💥 ಭ್ರಮೆ💥

ProfileImg
18 Jun '24
6 min read


image

ಐದಾರು ದಿವಸಗಳಿಂದ ಮಂದಾರ ಎಂದಿನಂತಿಲ್ಲ ಎಂಬುದನ್ನು ಅವಳ ತಾಯಿ  ಮಧುರ ಗಮನಿಸಿದ್ದಳು‌ ‌."ಹುಶಾರಿಲ್ವಾ ಮಂದಾರ, ಡಲ್ ಆಗಿದ್ದೀಯಲ್ಲಾ ಅಂತ  ಕೇಳಿದಾಗ , 'ಹಾಗೇನಿಲ್ಲಮ್ಮಾ ಪ್ರಾಜೆಕ್ಟ್ ವರ್ಕ್ ಮಾಡ್ತಾ ಇದ್ದೇನೆ.‌ಹಾಗಾಗಿ  ಜಾಸ್ತಿ ಕೆಲಸ' ಅಂತ ಹಾರಿಕೆಯ ಉತ್ತರ ಕೊಟ್ಟಿದ್ದಳು.ಆದರೆ ಮಧುರಳ ಸೂಕ್ಷ್ಮ ಕಣ್ಣುಗಳಿಗೆ ಮಂದಾರಳಿಗೆ ಬೇರೆ ಯಾವುದೋ ಚಿಂತೆಯಿದ್ದ ಹಾಗೆ ಕಂಡಿತು.
ಮಂದಾರ ಸುಖೇಶ್ ಮತ್ತು ಮಧುರಳ ಏಕಮಾತ್ರ ಪುತ್ರಿ.‌ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಳು. ನೋಡಲು ಅಪ್ರತಿಮ ಸುಂದರಿ. ಅವಳ ಮೈತ್ರಿಯನ್ನು ಬಯಸಿದ ಹುಡುಗರು ಅನೇಕ. ಆದರೆ ಅವಳ ಗಾಂಭೀರ್ಯ ನೋಡಿ ದೂರ ಸರಿಯುತ್ತಿದ್ದರು.
ಅವಳ ಲೆಕ್ಚರರೇ ಒಮ್ಮೆ" ಏನ್ರೀ ಮಂದಾರ ಲೆಕ್ಚರರ್ ನಾವೋ ನೀವೋ. ಅದೆಷ್ಟು ಗಂಭೀರ ಇದ್ದೀರಾ. ರಿಲಾಕ್ಸ್ ಆಗಿ" ಅಂತ  ಹೇಳಿದ್ದೂ ಉಂಟು.
ಅವಳು ಹಾಗಿರಲು ಅವಳ ಅಮ್ಮನೂ ಕಾರಣ. ಬಾಲ್ಯದಿಂದಲೇ  ಶಿಸ್ತಿನಿಂದ ಸಾಕಿದ್ದರು. ಗೆಳತಿಯರೊಡನೆ ತಿರುಗಾಟ,ಚೆಲ್ಲು ಚೆಲ್ಲಾಗಿ ಆಡುವುದು ‌ಮುಂದಾದವುಗಳಿಗೆ ಪ್ರೋತ್ಸಾಹ ಕೊಡಲೇ ಇಲ್ಲ. ಮಂದಾರಳಿಗೆ ಅಮ್ಮನ  ಈ ಒತ್ತಡ  ಕೋಪವನ್ನೂ ತರಿಸುತ್ತಿತ್ತು.
.ಆದರೆ ಅಮ್ಮನಿಗೆ ಎಂದೂ ಎದುರಾಡಿದವಳಲ್ಲ. ತಂದೆ ಸುಖೇಶ್ ಮಾತ್ರ ಅವಳಿಗೆ ಯಾವ ನಿರ್ಬಂಧವನ್ನೂ ಹಾಕುತ್ತಿರಲಿಲ್ಲ. ಮಧುರ  ಮಗಳ‌ ಮೇಲೆ ನಿರ್ಬಂಧ ಹೇರಲು ಮುಖ್ಯ ಕಾರಣ ಅವಳದ್ದೇ ಅನುಭವ.‌
ಮಧುರ  ಪದವಿ ಓದುವಾಗ ಅವಳ ಕಾಲೇಜಿಗೆ ಇಂಗ್ಲಿಷ್ ಲೆಕ್ಚರರ್ ಒಬ್ಬರು   ಹೊಸದಾಗಿ ಬಂದಿದ್ದರು.. ಅವರ ಪಾಠಕ್ಕೆ  ವಿದ್ಯಾರ್ಥಿಗಳು ಮಾರುಹೋಗಿದ್ದರು. ಅವರು ಪ್ರೇಮದ ಬಗೆಗಿನ ಪಾಠ ಮಾಡುವಾಗಲೆಲ್ಲಾ ಮಧುರಳಿಗೆ ಅವರೇ ಹೀರೋನಂತೆ ಕಾಣುತ್ತಿದ್ದರು‌ . ಅವರ ಜೊತೆಗೆ ಮಾತಾಡಲು  ಹಾತೊರೆಯುತ್ತಿದ್ದ  ಹುಡುಗಿಯರಲ್ಲಿ ಅವಳೂ ಒಬ್ಬಳು‌ . ಒಮ್ಮೆ  ಸ್ಟಾಫ್ ರೂಮಿಗೆ  ಯಾತಕ್ಕೋ ಹೋದಾಗ  ಆ ಲೆಕ್ಚರರ್ ಒಬ್ಬರೇ ಇದ್ದರು. ಮಧುರಳ ಮೈಯಲ್ಲಿ
