ಐಸ್ಕ್ಯಾಂಡಿ ಹನೀಫಣ್ಣಾ

ProfileImg
22 Jun '24
8 min read


image

ಛೇ.. ಹನೀಪಣ್ಣಾ ಇನ್ನೂ ಯಾಕ್ ಬರಲಿಲ್ಲ..?

ಈ ಪ್ರಶ್ನೆಯನ್ನು ಕೇವಲ ಒಂದು ತಾಸಿನಲ್ಲಿ ನನಗೆ ನಾನೇ ಬರೊಬ್ಬರಿ ನೂರು ಬಾರಿ ಪ್ರಶ್ನೆ ಕೇಳಿಕೊಂಡಿದ್ದೆ. ಸುಡು ಬಿಸಿಲಲ್ಲಿ ನನ್ನ ಹಾಗೆಯೆ ಚಡ್ಡಿ ಹಾಕುವಂಥ ನಾಲ್ಕು ಹುಡುಗರ ತಂಡ ಕಟ್ಟಿಕೊಂಡು ನಮ್ಮೂರು ಹಾಲಗಿ ಕ್ರಾಸ್​ನಲ್ಲಿ ನಿಂತುಕೊಂಡು ಹನೀಫಣ್ಣನನ್ನು ಕಾಯುತ್ತಿದ್ದೆವು. ಆಗತಾನೆ ಬೇಸಿಗೆ ರಜೆ ಶುರುವಾಗಿತ್ತು. ಹತ್ತು ತಿಂಗಳು ಕಾಲ ಬಿಟ್ಟೂಬಿಡದೆ ಬೆನ್ನಗಂಟಿದ್ದ ನನ್ನ ಪಾಟಿಗಂಟು ಮನೆಯೊಳಗಿನ ಮೂಲೆ ಸೇರಿತ್ತು. ಬೆಳಿಗ್ಗೆದ್ದು ಅರೆಬರೆ ಸ್ನಾನ ಮಾಡಿ ಅವ್ವ ಕಟ್ಟಿಕೊಟ್ಟ ಊಟದ ಡಬ್ಬಿಯನ್ನು ಸ್ಕೂಲು ಬ್ಯಾಗಿನೊಳಗೆ ಹಾಕಿಕೊಂಡು, ಹತ್ತು ಮೈಲು ದೂರವಿದ್ದ  ಕಾನ್ವೆಂಟ್​ ಸ್ಕೂಲಿಗೆ ಹೋಗುವಂಥ ಅದ್ಯಾವ ತಲೆಬಿಸಿಯೂ ಆಗ ನನ್ನ ತಲೆಯಲ್ಲಿ ಇರಲಿಲ್ಲ.

ಹನೀಫಣ್ಣಾ ತನ್ನ ಅದ್ಯಾವುದೋ ಕಾಲದ ಜಂಗು ಹಿಡಿದು ಹೋಗಿದ್ದ, ಲಟ ಲಟ ಎಂದು ಸದ್ದು ಮಾಡುತ್ತಿದ್ದ ತನ್ನ ಹಳೆಯ ಸೈಕಲ್ ಏರಿ ನಮ್ಮೂರಿಗೆ ಯಾವಾಗ ಬರುತ್ತಾನೋ? ಅವನಿಗೆ ಒಂದು ರೂಪಾಯಿ ಕೊಟ್ಟು ಅದ್ಯಾವಾಗ ನಾವು ಕೆಂಪು ಬಣ್ಣದ ಐಸ್​ಕ್ಯಾಂಡಿ ತಿನ್ನುತ್ತೇವೊ..? ಎಂದು ನಾವು ಜಪ ಮಾಡುತ್ತಿದ್ದೆವು. ಮೊದಲೇ ನಮ್ಮದು ಬಯಲುಸೀಮೆ. ಬೇಸಿಗೆ ಕಾಲದಲ್ಲಿ ನೆತ್ತಿ ಕರಗಿ ಹೋಗುವಂಥ ರಣ ರಣ ಬಿಸಿಲು ಹೊಡೆಯುತ್ತಿದ್ದರೂ ಅದ್ಯಾವುದನ್ನು ಲೆಕ್ಕಿಸದೆ ಹನೀಫಣ್ಣ ಬರುವ ಹಾದಿಯನ್ನೇ ಕಾಯುತ್ತ ನಾವು ನಿಂತಿದ್ದೆವು.

ಕೈಯಲ್ಲೊಂದು ವಿಚಿತ್ರವಾದ ತುತ್ತೂರಿಯನ್ನು ಊದುತ್ತಾ ಅವನು ಗುಡಿಸಲುಕೊಪ್ಪದಿಂದ ಸೈಕಲ್ ಏರಿ ನಮ್ಮೂರಿನತ್ತ ಬರುತ್ತಿದ್ದರೆ ನಾನಂತೂ ನನ್ನೂರಿನ ಅದ್ಯಾವ ಮೂಲೆಯಲ್ಲಿ ಇದ್ದರೂ ಗೆಳೆಯರನ್ನು  ಒಗ್ಗೂಡಿಸಿಕೊಂಡು ಅವನು ಬರುತ್ತಿದ್ದ ಹಾಲಗಿ ಕ್ರಾಸ್​ಗೆ ಓಡಿಹೋಗಿ ಕಾಯುತ್ತಿದ್ದೆವು. ಅವನು ಬರುತ್ತಿದ್ದಂಗನೇ ಅವನಿಗೆ ಎಲ್ಲರೂ ಒಂದೊಂದು ರೂಪಾಯಿಯನ್ನು ಕೊಟ್ಟೋ ಅಥವಾ ಖಾಲಿ ಸೀಸೆಗಳನ್ನೋ ಕೊಟ್ಟೋ ಅವನಿಂದ ಬಣ್ಣ ಬಣ್ಣದ ಐಸ್​ಕ್ರಿಂಗಳನ್ನು ಪಡೆದುಕೊಂಡು ತಿನ್ನುತ್ತ ನಾಲಿಗೆ ಬಾಯಿ ಕೆಂಪು ಮಾಡಿಕೊಂಡು ಊರು ತುಂಬಾ ಓಡಾಡುವುದೇ ನಮ್ಮ ಬಹುದೊಡ್ಡ ಗುರಿಯಾಗಿತ್ತು.

