ಕಲ್ಪನೆ ಮತ್ತು ವಾಸ್ತವ

 ಬದುಕು ಭಾವಗಳ ನಡುವೆ

ProfileImg
14 May '24
3 min read


image

ಕಲ್ಪನೆ ಮತ್ತು ವಾಸ್ತವ ಒಟ್ಟಿಗೆ ಸಂಭವಿಸುವುದು ವಿರಳ. ಒಂದು ವೇಳೆ ಸಂಭವಿಸಿದರೆ ಅನುಭವಿಸಲಾರದಷ್ಟು ಆನಂದವಾಗುತ್ತದೆ. ಬೇಕು ಎನ್ನುವುದು ಸಿಗುವುದಿಲ್ಲ. ಎಷ್ಟೋ ದಿನಗಳ ನಂತರ ಸಿಕ್ಕರೆ ಅದು ಪುನಃ ಬೇಕೆನಿಸುವುದೂ ಇಲ್ಲ. ಈ ಬೇಕು- ಬೇಕುಗಳ ನಡುವೆ ಬದುಕು ಬೇಡವಾಗುತ್ತದೆ. ವಸ್ತುವಾಗಲೀ ವ್ಯಕ್ತಿಯಾಗಲೀ ಹತ್ತಿರವಿದ್ದಾಗ ಮಾತ್ತ ವಾಸ್ತವ ಅರಿವಿಗೆ ಬರುತ್ತದೆ. ಇದಕ್ಕಾಗಿಯೇ ಇಷ್ಟು ದಿನ ಕೊರಗುತ್ತಿದ್ದೆನೇ? ಮರುಗುತ್ತಿದ್ದೆನೆ? ಎಂಬ ಪ್ರಶ್ನೆ ಕಾಡತೊಡಗುತ್ತದೆ. ಈ ಬೇಕುಗಳಿಗಾಗಿ ಮನೆ,ಮಠ,ಆಸ್ತಿ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧವಿರುತ್ತೇವೆ. ಆಸೆಯು ಬುದ್ಧಿಯ ಕೈಲಿರುವುದಿಲ್ಲ. ಭಾವನೆಗಳ ಹಿಡಿತದಲ್ಲಿರುತ್ತದೆ. ಈ ಬೇಕುಗಳಿಗಾಗಿಯೇ ನಮ್ಮವರಿಗೆ ಅದೆಷ್ಟು ನೋವು ಕೊಡುತ್ತೇವೆಂಬ ಅರಿವೂ ಕೂಡಾ ಇರುವುದಿಲ್ಲ ನಮಗೆ. ವಾಸ್ತವದ ಅರಿವಿಲ್ಲದೆ ಕಲ್ಪನೆಯಲ್ಲಿಯೆ ತೇಲಾಡುತ್ತಿರುತ್ತೇವೆ. ಬಲ್ಲವರ ಮಾತೂ ಕೇಳದ ಸ್ಥಿತಿಯಲ್ಲಿರುತ್ತೇವೆ.