ರೋಮಾಂಚನ.  ಅದೇನೋ ಅರ್ಥ ಆಗಿಲ್ಲ ಕೇಳಲಿಕ್ಕೆ ಬಂದೆ ಅಂತ ತೊದಲಿದಳು‌ ."ಯಾವುದು ಕೇಳಿ . ಹೇಳಿಕೊಡುತ್ತೇನೆ" ಅಂತ ಹೇಳಿದಾಗ ಮಧುರ  ಕವನವೊಂದನ್ನು  ತೋರಿಸಲು ಅವರ ಬಳಿಗೆ ಹೋದಳು‌ . ಅವರ ಪಕ್ಕದಲ್ಲಿ ನಿಂತಾಗ ಅಚಾನಕ್ ಆಗಿ ಅವಳನ್ನು ಬಿಗಿದಪ್ಪಿದರು‌. ಮಧುರಳಿಗೆ ಉಸಿರು ಸಿಕ್ಕಿಹಾಕಿಕೊಂಡಂತೆ ಆಯಿತು‌ . ಅಷ್ಟರಲ್ಲಿ ಬೆಲ್ ಆದುದರಿಂದ ಬಚಾವಾದಳು. ಆದರೆ ಮನಸು  ಆ ಅಪ್ಪುಗೆಯನ್ನು ಬಯಸಿದ್ದು ಸುಳ್ಳಲ್ಲ. ಜೊತೆಗೆ ತಪ್ಪಿತಸ್ಥ ಭಾವನೆಯೂ ಇತ್ತು‌‌ . ಮತ್ತೆ ಕೆಲವೇ ದಿನಗಳಲ್ಲಿ ಆ ಲೆಕ್ಚರರ್  ಬೇರೆ ಹುಡುಗಿಯರಿಗೂ ಕಿರುಕುಳ ಕೊಟ್ಟಾಗ ಸಸ್ಪೆಂಡ್ ಆದರು. ಮಧುರಳ ತಲೆಯಲ್ಲಿದ್ದ ಪ್ರೀತಿಯ ಅಮಲು ಆಗ ಇಳಿದಿತ್ತು. ಆ ಅನುಭವದಿಂದಲೇ ಈಗ ಮಗಳಿಗೂ ಹಾಗೇನಾದರೂ ಆಗಿರಬಹುದಾ ಅಂತ ಸಂಶಯ. ಆದರೆ ಅದನ್ನು ತಿಳಿಯುವುದು ಹೇಗೆ? 
‌ಮಂದಾರಳ  ನವಿಲಿನ ಕಣ್ಣು, ಹಾಲಿನಂತಹ ಮೈಬಣ್ಣ, ಕಪ್ಪು ಹೊಳೆಯುವ ಕೂದಲು ದುಂಡು ಮುಖ  ಹುಡುಗಿಯರನ್ನೂ ಸೆಳೆಯುತ್ತಿತ್ತು‌ . " ಛೇ , ಅವಳಂತೆ ಸೌಂದರ್ಯ ಇರಬೇಕಾಗಿತ್ತು ಅಂತ ಕನಸು ಕಂಡವರೆಷ್ಟು ಹುಡುಗಿಯರೋ.  
ಮಧುರಳ ಸಂಶಯ ಸುಳ್ಳಲ್ಲ. ಅವಳೊಂದಿಗೆ ಪ್ರೊಜೆಕ್ಟ್ ಮಾಡುತ್ತಿದ್ದ ಸಾಕ್ರೆಟಿಸ್ ನ ಮೇಲೆ ಅವಳಿಗೆ ಆಕರ್ಷಣೆ ಉಂಟಾಗಿತ್ತು. ಹದಿ ಹರೆಯದವರು ಜೊತೆಗಿದ್ದಾಗ ಆಕರ್ಷಣೆ ಸಹಜ. ಮಂದಾರಳೂ ಇದಕ್ಕೆ ಹೊರತಾಗಿಲ್ಲ. ಅಲ್ಲದೆ ಆತ ತುಂಬಾ ಬುದ್ಧಿವಂತ. ಅವನು ಸುಂದರಾಂಗನಾದರೂ ಅವಳಿಗೆ ಇಷ್ಟವಾದುದು ಅವನ ನಯ ವಿನಯ, ಬುದ್ಧಿವಂತಿಕೆ ಮತ್ತು ಚುರುಕುತನ. ಬಹುಷಃ ಅವಳಿಗೆ  ಹುಡುಗರೊಡನೆ ಅಷ್ಟು ಸಂಪರ್ಕ ಇಲ್ಲದುದೂ ಇನ್ನೊಂದು ಕಾರಣವಿರಬಹುದು. ಸಾಕ್ರೆಟಿಸ್ ಗೂ ಅವಳಲ್ಲಿ ಅನುರಾಗ ಉಂಟಾಗಿತ್ತು.