ಅದ್ಯಾಕೋ ಗೊತ್ತಿಲ್ಲ ನಾವು ಒಂದು ರೂಪಾಯಿ ಕೊಡುವ ಬದಲಾಗಿ ಖಾಲಿ ಸೀಸೆಗಳನ್ನು ಕೊಟ್ಟರೆ ಹನೀಫಣ್ಣ ಫುಲ್ ಖುಷ್ ಆಗಿಬಿಡುತ್ತಿದ್ದ. ನಾವು ಕೊಟ್ಟ ಒಂದೊಂದು ಸೀಸೆಗೆ ಪ್ರತಿಯಾಗಿ ಅವನು ಒಂದೊಂದು ಐಸ್​ಕ್ರೀಂ ಕೊಡುತ್ತಿದ್ದ. ನಾವು ಕೊಟ್ಟ ಆ ಖಾಲಿ ಸೀಸೆಗಳನ್ನು ಅವನು ಏನು ಮಾಡುತ್ತಿದ್ದ ಎನ್ನುವುದು ಮಾತ್ರ ನಮಗೆ ಕೊನೆತನಕ ತಿಳಿಯದ ಸಂಗತಿ. ಇನ್ನು ದಿನಬೆಳಗಾದ್ರೆ ಮನೆಯಲ್ಲಿ ಐಸ್​ಕ್ರೀಂಗಾಗಿ ರೊಕ್ಕ ಕೇಳಿದರೆ ಮನೆಯಲ್ಲಿ ಬೈದಾರೆಂದು ನಾವು ಸಣ್ಣಗೆ ಖಾಲಿ ಸೀಸೆಗಳನ್ನು ಹುಡುಕುವ ಅಭಿಯಾನ ಶುರು ಹಚ್ಚಿಕೊಂಡಿದ್ದೆವು. ಅಷ್ಟೆ ಅಲ್ಲ ಖಾಲಿ ಸೀಸೆಗಳನ್ನು ಹುಡುಕುವ ಅಭಿಯಾನದಲ್ಲಿ ಸ್ವಲ್ಪರಮಟ್ಟಿಗೆ ಯಶಸ್ಸು ಕೂಡಾ ಕಂಡಿದ್ದೆವು

ಬೇಸಿಗೆ ರಜೆಯಲ್ಲಿ ನಾನು ನನ್ನ ಚಡ್ಡಿ ದೋಸ್ತ್​ಗಳೊಂದಿಗೆ ಖಾಲಿ ಸೀಸೆಗಳನ್ನು ಹುಡುಕುವುದಕ್ಕಾಗಿಯೇ ಇಡೀ ಊರು ಸುತ್ತಾಡುತ್ತಿದ್ದೆವು. ಯಾರದ್ದೋ ದನದ ಕೊಟ್ಟಿಗೆಗಳು, ಮತ್ಯಾರದ್ದೋ ಕಣಗಳು. ಅಷ್ಟೇ ಅಲ್ಲ ಊರಲ್ಲಿರುವ ಬೇಲಿ ಸಂದಿಗೊಂದಿಗಳನ್ನು ಬಿಡದೆ ಶ್ರದ್ದೆಯಿಂದ ಖಾಲಿ ಸೀಸೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದೆವು. ಒಂದು ವೇಳೆ ಊರಲ್ಲಿ ಎಲ್ಲೂ ಸಿಕ್ಕದೆ ಹೋದರೆ ನಂತರ ನಮ್ಮ ತಂಡ ನಮ್ಮೂರ ಹೊಳಿದಂಡೆ ಕಡಿಗೆ ಹೆಜ್ಜೆ ಹಾಕುತಿತ್ತು. 

ಉರಿ ಬಿಸಿಲಿಗೆ ಹರಿಯುವ ವರದಾ ನದಿ ನೀರು ಪೂರ್ತಿ ಖಾಲಿಯಾಗಿ ಸುಡುವ ಮರಳು ಮಾತ್ರ ನಮಗಾಗಿ ಕಾದಿರುತಿತ್ತು. ನಾವು ಆ ಬರಿದಾದ ಹೊಳಿದಂಡೆ ಹಾಗೂ ಹಳಗಲ್ಲಿನಲ್ಲಿ ತಾಸುಗಟ್ಟಲೇ ಪೂರ್ತಿ ಓಡಾಡಿ ಹುಡುಕಾಟದ ಪ್ರತಿಫಲವಾಗಿ ಕನಿಷ್ಟ ಎಂಟತ್ತು ಬಾಟಲಿಗಳಾದರೂ ನಮ್ಮ ಕೈಗೆ ಸಿಗುತ್ತಿದ್ದವು. ನಮ್ಮೂರಲ್ಲಿ ಕದ್ದುಮುಚ್ಚಿ ಶೆರೆ ಕುಡುಕರ ಕೃಪೆಯಿಂದ ನಮಗೆ ಹೊಳಿದಂಡೆಯಲ್ಲಿ ಹೆಚ್ಚೆಚ್ಚು ಖಾಲಿ ಸೀಸೆಗಳು ಸಿಗುತ್ತವೆ ಎಂದು ನಮಗೆ ನಂತರ ಗೊತ್ತಾಗಿದ್ದು ನಮ್ಮೂರ ಮಲ್ಲಾಡರ ಗೋವಿಂದನಿಂದ!

ಆ ವಿಚಾರ ಗೊತ್ತಾದಾಗಿನಿಂದ ನಾವು ಹೆಚ್ಚೆಚ್ಚು ಐಸಕ್ರೀಂ ತಿನ್ನುವ ಆಸೆಗಾಗಿ ನಮ್ಮೂರಲ್ಲಿ ಕದ್ದುಮುಚ್ಚಿ ಶೆರೆ ಕುಡುಕರ ಸಂಖ್ಯೆ ಹೆಚ್ಚಾಗಲಿ ಎಂದು ನಮ್ಮೂರು ದ್ಯಾಮವ್ವನ ಗುಡಿಗೆ ಹೋಗಿ ಬೇಡಿಕೊಂಡು ಊದಿನಕಡ್ಡಿ ಬೆಳಗಿ, ಕೈಮುಗಿದು ಬಂದಿದ್ದುಂಟು. ಹನೀಪಣ್ಣಾ ಒಂದೊಂದು ಖಾಲಿ ಸೀಸೆಗೆ ತಲಾ ಒಂದೊಂದು ಕೆಂಪು ಬಣ್ಣದ ಐಸ್​ಕ್ರೀಂ ಕೊಡುತ್ತಿದ್ದರಿಂದ ಒಬ್ಬೊಬ್ಬರಿಗೆ ಕನಿಷ್ಟ ಒಂದು ಐಸ್​ಕ್ರೀಂ ಆದರೂ ನಮಗೆ ಸಿಕ್ಕೇ ಸಿಗುತಿತ್ತು.

