್ತಿಯಾ ನಮ್ಮಜೊತೆ ಅಂತಾ ಕೇಳಿದ್ರೆ ಓಡುತಿದ್ದೆ, ಆಗ ಆಡತಿದ್ದ ಎಲ್ಲಾ ಆಟಗಳು ಮನಸ್ಸಿಗೆ ತುಂಬಾ ಖುಷಿ ಕೊಡುತಿದ್ವು.
ಆ ಬಾಲ್ಯದ ದಿನಗಳಲ್ಲಿ ನನ್ನೊಳಗೊಂದು ಮುಗ್ಧತೆ ,ಮುಖದ ಮೇಲೊಂದು ನಿಷ್ಕಲ್ಮಷವಾದ ನಗು ಇತ್ತು.ತುಂಬಾ ಚೆನ್ನಾಗಿತ್ತು ನನ್ನ ಬಾಲ್ಯದ ದಿನಗಳು,ಮನುಷ್ಯ ಎಷ್ಟೇ ಬೆಳೆದರು ಅವನ ಮನಸ್ಸಿನ ಮೂಲೆಯಲ್ಲೊಂದು ಮಗು ಅಡಗಿರುತ್ತೆ!
ನನಗೆ ಮನಸ್ಸಿಗೆ ಬೇಜಾರಾದಾಗೆಲ್ಲಾ ಆಡೋಕೆ ಅಂತಾ ಯಾರನ್ನಾದರೂ ಕರೆದ್ರೆ ಇಷ್ಟು ದೊಡ್ಡವಳಾಗಿದ್ದಿಯಾ ಈಗೆಂತಾ ಆಟ ಆಡ್ತಿಯೆ ನೀನು? ನಾವ್ಯಾರು ಬರಲ್ಲಾ ಅಂತಾರೆ, ಬರೊಕೆ ಟೈಂ ಕೊಡಾ ನಮಗಿಲ್ಲಾ ಅಂತಾರೆ, ಯಾಕೆಂದ್ರೆ ಎಲ್ಲರ ಕೈಗಳಲ್ಲೂ ಮೊಬೈಲ್ ಬಂದು ಕುಳಿತುಕೊಂಡಿದೆ ! ಅದರಲ್ಲೆ ಗೆಮ್ ಆಡ್ಕೊ ನಮ್ ಪ್ರಾಣಾ ತಿನ್ನಬೇಡಾ ಅನ್ನೊರು ಇದ್ದಾರೆ.
ನನ್ನ ವ್ಯಕ್ತಿತ್ವದಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ ಆದರೆ ಆ ನಿಷ್ಕಲ್ಮಷವಾದ ನಗು ಇಂದಿಗೂ ನನ್ನ ಮುಖದ ಮೇಲೆ ಹಾಗೆ ಉಳಿದುಕೊಂಡಿದೆ. ಅದೇಷ್ಟು ನೆನಪುಗಳ ನನ್ನ ಮಸ್ತಕದಲ್ಲಿ ಉಳಿದುಕೊಂಡಿವೆ ಅಂದ್ರೆ ಅವುಗಳನ್ನೆಲ್ಲಾ ನೆನಪು ಮಾಡಿಕೊಳ್ತಾ ಕೂತರೆ ಅಕ್ಷರಗಳನ್ನು ಬಳಸಿ ಚಂದದ ಸಾಲುಗಳನ್ನು ಕಟ್ಟಬಹುದು..! ಅಟ್ಟದಲ್ಲಿರುವ ಸಾಮಾಗ್ರಿಗಳನ್ನು ಕಣ್ತುಂಬಿಕೊಂಡು ಕೆಳಗೆ ಇಳಿಯುವಾಗ ಕಣ್ಣು ಕಿತ್ತುಹೋಗಿರೊ ಗೊಂಬೆ ನನ್ನನ್ನಾ ನೋಡಿ ನಗುತ್ತಿದ್ದ ಹಾಗೆ ಅನ್ನಿಸಿತು ,ಅದನ್ನಾ ನೋಡಿ ನಾನು ಜೋರಾಗಿ ನಗೊಕೆ ಶುರುಮಾಡಿದೆ.ನೀವು ಒಮ್ಮೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಮನಸಾರೆ ನಕ್ಕಿಬಿಡಿ…! ಕಳೆದು ಹೋದ ಸವಿ ನೆನಪುಗಳ ಜೋಪಡಿಯಲ್ಲೊಮ್ಮೆ ಇಣುಕಿ..! ಆಯ್ತಾ ..
- ಮೇಘಾ ಸಂತೋಷ್
0 Followers
0 Following