ಅವಳು ಪ್ರೀತಿ ವ್ಯಕ್ತ ಪಡಿಸದಿದ್ದರೂ ಅವಳ ವರ್ತನೆಯಿಂದ ಮತ್ತು ಸಾಕ್ರೆಟಿಸ್ ನ ‌ಮಾತುಗಳಿಂದ ಅವರಿಬ್ಬರು ಪ್ರೇಮದಲ್ಲಿ ಬಿದ್ದಿದ್ದಾರೆಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅವಳ ಸಹಪಾಠಿಗಳು ಅವರನ್ನು ಚುಡಾಯಿಸಿದ್ದೂ ಉಂಟು.
ಮೊದಮೊದಲು ಅದು ಕೇವಲ ಆಕರ್ಷಣೆ ಮಾತ್ರ ಅಂತ ತಿಳಕೊಂಡಿದ್ದ ಮಂದಾರಳಿಗೆ ಅದು ಯಾವಾಗ ಪ್ರೇಮಕ್ಕೆ ತಿರುಗಿತು ಅಂತ ಗೊತ್ತಾಗಲಿಲ್ಲ. 
ಒಂದು ಕ್ಷಣವೂ ಬಿಟ್ಟಿರದಂತಹ ಭಾವನೆ ಅವರಲ್ಲಿ.  ವಿದ್ಯಾಭ್ಯಾಸ ಕೊನೆಗೊಳ್ಳುತ್ತಾ ಬಂತು. ಇಬ್ಬರಿಗೂ ಕ್ಯಾಂಪಸ್ ಸಿಲೆಕ್ಷನ್ ನಲ್ಲಿ ಒಂದೇ ಕಂಪೆನಿಯಲ್ಲಿ ಕೆಲಸ ಸಿಕ್ಕಿತು ‌. 
ಸಾಕ್ರೆಟಿಸ್ ಮಂದಾರಳಲ್ಲಿ ತನ್ನ ಪ್ರೇಮ ಪ್ರಕಟಪಡಿಸಿ,  ಒಂದೆರಡು ವರ್ಷಗಳಾದ ಮೇಲೆ ಮದುವೆಯಾಗೋಣ ಅಂತ ಹೇಳಿದಾಗ ಅವಳು ಒಪ್ಪಿಗೆಯಿತ್ತಳು. ಕೆಲಸಕ್ಕೆ ಸೇರಲು ಇನ್ನೂ ಎರಡು ತಿಂಗಳು ಕಾಯಬೇಕಿತ್ತು.  ಮಂದಾರ ಮತ್ತು ಸಾಕ್ರೆಟಿಸ್ ನ ಸಲ್ಲಾಪ ಮೊಬೈಲಿನಲ್ಲಿ ನಡೆಯುತ್ತಿತ್ತು‌ . ಒಂದೆರಡು ಸಲ  ಸಾಕ್ರೆಟಿಸ್ ಮಂದಾರಳ‌ ಮನೆಗೆ ಬಂದಿದ್ದ. ತಾಯಿಗೆ ಆತ ತನ್ನ  ಸಹಪಾಠಿ ಅಂತ ಪರಿಚಯಿಸಿದ್ದಳು ಮಂದಾರ. 
ಅದಕ್ಕಿಂತ ಹೆಚ್ಚಿನ ಸಂಬಂಧ ಇರಬಹುದೆಂದು ಮಧುರ ಊಹಿಸಿರಲೂ ಇಲ್ಲ. ಮೇಲಾಗಿ ಆತ ಬೇರೆ ಧರ್ಮದವನು. ತನ್ನ ಕಣ್ಗಾವಲಿನಲ್ಲಿ ಬೆಳೆದ ಮಗಳು ಪ್ರೀತಿ , ಪ್ರೇಮ ಅಂತ ತಲೆಕೆಡಿಸಿಕೊಳಾಳಲಿಕ್ಕಿಲ್ಲ.‌ಮೇಲಾಗಿ ಈಕೆ ತಾನು ಅವಳ ಪ್ರಾಯದಲ್ಲಿದ್ದುದಕ್ಕಿಂತ ಹೆಚ್ಚು ಪ್ರಬುದ್ಧೆಯಂತೆ ಕಾಣುತ್ತಿದ್ದಳು. ಹಾಗಾಗಿ ಮಗಳ ಮೇಲೆ ಅವಳಿಗೆ ತುಂಬು ಭರವಸೆಯಿತ್ತು.