ನನಗೆ ಹೀರೋಯಿನ್ ಆಗಬೇಕೆಂಬ ಆಸೆಯಿತ್ತು. ಬಣ್ಣದ ಲೋಕದಲ್ಲಿ ಬೆರೆಯಬೇಕೆಂಬ ಬಯಕೆ.‌ ಆ ಅವಕಾಶ ನನ್ನ ಒಮ್ಮೆ ಹುಡುಕಿ ಬಂದಿತ್ತು. ಹೀರೋಯಿನ್‌ಎಂದರೆ ಕೇಳಬೇಕೆ? ಐಷಾರಾಮಿ ಕಾರು,ದೊಡ್ಡ ಬಂಗಲೆ, ಭುಜದವರೆಗೂ ಇಳಿಬಿದ್ದ ಕೂದಲು.ಆ ಕಡೆ ಈ ಕಡೆ ಒಂದೆರಡು ಬಾಡಿಗಾರ್ಡ್ಸ್.‌ ಗೋಡೆಯಗಲದ ಟಿವಿ. ಅಲ್ಲಲ್ಲಿ ಹಸಿರು ಗಿಡಗಳು. ಮಣಿಯ ಕರ್ಟನ್ಗಳು. ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿತ್ತು ಜೀವನ. ಒಂದು ದಿನ ಬಿಡುವಿತ್ತು. ಬಹುದಿನಗಳಿಂದ ಓದಲಾಗದ ಪುಸ್ತಕವೊಂದು ಕಬೋರ್ಡ್‌ನಲ್ಲಿತ್ತು. ಅಡುಗೆಯವರಿಗೆ ಹೇಳಿ ಒಂದು ಲೋಟ ಸ್ಟಾಂಗ್‌ಕಾಫೀ ಮಾಡಿಸಿಕೊಂಡೆ. ಸಂಜೆ ಬಿಸಿಲು ಹದವಾಗಿ ಹೂಗಳ ಮೇಲೆ ಬಿದ್ದಿತ್ತು. ಕಿಟಕಿಯ ಕರ್ಟನ್‌ಸರಿಸಿದೆ . ಮಲ್ಲಿಗೆಯ ಪರಿಮಳ ಒಳಗಡಿಯಿಟ್ಟಿತು. ಕಾಫಿ ಹೀರುತ್ತಾ ಪುಸ್ತಕವನ್ನು ಓದತೊಡಗಿದೆ. ಸಮಯ ಕಳೆದದ್ದು ತಿಳಿಯಲಿಲ್ಲ. ಯಾಕೋ ಕಿಟಕಿ ಕಡೆ ಕಣ್ಣು ಹಾಯಿಸಿದೆ. ದೂರದ ರಸ್ತೆಯಲ್ಲಿ ಸಂತೆ ನಡೆಯುತಿತ್ತು.  ಕೆದರಿದ ಕೂದಲಿಗೆ ಕೆಂಪು ರಿಬ್ಬನ್‌ಸುತ್ತಿದ ಹುಡುಗಿಯೊಬ್ಬಳು ತೇಪೆ ಹಾಕಿದ ಹಳೆಯ ಲಂಗ ಧರಿಸಿ ಬಣ್ಣ-ಬಣ್ಣದ ಬಲೂನ್‌ಮಾರುತ್ತಾ ಅತ್ತಿತ್ತ ಓಡಾಡುತ್ತಿದ್ದಳು. ಅವಳ ಗೊಡವೆ ಯಾರಿಗೂ ಬೇಡವಾಗಿತ್ತು. ಅವಳಿಗೆ ಹಸಿದ ಹೊಟ್ಟೆಯ ಚಿಂತೆಯಾಗಿದ್ದರೆ ಅಲ್ಲಿರುವ ಕೆಲವರು ತಿಂದು ಉಳಿದಿದನ್ನು ಎಸೆಯುವ ಚಿಂತೆಯಲ್ಲಿದ್ದರು. ಹೆಂಗಸೊಬ್ಬಳು ಸ್ವಚ್ಛಂದವಾಗಿ ಬೀದಿ ತಿರುಗುತ್ತಾ ಸೊಪ್ಪು ಮಾರುತ್ತಿದ್ದಳು. ಚಿಕ್ಕ ಹುಡುಗನೊಬ್ಬ ಅಪ್ಪನ ಭುಜದ ಮೇಲೆ  ಕುಳಿತು ಐಸ್‌ಕ್ಯಾಂಡಿ ಚೀಪುತ್ತಿದ್ದ. ಕೆಲವು ಹುಡುಗರ ಗುಂಪು ಲಗೋರಿ ಆಡುತ್ತಾ ಕೇಕೆ ಹಾಕುತ್ತಿದ್ದರು. ಟೀ ಮಾರುವ ಹುಡುಗನೊಬ್ಬ ಸೈಕಲ್‌ಟ್ರಿಣ್‌ಎನಿಸುತ್ತಾ ಸುಯ್ಯೆಂದು ಹಾದು ಹೋದ. ಅಂಗಡಿಯವನು ಹೊಂಬಣ್ಣದ ಜಿಲೇಬಿ ಮಾರುತ್ತಿದ್ದರೆ ಆಸೆ ಕಂಗಳು ಮತ್ತು ಹಸಿದ ಹೊಟ್ಟೆ ಅದಕ್ಕಾಗಿ ಹಣವ ಬೇಡುತ್ತಿದುದು..ಮನ ಕರಗುವಂತಿತ್ತು.

