ರಸ್ತೆ ಅಗಲೀಕರಣಕ್ಕೆ ಬೃಹತ್ ಗಿಡಗಳನ್ನು ಕಡಿದರೆ, ಅಪ್ಪಿಕೊ ಚಳುವಳಿ ಮಾದರಿ ಹೋರಾಟಕ್ಕೆ ಸಿದ್ದ :ಅಮರೇಗೌಡ ಮಲ್ಲಾಪುರ

ರಾಯಚೂರು -ಸಿಂಧನೂರು ಮುಖ್ಯ ಹೆದ್ದಾರಿಯ ಬದಿಯಲ್ಲಿ ಗಿಡಗಳಿಗೆ ಗುರುತು ಹಾಕಿದ್ದಕ್ಕೆ ಆಕ್ರೋಶ

ProfileImg
13 Jun '24
2 min read


image

ಸಿಂಧನೂರು-ರಾಯಚೂರು ಮುಖ್ಯ ಹೆದ್ದಾರಿಯ ಬದಿಗಳಲ್ಲಿ ಹಲವು ವರ್ಷಗಳಿಂದ ನೆಟ್ಟಿರುವ ಗಿಡಗಳನ್ನು ರಸ್ತೆ ಅಗಲೀಕರಣಕ್ಕಾಗಿ ಕಡಿಯಲು ಗುರುತು ಹಾಕಿರುವುದನ್ನು ಗಮನಿಸಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ ಅವರು, ಈ ಬೃಹತ್ ಮರಗಳು ಬೇಸಿಗೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಕೆಲ ಸಮಯ ವಿಶ್ರಾಂತಿ ಪಡೆಯಲು ನೆರಳಾಗಿವೆ. ಇಂತಹ ಬೃಹತ್ ಮರಗಳನ್ನು ಮತ್ತೆ ಬೆಳೆಸಲು ವರ್ಷಗಳೇ ಬೇಕಾಗುತ್ತವೆ.

ಈ ಮರಗಳನ್ನು ರಸ್ತೆ ಅಗಲೀಕರಣ ನೆಪದಲ್ಲಿ ಕಡಿಯಲು ಈಗಾಗಲೇ ಗುರುತು ಹಾಕಿರುವುದು ಪರಿಸರ ಪ್ರೇಮಿಗಳಲ್ಲಿ ಆಕ್ರೋಶ ಉಂಟುಮಾಡಿದೆ. ಈ ಮರಗಳನ್ನು ಕಡಿದರೆ ಎಲ್ಲಾ ಪರಿಸರ ಪ್ರೇಮಿಗಳ ಜೊತೆಗೂಡಿ ಗಿಡಗಳ ರಕ್ಷಣೆಗಾಗಿ ಅಪ್ಪಿಕೊ ಚಳುವಳಿ ಮಾದರಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಈಗಾಗಲೇ ಹಲವು ವರ್ಷಗಳಿಂದ ವನಸಿರಿ ಫೌಂಡೇಶನ್ ವತಿಯಿಂದ ನಗರ ಮತ್ತು ಗ್ರಾಮೀಣ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡುವ ಮತ್ತು ಅವುಗಳ ಸಂರಕ್ಷಣೆ ಮಾಡುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದೆ. ಸಿಂಧನೂರು ನಗರದ ಮಸ್ಕಿ ರಸ್ತೆಯ ಬದಿಯಲ್ಲಿ ಕಡಿದು ಹಾಕಿದ ಆಲದ ಮರವನ್ನು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ನೀರಾವರಿ ಇಲಾಖೆ ಸ್ಥಳದಲ್ಲಿ ಕ್ರೇನ್ ಮತ್ತು ಜೆಸಿಬಿ, ಟ್ರಾಕ್ಟರ್ ಮೂಲಕ ತಂದು, ಆಲದ ಮರವನ್ನು  ಪುನಃ:ನೆಟ್ಟು ಅದಕ್ಕೆ ಮರುಜೀವ ನೀಡಿ, ಅಮರಶ್ರೀ ಆಲದ ಮರ ಎಂಬ ನಾಮಕರಣ ಮಾಡಿದ ನಮ್ಮ ವನಸಿರಿ ಫೌಂಡೇಶನ್ ಕಾರ್ಯವು ಹಲವರ ಮೆಚ್ಚುಗೆಗೆ ಪಾತ್ರವಾಯಿತು.

ಇದೇ ರೀತಿ ಕೆಲವು ಗ್ರಾಮಗಳಲ್ಲಿ ಯುವಕರು ನಮ್ಮ ಕಾರ್ಯವೈಖರಿಯಿಂದ ಪ್ರೇರಣೆ ಪಡೆದು ಆಯಾ ಗ್ರಾಮದಲ್ಲಿ ಕಡಿದು ಬಿದ್ದ  ಮರಗಳನ್ನು ಪುನಃ ನೆಟ್ಟು ಮರುಜೀವ ನೀಡಿದ ಉದಾಹರಣೆಗಳು ಇವೆ.

ಇಂತಹ ಸೇವೆಯಲ್ಲಿರುವ ನಮ್ಮ ವನಸಿರಿ ಫೌಂಡೇಶನ್ ಎಲ್ಲಿಯಾದರೂ ಗಿಡಗಳನ್ನು ಕಡಿದರೆ ಅರಣ್ಯ ಇಲಾಖೆ ಗಮನಕ್ಕೆ ತಂದು ಮೊಕದ್ದಮೆ ದಾಖಲು ಮಾಡಿಸಿ, ದಂಡ ಭರಿಸುವ ಮತ್ತು ಗಿಡಗಳನ್ನು ನೆಡುವ ಕಾರ್ಯ ಮಾಡುವಂತೆ ಒತ್ತಾಯಿಸಿ ಪರಿಸರ ಜಾಗೃತಿ ಮಾಡುತ್ತಿರುವುದರಿಂದ ನಮ್ಮ ರಾಯಚೂರು ಭಾಗದಲ್ಲಿ ಪರಿಸರದ ಬಗ್ಗೆ ಕಳಕಳಿ ಕ್ರಮೇಣ ಹೆಚ್ಚುತ್ತಿದೆ ಎಂದರು.

ಆದ್ದರಿಂದ , ರಸ್ತೆ ಅಗಲೀಕರಣಕ್ಕೆ ಬೃಹತ್ ಗಿಡಮರಗಳನ್ನು ಕಡಿಯುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.  

ಈ ಸಮಯದಲ್ಲಿ ಗಿರಿಸ್ವಾಮಿ ಹೆಡಗಿನಾಳ,ಆದನಗೌಡ ,ರಾಜು ಬಳಗಾನೂರ,ದುರಗೇಶ,ವಿರಭದ್ರಯ್ಯ ಸ್ವಾಮಿ‌ ತಿಮ್ಮಾಪುರ, ಚನ್ನಪ್ಪ ಕೆ.ಹೊಸಹಳ್ಳಿ ಇದ್ದರು.

Category:NewsProfileImg

Written by Avinash deshpande

Article Writer, Self Employee