ಮಕ್ಕಳ  ವಯಸ್ಸು ಏರುತ್ತಿದ್ದಂತೆ  ಮದುವೆ ಮಾಡಿಸುವುದು ಹೆತ್ತವರ ಜವಾಬ್ದಾರಿ ಎಂಬ ಸಮಾಜ ನಮ್ಮದು. ಮಧುರ , ಸುಖೇಶ್ ದಂಪತಿಗಳೂ ಇದ್ದೊಬ್ಬ ಮಗಳ‌ ಮದುವೆ ಮಾಡಿ ಮುಗಿಸಲು ಬಯಸಿದ್ದರು. ಮಧುರಳಂತೂ  ಮಗಳ ಮದುವೆಯನ್ನು ಅದ್ದೂರಿಯಾಗಿ  ಮಾಡುವ ಕನಸು ಕಾಣತೊಡಗಿದ್ದಳು. ಆಗಲೇ. ಅವಳಿಗೆ ಮಂದಾರಳ ಪ್ರೀತಿಯ ಬಗ್ಗೆ ತಿಳಿದುದು. ಅನ್ಯ ಧರ್ಮ ದವರ ಸಂಬಂಧ ಬೇಡ ಅಂತ ಗೋಗರೆದರೂ ಮಂದಾರ 'ಸಾಕಿ‌‌'ಯನ್ನೇ ಮದುವೆಯಾಗುವುದು ಅಂತ ಹಠ ಹಿಡಿದಳು.
" ಅಮ್ಮ ಅವನು ಯಾವುದೇ ಧರ್ಮ ಅನುಸರಿಸುವುದಿಲ್ಲ. ಅವನ ಅಪ್ಪ ಅಮ್ಮ 
ವಿಚಾರವಾದಿಗಳು. ನಾನು ಹಿಂದೂ ಧರ್ಮವನ್ನು ಅನುಸರಿಸಿದರೂ ಅವನ ಅಥವಾ ಅವನ ಮನೆಯವರಿಂದ ತಕರಾರು ಇಲ್ಲ. ಹಾಗೆ ಅವನ ಮನೆಯವರೂ ಒಪ್ಪಿಕೊಂಡಿದ್ದಾರಮ್ಮ‌ ." ಅಂತ ಹೇಳಿದಾಗ ಮಧುರ , " ಅದಿನ್ನೂ ಅಪಾಯ‌. ಯಾವ ಧರ್ಮವನ್ನೂ ಒಪ್ಪಿಕೊಳ್ಳದವರು!! ಆದರೂ ಅವನು ಹುಟ್ಟಿದ ಧರ್ಮ  ಇದ್ದೇ ಇದೆಯಲ್ಲ." ಹೀಗೆ ಅಮ್ಮ ಮಗಳಲ್ಲಿ ವಾದ ವಿವಾದ ನಡೆಯುತ್ತಿತ್ತು‌ . ಮೃದು ಸ್ವಭಾವದ ಮಂದಾರಳಿಗೆ ಹೀಗೆ ಮಾತಾಡಲು ಧೈರ್ಯ ಕೊಟ್ಟುದು ಅವಳ ಪ್ರೇಮ‌ ‌ .
ಪ್ರೇಮ ಕುರುಡು.ಅದರ ಶಕ್ತಿಯ ಅಗಾಧತೆಯ ಅರಿವು ಮಂದಾರ ಸುಖೇಶ್ ದಂಪತಿಗಳಿಗಾಯಿತು. ಸುಖೇಶನಿಗೆ ಮಾತು ಕಡಿಮೆ.  ಮಗಳಿಗೆ ಮನಸು ಬದಲಾಯಿಸಲು ಒತ್ತಾಯ ಮಾಡಿದನು. ಅವನಿಗೆ ನಿವೃತ್ತಿ ಹೊಂದಲು ಇನ್ನೂ ಮೂರು ವರ್ಷಗಳಿದ್ದವು. ಅಷ್ಟರಲ್ಲಿ ಮದುವೆಮಾಡಿ ಬಿಡಲು ನಿರ್ಧಾರ ಮಾಡಿದ್ದ. ಆದರೆ ಅವನ ನಿರ್ಧಾರಕ್ಕೆ ಪೂರಕ ವಾತಾವರಣವಿರಬೇಕಲ್ಲಾ. ಹೆತ್ತವರ ಒಪ್ಪಿಗೆಯಿಲ್ಲದೆ ಮದುವೆಯಾಗುವುದಿಲ್ಲ. ಹೇಗಾದರೂ ಮಾಡಿ ಅವರು ಒಪ್ಪುವಂತೆ ಮಾಡುತ್ತೇನೆ ಅಂತ ಸಾಕ್ರೆಟಿಸ್ ನಲ್ಲಿ  ಮಂದಾರ ಹೇಳುತ್ತಲೇ ಬಂದಳು.