ಒಂದು ದಿನ ನಾವೆಲ್ಲ ಸೇರಿಕೊಂಡು ಎಂದಿನಂತೆ ಹನೀಫಣ್ಣ ಬರುವುದಕ್ಕಿಂತ ಮುನ್ನ ಹತ್ತಾರು ಖಾಲಿ ಸೀಸೆಗಳನ್ನು ಹುಡುಕಲು ಶುರು ಮಾಡಿದೆವು. ಊರೊಳಗೆ, ಊರ ಹೊರಗೆ, ಹೊಳಿದಂಡೆ ಹೀಗೆ ಎಲ್ಲಾ ಕಡೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ ಒಂದೇ ಒಂದು ಖಾಲಿ ಸೀಸೆ ನಮ್ಮ ಕಣ್ಣಿಗೆ ಬೀಳಲಿಲ್ಲ. ಹಾಗಂತ ಸುಮ್ಮನೆ ಕೂರುವ ಸ್ಥಿತಿಯಲ್ಲಿ ನಾವು ಯಾರೂ ಇರಲಿಲ್ಲ. ಹಾಗಿದ್ದರೆ ಮುಂದೆನು ಮಾಡುವುದು ಎಂದು ಎಲ್ಲರೂ ಯೋಚಿಸುತ್ತಿದ್ದಾಗ ನಮಗೆ ತಕ್ಷಣ ನೆನಪಾಗಿದ್ದು ಶೆರೆ ನಾಗಮ್ಮನ ಅಂಗಡಿ. ಶೆರೆ ನಾಗಮ್ಮ ದಿನಾಲೂ ಮುಂಜಾನೆ ಹತ್ತು ಗಂಟೆ ಮೇಲೆ ಅಂಗಡಿ ಬಾಗಿಲು ತೆಗೆಯುತ್ತಿದ್ದಳು.  ಪೆಟ್ಟಿಗೆಯಂತಿದ್ದ ನಾಗಮ್ಮ ಶೆರೆ ಅಂಗಡಿಗೆ ನಮ್ಮೂರ ಕದ್ದು ಕುಡುಕರಿಗೆ ಅನುಕೂಲವಾಗಲೆಂದು ನಾಗಮ್ಮ ಅವಳ ಅಂಗಡಿ ಹಿಂದೆ ಅಂಗೈ ಅಗಲದಷ್ಟು ರಂಧ್ರವನ್ನು ಮಾಡಿದ್ದಳು.

ಶೆರೆ ನಾಗಮ್ಮ ಅಂಗಡಿ ಮುಚ್ಚಿದಾಗಲೂ ಆ ರಂಧ್ರವನ್ನು ಮಾತ್ರ ಹಾಗೆ ಬಿಡುತ್ತಿದ್ದಳು. ಆಗಾಗ ಕದ್ದುಮುಚ್ಚಿ ಕುಡಿಯುವವರನ್ನು ನೋಡುತ್ತಿದ್ದ ನಮಗೆ ಆ ರಂಧ್ರದ ಮಹಾತ್ಮೆಯು ನಮಗೆ ತಿಳಿದಿತ್ತು. ತಕ್ಷಣವೇ ಹೊಳಿದಂಡಿಯಿಂದ ತಕ್ಷಣವೇ ನಾವು ನಾಗಮ್ಮನ ಅಂಗಡಿಯತ್ತ ಹೊರಟೆವು.  ಇಬ್ಬರು ಶೆರೆ ನಾಗಮ್ಮನ ಅಂಗಡಿ ಹಿಂದೆ ಹೋಗಿ ಸೀಸೆಗಳನ್ನು ಕದಿಯುವುದು ಹಾಗೂ ಉಳಿದಿಬ್ಬರು ಯಾರೂ ನೋಡದಂತೆ ಕಾವಲು ಕಾಯುವುದು ಎಂದು ನಾವು ಮೊದಲೇ ನಿರ್ಧರಿಸಿದ್ದೆವು. ನಾನು ಹಾಗೂ ಮತ್ತೊಬ್ಬ ಯಾರಾದರೂ ಬರುತ್ತಾರೆಯೇ ಎಂದು ಕಾವಲು ಕಾಯುತ್ತ ನಿಂತರೆ. ಇನ್ನಿಬ್ಬರು ಅದರತ್ತ ಹೋಗಿ ಆಗಲೇ ಕಾರ್ಯಾಚರಣೆ ಆರಂಭಿಸಿದ್ದರು. ಇದ್ದಕ್ಕಿದ್ದಂತೆ ಖಾಲಿ ಸೀಸೆಗಳನ್ನು ಕದಿಯಲು ಆ ರಂಧ್ರದ ಒಳಗೆ ಕೈ ಹಾಕಿದ್ದ ನಮ್ಮ ಗೆಳೆಯ ಗೋವಿಂದ ಜೋರಾಗಿ ಯಪ್ಪೋ.. ಯವ್ವೋ ಎಂದು ಬೊಬ್ಬೆ ಹಾಕತೊಡಗಿದ. 

ಅವನು ಹಾಗೇ ಬೊಬ್ಬೆ ಹಾಕುವುದನ್ನು ನೋಡಿ ನಾವು ಸತ್ವೋ ಎಂದು ಅಲ್ಲಿಂದ ಮತ್ತೆ ಹೊಳಿದಂಡಿ ಕಡಿಗೆ ಓಡಿ ಹೋದ್ವಿ. ನಂತರ ಅವರೂ ನಮ್ಮ ಬೆನ್ನ ಹಿಂದೆಯೇ ಓಡಿ ಬಂದರು. ಎಲ್ಲರೂ ಹೊಳಿದಂಡಿಯಲ್ಲಿ ನಿಂತು ಸಾವರಿಸಿಕೊಂಡು ಗೋವಿಂದನಿಗೆ ಏನು ಆಯ್ತು ಎಂದು ಕೇಳಿದವು. ಆಗ ಅವನು ಅಳುತ್ತಲೇ ಅವನ ಕೈಯನ್ನು ನಮಗೆ ತೋರಿಸಿದ. ಕೈಯಗೆ ಮನೆಯೊಳಗಿನ ಬೆಕ್ಕು ಪರಚಿದಂತೆ ಅಲ್ಪಸ್ವಲ್ಪ ಗಾಯವಾಗಿತ್ತು. ರಕ್ತವೂ ಬರುತಿತ್ತು. “ಏನಾಯ್ತಲೇ ಗೋವಿಂದ ಎಂದೆವು. ಅವನು ಲೇ ನಾನು ಖಾಲಿ ಸೀಸೆಗಂತ ಒಳಗೆ ಕೈ ಹಾಕಿದೆ.. ಆಗ ಕೈಗೆ ಏನೋ ಮೆತ್ತವೆ ಹತ್ತದಂಗೆ ಆಯ್ತು ಮತ್ತಷ್ಟು ಕೈ ಚಾಚಿದೆ. ಆಗ ಬೆಕ್ಕು ಚೀರುತ್ತ ನನ್ನ ಕೈಗೆ ಪರಚಿತು ಎಂದು ಸಣ್ಣಗೆ ಅಳತೊಡಗಿದ. ಆಗ ನಾವೆಲ್ಲ ಅವನನ್ನು ಸಮಾಧಾನ ಮಾಡಿ ನಂತರ ನಮ್ಮ ನಮ್ಮ ಮನೆಗೆ ಹೋದೆವು. ವಿಚಿತ್ರ ಎಂದರೆ ಶೆರೆ ನಾಗಮ್ಮ ಕೀಲಿ ಹಾಕಿದ ಅಂಗಡಿಯೊಳಗೆ ಬೆಕ್ಕು ಬಿಟ್ಟು ಬಂದಿರ್ತಾಳೆ ಅಂತ  ನಮಗೂ ಆವಾಗ್ಲೇ ಗೊತ್ತಾಗಿದ್ದು..!