ಎಲ್ಲವಿದ್ದೂ ಇಲ್ಲದಂತಿರುವ ನಾವು ಇಲ್ಲದಿರುವವರ ಬಗ್ಗೆ ಯೋಚಿಸುವುದಿಲ್ಲ. ಮತ್ತೂ ಮತ್ತೂ ಎಲ್ಲವನ್ನು ಗಳಿಸುವ ಬಗ್ಗೆ ಯೋಚಿಸುತ್ತೇವೆ. ಮನೆಯ ಮೇಲೆ ಮನೆ , ಮನೆಗೊಂದು ಹೊರಗೊಂದು ಕಾರು, ಕಂತೆ ಕಂತೆ ಹಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಮ್ಮೆ ಊರಿಗೆ ಹೋಗಿದ್ದೆ. ಮನೆಯ ಬಣ್ಣ ಬದಲಾಗಿತ್ತು. ಕಳೆದ ಬೇಸಿಗೆಯಲ್ಲಿ ಹೊಡೆಸಿದ ಬಣ್ಣ ಮಾಸಲಾಗಿತ್ತು. ಮಲೆನಾಡಾದ್ದರಿಂದ ಮಳೆ ಹೆಚ್ಚು. ಸೂರಿನ ಮಸಿಯೆಲ್ಲಾ ಮಳೆಯ ನೀರಿನೊಂದಿಗೆ ಸೇರಿ ಗೋಡೆಯ ಮೇಲೆ ಇಳಿದು ಬಣ್ಣ ಹಾಳು ಮಾಡಿತ್ತು. ಬಣ್ಣಗೆಟ್ಟ ಬದುಕಾಗಲೀ ಬಣ್ಣ ಮಾಸಿದ ಮನೆಯಾಗಲೀ ಯಾರಿಗೆ ಸಮಾಧಾನ ತಂದೀತು? ಬಣ್ಣ ಹಚ್ಚಿದ ಬದುಕು ಕ್ಷಣಕ್ಕೆ ಖುಷಿ ಕೊಟ್ಟೀತು. ಬಣ್ಣ ತೆಗೆದ ಮೇಲೆ ಎಲ್ಲರೂ ಒಂದೆ . ಎಲ್ಲರ ಸಮಸ್ಯೆಗಳೂ ಒಂದೆ. ಸಮಸ್ಯೆಗಳ ರೂಪ ಮತ್ತು ಪ್ರಮಾಣದಲ್ಲಿ ವಿವಿಧತೆಯಿರಬಹುದಷ್ಟೆ. ಅವಕಾಶ ಇರುವಷ್ಟು ದಿನ ನಾವಾಡುವ ಆಟವಷ್ಟೆ. ಸಮಯ ಸರಿಗಟ್ಟುವವರು ಯಾರು?  ಸಮಯವಷ್ಟೇ ಎಲ್ಲದಕ್ಕೂ ಉತ್ತರ ಕೊಟ್ಟೀತು.