ಒಂದು ದಿನ ಸಿಟ್ಟಿನಲ್ಲಿ' ನಿನ್ನ ಹೆತ್ತವರು ಒಪ್ಪಿಗೆ ಕೊಡಲ್ಲ, ನಮ್ಮ ಮದುವೆ ನಡೆಯಲ್ಲ. ನಾವೇ ರೆಜಿಸ್ಟರ್ ಮದುವೆ ಮಾಡಿಕೊಳ್ಳೋಣ'  ಅಂತ ಸಾಕ್ರೆಟಿಸ್ ಹೇಳಿದಾಗ  ಮಂದಾರ ಒಪ್ಪಲೇ ಇಲ್ಲ. 
ತನ್ನ ಹೆತ್ತವರೊಂದಿಗೆ ವಾದ ಮಾಡಿ ಅವರು ಒಪ್ಪದಾಗ "ನಾನು  ಮದುವೆಯೇ ಆಗಲ್ಲ.ಹೀಗೇ ಇರುತ್ತೇನೆ" ಅಂತ ಗಲಾಟೆ ಮಾಡಿದಳು..
ಸಾಕ್ರೆಟಿಸನಿಗೂ ಮಂದಾರಳನ್ನು ಒಪ್ಪಿಸುವುದು ಕಷ್ಟವೆನ್ನಿಸಿತು.ದಿನಾ ಅವಳನ್ನು ನೋಡುತ್ತಾ ಎಷ್ಟು ದಿನ ಕಳೆಯುವುದು ಅಂತ  ಆತ ತಾನಿದ್ದ ಕಂಪೆನಿಯನ್ನು  ಬಿಟ್ಟು ಬೇರೊಂದು ಕಂಪೆನಿಗೆ ಸೇರಿಕೊಂಡ.
ಮಂದಾರಳಿಗೆ ನೋವಾದರೂ ಅವನ ಆ ನಿರ್ಧಾರದಿಂದ ಅವನನ್ನು ಮರೆಯಲು ಒಳ್ಳೆಯ ಉಪಾಯ ಅಂತ ತಿಳಕೊಂಡಳು. ಸಾಕ್ರೆಟಿಸನೂ ಹೇಳಿದ್ದ, ," ನಿನ್ನನ್ನು ಮದುವೆಯಾಗದಿದ್ದರೆ ಬೇರೆ ಯಾರನ್ನೂ ಮದುವೆಯಾಗಲಾರೆ.‌ಬ್ರಹ್ಮಚಾರಿಯಾಗಿಯೇ ಇರುವೆ." ಅಂತ. 
ದೂರ ಇದ್ದರೂ ಅವರಿಬ್ಬರ ನಡುವೆ ಸಂವಹನ ನಡೆಯುತ್ತಿತ್ತು.ಹೀಗೆಯೇ ಮೂರು ವರ್ಷ ಕಳೆದುಹೋಯಿತು.
ಇತ್ತ ಮಂದಾರಳ ಹೆತ್ತವರಿಗೆ ಅವಳ ಮದುವೆಯದೇ ಚಿಂತೆ. ಈ ಚಿಂತೆಯಲ್ಲಿಯೇ ಅಂತರ್ಮುಖಿಯಾಗಿದ್ದ ಸುಖೇಶ್ ಒಂದು ಬೆಳಿಗ್ಗೆ ಏಳಲೇ ಇಲ್ಲ. ಮಧುರಳ ಗೋಳು ಇನ್ನೂ ಹೆಚ್ಚಿತು. ಮಂದಾರಳಿಗೆ ತಪ್ಪಿತಸ್ಥ ಭಾವನೆ.  ಮಧುರ ಹೇಳಿದಳು. "ನೋಡು ಮಂದಾರ,  ಆದದ್ದು ಆಯಿತು. ಅಪ್ಪನೂ ಇಲ್ಲ. ನನಗೆ ಇನ್ನು ಯಾವ ಆಸೆಯೂ ಇಲ್ಲ. ಯಾವ ಅವಮಾನವೂ ಇಲ್ಲ. ಈಗ ನೀನು ಆ ಸಾಕ್ರೆಟಿಸನನ್ನೇ ಮದುವೆಯಾಗು. ಒಂಟಿಯಾಗಿ ಹೆಣ್ಣು ಮಕ್ಕಳು ಇರುವುದು ಕಷ್ಟ. ನಾನ್ಯಾವಾಗ ಗೊಟಕ್ ಅಂತೀನೋ ಗೊತ್ತಿಲ್ಲ." 
ತಾಯಿಯ ಮಾತು ಕೇಳುತ್ತಿದ್ದಂತೆ ಮಂದಾರಳ  ಕಣ್ಣಲ್ಲಿ ನೀರಿಳಿಯಿತು. ಈ ದುಃಖಕ್ಕೆ ತಾನೇ ಕಾರಣ ಆದುದು ಅವಳ  ಬೇಸರ ಹೆಚ್ಚಲು ಇನ್ನೊಂದು ಕಾರಣ.