ಬೇಸಿಗೆ ರಜೆಯಲ್ಲಿ ಹನೀಫಣ್ಣನಂತೂ ಸುತ್ತಲಿನ ಹಳ್ಳಿಗಳಲ್ಲಿನ ನಮ್ಮಂಥ ಹುಡುಗರಿಗೆ ಹೆಚ್ಚೆಚ್ಚು ಐಸ್​ಕ್ರೀಂ ಮಾರಿ ಬಂದ ಹಣದಿಂದ ಅವನ ಮಕ್ಕಳಿಗೆ ಶಾಲಾ ಪುಸ್ತಕ ಹಾಗೂ ಹೊಸ ಹೊಸ ಬಟ್ಟೆಗಳನ್ನು ಕೊಡಿಸುತ್ತಾನೆಂದು ಅವ್ವ ನನಗೆ ಆಗಾಗ ಹೇಳುತ್ತಿದ್ದಳು.  ತನಗೆ ಎಂಟು ಮಕ್ಕಳು ಆಗಿರುವುದು ಭಗವಂತನ ಕೃಪೆಯೆಂದು ನಂಬುತ್ತಿದ್ದ ಹನೀಫಣ್ಣ ಅದರಲ್ಲಿ ಕನಿಷ್ಟ ತನ್ನ ಇಬ್ಬರು ಮಕ್ಕಳ್ಳನಾದರೂ ದೇಶದ ಗಡಿ ಕಾಯುವ ಸೈನಿಕರನ್ನು ಮಾಡುತ್ತೇನೆಂದು ಆಗಾಗ ಊರ ಜನರ ಎದುರಿಗೆ ಹೇಳಿಕೊಳ್ಳುತ್ತಿದ್ದ. ಅದಕ್ಕಾಗಿ ನಮ್ಮೂರಿನಿಂದ ಮಿಲಿಟರಿಗೆ ಹೋಗಿದ್ದ ಚಾದಂಗಡಿ ಫಕ್ಕೀರಸಾಬಜ್ಜನ ಮಗ ಫೀರಸಾಬ ವರ್ಷಕ್ಕೊಮ್ಮೆ ಊರಿಗೆ ಬಂದಾಗ ನಮ್ಮ ಐಸ್​ಕ್ಯಾಂಡಿ ಹನೀಫಣ್ಣ ಫೀರಸಾಬನೊಂದಿಗೆ ಕೂತುಕೊಂಡು ತಾಸುಗಟ್ಟಲೇ ತನ್ನ ಮಕ್ಕಳನ್ನು ಮಿಲಿಟರಿಗೆ ಕಳುಹಿಸುವ ಬಗ್ಗೆ ಹೇಳಿಕೊಳ್ಳುತ್ತಿದ್ದನು. ಅದಕ್ಕೆ ಪೂರ್ವತಯಾರಿ ಎಂಬಂತೆ ಹನೀಫಣ್ಣನ ಹಿರಿಯ ಮಗ ಕಬೀರ ಬೆಳಿಗ್ಗೆ 5 ಗಂಟೆಗೆ ಎದ್ದು ಊರ ಹೊರಗೆ ರನ್ನಿಂಗ್ ಮಾಡಿ ದೇಹವನ್ನು ಅವನ ಹುರಿಗೊಳಿಸುತ್ತಿದ್ದ.

ಇನ್ನು ಬೇಸಿಗೆಯಲ್ಲಿ ಮಾತ್ರ ತನ್ನ ಹಳೆಯ ಸೈಕಲ್ ಏರಿ ಊರೂರು ಸುತ್ತಿ ಐಸ್​ಕ್ರೀಂ ಮಾರುತ್ತಿದ್ದ ಹನೀಫಣ್ಣ ಚಳಿಗಾಲ ಹಾಗೂ ಮಳೆಗಾಲದಲ್ಲಿ ಎಲ್ಲೂ ಕಾಣಿಸುತ್ತಿರಲಿಲ. ಬೇಸಿಗೆಯಲ್ಲಿ ಮಾತ್ರ ನಮಗೆ ಐಸ್​ಕ್ರೀಂ ಕೊಡುವ ದೇವಧೂತನಂತೆ ಕಾಣುವ ಹನೀಫಣ್ಣ ಉಳಿದ ಕಾಲದಲ್ಲಿ ಹೊಟ್ಟೆಪಾಡಿಗಾಗಿ ಗೋವಾಕ್ಕೆ ದುಡಿಯಲು ಹೋಗುತ್ತಾನೆಂದು ನಮ್ಮೂರ ಧರ್ಮರಾಯಪ್ಪ ಹೇಳುತ್ತಿದ್ದ. 