ಇಲ್ಲದಿರುವುದರ ಹಿಂದೆ ಓಡುವ ನಾವು ಇರುವುದರ ಬಗ್ಗೆ ಚಿಂತಿಸುವುದಿಲ್ಲ. ಆಷಾಢದ ಮೇಘಗಳನ್ನು ಗಮನಿಸದ ನಾವು ಶ್ರಾವಣದ ಬಗ್ಗೆ ಯೋಚಿಸುತ್ತಿರುತ್ತೇವೆ. ಮಾಗಿ ಮಲ್ಲಿಗೆಯ ಘಮದ ಬದಲಾಗಿ ವಸಂತದ ಚಿಗುರಿನ ನಿರೀಕ್ಷೆಯಲ್ಲಿರುತ್ತೇವೆ. ಸದಾ ಹೊಸತರ ನಿರೀಕ್ಷೆಯ ಮೇಲೇ ನಿಂತಿರುವ ಜೀವನ ನಮ್ಮದಷ್ಟೆ.

.ಅಮ್ಮನಿಗೊಂದು ಫೋನಾಯಿಸಿದೆ..ನಾಟ್ ರೀಚೇಬಲ್ ಬಂತು..ಹಳ್ಳಿಯ ಜೀವನವೇ ಹಾಗಲ್ಲವೆ? ಕಾಡುಮೂಲೆ ..ಕರೆಂಟ್ ಇರುವುದಿಲ್ಲ...ಹಾಳಾದ ರಸ್ತೆಗಳು..ಮುರಿದು ಬಿದ್ದ ಶಾಲೆಗಳು..ಫಸಲು ಕೈಗೆ ಸಿಗುವ ಭರವಸೆಯಿರುವುದಿಲ್ಲ..ಯಾಕೋ ಹಳ್ಳಿಯಲ್ಲೇ ನನ್ನವರೊಂದಿಗೆ ನನ್ನತನದಿಂದ ಬದುಕಬೇಕೆನಿಸಿತು..ಆಸ್ತಿಯನ್ನೆಲ್ಲಾ ಮಾರಿ ಬಂದ ದುಡ್ಡನೆಲ್ಲ ತುಂಬಿಕೊಂಡು ಹಳ್ಳಿ ದಾರಿ ಹಿಡಿದೆ...ನನ್ನ ನಿರ‍್ಧಾರದ ಬಗ್ಗೆ ಹೆಮ್ಮೆಯಿತ್ತು...ನನ್ನ ಜನರೊಂದಿಗೆ ಬದುಕುವ ಆಸೆ ಕೂಡಾ...!!! 

ಹಿತ್ತಲಲ್ಲಿ ಸೊಕ್ಕಿ ಬೆಳೆದ ಸೇವಂತಿಗೆ..ಅಟ್ಟವಿರುವ ಅಂಗಳ..ಮಲೆನಾಡ ಮನೆ..ಮಣ್ಣ ವಾಸನೆ..ಆಲೆಮನೆಯ ಬೆಲ್ಲದ ಘಮ..

ನನ್ನೂರು,ಊರ ದೇವರ ಜಾತ್ರೆ. ನಾಗರ ಪಂಚಮಿಯ ಜೋಕಾಲಿ ಎಲ್ಲವೂ ನೆನಪಾಯಿತು. ಬಿಕ್ಕಿ- ಬಿಕ್ಕಿ ಅಳತೊಡಗಿದೆ. ಅಮ್ಮ ಬಂದು ಎಬ್ಬಿಸಿದಾಗಲೇ ವಾಸ್ತವ ಅರಿವಾಗಿದ್ದು. ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡೆ. ತಾಯಿ ಮಡಿಲಲ್ಲಿ ಸಿಗುವ ಸುಖ ಬೇರೆಲ್ಲೂ ಸಿಗುವುದಿಲ್ಲವೆನಿಸಿತು. ತಾಯಿ ಮಡಿಲಲ್ಲೇ ಮತ್ತೊಮ್ಮೆ ಮಗುವಾದೆ! ಹಳ್ಳಿಯ ಜೀವನ ಬೇವಿನ ಕಹಿಯಂತಿದ್ದರೂ ನನ್ನೂರೆಂದರೆ ..ಬೆಲ್ಲದ ಸಿಹಿಯಂತೆ...

 

 

Category:Stories



ProfileImg

Written by Soumya Jambe