ಕೊನೆಗೆ ಸಾಕ್ರೆಟಿಸ್ ನನ್ನೇ ಮದುವೆಯಾಗಲು ನಿರ್ಧರಿಸಿದಳು.‌ಅಂದ ಹಾಗೆ ಆತನೊಡನೆ ಮಾತನಾಡದೆ  ತಿಂಗಳುಗಳೇ ಆಗಿದ್ದವು. ತಂದೆಯ ಸಾವಿನ ನಂತರ ತಾನೂ ದುಃಖದಲ್ಲಿದ್ದುದರಿಂದ ಮಾತನಾಡಲಾಗಿರಲಿಲ್ಲ.  ತಾನು ತನ್ನ ತಂದೆಯ ಸಾವಿನ ಬಗ್ಗೆ ತಿಳಿಸಿದ್ದಕ್ಕೆ ಉತ್ತರವಿಲ್ಲ. ಅದನ್ನು ಆತ ನೋಡಿದ್ದೇ ಇಲ್ಲ. ಅರೇ , ಏನಾಯಿತು ಇವನಿಗೆ?
ಪಾಪ , ಅವನೇನಾದರೂ ಕೆಟ್ಟ ನಿರ್ಧಾರ ತೆಗೆದುಕೊಂಡನಾ! ಛೇ.. ದಿನಾ ಪತ್ರಿಕೆಗಳಲ್ಲಿ ಬರುತ್ತದಲ್ಲಾ ಮನೆಯವರ ಒಪ್ಪಿಗೆ ಇಲ್ಲದುದದಿಂದ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು ಅಂತ! ಆದರೆ ಸಾಕ್ರೆಟಿಸ್ ಅಂಥವನಲ್ಲ,  ಪ್ರಬುದ್ಧನು.  ಏನಾಗಿದೆ ಅವನಿಗೆ? ಅವನಿಗೆ ಫೋನ್ ಮಾಡಬೇಕೆಂದು  ಅವನ‌ ನಂಬರಿಗೆ ಫೋನ್ ಮಾಡಿದರೆ ನಾಟ್ ರೀಚೆಬಲ್ ಅಂತ ಬರ್ತಾ ಇದೆ.ನಿಜಕ್ಕೂ ಇದು ಅವಳಿಗೆ ಆತಂಕಕಾರಿ ವಿಷಯ. ಹಾಗಾಗಿ ತನ್ನ ಆಫೀಸಿನಲ್ಲಿದ್ದ ಆತನ ಹಳೆ ಗೆಳೆಯರಿಗೆ ಫೋನ್ ಮಾಡಿದಾಗ ಯಾರಿಂದಲೂ ಸರಿ ಉತ್ತರ ಬರಲಿಲ್ಲ.ಅವರೂ ಅವನ ಮೊಬೈಲಿಗೆ ಕರೆ ಹೋಗುತ್ತಿಲ್ಲ ಅಂತ ಹೇಳಿದಾಗ ಮಂದಾರಳಿಗೆ ಇನ್ನೂ ಭಯವಾಯಿತು. ಅವನ ಮನೆಗೆ ಫೋನ್ ಮಾಡಿದರೆ ಗೊತ್ತಾಗಬಹುದು. ಹೇಗಾದರೂ ಮಾಡಿ ಅವನ ವಿಷಯ ತಿಳಕೊಳ್ಳಬೇಕು. ಓ ದೇವರೇ , ಅವನಿಗೇನೂ ಆಗದಿರಲಿ ಅಂತ ದೇವರಿಗೆ ಮೊರೆಯಿಟ್ಟಳು. ಆತನಿಗೆ ಅಮ್ಮ ತಮ್ಮ ಮದುವೆಗೆ ಒಪ್ಪಿಗೆ ಕೊಟ್ಟ ವಿಷಯ ತಿಳಿಸಬೇಕಾಗಿತ್ತು. ಪಾಪ ಆತ ಎಷ್ಟು ನೊಂದುಕೊಂಡಿದ್ದಾನೋ ಏನೋ.ಹೀಗೆ ಯೋಚಿಸುತ್ತಾ ಹೋದಂತೆ ಅವನ ಮೇಲೆ ಅನುಕಂಪ  ಹೆಚ್ಚುತ್ತಾ ಹೋಯಿತು.ಆದರೆ ಅವನಿಗೇನೂ ಆಗಿಲ್ಲ ಅಂತ ಅವಳ‌ ಅಂತರಾತ್ಮ  ಹೇಳುತ್ತಿತ್ತು. 
ಅವಳು  ಇತ್ತೀಚೆಗೆ ಹೊಸ ಬಟ್ಟೆಗಳನ್ನೇ ತೆಗೆದುಕೊಂಡಿರಲಿಲ್ಲ. ಹಾಗಾಗಿ ಆ ದಿನ ಸಾಯಂಕಾಲ ಒಂದು ಮಾಲ್ ಗೆ ಶಾಪಿಂಗ್ ಮಾಡಲು ಹೊರಟಳು. ಸಾಕ್ರೆಟಿಸ್ ಗೆ ಇಷ್ಟವಾದ ಆಕಾಶ ನೀಲಿ ಟಾಪ್ ಕೊಂಡುಕೊಳ್ಳಲು ಬಟ್ಟೆ ಮಳಿಗೆಗೆ ಹೋದಳು.