ಹನೀಫಣ್ಣ ಐಸ್​ಕ್ರೀಂ ಮಾರುವಾಗ ಮಾಸಿದ ಲಪಾಟಿ ಹಾಗೂ ತುಂಬು ತೋಳಿನ ಬನಿಯನ್ನು ಹಾಗೂ ಹೆಗಲು ಮೇಲೆ ಒಂದು ಹಳೆಯ ಟವೆಲ್ ಹಾಕಿಕೊಳ್ಳುತ್ತಿದ್ದ. ಒಂದು ಸಾರಿ ನಾನು ಎಂದಿನಂತೆ  ಸ್ಕೂಲಿಗೆ ಹೋಗಿ ಸಂಜೆ ಹೊತ್ತಲ್ಲಿ ಆಗತಾನೇ ಮನೆಗೆ ಬಂದಿದ್ದೆ. ಕಪ್ಪನೆಯ ಒಬ್ಬ ಆಸಾಮಿ ಜಗಮಗಿಸುವ ಒಂದು ಕಲರ್ ಕಲರ್ ಅಂಗಿ ಹಾಗೂ ಲುಂಗಿ ಹಾಕಿಕೊಂಡು ನಮ್ಮ ಚಾದಂಗಡಿ ಮುಂದಿನ ಕಟ್ಟೆ ಮ್ಯಾಲೆ ಕಾಲು ಮೇಲೆ ಕಾಲು ಹಾಕಿಕೊಂಡ ಕೂತಿದ್ದ. ಅವನನ್ನು ನೋಡಿದ ನಾನು ಇವನ್ಯಾರೋ ನಮ್ಮ ಊರಲ್ಲಿ ಟೆಂಟ್ ಹಾಕಿರುವ ನಾಟಕ ಕಂಪನಿಗೆ ಬಂದವನಿರಬೇಕು ಅಂದುಕೊಂಡು ಅವನನ್ನೇ ನೋಡುತ್ತ ಸುಮ್ಮನೆ ನಿಂತುಕೊಂಡೆ. ಆಗ ಹನೀಫಣ್ಣನೇ ನನ್ನನ್ನು ಹತ್ತಿರ ಕರೆದು “ನನ್ನ ಮರೆತುಬಿಟ್ಟಿಯಲ್ಲೋ ಮರಿ ಸೌಕಾರ.. ಈ ಸಾರಿ ಬ್ಯಾಸಗಿ ರಜೆಯಲ್ಲಿ ಐಸ್​ಕ್ರೀಂ ಬ್ಯಾಡನೂ ನಿಂಗ” ಅಂದ. ಆಗಲೇ ನನಗೆ ಗೊತ್ತಾಗಿದ್ದು ಮಿರಿ ಮಿರಿ ಮಿಂಚುತ್ತ ನಮ್ಮ ಚಾದಂಗಡಿ ಮುಂದೆ ಕೂತವನು ನಾಟಕ ಕಂಪನಿಯವನು ಅಲ್ಲ. ಅವನು ಐಸ್​ಕ್ಯಾಂಡಿ ಮಾರುವ ಗುಡಿಸಲುಕೊಪ್ಪದ ಹನೀಫಣ್ಣನೆಂದು..!

ಆರು ತಿಂಗಳು ಕಾಲ ಗೋವಾಕ್ಕೆ ದುಡಿಯಲು ಹೋಗಿದ್ದ ಹನೀಫಣ್ಣ ಬೇಸಿಗೆ ಕಾಲ ಬರುವ ಮುನ್ನವೇ ತಿರುಗಿ ಊರಿಗೆ ಬಂದಿದ್ದ. ಅವನು ಕಲರ್ ಕಲರ್ ಬಟ್ಟೆಗಳನ್ನು ಹಾಕಿದ್ದಲ್ಲದೇ ತನ್ನ ಎಂಟು ಜನ ಮಕ್ಕಳಿಗೆ ಅಷ್ಟುದೂರದ ಗೋವಾದಿಂದ ಮಿನುಗುವ ಬಟ್ಟೆಗಳನ್ನು ತಂದ  ಹನೀಫಣ್ಣ ಖುಷಿಯಿಂದ ತಾನು ತಂದಿದ್ದ ಎರಡು ಹೊಸ ಬ್ಯಾಗುಗಳನ್ನು ಅವ್ವನಿಗೆ ತೋರಿಸುತ್ತಿದ್ದನು. 

ತಾನು ವರ್ಷದ ಹನ್ನೆರಡು ತಿಂಗಳು ಕಾಲದ ದುಡಿದು ಅವನ ಎಂಟೂ ಮಕ್ಕಳಿಗೆ ಏನೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿರುವುದು ಮಾತ್ರ ಸುತ್ತಲಿನ ಊರಿನ ಜನರಿಗೆ ಸೋಜಿಗವಾಗಿತ್ತು. ಎಂಟು ಮಕ್ಕಳಲ್ಲಿ ದೊಡ್ಡ ಮಗ ಕಬೀರ್​ಗೆ ಹದಿನಾರು ವರ್ಷವಾದರೆ ಎಂಟನೆ ಮಗು ರಷಿದಾಗೆ ಎರಡು ವರ್ಷವಾಗಿತ್ತು. ಅವನ ದೊಡ್ಡ ಮಗ ಕಬೀರ್ ಹಾಗೂ ಅವನ ತಮ್ಮ ರಫಿಕ್ ನಮ್ಮೂರು ಹೊಳಿಯಾಚೆ ಇರುವ ಮರೋಳ ಸರ್ಕಾರಿ ಫ್ರೌಡ ಶಾಲೆಯಲ್ಲಿ ಓದುತ್ತಿದ್ದರೆ ನಾಲ್ಕು ಮಕ್ಕಳು ನಮ್ಮೂರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದವು. 

ಕೊನೆಯ ಎರಡು ಸಣ್ಣ ಮಕ್ಕಳು ಮನೆಯಲ್ಲಿಯೇ ಇರುತ್ತಿದ್ದವು. ಕೇವಲ ಐಸ್​ಕ್ರೀಂ ಮಾರುವ ಹಾಗೂ ದೂರದ ಗೋವಾಕ್ಕೆ ಹೋಗಿ ದುಡಿದುಕೊಂಡು ಬಂದು ಸಂಸಾರ ನೌಕೆ ಸಾಗಿಸುತ್ತಿರುವ ಹನೀಫಣ್ಣನನ್ನು ಕಂಡರೆ ಸುತ್ತಲಿನ ಊರ ಜನರಿಗೆ ಅದೇನೋ ಅಕ್ಕರೆ.  ಎಲ್ಲಕ್ಕಿಂತ ಮುಖ್ಯವಾಗಿ ಅವನ ಸ್ವಾಭಿಮಾನಕ್ಕೆ ಎಲ್ಲರೂ ತಲೆದೂಗುತ್ತಿದ್ದರು ಮತ್ತೆ ಕೆಲವರು ಅವನಿಗಿದ್ದ ಎಡಸೊಕ್ಕು ಎಂದು ಕರೆಯುತ್ತಿದ್ದರು.  ಸುತ್ತಲಿನ ಊರ ಜನರು ಅವನ ಬಗ್ಗೆ ಯಾರ್ ಏನೇ ಅಂದರೂ ನನ್ನ ಪಾಲಿಗೆ ಮಾತ್ರ ಹನೀಫಣ್ಣ ಬೇಸಿಗೆ ಕಾಲದಲ್ಲಿ ಐಸ್​ಕ್ರೀಂ ಕೊಡುವ ದೇವಧೂತನಂತೆ ಕಾಣುತ್ತಿದ್ದ. ಓದುವ ಮಕ್ಕಳು ಅಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ನಾವು ರಜೆಯಲ್ಲಿ ಪ್ರತಿ ದಿನ ಅವನ ಬಳಿ ಐಸ್​ಕ್ರೀಂ ಕೊಂಡುಕೊಳ್ಳಲು ಹೋದಾಗ ನಮಗೆ ಪ್ರೀತಿಯಿಂದ ಐಸ್​ಕ್ರೀಂ ಕೊಡುವುದರ ಜೊತೆಗೆ "ನೀವು ಚೋಲೋ ಓದಿ ದೊಡ್ಡ ದೊಡ್ಡ ಸಾಹೇಬ್ರು ಆಗ್ಬೇಕು" ಎಂದು ಹೇಳುತ್ತಿದ್ದನು. 

ದಿನನಿತ್ಯ ಕೆಂಪುಬಣ್ಣದ ಐಸ್​ಕ್ರೀಂಗಳನ್ನು ಕೊಡುವ ಹನೀಫಣ್ಣ ವಾರಕ್ಕೆ ಒಂದು ದಿನ ಮಾತ್ರ  ಬಿಳಿ ಬಣ್ಣದ ಹಾಲಿನ ಕೆನೆಯಂಥ ಐಸ್​ಕ್ರೀಂಗಳನ್ನು ಕೊಡುತ್ತಿದ್ದ. ಅದಕ್ಕೆ ಎಂಟಾಣೆ ಜಾಸ್ತಿ ತೆಗೆದುಕೊಂಡು ಇದು ಹಾಲಿನಿಂದ ಮಾಡಿದ ಐಸ್​ಕ್ರೀಂ ಅದಕ್ಕೆ ಜಾಸ್ತಿ ಎಂದು ಸೈಕಲ್ ಹತ್ತಿ ಮುಂದಿನ ಊರಿಗೆ ಹೋಗುತ್ತಿದ್ದ. ಆದರೂ ನಮಗೆ ಕೆಂಪು ಐಸ್​ಕ್ರೀಂ ತಿನ್ನುವಾಗ ಸಿಗುವಂಥ ಮಜಾ ಈ ಬಿಳಿ ಐಸ್​ಕ್ರೀಂ ತಿನ್ನುವಾಗ ಇರುತ್ತಿರಲಿಲ್ಲ. ಬೇಸಿಗೆಯ ಸಮಯದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ "ನಿನಗೆ ಶೀತ ಆಗಿದೆ ಐಸ್​ಕ್ರೀಂ ತಿನ್ನಬೇಡ" ಎಂದು ಅವ್ವ ಕಟ್ಟಪ್ಪಣೆ ಮಾಡಿದ್ದಳು. ಅವ್ವ ಕಟ್ಟಪ್ಪಣೆ ಮಾಡಿದ್ದರ ಪ್ರತಿಫಲವಾಗಿ ಅಪ್ಪ ನನಗೆ ಆ ದಿನ ಕೊಡಬೇಕಾದ ಒಂದು ರೂಪಾಯಿ ಬಜೆಟ್​ನ್ನು ರಿಲೀಸ್ ಮಾಡಲಿಲ್ಲ. 

ಆದರೆ ನಾನು ಮಾತ್ರ ಹೇಗಾದರೂ ಸರಿ ಐಸ್​ಕ್ರೀಂ ತಿನ್ನಲೇಬೇಕು ಎಂದು ನಿರ್ಧರಿಸಿ ಹನೀಫಣ್ಣ ಹಾಲಗಿ ಕ್ರಾಸ್​ಬರುವ ಮೊದಲೇ ನಾನೊಬ್ಬನೇ ಹೋಗಿ ಅವನು ಬರುವ ಹಾದಿಯನ್ನೇ ನೋಡುತ್ತ ನಿಂತಿದ್ದೆ. ಅವನು ಬಂದು ಸೈಕಲ್ ಇಳಿಯುವ ಮೊದಲೇ ರಸ್ತೆಯಲ್ಲಿ ಬಿದ್ದು ಜೋರಾಗಿ ಅಳುತ್ತ ಹೊರಳಾಡತೊಡಗಿದೆ. ಗಾಬರಿಯಾದ ಅವನು ಏನಾಯ್ತು ಎಂದು ನನ್ನನ್ನು ಎಬ್ಬಿಸಿ ವಿಚಾರಿಸಿದ. ಆಗ ನಾನು ಹಿಂದಿನ ನಡೆದ ಕತೆಯನ್ನು ಹೇಳಿ ಈಗ ನನ್ನ ಬಳಿ ಐಸ್​ಕ್ರೀಂ ತೆಗೆದುಕೊಳ್ಳಲು ರೊಕ್ಕ ಇಲ್ಲವೆಂದು ಮತ್ತಷ್ಟು ಅಳತೊಡಗಿದೆ. ಆಗ ಹನೀಫಣ್ಣ ನನ್ನನ್ನು ಸಮಾಧಾನ ಮಾಡಿ "ರೊಕ್ಕ ಇಲ್ಲಂದ್ರ ಯಾಕ್ ಚಿಂತಿ ಮಾಡ್ತೀ ನೀನು. ನಾ ನಿಂಗ ಹಂಗ ಐಸ್​ಕ್ರಿಂ ಕೊಡ್ತೀನಿ" ಎಂದು ಒಂದಲ್ಲ ಅವತ್ತು ಎರಡು  ಐಸ್​ಕ್ರೀಂ ಕೊಟ್ಟು ನಮ್ಮೂರ ಜಂಪನಗೌಡರ ಹೊಲದಲ್ಲಿನ ಹುಣಸೆಮರದ ಮರೆಯಲ್ಲಿ ನನ್ನನ್ನು ಕೂರಿಸಿ "ನೀನು ಪೂರ್ತಿ ತಿಂದಮ್ಯಾಲೆ ಮನೆಕಡಿಗೆ ಹೋಗು" ಎಂದು ಎಂದಿನಂತೆ ತನ್ನ ಸೈಕಲ್​ ಹತ್ತಿ ಹೋದನು. ಅದಾದ ನಂತರ ನಾನು ಹನೀಫಣ್ಣ ಕೊಟ್ಟ ಆ ಎರಡು ಐಸ್​ಕ್ರೀಂ ತಿಂದು ಹೊಳಿದಂಡಿಗೆ ಹೋಗಿ ಬಾಯಿ ತೊಳೆದುಕೊಂಡು ಅವ್ವ ಹೊಲದಿಂದ  ಬರುವ ಮುನ್ನವೇ ನಾನು ಮನೆ ಸೇರಿಕೊಂಡು  ಚಾದರ ಹೊಚ್ಚಿಕೊಂಡು ಮಲಗಿದ್ದೆ. ನಂತರ ನನಗೆ ವಿಪರೀತ ಚಳಿ ಜ್ವರ ಬಂದಿತು. ಅಪ್ಪ ಅವ್ವ ನನ್ನನ್ನು ಮಲ್ಲಯ್ಯ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಒಂದು ಇಂಜೆಕ್ಷನ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದು ಮಲಗಿಸಿದ್ದರು. ಅದಾದ ಒಂದು ವಾರ ಕಾಲ ನನ್ನ ಕಿವಿಗೆ ಹನೀಫಣ್ಣನ ತುತ್ತೂರಿ ಕೇಳಿದರೂ ಕೇಳದಂತೆ ಸುಮ್ಮನೆ ಮನೆಯಲ್ಲಿಯೇ ಮಲಗಿಬಿಟ್ಟಿದ್ದೆ. 