ಅವಳಿಗೆ ಬೇಕಾದಂತಹ ಟಾಪ್ ಸಿಕ್ಕಿ ಖುಶಿಯಾಗಿ ಅದನ್ನು ಮೈಮೇಲೆ ಇಟ್ಟು ಖುಶಿಪಟ್ಟಳು. ಅಕಸ್ಮಾತ್ ಆಗಿ ಅವಳ‌ ಕಣ್ಣು  
ಬೀರುವಿನಲ್ಲಿ ಪ್ರತಿಫಲಿಸುತ್ತಿದ್ದ  ಒಂದು ಪ್ರತಿಬಿಂಬವನ್ನು ನೋಡಿ. ಆಶ್ಚರ್ಯ ಪಟ್ಟಳು. ತಿರುಗಿ ನೋಡಿದಾಗ , ನಿಜ, ಅವನೇ ಸಾಕ್ರೆಟಿಸ್.ಖುಶಿಯಾಗಿ ಸಾಕೀ... ಅಂತ ಜೋರಾಗಿ ಕೂಗಿ ಅವನ ಬಳಿಗೆ ಓಡಿದಳು. ಅಲ್ಲದ್ದವರೆಲ್ಲಾ ಅವಳತ್ತ ತಿರುಗಿ ನೋಡಿದಾಗ ಅವಳಿಗೆ ನಾಚಿಕೆಯಾಯಿತು. "ಎಲ್ಲಿದ್ದೆಯೋ , ನಿನಗೊಂದು ಗುಡ್ ನ್ಯೂಸ್ " ಅಂತ ಒಂದೇ ಉಸಿರಿನಲ್ಲಿ ಹೇಳಿದಾಗ ಸಾಕ್ರೆಟಿಸ್ ನ ಪಕ್ಕದಲ್ಲಿ ನಿಂತಿದ್ದ ಸುಂದರ ಹುಡುಗಿ ಅವನಕೈ ಹಿಡಿದೆಳೆದು "ಯಾರ್ರೀ ಅದು ?" ಅಂತ ಹೇಳಿದಾಗಲೇ ಮಂದಾರಳ  ದೃಷ್ಟಿ ಅವಳ ಕಡೆಗೆ ಹೋದುದು.  ಆಗ ಸಾಕ್ರೆಟಿಸ್ , 'ಏನೋ ಯಾರೋ ನಂಗೊತ್ತಿಲ್ಲ, ಬಹುಷಃ ಮನೋರೋಗ ಇರಬಹುದು. ಇಲ್ಲವೇ ನನ್ನನ್ನು ಬೇರೆ ಯಾರೋ ಅಂತ ತಿಳಕೊಂಡಿರಬಹುದು ಬಾ ಹೋಗೋಣ' ಅಂತ ಅವಳ ಕೈ ಹಿಡಿದು  ಹೊರಟೇ ಹೋದನು‌. ಆ ಮಾತು ಕೇಳಿ ಮಂದಾರಳಿಗೆ ದಿಗ್ಭ್ರಮೆಯಾಯಿತು. ಯಾಕೆ ಇವನಿಗೆ ನನ್ನ ಗುರುತು ಇಲ್ಲವಾ ಅಥವಾ ಇವನು 'ಸಾಕಿ' ಅಲ್ಲವಾ. ಖಂಡಿತಾ ಅವನೇ.. 
ಅವನ ಕೊರಳ ಹತ್ತಿರ ಇರುವ  ಮಚ್ಚೆಯೇ ಸಾಕ್ಷಿ.! 
ಮಂದಾರಳಿಗೆ ಮತ್ತೆ ಶಾಪಿಂಗ್ ಮಾಡುವ ಹುಮ್ಮಸ್ಸು ಉಳಿಯಲಿಲ್ಲ.  ಮನೆಗೆ ಬಂದು ಹಾಸಿಗೆಯಲ್ಲುರುಳಿ ಮನಸಾರೆ ಅತ್ತಳು.
ಸ್ವಲ್ಪ ಹೊತ್ತಿನಲ್ಲಿ   ಅವಳ ಮೊಬೈಲಿಗೆ ಒಂದು ಸಂದೇಶ ಬಂತು. ಅದು ಸಾಕ್ರೆಟಿಸ್ ನದು.