ನನ್ನನ್ನು ಕಂಡರಂತೂ ಅದೇಕೋ ಗೊತ್ತಿಲ್ಲ ಹನೀಫಣ್ಣನಿಗೆ ಒಂಚೂರು ಜಾಸ್ತಿನೇ ಪ್ರೀತಿ. ಒಂದೊಂದು ಸಾರಿ  ನಾನೊಬ್ಬನೇ ಇದ್ದಾಗ ನನ್ನಿಂದ ರೊಕ್ಕಾ ತೆಗೆದುಕೊಳ್ಳದೆ ಪುಕ್ಕಟ್ಟೆ ಐಸ್​ಕ್ರೀಂ ಕೊಡುತ್ತಿದ್ದನು. ಅದಕ್ಕೆ ಪ್ರತಿಫಲವಾಗಿ ನಾನು ಹನೀಫಣ್ಣನಿಗೆ ನಮ್ಮ ಚಾದಂಗಡಿಯಲ್ಲಿ ಮಿರ್ಚಿ, ಮಂಡಕ್ಕಿ ಹಾಗೂ ಚಹಾ ಕೊಡುತ್ತಿದ್ದೆನು. 

ಒಂದು ದಿನ ಎಂದಿನಂತೆ ಬೇಸಿಗೆ ರಜೆಯಲ್ಲಿ ಹನೀಫಣ್ಣನನ್ನು ನಾನು ನನ್ನ ಗೆಳೆಯರು ಕಾಯುತ್ತ ನಿಂತೆವು. ಮಧ್ಯಾಹ್ನ ಎರಡು ಗಂಟೆ ಆದರೂ ಹನೀಫಣ್ಣನ ತುತ್ತೂರಿಯ ಸದ್ದು ನಮಗೆ ಕೇಳಿಸಲಿಲ್ಲ. ಅವನಿಗಾಗಿ ಕಾಯ್ದು ಸುಸ್ತಾಗಿ ನಮ್ಮ ಕಾಲುಗಳು ಸೋತು ಹೋದವು. ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ನಮ್ಮ ಮನೆಗಳಿಗೆ ಹೋಗಬೇಕೆನ್ನುವಷ್ಟರಲ್ಲಿ ಗೂಡಿಸಲುಕೊಪ್ಪದ ಟ್ರ್ಯಾಕ್ಟರ್​ವೊಂದು ಧೂಳೆಬ್ಬಿಸುತ್ತ ಬಂದು ನಮ್ಮೂರು ಕ್ರಾಸ್​ಗೆ ಬಂದಿತು. ಸೈಕಲ್ ತುಳಿಯುತ್ತ ನಮ್ಮೂರಿಗೆ ಬರುತ್ತಿದ್ದ ಹನೀಫಣ್ಣ ಆ ಟ್ರ್ಯಾಕ್ಟರ್​ನಲ್ಲಿ ಅದ್ಯಾಕೋ ಆಕಾಶ ನೋಡುತ್ತ ಅಂಗಾತ ಮಲಗಿದ್ದ. 

ನಾಲ್ಕೈದು ಜನರು ಹನೀಫಣ್ಣನನ್ನು ಎತ್ತಿಕೊಂಡು ನಮ್ಮ ಚಾದಂಗಡಿ ಪಕ್ಕದಲ್ಲಿದ್ದ ಮಲ್ಲಯ್ಯ ಡಾಕ್ಟರ್  ಆಸ್ಪತ್ರೆಗೆ ಕರೆದುಕೊಂಡು ಬಂದರು. ಅವನನ್ನು ಪರೀಕ್ಷಿಸಿದ ಡಾಕ್ಟರು ತಕ್ಷಣಕ್ಕೆ ಎರಡು ಇಂಜೆಕ್ಷನ್ ಮಾಡಿ ಮುಂದಕ್ಕೆ ಕರೆದುಕೊಂಡು ಹೋಗ್ರಿ ಎಂದರು. ಗಾಬರಿಯಾದ ಜನರು ನಮ್ಮೂರು ಮುಂದೆ ಇರುವ ನೆಗಳೂರಿನ ಸಪ್ಪಣ್ಣ ಡಾಕ್ಟರ್ ಬಳಿಗೆ ಕರೆದುಕೊಂಡು ಹೋದರು.  ಎಲ್ಲಾ ತಪಾಸಣೆ ಮಾಡಿದ ಸಪ್ಪಣ್ಣ ಡಾಕ್ಟರು "ಹನೀಫ ನೀನು ಭೂಮಿ ಮ್ಯಾಲೆ ಇರಬೇಕಂದ್ರ ಇನ್ಮುಂದೆ ನೀನು ಸೈಕಲ್ ಹತ್ತಬಾರದು ಎಂದು ಕಟ್ಟಪ್ಪಣೆ ಮಾಡಿ ಕಳುಹಿಸಿದರು. ಹನೀಫನಿಗೆ ಭರಸಿಡಿಲು ಬಡಿದಂತಾಯಿತು. 