"ಡಿಯರ್, ಮಂದಾರ, ನಾನು ಮಾಲ್ ನಲ್ಲಿ ನಿನ್ನ ಪರಿಚಯವಿಲ್ಲದಂತೆ ನಟಿಸಲು ಕಾರಣವಿದೆ.ನನ್ನ ಪಕ್ಕದಲ್ಲಿ ನನ್ನ ಭಾವೀ ಪತ್ನಿ ಇದ್ದಳು.‌ ಅವಳಿಗೆ ನಮ್ಮ ವಿಷಯ ಗೊತ್ತಾಗಿ ರಂಪ ಮಾಡುವುದು ಬೇಡ.‌ಅವಳಿಗೆ ನಿಧಾನವಾಗಿ ತಿಳಿಸುವೆ. ಅಂದ ಹಾಗೆ ಪ್ರೀತಿ ,ಪ್ರೇಮ   ಸಿಗದುದಕ್ಕೆ ಚಿಂತಿಸಿ ಜೀವನ ಹಾಳು ಮಾಡುವುದು ಯಾಕೆ? ಹಾಗೆ ಇರುವುದು ಮೂರ್ಖತನವಲ್ಲವೇ.ನಮಗಿರುವುದು ಒಂದೇ ಜೀವನ ‌. ಅದಕ್ಕೆ  ನ್ಯಾಯ ಸಲ್ಲಿಸೋಣ. ನೀನು ನನ್ನನ್ನು ಮರೆಯಬೇಕೆಂದೇ ನಾನು ನಿನ್ನ ಸಂಪರ್ಕ ಕಡಿತಗೊಳಿಸಿದ್ದು. ದಯವಿಟ್ಟು ನೀನು ಮದುವೆಯಾಗು. ತಾಯಿಯನ್ನು ನೋಡಿಕೋ. ನಾನು ನಿನ್ನನ್ನು ಮರೆತಂತೆ ನೀನೂ ಮರೆಯಲು  ಕಲಿ. ಅಂದ ಹಾಗೆ ನೀನು ತಿಳಿಸಬೇಕಾಗಿದ್ದ ಗುಡ್ ನ್ಯೂಸ್ ತಿಳಿಸಬೇಡ.  ನನಗೆ ಗೊತ್ತಾಗಿದೆ. ನಿನ್ನ ಬಾಯಿಂದ ಕೇಳಿ ಮತ್ತೆ ಮನಸನ್ನು ವಿಚಲಿತ ಗೊಳಿಸಲಾರೆ‌ ತಂದೆಯ ಆಸೆಯನ್ನು ಪೂರ್ತಿ ಮಾಡಲಾಗಲಿಲ್ಲ. ಈಗ ತಾಯಿ ಇಷ್ಟಪಡುತ್ತಿದ್ದಂತೆ  ನಿಮ್ಮವರಲ್ಲೇ  ಯಾರಾದರೂ ವರನನ್ನು ಮದುವೆಯಾಗು. ಶುಭವಾಗಲಿ.
ಸಾಕ್ರೆಟಿಸ್
ಆ ಸಂದೇಶ ಓದುತ್ತಿದ್ದಂತೆ ಮಂದಾರಳಿಗೆ   ವಿಷಾದವಾಯಿತು. 'ಇವನೊಬ್ಬ ವಿಚಾರವಾದಿ.  ಸುಂದರ ಹುಡುಗಿ ಸಿಕ್ಕಿದ  ತಕ್ಷಣ  ನಿರ್ಧಾರ ಸಡಿಲವಾಯಿತು.ಭಾವನೆಗಳಿಗೆ 
ಬೆಲೆಯೇ ಇಲ್ಲವಲ್ಲಾ.  
ಈ ಪ್ರೇಮ ಪ್ರೀತಿ ಎಲ್ಲಾ ಭ್ರಮೆ ಅಂತ ಸಾಬೀತು ಪಡಿಸಿದನಲ್ಲಾ.
ಈತನ ಹಿಂದೆ ಬಿದ್ದು ತಾನು ತಂದೆಯನ್ನು ಕಳಕೊಂಡೆನಲ್ಲಾ. ಮನೆಯ ನೆಮ್ಮದಿ ಹಾಳಾಯಿತಲ್ಲಾ. ಮೊದಲೇ ತಾಯಿಯ ಮಾತು ಕೇಳಿದ್ದರೇ..'ಸಾಕ್ರೆಟಿಸ್ನ ಮೇಲೆ ಈಗ ರೋಷವುಂಟಾಯಿತು.
ಛೇ , ಇನ್ನಾದರೂ ಅಮ್ಮನನ್ನು ಖುಶಿ ಪಡಿಸಬೇಕು ಅಂತ ನಿರ್ಧರಿಸಿದ ಮಂದಾರ  ತನ್ನನ್ನು  ಮದುವೆಯಾಗಲು ಇಚ್ಛಿಸಿದ್ದ ಸಹೋದ್ಯೋಗಿ ಕೃಷ್ಣನಿಗೆ  ತನ್ನ ಒಪ್ಪಿಗೆಯನ್ನು ತಿಳಿಸಲು ನಿರ್ಧರಿಸಿದಳು.‌ಅವಳ‌ ಮನಸು ಈಗ ಹಗುರವಾಗಿತ್ತು .

✍️ಪರಮೇಶ್ವರಿ ಭಟ್ 

 

 

Category:Stories



ProfileImg

Written by Parameshwari Bhat

0 Followers

0 Following