ದಿಕ್ಕು ತೋಚದೆ ಮೂರು ದಿನಗಳ ಕಾಲ ಮನೆಯೊಳಗಿನ ಕತ್ತಲು ಕೋಣೆಯಲ್ಲಿ ಕೂತ. 60 ದಾಟಿದ ಹನೀಫಣ್ಣನಿಗೆ ಸಣ್ಣಗೆ ಎದೆ ನೋವು ಕಾಣಿಸಿಕೊಂಡಿತ್ತು. ಸಂಸಾರ ಸಾಗಿಸಲು ದಿನಕ್ಕೆ ಹತ್ತಾರು ಹಳ್ಳಿಗಳಿಗೆ ಏದೆಸುರು ಬಿಡುತ್ತ ಸೈಕಲ್ ತುಳಿದು ತುಳಿದು ಐಸ್​ ಮಾರೋ ಹನೀಫಣ್ಣನ ದೇಹ ಯಾಕೋ ಸಡಿಲಗೊಂಡಿತ್ತು ಅದಕ್ಕಾಗಿಯೇ ನೆಗಳೂರು ಸಪ್ಪಣ್ಣ ಡಾಕ್ಟರು ಇನ್ನುಮುಂದೆ ಸೈಕಲ್ ತುಳಿಯುವುದು ನಿಷಿದ್ಧ ಎಂದು ಹೇಳಿ ತಿಂಗಳಿಗೆ ಆಗುವಷ್ಟು ಔಷದಿ ಕೊಟ್ಟು ಕಳುಹಿಸಿದ್ದರು.

ಆ ವಿಚಾರ ನಮ್ಮ ತಂದೆಯಿಂದ ತಿಳಿದುಕೊಂಡು ನಾವು ಅಂದಿನಿಂದ ಹಾಲಗಿ ಕ್ರಾಸ್​ಗೆ ಹೋಗಿ ಹನೀಫಣ್ಣನನ್ನು ಕಾಯುತ್ತ ನಿಲ್ಲುವುದನ್ನು ಬಿಟ್ಟುಬಿಟ್ಟೆವು. ಅವನು ಜೀವನೋಪಾಯಕ್ಕೆ ಏನೋ ಒಂದು ಮಾಡಿಕೊಂಡಿರಬಹುದಿತ್ತು. ಆದರೆ ತನ್ನ ಶಕ್ತಿ ಕುಗ್ಗುವುದರೊಳಗಾಗಿ ತನ್ನಿಬ್ಬರು ಮಕ್ಕಳನ್ನು ದೇಶದ ಗಡಿ ಕಾಯಲು ಕಳುಹಿಸಬೇಕು ಎನ್ನುವ ಹನೀಫಣ್ಣನ ಕನಸಿಗೆ ಬ್ರೇಕ್ ಬಿದ್ದಿದ್ದು ಮಾತ್ರ ಅವನಿಗೆ ಹೆಚ್ಚು ನೋವುನ್ನುಂಟು ಮಾಡಿತ್ತು.

ಆಗಷ್ಟೇ ಹತ್ತನೇ ಕ್ಲಾಸು ಪಾಸಾಗಿ ಅಪ್ಪಯ ಕನಸು ನನಸು ಮಾಡಲು ಮಿಲಿಟರಿಗೆ ಹೋಗಲು ತಯಾರಿ ನಡೆಸುತ್ತಿದ್ದ ಹನೀಫಣ್ಣನ ಹಿರಿಯ ಮಗ ಅನಿವಾರ್ಯವಾಗಿ ಮುಂದೆ ಓದಲಾಗದೆ ದುಡಿಯುವ ಅನಿವಾರ್ಯ ಸೃಷ್ಟಿಯಾಯಿತು. ಕಣ್ಮುಂದೆ ಇರುವ ತನ್ನ ಎಂಟು ಮಕ್ಕಳು ಹಾಗೂ ಪತ್ನಿಯನ್ನು ನೋಡಿ ಹನೀಫಣ್ಣ ಕಣ್ಣೀರು ಹಾಕಿದ. ನಿತ್ಯವೂ ಅವನನ್ನು ಹೊತ್ತು ಊರೂರು ತಿರುಗುತ್ತಿದ್ದ ಅವನ ಹಳೆಯ ಸೈಕಲ್ ಮನೆ ಮುಂದೆ ಅನಾಥವಾಗಿ ನಿಂತಿತ್ತು. ವಿಧಿಯಿಲ್ಲದೇ ಅವನ ಹಿರಿಯ ಮಗ ಅದ್ಯಾರದ್ದೋ ಸಹಾಯದಿಂದ ಗ್ಯಾರೇಜ್​ನಲ್ಲಿ ಮಾಡುವುದಕ್ಕಾಗಿ ಹುಬ್ಬಳ್ಳಿಗೆ ಹೊರಟು ನಿಂತ. 

ದೇಶದ ಗಡಿ ಕಾಯುವ ಸೈನಿಕನಾಗಬೇಕಾದ ಮಗ ಮೈಕೈ ಮಸಿ ಮಾಡಿಕೊಳ್ಳಲು ಹೊರಟನಲ್ಲ ಎಂದು ವಿಪರೀತ ಸಂಕಟವಾಯಿತು. ಹೊರಡುವಾಗ ಕಾಲಿಗೆ ಬಿದ್ದ ಮಗನಿಗೆ "ಮಗನೇ ಒಳ್ಳೆದಾಗಲಿ ಯಾರಿಗೂ ಮೋಸ ಮಾಡ್ಬೇಡ ಎಂದಷ್ಟೆ ಹೇಳಿ ಮಗನ ತಲೆ ಮ್ಯಾಲೆ ಕೈಯಿಟ್ಟು ಕಣ್ಣೀರು ಹಾಕಿದ. ತನ್ನ ಮನೆ ಜವಾಬ್ದಾರಿಯನ್ನು ಹೆಗಲು ಮೇಲೆ ಹೊತ್ತುಕೊಳ್ಳಲು ಹುಬ್ಬಳ್ಳಿಗೆ ಹೊರಟ ನಿಂತ ಮಗ ಹನೀಫಣ್ಣನಿಗೆ ಒಂದು ರೀತಿ ಸೈನಿಕನಂತೆಯೇ ಕಂಡ..!

 

Category:Personal Experience



ProfileImg

Written by Raveendra Muddi

Verified

ಪತ್ರಕರ್ತ - ಚಿತ್ರಸಾಹಿತಿ - ಲೇಖಕ